Wednesday, November 9, 2011

ಸೀತೆ ಮತ್ತು ಇತರ ಕತೆಗಳು

ಹೆಣ್ಣು ದೈವ
ಅದು ಭೂಸುಧಾರಣೆಯ ಕಾಲ.
ಹೊಲ ಉಳುತ್ತಿರುವವರೇ ಹೊಲದೊಡೆಯರಾಗುತ್ತಿರುವ ಕಾಲ.
ಆ ಸಂದರ್ಭದಲ್ಲಿ ಭೂತದ ಕೋಲದಲ್ಲಿ ದೈವವೊಂದು ಕುಣಿಯುತ್ತಾ ‘‘ಯಾರೂ ಧನಿಗಳ ಭೂಮಿಯನ್ನು ಕಬಳಿಸಬಾರದು’’ ಎಂದು ಕೂಗಿತಂತೆ.
ಆದರೆ ಭೂಮಿ ಪಡೆದ ರೈತರೆಲ್ಲ ಭೂತಕ್ಕೆ ಅಲ್ಲೇ ತಿರುಗಿ ಬಿದ್ದರು.
‘‘ದೈವಕ್ಕೆ ಎದುರಾಡುತ್ತೀರಾ?’’ ಭೂತ ಕೇಳಿತು.
‘‘ಸದ್ಯಕ್ಕೆ ನೀನು ನಮ್ಮ ಧನಿಗಳ ದೈವ. ನಮ್ಮ ದೈವ ಹೆಣ್ಣು ಭೂತ. ಅದರ ಹೆಸರು ಇಂದಿರಾಗಾಂಧಿ’’ ಎಂದವರೇ ಭೂತಕ್ಕೆಂದು ತಂದ ಕೋಳಿಯೊಂದಿಗೆ ತಮ್ಮ ತಮ್ಮ ಮನೆಗಳಿಗೆ ಮರಳಿದರಂತೆ.

ಕೊಲೆ
ಹಾಡುಹಗಲಲ್ಲೇ ಅಲ್ಲೊಂದು ಕೊಲೆಯಾಯಿತು.
ಪೊಲೀಸ್ ಅಧಿಕಾರಿ ಬಂದು ಕೇಳಿದ ‘‘ಕೊಲೆಯನ್ನು ಯಾರಾದರೂ ನೋಡಿದವರಿದ್ದಾರೆಯೋ?’’
ಯಾರೂ ತುಟಿ ಬಿಚ್ಚಲಿಲ್ಲ. ಅಪರಾಧಿ ಅಲ್ಲೇ ಇದ್ದರೂ ಸಾಕ್ಷಿ ನುಡಿಯಲು ಹಿಂದೇಟು ಹಾಕಿದರು.
ಅಧಿಕಾರಿ ವಿಷಾದದಿಂದ ಹೇಳಿದ ‘‘ಈ ಕೊಲೆಯನ್ನು ಯಾರೋ ಒಬ್ಬ ಮಾಡಿರಬೇಕು ಎಂದು ತಿಳಿದಿದ್ದೆ. ಈಗ ನೋಡಿದರೆ ಈ ಕೊಲೆಯನ್ನು ನೀವೆಲ್ಲ ಜೊತೆ ಸೇರಿ ಮಾಡಿದ್ದೀರಿ’’

ಮೊತ್ತ ಮೊದಲು
ಅಪರಾಧಿಯನ್ನು ನ್ಯಾಯಾಧೀಶರು ಕೇಳಿದರು
‘‘ಇಷ್ಟು ಕೊಲೆ ಮಾಡಿದ್ದೀಯಲ್ಲ...ಹೇಗೆ ಸಾಧ್ಯವಾಯಿತು?’’
ಅವನು ಹೇಳಿದ ‘‘ಮೊತ್ತ ಮೊದಲು ಒಂದು ಕೊಲೆ ಮಾಡಿದೆ. ಆ ಬಳಿಕ ಕೊಲೆ ಮಾಡುವುದು ಕಷ್ಟವಾಗಲಿಲ್ಲ’’
‘‘ನೀನು ಮಾಡಿದ ಮೊದಲ ಕೊಲೆ ಯಾರದು?’’
‘‘ಮೊತ್ತ ಮೊದಲು ನಾನು ಕೊಂದದ್ದು ನನ್ನನ್ನು’’

ಪತ್ರಕರ್ತ
ಪತ್ರಕರ್ತನೊಬ್ಬ ಪೊಲೀಸ್ ಸ್ಟೇಶನ್‌ಗೆ ಫೋನ್ ಮಾಡಿದ
‘‘ಸಾರ್...ಏನಿದೆ ಕ್ರೈಂ ವಿಶೇಷ?’’
‘‘ವಿಶೇಷ ಏನು ಇಲ್ಲ ಸಾರ್, ಒಂದು ಸಣ್ಣ ಆಕ್ಸಿಡೆಂಟ್ ಅಷ್ಟೇ’’ ಪೊಲೀಸ್ ಪೇದೆ ಉತ್ತರಿಸಿದ.
‘‘ಹೌದಾ...ಡೆತ್ ಆಗಿದಾ?’’ ಪತ್ರಕರ್ತ ಕೇಳಿದ.
‘‘ಹೌದು ಒಂದು ಡೆತ್ ಆಗಿದೆ. ಸ್ಕೂಟರ್‌ಗೆ ಬಸ್ ಡಿಕ್ಕಿ’’
‘‘ಬರೇ ಒಂದು ಮಾತ್ರಾನ, ಬೇರೇನೂ ವಿಶೇಷ ಇಲ್ವಾ?’’
‘‘ಇಲ್ಲಾ ಸಾರ್...ಅಷ್ಟೇ...’’
‘‘ಏನು ಪೊಲೀಸರಪ್ಪ ನೀವು...ಒಂದು ದಿನಾನೂ ವಿಶೇಷ ಸುದ್ದಿ ಕೊಡಲ್ಲ. ಹೀಗೇ ಆದರೆ ನಾವು ಪತ್ರಿಕೆಯೋರು ಏನನ್ನು ಪ್ರಿಂಟ್ ಮಾಡಬೇಕು...’’ ಪತ್ರಕರ್ತ ಫೋನ್ ಕುಕ್ಕಿದ.
ತುಸು ಹೊತ್ತಲ್ಲೇ ಮನೆಯಿಂದ ಪತ್ರಕರ್ತನಿಗೆ ಫೋನ್ ಬಂತು
‘‘ಅಪ್ಪನ ಸ್ಕೂಟರ್ ಆಕ್ಸಿಡೆಂಟ್ ಆಗಿದೆ...ಬೇಗ ಬಾ....’’

ನಾಚಿಕೆ
ಮಹಾ ವಂಚಕನೊಬ್ಬನನ್ನು ಬಂಧಿಸಿ ಒಯ್ಯುತ್ತಿದ್ದರು.
ಆದರೆ ಅವನು ಯಾವ ಅಂಜಿಕೆಯೂ ಇಲ್ಲದೆ ನಗು ನಗುತ್ತಾ ಅವರ ಹಿಂದೆ ನಡೆಯುತ್ತಿದ್ದ.
ಅದನ್ನು ನೋಡಿ ಸಂತ ಹೇಳಿದ
‘‘ತನ್ನ ಅಪರಾಧಕ್ಕಾಗಿ ಸ್ವಯಂ ನಾಚಿಕೊಳ್ಳದವನನ್ನು ಯಾವ ಜೈಲೂ ಶಿಕ್ಷಿಸಲಾರದು’’

ಲೆಕ್ಕ
ಮೇಷ್ಟ್ರು ಲೆಕ್ಕ ಪಾಠ ಹೇಳಿ ಕೊಡುತ್ತಿದ್ದರು.
ಹುಡುಗನೊಬ್ಬನನ್ನು ನಿಲ್ಲಿಸಿ ಕೇಳಿದರು ‘‘ನನ್ನ ಕೈಯಲ್ಲಿ ಹತ್ತು ರೊಟ್ಟಿ ಇದೆ. ಎರಡು ರೊಟ್ಟಿಯನ್ನು ನಾನು ನಮ್ಮ ಮನೆಯ ನಾಯಿಗೆ ಹಾಕುತ್ತೇನೆ. ಈಗ ನನ್ನಲ್ಲಿ ಉಳಿದ ರೊಟ್ಟಿ ಎಷ್ಟು?’’
ಹುಡುಗ ವಿಷಾದದಿಂದ ಕೇಳಿದ ‘‘ಸಾರ್ ನಾಯಿಗೆ ಹಾಕುವ ಆ ಎರಡು ರೊಟ್ಟಿಯನ್ನು ನನಗಾದರೂ ಕೊಡಬಾರದೆ?’’
ಮೇಷ್ಟ್ರು ಸಿಟ್ಟಾದರು ‘‘ನಾನು ರೊಟ್ಟಿಯನ್ನು ಯಾರಿಗೆ ಹಾಕುತ್ತೇನೆ ಎನ್ನುವುದು ಮುಖ್ಯವಲ್ಲ. ನನ್ನ ಕೈಯಲ್ಲಿ ಎಷ್ಟು ರೊಟ್ಟಿಯಿದೆ ಅದಕ್ಕೆ ಉತ್ತರಿಸು’’
ಹುಡುಗ ಅಷ್ಟೇ ಕಟುವಾಗಿ ಉತ್ತರಿಸಿದ ‘‘ಮನೆಯಲ್ಲಿ ಹಸಿದು ಕೆಲಸ ಮಾಡುತ್ತಿರುವ ನನ್ನ ಅಮ್ಮನಿಗೆ ನಿಮ್ಮ ಕೈಯಲ್ಲಿರುವ ಎಂಟು ರೊಟ್ಟಿಗಿಂತ, ನೀವು ನಾಯಿಗೆ ಹಾಕಿದ ಎರಡು ರೊಟ್ಟಿ ತುಂಬಾ ಮುಖ್ಯ’’
ಮೇಷ್ಟ್ರು ಹತಾಶೆಯಿಂದ ಹೇಳಿದರು ‘‘ಇದು ಕಲ್ಪನೆ ಕಣೋ...’’
ಹುಡುಗನೂ ಅಷ್ಟೇ ಹತಾಶೆಯಿಂದ ಕೇಳಿದ ‘‘ಕಲ್ಪನೆಯಲ್ಲಾದರೂ ಆ ಎರಡು ರೊಟ್ಟಿಯನ್ನು ನನ್ನ ತಾಯಿಗೆ ನೀಡಬಾರದೆ?’’

ಅನುಭವ
ಲಾರಿ ಚಾಲಕರ ಸಂದರ್ಶನ ನಡೆಯುತ್ತಿತ್ತು
ಚಾಲಕನಲ್ಲಿ ಆತ ಕೇಳಿದ ‘‘ಚಾಲಕ ವೃತ್ತಿಯಲ್ಲಿ ಎಷ್ಟು ವರ್ಷ ಅನುಭವವಿದೆ?’’
‘‘ನನ್ನ ಬದುಕಿನಲ್ಲಿ ಕೆಲವು ಸೆಕೆಂಡುಗಳು ನನಗೆ ನೂರಾರು ವರ್ಷಗಳ ಅನುಭವವನ್ನು ನೀಡಿದೆ’’ ಆ ವೃದ್ಧ ಚಾಲಕ ನುಡಿದ.

ಸೀತೆ
‘‘ಬೆಂಕಿಗೆ ಹಾರಿಯೂ ಸೀತೆ ಹೇಗೆ ಬದುಕಿದಳು?’’
ತಾಯಿಯ ಬಳಿ ಮಗ ಕೇಳಿದ.
‘‘ನಾನು ಪ್ರತಿದಿನ ಬದುಕುತ್ತಿಲ್ಲವೆ ಮಗಾ...ಹಾಗೆ’’ ತಾಯಿ ಉತ್ತರಿಸಿದಳು

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.


6 comments:

  1. ಉತ್ತಮವಾದ ಅಭಿವ್ಯಕ್ತಿ ನಿಮ್ಮ ಸಣ್ಣ ಎನ್ನಬಹುದಾದಂತಹ ಕಥನಗಳು ..

    ReplyDelete
  2. ಬಷೀರ್ ಸರ್....ನಿಮ್ಮ ಸಣ್ಣ ಸಣ್ಣ ಚುಟುಕುಗಳಲ್ಲಿ ಒಂದು ಗ್ರಂತದಲ್ಲಿರುವಷ್ಟು ಜ್ಞಾನ ತುಂಬಿದೆ ......ಅಭಿನಂದನೆಗಳು .......ನಿಮಗೆ ಶುಭವಾಗಲಿ

    ReplyDelete
  3. basheer sir,
    kelave "shabdagalu" nimma kathegalalli aavarisiddaru adu needuva "gaada" chintanegalu halavu..
    danyavadagalu.
    shailesh ujire

    ReplyDelete
  4. ವಂದನೆಗಳು ಗೆಳೆಯರೇ....ನಿಮ್ಮ ಹರಕೆ, ಹಾರೈಕೆಗಳಿಗಾಗಿ...

    ReplyDelete
  5. Nimma gujari angadiyinda namagagi olle maalu huduki kotidke dhanyavada

    ReplyDelete