Thursday, November 17, 2011
ವೃತ್ತಿ ಮತ್ತು ಇತರ ಕತೆಗಳು
ಶ್ರೀಮಂತ
ನ್ಯಾಯಾಲಯ ಆದೇಶ ನೀಡಿತು ‘‘ಓರ್ವ ಪ್ರತಿ ದಿನ 35 ರೂ. ಖರ್ಚು ಮಾಡುತ್ತಿದ್ದರೆ ಅವನನ್ನು ಶ್ರೀಮಂತನೆಂದು ಕರೆಯಬೇಕು’’
ಅಂತೆಯೇ ರೈತನೊಬ್ಬ 35 ರೂ. ತೆತ್ತು ವಿಷವನ್ನು ಕೊಂಡ.
ಮಾಧ್ಯಮಗಳಲ್ಲಿ ಸುದ್ದಿ ‘‘ಶ್ರೀಮಂತ ರೈತನಿಂದ ಸಾಲ ಪಾವತಿಸಲಾಗದೆ ಆತ್ಮಹತ್ಯೆ’’
ಭಯ
ಮೀನು ಹಿಡಿಯಲೆಂದು ಸಮುದ್ರಕ್ಕೆ ತೆರಳಿದ್ದ ಮೀನುಗಾರರು ಆಗಷ್ಟೇ ದಡ ಸೇರಿದ್ದರು
‘‘ಮೀನು ಕೊಳ್ಳಲೆಂದು ಶ್ರೀಮಂತನೊಬ್ಬ ಕೇಳಿದ ‘‘ಮೀನು ಹಿಡಿಯಲೆಂದು ಹೋದ ಅದೆಷ್ಟು ಮೀನುಗಾರರು ಕಡಲಲ್ಲಿ ಮುಳುಗಿ ಸತ್ತಿದ್ದಾರೆ. ಆದರೂ ನೀವು ಸಮುದ್ರಕ್ಕೆ ಮೀನು ಹಿಡಿಯಲೆಂದು ಹೋಗುತ್ತೀರಲ್ಲ? ನಿಮಗೆ ಭಯವಾಗುವುದಿಲ್ಲವೆ?್ಫ್ಫ
ಮೀನುಗಾರ ನಕ್ಕು ಹೇಳಿದ ‘‘ನಿಮ್ಮ ಹಿರಿಯರೆಲ್ಲ ನಿಮ್ಮ ಮನೆಯ ವಿಶಾಲವಾದ ಮಂಚದ ಮೇಲೆ ಮೃತಪಟ್ಟಿದ್ದಾರೆ. ಆದರೂ ನೀವು ನಿದ್ರಿಸುವುದಕ್ಕೆ ಮತ್ತೆ ಅದೇ ಮಂಚದೆಡೆಗೆ ಧಾವಿಸುತ್ತೀರಲ್ಲ, ನಿಮಗೆ ಭಯವಾಗುವುದಿಲ್ಲವೆ?’’
ವೃತ್ತಿ
ಅವನ ವೃತ್ತಿಯೇ ಅಪರಾಧಿಗಳನ್ನು ಗಲ್ಲಿಗೇರಿಸುವುದು.
ಸುಮಾರು 49 ಜನರನ್ನು ಗಲ್ಲಿಗೇರಿಸಿದ್ದಾನೆ ಅವನು.
ಇದೀಗ ಇನ್ನೊಬ್ಬನನ್ನು ಗಲ್ಲಿಗೇರಿಸಿದರೆ 50 ಪೂರ್ತಿಯಾಗುವುದು.
ಯಾರೋ ಅವನ ಸಂದರ್ಶನಕ್ಕೆ ಬಂದರು.
‘‘ನೀವು ಇನ್ನು ಒಬ್ಬನನ್ನು ಗಲ್ಲಿಗೇರಿಸಿದರೆ ಅರ್ಧ ಶತಕವಾಗುತ್ತದೆ. ಈ ಬಗ್ಗೆ ನಿಮ್ಮ ಅನಿಸಿಕೆಯೇನು?’’
ಅವನು ನಿರ್ಲಿಪ್ತನಾಗಿ ಹೇಳಿದ ‘‘ನಲ್ವತ್ತ ಒಂಬತ್ತು ಬಾರಿ ನಾನು ಸತ್ತಿದ್ದೇನೆ. ಇನ್ನು 50ನೆ ಬಾರಿ ಸಾಯುವುದರಲ್ಲೇನು ವಿಶೇಷ?’’
ಕನಸಿನ ಅಂಗಡಿ
ಅವನೊಬ್ಬ ಸ್ಫುರದ್ರೂಪಿ ತರುಣ. ಅಂಗಡಿಯನ್ನು ತೆರೆದ. ಅಂಗಡಿಗೊಂದು ಬೋರ್ಡು
‘ಇಲ್ಲಿ ನಿಮಗೆ ಬಿದ್ದ ಕನಸುಗಳಿಗೆ ಅರ್ಥ ಹೇಳಲಾಗುತ್ತದೆ’
ಎಲ್ಲರು ತಮ್ಮ ತಮ್ಮ ಕನಸುಗಳೊಂದಿಗೆ ಅಂಗಡಿಗೆ ಮುಗಿ ಬಿದ್ದರು.
ಒಬ್ಬ ತರುಣಿ ಒಂದು ತಿಂಗಳಿನಿಂದ ಆ ಅಂಗಡಿಗೆ ಕನಸುಗಳನ್ನು ಹಿಡಿದುಕೊಂಡು ಬರುತ್ತಿದ್ದಳು.
ಅವನು ಅವುಗಳಿಗೆ ಅರ್ಥ ಹೇಳಲು ಪ್ರಯತ್ನಿಸುತ್ತಿದ್ದ.
ಕೊನೆಗೊಂದು ದಿನ ಹುಡುಗಿ ಸಿಟ್ಟಿನಿಂದ ಹೇಳಿದಳು.
‘‘ನನ್ನ ಕಣ್ಣನೊಮ್ಮೆ ನೀನು ಕಣ್ಣಿಟ್ಟು ನೋಡಿದ್ದರೆ ಸಾಕಿತ್ತು. ನಾ ಕಂಡ, ಕಾಣುತ್ತಿರುವ ಕನಸಿನ ಅರ್ಥ ನಿನಗೆ ತಿಳಿದು ಬಿಡುತ್ತಿತ್ತು’’
ವರ್ಷ
‘‘ತಾತ, ನಿನಗೆ ಎಷ್ಟು ವರ್ಷ?’’ ಮೊಮ್ಮಗು ಕೇಳಿತು
‘‘ಗೊತ್ತಿಲ್ಲ ಮಗು, ಆದರೆ ಕೆಲವು ದಿನಗಳನ್ನು ನಾನು ನೂರಾರು ವರ್ಷ ಬದುಕಿದ್ದೇನೆ’’ ತಾತ ಉತ್ತರಿಸಿದ.
ಋಣ
ಪುಟಾಣಿ ಮಗು ಹೇಳಿತು ‘‘ಅಮ್ಯಾ ರಾತ್ರಿ...ನಿನ್ನ ಕಾಲನ್ನು ಒತ್ತಿದ್ದೇನೆ. ನನಗೆ ಅದಕ್ಕಾಗಿ 100 ರೂ. ಪಾಕೆಟ್ ಮನಿ ಕೊಡಬೇಕು’’
‘‘ಅಯ್ಯೋ ನನ್ನ ಬಂಗಾರ...ಅದರ ಋಣವನ್ನು ಹಣದಿಂದ ಹೇಗೆ ತೀರಿಸಲಿ...ಜೀವನ ಪರ್ಯಂತ ನಿನ್ನ ಸೇವೆ ಮಾಡಿ ಅದರ ಸಾಲವನ್ನು ತೀರಿಸುತ್ತೇನೆ ಆಗದೆ?’’ ತಾಯಿ ಮಗುವಿನ ಕೆನ್ನೆ ಹಿಂಡಿ ಕೇಳಿದಳು.
ಮಾತು
‘‘ನನ್ನ ಮಗ ತನ್ನ ತಾಯಿಯೊಂದಿಗೆ ಮೊಬೈಲ್‌ನಲ್ಲಿ ಗಂಟೆಗಟ್ಟಳೆ ಮಾತನಾಡುತ್ತಾನೆ...ನನಗೆ ಅದೇ ಚಿಂತೆಯಾಗಿದೆ’’
‘‘ತಾಯಿಯೊಂದಿಗೆ ತಾನೆ, ಇದರಲ್ಲಿ ಚಿಂತೆ ಮಾಡುವುದೇನು ಬಂತು? ಮಕ್ಕಳು ತಾಯಿಯೊಟ್ಟಿಗಲ್ಲದೆ ಇನ್ನಾರೊಟ್ಟಿಗೆ ಮಾತನಾಡುತ್ತಾರೆ?’’
‘‘ಅವನ ತಾಯಿ ಇಹಲೋಕ ತ್ಯಜಿಸಿ ಇಂದಿಗೆ ಹತ್ತು ವರ್ಷಗಳಾದುವು’’
Subscribe to:
Post Comments (Atom)
ಒಂದೊಂದು ಕಥೆಗಳಲ್ಲೂ ವಿಶೇಷ ತಿರುವುಗಳಿವೆ.. ಒಮ್ಮೊಮ್ಮೆ ಹಾಸ್ಯ ಅನ್ನಿಸುತ್ತದೆ.. ಮತ್ತೊಮ್ಮೆ ಸತ್ಯ ಅನ್ನಿಸುತ್ತದೆ.. :)
ReplyDeleteಅದರಲ್ಲೂ ನಿಮ್ಮ ಕನಸಿನ ಅಂಗಡಿ ಕಥೆ ಬಹಳಾನೇ ಸೊಗಸಾಗಿದೆ.. :)