Monday, October 31, 2011

ಮದರಸದ ದಿನಗಳು ಭಾಗ-2: ಬ್ಯಾರಿ-ಮಲಯಾಳಂ ಸಂಘರ್ಷ

ಗುಜರಿ ಅಂಗಡಿಯಲ್ಲಿ -ಮದರಸದ ದಿನಗಳ- ಒಂದು ಕಂತನ್ನು ಈ ಹಿಂದೆ ಹಂಚಿಕೊಂಡಿದ್ದೆ. ಇದೀಗ ಅದರ ಎರಡನೆ ಕಂತನ್ನು ಹಂಚಿಕೊಳ್ಳುತ್ತಿದ್ದೇನೆ.

ಮದರಸ ಮತ್ತು ಶಾಲೆಯ ಒಂದು ಓದಿನ ಕ್ರಮದ ಒಂದು ಮುಖ್ಯ ವ್ಯತ್ಯಾಸವನ್ನು ನಾನು ಬಾಲ್ಯದಲ್ಲೇ ಗಮನಿಸಿದ್ದೆ. ಮೇಷ್ಟ್ರುಗಳು ಪಾಠ ಪುಸ್ತಕವನ್ನು ಬಿಡಿಸಿ ‘‘ಮಕ್ಕಳೇ ವೌನವಾಗಿ ಓದಿರಿ’’ ಎನ್ನುತ್ತಿದ್ದರು. ನಾವೆಲ್ಲರೂ ವೌನವಾಗಿ ಅಥವಾ ವೌನವನ್ನು ನಟಿಸಿ ಓದುತ್ತಿದ್ದೆವು. ಆದರೆ ಮದರಸದಲ್ಲಿ ಮುಸ್ಲಿಯಾರರು ಹಾಗಲ್ಲ. ‘‘ಮಕ್ಕಳೇ ಜೋರಾಗಿ ಓದಿರಿ’’ ಎನ್ನುತ್ತಿದ್ದರು. ಅಷ್ಟೇ ಅಲ್ಲ, ನಮ್ಮ ಸ್ವರ ತುಸು ಮೆಲ್ಲಗಾದರೂ ಬೆತ್ತ ಹಿಡಿದು ಓಡಾಡ ತೊಡಗುತ್ತಿದ್ದರು. ಆದುದರಿಂದ ನಾವು ಮದರಸದಲ್ಲಿ ಗಂಟಲು ಹರಿಯುವಂತೆ ಓದುತ್ತಿದ್ದೆವು.
‘ಅ-ಅಲಿಫ್, ಬ-ಬಾಹ್’ ಎಂದು ಜೋರಾಗಿ ನಾವು ಗುಣಿತಾಕ್ಷರಗಳನ್ನು ಓದುತ್ತಿದ್ದೆವು. ನಮ್ಮ ಮದರಸ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದೆ. ಮದರಸದೊಳಗಿಂದ ಜೋರಾಗಿ ಎಲ್ಲರೂ ಆ, ಇ, ಉ, ಇ ಎನ್ನುವುದು ರಾಷ್ಟ್ರೀಯ ಹೆದ್ದಾರಿಗೆ ಅಪ್ಪಳಿಸುತ್ತಿತ್ತು. ಒಂದು ದಿನ ಬಸ್ ಕಾಯುತ್ತಿದ್ದ ನನ್ನ ಗೆಳೆಯ ಕೇಳಿದ ‘‘ಅಲ್ಲ ಮರಾಯ, ಮದರಸದೊಳಗೆ ಕರಾಟೆ ಕಲಿಸ್ತಾರ?’’ ನಾನು ನಕ್ಕು ಅವನಿಗೆ ವಿವರಿಸಿದೆ.

ಒಂದನೆ ತರಗತಿಯಲ್ಲಿ ನಮಗೆ ಅ, ಆ, ಇ, ಈ ಕಲಿಸಿದಂತೆಯೇ ಅರಬಿ ಅಕ್ಷರಗಳನ್ನೂ ಕಲಿಸುತ್ತಿದ್ದರು. ವಿಚಿತ್ರವೆಂದರೆ ನಮ್ಮದು ಅರಬಿ ಮಲಯಾಳ. ಅಂದರೆ ಅಕ್ಷರವಷ್ಟೇ ಅರೇಬಿಕ್. ಆದರೆ ಅದರ ಒಳಗಿನ ತಿರುಳು ಮಲಯಾಳಂನಲ್ಲಿರುತ್ತಿತ್ತು. ಅಂದರೆ ಮಲಯಾಳಂನ್ನು ಅರೇಬಿಕ್ ಅಕ್ಷರದಲ್ಲಿ ಬರೆದು ಕಲಿಸುತ್ತಿದ್ದರು. ಆದುದರಿಂದ, ಇತ್ತ ಮಲಯಾಳವನ್ನು ಕಲಿಯದೆ, ಅತ್ತ ಅರೇಬಿಕ್‌ನ್ನು ಅರ್ಥ ಮಾಡಿಕೊಳ್ಳದೆ ನನ್ನ ಸುಮಾರು ಐದು ವರ್ಷದ ಮದರಸದ ಕಲಿಕೆ ವ್ಯರ್ಥವಾಗಿತ್ತು. ಅದಕ್ಕೊಂದು ಮುಖ್ಯ ಕಾರಣವೂ ಇದೆ. ಸಾಧಾರಣವಾಗಿ ದಕ್ಷಿಣ ಕನ್ನಡದ ಮುಸ್ಲಿಮರನ್ನು ಬ್ಯಾರಿಗಳು ಎಂದು ಕರೆಯುತ್ತಾರೆ. ಒಂದು ಕಾಲದಲ್ಲಿ ಈ ಭಾಗದಲ್ಲಿ ‘ಆದಂ ಬ್ಯಾರಿ’ ‘ಯೂಸುಫ್ ಬ್ಯಾರಿ’ ‘ಇದ್ದಿನ್ ಬ್ಯಾರಿ’ ಎಂದೇ ಮುಸ್ಲಿಮರು ಗುರುತಿಸಿಕೊಳ್ಳುತ್ತಿದ್ದರು. ವ್ಯಾಪಾರ, ಪುಂಡಾಟಿಕೆ, ಪಾಳೇಗಾರಿಕೆ, ಸಾಹಸ ಎಲ್ಲವೂಗಳಲ್ಲೂ ಈ ಬ್ಯಾರಿಗಳದ್ದು ಎತ್ತಿದ ಕೈಯಾಗಿತ್ತು. ಆದರೆ ಅದೇನು ದುರಂತವೋ, ನಿಧಾನಕ್ಕೆ ಬ್ಯಾರಿ ಎನ್ನುವ ಅಸ್ಮಿತೆಯೇ ಅವರಿಗೆ ಅವಮಾನವಾಗಿ ಕಾಣತೊಡಗಿತು. ಬ್ಯಾರಿಯ ಅಸ್ಮಿತೆ ಕಳೆದುಕೊಂಡ ಅವರು, ಬಳಿಕ ಬ್ಯಾರಿ ಎಂದು ಯಾರಾದರೂ ಕರೆದರೆ, ಅವಾಚ್ಯ ಶಬ್ದ ಬಳಸಿದಂತೆ ಸಿಟ್ಟಿಗೇಳುತ್ತಿದ್ದರು. ಬ್ಯಾರಿ ಎಂದು ಗುರುತಿಸಲು ಹಿಂಜರಿಯುತ್ತಿದ್ದರು. ಬಹುಶಃ ಅದಕ್ಕೆ ತುಳುವ ಸಮಾಜದ ಸಾಂಸ್ಕೃತಿಕ ಪಲ್ಲಟವೂ ಕಾರಣವಾಗಿರಬಹುದು. ಹಾಗೆಯೇ ಮುಸ್ಲಿಮ್ ಬದುಕಿನಲ್ಲಿ ಕೇರಳದ ಮುಸ್ಲಿಮರ ಪ್ರಭಾವವೂ ಕಾರಣವಾಗಿರಬಹುದು.

ಅದಿರಲಿ. ನಮ್ಮ ಮನೆ ಭಾಷೆ ಬ್ಯಾರಿ. ಕರಾವಳಿಯ ಶೇ. 90ರಷ್ಟು ಮುಸ್ಲಿಮರಿಗೆ ಉರ್ದು ಬರುವುದಿಲ್ಲ. ಆದರೆ ನಮ್ಮ ಭಾಷೆಗೆ ಒಂದು ಸ್ಪಷ್ಟ ಅಸ್ತಿತ್ವವೇ ಇದ್ದಿರಲಿಲ್ಲ. ಯಾವುದಾದರೂ ದಾಖಲೆಗಳಲ್ಲಿ ಭಾಷೆ ಯಾವುದೆಂದು ಕೇಳಿದರೆ ನಾವು ಮಲಯಾಳಂ ಎಂದು ಹೇಳುತ್ತಿದ್ದೆವು. ಯಾಕೆಂದರೆ ಬ್ಯಾರಿ ಭಾಷೆ ಶೇ. 90ರಷ್ಟು ಮಲಯಾಳಂನ್ನು ಹೋಲುತ್ತಿತ್ತು. ಆದರೆ ಅತ್ತ ಮಲಯಾಳಿಗಳು ಬ್ಯಾರಿ ಭಾಷೆಯನ್ನು ಮಲಯಾಳಂ ಎಂದು ಒಪ್ಪುತ್ತಿರಲಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಭಾಷೆಯ ಹೆಸರೇನು ಎನ್ನುವುದೂ ನಮಗೆ ಗೊತ್ತಿರಲಿಲ್ಲ. ‘ನಕ್ಕ್-ನಿಕ್ಕ್(ನನಗೆ-ನಿನಗೆ)’ ಎಂದು ಈ ಭಾಷೆಯನ್ನು ನಾವು ಕರೆಯುತ್ತಿದ್ದೆವು. ನಕ್ಕ್-ನಿಕ್ಕ್ ಭಾಷೆ. ಅಂದರೆ ನನಗೆ-ನಿನಗೆ ಅಷ್ಟೇ ಸೀಮಿತವಾದ ಭಾಷೆ ಎಂದು ಬಹುಶಃ ಆಳದಲ್ಲಿ ಒಪ್ಪಿಕೊಂಡಿದ್ದೆವು ಎಂದು ಕಾಣುತ್ತದೆ. (ಈ ಭಾಷೆಯ, ಸಂಘರ್ಷ, ಹೋರಾಟ, ಮತ್ತು ಒಂದು ಯಶೋಗಾಥೆಯ ಕುರಿತ ಇನ್ನಷ್ಟು ವಿವರಗಳನ್ನು ಇನ್ನೊಮ್ಮೆ ಹಂಚಿಕೊಳ್ಳುವೆ).

ನಮ್ಮ ಮದರಸಗಳಿಗೆ ಮುಸ್ಲಿಯಾರುಗಳು ಬೇಕೆಂದರೆ ನಾವು ಕೇರಳದಿಂದಲೇ ತರಿಸಬೇಕು. ಆಗ ಸ್ಥಳೀಯವಾಗಿ ಮುಸ್ಲಿಮರು ಧಾರ್ಮಿಕ ವಿದ್ಯಾಭ್ಯಾಸ ಕಲಿಯುವುದು ಕಡಿಮೆ. ಒಂದು ವೇಳೆ ಕಲಿಯುವುದಿದ್ದರೂ ಕೇರಳದಲ್ಲಿ ಹೋಗಿ ಕಲಿತು ಬರಬೇಕು. ಬರುವಾಗ ಅಪ್ಪಟ ಮಲಯಾಳ ಭಾಷೆಯಲ್ಲಿ ಮಾತನಾಡಿ ನಮ್ಮನ್ನೆಲ್ಲ ಹೆದರಿಸುತ್ತಿದ್ದರು. ಕೇರಳದಿಂದ ಬಂದ ಮುಸ್ಲಿಯಾರರು ನಮಗೆ ಮದರಸದ ಪಠ್ಯಗಳನ್ನು ಮಲಯಾಳಂನಲ್ಲೇ ಬೋಧಿಸುತ್ತಿದ್ದರು. ಪಠ್ಯಗಳಲ್ಲಿರುವ ಅಕ್ಷರಗಳೆಲ್ಲ ಅರೇಬಿಕ್ ಆಗಿದ್ದವು. ಆದರೆ ಮಾಧ್ಯಮ ಮಾತ್ರ ಮಲಯಾಳಂ. ಹೀಗೆ ನಾವು ಅರಬೀ-ಮಲಯಾಳಂ ಮೂಲಕ ಮದ್ರಸಗಳಲ್ಲಿ ಓದಿದೆವು. ಇದರ ಪರಿಣಾಮವಾಗಿ, ನಾವೆಲ್ಲ ಮದರಸದಲ್ಲಿ ಕುರ್‌ಆನನ್ನು ಓದಲು ಮಾತ್ರ ಕಲಿತೆವು. ಆದರೆ ಅದರ ಅರ್ಥ ಗೊತ್ತೇ ಇರಲಿಲ್ಲ. ನಾನು ಕುರ್‌ಆನ್‌ನ್ನು ಅರ್ಥ ಸಹಿತ ಓದಿದ್ದು ಮದರಸ ತೊರೆದ ಎಷ್ಟೋ ವರ್ಷಗಳ ಬಳಿಕ. ಅದೂ ಕನ್ನಡದಲ್ಲಿ. ಕುರ್‌ಆನನ ಕನ್ನಡ ಅನುವಾದ ಬಂದುದರಿಂದ ನಾವು ಕುರ್‌ಆನ್‌ನ್ನು ಅರ್ಥ ಸಹಿತ ಓದುವಂತಾಯಿತು. ಮದರಸ-ಮಸೀದಿ ವತಿಯಿಂದ ವರ್ಷಕ್ಕೊಮ್ಮೆ ಗಂಭೀರ ಮತ ಪ್ರಸಂಗವನ್ನು ಮಾಡುತ್ತಿದ್ದರು. ಅಂದರೆ ಧಾರ್ಮಿಕ ಭಾಷಣ. ಇದಕ್ಕೂ ಕೇರಳದಿಂದಲೇ ವೌಲ್ವಿಗಳು ಭಾಷಣ ಮಾಡಲು ಬರುತ್ತಿದ್ದರು. ಅವರು ಮಲಯಾಳಂನಲ್ಲಿ ಈ ಭಾಷಣವನ್ನು ಮಾಡಿದರೆ ಮಾತ್ರ ಅದಕ್ಕೊಂದು ಮರ್ಯಾದೆ. ನಾವೆಲ್ಲ ಮಲಯಾಳಂ ಎಂದರೆ ಮುಸ್ಲಿಮರ ಭಾಷೆ ಎಂದೇ ತಿಳಿದುಕೊಂಡಿದ್ದೆವು. ಹೇಗೆ ಉತ್ತರ ಕರ್ನಾಟಕದಲ್ಲಿ ಉರ್ದುವನ್ನು ಮುಸ್ಲಿಂ ಭಾಷೆ ಎಂದು ತಪ್ಪು ತಿಳಿದುಕೊಂಡಿದ್ದಾರೋ, ಹಾಗೆಯೇ ನಾವು ಮಲಯಾಳಂ ಕುರಿತಂತೆಯೂ ತಪ್ಪು ತಿಳಿದಿದ್ದೆವು. ಮಲಯಾಳಂ ಮಾತನಾಡುವವರೆಲ್ಲ ಮುಸ್ಲಿಮರು ಎಂದು ನಂಬಿದ್ದೆವು. ಹೀಗಿರುವಾಗ, ನಮ್ಮ ಉಪ್ಪಿನಂಗಡಿ ಸಮೀಪದ ಮುಸ್ಲಿಯಾರರೊಬ್ಬರು ಒಂದು ಕ್ರಾಂತಿಯನ್ನು ಮಾಡಿದರು. ಅವರು ಕೇರಳದಲ್ಲಿ ಕಲಿತು ಬಂದವರೇ ಆಗಿದ್ದರೂ, ಬ್ಯಾರಿ ಭಾಷೆಯಲ್ಲಿ ಮತ ಪ್ರಸಂಗವನ್ನು ಹೇಳಲು ಶುರು ಮಾಡಿದರು. ಇದು ಆಸುಪಾಸಿನಲ್ಲೆಲ್ಲ ಕುತೂಹಲಕ್ಕೆ ಕಾರಣವಾಗಿತ್ತು. ‘‘ಬ್ಯಾರಿ ಭಾಷೆಯಲ್ಲಿ ಮತ ಪ್ರಸಂಗವೆ?’’ ಎಂದು ಎಲ್ಲರೂ ಕಿಸ್ಸಕ್ಕನೆ ನಗುತ್ತಿದ್ದರು.
ಒಂದು ದಿನ ನಮ್ಮ ಮಸೀದಿಗೂ ಅವರನ್ನು ಕರೆಯಲಾಯಿತು. ಅವರು ಬ್ಯಾರಿ ಭಾಷೆಯಲ್ಲಿ ಮತಪ್ರಸಂಗ ಮಾಡುತ್ತಿದ್ದರೆ ನಾವೆಲ್ಲ ಕಿಸಕಿಸನೆ ನಗುತ್ತಿದ್ದೆವು. ಯಾಕೆಂದರೆ, ಆಳದಲ್ಲಿ ನಾವೆಲ್ಲ ನಾವಾಡುವ ಬ್ಯಾರಿ ಭಾಷೆಯ ಬಗ್ಗೆ ಕೀಳರಿಮೆಯಿಂದ ನರಳುತ್ತಿದ್ದೆವು. ಆದರೆ ನಿಧಾನಕ್ಕೆ ಅವರ ಪ್ರಸಂಗ ನಮಗೆಲ್ಲ ಇಷ್ಟವಾಗತೊಡಗಿತು. ಆ ಬಳಿಕ ಅವರು ಬ್ಯಾರಿ ಭಾಷೆಯಲ್ಲಿ ಮತ ಪ್ರಸಂಗ ನೀಡುವುದಕ್ಕಾಗಿಯೇ ಜನಪ್ರಿಯರಾದರು.

6 comments:

  1. ನನ್ನ ಬಾಲ್ಯದ ದಿನಗಳು ನೆನಪಿಗೆ ಬಂದವು. ಅರೆಬಿಕ್‍ ಅಕ್ಷರದಲ್ಲಿ ಮಲೆಯಾಳಂ ಪಾಠ ಮದ್ರಸದಲ್ಲಿ ನಡೆಯುತ್ತಿತ್ತು ಅಂತ ಈಗ ನಿಮ್ಮ ಲೇಖನ ಓದಿಯೇ ಗೊತ್ತಾಗಿದ್ದು.ನಾನು ಭಗವದ್ಗೀತೆ- ಬೈಬಲ್‍ ಕನ್ನಡದಲ್ಲಿ ಓದುವ ಸಂದರ್ಭ ಒದಗಿದಾಗ , ಕುರಾನ್‍ನ ಅನುವಾದ ಬರಹಗಳ ಹುಡುಕಾಟದಲ್ಲಿದ್ದೆ. ಮಂಗಳೂರಿನ ಯಾವುದೋ ಮುಸ್ಲಿಂ ಪುಸ್ತಕ ಪ್ರಕಟಣೆ ಸಂಸ್ಥೆಗೆ ಯಾರಿಂದಲೋ ಸಂಪರ್ಕ ಸಾಧಿಸಿ ಸಂಪಾದಿಸಿ ಓದಿದ್ದೇನೆ. ತುಂಬಾ ಉತ್ತಮ ಮಾಹಿತಿಯ ಲೇಖನ ನಿಮ್ಮದು.ಸೃಜನಶೀಲ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವವರಿಗೆ ನಿಮ್ಮ ಬ್ಲಾಗ್‍ ಅನ್ನು ಅನುಸರಿಸಲು ಸಲಹೆ ನೀಡಲು ಅನುಕೂಲ ಮಾಡಿಕೊಟ್ಟಿದ್ದೀರಿ. ಧನ್ಯವಾದಗಳು.

    ReplyDelete
  2. ಬಶೀರ್ ಅವರೇ, ಈಗಲೂ ಈ ರೀತಿಯ ವಿದ್ಯಾಭ್ಯಾಸವೇ ನಡೆಯುವುದು ಮದರಸಾಗಳಲ್ಲಿ . ತಲಪ್ಪಾಡಿಯಿಂದಾಚೆಗೆ ಬ್ಯಾರಿ ಭಾಷೆ ಅನ್ನುವುದು ಕೂಡ ನೀವು ತಿಳಿಸಿದ (ನಕ್ಕ್ ನಿಕ್ಕ್ )ಅಲ್ಲ. ತುಂಬಾ ಮಲಯಾಳದ ಶಬ್ಧಗಳು ಅದರಲ್ಲಿ ಹಾಸು ಹೊಕ್ಕಾಗಿದೆ.

    ನಮ್ಮೂರುಗಳಲ್ಲೆಲ್ಲಾ ಶುದ್ಧ ಮಲಯಾಳಂನಲ್ಲೇ ಮತಪ್ರಸಂಗಗಳು ನಡೆಯುವುತ್ತದೆ. ತೊಕ್ಕೊಟ್ಟು , ಮಂಗಳೂರು ಕಡೆಗಳಲ್ಲಿ ಕೂಡ ನಿಮ್ಮ ಭಾಷೆ ಮಲಯಾಳಂ ಕಡೆಗೆ ಸ್ವಲ್ಪ ಒಲವು ತೋರುತ್ತಿರುವುದಕ್ಕೆ ಇದೂ ಕಾರಣ ಹೌದು ಅನ್ನಿಸುತ್ತಿದೆ.

    ನೀವು ಇನ್ನೂ ಸ್ವಲ್ಪ ಈ ಬಗ್ಗೆ ಬರೆಯುತ್ತೀರ ಅನ್ನುವ ನಂಬಿಕೆಯಿದೆ .

    ReplyDelete
  3. ನಿಮ್ಮ ಬರಹ ಓದಿದ ಮೇಲೆ. ಎರಡು ಮಾತು ಸರ್,

    ನನ್ನದು ಕರ್ನಾಟಕದ ಗಡಿಯ ಹಳ್ಳಿ. ಆಂಧ್ರಕ್ಕೆ ನಾಲ್ಕಾರು ಮೈಲಿ. ನನ್ನ ಹಳ್ಳಿಯಲ್ಲಿ ಈಗಲೂ ಎಲ್ಲ ಬೋರ್ಡುಗಳೂ ಕನ್ನಡ, ಮಾತು ವ್ಯವಹಾರಕ್ಕೆ ’ಕೋಲಾರ ಜಿಲ್ಲೆ ತೆಲುಗು’.

    ನಾನು ಶಾಲೆ ಓದುತ್ತಿದ್ದಾಗ. ಕನ್ನಡ ಮಾಸ್ತರರು ಕ್ಲಾಸಿಗೆ ಬಂದು
    "ಕನ್ನಡ ಬುಕ್ಕುಲು ತೀಯಂಡ್ರ" (ಕನ್ನಡ ಬುಕ್ಸ್ ತೆರೆಯಿರಿ) ಅನ್ನುತ್ತಿದ್ದರು
    ನಂತರ
    "ಮೂಡವ ಪದ್ಯಂಲೋ ಕುವೆಂಪು ಏಮಿ ಚೆಪ್ಪಿನಾರಂಟೇ!" (ಮೂರನೇ ಪದ್ಯದಲ್ಲಿ ಕುವೆಂಪು ಏನು ಹೇಳ್ತಾರೆ ಅಂದ್ರೆ)
    ಅಂತ ಪಾಠ ಮಾಡುತ್ತಿದ್ದರು.
    ಇವೆಲ್ಲ ನೆನಪಾದವು. ಧನ್ಯವಾದಗಳು.

    ಒಳ್ಳೆ ಸರಳ ಶೈಲಿ ಬರಹಗಾರರು ನೀವು. ಭೇಷ್!

    ನನ್ನ ಬ್ಲಾಗಿಗೂ ಬನ್ನಿರಿ.

    ReplyDelete
  4. ಮಾನ್ಯ ಬಶೀರ್ ಸಾಹೇಬರೇ ! " ಚೆನ್ನಾಗಿ ಬರೆದಿದ್ದೀರಿ" ಅನ್ನುವಷ್ಟು ಧೈರ್ಯ ನನಗಿಲ್ಲ ಏಕೆಂದರೆ ನಾನು ಇತ್ತೀಚೆಗಷ್ಟೇ ಕನ್ನಡ ಕಲಿತವನು, ಇನ್ನು ನಿಮ್ಮ ಬರಹವನ್ನು ಪರಾಮರ್ಶಿಸುವ ಅಧಿಕಾರವೂ ನನಗಿಲ್ಲ, ತಮ್ಮ ಗಜಗಾತ್ರದ ವ್ಯಕ್ತಿತ್ವದ ಮುಂದೆ ನಾನು ತೀರಾ ಎಳೆಯವನು.... ಆದರೂ ನಿಮ್ಮ ದು ಮನ ಮುಟ್ಟುವ ಬರಹ... "ಬ್ಯಾರಿ"ಗಳ ಕೀಳರಿಮೆಯ ಸಹಜ ಚಿತ್ರಣ ಮೂಡಿಸುವ ಲೇಖನವಿದು.. ಇದನ್ನು ಓದಿ ಬಾಲ್ಯದ ನೆನಪುಗಳನ್ನೊಮ್ಮೆ ಮೆಲುಕು ಹಾಕುವಂತೆ ಮಾಡಿದ್ದಕ್ಕೆ ಋಣಿಯಾಗಿದ್ದೇನೆ. ಒಮ್ಮೆಯಂತೂ ಖ್ಯಾತ ಗಜಲ್ ಗಾಯಕ ದಿವಂಗತ ಜಗಜೀತ್ ಸಿಂಗ್ ಸ್ವರ ನೀಡಿದ " ಯೆ ದೌಲತ್ ಭಿ ಲೇಲೋ, ಯೆ ಶುಹ್ರತ್ ಭಿ ಲೇಲೋ, ಭಲೇ ಛೀನ್ ಲೋ ಮುಜ್ಹ್ ಸೇ ಮೇರೀ ಜವಾನೀ , ಮಗರ್ ಮುಜ್ಹ್ ಕು ಲೌಟಾದೋ ಬಚ್ಪನ್ ಕಾ ಸಾವನ್, ವೊಹ್ ಕಾಗಜ್ ಕಿ ಕಶ್ತೀ ವೊಹ್ ಬಾರಿಶ್ ಕಾ ಪಾನೀ" ತುಟಿ ಬಿಚ್ಚದೆ ಜಪಿಸಿದೆ,, ನಿಮ್ಮ "ಗುಜರಿ ಅಂಗಡಿ"ಗೆ ಆಗಾಗ ಬಂದು ಹೋಗುವುದು ಈಗ ಅಭ್ಯಾಸವಾಗಿ ಬಿಟ್ಟಿದೆ. ಒಳ್ಳೇ ಬೆಲೆಬಾಳುವ ಸಾಮಾಗ್ರಿಗಳು...

    ReplyDelete
  5. what a wonderful article this i AM WONDERING after read this article because of your sustainable knowledge about the beary language.

    ReplyDelete
  6. Bhasheer avare,
    nimma blog nodide, odide, khushi patte.dhakshina kannadada chaapu iruva nimma baraha athmeeyavaagide.naanu yaavagaloo yochisuttidde byaari bhaashe malayalam bhaasheya haagideyalla endu. Iga thiliyithu yaake haagendu.
    nimma kathegala parichayavoo aayithu. chennaagive.
    Usha P. Rai

    ReplyDelete