Saturday, October 15, 2011

ಸ್ನೇಹ ಮತ್ತು ಇತರ ಕತೆಗಳು


ಬಿಂದು
ನನ್ನ ಮುಂದಿದ್ದ ಖಾಲಿ ಕಾಗದದ ಮೇಲೆ ಪೆನ್ನಿಂದ ಒಂದು ಬಿಂದುವನ್ನಿಟ್ಟೆ.
ಆಲದ ಬೀಜದಂತಿರುವ ಒಂದು ಬಿಂದು.
ಆ ಬಿಂದುವಿನ ಗರ್ಭದೊಳಗಿಂದ ಹೊರಬರುವ ಜೀವಕ್ಕಾಗಿ ಕಾಯುತ್ತಿದ್ದೇನೆ.

ದಾರಿ
ದೊಡ್ಡ ನಗರದಲ್ಲಿ ಸಂತ ಮತ್ತು ಶಿಷ್ಯ ದಾರಿ ತಪ್ಪಿದರು.
ತಮ್ಮ ಆಶ್ರಮದೆಡೆಗೆ ದಾರಿ ಹುಡುಕುತ್ತಾ ಗಲ್ಲಿ ಗಲ್ಲಿ ಅಲೆದರು.
ಕೊನೆಗೆ ಒಂದು ಕಟ್ಟಡದ ಕೆಳಗೆ ಸುಸ್ತಾಗಿ ಬಿದ್ದುಕೊಂಡರು.
ಶಿಷ್ಯ ಕೇಳಿದ ‘‘ಗುರುಗಳೇ, ಯಾರಲ್ಲಾದರೂ ದಾರಿ ಕೇಳೋಣವೆ?’’
ಸಂತ ಹೇಳಿದ ‘‘ನಮ್ಮ ಆಶ್ರಮದ ದಾರಿಯನ್ನು ಇನ್ನೊಬ್ಬರಲ್ಲಿ ಕೇಳುವುದು ನಾಚಿಕೆಗೇಡು. ಮೊದಲು ನಮ್ಮನ್ನು ದಾರಿ ತಪ್ಪಿಸಿದ ನಗರದ ಮೋಹದಿಂದ ಬಿಡಿಸಿಕೊಳ್ಳೋಣ. ದಾರಿ ತನ್ನಷ್ಟಕ್ಕೆ ತೆರೆದುಕೊಳ್ಳುತ್ತದೆ’’

ಗಾಜು
ಅವನಿಗೆ ಸಿಟ್ಟು ಬಂತು.
ಸಿಟ್ಟಿನಿಂದ ತನ್ನ ಕೈಯಲ್ಲಿದ್ದ ಗಾಜಿನ ಲೋಟವನ್ನು ನೆಲಕ್ಕಪ್ಪಳಿಸಿದ.
ಲೋಟ ಚೂರು ಚೂರಾಯಿತು.
ತುಸು ಹೊತ್ತಲ್ಲಿ ಆತ ಸಮಾಧಾನಗೊಂಡ. ಶಾಂತನಾದ.
ಆದರೆ ಚೂರಾದ ಲೋಟ ಒಂದಾಗಲಿಲ್ಲ.

ಕಲ್ಲು
ಕಾರ್ಮಿಕನೊಬ್ಬ ಹೊತ್ತು ತಂದ ಅತಿ ಭಾರವಾದ, ದೊಡ್ಡ ಕಲ್ಲು.
ಶಿಲ್ಪಿಗಳ ಕೈಯಲ್ಲಿ ದೇವರಾಯಿತು.
ದೇವಾಲಯ ಸೇರಿತು.
ಒಂದು ದಿನ ಕಾರ್ಮಿಕನಿಗೆ ತಾನು ಹೊತ್ತು ತಂದ ಆ ಕಲ್ಲನ್ನು ನೋಡಬೇಕೆಂದು ಮನಸ್ಸಾಯಿತು.
ದೇವಾಲಯಕ್ಕೆ ಬಂದ.
‘‘ನೀನು ಕೆಳ ಜಾತಿ. ಮುಟ್ಟಬಾರದು. ದೇವರು ಅಪವಿತ್ರವಾಗುತ್ತಾನೆ’’ ಅರ್ಚಕರು ನುಡಿದರು.
ಅದು ತಾನು ತಂದ ‘ಕಲ್ಲು’ ಎನ್ನುವುದು ಅವನಿಗೆ ಮನವರಿಕೆಯಾಯಿತು.

ಸಹಾಯ
ಒಂದು ಹುಲಿ.
ವಯಸ್ಸಾಗಿತ್ತು. ಅದಕ್ಕೆ ನಡೆದಾಡಲೂ ಸಾಧ್ಯವಾಗುತ್ತಿರಲಿಲ್ಲ.
ಆದುದರಿಂದ ಬೇಟೆ ಕಷ್ಟವಾಯಿತು. ಹಸಿವಿನಿಂದ ಕಂಗಾಲಾಗಿತ್ತು.
ಒಂದು ದಿನ ಅದರ ಮುಂದೆ ಎರಡು ಜಿಂಕೆಗಳು ಬಂದು ನಿಂತವು.
ಹುಲಿಯನ್ನು ಕಂಡು ಒಂದು ಜಿಂಕೆಗೆ ದುಃಖವಾಯಿತು. ಸಹಾಯ ಮಾಡಬೇಕು ಅನ್ನಿಸಿತು.
‘‘ನಾನೇನಾದರೂ ಸಹಾಯ ಮಾಡಲಾ?’’ ಜಿಂಕೆ ಕೇಳಿತು.
ಇನ್ನೊಂದು ಜಿಂಕೆ ಕೇಳಿತು ‘‘ಅದರ ಒಂದು ಹೊತ್ತಿನ ಆಹಾರವಾಗುವುದಕ್ಕೆ ನಿನಗೆ ಸಾಧ್ಯವಿದೆಯೆ?’’
ಮೊದಲ ಜಿಂಕೆ ಭಯದಿಂದ ‘‘ಇಲ್ಲ, ಇಲ್ಲ’’ ಎಂದಿತು.
‘‘ಹಾಗಾದರೆ ಬಾಯಿ ಮುಚ್ಚಿ ಸುಮ್ಮನಿರು. ಹುಲಿಗೆ ಜಿಂಕೆಗಳು ಸಹಾಯವಾಗುವುದು ಆಹಾರದ ಮೂಲಕ ಮಾತ್ರ. ನಡಿ, ಇಲ್ಲಿಂದ ಮೊದಲು ಹೋಗೋಣ’’

ಸ್ನೇಹ
‘‘ಗುರುಗಳೇ, ನನ್ನ ಪ್ರಾಣ ಮಿತ್ರ ಆಂತರಿಕವಾಗಿ ದುಷ್ಟನೆನ್ನುವುದು ತಿಳಿದು ಹೋಗಿದೆ. ನಾನವನ ಸ್ನೇಹವನ್ನು ಬಿಡಲೆ?’’
‘‘ದುಷ್ಟನಾಗಿದ್ದೂ ಅವನು ನಿನ್ನ ಸ್ನೇಹ ಮಾಡಿದ್ದಾನೆಂದರೆ ನಿನ್ನಲ್ಲೇನೋ ದುಷ್ಟತನವಿದೆ. ಮೊದಲು ಅದನ್ನು ಬಿಡು. ಆಗ ನಿನ್ನ ಸ್ನೇಹವನ್ನು ಅವನು ತಾನಾಗಿಯೇ ಬಿಡುತ್ತಾನೆ’’ ಸಂತ ತಣ್ಣಗೆ ಹೇಳಿದ.

ಹುಚ್ಚು
ನಗರದಲ್ಲಿ ಅಂದು ಬಂದ್ ಘೋಷಿಸಲಾಗಿತ್ತು.
ಅಲ್ಲಲ್ಲಿ ಪೊಲೀಸ್ ಪಹರೆ.
ಹುಚ್ಚನೊಬ್ಬ ಆ ದಾರಿಯಲ್ಲಿ ಯಾವ ಭಯವೂ ಇಲ್ಲದೆ ನಡೆದು ಹೋಗುತ್ತಿದ್ದ.
ಆತನಿಗೆ ಇನ್ನೊಬ್ಬ ಹುಚ್ಚ ಎದುರಾದ.
ಆತ ಕೇಳಿದ ‘ಇಂದೇಕೆ ಬೀದಿ ನಿರ್ಜನವಾಗಿದೆ. ಜನರೇಕೆ ನಮ್ಮ ಕಡೆಗೆ ಕಲ್ಲು ತೂರುತ್ತಿಲ್ಲ. ನಮ್ಮನ್ನು ನೋಡಿ ನಗುತ್ತಿಲ್ಲ? ನಮ್ಮನ್ನು ನೋಡಿ ಓಡಿಸುವುದಕ್ಕೆ ಯಾರೂ ಬರುತ್ತಿಲ್ಲ?’’
‘‘ಇಂದು ನಗರದಲ್ಲಿ ದಂಗೆ, ಗಲಾಟೆಯಂತೆ’’
‘‘ಯಾಕೆ ಗಲಾಟೆ?’’
‘‘ಜನರಿಗೆ ಹುಚ್ಚು, ಅದಕ್ಕೆ’’

ಗ್ರಂಥ
‘‘ಆ ಬೃಹತ್ ಧರ್ಮಶಾಸ್ತ್ರ ಗ್ರಂಥವನ್ನು ತಾವು ಓದಿಲ್ಲವೆ?’’ ಆ ಪಂಡಿತ ಸಂತನಲ್ಲಿ ಕೇಳಿದ.
‘‘ಇಲ್ಲ’’ ಎಂದ ಸಂತ.
‘‘ನಾನು ಓದಿದ್ದೇನೆ’’ ಪಂಡಿತ ಎದೆಯುಬ್ಬಿಸಿ ಹೇಳಿದ.
‘‘ಇಲ್ಲ...ನಾನು ಓದಿಲ್ಲ’’ ಸಂತನೂ ಹೆಮ್ಮೆಯಿಂದ ಪುನರುಚ್ಚರಿಸಿದ.

ಕಲ್ಲುಗಳು
ಅದೊಂದು ಬಂಡೆ.
ಇನ್ನೊಂದು ಬಂಡೆಯೊಂದಿಗೆ ವಿಚಿತ್ರವೊಂದನ್ನು ಹಂಚಿಕೊಳ್ಳುತ್ತಿತ್ತು.
‘‘ನನ್ನದೇ ಕಲ್ಲಿನಿಂದ ಇಲ್ಲಿನ ಮಸೀದಿಯನ್ನು ಕಟ್ಟಲಾಯಿತು. ಪಕ್ಕದ ದೇವಸ್ಥಾನಕ್ಕೆ ನನ್ನ ಕಲ್ಲನ್ನೇ ಬಳಸಿ ದೇವರ ಮೂರ್ತಿಯನ್ನು ನಿರ್ಮಿಸಲಾಯಿತು. ನನ್ನದೇ ಕಲ್ಲುಗಳನ್ನು ಬಳಸಿ ಉಭಯ ಸ್ಥಳಗಳಿಗೂ ರಸ್ತೆಯನ್ನು ನಿರ್ಮಿಸಲಾಯಿತು.
ಇದೀಗ,

ನನ್ನವೇ ಕಲ್ಲು ಚೂರುಗಳನ್ನು ಹಿಂದೂಗಳು ಮಸೀದಿಗೂ, ಮುಸ್ಲಿಮರು ದೇವಳಕ್ಕೂ ಎಸೆಯುತ್ತಿದ್ದಾರೆ...’’

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

5 comments:

  1. bahaLa chennaagive Basheer. Liked them much. Thanks for these wondrous insightful pieces.
    - Chetana TeerthahaLLi

    ReplyDelete
  2. ಬಶೀರರವರೆ, ಎಷ್ಟು ಸೊಗಸಾಗಿ ಜೀವನದ ಸತ್ಯಗಳನ್ನು ಸರಳವಾಗಿ ಬಿಡಿಸಿದ್ದೀರಿ! ತುಂಬಾ ಸಂತೋಷವಾಯಿತು ಓದಿ. ಧನ್ಯವಾದಗಳು.

    ReplyDelete
  3. ಥ್ಯಾಂಕ್ಯು ಚೇತನ ಅವರೇ, ಥ್ಯಾಂಕ್ಯು ಕಿರಣ್....

    ReplyDelete
  4. ಬಷೀರ‍್ ಚೆನ್ನಾಗಿದೆ ತತ್ವಯುತ ಮಾತುಗಳು. ಓದುವಾಗ ತುಂಬಾ ಆಲೋಚನೆಗೆ ನೂಕುವಂತಹದ್ದು ನಿಮ್ಮ ಆಲೋಚನೆಯ "ಡೈರಿ"ಗಳು.

    ReplyDelete