ಮಂಗಳೂರಿನಲ್ಲಿ ‘ಜನವಾಹಿನಿ’ ಆಗ ಹುಟ್ಟಿದ್ದಷ್ಟೇ. ನನ್ನನ್ನು ಕೊಡಗು ಜಿಲ್ಲೆಯವರದಿಗಾರನಾಗಿ ರವಾನಿಸಲಾಯಿತು. ಅಲ್ಲೊಂದು ಕಚೇರಿಯನ್ನು ಹುಡುಕುವುದೂ ನನ್ನ ಹೆಗಲ ಮೇಲೆಯೇ ಬಿತ್ತು. ಕೊನೆಗೂ ಮಡಿಕೇರಿಯ ಟೋಲ್ಗೇಟ್ ಸಮೀಪ ಒಂದು ಕೊಠಡಿ ಸಿಕ್ಕಿತು. ಆ ಕೊಠಡಿ ಪ್ರವೇಶಿಸಿದಾಗ ಅಲ್ಲೊಂದು ಮುಚ್ಚಿದ ಗೋಡೆ ಕಪಾಟನ್ನು ನೋಡಿದೆ. ಅದರ ಬಾಗಿಲನ್ನು ತೆರೆದಾಗ ಒಂದು ವಿಶಿಷ್ಟ ಅನುಭವವೊಂದು ನನ್ನದಾಯಿತು. ಸುಮಾರು ಎರಡು ವರ್ಷಗಳ ಬಳಿಕ ಆ ಅನುಭವ ಕವಿತೆಯ ರೂಪ ಪಡೆಯಿತು. ಬಾಲಸುಬ್ರಹ್ಮಣ್ಯ ಕಂಜರ್ಪಣೆ ಮತ್ತು ಪಟ್ಟಾಭಿರಾಮ ಸೋಮಯಾಜಿಯವರ ಜೊತೆಗೆ ಟೀ ಕುಡಿಯುತ್ತಾ ಅದೇ ಕಚೇರಿಯಲ್ಲಿ ಆ ಕವಿತೆಯನ್ನು ಅವರ ಮುಂದಿಟ್ಟೆ. ಅವರೂ ಇಷ್ಟಪಟ್ಟರು. ಬಳಿಕ ಆ ಕವಿತೆಗೆ ಕತೆಯ ರೂಪಕೊಟ್ಟು, ‘ಗೋಡೆಕಪಾಟು’ ಎಂಬ ಹೆಸರಿಟ್ಟು ನನ್ನ ‘ಬಾಳೆಗಿಡ ಗೊನೆ ಹಾಕಿತು’ ಸಂಕಲನದಲ್ಲಿ ಪ್ರಕಟಿಸಿದೆ. ಎಸ. ದಿವಾಕರ್ ಸಂಪಾದಕತ್ವದ ಕನ್ನಡದ ಶತಮಾನದ ಅತಿ ಸಣ್ಣ ಕತೆಗಳು ಸಂಕಲನದಲ್ಲೂ ಇದು ಪ್ರಕಟವಾಗಿದೆ.
ಮುಂದೆ ಆ ಕತೆಯನ್ನು ಆಧರಿಸಿ ಯುವ ಪ್ರತಿಭಾವಂತ ಕಲಾವಿದ, ನಿರ್ದೇಶಕ ಆಸಿಫ್ ಫಾರೂಖಿ ಒಂದು ಸಣ್ಣ ಟೆಲಿ ಫಿಲಂ ಮಾಡಿದರು. ಒಂದಿಷ್ಟು ವಾಚ್ಯವಾಗಿತ್ತಾದರೂ, ಬಹುಶಃ ದೃಶ್ಯ ರೂಪಕ್ಕಿಳಿಸುವಾಗ ಅದು ಅನಿವಾರ್ಯ ಅನ್ನಿಸಿತು.ಆ ಕತೆಯನ್ನು ಇಲ್ಲಿ ಸುಮ್ಮಗೆ ಹಂಚಿಕೊಂಡಿದ್ದೇನೆ.
ಬದುಕಿನ ದಾರಿಯಲ್ಲಿ ನನ್ನನ್ನು ಕೈ ಹಿಡಿದು ನಡೆಸುತ್ತಿದ್ದ ಈ ಕಥೆಗಾರನ ಮನೆಯ ವಿಳಾಸ ಹುಡುಕಿ, ಆತನ ಮನೆ ಬಾಗಿಲ ಮುಂದೆ ಎದೆ ಬಡಿತವನ್ನು ಒತ್ತಿ ಹಿಡಿದು ನಿಂತೆ. ತುಸು ಹೊತ್ತಲ್ಲಿ ‘ಯಾರದು?’ ಎನ್ನುತ್ತಾ ಬಾಗಿಲ ಸೆರೆಯಿಂದ ಇಣುಕಿದ ವ್ಯಕ್ತಿ ಉತ್ತರಕ್ಕಾಗಿ ಕಾಯತೊಡಗಿತು.
ಉದ್ದಕ್ಕೆ ಆರಿದ ಗಾಯದಂತೆ..ಸೀಳು ಬಿಟ್ಟ ಬಾಗಿಲಲ್ಲಿ ಹೊಳೆಯುವ ಒಂದು ಕಣ್ಣು ನನ್ನ ಗಾಬರಿಬಿದ್ದ ಕಣ್ಣುಗಳೊಂದಿಗೆ ಮಾತನಾಡಿ ತೃಪ್ತವಾದ ಬಳಿಕ ಬಾಗಿಲು ಪೂರ್ಣವಾಗಿ ತೆರೆದುಕೊಂಡವು.
‘ಬನ್ನಿ’ ಎಂದು ಅರೆ ನರೆತ ಗಡ್ಡ, ಬತ್ತಿದ ಮುಖದ ವ್ಯಕ್ತಿಯೊಂದು ಒಳಗೆ ಕರೆಯಿತು.
‘ನಾ... ನಾನು ನಿಮ್ಮ ಅಭಿಮಾನಿ’ ನನ್ನ ಪರಿಚಯ ಪತ್ರವನ್ನು ಮತ್ತೆ ಕಣ್ಣಲ್ಲಿಟ್ಟು ಹೇಳಿದೆ. ಆ ಮಾತಿಗೆ ಒಮ್ಮೆಗೆ ಅಳುಕಿ ಬಿದ್ದವನಂತೆ ‘ಬನ್ನಿ. ಬನ್ನಿ’ ಎಂದು ಒಳಕರೆದು, ಒಳಗೆಲ್ಲಾ ನೆಲದ ಮೇಲೆ ಬಿದ್ದ ಕಸಕಡ್ಡಿಗಳನ್ನು ನಾನು ನೋಡುನೋಡುತ್ತಿದ್ದಂತೆಯೇ ಕಾಲಿನಿಂದ ಸರಿಸತೊಡಗಿದ.
ಕುರ್ಚಿಯಲ್ಲಿ ಒಣಗಲೆಂದಿಟ್ಟ ಎರಡು ನಿಕ್ಕರುಗಳನ್ನು ಒಮ್ಮೆಲೆ ಬಾಚಿ ಮುದ್ದೆ ಮಾಡಿ ಪ್ಯಾಂಟ್ ಕಿಸೆಗೆ ತುರುಕಿಕೊಂಡ. ‘ಕೂರಿ ಕೂರಿ’ಎನ್ನುತ್ತಲೇ ಯಾರೋ ಉಂಡು ಬಿಟ್ಟ ಬಟ್ಟಲನ್ನು ಎತ್ತಿ ‘ಈಗ ಬಂದೆ’ ಎಂದು ಒಳಹೋಗಿ ಇಟ್ಟು ಬಂದ.
ಕಥೆಗಾರ ಯಾಕೋ ತಪ್ಪು ಮಾಡಿದವನಂತೆ ಸಂಕೋಚದಿಂದ ನನ್ನ ಮುಂದೆ ನಿಂತಿದ್ದ. ‘ಪರವಾಗಿಲ್ಲ ಸಾರ್, ಸುಮ್ನೆ ಬಂದೆ. ನಿಮ್ಮೆಂದಿಗೆ ಮಾತನಾಡಬೇಕೆನ್ನುವುದು ಬಹಳ ದಿನದ ಕನಸಾಗಿತ್ತು’ ಎಂದು ಪರಿಸ್ಥಿತಿಯನ್ನು ಕೈಯೊಳಗೆ ತರುವ ವ್ಯರ್ಥ ಪ್ರಯತ್ನ ಮಾಡಿದೆ.
ಅವನು ನಿಂತೆ ಇದ್ದ. ಅಲ್ಲಿದ್ದ ಒಂದೇ ಒಂದು ಮರದ ಕುರ್ಚಿಯಲ್ಲಿ ನಾನು ಕುಳಿತಿದ್ದೆ. ಆತ ಒಳಗಿಂದ ಬೇರೆ ಕುರ್ಚಿ ತಂದುಕೂರಬಹುದೆಂದು ನಾನು ತಿಳಿದಿದ್ದೆ. ಆದರೆ ಆತ ಆ ಪ್ರಯತ್ನ ಮಾಡಲೇ ಇಲ್ಲ. ನಾನು ಒಮ್ಮೆಲೆ ನಿಂತು ‘ಸಾರ್, ನೀವು ಕೂರಿ’ ಎಂದೆ. ‘ಬೇಡ, ಬೇಡ. ಅಪರೂಪ ಬಂದಿದ್ದೀರಿ. ನೀವೇ ಕೂರಿ’ ಎಂದ. ಆಮೇಲೆ ಒಳ ಹೋಗಿ ಚಾಪೆ ತಂದು ಹಾಸಿದ. ಅಲ್ಲಿ ಅವನು ಕೂರುವ ಮುನ್ನವೇ ನಾನು ಕೂತೆ. ಆತ ಕುರ್ಚಿಯಲ್ಲೂ, ನಾನು ಚಾಪೆಯಲ್ಲೂ ಕೂತ ಕ್ಷಣದಿಂದ ವಾತಾವರಣ ಹದಕ್ಕೆ ಬಂತು ಅನ್ನಿಸಿ ‘ಹೇಗಿದ್ದೀರಿ ಸಾರ್?’ ಕೇಳಿದೆ. ಮತ್ತೆ ದಿಗಿಲುಗೊಂಡು ‘ಚೆ..ಚೆನ್ನಾಗಿದ್ದೇನೆ’ ಎಂದ. ‘ಏನಾದರೂ ಕುಡೀತೀರಾ?’ಎಂದು ಆತ ಕೇಳದಿದ್ದುದಕ್ಕೆ ನನಗೇನು ಅನ್ನಿಸಲಿಲ್ಲ. ತೀರಾ ಆತ್ಮೀಯನಂತೆ ‘ಸಾರ್, ಕುಡಿಯುವುದಕ್ಕೆ ನೀರು ಬೇಕಾಗಿತ್ತು’ ಎಂದೆ. ಕಥೆಗಾರ ದಡಬಡಿಸಿ ಎದ್ದು ಒಳನಡೆದ. ಹಲವು ಕ್ಷಣಗಳು ಕಳೆದರೂ ಹೊರ ಬರಲಿಲ್ಲ.
ನಾನು ಬಣ್ಣ ಮಾಸಿದ ಗೋಡೆಯಗಲಕ್ಕೂ ಕಣ್ಣಾಯಿಸಿದೆ. ಯಾವುದೋ ಅವ್ಯಕ್ತ ಪಾತ್ರವೊಂದನ್ನು ಕಥೆಗಾರ ಗೋಡೆತುಂಬಾ ಸ್ವತಂತ್ರವಾಗಿರಲು ಬಿಟ್ಟಂತೆ ಗೋಡೆಯ ಬಣ್ಣ ಬಗೆ ಬಗೆಯ ಆಕಾರವಾಗಿ ಕಣ್ಣೊಳಗೆ ಇಳಿಯತೊಡಗಿತು.
‘ಈ ಸಾರಿಯ ಮಳೆಗಾಲ ಮುಗಿಯಲಿ ಅಂತ ಕಾಯ್ತ ಇದ್ದೇನೆ, ಗೋಡೆಗೆ ಸುಣ್ಣ ಬಳಿಯಲು’ ಕಥೆಗಾರನ ದನಿ ಕೇಳಿ ಅತ್ತ ಹೊರಳಿದೆ. ಅವನ ಕೈಯಲ್ಲಿ ನೀರಿನ ಪಾತ್ರೆಯಿರಲಿಲ್ಲ. ಸುಮ್ಮನಾದೆ. ಆತ ಮತ್ತೆ ಕುರ್ಚಿಯಲ್ಲಿ ಕೂತ. ಆಮೇಲೆ ಏನೋ ಹೊಳೆದವನಂತೆ ‘ಒಮ್ಮೆ ಪೇಪರ್ ಕೊಡ್ತೀರಾ?’ ಅಂದ. ಈ ಕೋರಿಕೆಯನ್ನು ಪ್ರಸಾದವೆಂಬಂತೆ ಸ್ವೀಕರಿಸಿ ನನ್ನ ಕೈಯಲ್ಲಿದ್ದ ದೈನಿಕವನ್ನು ನೀಡಿದೆ. ಆತ ನೇರವಾಗಿ ಅದರ ಎರಡನೇ ಪುಟವನ್ನು ಬಿಡಿಸಿದ. ಬಳಿಕ ಕಿಸೆಯೊಳಗೆ ಏನನ್ನೋ ಹುಡುಕಾಡತೊಡಗಿದ. ಶರ್ಟಿನ ಕಿಸೆಯೊಳಗಿದ್ದ ಎಲ್ಲವನ್ನು ಹೊರಗೆಳೆದ. ಆಮೇಲೆ ಕಂಪಿಸುವ ಕೈಗಳಲ್ಲಿ ಒಂದು ಚೀಟಿಯನ್ನು ಎತ್ತಿಕೊಂಡು ‘ಕರ್ನಾಟಕ ಲಾಟರಿ ಟಿಕೆಟ್’ ಎಂದು ನಕ್ಕ. ಲಾಟರಿ ಟಿಕೆಟ್ ಅಂಕಿಗಳನ್ನು ಪತ್ರಿಕೆಯೊಂದಿಗೆ ತಾಳೆ ನೋಡುವುದರಲ್ಲಿ ಮುಳುಗಿದ.
ಒಮ್ಮೆಲೆ ಪೆಚ್ಚಾಗಿ ಅವನನ್ನೇ ನೋಡಿದೆ. ಅವನು ಅದನ್ನು ಅನುಭವಿಸುವುದಕ್ಕೆ ಸಾಕ್ಷಿಯಾಗಿ ಅವನ ತುಟಿಯಂಚಿನಲ್ಲಿ ಜೊಲ್ಲು ಕೆಳಬಾಗಿ ತೂಗುತ್ತಿತ್ತು. ಬಳಿಕ ‘ಶಿಟ್’ ಅಂತ ಟಿಕೆಟನ್ನು ಮುಷ್ಠಿಯೊಳಗೆ ಹಿಚುಕಿ ಎಸೆದ. ಒಮ್ಮೆಲೆ ಅರಿವಿಗೆ ಬಂದು ಜೊಲ್ಲನ್ನು ಕೈಯಿಂದ ಒರೆಸಿಕೊಂಡ. ‘ಕೆಲವೊಮ್ಮೆ ಕರ್ನಾಟಕ ಲಾಟರಿಯವರದ್ದೂ ಕೂಡ ಮೋಸವೇನೋ ಅಂತನಿಸ್ತದೆ’ ಎಂದು ಮತ್ತೇನನ್ನೋ ಗೊಣಗಿದ. ವೌನವಾದ. ಕಥೆಗಾರನ ದುಃಖ ಅರ್ಥವಾಯಿತು.
‘ಸಾರ್, ನಿಮ್ಮಟ್ಟಿಗೆ ಮಾತಾಡ್ಬೇಕೂಂತ ಬಂದೆ’ ಎಂದೆ.
‘ಹಾಂ..ಮಾ..ಮಾತಾಡಿ. ಆದ್ರೆ ಸಂಜೆ ಸ್ವಲ್ಪ ಅರ್ಜೆಂಟ್ ಕೆಲ್ಸ ಇದೆ’ ಅವನಿಗೆ ಅವನು ಪಿಸುಗುಟ್ಟಿದ.
‘ಏನ್ಸಾರ್ ಕೆಲ್ಸ, ಹೊಸತೇನಾದ್ರೂ ಬರೀತಾ ಇದೀರಾ?’ ಕುತೂಹಲದಿಂದ ಕೇಳಿದೆ. ‘ಹಾಗೇನಿಲ್ಲಾ...’ ಎಂದು ಹೇಳಿದವನು ಯಾವುದೋ ಅನುಮಾನದಿಂದ ತಡೆದು ಮತ್ತೆ ಮುಂದುವರಿಸಿದ ‘ಸಿಟೀಲಿ ಹೊಸ ಫಿಲ್ಮ್ ಬಂದಿದೆ..ನೋಡಿದ್ರಾ?’
‘ಯಾವ ಫಿಲ್ಮ್ ಸಾರ್?’ ನನ್ನ ಪ್ರಶ್ನೆಗೆ ಒಮ್ಮೆಲೆ ಜೀವ ಪಡೆದ ಅವನು ‘ನಾನಾ ಪಾಟೇಕರಿದ್ದು. ನಿಮ್ಗೆತ್ತಾ? ಈಗವನು ಮತ್ತೆ ರಂಗಭೂಮಿಯತ್ತ ತಿರುಗಿದ್ದಾನಂತೆ. ಏನೇ ಆಗ್ಲಿ ಅವನಿಗೆ ಒಳ್ಳೆ ಡೈರೆಕ್ಟರ್ ಸಿಗ್ಲಿಲ್ಲ ನೋಡಿ’ ಕೊರಗು ತೋಡಿಕೊಂಡ.
ಮಾತನಾಡುತ್ತಿದ್ದವನು ಒಮ್ಮೆಲೆ ನನ್ನ ಆಕಾಶ ನೀಲಿ ಬಣ್ಣದ ಶರ್ಟನ್ನು ನೋಡುತ್ತಾ ‘ಅಂಗಿ ಚೆನ್ನಾಗಿದೆ. ಬಟ್ಟೆ ಎಲ್ಲಿ ಕೊಂಡ್ಕೊಂಡ್ರಿ’ ಎನ್ನುತ್ತಾ ಬಾಗಿ ಬಟ್ಟೆಯ ಗುಣಮಟ್ಟವನ್ನು ಕೈಯಲ್ಲಿ ಉಜ್ಜಿ ನೋಡತೊಡಗಿದ. ಆಮೇಲೆ ಮಾತಿನಲ್ಲೇ ಆಸೆಯನ್ನು ತುಂಬಿಕೊಂಡು ‘ಇನ್ನೊಮ್ಮೆ ಈ ಕಡೆ ಬಂದಾಗ ನನಗೊಂದು ಜೊತೆ ಬಟ್ಟೆ ತನ್ನಿ ಆಗದ?’ ಎಂದ. ತಲೆಯಾಡಿಸಿದೆ. ಕುರ್ಚಿಗೆ ಒರಗಿದಾತ ಮತ್ತೇನನ್ನೋ ಯೋಚಿಸತೊಡಗಿದ.
ನನಗೆ ಅಳು ಬಂದಂತಾಯಿತು. ನಾನು ಹೊತ್ತು ತಂದಿದ್ದ ಮಾತಿನ ಸರಕುಗಳು ಗಿರಾಕಿಗಳಿಲ್ಲದೆ ಒಣಗತೊಡಗಿದವು. ಆದರೂ ಮೆಲ್ಲಗೆ ಚೌಕಾಶಿಗಿಳಿದೆ. ‘ನಿಮ್ಮ ಮೆಚ್ಚಿನ ಲೇಖಕ ಯಾರು ಸಾರ್?’ಬಂದ ಪ್ರಶ್ನೆಗೆ ಒಮ್ಮೆಲೆ ದಡಬಡಾಯಿಸಿ ನನ್ನನ್ನೇ ನೋಡತೊಡಗಿದ.
‘ನಿಮ್ಮ ಮೇಲೆ ಪ್ರಭಾವ ಬೀರಿದ ಲೇಖಕ ಯಾರು ಸಾರ್?’ ಮತ್ತೆ ಕೇಳಿದೆ. ಅವನು ತಡವರಿಸತೊಡಗಿದ.
‘ಹೋಗ್ಲಿ ಸಾರ್, ನಿಮ್ಮ ಲೈಬ್ರರಿ ತೋರಿಸ್ತೀರಾ’ ಎಂದೆ. ಅವನು ಯಾಕೋ ತಲ್ಲಣಿಸಿದವನಂತೆ ಕಂಡ. ಏನೂ ಹೇಳದ ವೌನದ ಬಳಿಕ ‘ಬನ್ನಿ, ಲೈಬ್ರರಿ ತೋರಿಸ್ತೀನಿ’ ಎನ್ನುತ್ತಾ ಒಳ ನಡೆದ. ನಾನು ಅವನ ಹಿಂದೆ.
ಎರಡನೆ ಕೋಣೆಯಲ್ಲಿ ಮುರುಕು ಸ್ಟೌವ್, ಮಸಿ ಹಿಡಿದ ಪಾತ್ರೆ ಪಗಡಿಗಳು, ಯಾರೋ ಉಂಡು ಬಿಟ್ಟ ತಟ್ಟೆ ಎಲ್ಲಾ ಸ್ವತಂತ್ರವಾಗಿ ಬಿದ್ದುಕೊಂಡಿದ್ದವು. ಬಹುಶಃ ಅಡುಗೆ ಕೋಣೆಯಿರಬೇಕು.
ನೋಡು ನೋಡುತ್ತಿದ್ದಂತೆಯೇ ಒಳಕೋಣೆಯೊಳಗೆ ಬಂದೆವು. ಅದೊಂದು ಕೂರುವುದಕ್ಕೆ ಕುರ್ಚಿಯೇ ಇಲ್ಲದ ಖಾಲಿ ಕೋಣೆ.. ಥೇಟ್ ಬಿಳಿ ಹಾಳೆಯಂತೆ. ಒಂದು ಭಾಗದಲ್ಲಿ ಗೋಡೆಯಲ್ಲಿ ಅಂಟಿಕೊಂಡಿರುವ ಕಪಾಟು. ಆ ಗೋಡೆ ಕಪಾಟಿಗೆ ಬೀಗ ಜಡಿಯಲಾಗಿತ್ತು. ಕುತೂಹಲದಿಂದ ಅದನ್ನೇ ದಿಟ್ಟಿಸತೊಡಗಿದೆ.
‘ಇದೇ ನನ್ನ ಲೈಬ್ರರಿ’ ಗೋಡೆ ಕಪಾಟಿನತ್ತ ಕೈ ತೋರಿಸಿ ಕಥೆಗಾರ ಹೇಳಿದ. ಬಳಿಕ ತನ್ನ ಪ್ಯಾಂಟಿನ ಕಿಸೆಯಿಂದ ತಡಕಾಡಿ ಸಣ್ಣ ಕೀಲಿ ಕೈಯೊಂದನ್ನು ಹೊರತೆಗೆದು ನನ್ನ ಕೈಯೊಳಗಿಟ್ಟ. ‘ನಿಧಾನಕ್ಕೆ ನೋಡಿ ಬಳಿಕ ಬನ್ನಿ’ ಎಂದವನೇ ಹೊರ ನಡೆದ.
ಸಣ್ಣ ಕೀಲಿ ಕೈಯೊಂದು ಮಾಂತ್ರಿಕನೊಬ್ಬನ ಮಂತ್ರದಂಡದಂತೆ ನನ್ನ ಕೈಯಲ್ಲಿತ್ತು. ಅದರ ಆಕರ್ಷಣೆಗೆ ನನ್ನ ಕೈ ಕಂಪಿಸುತ್ತಿತ್ತು. ಮೆಲ್ಲಗೆ ಗೋಡೆ ಕಪಾಟಿನ ಬಾಗಿಲು ತೆರೆದೆ.
ನೋಡಿದರೆ ಕಕ್ಕಾಬಿಕ್ಕಿ
ಅದೊಂದು ಕಿಟಕಿಯಾಗಿತ್ತು. ಹೊರಗಡೆ ಬೆಟ್ಟ, ಗುಡ್ಡ, ಆಕಾಶ, ಮರ ಗಿಡ, ಹಕ್ಕಿ ಕೂಡ ಇತ್ತು!
ಸಯ್ಯಿದ್ ಮೌದೂದಿಯವರಲ್ಲಿ ಯಾರೋ ಕೇಳಿದರು.... "ಯಾತ್ರೆಯ ಸಂದರ್ಭ ನೀವು ಯಾವ ತರದ ಪುಸ್ತಕಗಳನ್ನು ವಾಚಿಸಲು ಇಷ್ಟಪಡುತ್ತೀರಿ ?" ಅವರುತ್ತರಿಸಿದರು.. ನಾನು ತೆರೆದಿಟ್ಟ ಜಗತ್ತನ್ನೇ ಓದುತ್ತೇನೆ,,,
ReplyDeleteನನಗೆ ಈಗೀಗ ಯಾಕೋ ಹೀಗೆ ಅನ್ನಿಸುತ್ತಿದೆ ; ನಾವು ಬರೆಯುವ ಬರಹಗಳೆಲ್ಲ ಏನೇನೋ ಮಾತಾಡುವ ಮಂದಿಯ ಮಂದೆಯ ಮುಂದೆ ನಾವೆಲ್ಲ ಬರೀ ಬಾಯಿ ಶೋಷಣೆ ಮಾಡಿಕೊಂಡಂತೆ ! ಹೇಗಿದ್ದರೂ ಗುಜರಿ ಅಂಗಡಿಗೇ 'ಬರ'
ReplyDeleteಬೇಕಲ್ಲ ! ಡಾ. ಸಿದ್ರಾಮ ಕಾರಣಿಕ, ಧಾರವಾಡ
ನಾನೂ ಕೂಡ ಆ ಟೆಲಿಫಿಲಮ್ ಅನ್ನು ವೀಕ್ಷಿಸಿದ್ದೇನೆ. ತುಂಬಾ ಚೆನ್ನಾಗಿ ಮೂಡಿಬಂದಿದೆ. ಏನೋ ಹುಡುಕಾಟದ ವೇಳೆ ಅದು ಅಚಾನಕ್ ಆಗಿ ಸಿಕ್ಕಿತ್ತು. ಟೈಮ್ ಇತ್ತು..ಹಾಗೆಯೇ ನೋಡಿದೆ
ReplyDelete