Thursday, April 21, 2011

ಹನಿ ಹನಿ ಹನಿ ಹನಿಗತೆಗಳು......


ಮಳೆ
ಮಹಡಿ ಮನೆಯ ಹುಡುಗ ಟಿ.ವಿ. ನೋಡುತ್ತಿದ್ದ. ಇದ್ದಕ್ಕಿದ್ದಂತೆಯೇ ಹೊರಗೆ, ಗಾಳಿ ಮಳೆ ಸುರಿಯ ತೊಡಗಿತು.
ಟಿ.ವಿ. ಬ್ಲರ್ರ್‌ ಆಗಿ, ಆಫ್ ಆಗಿ ಹೋಯಿತು. ಹುಡುಗ ಸಿಟ್ಟಿನಿಂದ ‘‘ಥತ್ ದರಿದ್ರ ಮಳೆ...’’ ಎಂದು ಶಪಿಸಿದ.
ಅವನ ಶಾಪದ ಫಲವೋ ಏನೋ...ಮಳೆ ನಿಂತಿತು. ಟಿ.ವಿ. ಮತ್ತೆ ಮಾತನಾಡತೊಡಗಿತು.
ಹುಡುಗ ಖುಷಿಯಿಂದ ‘ಥ್ಯಾಂಕ್ಯೂ ಗಾಡ್’ ಎಂದ.
ಮರುದಿನ ದಿನಪತ್ರಿಕೆಯ ಮೂಲೆಯಲ್ಲೊಂದು ಸಣ್ಣ ಸುದ್ದಿಯಿತ್ತು
‘‘ಮಳೆಯಿಲ್ಲದೆ ಕಂಗೆಟ್ಟ ಇಬ್ಬರು ರೈತರ ಆತ್ಮಹತ್ಯೆ’’

ತಂದೆ-ಮಗ
ಆ ಗುಡಿಸಲಿನೊಳಗೆ ಕಂಬಳಿಹೊದ್ದು ಮಲಗಿರುವ ಮಗ ತಲೆಕೆಡಿಸಿಕೊಳ್ಳುತ್ತಿದ್ದ
‘‘ನಾಳೆಯೇನಾದರೂ ಮಳೆ ಸುರಿದರೆ ಇಂಡಿಯಾ-ಪಾಕಿಸ್ತಾನ ಮ್ಯಾಚ್ ಎಕ್ಕುಟ್ಟಿ ಹೋಗುತ್ತೆ’’
ಅವನ ಪಕ್ಕದಲ್ಲೇ ಕಂಬಳಿ ಹೊದ್ದು ಮಲಗಿದ್ದ ಅವನ ವೃದ್ಧ ತಂದೆ ನಿಟ್ಟುಸಿರುಡುತ್ತಿದ್ದ
‘‘ನಾಳೆಯೇನಾದರೂ ಮಳೆ ಸುರಿಯದಿದ್ದರೆ, ಅಷ್ಟೂ ಬೆಳೆ ಸುಟ್ಟು ಬೂದಿಯಾಗುತ್ತೆ’’

ಭಾರ ಮತ್ತು ತಾಯಿ
ಇಬ್ಬರೂ ಬೆಟ್ಟವನ್ನು ಏರುತ್ತಿದ್ದರು.
ಬೆಟ್ಟದ ತುದಿಯಲ್ಲಿ ಅವರು ಸೇರಬೇಕಾದ ಪುಣ್ಯ ಸ್ಥಳವಿತ್ತು.
ಇವನು ಹೆಗಲಲ್ಲಿ ಮಹಿಳೆಯೊಬ್ಬಳನ್ನು ಹೊತ್ತುಕೊಂಡಿದ್ದ. ಆದರೂ ಸರಾಗವಾಗಿ ಬೆಟ್ಟ ಏರುತ್ತಿದ್ದ.
ಅವನೋ ಹೆಗಲಲ್ಲಿ ಯಾರೂ ಇಲ್ಲದಿದ್ದರೂ, ಬೆಟ್ಟ ಏರುವುದಕ್ಕೆ ಕಷ್ಟಪಡುತ್ತಿದ್ದ.
ಒಂದೆಡೆ ಸುಸ್ತಾಗಿ ಕುಳಿತ ಅವನು ಕೇಳಿದ ‘‘ನಿನ್ನ ಹೆಗಲಲ್ಲಿ ಭಾರವಿದ್ದರೂ ಹೇಗೆ ಅಷ್ಟು ಸರಾಗವಾಗಿ ಬೆಟ್ಟ ಏರುತ್ತಿದ್ದೀಯ?’’
ಇವನು ನಕ್ಕು ಹೇಳಿದ ‘‘ನನ್ನ ಹೆಗಲಲ್ಲಿರುವುದು ಭಾರವಲ್ಲ, ನನ್ನ ತಾಯಿ’’

ಆಸೆ
ತಾಯಿ ಸಾಯುವ ಹಂತದಲ್ಲಿದ್ದಳು.
ಏನನ್ನೋ ಹೇಳುವುದಕ್ಕಾಗಿ ತವಕಿಸುತ್ತಿದ್ದರು.
ಮಗ ತಾಯಿಯ ಕಿವಿ ಪಕ್ಕ ಬಾಗಿ ಕೇಳಿದ ‘‘ಏನಮ್ಮ ಹೇಳು...ನಿನ್ನ ಆಸೆಯೇನಾದರೂ ಇದ್ದರೆ ಹೇಳು...’’
ತಾಯಿ ಕಷ್ಟಪಟ್ಟು ತೊದಲಿದಳು ‘‘ಇನ್ನೂ ಊಟ ಮಾಡಿಲ್ಲ ನೀನು...ಹೋಗು...ಊಟ ಮಾಡಿ ಬಾ...’’ ಎಂದು ಹೇಳಿ ಕಣ್ಮುಚ್ಚಿದಳು.

ರಾಂಗ್ ನಂಬರ್
ಫೋನ್ ರಿಂಗನಿಸತೊಡಗಿತು.
ಫೋನ್ ಎತ್ತಿದೆ ‘‘ಹಲೋ...ಹೇಗಿದ್ದೀಯ?’’
ಯಾರು ಎಂದು ಕೇಳುವುದಕ್ಕೆ ಮೊದಲೇ ಆ ಕಡೆಯ ವ್ಯಕ್ತಿ ಮಾತನಾಡ ತೊಡಗಿದ.
‘‘ಇವತ್ತು ಆಸ್ಪತ್ರೆಗೆ ಅಡ್ಮಿಟ್ ಆಗ್ತಾ ಇದ್ದೇನೆ...ಹೆಚ್ಚೆಂದರೆ ಇನ್ನು ನಾಲ್ಕೈದು ದಿನ ಬದುಕಬಹುದು. ನಿನ್ನ ಜೊತೆಗೊಮ್ಮೆ ಕೊನೆಯ ಬಾರಿ ಮಾತಾಡೋಣ ಅನ್ನಿಸಿ ಫೋನ್ ಮಾಡಿದೆ. ಮುಖ್ಯವಾಗಿ ನಿನಗೆ ಅವತ್ತು ಮಾಡಿದ ದ್ರೋಹಕ್ಕೆ ಕ್ಷಮೆ ಕೇಳಬೇಕಾಗಿದೆ. ಹೇಳು...ನನ್ನನ್ನು ಕ್ಷಮಿಸಿದ್ದೀಯ...?’’
‘ರಾಂಗ್ ನಂಬರ್’ ಎಂದು ಹೇಳಿ ಫೋನ್ ಇಡುವುದಕ್ಕೆ ಮನಸ್ಸು ಬರುತ್ತಿಲ್ಲ. ಆ ಕಡೆಯ ವ್ಯಕ್ತಿ ಉತ್ತರಕ್ಕಾಗಿ ಕಾಯುತ್ತಿದ್ದಾನೆ.
‘‘ಕ್ಷಮಿಸಿದ್ದೇನೆ. ಎಲ್ಲವನ್ನೂ ಕ್ಷಮಿಸಿದ್ದೇನೆ.’’ ಎಂದು ಅರೆ ಕ್ಷಣ ಕಣ್ಮುಚ್ಚಿದೆ.
ಆ ಕಡೆ ಬಿಕ್ಕಿ ಬಿಕ್ಕಿ ಅಳುತ್ತಿರುವ ಧ್ವನಿ. ಫೋನ್ ಕಟ್ಟಾಯಿತು.

ಮೊಟ್ಟೆ!
ಮೊಟ್ಟೆಯೊಂದು ಕೆಳಗುರುಳಿತು. ಆದರೆ ಒಡೆಯಲಿಲ್ಲ.
‘‘ಅಬ್ಬಾ, ಪಾರಾದೆ. ಇನ್ನೊಮ್ಮೆ ಜಾಗೃತೆ ಮಾಡಬೇಕು’’ ಮೊಟ್ಟೆ ತನಗೆ ತಾನೆ ಹೇಳಿತು.
ಎರಡನೆ ಬಾರಿ ಉರುಳಿತು. ಆಗಲೂ ಒಡೆಯಲಿಲ್ಲ.
ಮೊಟ್ಟೆ ಒಮ್ಮೆಲೆ ಬೀಗಿತು. ‘ಅರೇ, ನಾನು ಸುಮ್ಮಗೆ ಹೆದರಿದ್ದೆ. ಬಿದ್ದರೆ ಒಡೆಯುವಷ್ಟು ದುರ್ಬಲ ನಾನಲ್ಲ. ನಾನು ಬಲಿಷ್ಠ’’ ಎನ್ನುತ್ತಾ ಮೊಟ್ಟೆ ಬೇಕೆಂದೇ ಮತ್ತೊಮ್ಮೆ ಉರುಳಿತು.
ಈಗ ಮೊಟ್ಟೆ ಒಡೆದು ಹೋಯಿತು.

ಬೆಕ್ಕು!
ವಿವಾಹವಾಯಿತು
ಅದು ಪ್ರಥಮ ರಾತ್ರಿ.
ಪತ್ನಿ ಮತ್ತು ಪತಿ ಒಂದಾಗುವ ದಿನ.
ಇಬ್ಬರು ನಾಚಿಕೊಂಡಿದ್ದರು.
ಕೋಣೆಯಲ್ಲಿ ಹೆಪ್ಪು ಗಟ್ಟಿದ ವೌನ.
ಮೊದಲು ಏನು ಮಾತನಾಡುವುದು?
ಯಾರು ಮಾತನಾಡುವುದು?
ಅಷ್ಟರಲ್ಲಿ ಆ ಕೋಣೆಯಲ್ಲಿ ಬೆಕ್ಕೊಂದು ‘ಮಿಯಾಂವ್’ ಎಂದಿತು.
ಪತಿಗೆ ಬೆಕ್ಕೆಂದರೆ ಅಲರ್ಜಿ, ಅಸಹ್ಯ.
ತಕ್ಷಣ ತಲೆ ಎತ್ತಿ ‘ಅರೆ ಬೆಕ್ಕು’ ಎಂದ ಪತಿ.
ಪತ್ನಿ ನಾಚಿ ಹೇಳಿದಳು ‘‘ಹೌದು, ನಾನು ಸಾಕಿದ ಬೆಕ್ಕು...’’
‘‘ಓಹ್...ತುಂಬಾ ಮುದ್ದಾದ ಬೆಕ್ಕು’’ ಪತಿ ಎಂದ.
ದಾಂಪತ್ಯ ಮಾತನಾಡುವುದಕ್ಕೆ ಶುರು ಹಚ್ಚಿತು.

4 comments:

  1. ತುಂಬಾ ಅರ್ಥಪೂರ್ಣವಾಗಿವೆ ಸರ್.

    ReplyDelete
  2. ತುಂಬಾ ಚೆನ್ನಾಗಿದೆ.. ತಾಯಿಯ ಆಸೆ, ಕಣ್ಣು ತುಂಬಿ ಬರುವ ಹಾಗಿದೆ

    ReplyDelete
  3. ಅಧ್ಭುತವಾದ ಕಥೆಗಳು!

    ReplyDelete
  4. ಧನ್ಯವಾದಗಳು ಗೆಳೆಯರೇ...

    ReplyDelete