
ನಿನಗಾಗಿ ಸಲ್ಲಿಸಿದ ನನ್ನ ಪ್ರಾರ್ಥನೆ
ರಕ್ತದಲ್ಲಿ ಅದ್ದಿ ತೆಗೆದ ಉದ್ಗಾರದಂತಿದೆ
ಯಾರದೋ ಕಣ್ಣ ಹನಿಗಳನ್ನು
ಜಪಮಣಿಗಳಂತೆ ಎಣಿಸುತಿರುವೆ
ನಿನಗೆ ತಲೆ ಬಾಗಿ ಹೊರ ಬಂದ ನನ್ನೊಳಗೆ
ಒಂಟಿ ಹೆಣ್ಣೊಬ್ಬಳನ್ನು
ಸಾವಿರ ಸಹಭಾಗಿಗಳೊಂದಿಗೆ
ತಿಂದು ಮುಗಿಸಿದ ನರಭಕ್ಷಕನ ತೇಗು...
ವಿಗ್ರಹಗಳನ್ನು ಕೆತ್ತಿದ ಆಯುಧಗಳು
ಮಿನಾರಗಳನ್ನು ನಿಲ್ಲಿಸಿದ
ಹಾರೆ ಗುದ್ದಲಿಗಳು
ಧರ್ಮದ ಬಾಗಿಲಲ್ಲಿ ನಿಂತು
ಪಹರೆ ಕಾಯುತ್ತಿವೆ
ಧರ್ಮವೆನ್ನುವ ಕಳಂಕ
ಕಿತ್ತು ತೆಗೆದಂತೆಯೇ
ನನ್ನನ್ನು ಚರ್ಮದಂತೆ
ಅಂಟಿಕೊಳ್ಳುತ್ತಿದೆ
ಹೆಸರಿಲ್ಲದೆ ಬಾಳಬಹುದೆಂಬ
ಕನಸು ಕಂಡಿದ್ದ
ನನ್ನ ಮಗು ಮನಸ್ಸು
ಹೆಸರಿನ
ಶಿಲುಬೆ ಹೊತ್ತು ತಿರುಗುತ್ತಿದೆ
ದೇವರೇ...ಇನ್ನು ಮುಂದೆ
ಹೆಸರಿರುವ ಎಲ್ಲ ತಾಯಂದಿರು ಬಂಜೆಯರಾಗಲಿ
ಕೊಡುವುದಾದರೆ
ಕಸದ ತೊಟ್ಟಿಗಳಿಗೆ, ಗಟಾರಗಳಿಗೆ, ಬಸ್‌ನಿಲ್ದಾಣಗಳಿಗೆ
ಹೆರಿಗೆ ಬೇನೆ ಕೊಡು
ಧರ್ಮದ ಕಳಂಕವಿಲ್ಲದ
ಒಂದು ಮಗು
ಹೆಸರಿನ ಹಂಗಿಲ್ಲದೆ ಬಾಳಲಿ
ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಬರೆದ ಕವಿತೆಯಿದು
Stirring poem, absolutely hard hitting.
ReplyDeletechennagide...
ReplyDelete