ದೊಡ್ಡ ಮರ! ಆಶ್ರಮದ ಆವರಣದಲ್ಲಿದ ಒಂದು ದೊಡ್ಡ ಮರ...ಗಾಳಿಗೆ ಉರುಳಿ ಬಿತ್ತು. ಅದು ಬೀಳುವಾಗ ಸುತ್ತಮುತ್ತಲಿನ ಸಣ್ಣ ಪುಟ್ಟ ಮರಗಿಡಗಳೂ ಮುರಿದು ಬಿದ್ದವು. ಸಂತ ಅದನ್ನು ತೋರಿಸಿ ಶಿಷ್ಯರಿಗೆ ಹೇಳಿದ ‘‘ನನ್ನಿಂದ ದೂರ ನಿಲ್ಲಿ ಎಂದು ಯಾವತ್ತೂ ನಿಮಗೆ ಯಾಕೆ ಎಚ್ಚರಿಸುತ್ತಿದ್ದೆ ಎನ್ನುವುದು ಈಗಲಾದರೂತಿಳಿಯಿತೆ?’’ ಜ್ಞಾನ ಒಬ್ಬ ಶಿಷ್ಯ ತನ್ನ ತಿಳುವಳಿಕೆಯ ಕುರಿತಂತೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ತಿರುಗುತ್ತಿದ್ದ. ಒಂದು ದಿನ ಸಂತ ಅವನನ್ನು ಕರೆದು ಕೇಳಿದ ‘‘ಬೆಳಕನ್ನು ತೋರಿಸು...ಎಲ್ಲಿದೆ....?’’ ‘‘ಎಲ್ಲೆಲ್ಲೂ ಬೆಳಕಿದೆ...’’ ಶಿಷ್ಯ ವಿವರಿಸುವ ಪ್ರಯತ್ನ ಮಾಡಿದ. ‘‘ಬೆಳಕೆಲ್ಲಿ ಕಾಣುತ್ತಿದೆ? ಬೆಳಕಿನ ಮೂಲಕ ಮರ, ಗಿಡ, ಮನೆಗಳನ್ನು ಕಾಣುತ್ತಿದ್ದೇವೆಯೇ ಹೊರತು...ಬೆಳಕೆಲ್ಲಿ ಕಾಣುತ್ತಿದೆ?’’ ಸಂತ ಕೇಳಿದ. ಶಿಷ್ಯರು ವೌನವಾದ. ಸಂತ ಹೇಳಿದ ‘‘ನಮ್ಮ ಜ್ಞಾನ ಬೆಳಕಿನಂತೆ ಉಳಿದವುಗಳನ್ನು ಕಾಣಿಸಬೇಕೇ ಹೊರತು, ತನ್ನನ್ನು ತಾನು ಕಾಣಿಸಬಾರದು’’
ಊರು ಆತನೊಬ್ಬ ಫಕೀರ. ಹೀಗೆ ನಡೆಯುತ್ತಾ ಒಂದು ಊರನ್ನು ತಲುಪಿದ. ಅಲ್ಲಿಯ ಜನರು ಕೇಳಿದರು‘‘ನಿನ್ನ ಊರು ಯಾವುದು?’’ ಫಕೀರ ಹೇಳಿದ ‘‘ಅದನ್ನು ಹುಡುಕುತ್ತ ನಡೆಯುತ್ತಿದ್ದೇನೆ...’’ ಎಂದವನೇ ಮುಂದಕ್ಕೆ ಹೆಜ್ಜೆ ಹಾಕಿದ.
ಮನೆ ‘‘ಗುರುಗಳೇ ಶಿಕ್ಷಣ ಎಂದರೇನು?’’ ‘‘ಅದೊಂದು ಪಯಣ’’ ‘‘ಅದು ನಿಲ್ಲುವುದು ಯಾವಾಗ?’’ ‘‘ನಾವು ನಮ್ಮ ಮನೆಯನ್ನು ಕಂಡುಕೊಂಡಾಗ. ಆದರೆ ದುರದೃಷ್ಟವಶಾತ್ ಅಂತಹದೊಂದು ಮನೆಯಿರುವುದು ನನ್ನ ಗುರುಗಳಿಗಾಗಲಿ, ನನಗಾಗಲಿ ಈವರೆಗೆ ತಿಳಿದು ಬಂದಿಲ್ಲ’’
ಹುಡುಕಾಟ ಒಬ್ಬ ದೇವರನ್ನು ಹುಡುಕುತ್ತಾ ಸಂತನ ಬಳಿ ಬಂದ. ಕೇಳಿದ ‘‘ಗುರುಗಳೇ ನಾನು ದೇವರನ್ನು ಹುಡುಕುತ್ತಿದ್ದೇನೆ...ನನಗೆ ದೇವರನ್ನು ಕಾಣಿಸಬಹುದೇ?’’ಸಂತ ನಕ್ಕು ಆತನನ್ನು ಆಶ್ರಮದ ಕೆರೆಯ ಬಳಿ ಕೊಂಡೊಯ್ದ. ಕೈ ತೋರಿಸಿ ಕೇಳಿದ ‘‘ಆ ಕೆರೆಯಲ್ಲಿರುವ ಮೀನು ಏನನ್ನು ಹುಡುಕುತ್ತಿವೆ ಗೊತ್ತೆ?’’ಆತ ಪ್ರಶ್ನಾರ್ಥಕವಾಗಿ ನೋಡಿದ. ಸಂತ ಹೇಳಿದ ‘‘ಆ ಮೀನುಗಳು ನೀರೆಲ್ಲಿದೆ ಎನ್ನುವುದನ್ನು ಹುಡುಕುತ್ತಿವೆ’’
ನೆರಳು ರಣ ಬಿಸಿಲು. ಎಲ್ಲರೂ ಆಶ್ರಮದ ಅಂಗಳದಲ್ಲಿರುವ ಮರದಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇದ್ದಕ್ಕಿದ್ದಂತೆಯೇ ಶಿಷ್ಯನೊಬ್ಬ ಕೇಳಿದ ‘‘ಗುರುಗಳೇ, ನೆರಳೇಕೆ ಇಷ್ಟು ತಂಪಾಗಿದೆ?’’ ಸಂತ ತಂಪಾಗಿ ಹೇಳಿದ ‘‘ಯಾಕೆಂದರೆ, ಬಿಸಿಲು ತುಂಬಾ ಬಿಸಿಯಾಗಿದೆ’’
ಆಸ್ತಿ ‘‘ಗುರುಗಳೇ...ಮನುಷ್ಯ ಕಳೆದುಕೊಳ್ಳಲೇ ಬಾರದಂತಹ ಆಸ್ತಿ ಯಾವುದು...’’ಶಿಷ್ಯ ಕೇಳಿದ. ‘‘ನಾಚಿಕೆ’’ ‘‘ನಾಚಿಕೆಯನ್ನು ಕಳೆದುಕೊಂಡ ಮನುಷ್ಯ, ಎಲ್ಲವನ್ನು ಕಳೆದುಕೊಳ್ಳುತ್ತಾ ಹೋಗುತ್ತಾನೆ’’ ಗುರುಗಳು ಹೇಳಿದರು.
ನಿನಗಾಗಿ ಸಲ್ಲಿಸಿದ ನನ್ನ ಪ್ರಾರ್ಥನೆ ರಕ್ತದಲ್ಲಿ ಅದ್ದಿ ತೆಗೆದ ಉದ್ಗಾರದಂತಿದೆ ಯಾರದೋ ಕಣ್ಣ ಹನಿಗಳನ್ನು ಜಪಮಣಿಗಳಂತೆ ಎಣಿಸುತಿರುವೆ
ನಿನಗೆ ತಲೆ ಬಾಗಿ ಹೊರ ಬಂದ ನನ್ನೊಳಗೆ ಒಂಟಿ ಹೆಣ್ಣೊಬ್ಬಳನ್ನು ಸಾವಿರ ಸಹಭಾಗಿಗಳೊಂದಿಗೆ ತಿಂದು ಮುಗಿಸಿದ ನರಭಕ್ಷಕನ ತೇಗು...
ವಿಗ್ರಹಗಳನ್ನು ಕೆತ್ತಿದ ಆಯುಧಗಳು ಮಿನಾರಗಳನ್ನು ನಿಲ್ಲಿಸಿದ ಹಾರೆ ಗುದ್ದಲಿಗಳು ಧರ್ಮದ ಬಾಗಿಲಲ್ಲಿ ನಿಂತು ಪಹರೆ ಕಾಯುತ್ತಿವೆ
ಧರ್ಮವೆನ್ನುವ ಕಳಂಕ ಕಿತ್ತು ತೆಗೆದಂತೆಯೇ ನನ್ನನ್ನು ಚರ್ಮದಂತೆ ಅಂಟಿಕೊಳ್ಳುತ್ತಿದೆ
ಹೆಸರಿಲ್ಲದೆ ಬಾಳಬಹುದೆಂಬ ಕನಸು ಕಂಡಿದ್ದ ನನ್ನ ಮಗು ಮನಸ್ಸು ಹೆಸರಿನ ಶಿಲುಬೆ ಹೊತ್ತು ತಿರುಗುತ್ತಿದೆ
ದೇವರೇ...ಇನ್ನು ಮುಂದೆ ಹೆಸರಿರುವ ಎಲ್ಲ ತಾಯಂದಿರು ಬಂಜೆಯರಾಗಲಿ ಕೊಡುವುದಾದರೆ ಕಸದ ತೊಟ್ಟಿಗಳಿಗೆ, ಗಟಾರಗಳಿಗೆ, ಬಸ್ನಿಲ್ದಾಣಗಳಿಗೆ ಹೆರಿಗೆ ಬೇನೆ ಕೊಡು ಧರ್ಮದ ಕಳಂಕವಿಲ್ಲದ ಒಂದು ಮಗು ಹೆಸರಿನ ಹಂಗಿಲ್ಲದೆ ಬಾಳಲಿ
ಮಳೆ ಮಹಡಿ ಮನೆಯ ಹುಡುಗ ಟಿ.ವಿ. ನೋಡುತ್ತಿದ್ದ. ಇದ್ದಕ್ಕಿದ್ದಂತೆಯೇ ಹೊರಗೆ, ಗಾಳಿ ಮಳೆ ಸುರಿಯ ತೊಡಗಿತು. ಟಿ.ವಿ. ಬ್ಲರ್ರ್ ಆಗಿ, ಆಫ್ ಆಗಿ ಹೋಯಿತು. ಹುಡುಗ ಸಿಟ್ಟಿನಿಂದ ‘‘ಥತ್ ದರಿದ್ರ ಮಳೆ...’’ ಎಂದು ಶಪಿಸಿದ. ಅವನ ಶಾಪದ ಫಲವೋ ಏನೋ...ಮಳೆ ನಿಂತಿತು. ಟಿ.ವಿ. ಮತ್ತೆ ಮಾತನಾಡತೊಡಗಿತು. ಹುಡುಗ ಖುಷಿಯಿಂದ ‘ಥ್ಯಾಂಕ್ಯೂ ಗಾಡ್’ ಎಂದ. ಮರುದಿನ ದಿನಪತ್ರಿಕೆಯ ಮೂಲೆಯಲ್ಲೊಂದು ಸಣ್ಣ ಸುದ್ದಿಯಿತ್ತು ‘‘ಮಳೆಯಿಲ್ಲದೆ ಕಂಗೆಟ್ಟ ಇಬ್ಬರು ರೈತರ ಆತ್ಮಹತ್ಯೆ’’
ತಂದೆ-ಮಗ ಆ ಗುಡಿಸಲಿನೊಳಗೆ ಕಂಬಳಿಹೊದ್ದು ಮಲಗಿರುವ ಮಗ ತಲೆಕೆಡಿಸಿಕೊಳ್ಳುತ್ತಿದ್ದ ‘‘ನಾಳೆಯೇನಾದರೂ ಮಳೆ ಸುರಿದರೆ ಇಂಡಿಯಾ-ಪಾಕಿಸ್ತಾನ ಮ್ಯಾಚ್ ಎಕ್ಕುಟ್ಟಿ ಹೋಗುತ್ತೆ’’ ಅವನ ಪಕ್ಕದಲ್ಲೇ ಕಂಬಳಿ ಹೊದ್ದು ಮಲಗಿದ್ದ ಅವನ ವೃದ್ಧ ತಂದೆ ನಿಟ್ಟುಸಿರುಡುತ್ತಿದ್ದ ‘‘ನಾಳೆಯೇನಾದರೂ ಮಳೆ ಸುರಿಯದಿದ್ದರೆ, ಅಷ್ಟೂ ಬೆಳೆ ಸುಟ್ಟು ಬೂದಿಯಾಗುತ್ತೆ’’
ಭಾರ ಮತ್ತು ತಾಯಿ ಇಬ್ಬರೂ ಬೆಟ್ಟವನ್ನು ಏರುತ್ತಿದ್ದರು. ಬೆಟ್ಟದ ತುದಿಯಲ್ಲಿ ಅವರು ಸೇರಬೇಕಾದ ಪುಣ್ಯ ಸ್ಥಳವಿತ್ತು. ಇವನು ಹೆಗಲಲ್ಲಿ ಮಹಿಳೆಯೊಬ್ಬಳನ್ನು ಹೊತ್ತುಕೊಂಡಿದ್ದ. ಆದರೂ ಸರಾಗವಾಗಿ ಬೆಟ್ಟ ಏರುತ್ತಿದ್ದ. ಅವನೋ ಹೆಗಲಲ್ಲಿ ಯಾರೂ ಇಲ್ಲದಿದ್ದರೂ, ಬೆಟ್ಟ ಏರುವುದಕ್ಕೆ ಕಷ್ಟಪಡುತ್ತಿದ್ದ. ಒಂದೆಡೆ ಸುಸ್ತಾಗಿ ಕುಳಿತ ಅವನು ಕೇಳಿದ ‘‘ನಿನ್ನ ಹೆಗಲಲ್ಲಿ ಭಾರವಿದ್ದರೂ ಹೇಗೆ ಅಷ್ಟು ಸರಾಗವಾಗಿ ಬೆಟ್ಟ ಏರುತ್ತಿದ್ದೀಯ?’’ ಇವನು ನಕ್ಕು ಹೇಳಿದ ‘‘ನನ್ನ ಹೆಗಲಲ್ಲಿರುವುದು ಭಾರವಲ್ಲ, ನನ್ನ ತಾಯಿ’’
ಆಸೆ ತಾಯಿ ಸಾಯುವ ಹಂತದಲ್ಲಿದ್ದಳು. ಏನನ್ನೋ ಹೇಳುವುದಕ್ಕಾಗಿ ತವಕಿಸುತ್ತಿದ್ದರು. ಮಗ ತಾಯಿಯ ಕಿವಿ ಪಕ್ಕ ಬಾಗಿ ಕೇಳಿದ ‘‘ಏನಮ್ಮ ಹೇಳು...ನಿನ್ನ ಆಸೆಯೇನಾದರೂ ಇದ್ದರೆ ಹೇಳು...’’ ತಾಯಿ ಕಷ್ಟಪಟ್ಟು ತೊದಲಿದಳು ‘‘ಇನ್ನೂ ಊಟ ಮಾಡಿಲ್ಲ ನೀನು...ಹೋಗು...ಊಟ ಮಾಡಿ ಬಾ...’’ ಎಂದು ಹೇಳಿ ಕಣ್ಮುಚ್ಚಿದಳು.
ರಾಂಗ್ ನಂಬರ್ ಫೋನ್ ರಿಂಗನಿಸತೊಡಗಿತು. ಫೋನ್ ಎತ್ತಿದೆ ‘‘ಹಲೋ...ಹೇಗಿದ್ದೀಯ?’’ ಯಾರು ಎಂದು ಕೇಳುವುದಕ್ಕೆ ಮೊದಲೇ ಆ ಕಡೆಯ ವ್ಯಕ್ತಿ ಮಾತನಾಡ ತೊಡಗಿದ. ‘‘ಇವತ್ತು ಆಸ್ಪತ್ರೆಗೆ ಅಡ್ಮಿಟ್ ಆಗ್ತಾ ಇದ್ದೇನೆ...ಹೆಚ್ಚೆಂದರೆ ಇನ್ನು ನಾಲ್ಕೈದು ದಿನ ಬದುಕಬಹುದು. ನಿನ್ನ ಜೊತೆಗೊಮ್ಮೆ ಕೊನೆಯ ಬಾರಿ ಮಾತಾಡೋಣ ಅನ್ನಿಸಿ ಫೋನ್ ಮಾಡಿದೆ. ಮುಖ್ಯವಾಗಿ ನಿನಗೆ ಅವತ್ತು ಮಾಡಿದ ದ್ರೋಹಕ್ಕೆ ಕ್ಷಮೆ ಕೇಳಬೇಕಾಗಿದೆ. ಹೇಳು...ನನ್ನನ್ನು ಕ್ಷಮಿಸಿದ್ದೀಯ...?’’ ‘ರಾಂಗ್ ನಂಬರ್’ ಎಂದು ಹೇಳಿ ಫೋನ್ ಇಡುವುದಕ್ಕೆ ಮನಸ್ಸು ಬರುತ್ತಿಲ್ಲ. ಆ ಕಡೆಯ ವ್ಯಕ್ತಿ ಉತ್ತರಕ್ಕಾಗಿ ಕಾಯುತ್ತಿದ್ದಾನೆ. ‘‘ಕ್ಷಮಿಸಿದ್ದೇನೆ. ಎಲ್ಲವನ್ನೂ ಕ್ಷಮಿಸಿದ್ದೇನೆ.’’ ಎಂದು ಅರೆ ಕ್ಷಣ ಕಣ್ಮುಚ್ಚಿದೆ. ಆ ಕಡೆ ಬಿಕ್ಕಿ ಬಿಕ್ಕಿ ಅಳುತ್ತಿರುವ ಧ್ವನಿ. ಫೋನ್ ಕಟ್ಟಾಯಿತು.
ಮೊಟ್ಟೆ! ಮೊಟ್ಟೆಯೊಂದು ಕೆಳಗುರುಳಿತು. ಆದರೆ ಒಡೆಯಲಿಲ್ಲ. ‘‘ಅಬ್ಬಾ, ಪಾರಾದೆ. ಇನ್ನೊಮ್ಮೆ ಜಾಗೃತೆ ಮಾಡಬೇಕು’’ ಮೊಟ್ಟೆ ತನಗೆ ತಾನೆ ಹೇಳಿತು. ಎರಡನೆ ಬಾರಿ ಉರುಳಿತು. ಆಗಲೂ ಒಡೆಯಲಿಲ್ಲ. ಮೊಟ್ಟೆ ಒಮ್ಮೆಲೆ ಬೀಗಿತು. ‘ಅರೇ, ನಾನು ಸುಮ್ಮಗೆ ಹೆದರಿದ್ದೆ. ಬಿದ್ದರೆ ಒಡೆಯುವಷ್ಟು ದುರ್ಬಲ ನಾನಲ್ಲ. ನಾನು ಬಲಿಷ್ಠ’’ ಎನ್ನುತ್ತಾ ಮೊಟ್ಟೆ ಬೇಕೆಂದೇ ಮತ್ತೊಮ್ಮೆ ಉರುಳಿತು. ಈಗ ಮೊಟ್ಟೆ ಒಡೆದು ಹೋಯಿತು.
ಬೆಕ್ಕು! ವಿವಾಹವಾಯಿತು ಅದು ಪ್ರಥಮ ರಾತ್ರಿ. ಪತ್ನಿ ಮತ್ತು ಪತಿ ಒಂದಾಗುವ ದಿನ. ಇಬ್ಬರು ನಾಚಿಕೊಂಡಿದ್ದರು. ಕೋಣೆಯಲ್ಲಿ ಹೆಪ್ಪು ಗಟ್ಟಿದ ವೌನ. ಮೊದಲು ಏನು ಮಾತನಾಡುವುದು? ಯಾರು ಮಾತನಾಡುವುದು? ಅಷ್ಟರಲ್ಲಿ ಆ ಕೋಣೆಯಲ್ಲಿ ಬೆಕ್ಕೊಂದು ‘ಮಿಯಾಂವ್’ ಎಂದಿತು. ಪತಿಗೆ ಬೆಕ್ಕೆಂದರೆ ಅಲರ್ಜಿ, ಅಸಹ್ಯ. ತಕ್ಷಣ ತಲೆ ಎತ್ತಿ ‘ಅರೆ ಬೆಕ್ಕು’ ಎಂದ ಪತಿ. ಪತ್ನಿ ನಾಚಿ ಹೇಳಿದಳು ‘‘ಹೌದು, ನಾನು ಸಾಕಿದ ಬೆಕ್ಕು...’’ ‘‘ಓಹ್...ತುಂಬಾ ಮುದ್ದಾದ ಬೆಕ್ಕು’’ ಪತಿ ಎಂದ. ದಾಂಪತ್ಯ ಮಾತನಾಡುವುದಕ್ಕೆ ಶುರು ಹಚ್ಚಿತು.
ಮುಂಬಯಿಯ ಕನ್ಡಡದ ಓಣಿಗಳಲ್ಲಿ ನನ್ನನ್ನು ಕೈ ಹಿಡಿದು ನಡೆಸಿದ ಸಾ. ದಯಾ ಅಥವಾ ದಯಾನಂದ ಸಾಲಿಯಾನ್ ನನಗೆ ಬರೇ ಗೆಳೆಯ ಮಾತ್ರವಲ್ಲ. ನನ್ನ ಅಣ್ಣ...ನನ್ನ ತಂದೆ...ನನ್ನ ಗುರು ಎಲ್ಲವೂ. ಒಂದು ಮರದ ನೆರಳಿನಂತೆ ಅವನ ಸ್ನೇಹ, ವಾತ್ಸಲ್ಯ ಈಗಲೂ, ಈ ಮಂಗಳೂರಿನ ಸುಡು ಬಿಸಿಲಿನಲ್ಲೂ ನನ್ನನ್ನು ತಂಪಾಗಿಟ್ಟಿದೆ. ಮುಂಬೈ ಬಿಟ್ಟು ಬಂದು 13 ವರ್ಷ ಕಳೆದಿದೆ. ಈಗಲೂ ವಾರಕ್ಕೊಮ್ಮೆಯಾದರೂ ಸಾ. ದಯಾನ ಕರೆ ಬರುತ್ತದೆ. ‘‘ಹೇಗಿದ್ದೀರಾ...ಏನಾದ್ರು ಬರೆದ್ರಾ...’’ ಎಂದು ಕೇಳುವುದನ್ನು ಒಂದು ಕರ್ತವ್ಯವೆಂಬಂತೆ ನಿಭಾಯಿಸುತ್ತಾ ಬರುತ್ತಿದ್ದಾನೆ. ಮೂರು ವರ್ಷಗಳ ಹಿಂದೆ ಸಾ. ದಯಾನ ‘ಒಸರ್’ ಎನ್ನುವ ತುಳು ನಾಟಕಕ್ಕೆ ನಾನು ಮುನ್ನುಡಿ ಬರೆದಿದ್ದೆ. ಮುನ್ನುಡಿಯ ನೆಪದಲ್ಲಿ ನಾನು ಬರೆದದ್ದು ನನ್ನ ಮತ್ತು ದಯಾನ ನಡುವಿನ ಸ್ನೇಹದ ಕುರಿತು. ಅದನ್ನು ನಿಮ್ಮೆದುರು ತೋಡಿಕೊಳ್ಳಬೇಕು ಅನ್ನಿಸಿದೆ. ಆದುದರಿಂದ ಆ ‘ಮುನ್ನುಡಿ’ಯನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಜೊತೆಗೆ ಸಾ. ದಯಾನಒಂದುಪೋಟೋವನ್ನೂಲಗತ್ತಿಸಿದ್ದೇನೆ.ಚಿತ್ರದಲ್ಲಿ ದಯಾ ಮತ್ತು ಅವರ ಬಾಳ ಸಂಗಾತಿ ನಯನ ‘ಮುದ್ದಣಮನೋರಮೆ’ ರೂಪಕದಲ್ಲಿ ನಟಿಸುತ್ತಿದ್ದಾರೆ.
ಆತ್ಮೀಯ ದಯಾ, ಏಕಾಏಕಿ ನೀನು, ನಿನ್ನ ತುಳು ನಾಟಕದ ಪ್ರತಿಯೊಂದನ್ನು ಮುಂದಿಟ್ಟು ಮುನ್ನುಡಿ ಬರೆದುಕೊಡು ಎಂದರೆ ಏನಾಗಬೇಕೋ, ಅದೇ ಆಗಿದೆ. ತುಳು ಸಾಹಿತ್ಯದಲ್ಲಿ (ಮಾತನಾಡುವುದನ್ನು ಬಿಟ್ಟು), ಜೊತೆಗೆ ನಾಟಕ ಕ್ಷೇತ್ರ(ಪ್ರೇಕ್ಷಕನಾಗಿರುವುದನ್ನು ಹೊರತು ಪಡಿಸಿ)ದಲ್ಲಿ ಏನೇನೂ ಮಾಡಿ ಗೊತ್ತಿಲ್ಲದ ನಾನೇ ಈ ಮುನ್ನುಡಿ ಬರೆಯಬೇಕೆನ್ನುವುದು ನಿನ್ನ ಆಸೆಯಾದರೆ, ಸ್ನೇಹಿತ ಎನ್ನುವ ಒಂದೇ ಒಂದು ಅರ್ಹತೆ ಮುನ್ನುಡಿ ಬರೆಯಲು ಸಾಕಾಗುತ್ತದೆಯೆಂದಾದರೆ, ನಾನದನ್ನು ಖಂಡಿತಾ ಬರೆದೇನು.
ನಾನು ಬದುಕಿದ ಐದು ವರ್ಷಗಳ ನನ್ನ ಮುಂಬೈಯಲ್ಲಿ ಮನಸ್ಸಿಗೆ ತಂಪೆನಿಸುವ ನಿನ್ನ ನಗುವೂ ಸೇರಿಕೊಂಡಿದೆ. ಇಷ್ಟು ದಿನಗಳ ಬಳಿಕವೂ ಮುಂಬೈಯ ನೆನಪುಗಳ ‘ಒಸರ್’ ಉಕ್ಕಿ ಬರುತ್ತಲೇ ಇರುವುದಕ್ಕೆ ನೀನು ತೋರಿಸಿದ ಸ್ನೇಹ, ನಿನ್ನ ಮನೆಯಲ್ಲಿ ಅಮ್ಮನ ಕೈಯಿಂದ ಉಂಡ ಕೈ ತುತ್ತು ಕೂಡ ಕಾರಣವಿರಬೇಕು. ಗಡಗುಟ್ಟುವ ರೈಲುಗಳ ಸದ್ದುಗದ್ದಲ, ಮುಖಕ್ಕೆ ರಾಚುವ ಧೂಳು, ಉಸಿರುಗಟ್ಟುವ ಜನಸಂದಣಿಯ ಮಧ್ಯೆ ನಾವು ಒಂದಿಷ್ಟು ಗೆಳೆಯರು ಬಿಡುವು ಮಾಡಿಕೊಂಡು ಕರ್ನಾಟಕ ಸಂಘದಲ್ಲಿ ಕೂತು ನಾಟಕ ನೋಡಿದ್ದು, ನಾಟಕ ಆಡಿದ್ದು, ‘ಗಂಗಾವಿಹಾರ್’ ಹೊಟೇಲ್ನ ಮೂಲೆಯೊಂದನ್ನು ಆರಿಸಿ, ಕಟ್ಟಿಂಗ್ ಚಹಾ ಬರುವವರೆಗೆ ನಮ್ಮ ನಮ್ಮ ಕವಿತೆಗಳನ್ನು ಬಿಡಿಸಿ ವಾಚಿಸುತ್ತಾ, ವಾಹ್...ವಾಹ್ ಎಂದು ಒಬ್ಬರ ಬೆನ್ನನ್ನು ಇನ್ನೊಬ್ಬರು ತಟ್ಟಿದ್ದು, ಮುಂಬೈ ಚುಕ್ಕಿ ಸಂಕುಲ ಎಂಬೊಂದು ಸಂಘಟನೆ ಕಟ್ಟಿ, ತಿಂಗಳಿಗೆ ಒಂದಿಷ್ಟು ದುಡ್ಡನ್ನು ಅದಕ್ಕೆ ಹಾಕಿ, ಯಾವನೋ ಒಬ್ಬನ ಮಾತು ಕೇಳಿ ಆತನ ಫೈನಾನ್ಸ್ನಲ್ಲಿ ಆ ಹಣವನ್ನಿಟ್ಟು ಮೋಸ ಹೋಗಿ ಪೆಚ್ಚಾಗಿ ನಕ್ಕಿದ್ದು, ಕರ್ನಾಟಕ ಸಂಘದ ಅಖಿಲ ಭಾರತ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತಿರಥ, ಮಹಾರಥರೆಲ್ಲ ತಮ್ಮ ತಮ್ಮ ತಂಡವನ್ನು ಕಟ್ಟಿ ಸ್ಪರ್ಧೆಗಿಳಿದಾಗ ನಿನ್ನ ಸಾರಥ್ಯದಲ್ಲಿ ನಾಟಕದ ಗಂಧಗಾಳಿಯಿಲ್ಲದ ನಾವೊಂದಿಷ್ಟು ಗೆಳೆಯರು ರಂಗಭೂಮಿಯೇರಿ, ಸ್ಪರ್ಧೆಗಿಳಿದು ತೃತೀಯ ಬಹುಮಾನ ಪಡೆದು ರಂಗನಟರೆನಿಸಿ ಕಣ್ಣು ಮಿಟುಕಿಸಿದ್ದು...
ದಯಾ, ಇವುಗಳನ್ನೆಲ್ಲ ಬರೆಯದೆ ನಿನ್ನ ಒಸರ್ ನಾಟಕಕ್ಕೆ ಬರೆಯುವ ನನ್ನ ಮುನ್ನುಡಿ ಪೂರ್ತಿಯಾಗುವುದಿಲ್ಲ. ಈ ನಾಟಕದ ಕೊನೆಯಲ್ಲಿ ಪಾತ್ರವೊಂದು ಹೇಳುವಂತೆ ‘‘ನರಮಾನಿ ಪ್ರತಿ ಒರಿಲಾ ಒಂಜತ್ತ್ ಒಂಜಿ ವಿದಟ್ಟ್ ಒಸರಿಜ್ಜಾಂದಿ ಪೊಟ್ಟುಗ್ಗೆಲ್ ಆದುಪ್ಪುವೆರ್. ಐಕ್ ಒಸರ್ ಕೊರ್ಪಿನ ಶಕ್ತಿ ನಮ್ಮುಲಾಯಿಡುಂಡು ಪನ್ಪಿ ಪಾತೆರ ನಂಕ್ ಕೈ ಮೀರ್ದ್ ಪೋಯಿ ಬೊಕ್ಕನೆ ಗೊತ್ತಾಪಿನಿ’’(ಪ್ರತಿಯೊಬ್ಬ ಮನುಷ್ಯನೂ ಒಂದಲ್ಲ ಒಂದು ವಿಧದಲ್ಲಿ ಒಸರಿಲ್ಲದ ಪಾಳುಬಾವಿಯೇ ಆಗಿರುತ್ತಾನೆ. ಅದಕ್ಕೆ ಒಸರ್ ಕೊಡುವ ಶಕ್ತಿ ನಮ್ಮಿಳಗೆಯೇ ಇದೆ ಎನ್ನುವ ಸಂಗತಿ ನಮಗರಿವಾಗುವುದು ಕೈ ಮೀರಿದ ಬಳಿಕವಷ್ಟೇ). ಮುಂಬೈಯಲ್ಲಿದ್ದಷ್ಟು ದಿನ ನನ್ನ ಜೀವ ದ್ರವ ಬತ್ತಿ ಹೋಗದಂತೆ ನೀವೆಲ್ಲ ಜೊತೆಗಿದ್ದಿರಿ. ಎಂಥವರ ಜೀವ ಚೈತನ್ಯವನ್ನೂ ಹೀರಿ ತೆಗೆದು ಪಾಳುಬಾವಿಯಾಗಿಸಬಲ್ಲ ಮುಂಬೈ ಶಹರದಲ್ಲಿ, ಅದೆಷ್ಟೋ ಸಮಯದಿಂದ ಇರುವ ನೀವೆಲ್ಲ, ನಿಮ್ಮ ನಿಮ್ಮ ಜೀವದ್ರವವನ್ನು ಉಳಿಸಿಕೊಂಡು ಬದುಕುತ್ತಿರುವ ರೀತಿ, ಒಳಗೊಳಗೆ ಒಣಗಿಹೋಗುತ್ತಿರುವ ಈ ಮಂಗಳೂರೆಂಬ ಊರಿನಲ್ಲಿ ಬದುಕುತ್ತಿರುವ ನನಗೆ ನಿಜಕ್ಕೂ ಸ್ಫೂರ್ತಿ.
‘ಜಾತ್ರೆಯ ಮರುದಿನ’ ನಿನ್ನ ಮೊದಲ ಕವನ ಸಂಕಲನವಾದರೂ, ಈಗಾಗಲೇ ಹಲವು ಕತೆಗಳನ್ನು ನೀನು ಬರೆದಿದ್ದರೂ ನಿನ್ನ ನಿಜವಾದ ಕ್ಷೇತ್ರ ರಂಗಭೂಮಿಯೇ. ನೀನು ಯಾವುದೋ ದೊಡ್ಡ ನಾಟಕ ಸಂಸ್ಥೆಗಳಲ್ಲಿ ತರಬೇತು ಪಡೆದವನಲ್ಲದಿರಬಹುದು. ಖ್ಯಾತ ನಿರ್ದೇಶಕರ ಗರಡಿಯಲ್ಲಿ ಪಳಗಿದವನೂ ಅಲ್ಲದಿರಬಹುದು. ಆದರೆ ರೈಲಿನ ಓಟದ ಲಯದಿಂದ ನಾಟಕದ ನಡೆಯನ್ನು, ಕಾರ್ಖಾನೆಗಳ ಶಿಳ್ಳೆಯಿಂದ ಸಂಗೀತವನ್ನೂ, ಧಾರಾವಿಯ ಗಲ್ಲಿಗಳಿಂದ ಬದುಕನ್ನು ಗ್ರಹಿಸಿಕೊಂಡವನು. ಮುಂಬೈಯ ರಾತ್ರಿ ಶಾಲೆಗಳ ಪ್ರಾರ್ಥನೆಗಳು ನಿನಗೆ ಬಾಯಿಪಾಠವಿದೆ. ರಾತ್ರಿ ಶಾಲೆಯಿಂದ ಹೊರಬಂದ ನೂರಾರು ನಕ್ಷತ್ರಗಳೇ ನಿನ್ನ ಮುಂಬೈಯ ಸಂಗಾತಿಗಳು. ಒಬ್ಬ ಕತೆಗಾರನಾಗಲು, ಕವಿಯಾಗಲು, ನಾಟಕಗಾರನಾಗಲು ಇದಕ್ಕಿಂತ ಆಚೆ ಇನ್ನೇನು ಬೇಕು? ಅಖಿಲ ಭಾರತ ಮಟ್ಟದ ನಾಟಕ ಸ್ಪರ್ಧೆಯೊಂದಕ್ಕೆ ನೀನು ನಾಟಕ ಮಾಡಲೆಂದು ‘ಗರ್ಭ’ವನ್ನು ಬರೆದು ಸಂಘಟಕರ ಕೈಯಲ್ಲಿಟ್ಟಾಗ, ಅಲ್ಲಿರುವ ನಾಟಕ ನಿರ್ದೇಶಕರೊಬ್ಬರು ‘ಈ ನಾಟಕದಲ್ಲಿ ರಂಗಚಲನೆಗೆ ಅವಕಾಶವೇ ಇಲ್ಲ’ ಎಂದು ಘೋಷಿಸಿ, ಹಸ್ತಪ್ರತಿಯನ್ನು ಕಸದ ಬುಟ್ಟಿಗೆ ಹಾಕಲು ಹೊರಟಾಗ ನೀನು ಒಂದು ರೀತಿ ಹಟದಲ್ಲಿಯೇ ಅವಕಾಶ ಗಿಟ್ಟಿಸಿಕೊಂಡೆ. ಬೇಕಾದರೆ ಒಳ್ಳೆಯ ಕಲಾವಿದರನ್ನು ಹಾಕಿ ಆ ನಾಟಕವನ್ನು ನೀನು ನಿರ್ದೇಶಿಸಬಹುದಿತ್ತು. ಆದರೆ ನಾಟಕದ ಗಂಧಗಾಳಿಯಿಲ್ಲದ ನನ್ನಂತಹ ಕೆಲವು ಪೆದ್ದುಗಳನ್ನು ರಂಗಭೂಮಿ ಹತ್ತಿಸಿದೆ. ‘ಗರ್ಭ’ ನಾಟಕ ನಿರ್ದೇಶಕರು ಹೇಳಿದಂತೆ ಸಂಭಾಷಣೆಯಲ್ಲಿ ಆರಂಭವಾಗಿ ಸಂಭಾಷಣೆಯಲ್ಲಿಯೇ ಮುಗಿಯುವ ನಾಟಕವಾಗಿತ್ತು. ಹಲವು ಚೂರುಗಳನ್ನು ಕೊಲಾಜ್ ತರ ಅಂಟಿಸಿ ನಾಟಕ ಮಾಡಿದ್ದೆ. ಎಲ್ಲ ತರ್ಕಗಳನ್ನು ಮೀರಿದ್ದು ಅದು. ಆದರೆ ನಿನ್ನ ಕೈಯಲ್ಲಿ ಅರಳಿದ ಆ ನಾಟಕ ಹೇಗೆ ಚಲನೆಯನ್ನು ಪಡೆಯಿತು ನೋಡು. ಸುಮಾರು 30ಕ್ಕೂ ಅಧಿಕ ನಾಟಕಗಳಲ್ಲಿ ನಿನ್ನ ‘ಗರ್ಭ’ ತೃತೀಯ ಬಹುಮಾನ ಪಡೆಯಿತು. ಅದೂ ಬಹುಮಾನ ಪಡೆದ ಮುಂಬೈಯ ಏಕೈಕ ನಾಟಕ. ಸಂಗೀತ, ಬೆಳಕಿಗೂ ವಿಶೇಷ ಬಹುಮಾನ.
ನಾನು ಮುಂಬೈಗೆ ಬರುವ ಮೊದಲೇ ನಿನ್ನ ‘ನಕ್ಷತ್ರಗಳನ್ನು ಹಿಡಿಯುವವರು’ ನಾಟಕ ಪ್ರದರ್ಶನಗೊಂಡಿತ್ತು. ಆ ಬಳಿಕ ಹಲವು ಸಂಗೀತ ರೂಪಕಗಳು, ಅನಂತರ ಗರ್ಭ, ತುಳುನಾಟಕಗಳಾದ ಉಬರ್, ಒಸರ್ ಹೀಗೆ...ನೀನೇ ಬರೆದು, ನೀನೇ ನಿರ್ದೇಶಿಸಿ ಮುಂಬೈ ಕನ್ನಡಿಗರ ಮುಂದೆ ಪ್ರದರ್ಶನಕ್ಕಿಟ್ಟೆ. ಅದು ಯಾವ ಧೈರ್ಯವೋ, ಸ್ನೇಹಿತರನ್ನೆಲ್ಲ ನಿನ್ನ ನಾಟಕದ ಪಾತ್ರಧಾರಿಗಳನ್ನಾಗಿ ಮಾಡಿದೆ. ‘‘ದಯಾ ಒಂದಿಷ್ಟು ರಿಹರ್ಸಲ್ ಆದ್ರೂ ಸರಿ ಮಾಡ್ಸೂ...’’ ಎಂದು ಎಚ್ಚರಿಸಿದರೆ ತಣ್ಣಗೆ ನಗುತ್ತಿದ್ದೆ. ನಾಟಕದ ದಿನ ಮಾತ್ರ ಒದ್ದಾಡುತ್ತಿದ್ದೆ. ‘ತಲೆನೋವೂರಿ...’ ಎಂದು ನಿನ್ನ ಸೋಡಾ ಗ್ಲಾಸನ್ನು ಒಮ್ಮೆ ಕಣ್ಣಿಂದ ತೆಗೆದು ಉಜ್ಜಿ, ಹಣೆಯನ್ನೊಮ್ಮೆ ಒತ್ತಿ ಹಿಡಿಯುತ್ತಿದ್ದೆ. ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ ನನಗೆ.
ನಿನ್ನ ಎಲ್ಲ ಅಪ್ರಕಟಿತ ನಾಟಕಗಳನ್ನೂ ನಾನು ಓದಿದ್ದೇನೆ. ಅದರಲ್ಲಿ ಬಾಲಿಶತನವನ್ನು, ಮುಗ್ಧತೆಯನ್ನು, ಪ್ರಾಮಾಣಿಕತೆಯನ್ನು, ಓದುಗನಾಗಿ, ಜೊತೆಗೆ ಪ್ರೇಕ್ಷಕನಾಗಿ ಗುರುತಿಸಿದ್ದೇನೆ. ನಿನ್ನ ನಾಟಕದ ಪಾತ್ರಗಳು ಕತೆಗೆ ತಕ್ಕಂತೆಯೇ ಮಾತನಾಡಬೇಕೆಂದಿಲ್ಲ. ಅದು ತೋಚಿದಾಗ ತೋಚಿದಂತೆ ಮಾತನಾಡುವವುಗಳು. ಅದಕ್ಕೆ ಯಾವ ರಂಗಭೂಮಿಯ, ಕಥೆಯ ನೈಯ್ಗೆಯ ಹಂಗಿಲ್ಲ. ಗಂಭೀರವಾಗಿ ಬದುಕಿನ ಬಗ್ಗೆ ಚರ್ಚಿಸುತ್ತಿರುವ ಪಾತ್ರಗಳು ಏಕಾಏಕಿ ಬಾಲ್ಯವನ್ನು ನೆನೆದು ಅಂಬೆಗಾಲಿಟ್ಟು ನಡೆಯತೊಡಗುತ್ತವೆ. ‘ಗೋರಿ ಗೊಬ್ಬುಗನಾ?’ ಎಂದು ಗೋರಿ ಆಟಕ್ಕೆ ಇಳಿಯುತ್ತವೆ. ‘‘ಮದಿಮೆದ ಗೊಬ್ಬು ಗೊಬ್ಬುಗನಾ?’’ ಎಂದು ಕೇಳಿ ಮದುವೆಯ ಆಟ ಆಡುತ್ತವೆ. ಆದರೆ ಆಟ ಮತ್ತು ಬದುಕು ನಾಟಕದ ಯಾವುದೋ ಒಂದು ಎಳೆಯಲ್ಲಿ ಸಂದಿಸುತ್ತವೆ. ನೀನು ನಿನ್ನ ನಾಟಕಕ್ಕೆ ಆಯ್ಕೆ ಮಾಡಿಕೊಳ್ಳುವ ವಸ್ತುವೂ ಅಂತಹದೇ. ಅದನ್ನು ನಾಟಕ ಮಾಡುವುದಾದರೂ ಹೇಗೆ ಎಂದು ನಿರ್ದೇಶಕನೊಬ್ಬ ತಲೆಕೆಡಿಸಿಕೊಳ್ಳಬೇಕು. ಗರ್ಭ ನಾಟಕ ನಾಲ್ಕು ಪಾತ್ರಗಳ ಒಟ್ಟಾರೆ ಕನವರಿಕೆಗಳು ಅಷ್ಟೆ. ‘ಉಬರ್’ ತುಳು ನಾಟಕವಂತೂ ಒಂದು ಹೆಣ್ಣಿನ ದುರಂತವನ್ನು ವಸ್ತು ಮಾಡಿಕೊಂಡಿದೆ. ಲೈಂಗಿಕವಾಗಿ ಹತಾಶಳಾದ ಹೆಣ್ಣಿನ ಕತೆ ಅದು.ಈ ನಾಟಕವನ್ನು ನೋಡಿ ಹಿರಿಯ ನಟರೊಬ್ಬರು ಇನ್ನೊಂದು ತುಂಬಿದ ಸಭೆಯಲ್ಲಿ ಶ್ಲಾಘಿಸಿದ್ದರೆ, ಇನ್ನೊಬ್ಬ ಹಿರಿಯ ಕವಿಗಳು ನಾಟಕ ನೋಡಿ ‘ಇದು ಸಂಸಾರಸ್ಥರು ನೋಡುವ ನಾಟಕವಲ್ಲ’ ಎಂದು ಕಿಡಿಯಾಗಿದ್ದರು. ಆ ನಾಟಕಕ್ಕೆ ತಮ್ಮ ಸಂಸಾರವನ್ನು ಕರೆದುಕೊಂಡು ಬಂದು ಅವರು ತೀವ್ರ ಮುಜುಗರ ಅನುಭವಿಸಿದ್ದರು.
‘ಒಸರ್’ ಇಂತಹದೇ ಒಂದು ಸಂಕೀರ್ಣ ನಾಟಕ. ಮೇಲ್ನೋಟಕ್ಕೆ ರಘು ಎನ್ನುವ ಯುವಕನ ಲೈಂಗಿಕ ಶೂನ್ಯತೆಯ ಸುತ್ತ ಸುತ್ತಿದರೂ, ಮೂರು ಜೀವಗಳು ಬದುಕಲು ಬೇಕಾದ ಜೀವದ್ರವವನ್ನು ಉಳಿಸಿಕೊಳ್ಳಲು ಒದ್ದಾಡುವುದೇ ಕತೆಯ ವಸ್ತು. ಕತೆಯ ಪ್ರಧಾನ ಪಾತ್ರವಾದ ‘ಆಕೆ’ಗೆ ಕಿರಣ್ ಎನ್ನುವ ತಮ್ಮನೇ ಬದುಕಿನ ಜೀವದ್ರವ. ಕಿರಣನಿಗೂ ಅಷ್ಟೇ. ತನ್ನವರೆಂದು ಇರುವುದು ಆಕೆಯೊಬ್ಬಳೇ. ಇಬ್ಬರಿಗೂ ಒಬ್ಬರನ್ನೊಬ್ಬರು ಕಳೆದುಕೊಳ್ಳುವ ಭಯ. ಯಾಕೆಂದರೆ ಹುಟ್ಟಿನ ಮೂಲಕ ಅವರಿಬ್ಬರು ಅಕ್ಕ-ತಮ್ಮ ಎಂದು ಗುರುತಿಸಿಕೊಂಡವರಲ್ಲ. ಮುಂಬೈಯ ಶಹರದ ಒಂದು ಆಕಸ್ಮಿಕದಲ್ಲಿ ಪರಸ್ಪರ ಸಂಧಿಸಿದವರವರು. ಜೊತೆಗೆ ಇವರನ್ನು ಸುತ್ತಿಕೊಂಡಿರುವ ಇನ್ನೊಂದು ಪಾತ್ರ ರಘು. ತಾನೊಬ್ಬ ಪಾಳುಬಾವಿ, ಷಂಡ ಎಂದು ತಿಳಿದುಕೊಂಡ ರಘುವಿನಲ್ಲಿ ಮತ್ತೆ ಜೀವದ್ರವವನ್ನು ಉಕ್ಕಿಸುತ್ತೇನೆ ಎಂದು ಹೊರಡುವ ಆಕೆ, ಕೊನೆಯಲ್ಲಿ ಆತನನ್ನೇ ಕಳೆದುಕೊಳ್ಳಬೇಕಾಗುತ್ತದೆ. ಚೂರು ಚೂರಾಗಿ ಬಿದ್ದ ಘಟನೆಗಳನ್ನೆಲ್ಲ ಇಲ್ಲಿ ಕತೆಗಾರನ ಪಾತ್ರಧಾರಿ ಒಂದೆಡೆ ಸೇರಿಸಲು ಪ್ರಯತ್ನಿಸುತ್ತಾನೆ.
ದಯಾ, ನೀನು ಬಳಸಿದ ತುಳು ಭಾಷೆ ಈ ನಾಟಕದ ಹೆಗ್ಗಳಿಕೆಗಳಲ್ಲಿ ಒಂದು. ತುಳು ಮಣ್ಣಿನ ಸೊಗಡಿನೊಂದಿಗೆ ಇಲ್ಲಿನ ಸಂಭಾಷಣೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ನಾಟಕವನ್ನು ಮುನ್ನಡೆಸಲು ನೀನು ಅಲ್ಲಲ್ಲಿ ತುಳು ರೂಪಕಗಳನ್ನೇ ಬಳಸಿದ್ದಿ. ದೂರದ ಶಹರದಲ್ಲಿದ್ದರೂ, ನಿನ್ನ ಸೃಜನಶೀಲತೆಯ ತಾಯಿ ಬೇರು ದಕ್ಷಿಣ ಕನ್ನಡದ ಮಣ್ಣನ್ನೇ ಅರಸಿಹೋಗಿದೆ ಎನ್ನುವುದನ್ನು ಇದು ಹೇಳುತ್ತದೆ.
ನಿನಗೆ ನಾಟಕ ಹವ್ಯಾಸವೇ ಹೊರತು ವೃತ್ತಿಯಲ್ಲ. ಎಂದೂ ನೀನದನ್ನು ಹಮ್ಮು, ಬಿಮ್ಮು, ಪ್ರಸಿದ್ಧಿ, ಸುದ್ದಿಗಳ ಮಾಧ್ಯಮವಾಗಿ ಸ್ವೀಕರಿಸಿದವನಲ್ಲ. ಹಲವು ಗಡಿಬಿಡಿ, ಒತ್ತಡಗಳ ನಡುವೆ ಈ ನಾಟಕದ ನೆರಳಲ್ಲಿ ಒಂದಿಷ್ಟು ನಿಂತು, ವಿಶ್ರಮಿಸಿ ನಿಟ್ಟುಸಿರನ್ನು ಚೆಲ್ಲುವುದಷ್ಟೇ ಗುರಿ ಮಾಡಿಕೊಂಡವನು. ಆ ಮೂಲಕ ಬದುಕಿನ ಒಸರ್ ಬತ್ತಿ ಹೋಗದಂತೆ ನೋಡಿಕೊಳ್ಳುತ್ತಿರುವವನು. ಒಸರ್ ಅಂತಹ ಪ್ರಯತ್ನಗಳಲ್ಲಿ ಒಂದು ಎಂದು ನಾನು ತಿಳಿದುಕೊಂಡಿದ್ದೇನೆ. ನಾಟಕ ಬರೆಯುವ, ನಾಟಕ ಆಡಿಸುವ ನಿನ್ನ ಒಳಗಿನ ತುಡಿತ ಎಂದಿಗೂ ಬತ್ತದಿರಲಿ. ನಿನ್ನ ಸೃಜನಶೀಲತೆಯ ಬಾವಿ ಎಂದಿಗೂ ತುಂಬಿಕೊಂಡೇ ಇರಲಿ.
ಪ್ರಶ್ನೆ ಸಂತ ಕೇಳಿದ ‘ಏನಾದರೂ ಪ್ರಶ್ನೆಗಳಿವೆಯೆ?’’ ಶಿಷ್ಯರು ಒಟ್ಟಾಗಿ ಹೇಳಿದರು ‘‘ಇಲ್ಲ ಗುರುಗಳೇ’’ ಸಂತ ಸಿಟ್ಟಿನಿಂದ ಕೇಳಿದ ‘‘ನಿಮ್ಮಲ್ಲಿ ಪ್ರಶ್ನೆಗಳು ಹುಟ್ಟದೇ ಇರುವಷ್ಟು ಕೆಟ್ಟದಾಗಿತ್ತೆ ನನ್ನ ಉಪನ್ಯಾಸ?’’
ಮೋಕ್ಷ ‘‘ಗುರುಗಳೇ ಮನುಷ್ಯ ಮೋಕ್ಷವನ್ನು ಪಡೆಯಬೇಕಾದರೆ ಏನು ಮಾಡಬೇಕು?’’ ಶಿಷ್ಯ ಕೇಳಿದ ‘‘ಮೊದಲು ಆತ ಮನುಷ್ಯನಾಗಿ ಹುಟ್ಟಬೇಕು’’ ಸಂತ ತಣ್ಣಗೆ ಹೇಳಿದ.
ತಪ್ಪು ಆತ ಬಂದು ಸಂತನಲ್ಲಿ ಹೇಳಿದ ‘‘ಗುರುಗಳೇ...ನಾನು ಜೀವನದಲ್ಲಿ ಒಂದೇ ಒಂದು ತಪ್ಪೂ ಮಾಡಿಲ್ಲ...ನನ್ನನ್ನು ನಿಮ್ಮ ಶಿಷ್ಯನಾಗಿ ಸ್ವೀಕರಿಸುತ್ತೀರಾ?’’ ‘‘ನೀನೇಕೆ ತಪ್ಪು ಮಾಡಿಲ್ಲ?’’ ಸಂತ ಅಚ್ಚರಿಯಿಂದ ಕೇಳಿ, ಮುಂದುವರಿಸಿದ ‘‘ಹೋಗು, ತಪ್ಪು ಮಾಡಿ ಬಾ...ನಾನು ನಿನ್ನನ್ನು ತಿದ್ದುತ್ತೇನೆ’’ ಪಕ್ಕದಲ್ಲಿದ್ದ ಶಿಷ್ಯ ಕೇಳಿದ ‘‘ಗುರುಗಳೇ ಹಾಲಿನಂತಹ ಮನಸ್ಸನ್ನು ಯಾಕೆ ಕೆಡಿಸಲು ಹೊರಟಿದ್ದೀರಿ?’’ ‘‘ಹಾಲನ್ನು ಕೆಡಿಸಿದರೆ ಮಾತ್ರ ಅದರಿಂದ ಮೊಸರು, ಬೆಣ್ಣೆ, ತುಪ್ಪಗಳನ್ನು ತೆಗೆಯಲು ಸಾಧ್ಯ’’ ಸಂತ ನಕ್ಕು ಉತ್ತರಿಸಿದ.
ಹಲ್ಲಿನ ವೈದ್ಯ ಒಬ್ಬ ದೇವರನ್ನು ಒಲಿಸಲು ಘೋರ ತಪಸ್ಸು ಮಾಡ ತೊಡಗಿದ. ಹಲವು ವರ್ಷಗಳು ತಪಸ್ಸಿನಲ್ಲಿ ಕಳೆದ. ಒಂದು ದಿನ ಆತನಿಗೆ ದೇವರು ಒಲಿದ. ಪ್ರತ್ಯಕ್ಷನಾದ ದೇವರು ‘‘ಮಗು, ನಿನಗೆ ಏನು ವರ ಬೇಕು?’’ ಎಂದು ಕೇಳಿದ. ಆತನೋ ದೇವರನ್ನು ನೋಡುತ್ತಾ ಕಕ್ಕಾ ಬಿಕ್ಕಿ. ಏನನ್ನು ಕೇಳಬೇಕೆಂದೇ ಆತನಿಗೆ ತಿಳಿಯುತ್ತಿಲ್ಲ ಅದಕ್ಕಾಗಿ ಯಾವ ಸಿದ್ಧತೆ, ಆಲೋಚನೆಯನ್ನೇ ಮಾಡಿಕೊಂಡಿರಲಿಲ್ಲ. ಏನನ್ನಾದರೂ ಕೇಳಬೇಕು. ಇಲ್ಲವಾದರೆ ದೇವರು ತಕ್ಷಣ ಮಾಯವಾಗಿ ಬಿಡುತ್ತಾನೆ. ಅಷ್ಟರಲ್ಲಿ ಹಲ್ಲು ‘ಛಳ್’ ಎಂದು ನೋವು ಕೊಟ್ಟಿತು. ಅವನಿಗೆ ತನ್ನ ಹಲ್ಲು ನೋವು ನೆನಪಿಗೆ ಬಂತು. ಚಡಪಡಿಸುತ್ತಾ ಆತ ಕೇಳಿದ ‘‘ದೇವರೇ...ನನ್ನ ಹಲ್ಲು ನೋವು ವಾಸಿ ಮಾಡು’’ ದೇವರು ‘ತಥಾಸ್ತು’ ಎಂದು ನಕ್ಕು ಮಾಯವಾದ. ಈ ಕತೆಯನ್ನು ತನ್ನ ಶಿಷ್ಯರಿಗೆ ಹೇಳಿ ಮುಗಿಸಿದ ಸಂತ ನುಡಿದ ‘‘ಅನೇಕ ಸಂದರ್ಭಗಳಲ್ಲಿ ನಾವು ನಮ್ಮ ದೇವರನ್ನು ನಮಗೆ ತಿಳಿಯದೆಯೇ ಹಲ್ಲಿನ ವೈದ್ಯನ ಮಟ್ಟಕ್ಕೆ ಇಳಿಸಿ ಬಿಡುತ್ತೇವೆ’’
ಕಿವುಡ ಒಂದು ಮರ. ದಿನವೂ ಫಲ ಕೊಡುವ ಮರ. ನೆರಳು ಕೊಡುವ ಮರ. ತನ್ನ ಮಡಿಲಲ್ಲಿ ತಂಗಿದವರ ಹಣೆಯ ಬೆವರನ್ನು ಒರೆಸಿ ತಣ್ಣನೆಯ ಗಾಳಿಯಿಂದ ಲಾಲಿ ಹಾಡುವ ಮರ. ಇಂತಹ ಮರ ಒಂದು ದಿನವೂ ಮಾತನಾಡಿಲ್ಲ. ಮರಕ್ಕೆ ಜೀವವಿರುವುದು ನಿಜವಾದರೆ ಅದೇಕೆ ಮಾತನಾಡುವುದಿಲ್ಲ. ಈ ಪ್ರಶ್ನೆಯನ್ನು ಶಿಷ್ಯನೊಬ್ಬ ಸಂತನ ಮುಂದಿಟ್ಟ. ಸಂತ ನಕ್ಕು ಮರು ಪ್ರಶ್ನಿಸಿದ ‘‘ಹುಟ್ಟು ಕಿವುಡನೊಬ್ಬ ‘ಈ ಜಗತ್ತು ಯಾಕೆ ಇಷ್ಟು ವೌನವಾಗಿದೆ’ ಎಂಬ ಪ್ರಶ್ನೆಯನ್ನು ಕೇಳಿದರೆ ನಾನೇನು ಉತ್ತರ ಹೇಳಲಿ?’’
ದಾರಿ ಅವನು ದೇವರನ್ನು ತಲುಪುವ ದಾರಿಗಾಗಿ ಒದ್ದಾಡುತ್ತಿದ್ದ. ಹಲವು ಧರ್ಮಗಳನ್ನು ಸ್ವೀಕರಿಸಿದ. ದೇವನಿಗೆ ವಂಚಿಸಲಾಗದೆ ಆ ಧರ್ಮಗಳಿಂದ ಕಳಚಿಕೊಂಡ. ತನ್ನನ್ನು ಆವರಿಸಿದ ಮರ-ಗಿಡ-ಬೆಳಕು-ಗಾಳಿ-ಪರಿಮಳ-ಶಬ್ದ-ಹಸಿವು-ತಿಳಿವು ಈ ಎಲ್ಲವುಗಳನ್ನು ಪ್ರತಿ ದಿನ ಅನುಭವಿಸುತ್ತಾ, ಅದರ ಋಣಭಾರದಲ್ಲಿ ಕುಸಿದು ಹೋಗುತ್ತಿದ್ದ ಆತ. ದೇವರನ್ನು ಆರಾಧಿಸುವ ದಾರಿ ಹುಡುಕುತ್ತಾ ಹುಡುಕುತ್ತಾ ಸಂತನನ್ನು ತಲುಪಿಚದ. ಸಂತ ದೇವರನ್ನು ಒಲಿಸುವ ಶ್ಲೋಕ, ಮಂತ್ರಗಳನ್ನು, ಕ್ರಮಗಳನ್ನು ತನಗೆ ಹೇಳಿಕೊಡಬಹುದೆಂಬ ಆಸೆಯಿಂದ ಆತ ಸಂತನ ಹಿಂದೆ ಅಲೆಯ ತೊಡಗಿದ. ಸಂತ ಮಾಡುವ ಕೆಲಸಗಳಿಗೆ ಅವನು ಸಹಾಯ ಮಾಡತೊಡಗಿದ. ಗಿಡಗಳಿಗೆ ನೀರು ಸುರಿಯುವುದು, ಹಸುವಿಗೆ ಹುಲ್ಲು, ಸೊಪ್ಪು ತರುವುದು, ಚಿಕಿತ್ಸೆಗಾಗಿ ಬಂದ ರೋಗಿಗಳ ಆರೈಕೆ ಮಾಡುವುದು ಹೀಗೆ.... ಆದರೆ ಅವನು, ದೇವರಿಗಾಗಿ ಏನನ್ನೂ ಮಾಡಲಿಲ್ಲವಲ್ಲ ಎಂದು ಸದಾ ಕೊರಗುತ್ತಿದ್ದ. ಒಂದು ದಿನ ಸಂತ ಮರದ ನೆರಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅವನು ಕೇಳಿದ ‘‘ಗುರುಗಳೇ ದೇವರನ್ನು ಆರಾಧಿಸಲು ನನಗೆ ಯಾವುದಾದರೂ ಶ್ಲೋಕವನ್ನು, ದಾರಿಯನ್ನು ಹೇಳಿಕೊಡಿ....’’ ಸಂತ ಅವನನ್ನೇ ತದೇಕ ಚಿತ್ರದಿಂದ ನೋಡಿದ. ಬಳಿಕ ನಕ್ಕು ತಲೆ ಸವರಿ ಹೇಳಿದ ‘‘ನಿನ್ನ ಮುಂದಿರುವ ಈ ಕಾಲುದಾರಿ ಇದೆಯಲ್ಲ...ಅದೇ ನೀನು ದೇವರೆಡೆಗೆ ಸಾಗುವ ದಾರಿ...’’ ಆ ದಾರಿಯನ್ನು ನೋಡಿ ಆತ ಹೇಳಿದ ‘‘ಗುರುಗಳೇ...ಇದು ನಮ್ಮ ಆಶ್ರಮದ ಹಟ್ಟಿಯ ದಾರಿ...’’ ‘‘ಹೌದು...ಈ ದಾರಿಯಲ್ಲಿ ನಡೆ. ಹಟ್ಟಿಯಲ್ಲಿ ಹಸುಗಳು ಹಸಿದಿವೆ. ಅದಕ್ಕೆ ಹುಲ್ಲು ಹಾಕು’’ ಹೀಗಂದ ಸಂತ ಕಣ್ಮುಚ್ಚಿ ನಿದ್ರಿಸತೊಡಗಿದ.
ಬಡವರು! ಆತ ರೈತ. ವರ್ಷವಿಡೀ ದುಡಿದು ಭತ್ತ ಬೆಳೆಸಿದ. ಗೋಣಿ ತುಂಬಾ ಅಕ್ಕಿ ಹೊತ್ತುಕೊಂಡು ಸಂತೆಗೆ ನಡೆದ ಯಾಕೋ ಅಕ್ಕಿಗೆ ಬೆಲೆಯೇ ಇಲ್ಲ. ಮಾರಿದ. ಮನೆಗೆ ಮರಳಿದ. ‘‘ಹಸಿವಾಗುತ್ತಿದೆ, ಅನ್ನ ಬಡಿಸು’’ ಎಂದು ಪತ್ನಿಗೆ ಕೂಗಿದ. ‘‘ಮನೆಯಲ್ಲಿ ಅಕ್ಕಿ ಮುಗಿದು ದಿನಗಳಾಗಿವೆ’’ ಅವಳು ನಿಟ್ಟುಸಿರಿಟ್ಟು ನುಡಿದಳು. ಆತ ಕಾರ್ಮಿಕ. ಒಂದು ಸುಂದರ ಮನೆಯನ್ನು ಕಟ್ಟುತ್ತಿದ್ದ. ಹದಿನಾರು ಕೋಣೆಗಳ ಮನೆ. ಒಂದು ಬೃಹತ್ ವರಾಂಡ. ಎರಡು ಅಂತಸ್ತು. ಡೈನಿಂಗ್ ಹಾಲ್, ಗೆಸ್ಟ್ ರೂಂ...ಹೀಗೆ ಬೃಹತ್ ಮನೆಯಾಗಿತ್ತು. ಕೊನೆಗೂ ಕಟ್ಟಿ ಮುಗಿಸಿದ. ‘‘ಅಬ್ಬಾ! ಕೊನೆಗೂ ಮನೆ ಕಟ್ಟಿ ಮುಗಿಯಿತು’’ ಎಂದು ನಿಟ್ಟುಸಿರಿಟ್ಟ. ಕೆಲಸ ಮುಗಿದ ಬಳಿಕ, ರಾತ್ರಿ ಎಲ್ಲಿ ನಿದ್ರಿಸಲಿ ಎಂದು ನಗರದ ಬಸ್ನಿಲ್ದಾಣವನ್ನು ಹುಡುಕತೊಡಗಿದ. ಅವಳು ಆಗಷ್ಟೇ ಹದಿನೈದು ಸುಂದರ ಕುಲಾವಿಯನ್ನು ಹೆಣೆದು ಮುಗಿಸಿ, ತನ್ನ ಮನೆಯ ಯಜಮಾನಿಗೆ ತಂದುಕೊಟ್ಟಳು. ಆ ಮೇಲೆ ನೆಲ ನೋಡುತ್ತಾ ‘‘ಹಳೆಯ ಬಟ್ಟೆ ಏನಾದರೂ ಇದ್ದರೆ ಕೊಡಿ ಅಮ್ಮ. ನನ್ನ ಮಗುವಿಗೆ ಒಂದೇ ಒಂದು ಬಟ್ಟೆಯೂ ಇಲ್ಲ’’ ಎಂದು ಪಿಸುಗುಟ್ಟಿದಳು.
You are rigt! Your doubt is also right Danger awaits those who do namaz they make a show of it and back out feeding the poor and meeting their needs (Quran, Chapter Al maun)
Those hurrying towards mosque for namaz Wave out me to join them Lacking courage to go to face before god I hide my face in shame
The sight of a famished child troubles the very depth of my eye with its eagle like hurt Alas! Had just then my fill The morel eaten with no thought for the child Has polluted every drop of my blood I hang my head in shame
Is there enough water to cleans this blemish In the tank of mosque? Do have the strength to go forward Breaking the sound, the wordy images, Begging their share before the one and only god
Oh god! The truth burns before me Treading to break the prayer lines To melt them in furnace Possibly turn the cascades of fire into Ploughing the grave yard of my heart And break the stone inside me Carve the way towards hope of water Need be forge the sword against myself
yes your doubt is right, I am a jehadi Please remember, first against myself If I conquer, then against you
NAGARI BABAYYA
Yes to your suspicion
On the way to namaaz, they call me With frantic wave of their hands.
I have not the mettle to face God,
I hide my head in shame.
The eyes of a starving child
Stir the depths of my sight
Oh! I just finished my meal…
I hang my head in front of her !
The bread I have eaten
In disregard of her
Has polluted the whole of my body.
Is there water enough in the masjid pool
To wash this defilement ?
I have to belt along
Breaking down the verbal idols
That demand for partitioning
In front of the Single God.
Am I up to it ?
Truth is all ablaze before me.
I will feed the furnace, oh God, with
The words of the prayers meant for you and liquefy them.
ನನ್ನ ಸಹೋದ್ಯೋಗಿ, ಹಿರಿಯ ಕಥೆಗಾರ ಮುಹಮ್ಮದ್ ಕುಳಾಯಿ ಅವರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ನೀಡುವ ರಾಜ್ಯಮಟ್ಟದ ಅನುವಾದ ಪ್ರಶಸ್ತಿ ದೊರಕಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಜ್ಞಾನಭಾರತಿ ಆವರಣದ ಕಲಾಗ್ರಾಮದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಆ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಕನ್ನಡದ ಹಿರಿಯ ಪತ್ರಕರ್ತ ರವಿ ಬೆಳಗೆರೆಯವರು ತಮ್ಮ ‘ಚಲಂ’ ಕೃತಿಗಾಗಿ ಅನುವಾದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಸಮಾರಂಭದ ಬಳಿಕ ಕುಳಾಯಿ ಹಾಗೂ ರವಿಬೆಳಗೆರೆಯವರು ಜೊತೆಯಾಗಿ ಫೋಟೋ ತೆಗೆಸಿಕೊಂಡರು. ಆ ಫೋಟೋವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಅಂದ ಹಾಗೆ, ಕುಳಾಯಿ ಅನುವಾದಿಸಿದ್ದು ಡಿ. ಕೆ. ಚೌಟ ಅವರ ತುಳು ಕಾದಂಬರಿ ‘ಮಿತ್ತಬೈಲ್ ಯಮುನಕ್ಕ’ಳನ್ನು. ತುಳು ಯಮುನಕ್ಕನನ್ನು ಕನ್ನಡಕ್ಕೆ ತರುವುದೆಂದರೆ ಸಾಮಾನ್ಯ ಕೆಲಸವಲ್ಲ. ಅದನ್ನು ಕುಳಾಯಿ ಸಮರ್ಥವಾಗಿ ಮಾಡಿದ್ದಾರೆ. ತುಳುವಿನ ಹೆಣ್ಣು ಮಕ್ಕಳ ಕಾರುಬಾರು, ಗತ್ತು, ಗೈರತ್ತುಗಳಿಗೆ ಒಂದಿಷ್ಟು ಧಕ್ಕೆ ಬಾರದಂತೆ ಅದನ್ನು ಕನ್ನಡಕ್ಕಿಳಿಸಿದ್ದಾರೆ. ‘ಚಲಂ’ ಕುರಿತಂತೆ ನಿಮಗೆ ಇಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಮನುಷ್ಯನ ಒಳ-ಹೊರಗಿನ ಅರಾಜಕತೆಯ ವಿರುದ್ಧದ ಎರಡು ಹೋರಾಟಗಳು ಚಲಂ-ಯುಮುನಕ್ಕ ಅವರ ಪಾತ್ರಗಳ ಪ್ರಧಾನ ಗುಣಗಳಾಗಿವೆ.