Thursday, February 4, 2016

ಭಾಷೆ ಮತ್ತು ಇತರ ಕತೆಗಳು

ವಿಜ್ಞಾನಿ
‘‘ನಾನು ಖ್ಯಾತ ವಿಜ್ಞಾನಿ. ನೀವು ನನ್ನ ಹೆಸರು ಕೇಳಿರಬೇಕಲ್ಲ?’’
‘‘ಮತ್ಯಾಕೆ ಈ ಜ್ಯೋತಿಷಿಯ ಬಳಿ ಬಂದಿದ್ದೀರಿ?’’
‘‘ನಾನು ವಿಜ್ಞಾನಿಯಾಗಿದ್ದೇ ಈ ಜ್ಯೋತಿಷಿಯ ಬಲದಿಂದ...’’

ಅರಿವು

ನೆರೆ ಮನೆಯ ಹುಡುಗಿ ‘ಅಂಕಲ್’ ಎಂದದ್ದೇ ಅವನು ಬೆಚ್ಚಿ ಬಿದ್ದ.
ಕನ್ನಡಿಯಲ್ಲಿ ಮೊದಲ ಬಾರಿ ಅವನು ಮುಖದ ಸುಕ್ಕನ್ನು ಗುರುತಿಸಿದ.

ಭಾಷೆ

ಚಳಿಗಾಲದ ಸಮಯ. ಪುಟ್ಟಿ ರಂಗನ ತಿಟ್ಟುವಿಗೆ ಭೇಟಿ ನೀಡಿದ್ದಳು.
‘‘ಇಲ್ಲಿ ದೇಶ ವಿದೇಶಗಳಿಂದ ಕೊಕ್ಕರೆಗಳು ಬರುತ್ತವೆ?’’
ಅಮ್ಮ ವಿವರಿಸುತ್ತಿದ್ದಳು.
‘‘ವಿದೇಶಗಳ ಕೊಕ್ಕರೆ, ನಮ್ಮ ಕೊಕ್ಕರೆಗಳ ಜೊತೆಗೆ ಯಾವ ಭಾಷೆಯಲ್ಲಿ ಮಾತನಾಡುತ್ತವೆ?’’
ಪುಟ್ಟಿ ಅಚ್ಚರಿಯಿಂದ ಕೇಳಿದಳು. 

ದೃಷ್ಟಿ

ಬೆಳ್ಳಂಬೆಳಗ್ಗೆ ಆತ ಮನೆಯಿಂದ ಹೊರಡುವಾಗ ಮನೆಯ ಸಾಕು ಬೆಕ್ಕು ಅಡ್ಡ ಬಂತು.
ಹೋದ ಕೆಲಸವೆಲ್ಲ ಹಾಳು. ಬಾಸ್‌ನಿಂದ ಬೈಗಳು. ಬರಬೇಕಾದ ದುಡ್ಡು ಬರಲಿಲ್ಲ.
ಗೆಳೆಯರ ಜೊತೆ ವೈಷಮ್ಯ. ‘‘ಛೆ, ಆ ಬೆಕ್ಕಿನ ಮುಖ ನೋಡಿದ್ದೇ ಇಷ್ಟೆಲ್ಲ ಅನಾಹುತ. ಅದನ್ನು ಮನೆಯಿಂದ ಹೊರಹಾಕಬೇಕು’’
ಎನ್ನುವ ಸಿಟ್ಟಿನ ಜೊತೆಗೆ ಮನೆಗೆ ಮರಳಿದ.
ಗಂಡನನ್ನು ಕಂಡದ್ದೇ ಪತ್ನಿ ಹೇಳಿದಳು ‘‘ರೀ...ಬೆಳಗ್ಗೆ ಬೆಳಗ್ಗೆ ಯಾರ ಕೆಟ್ಟ ದಷ್ಟಿ ಬಿತ್ತೋ, ನೀವು ಹೋದ ಸ್ವಲ್ಪ ಹೊತ್ತಲ್ಲೇ ನಮ್ಮ ಮನೆ ಬೆಕ್ಕು ಲಾರಿ ಅಡಿಗೆ ಬಿದ್ದು ಸತ್ತು ಹೋಯಿತು’’

ಬದುಕು

‘‘ನೋಡು ನೀನು ಮನೆಗೆ ಹೋಗೋದೇ ಒಳ್ಳೆಯದು. ಹೆಚ್ಚೆಂದರೆ ನೀನು ಆರು ತಿಂಗಳು ಬದುಕಬಹುದು’’ ವೈದ್ಯರು ಅವನಿಗೆ ತಿಳಿಸಿದರು.
ಆತ ಆರು ತಿಂಗಳ ಬಳಿಕವೂ ಬದುಕಿದ. ಇದೇನಿದು ಕತೆ ಎಂದು ವೈದ್ಯರಲ್ಲಿಗೆ ವಿಚಾರಿಸಲು ಬಂದ. ಅಲ್ಲೇ ಇದ್ದ ದಾದಿ ಹೇಳಿದಳು ‘‘ಆ ವೈದ್ಯರು ತೀರಿ ಹೋಗಿ ಇಂದಿಗೆ ಆರು ತಿಂಗಳಾಯಿತು’’

ಹಬ್ಬ

ಹಳ್ಳಿಯಿಂದ ಮಗನ ನೋಡಲೆಂದು ಅಮ್ಮ ನಗರಕ್ಕೆ ಬಂದಿದ್ದಳು.
‘‘ಅಮ್ಮನನ್ನು ಫುಡ್ ಫೆಸ್ಟಿವಲ್‌ಗೆ ಕರೆದುಕೊಂಡು ಹೋಗೋಣ’’ ಮಗ ತನ್ನ ಪತ್ನಿಗೆ ಹೇಳಿದ.
‘‘ಹಾಗೆಂದರೆ ಏನಪ್ಪ?’’ ತಾಯಿ ಮಗನಲ್ಲಿ ಕೇಳಿದಳು.
‘‘ಆಹಾರದ ಹಬ್ಬ ಅಮ್ಮ. ಬಗೆ ಬಗೆಯ ಆಹಾರಗಳನ್ನು ಮಾಡಿಟ್ಟಿರುತ್ತಾರೆ ಅಮ್ಮ, ನಮಗೆ ಬೇಕಾದುದನ್ನು ತಿನ್ನಬಹುದು’’ ಮಗ ಹೇಳಿದ.
ಫುಡ್ ಫೆಸ್ಟಿವಲ್ ಮುಗಿಸಿ ಮನೆಗೆ ಬಂದ ಮಗ ಕೇಳಿದ ‘‘ಹೇಗಿತ್ತಮ್ಮ ಆಹಾರದ ಹಬ್ಬ?’’
‘‘ನಮ್ಮ ಕಾಲದಲ್ಲಿ ಹಸಿವಾದಾಗ ಆಹಾರ ಸಿಕ್ಕಿದರೆ ಅದೇ ಹಬ್ಬ. ಈಗ, ಆಹಾರವನ್ನು ಚೆಲ್ಲಾಡುವುದೇ ಹಬ್ಬ’’ ತಾಯಿ ನಿಟ್ಟುಸಿರಿಟ್ಟು ಹೇಳಿದರು.

Wednesday, January 20, 2016

ವಿನಾಯಕ ಭಟ್ಟರ ಪೂಜೆಗೊಂದು ಮಂಗಳಾರತಿ!

 ರೋಹಿತ್ ಅವರ ಸಾವನ್ನು ಅನಗತ್ಯವಾಗಿ ವಿವಾದ ಮಾಡುತ್ತಿದ್ದಾರೆ ಎಂದು, ಎರಡು ದಿನಗಳ ಹಿಂದೆ ಆರಂಭವಾಗಿರುವ ಪತ್ರಿಕೆಯೊಂದರಲ್ಲಿ ವಿನಾಯಕ ಭಟ್ಟ ಮೂರೂರು ಎಂಬ ‘ಮನುಷ್ಯ’ ಹೇಳಿಕೊಂಡಿದ್ದಾರೆ.(ಅವರ ಈ ಅಂಕಣಕ್ಕೆ ‘ಪ್ರಥಮ ಪೂಜೆ’ ಎಂಬ ಹೆಸರಿರುವುದರಿಂದ, ನನ್ನ ಈ ಬರಹಕ್ಕೆ ಮಂಗಳಾರತಿ ಎಂದು ಬರೆದುಕೊಂಡಿದ್ದೇನೆ) ಅವರ ಬರಹದ ಪ್ರಕಾರ ರೋಹಿತ್ ಸಾವಿಗಾಗಿ ಕಣ್ಣೀರು ಮಿಡಿಯುವವರು ಮತ್ತು ಅದಕ್ಕೆ ಆಕ್ರೋಶ ವ್ಯಕ್ತಪಡಿಸುವವರು ಬೆತ್ತಲಾಗಿದ್ದಾರಂತೆ. ಆ ಮೂಲಕ ತಾವು, ತಮ್ಮ ಬಳಗ ಮೈತುಂಬಾ ಬಟ್ಟೆ ತೊಟ್ಟೆಕೊಂಡಿದ್ದೇವೆ ಎಂದೂ ಘೋಷಿಸಿಕೊಂಡಿದ್ದಾರೆ. ಆದರೆ ಅವರು ಇನ್ನೊಮ್ಮೆ ಕನ್ನಡಿ ನೋಡಿಕೊಂಡು, ಬೆತ್ತಲಾಗಿದ್ದು ಯಾರು ಎನ್ನುವುದನ್ನು ಅರಿತುಕೊಳ್ಳುವುದು ಒಳಿತು. ಅವರು ರೋಹಿತ್ ಆತ್ಮಹತ್ಯೆಯನ್ನು ಸಮರ್ಥಿಸಿಕೊಂಡಿದ್ದು ಹೀಗೆ.

1. ವಿಶ್ವಾದ್ಯಂತ 40 ಸೆಕೆಂಡ್‌ಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ದೇಶದಲ್ಲಿ ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪರೀಕ್ಷೆಯ ಕಾರಣದಿಂದ ಪ್ರತಿ ವರ್ಷ 2971 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂತಹ ಆತ್ಮಹತ್ಯೆಗಳಲ್ಲಿ ಇದೂ ಒಂದು. ದಲಿತ ಎನ್ನುವ ಕಾರಣಕ್ಕಾಗಿ ಇದನ್ನು ರಾಜಕೀಯಗೊಳಿಸುವುದು ತಪ್ಪು ಎನ್ನುವುದು ಅವರ ವಾದ. 

2. ಹೈದರಾಬಾದ್ ವಿವಿ.ಯಲ್ಲಿ ಈ ಹಿಂದೆಯೂ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಇವರೆಲ್ಲ ವಿದೇಶಕ್ಕೆ ರಜೆಯ ಮೇಲೆ ಹೋಗಿದ್ದರೆ?
3. ರೋಹಿತ್ ಅವರು ಸಚಿವ ಬಂಡಾರು ಅಥವಾ ಯಾರ ಮೇಲೂ ಆತ್ಮಹತ್ಯಾ ಪತ್ರದಲ್ಲಿ ಆರೋಪ ಹೊರಿಸಿಲ್ಲ. ಹೀಗಿರುವಾಗ, ಆತ ಸಾವಿಗೆ ಸಚಿವರೇ ಹೊಣೆ ಎಂದು ಹೇಳುವುದು ಎಷ್ಟು ಸರಿ?
 4. ವೇಮುಲ ಸಿದ್ಧಾಂತದ, ಸಂಘಟನೆಯ ಚಟಕ್ಕೆ ಬಿದ್ದಿದ್ದ.
 5. ಈತ ಯಾಕೂಬ್ ಮೆಮನ್ ಗಲ್ಲಿಗೇರಿಸುವುದನ್ನು ವಿರೋಧಿಸಿದ್ದ. 

ಮೇಲಿನ ಭಟ್ಟರ ಸಮರ್ಥನೆಗಳಿಗೆ ನಾನು ಉತ್ತರಿಸುವುದು ಒಂದೇ ಕಾರಣಕ್ಕೆ. ವಿನಾಯಕ ಭಟ್ಟರ ಚಿಂತನೆ, ಮತ್ತು ಆ ಚಿಂತನೆಯೊಳಗಿರುವ ವಿಶ ಅವರ ಪ್ರಥಮ ಪೂಜೆ ಅಂಕಣಕ್ಕೆ ಪೂರಕವಾಗಿರುವಂತಹದ್ದು. ಅವರಿಂದ ಇದಕ್ಕಿಂತ ಭಿನ್ನವಾದ ಆಲೋಚನೆಗಳನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಅದನ್ನು ಓದಿದ ಬೆರಳೆಣಿಕೆಯ ಮುಗ್ಧರ ಮನಸ್ಸಿನ ಮೇಲೆ ಅದು ದುಷ್ಪರಿಣಾಮ ಬೀರಬಾರದು ಎನ್ನುವ ಕಾರಣಕ್ಕಾಗಿ ಈ ಉತ್ತರವನ್ನು ಬರೆದಿದ್ದೇನೆ.


1. ವಿಶ್ವಾದ್ಯಂತ 40 ಸೆಕೆಂಡ್‌ಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ನಿಜ. ಆದರೆ ಅವರೆಲ್ಲ ಆತ್ಮಹತ್ಯೆಗೆ ಮುನ್ನ, ವ್ಯವಸ್ಥೆಯ ವಿರುದ್ಧ ಎರಡು ವಾರಗಳ ಕಾಲ ವಿಶ್ವವಿದ್ಯಾಲಯದ ಅಥವಾ ಇನ್ನೆಲ್ಲೋ ಮುಷ್ಕರ ಹೂಡಿದವರಲ್ಲ. ತನಗೆ ಜಾತಿಯ ಕಾರಣದಿಂದ ವಿಶ್ವವಿದ್ಯಾಲಯದಲ್ಲಿ ಅನ್ಯಾಯವಾಗುತ್ತಿದೆ ಎಂದು ಹಗಲು, ರಾತ್ರಿ ವಿವಿ. ಬಯಲಲ್ಲಿ ಚಳಿ, ಬಿಸಿಲ ನಡುವೆ ನರಳಿರಲಿಲ್ಲ. ಅವರ್ಯಾರೂ, ತಮಗೆ ವಿಷ ಕೊಡಿ, ನೇಣು ಹಗ್ಗ ಕೊಡಿ ಎಂದು ಯಾರಲ್ಲೂ ಪತ್ರದ ಮುಖಾಂತರ ಯಾಚಿಸಿರಲಿಲ್ಲ. ರೋಹಿತ್‌ಗೆ ಅನ್ಯಾಯವಾಗಿರುವುದು ದಲಿತ ಎನ್ನುವ ಕಾರಣಕ್ಕಾಗಿಯೇ ಆಗಿದೆ.

2. ಹೈದರಾಬಾದ್ ವಿವಿ.ಯಲ್ಲಿ ಹಿಂದೆಯೂ 8 ಮಂದಿ ದಲಿತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಅವರೆಲ್ಲರೂ ದಲಿತರೇ ಆಗಿದ್ದರು ಎನ್ನುವ ಕಾರಣಕ್ಕಾಗಿ ಇಂದು ದೇಶಾದ್ಯಂತ ಜನರು ಭುಗಿಲೆದ್ದಿದ್ದಾರೆ. ಅದರಲ್ಲಿ ಯಾರೂ ಬ್ರಾಹ್ಮಣರು ಅಥವಾ ಮೇಲ್ಜಾತಿಯ ವಿದ್ಯಾರ್ಥಿಗಳು ಇರಲಿಲ್ಲ. ಅಂದು ಅವರದು ಒಂಟಿ ಧ್ವನಿಯಾಗಿದ್ದು. ಅದನ್ನು ಅವರು ವೈಯಕ್ತಿಕವಾಗಿ ತೆಗೆದುಕೊಂಡು ಸದ್ದುಗದ್ದಲ ಇಲ್ಲದೆ ಮೂರೂರು ಭಟ್ಟರತೆ ಯೋಚಿಸುವ ನೀಚ ಜಗತ್ತಿನಿಂದ ವಿದಾಯ ಹೇಳಿದ್ದರು. ಆದರೆ ಇಲ್ಲಿ ರೋಹಿತ್ ಕಳೆದ ಎರಡು ವರ್ಷಗಳಿಂದ ತನಗಾದ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದ. ಅವನಿಗಾದ ಅನ್ಯಾಯ ಇಡೀ ದೇಶಕ್ಕೇ ತಿಳಿದಿತ್ತು. ಮತ್ತು ಇದೀಗ ತನ್ನ ಸಾವಿನ ಮೂಲಕ ಅವನು ಹೈದರಾಬಾದ್ ವಿವಿಯಲ್ಲಿ ನಡೆಯುತ್ತಿರುವ ಜಾತಿ ಅನ್ಯಾಯವನ್ನು ವಿಶ್ವಕ್ಕೆ ಜಾಹೀರು ಪಡಿಸಿದ್ದಾನೆ. ಅವನ ಧ್ವನಿಗೆ ಧ್ವನಿ ಸೇರಿಸುವುದು ಮನುಷ್ಯರೆಲ್ಲರ ಕರ್ತವ್ಯ. ಎಂಟು ಜನ ದಲಿತರು ಜಾತೀಯತೆಯ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಾಗ ಯಾರೂ ಮಾತನಾಡಿರಲಿಲ್ಲ ಎನ್ನುವುದು ಈಗ ಮಾತನಾಡದೇ ಇರುವುದಕ್ಕೆ ಸಮರ್ಥನೆಯಾಗುತ್ತದೆಯೆ?
3. ವೇಮುಲ ಸಂಘಟನೆ, ಸಿದ್ಧಾಂತದ ಚಟಕ್ಕೆ ಬಿದ್ದಿದ್ದ. ಅದು ಚಟವಲ್ಲ, ದಲಿತರು ಇಂದು ಈ ದೇಶದಲ್ಲಿ ಉಸಿರಾಡುತ್ತಿದ್ದರೆ ಅದು ಅವರ ಸಂಘಟನೆ ಮತ್ತು ಹೋರಾಟದ ಬಲದಿಂದ ಮಾತ್ರ. ಅವನನ್ನು ಈ ದೇಶ ಮನುಷ್ಯನಂತೆ ನೋಡಲು ಕಲಿತದ್ದು, ಅವನು ಹೋರಾಟಕ್ಕೆ ಇಳಿದ ಬಳಿಕ. ಸಂಘಟನೆ ಕಟ್ಟಿದ ಬಳಿಕ. ್ಠಹೋರಾಟ, ಸಂಘಟನೆ ದುರ್ಬಲವಾದಂತೆಯೇ ದಲಿತರ ಮೇಲೆ ದೌರ್ಜನ್ಯ ಹೆಚ್ಚ ತೊಡಗುತ್ತದೆ. 
4. ಈತ ಯಾಕೂಬ್ ಮೆಮನ್ ಗಲ್ಲಿಗೇರಿಸುವುದನ್ನು ವಿರೋಧಿಸಿದ್ದ ಎನ್ನುವುದು ಭಟ್ಟರ ಮುಖ್ಯ ಆರೋಪ. ಆತ ಗಲ್ಲು ಶಿಕ್ಷೆಯನ್ನೇ ವಿರೋಧಿಸುವ ನಿಲುವನ್ನು ಹೊಂದಿದ್ದ. ಯಾಕೆಂದರೆ, ಈ ದೇಶದಲ್ಲಿ ಗಲ್ಲಿಗೇರುವವರಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಸಂಖ್ಯೆಯೇ ಮುಂಚೂಣಿಯಲ್ಲಿದೆ.(ಇದನ್ನು ಸ್ವತಃ ಬಿಜೆಪಿ ನಾಯಕರಾಗಿರುವ ವರುಣ್‌ಗಾಂಧಿ ಬಹಿರಂಗವಾಗಿ ಹೇಳಿದ್ದಾರೆ) ನಾಥೂರಾಂ ಗೋಡ್ಸೆ ಒಬ್ಬನನ್ನು ಬಿಟ್ಟರೆ ಬ್ರಾಹ್ಮಣರು ತಮ್ಮ ತಪ್ಪಿಗಾಗಿ ಗಲ್ಲಿಗೇರಿದ್ದು ಕಡಿಮೆ. ಹಾಗೆಯೇ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿರುವುದನ್ನು ಅವನು ವಿರೋಧಿಸಿದ್ದಲ್ಲ. ನ್ಯಾಯಪ್ರಕ್ರಿಯೆಯಲ್ಲಾದ ಲೋಪವನ್ನು ಅವನು ತನ್ನ ಸಂಗಡಿಗರ ಜೊತೆಗೆ ವಿರೋಧಿಸಿದ್ದ. ಇಷ್ಟಕ್ಕೂ ತಡ ರಾತ್ರಿಯವರೆಗೆ ಮೆಮನ್‌ನನ್ನು ಗಲ್ಲಿಗೇರಿಸಬಾರದು ಎಂದು ನ್ಯಾಯಮೂರ್ತಿಯ ಮನೆಯಲ್ಲಿ ವಾದಿಸಿದ ಪ್ರಶಾಂತ್ ಭೂಷಣ್, ಕಟ್ಜು, ಜೇಠ್ಮಲಾನಿಯಂತಹ ಹಿರಿಯ ನ್ಯಾಯವಾದಿಗಳು, ಹಿರಿಯ ಬ್ರಾಹ್ಮಣರು ಉಗ್ರಗಾಮಿಗಳ ಪರವಾಗಿರುವವರೇನೂ ಅಲ್ಲ. ದಿ ಹಿಂದೂ ಎನ್ನುವ ಖ್ಯಾತ ಪತ್ರಿಕೆ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿದ ನ್ಯಾಯ ಪ್ರಕ್ರಿಯೆಯ ಲೋಪಗಳನ್ನು ಕಟುವಾಗಿ ತನ್ನ ಸಂಪಾದಕೀಯದಲ್ಲಿ ಖಂಡಿಸಿತ್ತು. ಇಷ್ಟಕ್ಕೂ ರೋಹಿತ್‌ನನ್ನು ವಿವಿ.ಯಿಂದ ವಜಾಗೊಳಿಸಿದ್ದು ಆ ಪ್ರತಿಭಟನೆಯ ಕಾರಣಕ್ಕೆ ಅಲ್ಲವೇ ಅಲ್ಲ. ಆತ ಎಬಿವಿಪಿಯ ಕಾರ್ಯಕರ್ತರ ಜೊತೆಗೆ ಸಂಘರ್ಷಕ್ಕಿಳಿದುದನ್ನು ವಿರೋಧಿಸಿ ರೋಹಿತ್‌ನನ್ನು ವಜಾಗೊಳಿಸಲಾಗಿತ್ತು. ಇದೇ ಸಂದರ್ಭದಲ್ಲಿ ಎಬಿವಿಪಿ ನಾಯಕರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಅಂದರೆ ಅವರೆಲ್ಲ ಮುಗ್ಧರು ಎನ್ನುವುದು ವಿ.ವಿ. ಅಭಿಪ್ರಾಯವಾಗಿದೆ. 
5. ತನ್ನ ಡೆತ್ ನೋಟ್‌ನಲ್ಲಿ ರೋಹಿತ್ ಯಾರ ವಿರುದ್ಧವೂ ಆರೋಪ ಮಾಡಿಲ್ಲ ಎನ್ನುವುದು ಭಟ್ಟರ ಇನ್ನೊಂದು ಸಂಭ್ರಮವಾಗಿದೆ. ಆದರೆ ರೋಹಿತ್ ಪ್ರಬುದ್ಧ ಹುಡುಗನಾಗಿದ್ದ. ಅವನು ಬರೆದ ನಿಜವಾದ ಡೆತ್ ನೋಟ್, ಡಿಸೆಂಬರ್ 18ರಂದು ವಿವಿ. ಕುಲಪತಿಗೆ ಬರೆದಿರುವ ಪತ್ರ. ಅದರಲ್ಲಿ ಅವನು ಡೆತ್ ನೋಟ್ ಬರೆದಿರುವುದಷ್ಟೇ, ತನ್ನ ಆತ್ಮಹತ್ಯೆಯನ್ನು ತಪ್ಪಿಸಲು ಅವರಿಗೆ ಸಾಕಷ್ಟು ಕಾಲಾವಕಾಶವನ್ನೂ ನೀಡಿದ್ದ. ಹಾಸ್ಟೆಲ್‌ಗಳಲ್ಲಿರುವ ಎಲ್ಲ ದಲಿತ ವಿದ್ಯಾರ್ಥಿಗಳಿಗೆ ಅಡ್ಮಿಶನ್ ಸಂದರ್ಭದಲ್ಲೇ ವಿಷವನ್ನೂ, ನೇಣು ಹಗ್ಗಗಳನ್ನು ಕೊಡಿ ಎಂದು ಅವನು ವಿನಯ ಪೂರ್ವಕವಾಗಿ ಕೇಳಿಕೊಂಡಿದ್ದ. ಅವನು ಆತ್ಮಹತ್ಯೆ ಸೂಚನೆಯನ್ನು ಆ ಪತ್ರದಲ್ಲೇ ನೀಡಿದ್ದ. ಸಾಯುವ ಸಂದರ್ಭದಲ್ಲಿ, ಅವನು ಎಲ್ಲ ವೈಷಮ್ಯಗಳನ್ನು ಮರೆತು, ಈ ಸಷ್ಟಿಯ ಘನತೆಯನ್ನು ಒಪ್ಪಿಕೊಂಡು ಅವನು ಎಲ್ಲರಿಂದ ವಿದಾಯ ಹೇಳಿದ್ದಾನೆ. ಸಾವಿನ ಸಂದರ್ಭದಲ್ಲಿ ಅವನು ಎಲ್ಲದರಿಂದ ದೂರ ನಿಂತಿದ್ದ. ಶೂನ್ಯ ಮನಸ್ಕನಾಗಿದ್ದ.
 6. ರಾಜಕಾರಣಿಗಳು ರೋಹಿತ್ ಸಾವನ್ನು ಸುದ್ದಿಯಾಗಿಸುವುದು ಭಟ್ಟರಿಗೆ ಅಸಮಾಧಾನ ತಂದಿದೆ. ಅಂದರೆ, ಈ ಕುರಿತಂತೆ ರಾಜಕಾರಣಿಗಳು ಮೌನವಾಗಿರಬೇಕು. ಇದನ್ನು ರಾಜಕೀಯ ವಿವಾದವನ್ನಾಗಿಸಬಾರದು. ಯಾರೂ ಆತನ ಮನೆಗೆ ಭೇಟಿ ನೀಡಬಾರದು. ಸಾರ್ವಜನಿಕವಾಗಿ ಪ್ರತಿಭಟನೆ ಮಾಡಬಾರದು? ಹಾಗಾದರೆ ವಿರೋಧ ಪಕ್ಷಗಳು ಎನ್ನುವುದು ಯಾಕಿರಬೇಕು? ಯಾರು ಮಾತನಾಡಬಾರದು ಎನ್ನುವುದಾದರೆ ರೋಹಿತ್ ವೇಮುಲಾಗೆ ನ್ಯಾಯ ಆಕಾಶದಿಂದ ತನ್ನಷ್ಟಕ್ಕೇ ಇಳಿದು ಬರುತ್ತದೆಯೆ? ಬದುಕಿದ್ದಾಗಲೇ ಆತನ ಧ್ವನಿಗೆ ಧ್ವನಿ ಸೇರಿಸದ ವ್ಯವಸ್ಥೆ, ಆತನ ಶಾಶ್ವದ ಮೌನಕ್ಕೆ ಸ್ಪಂದಿಸುತ್ತದೆ ಎಂದು ಭಾವಿಸಬೇಕೇ?
7. ಪರೀಕ್ಷೆಗಳ ಒತ್ತಡದಿಂದ ಸಾವಿರಾರು ವಿದ್ಯಾರ್ಥಿಗಳು ಸಾಯುತ್ತಾರೆ ಎನ್ನುವ ವಿನಾಯಕ ಭಟ್ಟ ಮತ್ತು ಅವನ ಅನುಯಾಯಿಗಳು ತಿಳಿದುಕೊಳ್ಳಬೇಕಾದ ಕೆಂಡದಂತಹ ಇನ್ನೊಂದು ಸತ್ಯವಿದೆ. ಅದೆಂದರೆ ಅತ್ಯಂತ ಪ್ರತಿಭಾವಂತನಾದ ರೋಹಿತ್ ವೇಮುಲ ಯಾವುದೇ ಮೀಸಲಾತಿಯ ಬಲದಿಂದ ವಿವಿ.ಯಲ್ಲಿ ಸ್ಥಾನ ಪಡೆದಿರಲಿಲ್ಲ. ಆತ ಸಾಮಾನ್ಯ ವರ್ಗದಿಂದ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದ.

Saturday, December 12, 2015

ದೀಪದ ಸನ್ನೆಗಾಗಿ ಕಾಯುತ್ತಾ....

ನನ್ನ "ಅಮ್ಮ ಹಚ್ಚಿದ ಒಲೆ" ಕೃತಿಯ ಕುರಿತಂತೆ ಪ್ರೀತಿಯ ಕವಿ ಜಯಂತ್ ಕಾಯ್ಕಿಣಿ ಬರೆದಿದ್ದಾರೆ 

ಪ್ರೀತಿಯ ಬಶೀರ್,
ಎಷ್ಟೋ ವರುಷಗಳ ಹಿಂದೆ ಮಾಟುಂಗಾದ ಕನ್ನಡ ಸಂಘದ ಪುಟ್ಟ ಕೋಣೆಯಲ್ಲಿ ಪುಸ್ತಕಗಳ ಕಪಾಟುಗಳ ನಡುವೆ ಪುಸ್ತಕಗಳಂತೆ ಕೂತ ಹತ್ತಿಪ್ಪತ್ತು ಆಪ್ತರ ನಡುವೆ ನೀನು ಕವಿತೆ ಓದಿದ್ದು ನನ್ನ ಉಜ್ವಲ ನೆನಪುಗಳಲ್ಲಿ ಒಂದು. ಭೋರ್ಗರೆಯುವ ಮಳೆಗಾಳಿಯ ನಡುವೆ ಹೆಮ್ಮರವೊಂದರಲ್ಲಿ ಸಿಕ್ಕಿಕೊಂಡು ಒದ್ದಾಡುವ ಗಾಳಿಪಟದ ಚಿತ್ರಣವಿತ್ತು ಅದರಲ್ಲಿ. ಊರಿನಿಂದ ತಂಗಿ ಬರೆದ ಪತ್ರದ ಒಕ್ಕಣಿಕೆಯಿತ್ತು. ನಂತರ ಬಂದ ನಿನ್ನ ಕವನ ಸಂಕಲನಕ್ಕೆ ನಿನ್ನದೇ ತೀವ್ರ ಸಾಲುಗಳನ್ನೇ ಪೋಣಿಸಿ ಹಿನ್ನುಡಿಯ ರೂಪದಲ್ಲಿ ಶುಭಾಶಯ ಹೇಳಿದ್ದೆ. ಅಮ್ಮ ಹಚ್ಚಿದ ಒಲೆೆಯ ಈ ಕವಿತೆಗಳೂ ಸಹ ಅದೇ ಕಾವಿನಲ್ಲಿ ನನ್ನನ್ನು ಆವರಿಸಿಕೊಂಡಿದೆ.
ಅಮ್ಮ ಹಚ್ಚಿದ ಒಲೆಯಿಂದಲೇ ಎಲ್ಲ ಜೀವಗಳ ಪಯಣದ ಶುರುವಾತು. ಅಕ್ಷರ ಕೇಂದ್ರವೇ ಆ ಒಲೆ. ಆ ಕಾವಿನ ವಿಸ್ತರಣೆಯೇ ನಮ್ಮೆಲ್ಲರ ವಿಕಾಸ. ಸ್ನಾನಕ್ಕೆ ನೀರೂ ಅಲ್ಲೇ ಕುದಿಯಬೇಕು, ಒಣಮೀನೂ ಅಲ್ಲೇ ಸುಡಬೇಕು, ಹಬ್ಬದ ಖೀರೂ ಅಲ್ಲೇ ಉಕ್ಕಬೇಕು...ಮಗುವಿನ ಹಾಲುಗೆನ್ನೆಯ ದಿಟ್ಟಿ ಬೊಟ್ಟಿನ ಕಪ್ಪೂ ಅಲ್ಲಿಂದಲೇ ಬರಬೇಕು... ರೂಪಕ ಎಂದು ಕರೆದರೆ ಜುಜುಬಿಯಾಗಿ ಬಿಡಬಹುದಾದ ಒಂದು ಪರಮ ಮೌಲ್ಯ ಈ ಒಲೆ. ಮತ್ತು ಅದರ ಹಿಂದಿನ ಮಸಿ ಹಿಡಿದ ಗೋಡೆ. ಸಾಮಾಜಿಕ ಸಂಬಂಧಗಳೆಲ್ಲ ವ್ಯಸ್ತಗೊಂಡಿರುವ, ವ್ಯಗ್ರಗೊಂಡಿರುವ ಈ ನಮ್ಮ ಸಮಯದಲ್ಲಿ ಎಲ್ಲ ಗಾಯಗಳನ್ನೂ ಮಾಯಿಸಬಲ್ಲ ಏಕಮೇವ ಮದ್ದು ಪ್ರತಿ ಜೀವಿಯಲ್ಲಿರಬೇಕಾದ ತಾಯ್ತನ. ನಿನ್ನ ಈ ಎಲ್ಲ ರಚನೆಗಳೂ ಈ ತಾಯ್ತನವೆಂಬ ಆವರಣಕ್ಕಾಗಿನ ತೀವ್ರ ತುಡಿತಗಳಾಗಿವೆ. ಅವುಗಳ ಅಮೃತ ಹಸ್ತ ಸಹಜೀವಗಳನ್ನು ಸ್ಪರ್ಶಿಸಲು ಬೆಳಕಿನಂತೆ ಚಾಚುತ್ತಿವೆ.
ನಿನ್ನ ವೈಖರಿ ಚತುರೋಕ್ತಿಯದು. ಅನುರಣನಶೀಲವಾದ ಪುಟ್ಟ ಪುಟ್ಟ ಚಿತ್ರಿಕೆಗಳ ಮೂಲಕ ಈ ರಚನೆಗಳು ಜೀವಂತವಾದ ಒಂದು ಆವರಣವನ್ನು ಕಲ್ಪಿಸುತ್ತವೆ.
ಒಳಗೆ ಅಮ್ಮ
ಅವಳ ನಿಟ್ಟುಸಿರಿನಂತೆ
ದೋಸೆ ಹುಯ್ಯುವ ಸದ್ದು....

ಗೋಡೆಯ ಮೇಲೆ ಹೊಸ ಬಟ್ಟೆ
ಹೆಣದಂತೆ ತೂಗುತ್ತಿತ್ತು....

..ತೊಟ್ಟು ಕಳಚಿ ಬಿದ್ದ ಕಂಬನಿ...

ಇಂಥ ಚಿತ್ರಗಳು ವಾಚ್ಯಾರ್ಥ ತಿಳಿಯುವ ಮೊದಲೇ ಒಂದು ಆಳವಾದ ಅನುಭವವನ್ನು ಉಕ್ಕಿಸಬಲ್ಲವು. ಅದು ಹಾಗಾದಾಗಲೇ ಕವಿತೆ. ಹಾಗಂತ ಇದು ಹುಸಿ ರಮ್ಯತೆಯಿಂದ ಆಪ್ತವಾಗುವ ಭಾವುಕತೆಯಲ್ಲ. ಏಕೆಂದರೆ ಚಿಂತನೆಯ ಅಥವಾ ವೈಚಾರಿಕತೆಯ ಹಂಗಿಲ್ಲದ ಹುಸಿ ಭಾವುಕತೆಗೆ ಸಾಹಿತ್ಯದಲ್ಲಿ ಸ್ಥಾನವೇ ಇಲ್ಲ. ಮುಂಬಯಿಯ ಇನ್ನೊಬ್ಬ ಕವಿ ಮರಿಯಪ್ಪ ನಾಟೇಕರರ ಒಂದು ಸಾಲಿನಲ್ಲಿ, 'ನೀರಿನಲ್ಲೆಸೆದ ಕಲ್ಲಿನ ತರಂಗ'ದ ಚಲನೆಯ ವರ್ಣನೆ ಬರುತ್ತದೆ. ಅಂದರೆ ಆಕಾರದಿಂದ ನಿರಾಕಾರದೆಡೆಗೆ ಚಲನೆ. ಒಳ್ಳೆಯ ಬರವಣಿಗೆಯ ಮುಖ್ಯ ಲಕ್ಷಣವೇ ಈ ನಿರಾಕಾರದೆಡೆಗಿನ ಚಲನೆ. ನಿನ್ನ ಸಾರ್ಥಕ ರಚನೆಗಳಲ್ಲಿ ಈ ಗುಣವಿದೆ. ಒಂದು ಚಿತ್ರ, ಒಂದು ಯೋಚನೆ, ಒಂದು ಲಹರಿ ಆಕಾರ ತೊಡುತ್ತಿರುವಾಗಲೇ... ನಿರಾಕಾರದೆಡೆ ಚಲಿಸುವಂಥ ಧ್ವನಿ ತರಂಗ ಅದು. ಅದರ ಆಸ್ವಾದವೇ ಕವಿತೆಯ ಓದು. ಹೊರತು ವ್ಯಾಖ್ಯಾನವಲ್ಲ.
... ದೇವರ ಪಾದದ ಬಳಿ
ಚಿಟ್ಟೆಗಳಂತಿರುವ ಮಕ್ಕಳು
ಗಿಡಗಿಡಗಳಿಗೆ ಹಾರಿ
ಕಿತ್ತು ತಂದ ಹೂಗಳು...

.... ಅವಳ ಮಡಿಲಲ್ಲಿ 
ಮುಳುಗೇಳುತ್ತಿದ್ದ ಮಗು
ಪಕ್ಕನೆ ಅವಳ ಮುಖ ಪರಚಿಬಿಟ್ಟಿತು......

... ಇನ್ನೂ ಹೆರಿಗೆ ನೋವಿಗೆ ತೆರಿಗೆ
ಕಟ್ಟುತ್ತಿರುವ ಅಮ್ಮ......

... .ದೇವರೇ..ಇನ್ನು ಮುಂದೆ
ಹೆಸರಿರುವ ಎಲ್ಲ ತಾಯಂದಿರು ಬಂಜೆಯರಾಗಲಿ
ಕೊಡುವುದಾದರೆ ಕಸದ ತೊಟ್ಟಿಗಳಿಗೆ, 
ಗಟಾರಗಳಿಗೆ, ಬಸ್ ನಿಲ್ದಾಣಗಳಿಗೆ
ಹೆರಿಗೆ ಬೇನೆ ಕೊಡು...

ಎಲ್ಲವನ್ನೂ ಬಲ್ಲ ಜೀವದ ಗೆಳೆಯನಿಗೇ, ತನ್ನ ಗೆಳೆತನದ ಬಗ್ಗೆ ಪುರಾವೆ ಕೊಡಬೇಕಾದ ಪ್ರಸಂಗ ಬಂದರೆ ಅದೆಂಥ ನೋವಿನದಾದೀತು. ಅಂಥ ಅವ್ಯಕ್ತ ಕಳವಳವೇ ನಿನ್ನ ಈ ಕವಿತೆಗಳನ್ನು ನಡುಗುವ ಕೈಗಳಲ್ಲಿ ಒಟ್ಟಿಗೆ ಹಿಡಿದಿವೆ. ಆ...ಲಯದೊಳಗೆ, ಚಿತ್ತಾಲರ ಜೊತೆ ಸಂಜೆ, ಗುಜರಿ ಆಯುವ ಹುಡುಗ, ರಮಝಾನ್ ಪದ್ಯಗಳು, ಸ್ನೇಹ, ಮೂರು ಬೆರಳುಗಳು, ಧ್ಯಾನ, ಅಮ್ಮನ ಕೊಳಲು, ಭಾಮಿಯಾನ್‌ನಲ್ಲಿ ಬುದ್ಧ, ಎರಡು ಮಂಚಗಳು, ಕಳೆದು ಹೋದ ಬಾಲ್ಯ, ನಮ್ಮ ಎದೆ, ಮನೆ ಸೇರೂದರೊಳಗೆ, ಹೆಣ್ಣು ಮಲಗೋದು, ಕಾಗೆ ಮರಿಯ ಹಾಡು...  ಓದಿನಲ್ಲೂ ಬೆಳೆಯಬಲ್ಲ ರಚನೆಗಳಾಗಿವೆ. ಕವಿತೆಯೊಳಗಿನ ಅವ್ಯಕ್ತ, ಓದುಗನ ಅವ್ಯಕ್ತದೊಂದಿಗೆ ಸಜೀವ ಸಂಬಂಧ ಹೊಂದುವಂತಾಗುವ ರಚನೆಗಳಿವು.
 ಮಗುವಿನ ಗಾಢ ನಿದ್ದೆ 
ಅವಳಿಗೆ ಧ್ಯಾನದಂತೆ 
ಭಾಸವಾಗಿದೆ ... 

ಮೌನಕ್ಕೆ ತಂದೆಯ ಗತ್ತು..
- ಇಂಥ ಸಾಲುಗಳು ಒಂದು ರಚನೆಗೆ ನೀಡುವ ಶಾರೀರ ಸೂಕ್ಷ್ಮವಾದದ್ದು. ಈ ಸಾಲುಗಳು ಅನುಭವದಿಂದ ಹೊಮ್ಮಿದಷ್ಟೂ ಚತುರೋಕ್ತಿಗಳು ಚತುರತೆಯಿಂದ ಮೇಲೇಳುತ್ತವೆ.

...ಹಸಿವನ್ನು ಹೂಡಿ ದಿನಸಿ ಅಂಗಡಿ ತೆರೆದ
ಗೆಲುವನ್ನು ಜವಳಿ ಅಂಗಡಿಗೆ ಮಾರಿ ಸೋತ
ಸೋರುವ ಸೂರನ್ನು ದಿಟ್ಟಿಸುತ್ತಾ ಹೆಂಚಿನ ವ್ಯಾಪಾರಕ್ಕಿಳಿದ
ದುಂದುಗಾರ ಅಪ್ಪ...ಸವಕಲು ಮಾತುಗಳನ್ನೇ
ನಾಣ್ಯಗಳಂತೆ ಚಲಾವಣೆಗೆ ಬಿಟ್ಟ 
ಅಮ್ಮನ ಮೌನದ ತಿಜೋರಿಯನ್ನೇ ದೋಚಿದ...

ನೋಡಲು ಸರಳವಾಗಿ ಕಾಣುವ ಇಂತಹ ಸಾಲುಗಳಿಗೆ ತೀವ್ರವಾದ ಕಥನ ವಿಸ್ತಾರವಿದೆ. ಏಕೆಂದರೆ, ಇವು ವರದಿಗಾರ ಕಲೆ ಹಾಕಿದ ವಿವರಗಳಲ್ಲ. ಇವು ಜೀವನವನ್ನು ಹಣ್ಣಾಗಿಸಿದ ಬಾಳಿನ ವಿವರಗಳು. ಕೊನೆಗೂ ನಮ್ಮೆಲ್ಲರ ಕಾಯಕ, ಸವಕಲು ಮಾತುಗಳನ್ನೇ ಉಜ್ಜಿ ಮತ್ತೆ ಚಲಾವಣೆಗೆ ಬಿಡುವುದಲ್ಲವೆ? ಮೌನದ ತಿಜೋರಿಯನ್ನೆಲ್ಲ ದೋಚುವುದಲ್ಲವೆ?
ನೀನು ಪೂರ್ವನಿಯೋಜಿತ ನಿಲುವನ್ನು ತೆಗೆದುಕೊಂಡು ತುಂಬಾ ನಿಷ್ಠನಾಗಿ ಬರೆದಾಗ ನಿನ್ನ ರಚನೆಗೆ ನಿಬಂಧ ರೂಪ ಬರುತ್ತದೆ. ಉದಾಹರಣೆಗೆ ಬಲಿ ಹಬ್ಬದ ಬೆಳಗು, ಮೊಬೈಲ್ ಹಾಡು, ಅಮ್ಮ ಹಚ್ಚಿದ ಒಲೆ ಈ ಕವಿತೆಗಳಿಗೆ ಭಿನ್ನವಾದ ಹೌದು, ನಿಮ್ಮ ಅನುಮಾನ ಸರಿ, ರಾವಣಾಯನ, ಸಿಹಿಸುದ್ದಿ ಕವಿತೆಗಳಲ್ಲಿ ಒಬ್ಬ ವಕ್ತಾರನಂತೆ ನೀನು ಮಾತನಾಡ ತೊಡಗಿದಾಗೆಲ್ಲ ಕವಿತೆ ತಾನಾಗಿಯೇ ನೀನು ಮಾತಾಡಿಕೋ ಮಾರಾಯ, ನಾನು ಆಮೇಲೆ ಸಿಗ್ತೇನೆ ಎಂದು ಸದ್ದಿಲ್ಲದೆ ಮಾಯವಾಗುತ್ತದೆ. ನಿನ್ನ ಹವಣಿಕೆ ಮೀರಿದ ಕ್ಷಣಗಳಲ್ಲೇ ನಿನ್ನ ಅತ್ಯುತ್ತಮ ಕಾವ್ಯ ಭಾಗಗಳಿವೆ. ಉದಾಹರಣೆ ನನ್ನನ್ನು ತುಂಬಾ ಸೆಳೆದ ಈ ಸಾಲು:

....ಉಂಡ ಎಲೆಯಿಂದ ಬೇರ್ಪಡುವಂತೆ ಅವರು
ಪರಸ್ಪರ ಕಳಚಿಕೊಂಡಾಗ
ಅವನ ಮುಷ್ಟಿಯಿಂದ ಮೊಲೆಯನ್ನು ಬಿಡಿಸಿಕೊಂಡ ಅವಳು
ಕಳಚಿಟ್ಟ ಇಸ್ತ್ರಿಪೆಟ್ಟಿಗೆ ತುಂಬಾ ಮತ್ತೆ ಸುರಿವಳು ಕೆಂಡ....

ಎವೆ ಕಳಚಿ, ಮುಷ್ಟಿ, ಮೊಲೆ, ಇಸ್ತ್ರಿ ಪೆಟ್ಟಿಗೆ, ಸುರಿವ ಕೆಂಡ-ಇವೆಲ್ಲ ತಂತಮ್ಮ ವೈಯಕ್ತಿಕ ಧ್ವನಿಯನ್ನಿಟ್ಟುಕೊಂಡೇ ಒಟ್ಟಿಗೇ ಸಾಧಿಸುವ ಪರಿಣಾಮ ವಿಶಿಷ್ಟ. ನಿನ್ನ ಕವಿತೆಯ ಉಸಿರಾಟ ಇಂಥ ಭಾಗಗಳಲ್ಲೇ ಇದೆ. ಇವೆಲ್ಲ ಹವಣಿಕೆಯಿಂದ, ಆಲೋಚನೆಯಿಂದ, ಎಚ್ಚರದ ವಿನ್ಯಾಸದಿಂದ ಆಗುವಂತಹದಲ್ಲ. ಗೊತ್ತಿರುವ ಬಿಡಿಗಳ ಮೂಲಕ ಗೊತ್ತಿರದ ಇಡಿಗಾಗಿ ಒದ್ದಾಡುವಾಗಲೇ ಆಗುವಂಥದ್ದು.
....ಎಳೆ ಕಂಬನಿಯಂತಿರುವ ಆ ನಾಕು ಸಾಲುಗಳು...
....ಫ್ರಿಜ್ಜಿನಲ್ಲಿಟ್ಟ ತರಕಾರಿಯಂತೆ ಅಕ್ಕಪಕ್ಕ
ಕುಳಿತ ಕಣ್ಣುಗಳು....
ಇಂತಹ ಬಿಡಿಗಳು ಆಯಾ ಕ್ಷಣದಲ್ಲಿ ತಾಜಾ ಅನಿಸುತ್ತಾ ಬೇರೊಂದು ಆಳವಾದ ವ್ಯಾಪಕವಾದ ಅನುಭವದೆಡೆ ನಮ್ಮನ್ನು ನೂಕಿದಾಗಲೇ ಅವುಗಳ ಸಾರ್ಥಕತೆ. ನಮ್ಮ ಅಕ್ಕರೆಯ ಮುಂಬಯಿಯ ಹಿರಿ ಕವಿ ವಿ.ಜಿ. ಭಟ್ಟರ ಒಂದು ಸಾಲು ಹೀಗಿದೆ- 'ಅಮರ ಲೋಕದ ಕಿಡಕಿಗಳಂಥ ಕಣ್ಣುಗಳನ್ನು ಕಂಡೆನು'  ಪ್ರಪಂಚದ ಎಲ್ಲ ಕವಿತೆಗಳೂ ತಮ್ಮದೇ ರೀತಿಯಲ್ಲಿ ತಮ್ಮದೇ ಆದ ಅಮರಲೋಕವೊಂದಕ್ಕೆ ತೆರೆದ ಕಿಡಕಿಗಳೇ ಆಗಿವೆ. ಅಂಥ, ನಮ್ಮೆಲ್ಲರನ್ನೂ ಉಳಿಸುವಂತಹ, ಬೆಳೆಸುವಂಥ ಗಹನವಾದ, ಘನವಾದ, ಅಮರಲೋಕವೊಂದು ನಿನ್ನ ಮನದೊಳಗೇ ನಿನ್ನ ಬರವಿಗಾಗಿ ಕಾದಿದೆ. ಈ ಪೇಸ್‌ಬುಕ್ಕು, ಟ್ವಿಟ್ಟರು, ಒಂದೊಂದು ಸಾಲನ್ನು ಎರಡೆರಡು ಸಲ ಓದಿ ಶ್ರುತಿ ಕಳೆದುಕೊಂಡಿರುವ ನೀರಸ ಕರ್ಕಶಗೊಂಡಿರುವ ಕವಿಗೋಷ್ಠಿಗಳು, ಬಿಡುಗಡೆ ಸಮಾರಂಭದ ನಿರೂಪಕರು...ಇಂಥದೆಲ್ಲ ನರ್ತನವನ್ನು ಚೂರು ಬದಿಗಿಟ್ಟು ನಾವೆಲ್ಲ    ಖಾಲಿ ಕಾಗದದ ಅಸೀಮ ಚಡಪಡಿಕೆಗೆ ಶರಣಾಗಬೇಕಾಗಿದೆ. ಯಾವ ದೀಪದ ಸನ್ನೆಗಾಗಿಯೂ ಕಾಯದೆ...ಅಮ್ಮನ ಒಲೆಯೆದುರಿನ ಊದುಗೊಳವೆಯ ನಾದದ ಜಾಡಿನಲ್ಲೇ, ಅಶರೀರದ ಅಂಚಿನಲ್ಲಿರುವ ನಿರಾಕಾರದ ಎಟುಕಿನಲ್ಲಿರುವ ಆವರಣದೆಡೆಗೆ ಚಲಿಸಬೇಕಾಗಿದೆ.

ಇಬ್ಬರೆಂದರೆ ಬರೇ ಇಬ್ಬರು
ನಾನು ಮತ್ತು ಅವರು
ಹಾಯಿ ದೋಣಿಯಂತೆ ತೇಲುತ್ತಿರುವ
ಕತೆಯ ಸಾಲೊಂದನ್ನು ಏರಿ ಕುಳಿತಿದ್ದೇವೆ

ಮೊರೆವ ಎದೆಯೊಳಗೆ
ಭೋರ್ಗರೆವ ಅಕ್ಷರದ ಕಡಲು
ಕತೆಗಾರ ನನ್ನ ಪಕ್ಕದಲ್ಲೇ ಅಂಬಿಗನಂತೆ
ಹುಟ್ಟು ಹಾಕುತ್ತಿರುವಾಗ
ನನಗೇಕೆ ಮುಳುಗುವ ಚಿಂತೆ...

ನಿನ್ನ ಈ ಸರಳ ಸಾಲುಗಳಲ್ಲಿರುವ ಅಭಯ, ಸಮಾಧಾನ ಅದ್ವಿತೀಯವಾದದ್ದು. ಹೆಗಲ ಮೇಲೆ ಆಧಾರಕ್ಕೆಂದು ಇಟ್ಟಿದ್ದ ಸೋದರನ ಹೂವಿನ ಎಸಳಿನಷ್ಟೇ ಭಾರವಾದ ಮೂರು ಬೆರಳಿನಷ್ಟೇ ಭಂಗುರವಾದದ್ದು.
 ಇದನ್ನು ಜೋರು ಮಳೆಯಲ್ಲಿ ಗೋಕರ್ಣದಲ್ಲಿ ಬರೆಯುತ್ತಿದ್ದೇನೆ. ಮಳೆಯಲ್ಲಿ ಭೋರ್ಗರೆವ ಸಮುದ್ರದಲ್ಲಿ ಉರುವಲು ಒಲೆ ಸೌದೆಗಾಗಿ ಮನುಜಾಕೃತಿಗಳು ಯುದ್ಧೋಪಾದಿಯಲ್ಲಿ, ಉಕ್ಕುವ ತೆರೆಗಳೊಂದಿಗೆ ಸೆಣಸಾಡುತ್ತಿವೆ. ತಮ್ಮ ತಮ್ಮ ಒಲೆಗಳನ್ನು ಬೆಚ್ಚಗಿಡಲು ನಡೆಯುತ್ತಿರುವ ಒಂದು ಮಹಾ ಜಲ ಯಜ್ಞ ಇದು. ಇದೇ ಮಳೆ ಧಾರಾವಿಯಲ್ಲೂ ಬೀಳುತ್ತಿದೆ. ಅಲ್ಲಿ ಮಳೆಯಿಂದ ಒಲೆಯನ್ನು ಬಚಾವು ಮಾಡಲು ಅಮ್ಮಂದಿರು ಹೋರಾಡುತ್ತಿದ್ದಾರೆ. ಎಲ್ಲ ರಾಜಕೀಯ ಸಮರ್ಪಕತೆಯ ಮೂತಿಗೆ ತಿವಿಯುವಂಥ ಸಮರ ಇದು. ಮಾನವೀಯತೆ ಬಗ್ಗೆ ಚಂದವಾಗಿ ಎಲ್ಲರೂ ಮಾತಾಡಿದ್ದೇವೆ. ಚಿತ್ತಾಲರು ಪದೇ ಪದೇ ಹೇಳುವ ಮಾನವಂತಿಕೆೆ ನಮ್ಮೆಲ್ಲರ ಪದಯಾತ್ರೆಯ ಜೀವಾಳವಾಗಲಿ ಎಂದು ಹಾರೈಸೋಣ.

ವಾತ್ಸಲ್ಯಪೂರ್ವಕ
ಜಯಂತ ಕಾಯ್ಕಿಣಿ

***
ಪ್ರತಿಗಳಿಗಾಗಿ ನೇರವಾಗಿ ನನ್ನನ್ನು ಸಂಪರ್ಕಿಸಬಹುದು.
B.M. BASHEER
A/C-NO-3 0 9 2 8 2 4 1 6 9 9
STATE BANK OF INDIA
PORT ROAD, MANGALORE BRANCH
IFSC CODE-SBIN 0 0 0 0 8 7 1
MOBILE-944 8835 621
iruveprakashana@gmail.com

ಈ ಅಕೌಂಟಿಗೆ ಪುಸ್ತಕ ಹಣವನ್ನು ಜಮಾಗೊಳಿಸಿ, ತಮ್ಮ ವಿಳಾಸವನ್ನು ಈ ಮೇಲ್ ಮೂಲಕ ಅಥವಾ ಮೊಬೈಲ್ ಮೆಸೇಜ್ ಮೂಲಕ ನೀಡಿದರೆ, ಕೊರಿಯರ್‌ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.
1. ಅಮ್ಮ ಹಚ್ಚಿದ ಒಲೆ-ಕವನ ಸಂಕಲನ- 100 ರೂ.
2. ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ-ಸೂಫಿಯ ಕಣ್ಣಲ್ಲಿ ಹನಿಗಳು -75 ರೂ. 
ಎರಡು ಪುಸ್ತಕಗಳಿಗೆ ಒಟ್ಟು 175 ರೂಪಾಯಿಯನ್ನು ನೀಡಬೇಕಾಗುತ್ತದೆ.


‘ಇರುವೆ ಪ್ರಕಾಶನ’ ನನ್ನ ಹೊಸ ಕನಸು!
ಕವನ ಸಂಕಲನಗಳು ನನ್ನ ವಿಶೇಷ ಮಕ್ಕಳು!!
ಇವೆರಡೂ ನಿಮ್ಮಿಂದ ವಿಶೇಷ ಪ್ರೀತಿಯನ್ನು ಬೇಡುತ್ತಿವೆ.

Wednesday, December 9, 2015

ನರಕದ ಹೆಬ್ಬಾಗಿಲಲ್ಲಿ ದಾನಿಗಳ ಹೆಸರು ಕೆತ್ತುವ ಕವನಗಳು

ನನ್ನ ಮಸೀದಿಯ ಧ್ವಂಸಗೊಳಿಸಿದವರಿಗೆ ಕೃತಜ್ಞ(ಸೂಫಿಯ ಕಣ್ಣಲ್ಲಿ ಹನಿಗಳು)-ಕುರಿತಂತೆ ಹಿರಿಯ ಸಾಹಿತಿ ಬೊಳುವಾರು ಮಹಮ್ಮದ್ ಕುನ್ಜಿ ಅವರ  ಮಾತುಗಳು 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ದಿನಗಳನ್ನು ವರ್ಷಗಳಂತೆ ಬದುಕುತ್ತಿರುವವರಿಗೆಲ್ಲ ‘ಪೆದಂಬು’ ಎಂಬ ಪದ, ‘ಧರ್ಮ-ದೇವರುಗಳಷ್ಟೇ’ ಪ್ರಿಯವಾದದ್ದು. ಹೊರಗಿನವರಿಗೆ ಈ ಪದವನ್ನು ಹೀಗೆಯೇ ಎಂದು ಪರಿಚಯಿಸಲಾಗುವುದಿಲ್ಲ.  ಇದನ್ನು  ‘ಕಿಚಾಯಿಸುವುದು’ ಮತ್ತು ‘ರೊಚ್ಚಿಗೆಬ್ಬಿಸುವುದು’ ಎಂಬೆರಡು ಪದಗಳ ನಡುವೆ (ನಡುವೆ ಅಂದರೆ, ನಟ್ಟ ನಡುವೆಯಲ್ಲ; ಸಂದರ್ಭ ಸಹಿತವಾಗಿ ಎಡ-ಬಲಕ್ಕೆ ಸರಿಸಬೇಕಾಗುತ್ತದೆ.) ಇರಿಸಬಹುದೇನೋ. ಬಷೀರ್ ಕವನಗಳನ್ನು ಓದುವಾಗ ಮಾತ್ರವಲ್ಲ, ಈ ಹೆಸರು ನೆನಪಾದಾಗಲೆಲ್ಲ ಬೇಡವೆಂದರೂ ಆ ಪದ ನೆನಪಾಗುತ್ತದೆ. ಬಹಳ ವರ್ಷಗಳಿಂದ ತಮ್ಮ ಹಸಿ ಹಸಿ ಸಂಕಟಗಳ ಒಲೆಯಲ್ಲಿ ಬೇಯಿಸಿದ ಪದ್ಯಗಳನ್ನು ಬಿಸಿಬಿಸಿಯಾಗಿಯೇ ಓದುಗರಿಗೆ ಬಡಿಸುತ್ತಿರುವ ಬಿ.ಎಮ್. ಬಷೀರರ, ಪ್ರಸ್ತುತ ೨೨೩ ಹನಿಗವನಗಳನ್ನೊಳಗೊಂಡ ‘ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ..’ ಎಂಬ ಈ ‘ಪೆದಂಬು’ ಕೃತಿಯ ‘ಅರ್ಪಣೆ’ಯನ್ನು ಸ್ವೀಕರಿಸಲಿರುವ ಮೌಲ್ವಿಗಳ ಸಂಕಟವನ್ನು ನೆನಪಿಸಿಕೊಂಡರೆ ಮಾತ್ರ ‘ಪೆದಂಬು’ ಎಂದರೇನೆಂಬುದು  ಸರಿಯಾಗಿ ಅರ್ಥವಾಗಬಹುದೇನೋ.  

ಬೆತ್ತ ಹಿಡಿದು ಬಲವಂತದಿಂದ ಮದ್ರಸದಿಂದ ಹೊರದಬ್ಬಲ್ಪಟ್ಟ ಕಾರಣದಿಂದ ಆಸ್ತಿಕನಾಗಿ ಬದಲಾದ ಈ ಕವಿಯ ಕಣ್ಣೀರ ಹನಿಗಳು, ಬಾಗಿಲೇ ಇರಿಸದೆ ಮನೆ ಕಟ್ಟಿದವನವನೊಬ್ಬ, ಗೋಡೆಗಳ ಕಾರಣದಿಂದ ಹೊರಬರಲಾರದೆ, ‘ಒಂದಾದರೂ ಬಾಗಿಲು ಇಡಬೇಕಾಗಿತ್ತು’ ಎಂದು ಪರಿತಪಿಸುವವನ ಬಗ್ಗೆ ಕರುಣೆದೋರುತ್ತವೆ. ಕಾಗದದ ದೋಣಿಯೇರಿ ಬೆಂಕಿಯನದಿ ದಾಟಬಯಸುವ ಕವಿಗೆ ಬೀಳುವ ಕನಸಿನ ಸ್ವರ್ಗದಲ್ಲಿ ಧರ್ಮ ಬೋಧಕರಾರೂ ಕಾಣಿಸದಾದಾಗ ಅಚ್ಚರಿಯಾಗುತ್ತದೆ. ಭೂಮಿಯ ಮೇಲೆ ಕಟ್ಟಲಾದ ಮಂದಿರ, ಮಸೀದಿ, ಚರ್ಚುಗಳನ್ನು ಹಾದು ಬರುವ ಗಾಳಿ, ಉಬ್ಬಸ ತರಿಸುತ್ತದೆ.ನಿಜಭಕ್ತ ಮುಖ ಮಾಡಿದತ್ತ ‘ಕಾಬಾ’ ತಿರುಗುತ್ತದೆ ಎಂಬ ಕನಕನಂಬಿಕೆಯ ಕವಿಗೆ, ಅರಮನೆಗೆ ಮುಖಮಾಡಿ ಪ್ರಾರ್ಥನೆ ಸಲ್ಲಿಸುವ ಪುರೋಹಿತರ ಬಗ್ಗೆ ಭಯಂಕರ ಸಿಟ್ಟಿದೆ. ‘ಎಸೆಯುವುದೇ ಆದರೆ ಹಂದಿಮಾಂಸ, ಗೋಮಾಂಸಗಳನ್ನು ಮಂದಿರ-ಮಸೀದಿಗಳ ಪ್ರಾಂಗಣಕ್ಕೆಸೆಯದೆ, ಹಸಿದವನ ಮನೆಯ ಅಂಗಳಕ್ಕೆ ಎಸೆಯಿರಿ’ ಎಂದು ಪ್ರಾರ್ಥಿಸುವ ಇವರಿಗೆ, ಬಡಭಕ್ತನಿಗೆ  ಉಣ್ಣುವುದೂ ಒಂದು ಬಗೆಯ ಪ್ರಾರ್ಥನೆಯೆಂಬ ನಂಬಿಕೆಯಿದೆ.

ನರಕದ ಹೆಬ್ಬಾಗಿಲಲ್ಲಿ ದಾನಿಗಳ ಹೆಸರು ಕೆತ್ತುವ ಬಷೀರರ ಕವನಗಳನ್ನು ಓದುವುದು ತೀರಾ ಸುಲಭ ಮತ್ತು ಬಹಳ ಕಷ್ಟ. ‘ಹಸಿದ ನಾಯಿಗೆ ತುತ್ತು ಉಣಿಸಿದಾತನಿಗೆ ನೀನು ಸ್ವರ್ಗವನಿತ್ತೆ’ ಎಂಬ ಸುದ್ದಿ ಕೇಳಿದಂದಿನಿಂದ ಹಸಿದವರ ಕಣ್ಣುಗಳಲ್ಲಿ ನನ್ನ ಮಸೀದಿಯನ್ನು ಕಾಣುತ್ತಿದ್ದೇನೆ’ ಎನ್ನುವ ಅಪರೂಪದ ಈ ಪದಮಾಂತ್ರಿಕ,  ತುಂಬಿದಷ್ಟೂ `ಬೇಕು’ ಎನ್ನುವ ಗೋರಿಗಳ ಹಸಿವು ಇಂಗಿಸಲು ಹೆಣಗುವ ಸೂಲಗಿತ್ತಿಯಂತೆ ಕಾಣಿಸುತ್ತಾರೆ. ಅಭಿನಂದನೆಗಳು. 

-ಬೊಳುವಾರು
***
ಪ್ರತಿಗಳಿಗಾಗಿ ನೇರವಾಗಿ ನನ್ನನ್ನು ಸಂಪರ್ಕಿಸಬಹುದು.
B.M. BASHEER
A/C-NO-3 0 9 2 8 2 4 1 6 9 9
STATE BANK OF INDIA
PORT ROAD, MANGALORE BRANCH
IFSC CODE-SBIN 0 0 0 0 8 7 1
MOBILE-944 8835 621
iruveprakashana@gmail.com

ಈ ಅಕೌಂಟಿಗೆ ಪುಸ್ತಕ ಹಣವನ್ನು ಜಮಾಗೊಳಿಸಿ, ತಮ್ಮ ವಿಳಾಸವನ್ನು ಈ ಮೇಲ್ ಮೂಲಕ ಅಥವಾ ಮೊಬೈಲ್ ಮೆಸೇಜ್ ಮೂಲಕ ನೀಡಿದರೆ, ಕೊರಿಯರ್‌ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.
1. ಅಮ್ಮ ಹಚ್ಚಿದ ಒಲೆ-ಕವನ ಸಂಕಲನ- 100 ರೂ.
2. ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ-ಸೂಫಿಯ ಕಣ್ಣಲ್ಲಿ ಹನಿಗಳು -75 ರೂ. 
ಎರಡು ಪುಸ್ತಕಗಳಿಗೆ ಒಟ್ಟು 175 ರೂಪಾಯಿಯನ್ನು ನೀಡಬೇಕಾಗುತ್ತದೆ.

‘ಇರುವೆ ಪ್ರಕಾಶನ’ ನನ್ನ ಹೊಸ ಕನಸು!
ಕವನ ಸಂಕಲನಗಳು ನನ್ನ ವಿಶೇಷ ಮಕ್ಕಳು!!
ಇವೆರಡೂ ನಿಮ್ಮಿಂದ ವಿಶೇಷ ಪ್ರೀತಿಯನ್ನು ಬೇಡುತ್ತಿವೆ.


Sunday, November 29, 2015

ಅಲ್ಲಲ್ಲಿ ಮುಗ್ಗರಿಸುವ ಫಸ್ಟ್ ರ‍್ಯಾಂಕ್ ರಾಜು

ಶಿಕ್ಷಣ ವ್ಯವಸ್ಥೆಯನ್ನು ವ್ಯಂಗ್ಯ ಮಾಡಿ, ಟೀಕಿಸಿ, ವಿಮರ್ಶಿಸಿ ಹತ್ತು ಹಲವು ಚಿತ್ರಗಳು ಬಂದಿವೆ. ಹಿಂದಿಯಲ್ಲಿ ಮುನ್ನಾ ಭಾಯಿ ಎಂಬಿಬಿಎಸ್ ಮತ್ತು ತ್ರೀ ಈಡಿಯಟ್ ಸಿನಿಮ ವ್ಯಂಗ್ಯದ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಶಿಕ್ಷಣವ್ಯವಸ್ಥೆಯನ್ನು ಕಟ್ಟಿಕೊಟ್ಟಿವೆ.  ಒಂದು ಗಂಭೀರ ವಿಷಯವನ್ನು ಲವಲವಿಕೆಯ  ಮೂಲಕ ಹೇಗೆ ನಿರೂಪಿಸಬಹುದು ಎನ್ನುವುದಕ್ಕೆ ಈ ಎರಡು ಚಿತ್ರಗಳೇ ಅತ್ಯುತ್ತಮ ಉದಾಹರಣೆ. ಈ ಚಿತ್ರದ ಯಶಸ್ವಿಗೆ ಕಾರಣವಾದುದು ಗಟ್ಟಿಯಾದ ಚಿತ್ರಕತೆ. ಇಲ್ಲಿ ಎಲ್ಲೂ ಭಾಷಣಗಳಿಲ್ಲ. ಬರೇ ಘಟನೆಗಳ ಮೂಲಕವೇ ವಿಷಯವನ್ನು ಪ್ರೇಕ್ಷಕರ ಎದೆಗೆ ದಾಟಿಸುವ ನಿರ್ದೇಶಕನ ಜಾಣ್ಮೆ, ಚಿತ್ರದ ಯಶಸ್ಸಿಗೆ ಕಾರಣವಾಯಿತು. ಎಲ್ಲ ವರ್ಗದ ಪ್ರೇಕ್ಷಕರನ್ನೂ ಈ ಚಿತ್ರ ಸೆಳೆಯಿತು. 
ಕನ್ನಡದಲ್ಲೂ ಶಿಕ್ಷಣವ್ಯವಸ್ಥೆಯನ್ನು ವಸ್ತುವಾಗಿಟ್ಟುಕೊಂಡು ಹತ್ತು ಹಲವು ಚಿತ್ರಗಳು ಬಂದಿವೆ. ಆದರೆ ಅದು ಯಶಸ್ವಿಯಾಗಿರುವುದು ಕಡಿಮೆ. ಈ ಹಿನ್ನೆಲೆಯಲ್ಲಿ ‘ಫಸ್ಟ್ ರ‍್ಯಾಂಕ್ ರಾಜು’ ಹಲವು ಕಾರಣಗಳಿಗಾಗಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿತ್ತು. ಮೊದಲನೆಯದಾಗಿ ನರೇಶ್ ಅವರ ಮೊದಲ ನಿರ್ದೇಶನದ ಚಿತ್ರ ಇದು. ಜೊತೆಗೆ ಗುರುನಂದನ್ ಎನ್ನುವ ನವ ಯುವ ನಾಯಕ ನಟಿಸಿದ ಚಿತ್ರ. ಚಿತ್ರದ ಹೆಸರೂ ವಿಭಿನ್ನವಾದುದು. ಜೊತೆಗೆ ಶಿಕ್ಷಣವೆನ್ನುವ ಗಂಭೀರ ವಿಷಯವನ್ನು ಹಾಸ್ಯಮಯವಾಗಿ ಹೇಳುವುದಕ್ಕೆ ಹೊರಟಿದ್ದಾರೆ ನಿರ್ದೇಶಕರು. ಅಲ್ಲದೇ, ರಾಘವೇಂದ್ರ ರಾಜ್‌ಕುಮಾರ್‌ರಿಂದ ಹಿಡಿದು ಅನಂತನಾಗ್‌ವರೆಗೂ ಹಿರಿಯರೆನಿಸಿಕೊಂಡವರೆಲ್ಲ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಈ ಎಲ್ಲ ಕಾರಣಗಳಿಂದ ‘ರ‍್ಯಾಂಕ್ ಸ್ಟೂಡೆಂಟ್’ ಮಾಧ್ಯಮಗಳಲ್ಲಿ ಒಂದಿಷ್ಟು ಚರ್ಚೆಯಲ್ಲಿದ್ದ.
ಶಾಲೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ರ‍್ಯಾಂಕ್ ಗಳಿಸಿದಾಕ್ಷಣ ಆತ ಎಲ್ಲವನ್ನೂ ತಿಳಿದವನಾಗುವುದಿಲ್ಲ. ಶಾಲೆಯಲ್ಲಿ ಮೊದಲು ಪಾಠ ಕಲಿಸಲಾಗುತ್ತದೆ. ಕೊನೆಯಲ್ಲಿ ಎಕ್ಸಾಂ ಪಾಸ್ ಮಾಡಬೇಕಾಗುತ್ತದೆ. ಆದರೆ ಬದುಕು ಎನ್ನುವ ಪರೀಕ್ಷೆಯಲ್ಲಿ ಮೊದಲು ಎಕ್ಸಾಂ ಬರೆಯಬೇಕು. ಬಳಿಕ ಪಾಠ ಕಲಿಯಬೇಕು. ಈ ಸಾಲಿನ ತಳಹದಿಯ ಮೇಲೆ ಫಸ್ಟ್ ರ‍್ಯಾಂಕ್ ರಾಜು ಸಿನೆಮಾವನ್ನು ಮಾಡಲಾಗಿದೆ. ಇಲ್ಲಿ ಫಸ್ಟ್  ರ‍್ಯಾಂಕ್ ಗಳಿಸುವ ರಾಜು ಕಾಲೇಜಿನ ಹೊರಗಡೆ, ವಾಸ್ತವ ಬದುಕಿನ ಮುಂದೆ ಸದಾ ನಗೆಪಾಟಲಿಗೀಡಾಗಬೇಕಾಗುತ್ತದೆ. ಸದಾ ಫಸ್ಟ್  ರ‍್ಯಾಂಕ್‌ನ ಕಿರೀಟವಿಟ್ಟುಕೊಂಡೇ ಬೆಳೆದಿದ್ದ ಈತನಿಗೆ, ಮೊದಲ ಬಾರಿ ಸಂದರ್ಶನವೊಂದರಲ್ಲಿ ಭಾರೀ ಮುಖಭಂಗವುಂಟಾಗುತ್ತದೆ. ಎಲ್ಲ ಅರ್ಹತೆಯಿದ್ದರೂ ಆತ ಸಂದರ್ಶನದಲ್ಲಿ ತಿರಸ್ಕೃತನಾಗುತ್ತಾನೆ. ಅಲ್ಲಿಂದ ಆತ ಹೊರಗಿನ ಬದುಕಿನ ಪರೀಕ್ಷೆಗೆ ಕೂತು ಪಾಸಾಗುವುದಕ್ಕೆ ಹವಣಿಸುವುದೇ ಕತೆಯ ಮುಖ್ಯ ವಸ್ತು.
ಇದೊಂದು ಅಪ್ಪಟ ಹಾಸ್ಯಮಯ ಚಿತ್ರ. ರ‍್ಯಾಂಕ್ ಸ್ಟೂಡೆಂಟ್ ಆಗಿ ಆ ಪಾತ್ರವನ್ನು ಗುರುನಂದನ್ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದರೆ ಚಿತ್ರಕತೆ ಬಿಗಿಯಾಗಿಲ್ಲ. ಚಿತ್ರವನ್ನು ಇನ್ನಷ್ಟು ಕುತೂಹಲಕಾರಿಯಾಗಿ, ಲವಲವಿಕೆಯಿಂದ ಪ್ರೇಕ್ಷಕರ ಮುಂದಿಡುವ ಅವಕಾಶವನ್ನು ದುರ್ಬಲ ಚಿತ್ರಕತೆಯ ದೆಸೆಯಿಂದ ನಿರ್ದೇಶಕರು ಕಳೆದುಕೊಂಡಿದ್ದಾರೆ.  ಚಿತ್ರದ ಮೊದಲರ್ಧ ಒಂದಿಷ್ಟು ಹಾಸ್ಯಮಯವಾಗಿಯೇ ಓಡುತ್ತದೆ. ರಾಜುವಿನ ತಂದೆಯಾಗಿ ಅಚ್ಯುತ್ ಅವರ ಅಭಿನಯ ಚಿತ್ರಕ್ಕೆ ಪೂರಕವಾಗಿದೆ. ತಂದೆ ಮಗನ ಸಂಬಂಧವನ್ನು ಚಿತ್ರದಲ್ಲಿ ಆತ್ಮೀಯವಾಗಿ ಕಟ್ಟಿ ಕೊಡಲಾಗಿದೆ.  ಪೆದ್ದು ಪೆದ್ದು ರಾಜು,  ಬಳಿಕ ಸ್ಟೈಲ್‌ಕಿಂಗ್ ರಾಜ್ ಆಗಿ ಬದಲಾದಾಗಲೂ ಅಷ್ಟೇ ಇಷ್ಟವಾಗುತ್ತಾನೆ. ಗುರುನಂದನ್ ಮುದ್ದು ಮುಖಕ್ಕೆ ಗಾಂಧಿ ನಗರದಲ್ಲಿ ಭವಿಷ್ಯವಿದೆ. ಭವಿಷ್ಯದಲ್ಲಿ ದಿಗಂತ್‌ನ ಸ್ಥಾನವನ್ನು ಈತ ತುಂಬುವ ಎಲ್ಲ ಸಾಧ್ಯತೆಗಳೂ ಕಾಣುತ್ತಿವೆ. ಕೆಲವು ಭಾವನಾತ್ಮಕ ಸನ್ನಿವೇಶದಲ್ಲಿ ನಂದನ್ ಸೋತಂತೆ ಕಂಡರೂ ಶ್ರಮ ಈತನನ್ನು ಇನ್ನಷ್ಟು ಬೆಳೆಸುವುದರಲ್ಲಿ ಅನುಮಾನವಿಲ್ಲ. ಹಾಡು, ಸಂಗೀತ ಚಿತ್ರಕ್ಕೆ ಪೂರಕವಾಗಿದೆ. 
ಸಿನೆಮಾ ಯಾವತ್ತೂ ಭಾಷಣವಾಗಬಾರದು. ಚಿತ್ರದ ಕ್ಲೈಮಾಕ್ಸ್‌ನಲ್ಲಿ ನಾಯಕನ ಬಾಯಿಯಿಂದ ಶಿಕ್ಷಣದ ಕುರಿತಂತೆ ಭಾಷಣ ಹೊಡೆಸುವುದು ಹಿಂಸೆ ಎನಿಸುತ್ತದೆ. ಹಾಗೆಯೇ, ತಂದೆ ತನ್ನ ಮಗನಿಗೆ ಪ್ರೇಮ ಪಾಠವನ್ನು ಹೇಳಿಕೊಡುವುದು, ಅದಕ್ಕಾಗಿ ಸಾಧುಕೋಕಿಲನಂತಹ ಶನಿ ಪಾತ್ರಗಳನ್ನು ಬಳಸುವುದೆಲ್ಲ ಅತಿರೇಕವೆನಿಸುತ್ತದೆ. ಅಲ್ಲಲ್ಲಿ ಚಿತ್ರ ಎಡವುತ್ತ, ಮುಗ್ಗರಿಸುತ್ತಾ ಸಾಗುತ್ತದೆ. ಕೆಲವೆಡೆ ಬೋರ್ ಅನ್ನಿಸುತ್ತದೆ. ಕೆಲವೆಡೆ ಚಿತ್ರದ ಸನ್ನಿವೇಶಗಳು ಮನಸ್ಸನ್ನು ಥಕ್ ಎಂದು ಆವರಿಸಿಕೊಳ್ಳುತ್ತವೆ. ನಿರ್ದೇಶಕ ನರೇಶ್ ಅವರು ಇನ್ನಷ್ಟು ಪ್ರಯತ್ನ ಪಟ್ಟಿದ್ದರೆ, ಚಿತ್ರಕತೆಯಲ್ಲಿ ಇನ್ನಷ್ಟು ಶ್ರದ್ಧೆ ಕಾಳಜಿಯನ್ನು ತೋರಿಸಿದ್ದರೆ ಕನ್ನಡಕ್ಕೆ ಒಂದು ಒಳ್ಳೆಯ, ಸದಭಿರುಚಿಯ ಹಾಸ್ಯಮಯ ಚಿತ್ರ ದೊರಕಿದಂತಾಗುತ್ತಿತ್ತು.

Sunday, November 15, 2015

ಮಸೀದಿ ಧ್ವಂಸಗೈದವರಿಗೆ ಕೃತಜ್ಞನಾಗಿದ್ದೇನೆ

ನಾನು ನಮಾಝಿಗೆ ನಿಂತಲ್ಲೇ 
ನನ್ನ ಮಸೀದಿ 
ನನ್ನ ದೊರೆಗೆ ಬಾಗುವ ಮನಸಾದರೆ 
ಮಸೀದಿಯೇ ನನ್ನೆಡೆಗೆ ಓಡೋಡಿ ಬರೂದು 

ನನ್ನ ಮಸೀದಿಯನ್ನು ಧ್ವಂಸಗೈದವರಿಗೆ 
ಕೃತಜ್ಞನಾಗಿದ್ದೇನೆ 
ಈಗ ತೆರೆದ ಹಸಿರು ಬಯಲನ್ನೆ 
ಮಸೀದಿಯಾಗಿ ಹಾಸಿದ್ದೇನೆ 
ಹಿಮಾಲಯದ  ಬೆಟ್ಟಗಳೇ ಇಲ್ಲಿನ  ಮಿನಾರಗಳು 
ಮುಂಜಾವಿನ ಹಕ್ಕಿ ಕಲರವವೇ ನನ್ನ ಅಝಾನ್ 
ಚಲಿಸುತ್ತಿರುವ ಸೂರ್ಯನೇ ನನ್ನ ಕಾಬಾ 
ಹಿಂದೂ ಮಹಾಸಾಗರದ ತೀರದಲ್ಲಿ  ಕುಳಿತು 
ವುಜೂ ಮುಗಿಸಿ ಶುದ್ಧಿಯಾಗಿದ್ದೇನೆ 
ಈ ಮಸೀದಿಯ ವೈಭವಕ್ಕೆ ದಂಗಾಗಿದ್ದೇನೆ  
ನನ್ನ ದೊರೆಗೆ ಬಾಗಿದ್ದೇನೆ 

ಹಂದಿಯಿರಲಿ, ಗೋಮಾಂಸವಿರಲಿ 
ಎಸೆಯೂದೇನೋ ಎಸೆದು ಬಿಟ್ಟಿರಿ 
ಮಸೀದಿ, ದೇವಸ್ಥಾನದ ಮುಂದೆ ಯಾಕೆ ಎಸೆದಿರಿ? 
ಹಸಿದವನ ಮನೆಯ ಅಂಗಳಕ್ಕೆ ಎಸೆಯ ಬಹುದಿತ್ತು 

ಬಡವನ  ಮನೆ ಉರಿಯುವ ಬದಲು, 
ಒಲೆ ಉರಿಸಿದ ಪುಣ್ಯ ನಿಮ್ಮದಾಗುತ್ತಿತ್ತು