Saturday, November 22, 2014

ಬಾಯ್‌ಹುಡ್: ನೋವು, ನಲಿವುಗಳ ಮೆರವಣಿಗೆ

ಸಿನಿಮಾದ ಬೇರೆ ಬೇರೆ ಸಾಧ್ಯತೆಗಳನ್ನು ಹಾಲಿವುಡ್ ಪರಿಣಾಮಕಾರಿಯಾಗಿ ತನ್ನದಾಗಿಸಿ ಕೊಂಡು ಬೆಳೆಯುತ್ತಾ ಬಂದಿದೆ. ಬಾಯ್ ಹುಡ್ ಚಿತ್ರ  ಕೂಡ ಅಂಥಹದೆ ಒಂದು ಪ್ರಯೋಗದ ಮೂಲಕ ರೂಪ ಪಡೆದಿರುವ ಚಿತ್ರ. ಬಾಲ್ಯದಿಂದ ತಾರುಣ್ಯದ ಕಡೆಗೆ ಚಲಿಸುವ ಕಾಲವನ್ನು ಇಲ್ಲಿ ನಿರ್ದೇಶಕ ಅದರ ಜೊತೆ ಜೊತೆಗೆ ನಡೆಯುತ್ತಲೇ ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದಾನೆ. ಈ ಚಿತ್ರ ಬರೋಬ್ಬರಿ ೧೨ ವರ್ಷಗಳ ಕಾಲ ಚಿತ್ರೀಕರಣಗೊಂಡಿದೆ. ಒಬ್ಬ ಬಾಲಕ ಬೆಳೆಯುತ್ತಾ ತಾರುಣ್ಯಕ್ಕೆ ತಲುಪುವ ವರೆಗಿನ ಕಾಲಘಟ್ಟ ಇಲ್ಲಿದೆ. ಇಲ್ಲಿ ನಾಯಕ ಪಾತ್ರಕ್ಕೆ ಬೇರೆ ಬೇರೆ ನಟರನ್ನು ಆಯ್ದುಕೊಳ್ಳದೆ ಒಬ್ಬನೇ ಬಾಲ ನಟನನ್ನು ಬಳಸಿಕೊಂಡಿದ್ದಾರೆ. ಯುವಕನ ಪಾತ್ರವನ್ನು ಅವನೇ ನಟಿಸಿದ್ದಾನೆ. 

 ‘ಬಾಯ್‌ಹುಡ್’, ಈ ದಶಕದ ಅಪರೂಪದ ಚಿತ್ರಗಳಲ್ಲೊಂದೆಂಬುದನ್ನು ನಿಸ್ಸಂಕೋಚವಾಗಿ ಹೇಳಬಹುದು. ಕಥಾನಾಯಕ ಮೇಸನ್ (ಎಲ್ಲರ್ ಕಾಲ್ಟ್ರೇನ್) ಆರು ವರ್ಷದ ಬಾಲಕನಾಗಿರುವಾಗಿನಿಂದ ಹಿಡಿದು,ಆತ 18 ವರ್ಷದ ಕಾಲೇಜ್ ವಿದ್ಯಾರ್ಥಿಯಾಗುವವರೆಗಿನ ಆತನ ಬದುಕಿನ ನೋವು,ನಲಿವು, ತುಮುಲ,ತಲ್ಲಣಗಳ ಬದುಕನ್ನು ಈ ಚಿತ್ರವು ಹೃದಯಂಗಮವಾಗಿ ಪ್ರೇಕ್ಷಕರ ಮುಂದಿಡುತ್ತದೆ.

 ಈ ಚಿತ್ರವನ್ನು ಬರೋಬ್ಬರಿ 12 ವರ್ಷಗಳ ಕಾಲ, ಒಂದೇ ತಾರಾಬಳಗದೊಂದಿಗೆ ಚಿತ್ರೀಕರಿಸಿರುವ ನಿರ್ದೇಶಕ ರಿಚರ್ಡ್ ಲಿಂಕ್‌ಲೇಟರ್ ಸಾಧನೆ ಬೆರಗುಮೂಡಿಸುತ್ತದೆ.
ಮಾನವ ಬೆಳೆದಂತೆಲ್ಲಾ ಸಂದರ್ಭಕ್ಕೆ ತಕ್ಕಂತೆ ಆತನ ವ್ಯಕ್ತಿತ್ವವು ಹೇಗೆ ರೂಪುಗೊಳ್ಳುತ್ತಾ ಹೋಗುತ್ತದೆ ಯೆಂಬುದನ್ನು ಬಹಳ ಮಾರ್ಮಿಕವಾಗಿ ತೋರಿಸಿದ್ದಾರೆ. ಹೀಗೆ ಈ ಚಿತ್ರದ ತಾರೆಯರು, ಸಿನೆಮಾ ಮುಂದಕ್ಕೆ ಸಾಗಿದಂತೆ ನಮ್ಮ ಕಣ್ಣೆದುರೇ ಬೆಳೆಯುತ್ತಾ ಹೋಗುವುದು ವಾಸ್ತವಕ್ಕೆ ತೀರ ಹತ್ತಿರದ ಅನುಭವವನ್ನು ನೀಡುತ್ತದೆ.
    1995ರಲ್ಲಿ ತೆರೆಕಂಡ ಸೂಪರ್‌ಹಿಟ್ ಹಾಲಿವುಡ್ ಚಿತ್ರ ‘ಬಿಫೋರ್ ಸನ್‌ರೈಸ್’ನ ನಿರ್ದೇಶಕ ರಿಚರ್ಡ್ ಲಿಂಕ್‌ಲೇಟರ್, ‘ಬಾಯ್‌ಹುಡ್’ ಚಿತ್ರವನ್ನು ಹನ್ನೆರಡು ವರ್ಷಗಳ ಸುದೀರ್ಘ ಅವಧಿಗೆ, ಒಂದೇ ತಾರಾಬಳಗದೊಂದಿಗೆ ಚಿತ್ರಿಸುವ ಮೂಲಕ ಯಾವ ಸಿನೆಮಾ ತಂತ್ರಜ್ಞನೂ ಕನಸುಮನಸಿನಲ್ಲೂ ಯೋಚಿಸಿರದಂತಹ ಸಾಹಸ ಮಾಡಿದ್ದಾರೆ.
  ಈ ಚಿತ್ರಕ್ಕಾಗಿ ಲಿಂಕ್‌ಲೆಟರ್ ವಹಿಸಿದ್ದ ತಾಳ್ಮೆ ಹಾಗೂ ತೆಗೆದುಕೊಂಡಿರುವ ರಿಸ್ಕ್ ಪ್ರೇಕ್ಷಕರನ್ನು ಅಚ್ಚರಿಗೊಳಿಸುತ್ತದೆ. 2002ರಲ್ಲಿ ಚಿತ್ರೀಕರಣ ಆರಂಭವಾದಾಗ ಕಥಾನಾಯ ಕ ಎಲ್ಲಾರ್‌ಕೊಲ್ಟ್ರೇನ್‌ಗೆ ಕೇವಲ ಏಳು ವರ್ಷ ವಯಸ್ಸು. ಆ ಸಮಯದಲ್ಲಿ 12 ವರ್ಷಗಳ ಬಳಿಕ ಆತ ಹೇಗಿರಬಹುದೆಂಬ ನಿರ್ದೇಶಕರಿಗೆ ಯಾವುದೇ ಸುಳಿವು ಇರಲಾರದು. ಪತಿಯಿಂದ ಪರಿತ್ಯಕ್ತಳಾದ ಕೊಲ್ಟ್ರಿನ್‌ನ ತಾಯಿ ಒಲಿವಿಯಾಳ ಪಾತ್ರದಲ್ಲಿ ಪ್ಯಾಟ್ರಿಶಿಯಾ ಅರ್ಕ್ವೆಟ್ ಅದ್ಭುತವಾಗಿ ನಟಿಸಿದ್ದಾರೆ. ತನ್ನ ಇಬ್ಬರು ಮಕ್ಕಳ ಬದುಕಿನಲ್ಲಿ ಆಗೊಮ್ಮೆ ಈಗೊಮ್ಮೆ ಬಂದು ಬಿರುಗಾಳಿ ಎಬ್ಪಿಸಿ ಹೋಗುವ ಪರಿತ್ಯಕ್ತ ತಂದೆಯ ಪಾತ್ರದಲ್ಲಿ ಎಥಾನ್ ಹಾಕ್ ನಟನೆಯೂ ಮೆಚ್ಚುಗೆ ಗಳಿಸುತ್ತದೆ. ಆದಾಗ್ಯೂ, ಚಿತ್ರದುದ್ದಕ್ಕೂ ಬಾಲನಟ ಎಲ್ಲಾರ್ ಕೊಲ್ಟ್ರೇನ್ ಪ್ರೇಕ್ಷಕರ ಮನಸ್ಸನ್ನು ಆವರಿಸಿಬಿಡುತ್ತಾನೆ. ಗೊಂದಲ, ಬಂಡಾಯ ಪ್ರವೃತ್ತಿ, ವೇದನೆ ಹಾಗೂ ಭಾವುಕತೆಯ ಸನ್ನಿವೇಶಗಳಲ್ಲಿ ಆತ ಅವಿಸ್ಮರಣೀಯವಾಗಿ ನಟಿಸಿದ್ದಾನೆ. ಇವನ ತುಮುಲ, ಸಂಕಟಗಳಲ್ಲಿ ನಾವು ಜೊತೆಯಾಗಿರುತ್ತೇವೆ.  ಕಥೆಗೆ ಅನುಗುಣವಾಗಿ ಈ ಚಿತ್ರವು ಡಾಕ್ಯುಮೆಂಟರಿ ಚಿತ್ರದ ಹಾಗೆ ಆಮೆನಡಿಗೆಯಲ್ಲಿ ಸಾಗುತ್ತದೆ. ಆದರೆ ಎರಡು ತಾಸುಗಳ ಈ ಚಿತ್ರವು ಭಾವನಾತ್ಮಕವಾಗಿ ನಮ್ಮನ್ನು ನಿಧಾನಕ್ಕೆ ಆವರಿಸಿಕೊಳ್ಳುತ್ತಾ, ಚಿತ್ರದ ಭಾಗವಾಗಿಸಿಕೊಳ್ಳುತ್ತದೆ. ಈ ಚಿತ್ರದಲ್ಲಿ ಕಥಾಪಾತ್ರಗಳ ದೈನಂದಿನ ಬದುಕಿನ ಉಜ್ವಲ ಕ್ಷಣಗಳು ಅತ್ಯಂತ ಸುಂದರ ವಾಗಿ ಮೂಡಿಬಂದಿವೆ.
‘‘ಇಂತಹದ್ದೊಂದು ಚಿತ್ರವನ್ನು ನೀವು ಹಿಂದೆಂದೂ ಕಂಡಿರಲಾರಿರಿ. ಪ್ರಾಯಶಃ ಮತ್ತೊಮ್ಮೆ ಕಾಣಲಾರಿರಿ’’ ಎಂದು ನಿರ್ದೇಶಕ ಲಿಂಕ್‌ಲೇಟರ್ ಹೇಳಿರುವುದು ಅಕ್ಷರಶಃ ನಿಜವೆಂದು ಚಿತ್ರ ನೋಡಿ ಹೊರಬಂದ ಪ್ರೇಕ್ಷಕನಿಗೆ ಮನವರಿಕೆಯಾಗುವುದು ಖಂಡಿತ.
 2002ನೆ ಇಸವಿಯಲ್ಲಿ ಆರು ವರ್ಷದ ಬಾಲಕ ಮೇಸನ್ ಹಾಗೂ ಆತನ ಸಹೋದರಿ ಸಮಂತಾ (ನಿರ್ದೇಶಕರ ಪುತ್ರಿ ಲೊರೆಲಿ ಲಿಂಕ್‌ಲೇಟ್) ಟೆಕ್ಸಾಸ್‌ನಲ್ಲಿರುವ ತಮ್ಮ ಮನೆಯಲ್ಲಿ ತುಂಟಾಟವಾಡುತ್ತಿರುವ ದೃಶ್ಯದೊಂದಿಗೆ ಚಿತ್ರ ಆರಂಭವಾಗುತ್ತದೆ. ಈ ಚಿಣ್ಣರ ತಾಯಿ ಒಲಿವಿಯಾ (ಪ್ಯಾಟ್ರಿಶಿಯಾ ಆರ್ಕ್ವೆಟ್) ಪತಿಯಿಂದ ಪರಿತ್ಯಕ್ತಳಾಗಿರುತ್ತಾಳೆ. ತನ್ನ ಮಕ್ಕಳನ್ನು ನೋಡಿಕೊಳ್ಳುವ ಪೂರ್ಣ ಜವಾಬ್ದಾರಿ ಈಕೆಯ ಹೆಗಲೇರಿರುತ್ತದೆ. ಅರ್ಧದಲ್ಲೇ ಕೈಬಿಟ್ಟಿರುವ ತನ್ನ ವ್ಯಾಸಂಗವನ್ನು ಪೂರ್ತಿಗೊಳಿಸಲು ಆಕೆ ಮಕ್ಕಳೊಂದಿಗೆ ಟೆಕ್ಸಾಸ್ ತೊರೆದು ಹ್ಯೂಸ್ಟನ್ ನಗರಕ್ಕೆ ಬಂದು ನೆಲೆಸುತ್ತಾಳೆ. ಹ್ಯೂಸ್ಟನ್‌ನಲ್ಲಿ, ಮೇಸನ್‌ನ ತಂದೆ, ಒಲಿಯಾಳ ಮಾಜಿ ಪತಿ (ಎಥಾನ್ ಹೌಕ್) ಮಕ್ಕಳನ್ನು ತನ್ನೊಂದಿಗೆ ಕರೆದೊಯ್ಯುತ್ತಾನೆ. ಆತನ ಹೊಣೆಗೇಡಿತನ ಹಾಗೂ ಅಲೆದಾಟದ ವರ್ತನೆಯನ್ನು ಕಂಡು ಒಲಿವಿಯಾ ಸಿಡಿಮಿಡಿಗೊಳ್ಳುತ್ತಾಳೆ. ತಮ್ಮ ತಂದೆತಾಯಿಗಳು ಹಾವುಮುಂಗುಸಿಗಳಂತೆ ತಮ್ಮ ಕಣ್ಣೆದುರೇ ಜಗಳವಾಡುವುದನ್ನು ಕಂಡು ಮಕ್ಕಳು ಬೆಚ್ಚಿಬೀಳುತ್ತಾರೆ. ಆನಂತರ ಒಲಿವಿಯಾ ಎರಡನೆ ವಿವಾಹವಾಗುತ್ತಾಳೆ. ಮೇಸನ್‌ನ ಬದುಕು ಇನ್ನೊಂದು ಆಯಾಮವನ್ನು ಪಡೆಯುತ್ತದೆ.

ಹೀಗೆ 6ನೆ ವಯಸ್ಸಿನಿಂದ 18ನೆ ವಯಸ್ಸಿನವರೆಗೆ ಮೇಸನ್ ಬೆಳೆದಂತೆ, ಆತನಿಗೆ ಎದುರಾಗುವ ನೋವು, ನಲಿವುಗಳಲ್ಲಿ, ಸುಖ, ದು:ಖಗಳಲ್ಲಿ ನಾವೂ ಸಹಭಾಗಿಗಳಾಗುತ್ತೇವೆ. ತನ್ನ ಹೆತ್ತವರ ಸಂಘರ್ಷ, ಒಡಹುಟ್ಟಿದವರೊಂದಿಗೆ ವೈಮನಸ್ಸು, ಮೊದಲ ಪ್ರೇಮ, ಆನಂತರ ಎದುರಿಸುವ ಪ್ರೇಮ ವೈಫಲ್ಯ ಇವೆಲ್ಲವೂ ಆತನನ್ನು ಓರ್ವ ಪರಿಪಕ್ವ ವ್ಯಕ್ತಿಯನ್ನಾಗಿ ರೂಪಿಸುತ್ತವೆ. . ಛಾಯಾಗ್ರಹಣವೂ ಉತ್ಕೃಷ್ಟವಾಗಿದ್ದು, ಚಿತ್ರದ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ.

ಏನೇ ಇರಲಿ, ನಿರ್ದೇಶಕ ಲಿಂಕ್‌ಲೇಟರ್ ಬಾಯ್‌ಹುಡ್ ಚಿತ್ರವನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರೆ. ನವಿರಾದ ಭಾವನೆಗಳನ್ನು ಮೂಡಿಸುತ್ತಲೇ ಈ ಚಿತ್ರವು ನಮ್ಮ ಮೇಲೆ ಗಾಢ ಪರಿಣಾಮವನ್ನು ಬೀರುತ್ತದೆ. ಸಣ್ಣಪುಟ್ಟ ಸಂಗತಿಗಳಲ್ಲೇ ಜೀವನದ ಸ್ವಾರಸ್ಯ ಅಡಗಿದೆಯೆಂಬುದನ್ನು ನಿರ್ದೇಶಕರು ಅತ್ಯಂತ ಸೊಗಸಾಗಿ ನಿರೂಪಿಸಿದ್ದಾರೆ.

1 comment:

  1. >> ಆಕೆ ಮಕ್ಕಳೊಂದಿಗೆ ಟೆಕ್ಸಾಸ್ ತೊರೆದು ಹ್ಯೂಸ್ಟನ್ ನಗರಕ್ಕೆ ಬಂದು ನೆಲೆಸುತ್ತಾಳೆ.
    ಹ್ಯೂಸ್ಟನ್ ಇರೋದು ಕೂಡ ಟೆಕ್ಸಾಸ್ ರಾಜ್ಯದಲ್ಲಿಯೇ...

    ReplyDelete