ಸ್ವಚ್ಛತಾ ಆಂದೋಲನ
ಅವನು ತನ್ನ ಮನೆ ಮುಂದಿನ ಬೀದಿಯನ್ನು ದಿನಾ ಗುಡಿಸಿ ಸ್ವಚ್ಛವಾಗಿಡುತ್ತಿದ್ದ. ಒಂದು ದಿನ ಇದ್ದಕ್ಕಿದ್ದಂತೆಯೇ ಮುನ್ಸಿಪಾಲಿಟಿ ವ್ಯಾನ್ ಬಂದು ಒಂದಿಷ್ಟು ಕಸ ಸುರಿಯಿತು.
‘‘ಏನಯ್ಯ ಇದು?’’ ಅವನು ಕೇಳಿದ.
‘‘ನಾಳೆ ಗಾಂಧೀಜಯಂತಿ ಹೆಸರಲ್ಲಿ ಸ್ವಚ್ಛತಾ ಆಂದೋಲನ ನಡೆಯುತ್ತದೆ. ಮಿನಿಸ್ಟರ್ ಬಂದು ಕಸ ಗುಡಿಸಲಿದ್ದಾರೆ. ಮಿನಿಷ್ಟರ್ ಬರೋವರೆಗೆ ಇದನ್ನು ಗುಡಿಸಿದರೆ ಹುಷಾರ್!’’ ಅವನು ಉತ್ತರಿಸಿದ.
ಕಾಗೆಗಳು
ಪಕ್ಷದ ಕಚೇರಿಯಲ್ಲಿ ‘ಕಮ್ಯುನಿಸಂ ಎಂದರೇನು?‘ ಎನ್ನುವುದನ್ನು ತನ್ನ ನಾಯಕನಿಂದ ಗಂಟೆಗಟ್ಟಳೆ ಕೊರೆಸಿಕೊಂಡ. ಆದರೂ ತಲೆ ಬುಡ ಅರ್ಥವಾಗಲಿಲ್ಲ.
ತಲೆಗೆಟ್ಟು ಮನೆಗೆ ಬಂದ ಮಗನನ್ನು ಅಪ್ಪ ಪ್ರೀತಿಯಿಂದ ಬಳಿಗೆ ಕರೆದ. ಬಳಿಕ ಅಂಗಳದ ಕಡೆಗೆ ಕೈ ತೋರಿಸಿ ಹೇಳಿದ ‘‘ನೋಡು, ಇದೇ ಕಮ್ಯುನಿಸಂ’’
ಅಲ್ಲಿ ಕಾಗೆಗಳು ಜೊತೆಯಾಗಿ ಹಂಚಿ ತಿನ್ನುತ್ತಿದ್ದವು.
ಕಳ್ಳರು
ಶ್ರೀಮಂತನ ಮನೆಯ ಕಾಂಪೌಂಡ್‌ಗೆ ಕಳ್ಳರು ನುಗ್ಗಿದರು.
ಆತ ಪೊಲೀಸರನ್ನು ಕರೆದ. ಕೋವಿ ಸಮೇತ ಬಂದ ಪೊಲೀಸರು ಕಳ್ಳರನ್ನು ಗುಂಡಿಟ್ಟುಕೊಂದರು.
ಬಡವನ ಜಮೀನಿಗೆ ಕಳ್ಳರು ನುಗ್ಗಿದರು.
ಪೊಲೀಸರು ಬಂದರು. ತಡೆದ ಬಡವನನ್ನು ಗುಂಡಿಟ್ಟು ಕೊಂದರು.
ವಿಷಯ
‘‘ಹೇ...ವಿಷಯ ಗೊತ್ತಾಯಿತಾ? ಅವತ್ತು ಹಿಂದೂ ಹುಡುಗಿ ಮತ್ತು ಮುಸ್ಲಿಮ್ ಹುಡುಗ ಮದುವೆ ಮಾಡ್ಕೊಂಡು ಓಡಿ ಹೋದ್ರಲ್ಲ...’’
‘‘ಹೌದು...ಏನಾಯಿತು? ಎಂತ ಕಥೆ?’’
‘‘ಅವರಿಗೀಗ ಮುದ್ದಾದ ಇಬ್ಬರು ಮಕ್ಕಳಂತೆ’’
ಬಂಗಾರದ ಮಂಚ
ಶ್ರೀಮಂತನೊಬ್ಬ ವಿದೇಶದಿಂದ ಬಂಗಾರದ ಮಂಚವೊಂದನ್ನು ಮಾಡಿಸಿ ತರಿಸಿದ. ಎಲ್ಲರನ್ನೂ ಕರೆದು ಆ ಮಂಚವನ್ನು ತೋರಿಸಿದ. ಎಲ್ಲರೂ ಬೆಕ್ಕಸ ಬೆರಗಾದರು.
ರಾತ್ರಿ ಆ ಮಂಚದಲ್ಲಿ ಮಲಗಿದ ಶ್ರೀಮಂತನಿಗೆ ನಿದ್ದೆಯೇ ಇಲ್ಲ. ಹೊರಳಾಡಿ ಸುಸ್ತಾಗಿ, ಎದ್ದು ಹೊರ ಬಂದ.
ಅಂಗಳದಲ್ಲಿ ಮಂಚವನ್ನು ಹೊತ್ತು ತಂದ ಕೆಲಸದಾಳು ಗೋಣಿ ರಾಶಿಯ ಮೇಲೆ ಗೊರಕೆ ಹೊಡೆಯುತ್ತಿದ್ದ.
Sir When i read your Vishaya, i rem this.
ReplyDeleteಏನಾಗುತ್ತೆ?
ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು
ಮದುವೆಯಾದರೆ ಏನಾಗುತ್ತೆ?
ಏನೂ ಆಗೊಲ್ಲ,
ಮುದ್ದಾದ ಎರಡು ಮಕ್ಕಳಾಗುತ್ತೆ!
ರಾಮನನ್ನು ಅಲ್ಲಾಹುವಿನ ಪಕ್ಕದಲ್ಲಿ
ಇಟ್ಟರೆ ಏನಾಗುತ್ತೆ?
ಏನೂ ಆಗೊಲ್ಲ,
ಶಕ್ತಿ-ಭಕ್ತಿ ಎರಡೂ ಹೆಚ್ಚಾಗುತ್ತೆ!
ಹಿಂದೂಸ್ಥಾನ-ಪಾಕಿಸ್ಥಾನ
ಒಂದಾದರೆ ಏನಾಗುತ್ತೆ?
ಏನೂ ಆಗೊಲ್ಲ,
ಅಶಾಂತಿ ಆತಂಕ ಕಮ್ಮಿಯಾಗುತ್ತೆ!
ಹೇಳು... ಏನಾಗುತ್ತೆ, ಏನಾಗುತ್ತೆ?
ಹಿಂದೂಸ್ಥಾನ-ಪಾಕಿಸ್ಥಾನ ಒಂದಾದರೆ ಏನಾಗುತ್ತೆ?
ಏನೂ ಆಗೊಲ್ಲ,
ಒಂದು ಹಳೆಯ ರೋಗ ವಾಸಿಯಾಗುತ್ತೆ!
--ಸವಿತಾ ನಾಗಭೂಷಣ
ಪಾಕಿಸ್ತಾನವನ್ನು ಒಡೆದುಕೊಂಡು ಹೋದವರಿಗೆ ಸದ್ಬುದ್ಧಿ ಬರಲಿ ಎಂದು ಹಾರೈಸುತ್ತೇನೆ.
Deleteಪಾಕಿಸ್ತಾನಿಯರು ಯಾರು? ಅವರು ಭೂತಗಳೇ? ಸ್ವಾತಂತ್ರ್ಯ ಪೂರ್ವದ ಭಾರತೀಯರು ತಾನೇ ಅವರು? ಪ್ರೀತಿಯಿಂದ ಬರ ಮಾಡಿಕೊಂಡರೆ ಒಂದಾಗದೇ ಹೋದರೂ ಒಗ್ಗಟ್ಟಾಗಬಹುದು. ಸ್ನೇಹಿತರಾಗಿ ಬಾಳಬಹುದು.
ReplyDeleteಪ್ರೀತಿಯಿಂದ ಗೆಲ್ಲಲು ಅಸಾಧ್ಯವಾದುದು ಯಾವುದಿದೆ ಈ ಜಗತ್ತಿನಲ್ಲಿ?