Monday, March 26, 2012

ಗೋಲ್ಡನ್ ಬೀಚ್ ಕಡಲ ದಂಡೆಯಲ್ಲಿ ಕೆಲವು ಪಾಠಗಳು....

ಪತ್ರಕರ್ತ, ಕವಿ. ದಿ. ಬಿ. ಎಂ. ರಶೀದ್ ಅವರು ಬರೆದ ಕವಿತೆ. ‘ಪರುಷಮಣಿ’ ಕೃತಿಯಿಂದ ಆರಿಸಿಕೊಳ್ಳಲಾಗಿದೆ.

1
ಇಳಿದರೆ ಉಪ್ಪು-
ಮೈಯೆಲ್ಲಾ ಅಂಟು
ಅಡಿಯಿಟ್ಟರೆ ನುಂಗುವ ಆಳ...
ಎತ್ತಿ ಕುಕ್ಕುವ ಅಲೆ
ಕೂತು ನೋಡುವುದೇ ಚೆಂದವೆನಿಸಿತು

2
ನಿನ್ನ ಉಲ್ಲಾಸಕ್ಕೆ ಅಲೆಗಳು;
ನಿನ್ನ ನಗುವಿನ ಶುಭ್ರತೆಗೆ
ನೊರೆಗಳು ನಾಚಿಕೊಂಡವು
ಹೆಮ್ಮೆ ಪಡದಿರು ಹುಡುಗಿ...
ನಿನ್ನನ್ನು ನಿರ್ನಾಮಗೊಳಿಸುವ ಹಗೆಯಿಂದ ಭುಸುಗುಟ್ಟಿ
ಹವಣಿಸಿದ ಅಲೆಗಳ ಸಂಚುಗಳು
ನಿನ್ನ ಗಮನಕ್ಕೆ ಬಂದಿದ್ದರೆ...?

3
ಅದೆಷ್ಟೋ
ಕಸುವಿಂದ ಛಲತೊಟ್ಟು
ಈಸಿದ ಕೈಗಳು;
ಹಾಯಿ ಕಡಿದು
ದಿಕ್ಕೆಟ್ಟು ನಡೆದ ದೋಣಿಗಳು;
ನೆಲ ಮುಗಿಲ ನಡುವೆ
ಜೀಕುವ ತಳ ಮುರಿದ ಹಡಗುಗಳೆಲ್ಲವ
ನುಂಗಿ ನೊಣೆದ ಈ ಕಡಲು-
ನಿರಂತರ ತೊಡೆ ತಟ್ಟಿ ಕರೆವ
ಶತ್ರುವಿನ ಸವಾಲು:
‘ಬಾ ನನ್ನ ಗೆಲ್ಲು...’
ನನ್ನಲ್ಲಿರಲಿಲ್ಲ ಹತಾರು-ತಾಲೀಮು
ನಾನೆತ್ತಲಿಲ್ಲ ಸೊಲ್ಲು
ನೀನು ನಸು ನಕ್ಕು ನಡೆದೆ
ಕಡಲನ್ನೇ ಬೊಗಸೆಯೆತ್ತಿ ಕುಡಿದೆ
ನಿನ್ನ ಕಿರು ನಗೆಗೆ 
ಕಡಲು ಸೋತದ್ದು ಹೇಗೆ...?

4
ನೀನು ಮತ್ತು ಕಡಲು
ಕಡಲೊಳಗೆ ನೀನು
ನಿನ್ನೊಳಗೆ ಕಡಲು
ಪರಸ್ಪರ ಕಡಲು
ಪರಸ್ಪರ ಕರಗುವ ಆಳ
ಉಪಮೆ ಯಾರಿಗೆ ಯಾರು ಹೇಳು...?

(ಜುಲೈ 21, 1993)
ಲಂಕೇಶ್ ಪತ್ರಿಕೆ

2 comments:

  1. kavanagalu channagive sahebare !!

    www.suragange.blogspot.com

    ReplyDelete
  2. ಒಳ್ಳೆ ಪದ್ಯ ಸಾರ್..
    -ಮಂಜು

    ReplyDelete