Sunday, March 25, 2012

ನೆನಪು ಮತ್ತು ಇತರ ಕತೆಗಳು

 ತಪ್ಪು
ವಿಜ್ಞಾನಿಗಳು ಹಾರಿಸಿದ ಉಪಗ್ರಹ ವಿಫಲಗೊಂಡು ಅರ್ಧದಲ್ಲೇ ಸ್ಫೋಟಗೊಂಡಿತು.
ವಿಜ್ಞಾನಿಗಳೆಲ್ಲರೂ ತಕ್ಷಣ ಸಭೆ ಸೇರಿದರು.
ವೈಫಲ್ಯಕ್ಕೆ ಕಾರಣಗಳನ್ನು ಹುಡುಕಲಾಯಿತು.
 ಅಷ್ಟರಲ್ಲಿ ಒಬ್ಬ ಸಹಾಯಕ ವಿಜ್ಞಾನಿ ಹೆದರುತ್ತಾ ಹೇಳಿದ ‘‘ಸಾರ್...ಒಂದು ವಿಷಯದಲ್ಲಿ ವಿಜ್ಞಾನಿಗಳ ಲೆಕ್ಕ ತಪ್ಪಿ ಹೋಯಿತು’’
‘‘ಯಾವ ವಿಷಯದಲ್ಲಿ?’’ ಹಿರಿಯ ವಿಜ್ಞಾನಿ ಕೇಳಿದ.
‘‘ನಮ್ಮ ಎಣಿಕೆ ತಪ್ಪಿದೆ. ರಾಹುಕಾಲ ಮುಗಿಯುವ ಮೊದಲೇ ಉಪಗ್ರಹವನ್ನು ಹಾರಿಸಿ ಬಿಡಲಾಯಿತು...’’
ಹಿರಿಯ ವಿಜ್ಞಾನಿ ಒಮ್ಮೆಲೆ ಸ್ಫೋಟಗೊಂಡ
‘‘ಇಷ್ಟು ದೊಡ್ಡ ತಪ್ಪು ಹೇಗೆ ನಡೆಯಿತು? ತಕ್ಷಣ ತನಿಖೆ ನಡೆಸಿ ವರದಿ ನೀಡಿ’’
 
ನೆನಪು
‘‘ಪ್ರತಿ ದೀಪಾವಳಿಗೆ ಅಮ್ಮ ನನಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದಳು...ನನಗೆ ಎಣ್ಣೆ ಎಂದರೆ ಅಮ್ಮನ ನೆನಪಾಗುತ್ತೆ....’’ ಆತ ದೀಪಾವಳಿ ದಿನ ಭಾವುಕನಾಗಿ ಹೇಳಿದ.
ಪತ್ನಿ ತನಗೆ ತಾನೆ ಪಿಸುಗುಟ್ಟಿದಳು ‘‘ಹೌದು ನನಗೂ ಎಣ್ಣೆ ಎಂದರೆ ಅತ್ತೆಯ ನೆನಪಾಗುತ್ತೆ...ಸೀಮೆಎಣ್ಣೆ ಎಂದರೆ....’’ ಕನ್ನಡಿಯಲ್ಲಿ ಹಳೆಯ ಸುಟ್ಟ ಗಾಯಗಳನ್ನೊಮ್ಮೆ ನೋಡಿಕೊಂಡಳು.

ಕನ್ನಡಿ
ಅವನ ಕಣ್ಣಿನ ಕನ್ನಡಿ ಆಕಸ್ಮಿಕವಾಗಿ ಒಡೆಯಿತು.
ಆದರೆ ಕೈಯಲ್ಲಿ ಪುಸ್ತಕವಿದೆ. ಅತ್ಯಂತ ಆಸಕ್ತಿಯಿಂದ ಓದುತ್ತಿರುವ ಪುಸ್ತಕ.
ಅವನು ಒಡೆದ ಕನ್ನಡಿಯನ್ನು ಜೋಡಿಸಲು ಯತ್ನಿಸಿದ.
ಅಕ್ಷರಗಳೆಲ್ಲ ಒಡೆದಂತೆ. ಕಣ್ಣೆಲ್ಲ ಮಂಜು ಮಂಜು...
ಎದುರಿನಲ್ಲಿ ಪತ್ನಿ ನಿಂತಿದ್ದಾಳೆ
‘‘ಏನಾಯ್ತು...?’’
‘‘ಕನ್ನಡಿ ಒಡೆಯಿತು ಕಣೇ...ಓದುವುದಕ್ಕೆ ಆಗುತ್ತಿಲ್ಲ....’’
‘‘ಒಂದೆರಡು ದಿನ ಪುಸ್ತಕ ಬದಿಗಿಡಿ. ನನ್ನ ಮುಖವನ್ನು ಓದಿ. ಇದನ್ನು ಓದುವುದಕ್ಕೇನು ಕನ್ನಡದ ಅಗತ್ಯವಿಲ್ಲವಲ್ಲ’’ ಪತ್ನಿ ನುಡಿದಳು.

ರಾಜ
ಅವನೊಬ್ಬ ರಾಜವಂಶಸ್ಥ. ಈಗ ಮಾತ್ರ ಗುಡಿಸಲಲ್ಲಿದ್ದಾನೆ.
ಅವನಿಗೆ ತನ್ನ ಗುಡಿಸಲಿನ ಕುರಿತಂತೆ ಕೀಳರಿಮೆ. ರಾಜನ ವಂಶಸ್ಥನೊಬ್ಬ ಗುಡಿಸಲಲ್ಲಿರುವುದೇ. ಅವನಿಗೆ ತೀರಾ ಅವಮಾನವಾಗುತ್ತಿತ್ತು.
ಒಂದು ದಿನ ತನ್ನ ಗುಡಿಸಲಿಗೆ ತಾನೇ ಬೆಂಕಿ ಕೊಟ್ಟ.
ಬಳಿಕ ತನಗೆ ತಾನೆ ಹೇಳಿದ ‘‘ಈಗ ನಾನು ನಿಜಕ್ಕೂ ರಾಜ. ಇನ್ನು ನಾನು ಬಡವನೆಂದು ಸಾರುವ ಯಾವ ವಸ್ತುವು ನನ್ನಲ್ಲಿಲ್ಲ’’

ಹಾಡು
‘‘ಸ್ವಲ್ಪ ಹಾಡನ್ನು ಮೆಲ್ಲಗಿಡುತ್ತೀರಾ?’’ ಅವನು ಮನವಿ ಮಾಡಿದ.
‘‘ಯಾಕೆ, ಯಾಕೆ ಹಾಡನ್ನು ಮೆಲ್ಲ ಮಾಡಬೇಕು..ನಮಗೆ ಹಾಡನ್ನು ಕೇಳಬೇಕು’’ ಅವರು ಗದರಿಸಿದರು.
‘‘ಹೌದು, ನನಗೂ ಹಾಡನ್ನು ಕೇಳಬೇಕಾಗಿದೆ....’’ ಅವನು ಉತ್ತರಿಸಿದ.

ಇಷ್ಟ
ಒಂದು ಹಂಸ ಕೊಳದಲ್ಲಿ ಬಳುಕುತ್ತಿತ್ತು. ಅಲ್ಲೇ ಒಂದು ಬಿಳಿ ಕಾಗೆ ಓಡಾಡುತ್ತಿತ್ತು. ಎಲ್ಲರೂ ಹಂಸವನ್ನು ಬಿಟ್ಟು ಕಾಗೆಯೆಡೆಗೆ ನೋಡತೊಡಗಿದರು ‘‘ಬಿಳಿ ಕಾಗೆ ಬಿಳಿಕಾಗೆ..’’ ಎಂದು ಮಕ್ಕಳು ಬೊಬ್ಬಿಡತೊಡಗಿದರು.
ಕಾಗೆ ಇದನ್ನು ನೋಡಿ ಬೀಗಿತು ‘‘ನೋಡಿದೆಯಾ ಹಂಸ...ಜನ ಈಗೀಗ ಕಾಗೆಯನ್ನು ಇಷ್ಟ ಪಡಲು ತೊಡಗಿದ್ದಾರೆ’’
ಹಂಸ ನಕ್ಕು ಹೇಳಿತು ‘‘ಜನ ಇಷ್ಟಪಡುತ್ತಿರುವುದು ಕಾಗೆಯನ್ನಲ್ಲ. ನಿನ್ನಲ್ಲಿರುವ ಹಂಸದ ಬಣ್ಣವನ್ನು...’’

ಮಳೆ
ಶಿಷ್ಯನೊಬ್ಬ ಕೂಗಿದ ‘‘ಮಳೆ ಬರ್ತಾ ಇದೆ...ಒಳಗೆ ಬನ್ನಿ....’’
 ಅಷ್ಟರಲ್ಲಿ ಆಶ್ರಮದೊಳಗಿದ್ದ ಸಂತ ಅಂಗಳಕ್ಕೆ ಬಂದು ಕೂಗಿದ ‘‘ಮಳೆ ಬರ್ತಾ ಇದೆ...ಎಲ್ಲರೂ ಹೊರಗೆ ಬನ್ನಿ...’’

 
ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

2 comments:

  1. ತಪ್ಪು : ವಿಜ್ಞಾನದಲ್ಲಿ ಮೂಡನಂಬಿಕೆಯ ಕರಾಮತ್ತೇ...? ಹಹಹಹಾ...

    ನೆನಪು: ಯಾಕೋ ಮನಸ್ಸು ವಿಕ್ವಲವಾಯಿತು.

    ಕನ್ನಡಿ: ಆಕೆ ಇನ್ನೆಂತ ಪತಿಯನ್ನು ಪ್ರೀತಿಸುವ ನಾರಿ ಮಾರಾಯ್ರೇ! ತಾನು ಬೇರೆಯಲ್ಲ ತನ್ನ ಪತಿ ಅದನ್ನೇ ಓದಿದರಾಯ್ತು ಎನ್ನುವಷ್ಟು ಸಹೃದಯೀ... ಈ ಕಾಲದಲ್ಲೂ...

    ರಾಜ : ಅಹಾ...

    ಹಾಡು : ನಿಜ ಹಾಡು ಕಿವಿಗಡಚಿಕ್ಕುವಂತ್ರ ಬಾರದು!

    ಇಷ್ಟ : ಇದು ಲೌಕಿಕ ಸತ್ಯ.

    ಮಲೆ : ಅಯ್ಯೋ ಹಥ ವಿಧಿ!!!!

    ನನ್ನ ಬ್ಲಾಗಿಗೂ ಬನ್ನಿರಿ.

    ReplyDelete
  2. ನನಗೆ ’ರಾಜ’ ಕತೆ ತುಂಬ ಇಷ್ಟ ಆಯ್ತು!!
    ಮಾಲತಿ ಎಸ್.

    ReplyDelete