Wednesday, July 20, 2011

ಮುಗಿಯದ ಬದುಕಿನ ಇನ್ನಷ್ಟು ಕತೆಗಳು

















ಓಟ
ಆತ ವೇಗದ ಓಟಗಾರ.
ಅದೆಷ್ಟೋ ಓಟಗಳಲ್ಲಿ ಭಾಗವಹಿಸಿದ್ದ.
ಬೇರೆ ಬೇರೆ ಓಟಗಳಲ್ಲಿ ಗೆಲ್ಲುತ್ತಾ, ಅವನು ಮುದುಕನಾದ. ಅವನ ಬೆನ್ನು ಬಾಗಿತು. ಕಾಲು ನಡುಗತೊಡಗಿತು.
ಒಂದು ದಿನ ಆತ ಒಂದು ಓಣಿಯಲ್ಲಿ ನಡೆಯುತ್ತಿದ್ದ. ಅವನಿಗೆ ಇನ್ನೊಬ್ಬ ಮುದುಕ ಮಾತುಕತೆಗೆ ಜೊತೆಯಾದ.
ಓಟಗಾರ ಹೆಮ್ಮೆಯಿಂದ ಹೇಳಿದ ‘‘ನಾನು ನನ್ನ ಕಾಲದ ವೇಗದ ಓಟಗಾರ. ಹಲವು ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಓಟದಲ್ಲಿ ನನ್ನನ್ನು ಮೀರಿಸಿದವರೇ ಇಲ್ಲ’’
‘‘ಹೌದೆ? ಅದೆಷ್ಟು ಓಟಗಳಲ್ಲಿ ನೀನು ಭಾಗವವಹಿಸಿದ್ದೀಯ?’’ ಇನ್ನೊಬ್ಬ ಮುದುಕ ಕೇಳಿದ
‘‘ಲೆಕ್ಕವಿಲ್ಲದಷ್ಟು’’ ಈತ ಹೇಳಿತ
‘‘ಅಶ್ಚರ್ಯ! ಅಷ್ಟು ವೇಗದ ಓಟಗಾರನಾಗಿದ್ದರೂ ನೀನು ಇನ್ನೂ ಎಲ್ಲಿದ್ದೀಯೋ ಅಲ್ಲೇ ಇದ್ದೀ. ಒಂದು ಮೈಲು ಕೂಡ ಮುಂದೆ ಹೋಗಿಲ್ಲ. ನಾನು ನೋಡು...ನಿಧಾನಕ್ಕೆ ನಡೆಯುತ್ತಾ ನಡೆಯುತ್ತಾ ಇಲ್ಲಿಯವರೆಗೆ ಬಂದಿದ್ದೇನೆ. ಯಾರೂ ಊಹಿಸದಷ್ಟು ದಾರಿಯನ್ನು ಈಗಾಗಲೇ ಮುಗಿಸಿದ್ದೇನೆ...’’

ಮರ
ಸಂತನನ್ನು ಭೇಟಿ ಮಾಡಲೆಂದು ಅದೆಷ್ಟೋ ದೂರದಿಂದ ಬಂದಿದ್ದ. ಸಂತನ ಆಶ್ರಮದಲ್ಲಿ ಉಳಿದ. ಸುಮಾರು ಹತ್ತು ದಿನಗಳ ಕಾಲ ಸಂತನ ಹಿಂದೆ ಅಲೆದ. ಆದರೆ ಆತನಿಗೆ ಸಂತನ ಕುರಿತಂತೆ ನಿರಾಶೆಯಾಯಿತು. ಇವನೇನೋ ಪವಾಡ ಪುರುಷನೆಂದು ಇವನ ಶಿಷ್ಯತ್ವವನ್ನು ಸ್ವೀಕರಿಸಲು ಬಂದರೆ, ಈತನಲ್ಲಿ ಯಾವ ವೈಶಿಷ್ಟವೂ ಕಾಣುತ್ತಿಲ್ಲ ಎಂದು ಆತ ಒಳಗೊಳಗೆ ಮರುಗತೊಡಗಿದ.
ಒಂದು ದಿನ ಸಂತ ಎದುರಾದಾಗ ಕೇಳಿಯೇ ಬಿಟ್ಟ ‘‘ಗುರುಗಳೇ ನಿಮಗೇನಾದರೂ ಪವಾಡ ಬರುತ್ತದೆಯೆ?’’ ಸಂತ ನಿರ್ಲಿಪ್ತನಾಗಿ ಉತ್ತರಿಸಿದ ‘‘ಇಲ್ಲವಲ್ಲ’’
‘‘ಛೆ...ನಾನು ನಿಮ್ಮನ್ನು ಏನೇನೋ ಕಲ್ಪಿಸಿ ಗುರುವಾಗಿ ಸ್ವೀಕರಿಸಲು ಬಂದೆ. ಕ್ಷಮಿಸಿ ನಾನು ಹೊರಟು ಹೋಗುತ್ತಿದ್ದೇನೆ...’’ ಅವನು ಹೇಳಿದ.
ಸಂತ ನಕ್ಕು ಹೇಳಿದ ‘‘ನೋಡು...ಅಲ್ಲಿ ನಿಂತಿದೆಯಲ್ಲ, ಆ ಮರ. ಅದಕ್ಕೆ ಪವಾಡ ಬರುತ್ತದೆ. ಬರಿದೇ ಒಂದು ಸಣ್ಣ ಬೀಜವಾಗಿದ್ದ ಅದು ನಾನು ನೋಡು ನೋಡುತ್ತಿದ್ದಂತೆಯೇ ಬೆಳೆಯಿತು. ಕಪ್ಪು ತೊಗಟೆಗಳಿರುವ ಅದರ ಕಾಂಡದಲ್ಲಿ ಹಸಿರು ಬಣ್ಣಗಳಲ್ಲಿ ಅದ್ದಿದ್ದ ಎಲೆಗಳು ಚಿಗುರಿದವು. ಬಳಿಕ ನೋಡಿದರೆ ಬಣ್ಣ ಬಣ್ಣಗಳಿಂದ ತುಂಬಿದ ಹೂವುಗಳು. ಸ್ವಲ್ಪ ದಿನ ಬಿಟ್ಟು ನೋಡಿದರೆ ಪರಿಮಳ ಭರಿತ ಹಣ್ಣುಗಳು. ಅದೆಷ್ಟು ರುಚಿಯಾದ ಹಣ್ಣುಗಳೆಂದರೆ ಹುಳಿ, ಉಪ್ಪು, ಸಿಹಿ ಇವುಗಳ ಸಮಪಾಕದಿಂದ ತಯಾರಿಸಿದ ಹಣ್ಣುಗಳು...ಪವಾಡ ತಿಳಿದವರನ್ನೇ ಗುರುವಾಗಿ ಸ್ವೀಕರಿಸಬೇಕೆಂದು ನೀನು ನಿಶ್ಚಯಿಸಿದ್ದರೆ ಆ ಮರವನ್ನು ಗುರುವಾಗಿ ಸ್ವೀಕರಿಸಬಹುದು...’’ ಎಂದವನೇ ಸಂತ ಮುಂದೆ ನಡೆದ.
ಕೊಂಬೆ ರೆಂಬೆಗಳನ್ನು ವಿಸ್ತರಿಸಿ, ವಿಶಾಲವಾಗಿ, ದಟ್ಟವಾಗಿ ಹರಡಿ ನಿಂತ ಆ ಮರ ಸಂತನೊಬ್ಬ ತಪಸ್ಸಿನಲ್ಲಿ ಲೀನವಾಗಿರುವಂತೆ ಅಲ್ಲಿ ನಿಂತಿರುವುದನ್ನು ಆತ ಮೊದಲ ಬಾರಿಗೆ ನೋಡಿದ.

ಕೊನೆಯ ಪುಟ
ಆತ ರಹಸ್ಯ ಪತ್ತೇದಾರಿ, ಕಾದಂಬರಿಯೊಂದನ್ನು ಓದುತ್ತಿದ್ದ. ಇನ್ನೇನು ಮುಗಿಯಬೇಕು. ಕೊಲೆಗಾರ ಯಾರು ಎನ್ನುವುದು ಗೊತ್ತಗಾಬೇಕು... ಆದರೆ ಕಾದಂಬರಿಯ ಕೊನೆಯ ಪುಟವನ್ನೇ ಯಾರೋ ಹರಿದಿದ್ದರು. ಒಂದು ಕ್ಷಣ ಅವನು ಹತಾಶನಾದ.
ಆದರೆ ಆ ಮೂಲಕ ಒಂದು ಪುಸ್ತಕ ಮುಗಿದು ಹೋಗದೆ ಶಾಶ್ವತವಾಗಿ ಅವನ ಮನಸಿನೊಳಗೆ ಉಳಿದು ಹೋಯಿತು. ಆ ಕೊನೆಯ ಪುಟವನ್ನು ಓದಿದ್ದಿರೆ, ಕೊಲೆಗಾರ ಯಾರು ಎಂದು ಗೊತ್ತಾಗಿದಿದ್ದರೆ ಆ ಪುಸ್ತಕವೇ ಅಲ್ಲಿಗೆ ಮುಗಿದು ಹೋಗುತ್ತಿತ್ತು. ಅವನದನ್ನು ಶಾಶ್ವತ ಮರೆತು ಬಿಡುತ್ತಿದ್ದ.
ಅವನು ಕೊನೆಯ ಪುಟವನ್ನು ಹರಿದವನಿಗೆ ಕೃತ್ಯಜ್ಞತೆ ಹೇಳಿದ. ಲೇಖಕ ತನ್ನ ಕಾದಂಬರಿಯನ್ನು ಮುಗಿಸಲಿದ್ದ. ಆದರೆ, ಕೊನೆಯ ಪುಟವನ್ನು ಹರಿದವನು ಆ ಕಾದಂಬರಿಯನ್ನು ಮುಂದುವರಿಸಿದ. ಅದರ ಅನಂತ ಸಾಧ್ಯತೆಯನ್ನು ಎತ್ತಿ ತೋರಿಸಿದ. ಸಮಾಪ್ತಿಯಾಗದ ಆ ಪುಸ್ತಕ ಈಗ ಎಲ್ಲ ಓದುಗರ ಎದೆಯಲ್ಲಿ ತನಗೆ ತೋಚಿದ ರೀತಿಯಲ್ಲಿ ಬೆಳೆಯುತ್ತಿದೆ.

ಕಣ್ಣು
ಆತ ಒಬ್ಬ ಮಹಾ ತ್ಯಾಗಿ, ಎಂದೂ ಕೆಟ್ಟದ್ದನ್ನು ಮಾಡದವನು, ನೋಡದವನು.
ಎಲ್ಲರಿಗೂ ಒಳಿತನ್ನು ಬಯಸುವವನು.
ಒಂದು ದಿನ ಆತ ಸತ್ತ. ಅವನ ಆಪೇಕ್ಷೆಯಂತೆ ಅವನ ಕಣ್ಣುಗಳನ್ನು ದಾನ ಮಾಡಲಾಯಿತು. ದಿನಗಳ ಬಳಿಕ ಆ ಕಣ್ಣುಗಳನ್ನು ಕುರುಡನೊಬ್ಬನಿಗೆ ಇಡಲಾಯಿತು. ಕತ್ತಲಲ್ಲಿ ಕಳೆದುಹೋದ ಕುರುಡನ ಪ್ರಪಂಚ ಸಂತನ ದೆಸೆಯಿಂದ ಮತ್ತೆ ಬೆಳಗಿತು.
ಈ ವರೆಗೆ ಕತ್ತಲು ತುಂಬಿದ ಜಗತ್ತಿನಲ್ಲಿ ಬದುಕುತ್ತಿದ್ದ ಕುರುಡನ ಮುಂದೆ ಬಣ್ಣ ಬಣ್ಣದ ಜಗತ್ತೊಂದು ತೆರೆದುಕೊಂಡಿತು.
ಕಂಡದ್ದನ್ನೆಲ್ಲಾ ಅನುಭವಿಸಬೇಕೆಂಬ ಮೋಹ ಅವನಲ್ಲಿ ಉತ್ಕಟವಾಯಿತು. ಈ ವರೆಗೆ ತನಗೆ ದಕ್ಕದ್ದನ್ನೆಲ್ಲಾ, ಒಳ್ಳೆಯದು ಕೆಡುಕೆಂಬ ಭೇದವಿಲ್ಲದೆ ದೃಷ್ಟಿಬಾಕನಂತೆ ನೋಡ ತೊಡಗಿದ. ವೇಶ್ಯೆಯರ ಅಂಗ ಅಂಗಗಳನ್ನು ತನ್ನ ಕಣ್ಣುಗಳಿಂದ, ಸ್ಪರ್ಶದಿಂದ ಸವಿಯತೊಡಗಿದ. ತನಗೆ ಸಿಕ್ಕಿದ ಕಣ್ಣುಗಳನ್ನು ಕೆಡುಕುಗಳಿಗಾಗಿಯೇ ಅಡವಿಟ್ಟ.
ಇತ್ತ ಸಂತ ತನ್ನ ಒಳ್ಳೆಯತನಕ್ಕಾಗಿ ಸ್ವರ್ಗ ಸೇರಿದ.
ಆದರೆ, ಆತನ ಕಣ್ಣು ಮಾತ್ರ ಕುರುಡಾಗಿತ್ತು.
ಸಂತ ದೇವರಿಗೆ ಮೊರೆಯಿಟ್ಟ ‘ದೇವರೆ ನನ್ನ ಒಳ್ಳೆಯತನಕ್ಕೆ ಸ್ವರ್ಗವನ್ನು ಕೊಟ್ಟೆ. ಆದರೆ ಈ ಸ್ವರ್ಗವನ್ನು ನೋಡಲು ಅಸಾಧ್ಯವಾಗುವಂತೆ ನನ್ನ ಕಣ್ಣನ್ನು ಕಿತ್ತು ಕೊಂಡೆ...ಯಾಕೆ?’
ದೇವರು ನಕ್ಕು ಹೇಳಿದ ‘‘ಸಂತನೇ... ನೀನು ನಿನ್ನ ಕಣ್ಣನ್ನು ದಾನ ಮಾಡಿ ಒಬ್ಬ ಕುರುಡನ ಸ್ವರ್ಗವನ್ನೇ ಆತನಿಂದ ಕಿತ್ತುಕೊಂಡೆ. ಅದಕ್ಕೆ’’

ಚಿಕಿತ್ಸೆ
ಸಂತನ ಬಳಿಗೆ ರೋಗಿಗಳೂ ಬರುತ್ತಿದ್ದರು. ಸಂತ ಔಷಧಿಕೊಟ್ಟರೆ, ಕುಡಿದ ಮರುಕ್ಷಣ ರೋಗಿ ಗುಣಮುಖನಾಗುತ್ತಿದ್ದ. ದೂರ ದೂರದಿಂದ ಸಂತನೆಡೆಗೆ ರೋಗಿಗಳು ಬರುತ್ತಿದ್ದರು. ಇದು ನಾಡಿನ ವೈದ್ಯ ಪಂಡಿತರಿಗೆಲ್ಲಾ ತಲೆನೋವಾಯಿತು. ಯಾವ ವೈದ್ಯ ಶಾಸ್ತ್ರವನ್ನೂ ಕಲಿಯದ ಸಂತ ಕೊಡುವ ಔಷಧಿ, ಅದಕ್ಕೆ ಸಂಬಂಧಪಟ್ಟ ಬೇರುಗಳಾದರೂ ಯಾವುದು. ಅವನು ಔಷಧಿಗೆ ಬಳಸುವ ಗಿಡಮೂಲಿಕೆಗಳಾವುವು ಎನ್ನುವುದು ಅವರಿಗೆ ಅರ್ಥವಾಗುತ್ತಿರಲಿಲ್ಲ. ಒಂದು ದಿನ ವೈದ್ಯರ ದಂಡು ಸಂತನಿದ್ದಲ್ಲಿಗೆ ನಡೆಯಿತು.
ಅಲ್ಲಿ ಸಂತ ರೋಗಿಗಳೊಂದಿಗೆ ಸುಮ್ಮನೆ ಹರಟೆಕೊಚ್ಚುತ್ತಿದ್ದ. ವೈದ್ಯರು ಸಂತನನ್ನು ಏಕಾಂತ ಸ್ಥಳಕ್ಕೆ ಕರೆದರು. ‘ತಾವು ಚಿಕಿತ್ಸೆಗೆ ಬಳಸುವ ಗಿಡಮೂಲಿಕೆಗಳು ಯಾವುವು ಗುರುಗಳೇ...’ ಎಂದು ಪ್ರಶ್ನಿಸಿದರು.
ಸಂತ ಒಂದು ಕ್ಷಣ ವೌನವಾದ. ಆ ಮೇಲೆ ಅವರನ್ನು ರೋಗಿಗಳೆಡೆಗೆ ಕರೆದೊಯ್ದ.
‘‘ಓ ಅಲ್ಲಿ ಗಿಡ ನೆಡುತ್ತಿರುವವನನ್ನು ನೋಡಿ. ಅವನು ಒಂದು ಪುಟ್ಟ ರಾಜ್ಯದ ಸಾಮಂತ. ಅರಮನೆಯಲ್ಲಿ ವಾಸಿಸುತ್ತಿದ್ದರೂ, ಸಕಲ ರುಚಿ ರುಚಿಯಾದ ಭೋಜನವಿದ್ದರೂ ಆತನಿಗೆ ಹಸಿವೆಯೇ ಆಗುತ್ತಿರಲಿಲ್ಲ. ಅವನಿಗೆ ಮಾವಿನ ಮರದ ಪುಟ್ಟ ಸಸಿಯೊಂದನ್ನು ಕೊಟ್ಟು ಅದರ ಎಲೆಯ ಚಿಗುರುಗಳಲ್ಲಿ ಎಷ್ಟು ಬಣ್ಣಗಳಿವೆ ಎಂದು ಗುರುತಿಸಲು ಹೇಳಿದೆ. ಮೊದಲು ಹಸಿರನ್ನು ಮಾತ್ರ ಗುರುತಿಸಿದ. ಮತ್ತೆ ಹೌದೋ ಅಲ್ಲವೋ ಎಂಬಂತಿದ್ದ ಕೆಂಪನ್ನು, ಹಳದಿಯನ್ನು, ನೇರಳೆಯನ್ನು, ಗುರುತಿಸಿದ. ಅದರ ಪರಿಮಳವನ್ನು ಆಘ್ರಾಣಿಸಲು ಹೇಳಿ
ದೆ. ಅರೆ ಇದಕ್ಕೆ ಪರಿಮಳವಿದೆಯೇ ಎಂದು ಅಚ್ಚರಿಯಿಂದ ಕೇಳಿದ. ಬಳಿಕ ಈವರೆಗೆ ಉಂಡರಿಯದ ಪರಿಮಳವನ್ನು ಆಘ್ರಾಣಿಸತೊಡಗಿದ. ‘ಪುಟ್ಟ ಮಗುವೊಂದರ ಪಾದದಡಿಯ ರೇಖೆಗಳಂತಿರುವ ಅದರ ಬೇರುಗಳನ್ನು ನೋಡು’ ಎಂದೆ. ಅವನು ಪುಟ್ಟ ಮಗುವಿನಂತೆ ಅದನ್ನು ಗಮನಿಸಿದ. ‘ಈಗದನ್ನು ನೆಡು’ ಎಂದೆ. ಅದನ್ನು ನೆಟ್ಟ. ಅದಕ್ಕೆ ನೀರು ಹನಿಸಿದ. ಆ ಗಿಡ ಜೀವ ಪಡೆಯುತ್ತಿದ್ದಂತೆಯೇ ಅವನ ಹಸಿವು ಜೀವ ಪಡೆಯಿತು. ಇದೀಗ ಪ್ರತಿ ದಿನ ಗಿಡಗಳನ್ನು ನೆಡುವ ಕಾಯಕದಲ್ಲಿ ತೊಡಗಿದ್ದಾನೆ. ಹೊತ್ತು ಹೊತ್ತಿಗೆ ಅವನಿಗೆ ಹಸಿವಾಗುತ್ತಿದೆ’ ಸಂತ ವೈದ್ಯರನ್ನೇ ದಿಟ್ಟಿಸಿ ನೋಡಿ, ಬಾಗಿ ಸಣ್ಣ ಮಾವಿನ ಸಸಿಯೊಂದನ್ನು ಅವರೆಡೆಗೆ ಚಾಚಿ ಕೇಳಿದ ‘‘ಇದರ ಚಿಗುರಲ್ಲಿರುವ ಬಣ್ಣಗಳನ್ನು, ಇದರಲ್ಲಿರುವ ಪರಿಮಳವನ್ನು ಗುರುತಿಸಬಲ್ಲಿರಾ....’’
ತಲೆತಗ್ಗಿಸಿದ ಪಂಡಿತರನ್ನು ಸಂತ ಸಂತೈಸಿ, ಹೇಳಿದ ‘‘ಒಬ್ಬ ರೋಗಿಗೆ ಇನ್ನೊಬ್ಬ ರೋಗಿಯನ್ನು ಗುಣಪಡಿಸುವುದಕ್ಕಾಗುವುದಿಲ್ಲ ಪಂಡಿತರೇ’’

ಬೆಲೆ!
ಆತ ಗೋರಿಯನ್ನು ಅಗೆಯುವುದರಲ್ಲಿ ನಿಸ್ಸೀಮ. ಅಂದು ಕೂಡ ಯಾರದೋ ಗೋರಿಯನ್ನು ಅಗೆಯುತ್ತಿದ್ದ. ಆತ ಗೋರಿಯೊಳಗಿದ್ದು, ಮಣ್ಣನ್ನು ಅಗೆದು ಅಗೆದು ಮೇಲೆ ಎತ್ತಿ ಹಾಕುತ್ತಿದ್ದ.
‘ಇದು ಯಾರಿಗಾಗಿ ಅಗೆಯುತ್ತಿರುವ ಗೋರಿ?’’ ಮೇಲಿನಿಂದ ಯಾರೋ ಪ್ರಶ್ನೆ ಎಸೆದರು. ಆತ ತಲೆಯೆತ್ತಿ ನೋಡಿದ.
ಮೇಲೊಬ್ಬ ಬಿಳಿ ವಸ್ತ್ರ ತಲೆಗೆ
ಹೊದ್ದ ಮನುಷ್ಯ ನಿಂತಿದ್ದ.
ಆತ ನಗುತ್ತಾ ‘‘ಯಾರ ಗೋರಿಯಾದರೇನು. ನನಗೆ ಸಿಗುವುದು ಒಂದು ಗೋರಿಗೆ ನೂರು ರೂಪಾಯಿ. ನನ್ನ ಪಾಲಿಗೆ ಯಾವ ಗೋರಿಗಳೂ ನೂರು ರೂಪಾಯಿಗಿಂತ ಹೆಚ್ಚು ಬೆಲೆಬಾಳುವುದಿಲ್ಲ’’ ಎಂದು ನುಡಿದ.
‘‘ಆದರೆ, ಈ ಗೋರಿ ನಿನ್ನ ಪಾಲಿಗೆ ನೂರು ರೂಪಾಯಿಗೂ ಹೆಚ್ಚು ಬೆಲೆ ಬಾಳುವಂತಹದ್ದು’’ ಮೇಲಿದ್ದಾತ ಹೇಳಿದ್ದು ಕೇಳಿಸಿತು.
‘‘ಅದು ಹೇಗೆ?’’ ಎನ್ನುತ್ತಾ ಆತ ಪಕ್ಕನೆ ತಲೆ ಎತ್ತಿ ನೋಡಿದ. ಬಿಳಿ ವಸ್ತ್ರಧಾರಿ ನಗುತ್ತಾ ನಿಂತಿದ್ದ.
ಆಗಷ್ಟೇ ಒರೆಯಿಂದ ಎಳೆದ ಖಡ್ಗದ ಅಲಗಿನಂತೆ ಆ ನಗು ಮಿಂಚುತ್ತಿತ್ತು!
ಆತನಿಗೆ ಯಾಕೋ ಎದೆಗೂಡಲ್ಲೆಲ್ಲೋ ‘‘ಝಳ್’’ ಅನ್ನಿಸಿತು.
ಗೋರಿಯೊಳಗೆ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದ.

1 comment:

  1. ಒಳ್ಳೆ ಕತೆಗಳು ಸರ್ :)

    ReplyDelete