Friday, July 15, 2011
ಮತ್ತೊಂದಿಷ್ಟು ಸಂತನ ಕತೆಗಳು
ಕೊಲೆಗಾರ
ಅಲ್ಲೊಂದು ಕೊಲೆ ನಡೆದಿತ್ತು.
ಎಲ್ಲರೂ ಕೊಲೆಗಾರನನ್ನು ಶಪಿಸುತ್ತಿದ್ದರು.
ಸಂತ ಆ ದಾರಿಯಾಗಿ ಹೋಗುತ್ತಿದ್ದ.
ಆ ಬರ್ಬರ ಕೊಲೆಯನ್ನು ನೋಡಿ ದಂಗು ಬಡಿದ ಆತ ಹೇಳಿದ ‘‘ಕೊಲೆಗೀಡಾದವನ ಸ್ಥಿತಿಯೇ ಇಷ್ಟು ಭೀಕರವಾಗಿದೆ. ಇನ್ನು ಪಾಪ ಕೊಂದ ಆ ಕೊಲೆಗಾರನ ಸ್ಥಿತಿ ಅದೆಷ್ಟು ಭೀಕರವಿರಬಹುದು’’
ಹೃದಯ
ಅವನು ತನ್ನ ಹೃದಯವನ್ನು ಅವಳಿಗೆ ದಾಟಿಸುವಾಗ ಕೈ ಜಾರಿತು.
ಹುಡುಗ ಅತ್ತ ‘‘ದೇವರೇ, ದೇಹವನ್ನೋ ಮಾಂಸ, ಚರ್ಮದಿಂದ ಮಾಡಿದೆ. ಆದರೆ ಹೃದಯವನ್ನೇಕೆ ಗಾಜಿನಿಂದ ಸೃಷ್ಟಿಸಿದೆ?’’
ಮುಳ್ಳು
ಮಗ ಕೇಳಿದ
‘‘ಅಪ್ಪಾ, ಗಡಿಯಾರದಲ್ಲೇಕೆ ಮುಳ್ಳಿದೆ’’
ತಂದೆ ಉತ್ತರಿಸಿದ
‘‘ಕಳೆದು ಹೋಗುವ ಪ್ರತಿ ಸೆಕೆಂಡೂ ನಿನ್ನನ್ನು ಚುಚ್ಚುತ್ತಿರಬೇಕು. ಅದಕ್ಕಾಗಿ ಗಡಿಯಾರದಲ್ಲಿ ಮುಳ್ಳಿದೆ’’
ದೇವರು
ಪ್ರಾರ್ಥನೆ ಮುಗಿಸಿ ಬಂದ ಧರ್ಮಗುರು ಮಂದಿರದ ಬಾಗಿಲಲ್ಲಿ ಆರಾಮವಾಗಿ ಉಣ್ಣುತ್ತಿದ್ದ ಫಕೀರನೊಬ್ಬನನ್ನು ಕಾಲಿಂದ ತುಳಿದು ಕೇಳಿದ
‘‘ಪ್ರಾರ್ಥನೆಯ ಹೊತ್ತಿನಲ್ಲಿ ಉಣ್ಣುತ್ತಿದ್ದೀಯ? ನಿನಗೆ ದೇವರ ಭಯವಿಲ್ಲವೆ?’’
ಫಕೀರ ಸಿಟ್ಟಾಗದೆ ಉತ್ತರಿಸಿದ ‘‘ಸದಾ ರಾಜನ ಹಿಂದೆ ಅಲೆಯುತ್ತಿರುವ ನಿನ್ನಂಥವರಿಗೆ ದೇವರೆಂದರೆ ಭಯ. ನನ್ನಂತಹ ನಿರ್ಗತಿಕರಿಗೆ, ಅನಾಥರಿಗೆ ದೇವರೆಂದರೆ ಭಯವಲ್ಲ, ಭದ್ರತೆ. ನೀನು ದೇವರಿದ್ದಾನೆಂದು ಭಯಪಡುತ್ತಿದ್ದಿ. ನಾನು ದೇವರಿದ್ದಾನೆಂದು ನಿರ್ಭಯನಾಗಿದ್ದೇನೆ’’
ಬಿತ್ತು
ಒಬ್ಬ ಸದಾ ದೇವರ ಹೆಸರುಗಳನ್ನು ಹೇಳುತ್ತಾ ಬಿತ್ತುತ್ತಿದ್ದ.
ಯಾರೋ ಕೇಳಿದರು ‘‘ಏನೋ...ಭತ್ತ ಬಿತ್ತುದ್ದೀಯ?’’
ಅವನು ಹೇಳಿದ ‘‘ಇಲ್ಲ, ದೇವರ ನಾಮಗಳನ್ನು ಬಿತ್ತುತ್ತಿದ್ದೇನೆ’’
‘‘ನಿನ್ನ ಬುಟ್ಟಿಯಲ್ಲಿರುವುದು ದೇವರ ನಾಮಗಳೆ?’’
‘‘ನಾನು ಬಿತ್ತುತ್ತಿರುವುದು ಕೈಯಲ್ಲಿರುವ ಬುಟ್ಟಿಯಲ್ಲಿರುವುದನ್ನಲ್ಲ, ಎದೆಯ ಬುಟ್ಟಿಯಲ್ಲಿರುವುದನ್ನು’’
‘‘ಹಾಗಾದರೆ ಕೈಯಲ್ಲೇಕೆ ಆ ಬುಟ್ಟಿಯನ್ನು ಹಿಡಿದುಕೊಂಡಿದ್ದೀಯ?’’
‘‘ಕೈಯಲ್ಲಿರುವುದು ಸಮಯ ಕಳೆಯುವುದಕ್ಕಾಗಿ. ಮನದಲ್ಲಿರುವುದು ಉತ್ತು ಉಣ್ಣುವುದಕ್ಕಾಗಿ...’’
ಪರೀಕ್ಷೆ
ದೇವರ ಪರೀಕ್ಷೆಯೇ ವಿಚಿತ್ರ.
ಅವನು ಪರೀಕ್ಷೆ ನಡೆಸುತ್ತಾನೆ.
ಜೊತೆಗೆ ನಕಲು ಮಾಡುವುದಕ್ಕೆ ಅವನೇ ನೆರವು ನೀಡುತ್ತಾನೆ!
ಪ್ರಾರ್ಥನೆ
ದೇವರೇ,
ಬೃಹತ್ತಾದ ಗುಡಿಯನ್ನು ಕಟ್ಟಿದ್ದ ಆ
ನೂರಾರು ಕೂಲಿ ಕಾರ್ಮಿಕರು ಅವರು,
ಸುಸ್ತಾಗಿ ಆ ಬಯಲಲ್ಲಿ ಈಗಷ್ಟೇ ನಿದ್ದೇ ಹೋಗಿದ್ದಾರೆ
ಕಟ್ಟಿದ ಗುಡಿಯಲ್ಲಿ ಭಕ್ತಾದಿಗಳೆಲ್ಲ ಕುಳಿತು
ನಿನ್ನ ಭಜಿಸುತ್ತಿದ್ದಾರೆ!
ಆ ಕೂಲಿ ಕಾರ್ಮಿಕರ ನಿದ್ದೆ
ನನ್ನನ್ನು ಧ್ಯಾನದಂತೆ ಆಕರ್ಷಿಸುತ್ತಿದೆ
ಹೇಳು, ನಾ ಏನು ಮಾಡಲಿ?
Subscribe to:
Post Comments (Atom)
ek se badhkar ek
ReplyDeletethank u ವಸಂತ್, ಯಾರ ಬದುಕಿನಲ್ಲೂ ಮಿಂಚಿ ಹೋಗಬಹುದಾದ ಜ್ಹಲಕ್ ಗಳಿವು. ಇದೀಗ ನನ್ನವಲ್ಲ. ನಿನ್ನವು.
ReplyDeletechennaagive.... parinaamakaariyaagive...
ReplyDeletethank u ಚೇತನ ಅವರೇ, ಈ ಗುಜರಿ ಅಂಗಡಿಗೆ ಆಗಾಗ ಭೇಟಿ ನೀಡುತ್ತ ಇರಿ.
ReplyDeletevery nice punching stories
ReplyDeleteತುಂಬ ಚೆನ್ನಾಗಿದೆ, ಒಂದಕ್ಕಿಂತ ಒಂದು ಉತ್ತಮ .......
ReplyDelete