Sunday, September 4, 2016

ದೇಶ ಕಟ್ಟುವುದಕ್ಕೆ ರಿಲಯನ್ಸ್ ಸಿಮೆಂಟ್...!

ಮೋದಿ ವಿಶ್ವಕ್ಕೇ ಮೋಡೆಲ್ ಪ್ರಧಾನಿಯಾಗುತ್ತಾರೆ ಎಂದು ಸಂಘಪರಿವಾರ ಸಹಿತ ಮೋದಿ ಭಕ್ತರು ಹೇಳಿಕೆ ನೀಡುತ್ತಲೇ ಇದ್ದರು. ಇದೀಗ ಅದನ್ನು ಸಾಬೀತು ಪಡಿಸುವಂತೆ ಅವರು ಮೋಡೆಲ್ ಆಗಿಯೇ ಬಿಟ್ಟಿರುವುದು ನೋಡಿ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡು ನೇರವಾಗಿ ಅನಿಲ್ ಅಂಬಾನಿಯವರ ಮನೆಯ ಬಾಗಿಲು ತಟ್ಟಿದ. 
‘‘ಯಾರು ಬೇಕಾಗಿತ್ತು?’’ ವಾಚ್‌ಮೆನ್ ಕೇಳಿದ.
‘‘ನರೇಂದ್ರ ಮೋದಿಯವರು ಬೇಕಾಗಿತ್ತು’’ ಕಾಸಿ ಹೇಳಿ ಹಲ್ಲು ಕಿರಿದ.
‘‘ಅದಕ್ಕೆ ನರೇಂದ್ರ ಮೋದಿಯವರ ಮನೆಗೆ ಹೋಗಬೇಕಾಗಿತ್ತು...’’ ವಾಚ್‌ಮೆನ್ ಹೇಳಿದ.
‘‘ಅಲ್ಲಿ ಹೋದ್ರೆ ಅನಿಲ್ ಅಂಬಾನಿ ಮನೆಯಲ್ಲಿದ್ದಾರೆ ಎಂದು ಹೇಳಿದರು. ಅದಕ್ಕೆ ಇಲ್ಲಿಗೆ ಬಂದೆ...’’
‘‘ಆದ್ರೆ ಅವರು ಸ್ಟುಡಿಯೋದಲ್ಲಿ ಶೂಟಿಂಗ್‌ನಲ್ಲಿದ್ದಾರೆ...’’ ವಾಚ್‌ಮೆನ್ ಮುಖಕ್ಕೆ ಹೊಡೆದಂತೆ ಹೇಳಿದ. ‘‘ಸಿನೆಮಾದಲ್ಲಿ ನಟಿಸುತ್ತಿದ್ದಾರಾ ಸಾರ್?’’ ಕಾಸಿ ಕುತೂಹಲದಿಂದ ಕೇಳಿದ.
‘‘ಇಲ್ಲಾರಿ. ಈಗ ಅವರು ವಿಶ್ವಕ್ಕೇ ಮೋಡೆಲ್ ಆಗಲು ಹೊರಟಿದ್ದಾರೆ...’’ ವಾಚ್‌ಮೆನ್ ಹೇಳಿದ.
‘‘ಅದಕ್ಕೆ ಇಲ್ಲೇನು ಮಾಡುತ್ತಿದ್ದಾರೆ ?’’
‘‘ಅದೇರಿ. ಅನಿಲ್ ಅಂಬಾನಿ ಪ್ರಾಡಕ್ಟ್‌ಗಳಿಗೆ ವಿಶ್ವದ ಎಲ್ಲ ದೇಶಗಳಿಗೂ ಇವರೇ ಮೋಡೆಲ್ ಆಗಲಿದ್ದಾರೆ’’ ವಾಚ್‌ಮೆನ್ ಹೇಳಿದ.
‘‘ಸಾರ್...ಅವರ ಒಂದು ಇಂಟರ್ಯೂ ಬೇಕಾಗಿತ್ತು’’ ಕಾಸಿ ಮನವಿ ಮಾಡಿದ. ‘‘ಅವರು ದೇಶ ಕಟ್ಟುವಲ್ಲಿ ಬಿಜಿಯಾಗಿದ್ದಾರೆ ಕಣ್ರೀ...ಈಗ ವಿಶ್ವಕ್ಕೇ ಮೋಡೆಲ್ ಬೇರೆ. ಬೇಕಾದ್ರೆ ನನ್ನದೇ ಇಂಟರ್ಯೂ ತೆಗೆದುಕೊಳ್ಳಿ...’’
‘‘ಅಂದರೆ ದೇಶ ಕಟ್ಟುವುದಕ್ಕೂ ಅಂಬಾನಿಗೂ ಏನು ಸಂಬಂಧ?’’ ಕಾಸಿ ಅರ್ಥವಾಗದೆ ಕೇಳಿದ.
‘‘ದೇಶ ಕಟ್ಟಬೇಕಾದರೆ ಅದಕ್ಕೆ ಭಾರೀ ಪ್ರಮಾಣದಲ್ಲಿ ಸಿಮೆಂಟ್ ಬೇಕಲ್ವಾ...ಈ ನಿಟ್ಟಿನಲ್ಲಿ ರಿಲಯನ್ಸ್ ಸಿಮೆಂಟಿನಿಂದಲೇ ದೇಶ ಕಟ್ಟುವ ಬಗ್ಗೆ ಅವರು ಯೋಚಿಸುತ್ತಿದ್ದಾರೆ. ಈ ಬಗ್ಗೆ ಮಾತುಕತೆಯೂ ನಡೆಯುತ್ತಿದೆ....ಮೋದಿಯ ದೇಶ ನಿರ್ಮಾಣದಲ್ಲಿ ರಿಲಯನ್ಸ್ ಸಿಮೆಂಟಿನ ಮಹತ್ವದ ಬಗ್ಗೆ ಈಗಾಗಲೇ ಸಂಘಪರಿವಾರ ನಾಯಕರೆಲ್ಲ ತಮ್ಮ ತಮ್ಮ ಶಾಖೆಗಳಲ್ಲಿ ಭಾಷಣ ಮಾಡುತ್ತಿದ್ದಾರೆ. ನಿಮಗೆ ಗೊತ್ತಿಲ್ಲವೆ?’’ ವಾಚ್‌ಮೆನ್ ಪ್ರಶ್ನಿಸಿದ.
‘‘ಸಿಮೆಂಟು ರಿಲಯನ್ಸಿನದ್ದಾದರೆ ಮರಳು ಯಾವ ಕಂಪೆನಿಯಿಂದ ಬಳಸುತ್ತಾರೆ ಸಾರ್....’’ ಕಾಸಿ ವಾಚ್‌ಮೆನ್‌ಗೆ ತುಸು ಮರ್ಯಾದೆ ನೀಡಿದ.
‘‘ಮರಳು ಮಾಫಿಯಾದವರಿಗೆ ಪೂರ್ಣ ಸ್ವಾತಂತ್ರವನ್ನು ನೀಡಲಾಗಿದೆ. ದೇಶಕಟ್ಟುವುದಕ್ಕಾಗಿ ಎಷ್ಟು ಬೇಕಾದರೂ ಅಕ್ರಮವಾಗಿ ಮರಳನ್ನು ನದಿಯಿಂದ ಎತ್ತಿರಿ ಎಂದು ಈಗಾಗಲೇ ಮೋದಿ ಸೂಚನೆ ನೀಡಿದ್ದಾರೆ. ರಿಲಯನ್ಸ್ ಸಿಮೆಂಟಿಗೆ ಅಕ್ರಮ ಮರಳು ಸೇರಿಸಿ ದೇಶವನ್ನು ಅತಿ ಬೇಗನೇ ಕಟ್ಟಲಾಗುತ್ತದೆ...’’ ವಾಚ್‌ಮೆನ್ ವಿವರಗಳನ್ನು ನೀಡಿದ.
‘‘ರಿಲಯನ್ಸ್‌ನ ಡಾಟಾಗಳು ಅಗ್ಗವಾಗಿವೆ...ಆದರೆ ಜನರ ರೇಶನ್‌ಗಳ ಬೆಲೆ ಏರುತ್ತಿದೆಯಲ್ಲ...ಇದರ ಬಗ್ಗೆ ಏನು ಹೇಳುತ್ತಾರೆ ಮೋದಿಯವರು?’’ ಕಾಸಿ ಅತ್ಯಾಸಕ್ತಿಯಿಂದ ಕೇಳಿದ.
 ‘‘ರೇಷನ್ ಅಂಗಡಿಯಲ್ಲಿ ಇನ್ನು ಮುಂದೆ ರಿಲಯನ್ಸ್ ಡಾಟಾಗಳು ಬಿಪಿಎಲ್, ಎಪಿಎಲ್ ಕಾರ್ಡ್‌ಗಳಿಗೆ ವಿತರಿಸುವ ಯೋಜನೆಯೊಂದು ನಡೆಯುತ್ತಿದೆ. ರಿಲಯನ್ಸ್‌ನವರಿಗೆ ಸಬ್ಸಿಡಿಯನ್ನು ನೀಡಿ ಅಗ್ಗವಾಗಿ ಡಾಟಾಗಳನ್ನು ಜನರಿಗೆ ರೇಷನ್ ಅಂಗಡಿಯಲ್ಲೇ ಪ್ರತಿ ತಿಂಗಳು ವಿತರಿಸಲಾಗುತ್ತದೆ. ಇದರ ಹೊರೆ ಸರಕಾರಕ್ಕೆ ಬೀಳುವುದರಿಂದ ವಿಶೇಷ ಡಾಟಾ ತೆರಿಗೆಯನ್ನು ಜನರ ಮೇಲೆ ವಿಧಿಸಲಾಗುತ್ತದೆ...’’ ವಾಚ್‌ಮೆನ್ ಇನ್ನಷ್ಟು ವಿವರಗಳನ್ನು ನೀಡಿದ.
‘‘ಆದರೆ ಜನರಿಗೆ ಆಹಾರಕ್ಕೆ ಏನು ಮಾಡುವುದು?’’ ಕಾಸಿ ಆತಂಕದಿಂದ ಕೇಳಿದ.
‘‘ನೋಡ್ರಿ....ಮೊಬೈಲ್‌ಗಳಲ್ಲೇ ವಿವಿಧ ಬಗೆಯ ಆಹಾರಗಳನ್ನು ಶೇರ್ ಮಾಡಿ ಹಂಚುವ ವ್ಯವಸ್ಥೆಯನ್ನು ಮಾಡಲಾಗುತ್ತದೆ...ಎಲ್ಲ ಬಡವರಿಗೆ ಬಿರಿಯಾನಿ(ಕಡ್ಡಾಯವಾಗಿ ಚಿಕನ್ ಮಾತ್ರ) ಇನ್ನಿತರ ಆಹಾರಗಳನ್ನು ಮೊಬೈಲ್ ಮೂಲಕವೇ ರಿಲಯನ್ಸ್ ಡಾಟಾಗಳಲ್ಲಿ ದೇಶಾದ್ಯಂತ ವಿತರಿಸಲಾಗುತ್ತದೆ’’ ವಾಚ್‌ಮೆನ್ ಹೇಳಿದ.
‘‘ರಿಲಯನ್ಸ್ ಮೊಬೈಲ್‌ಗಳ ಮುಖಾಂತರ ಆಹಾರ ವಿತರಣೆಯೇ...’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಹೌದ್ರೀ....ಡಾಟಾಗಳಿಗಷ್ಟೇ ಚಾರ್ಜಾಗತ್ತೆ. ಆದರೆ ಆಹಾರ ಮಾತ್ರ ಪುಕ್ಕಟೆಯಾಗಿ ವಿತರಣೆಯಾಗುತ್ತೆ...’’ ವಾಚ್‌ಮೆನ್ ಹೇಳಿದ.
‘‘ಅಂದರೆ...’’ ಕಾಸಿಗೆ ಅರ್ಥವಾಗಲಿಲ್ಲ.
‘‘ಅದೇರಿ...ಮೊಬೈಲ್‌ನಲ್ಲೇ ವಾಟ್ಸ್‌ಆ್ಯಪ್ ಮೂಲಕ ಬಗೆ ಬಗೆಯ ಆಹಾರಗಳನ್ನು ಶೇರ್ ಮಾಡಲಾಗುತ್ತೆ. ಮೊಬೈಲ್‌ಗಳಲ್ಲೇ ಬೇರೆ ಬೇರೆ ಆಹಾರಗಳನ್ನು ಡೌನ್‌ಲೋಡ್ ಮಾಡಬಹುದು...ಇದರಿಂದಾಗಿ ಆಹಾರ ಬೇಯಿಸುವ ಸಮಸ್ಯೆಯೇ ಇರುವುದಿಲ್ಲ. ಸಬ್ಸಿಡಿ ಸಿಲಿಂಡರ್‌ಗಳನ್ನೆಲ್ಲ ರದ್ದು ಮಾಡಲಾಗುತ್ತದೆ’’ ವಾಚ್‌ಮೆನ್ ಹೇಳಿದ.
‘‘ಅಲ್ಲಾರಿ...ಮೊಬೈಲ್‌ಗಳಲ್ಲಿ ಆಹಾರಗಳ ಚಿತ್ರಗಳನ್ನ ಡೌನ್‌ಲೋಡ್ ಮಾಡಿ ಅದನ್ನು ತಿನ್ನೋಕ್ಕಾಗತ್ತ?’’ ಕಾಸಿ ಅಚ್ಚರಿಯಿಂದ ಕೇಳಿದ.
 ‘‘ಏನ್ರೀ...ಮೋದಿ ಸರಕಾರ ಯಾವ ಯೋಜನೆಗಳನ್ನು ಹಾಕಿದರೂ ಅದನ್ನು ಟೀಕೆ ಮಾಡುವುದೇ ನಿಮಗೆ ಅಭ್ಯಾಸವಾಗಿ ಹೋಗಿದೆ. ಪೌಷ್ಟಿಕ ಆಹಾರಗಳನ್ನು ರಿಲಯನ್ಸ್ ಮೊಬೈಲ್‌ಗಳ ಮೂಲಕವೇ ನಾವು ಸುಲಭವಾಗಿ, ಉಚಿತವಾಗಿ ತಲುಪಿಸಲು ಯತ್ನಿಸಿದರೆ ನೀವು ಅದಕ್ಕೂ ಅಡ್ಡಗಾಲು ಹಾಕುತ್ತಿದ್ದೀರಲ್ಲ...ನಮ್ಮದು ಇ ಸರಕಾರ. ಆದುದರಿಂದ ಮೊಬೈಲ್‌ಗಳ ಮೂಲಕವೇ ಆಹಾರವನ್ನು ವಿತರಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅತ್ಯಗತ್ಯ ವಸ್ತುಗಳನ್ನು ಅಂದರೆ ಬೇಳೆ, ಟೊಮೆಟೊ, ಇವೆಲ್ಲವನ್ನೂ ಮೊಬೈಲ್‌ಗಳಲ್ಲೇ ಡೌನ್‌ಲೋಡ್ ಮಾಡುವ ಮೂಲಕ ಜನರಿಗೆ ತಲುಪಿಸಲಿದ್ದೇವೆ’’ ವಾಚ್‌ಮೆನ್ ತನ್ನ ಜೇಬಿನೊಳಗಿರುವ ಐಫೋನ್ ತೆಗೆದು ಡೌನ್‌ಲೋಡ್ ಮಾಡಿ ತೋರಿಸಿದ.
‘‘ಹಾಗಾದರೆ ಮುಂದಿನ ದಿನಗಳಲ್ಲಿ ನೀರಾವರಿ ವ್ಯವಸ್ಥೆಯನ್ನು ಮೊಬೈಲ್ ಮೂಲಕವೇ ಮಾಡಬಹುದಲ್ಲ?’’ ಕಾಸಿಯೂ ಸಲಹೆ ನೀಡಿದ.
ವಾಚ್‌ಮೆನ್ ಗಂಭೀರವಾಗಿ ತಲೆಯಾಡಿಸಿದ ‘‘ಹೌದು. ಅದಕ್ಕಾಗಿ ರಿಲಯನ್ಸ್ ಇನ್ನೊಂದು ವಿಶೇಷ ಡಾಟಾವನ್ನು ಹೊರ ತರುತ್ತಿದೆ. ಇದರಿಂದಾಗಿ ಜನರು ನೀರು ಬೇಕಾದಾಗೆಲ್ಲ ಮೊಬೈಲ್‌ನಿಂದಲೇ ಡೌನ್‌ಲೋಡ್ ಮಾಡಬಹುದು. ವಿಶ್ವದ ಎಲ್ಲ ನದಿಗಳನ್ನೂ ಈ ಮೊಬೈಲ್ ಮೂಲಕ ನಮ್ಮ ದೇಶದ ಹಳ್ಳಿ ಹಳ್ಳಿಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ಕಾರಣದಿಂದಲೇ ಹಳ್ಳಿಹಳ್ಳಿಗಳಲ್ಲಿ ರಿಲಯನ್ಸ್ ಟವರ್‌ಗಳು ತಲೆಯೆತ್ತಲು ವಿಶೇಷ ಯೋಜನೆಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಪಶ್ಚಿಮಘಟ್ಟದಲ್ಲಿರುವ ಬೃಹತ್ ಮರಗಳನ್ನೆಲ್ಲ ಕಡಿದು ಅಲ್ಲಿ ಟವರ್‌ಗಳನ್ನು ನೆಡುವ ಯೋಜನೆಗಳಿಗೂ ನಾವು ಚಾಲನೆ ನೀಡಲಿದ್ದೇವೆ...’’ 
ಕಾಸಿ ಆತಂಕದಿಂದ ಕೇಳಿದ ‘‘ಮರಗಳು ಕಡಿದರೆ ಮಳೆ ಬರುವುದಿಲ್ಲ ಎಂದು ಹೇಳುತ್ತಾರಲ್ಲ...’’
ವಾಚ್‌ಮೆನ್ ನಕ್ಕ ‘‘ಹೇ...ಎಂತದ್ರೀ ನೀವು. ತಲೆಯಲ್ಲಿ ಮೆದುಳು ಇಲ್ಲವೆ....ಮಳೆಯನ್ನೂ ನಾವು ಮೊಬೈಲ್ ಮೂಲಕವೇ ಡೌನ್‌ಲೋಡ್ ಮಾಡಬಹುದು. ಮಳೆಗಾಗಿ ಮಳೆಗಾಲಕ್ಕೆ ಕಾಯಬೇಕಾಗಿಲ್ಲ. ವಿಶೇಷ ಮೊಬೈಲ್ ಫೋನ್‌ಗಳನ್ನು ಸಬ್ಸಿಡಿಯಲ್ಲಿ ವಿತರಿಸುವ ಯೋಜನೆಯನ್ನೂ ಹಮ್ಮಿಕೊಂಡಿದ್ದೇವೆ....’’
ಕಾಸಿಗೆ ಸಮಾಧಾನವಾಯಿತು. ‘‘ಸಾರ್....ಸೈನಿಕರಿಗೆ ಒಂದೊಂದು ರೂಪಾಯಿ ಕೊಡಿ ಎಂದು ಜನರನ್ನು ಕೇಳಿದ್ದಾರಲ್ಲ...ಸರಿಯಾ ಸಾರ್?’’ ಮತ್ತೆ ಕೇಳಿದ ಕಾಸಿ.
‘‘ದೇಶಕಾಯುವ ಸೈನಿಕರಿಗೆ ಒಂದೊಂದು ರೂಪಾಯಿ ಕೊಡಲು ಸಾಧ್ಯವಿಲ್ಲದವರು ದೇಶದ್ರೋಹಿಗಳು...’’ ವಾಚ್‌ಮೆನ್ ಘೋಷಿಸಿದ.
‘‘ಅಲ್ಲ ಸಾರ್...ತೆರಿಗೆ ಕಟ್ಟುತ್ತೇವೆ...ಅದರಲ್ಲಿ ಬರುವ ಹಣ....’’ ತಡವರಿಸಿ ಕೇಳಿದ.
 ‘‘ನೋಡ್ರೀ...ನಿಮಗೆ ಪುಕ್ಕಟೆ ಆಹಾರ, ಪುಕ್ಕಟೆ ನೀರು, ಪುಕ್ಕಟೆ ಮಳೆ ಎಲ್ಲವನ್ನೂ ಒದಗಿಸಿ ಕೊಟ್ಟ ರಿಲಯನ್ಸ್‌ನವರಿಗೆ ಏನಾದರೂ ಕೊಡಬೇಡವೇ? ಮುಂದಿನ ದಿನಗಳಲ್ಲಿ ಪೊಲೀಸರಿಗಾಗಿ ಎರಡು ರೂಪಾಯಿ, ಗೋರಕ್ಷಕರನ್ನು ಸಾಕಲು ಐದು ರೂಪಾಯಿ, ಆರೆಸ್ಸೆಸ್‌ನ ಪ್ಯಾಂಟ್‌ಗಾಗಿ ಎಂಟಾನೆ, ಇವೆಲ್ಲವನ್ನೂ ಸಂಗ್ರಹಿಸಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ದೇಶದ ಭಿಕ್ಷುಕರನ್ನೆಲ್ಲ ಜೈಲಿಗೆ ತಳ್ಳಿ, ನಮ್ಮ ಸರಕಾರ ಭಿಕ್ಷೆ ಬೇಡುವುದಕ್ಕಾಗಿಯೇ ವಿಶೇಷ ಕಚೇರಿ, ಸಚಿವಾಲಯ, ಸಿಬ್ಬಂದಿಯನ್ನು ನೇಮಕ ಮಾಡುತ್ತದೆ. ಭಿಕ್ಷೆ ಬೇಡುವ ತಟ್ಟೆಗಳಿಗಾಗಿ ತಲಾ ನಾಲ್ಕಾನೆಯನ್ನು ಜನರಿಂದಲೇ ಸಂಗ್ರಹಿಸಲಾಗುತ್ತದೆ....’’
ಕಾಸಿಗೆ ತಲೆ ಧಿಂ ಎಂದಿತು.
ಅಷ್ಟರಲ್ಲಿ ಒಳಗಿನಿಂದ ಅಂಬಾನಿಯವರ ಕೂಗು ‘‘ರೀ...ಅಮಿತ್ ಶಾ ಅವರೇ...ಒಮ್ಮೆ ಇಲ್ಲಿಗೆ ಬನ್ನಿ. ಮೋದಿಯವರ ಮೇಕಪ್ ಹೇಗಾಗಿದೆ ನೋಡಿ...’’
‘‘ಇಗೋ ಬಂದೆ ಸಾರ್...’’ ಎಂದವನೇ ವಾಚ್‌ಮೆನ್ ಒಳಗೆ ಓಡಿದ.

ಚೇಳಯ್ಯ
ಕೃಪೆ-ವಾರ್ತಾ ಭಾರತಿ  

Sunday, August 14, 2016

ಭಾರತದ ವರ್ತಮಾನದ ದುರಂತಕ್ಕೆ ಕನ್ನಡಿ; ‘ಮೊಹೆಂಜೋದಾರೋ’


ಅಶುತೋಶ್ ಗೋವಾರಿಕರ್ ಸದಾ ವಿಭಿನ್ನವಾಗಿ ಯೋಚಿಸುವ ನಿರ್ದೇಶಕ. ಜನಪ್ರಿಯ ಆದರ್ಶಗಳನ್ನು ಸರಳ ನಿರೂಪಣೆಯ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಕಲೆ ಇವರಿಗೆ ಸಿದ್ಧಿಸಿದೆ. ಈ ಹಿನ್ನೆಲೆಯಲ್ಲಿ, ಇವರು ಯಾವುದೇ ಚಿತ್ರದಲ್ಲಿ ತೊಡಗಿದರೂ ಅದರ ಕುರಿತಂತೆ ಜನರು ಬಹು ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಆಮಿರ್ ಖಾನ್ ಅವರು ನಟಿಸಿದ ಲಗಾನ್ ಚಿತ್ರ ಇವರ ದೆಸೆಯನ್ನೇ ಬದಲಿಸಿತು. ಅದು ಬಾಲಿವುಡ್‌ನಲ್ಲಿ ಮಾಡಿದ ದಾಖಲೆಗಳೇ, ಗೋವಾರಿಕರ್ ಪಾಲಿಗೆ ಮುಳುವಾಯಿತೇನೋ? ಆ ಬಳಿಕ ಅವರ ಪ್ರತಿ ಚಿತ್ರಗಳ ಕುರಿತಂತೆಯೂ ಜನರ ನಿರೀಕ್ಷೆ ಹಿರಿದಾಯಿತು. ಈ ನಿರೀಕ್ಷೆಗಳು ಹುಸಿಯಾದಾಗಲೆಲ್ಲ ಗೋವಾರಿಕರ್ ಚಿತ್ರಗಳು ಮುಗ್ಗರಿಸತೊಡದವು. ಲಗಾನ್‌ನ ಕನವರಿಕೆಯಲ್ಲಿದ್ದ ಪ್ರೇಕ್ಷಕರಿಗೆ ಶಾರುಕ್‌ಖಾನ್ ನಟಿಸಿದ ‘ಸ್ವದೇಶ್’ ಚಿತ್ರ ಇಷ್ಟವಾಗಲಿಲ್ಲ. ಸರಳ ಕತೆಯನ್ನು ಹೊಂದಿರುವ ದೇಶಪ್ರೇಮದ ಕುರಿತ ಅಪ್ಪಟ ಸದಭಿರುಚಿಯ ಚಿತ್ರವಾಗಿತ್ತು ಸ್ವದೇಶ್. ಆದರೆ ಕ್ರಿಕೆಟ್ ಮೂಲಕವೇ ದೇಶಪ್ರೇಮವನ್ನು ಅರ್ಥಮಾಡಿಕೊಳ್ಳುವ ಮಂದಿಗೆ ‘ಸ್ವದೇಶ್’ ಪ್ರತಿಪಾದಿಸುವ ಹಳ್ಳಿ, ನೀರು, ವಿದ್ಯುತ್‌ನ ದೇಶಪ್ರೇಮ ನೀರಸ ಎನಿಸಿತು.  ‘ಜೋಧಾ ಅಕ್ಬರ್’ ಕೂಡ ಒಳ್ಳೆಯ ಸಂದೇಶವನ್ನು ವಸ್ತುವಾಗಿಟ್ಟುಕೊಂಡು ಮಾಡಿದ ಐತಿಹಾಸಿಕ ಚಿತ್ರ. ಆದರೆ ಲಗಾನ್ ಚಿತ್ರವನ್ನು ತಲುಪಲು ಸಾಧ್ಯವಾಗಲಿಲ್ಲ. ಹೃತಿಕ್ ರೋಷನ್ ಮತ್ತು ಐಶ್ವರ್ಯ ರೈ ಅವರ ಅಭಿನಯ ಈ ಚಿತ್ರವನ್ನು ಎತ್ತರಕ್ಕೇರಿಸಿತ್ತು. ಸಂಗೀತವೂ ಎಲ್ಲರ ಎದೆಯೊಳಗೆ ಹೊಸ ಅಲೆಯನ್ನು ಎಬ್ಬಿಸಿತ್ತು. ಆದರೆ ಬಾಕ್ಸ್‌ಆಫೀಸ್‌ನಲ್ಲಿ ಅಕ್ಬರ್ ಸೋಲಬೇಕಾಯಿತು. ಈ ಕಾರಣದಿಂದಲೋ ಏನೋ, ತನ್ನ ಇಮೇಜನ್ನೇ ಬದಲಿಸುವ ಉದ್ದೇಶದಿಂದ ‘ವಾಟ್ ಇಸ್ ಯುವರ್ ರಾಶಿ’ ಚಿತ್ರವನ್ನು ನಿರ್ದೇಶಿದರು. ಇದು ಹಾಸ್ಯ ಚಿತ್ರವಾಗಿತ್ತು. ಆದರೆ ಈ ಅಪ್ಪಟ ಸದಭಿರುಚಿಯ ಚಿತ್ರದಲ್ಲೂ ಅವರು ಯಶಸ್ವಿಯಾಗಲಿಲ್ಲ. ಖೇಲೇ ಹಮ್ ಜೀ ಜಾನೇ ಸೇ ಮತ್ತೆ ದೇಶಭಕ್ತಿಯನ್ನೊಳಗೊಂಡ ಚಿತ್ರವಾಗಿತ್ತು. ಆದರೆ ಅದು ವಿಫಲವಾಯಿತು. ಆದರೆ ಅವರ ಪ್ರತಿ ಚಿತ್ರಗಳು ಈ ನೆಲಕ್ಕೆ ಬದ್ಧವಾದವುಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಚಿತ್ರಗಳು ಸದಭಿರುಚಿಯಿಂದ ಕೂಡಿರುತ್ತವೆ. ಹಾಗೆಯೇ ಜೀವಪರವಾದ ಆಶಯವನ್ನು ಹೊಂದಿರುತ್ತದೆ.

 ‘ಮೊಹೆಂಜೋದಾರೋ’ ಚಿತ್ರದ ಹೆಸರೇ ವಿಭಿನ್ನ ಮತ್ತು ವಿಶಿಷ್ಟವಾದುದು. ಸಿಂಧೂ ದಡದ ನಾಗರಿಕತೆಯನ್ನು ಹಿನ್ನೆಲೆಯಾಗಿಟ್ಟು ಗೋವಾರಿಕರ್‌ರಂತಹ ಅತ್ಯುತ್ತಮ ನಿರ್ದೇಶಕ ಚಿತ್ರ ಮಾಡುತ್ತಾರೆಂದರೆ ನಿರೀಕ್ಷೆಗಳು ಹುಟ್ಟುವುದು ಸಹಜ ಕೂಡ. ಗೋವಾರಿಕರ್ ಜೊತೆಗೆ ಎರಡನೆ ಬಾರಿಗೆ ಹೃತಿಕ್ ರೋಷನ್ ಕೈ ಜೋಡಿಸುತ್ತಾರೆ ಎಂದರೆ ಅದು ಪ್ರೇಕ್ಷಕ ವಲಯವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುತ್ತದೆ. ‘ಮೊಹೆಂಜೋದಾರೋ’ ಇತಿಹಾಸಕ್ಕೆ ಬದ್ಧವಾಗಿರಬೇಕು ಎಂದು ನಾವು ಗೋವಾರಿಕರ್ ಮೂಲಕ ನಿರೀಕ್ಷಿಸುವುದು ದುಬಾರಿಯಾಗುತ್ತದೆ. ಸಿಂಧೂ ನಾಗರಿಕತೆಯ ಕುರಿತಂತೆ ಚರ್ಚೆಗಳು ಬಹಳಷ್ಟು ನಡೆದಿವೆ. ಈ ದೇಶಕ್ಕೆ ಮಧ್ಯ ಪ್ರಾಚ್ಯದಿಂದ ಆರ್ಯನ್ನರು ಕಾಲಿಡುವ ಮೊದಲೇ ಹೇಗೆ ನಾಗರಿಕತೆಯೊಂದು ಸಿಂಧೂ ನದೀ ತಟದಲ್ಲಿ ಹರಡಿತ್ತು ಎನ್ನುವುದನ್ನು ಇತಿಹಾಸ ನಮಗೆ ತಿಳಿಸಿಕೊಡುತ್ತದೆ. ಆದರೆ ಇತಿಹಾಸದ ಚರ್ಚೆ, ಶೋಧನೆಗಳನ್ನು ಒಂದು ಜನಪ್ರಿಯ ಚಿತ್ರದಲ್ಲಿ ನಿರೀಕ್ಷಿಸುವುದೇ ತಪ್ಪು. ತನ್ನ ಮಿತಿಯಲ್ಲಿ ಗೋವಾರಿಕರ್ ‘ಮೊಹೆಂಜೋದಾರೋ’ ಚಿತ್ರವನ್ನು ಎಷ್ಟರಮಟ್ಟಿಗೆ ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ತಲುಪಿಸಿದ್ದಾರೆ ಎನ್ನುವುದಷ್ಟೇ ಇಲ್ಲಿ ಮುಖ್ಯವಾಗುತ್ತದೆ. ಕನಿಷ್ಟ ಮನರಂಜನೆಗಾದರೂ ಈ ಚಿತ್ರ ಬದ್ಧವಾಗಿದೆಯೇ ಎನ್ನುವ ದೃಷ್ಟಿಕೋನವನ್ನು ಇಟ್ಟುಕೊಂಡು ನೋಡಬೇಕಾಗುತ್ತದೆ. ಈ ನೆಲೆಯಲ್ಲಿ ನಾವು ನೋಡಿದರೂ, ಗೋವಾರಿಕರ್ ಅದರಲ್ಲಿ ಭಾಗಶಃ ವಿಫಲರಾಗಿದ್ದಾರೆ. ಒಂದು ಒಳ್ಳೆಯ ಆಶಯವನ್ನು ಚಿತ್ರ ಪ್ರತಿಪಾದಿಸುತ್ತದೆಯಾದರೂ, ದುರ್ಬಲ ಕತೆಯಿಂದಾಗಿ ಚಿತ್ರ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪುವುದಿಲ್ಲ. 

ಚಿತ್ರದ ಕತೆ 2016 ಬಿಸಿ(ಬಿಫೋರ್ ಕ್ರೈಸ್ಟ್) ಕಾಲದ್ದಾಗಿದ್ದರೂ, ಅದರ ನಾಯಕನ ಕತೆ ಮಾತ್ರ 70 ದಶಕದ ಬಾಲಿವುಡ್‌ನ ಹಳಸಲು ವಸ್ತು. ತಂದೆಯ ಕೊಲೆ. ಬೇರೆಯಾಗುವ ಮಗ. ಮತ್ತೆ ಅರಿಯದೇ ತನ್ನ ತಂದೆ ಆಳುತ್ತಿದ್ದ ನಾಡಿಗೆ ವಾಪಾಸಾಗುವುದು, ಅಲ್ಲಿ ತನ್ನ ತಂದೆ ಕೊಲೆಯಾಗಿರುವುದು ಅವನ ಅರಿವಿಗೆ ಬರುವುದು. ಮತ್ತು ಶತ್ರುವಿನ ವಿರುದ್ಧ ಸೇಡು ತೀರಿಸುವುದು. ಈ ಕತೆ ಬಾಲಿವುಡ್‌ನಲ್ಲಿ ಅದೆಷ್ಟೋ ಬಾರಿ ಬಂದು ಹೋಗಿದೆ. ಇಂತಹದೊಂದು ಬಬಲ್‌ಗಮ್‌ನ್ನು ಜಗಿಯಲು ಮೊಹೆಂಜೋದಾರೋ ಎನ್ನುವ 2016 ಕಾಲಘಟ್ಟವನ್ನು ಬಳಸುವ ಅಗತ್ಯವಿತ್ತೆ? ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಏಳುವುದು ಸಹಜ. ಅಂತೆಯೇ ರಾಜಮೌಳಿಯ ‘ಬಾಹುಬಲಿ’ ಮತ್ತು ಹಾಲಿವುಡ್‌ನ ಖ್ಯಾತ ಚಿತ್ರ ‘ಗ್ಲಾಡಿಯೇಟರ್’ ಎರಡರ ಕಲಬೆರಕೆಯ ವಾಸನೆ ನಿಮ್ಮ ಮೂಗಿಗೆ ಬಡಿದರೆ ಅದರಲ್ಲಿ ನಿಮ್ಮ ತಪ್ಪೇನೂ ಇಲ್ಲ. ಚಿತ್ರದ ಮೊದಲರ್ಧ ಬಾಹುಬಲಿ ಚಿತ್ರಕ್ಕೆ ಹೋಲಿಕೆಯಾದರೆ ಇನ್ನರ್ಧ ‘ಗ್ಲಾಡಿಯೇಟರ್’ನ್ನು ಹೋಲುತ್ತದೆ. ಇದೇ ಸಂದರ್ಭದಲ್ಲಿ ಬಾಹುಬಲಿ ಒಂದು ಚಂದಮಾಮ ಕತೆ. ಅದಕ್ಕೆ ಯಾವುದೇ ಗುರಿ, ಆಶಯ ಇದ್ದಿರಲಿಲ್ಲ. ಆದರೆ ಗೋವಾರಿಕರ್ ಅವರ ‘ಮೊಹೆಂಜೋದಾರೋ’ ನಾಯಕನ ಕತೆಯನ್ನು ಹೇಳುತ್ತಲೇ ಇನ್ನೊಂದು ದುರಂತವನ್ನೂ ಹೇಳುವ ಸಣ್ಣ ಪ್ರಯತ್ನ ಮಾಡುತ್ತದೆ. ಆ ಆಶಯವೇ ಈ ಚಿತ್ರದ ಹೆಗ್ಗಳಿಕೆ. ಅದನ್ನೇ ಮುಖ್ಯ ವಸ್ತುವಾಗಿಟ್ಟುಕೊಂಡು ಚಿತ್ರ ಮಾಡಿದ್ದರೂ ಗೋವಾರಿಕರ್ ಯಶಸ್ವಿಯಾಗುತ್ತಿದ್ದರು.

 ಹರಪ್ಪ ನಾಗರಿಕತೆಯ ಮೇಲೆ ದಾಳಿ ಮಾಡಿ, ಅದರ ತಳಹದಿಯ ಮೇಲೆ ಮೊಹೆಂಜೋದಾರೋ ನಗರ ನಾಗರಿಕತೆ ತಲೆಯೆತ್ತಿತ್ತು ಎಂದು ನಿರ್ದೇಶಕರು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಾರೆ. ಲಾಲಸೆ, ಲೋಭ, ಸ್ವಾರ್ಥ ತುಂಬಿದ ನಗರ ಲಾಲಸೆಯ ತಳಹದಿಯ ಮೇಲೆ ಮೊಹೆಂಜೋದಾರೋ ನಿಂತಿದೆ. ಸಿಂಧೂ ನದಿಯನ್ನು ಅವಲಂಬಿಸಿದ ಈ ನೆಲದ ಕಷಿಕರ ಹಿತಾಸಕ್ತಿಯನ್ನು ಬಲಿಕೊಟ್ಟು ಮೊಹೆಂಜೋದಾರೋ ನಗರವನ್ನು ಇನ್ನಷ್ಟು ವಿಸ್ತರಿಸುವ ಭಾರೀ ಕನಸನ್ನು ಅದರ ಪ್ರಧಾನ ಮಾಹಂ(ಕಬೀರ್ ಬೇಡಿ) ಕಾಣುತ್ತಾನೆ. ಸಿಂಧೂನದಿಗೆ ಬಹತ್ ಅಣೆಕಟ್ಟು ಕಟ್ಟಿ, ಅದರಲ್ಲಿ ಹರಿದು ಬರುವ ಚಿನ್ನದ ಗಟ್ಟಿಗಳನ್ನು ತಡೆದು, ಅಪಾರ ಸಂಪತ್ತನ್ನು ಸಂಗ್ರಹಿಸುವ ದುರಾಸೆ ಅವನದು. ಇದನ್ನು ವಿರೋಧಿಸಿದವರನ್ನೆಲ್ಲ ಸದೆಬಡಿಯುತ್ತಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭಾಗವಾಗಿರುವ ‘ವಿರಾಟ್’ನ್ನು ತನ್ನ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಾನೆ. ಅದಕ್ಕೆ ಬಲಿಯಾದವನಲ್ಲಿ ನಾಯಕ ಶರ್ಮನ್(ಹೃತಿಕ್ ರೋಷನ್)ನ ತಂದೆ ಸುರ್ಜನ್ ಕೂಡ ಒಬ್ಬ. ಈತ ಮೊಹೆಂಜೋದಾರೋದ ಪ್ರಧಾನನಾಗಿದ್ದ. ಆದರೆ ಮಾಹಂನ ಲೋಭದ ಮಾತುಗಳಿಗೆ ಮರುಳಾಗುವ ವಿರಾಟ್ ಸದಸ್ಯರೆಲ್ಲ ಮಾಹಂ ಪರವಾಗುತ್ತಾರೆ. ಅಣೆಕಟ್ಟನ್ನು ತಡೆಯಲು ಕಟ್ಟಕಡೆಯವರೆಗೆ ಪ್ರಯತ್ನಿಸುವ ಸುರ್ಜನ್ ಅಂತಿಮವಾಗಿ ಮಾಹಂನ ಮೋಸಕ್ಕೆ ಬಲಿಯಾಗಿ ಮರಣದಂಡನೆ ಶಿಕ್ಷೆ ಎದುರಿಸುತ್ತಾನೆ.

  ಅಣೆಕಟ್ಟಿನ ಪರಿಣಾಮವಾಗಿ ಸಿಂಧೂ ನದಿ ತನ್ನ ದಿಕ್ಕನ್ನು ಬದಲಿಸಿಕೊಳ್ಳುತ್ತದೆ. ಪರಿಣಾಮವಾಗಿ ಕೃಷಿಕರು ಭಾರೀ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕೃಷಿಗಿಂತ ಚಿನ್ನ ಮುಖ್ಯ ಎಂದು ಮಾಹಂ ಪ್ರತಿಪಾದಿಸುತ್ತಾನೆ. ಅದರಿಂದ ಇಡೀ ಮೊಹೆಂಜೋದಾರೋ ಅತ್ಯಾಧುನಿಕವಾಗುತ್ತದೆ, ಜನರೆಲ್ಲ ಈ ನಗರದ ಕಡೆಗೆ ಆಗಮಿಸುತ್ತಾರೆ, ಸಂಪತ್ತು ಅಧಿಕವಾಗುತ್ತದೆ ಎನ್ನುತ್ತಾನೆ. ಆದರೆ ರೈತರ ಕಷ್ಟಗಳು ಅಧಿಕವಾಗುತ್ತದೆ. ಸಿಂಧೂನದಿಯ ಅಣೆಕಟ್ಟಿನಿಂದ ರಾಜನಿಗೆ ಚಿನ್ನ ದೊರಕುತ್ತದೆ. ಆದರೆ ಜನರ ಸಮಸ್ಯೆ ಅದರಲ್ಲೂ ರೈತರ ಸಮಸ್ಯೆ ಭೀಕರವಾಗುತ್ತದೆ. ಇಂತಹ ಸಂದರ್ಭದಲ್ಲೇ ಮಳೆಗಾಲದಲ್ಲಿ ಸಿಂಧೂನದಿ ತುಂಬಿ ಹರಿದು, ಇಡೀ ಅಣೆಕಟ್ಟು ಒಡೆದು ಮೊಹೆಂಜೋದಾರೋ ನಗರವನ್ನು ಸರ್ವನಾಶ ಮಾಡುತ್ತದೆ. ನಾಯಕನ ಪ್ರವೇಶ, ಇಲ್ಲಿನ ರೈತರನ್ನು ಬದುಕಿಸುತ್ತದೆ. ನಾಶವಾದ ಮೊಹೆಂಜೋದಾರೋವನ್ನು ಬಿಟ್ಟು ಇವರು ಗಂಗಾ ನದಿಯ ಕಡೆಗೆ ವಲಸೆ ಬರುವುದರೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.

ಮೊಹೆಂಜೋದಾರೋ ನಾಶದ ಕತೆಯನ್ನು ಹೇಳುವ ಮೂಲಕ ಗೋವಾರಿಕರ್ ವರ್ತಮಾನದ ಭಾರತಕ್ಕೆ ಕನ್ನಡಿ ಹಿಡಿದಿದ್ದಾರೆ. ಅಭಿವದ್ಧಿಯ ಕುರಿತಂತೆ ಕನಸು ಕಾಣುವ, ಲಾಲಸೆ, ಲೋಭಕ್ಕೆ ಸಿಲುಕಿ ಮೊಹೆಂಜೋದಾರೋವನ್ನು ಬಲಿಕೊಟ್ಟ ಮಾಹಂ ಮತ್ತು ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿ ಇಡೀ ದೇಶವನ್ನು ತನ್ನ ಸ್ವಾರ್ಥ, ಲಾಲಸೆ, ಲೋಭಗಳ ಸಂತೃಪ್ತಿಗಾಗಿ ದುರಂತಕ್ಕೆ ತಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ಸಮೀಕರಣವೊಂದು ಚಿತ್ರದಲ್ಲಿ ನಡೆಯುತ್ತದೆ. ಮೊಹೆಂಜೋದಾರೋ ದುರಂತ ಮತ್ತು ಇಂದಿನ ದುರಂತಗಳ ಸಾಮ್ಯತೆಯನ್ನು ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸಬೇಕು.





Saturday, July 16, 2016

ಕಾಡಂಕಲ್ಲ್ ಮನೆ

ಈ ವರ್ಷ ನನ್ನ "ಇರುವೆ ಪ್ರಕಾಶನ''ದಿಂದ ನನ್ನದೇ ಕಾದಂಬರಿ "ಯುದ್ಧ" ಪ್ರಕಟಿಸ ಬೇಕು ಎಂದು ಯೋಜನೆ ರೂಪಿಸಿದ್ದೆ. 
ಆದರೆ ಇನ್ನೂ ಶೇಕಡಾ ೨೫ರಷ್ಟು ಬರೆಯುವ ಕೆಲಸ ಉಳಿದು ಬಿಟ್ಟಿದೆ. ಕಾದಂಬರಿ ಪೂರ್ತಿ ಮಾಡಿ ಮತ್ತೊಮ್ಮೆ ಅದನ್ನು ತಿದ್ದಿ ತೀಡುವಷ್ಟರಲ್ಲಿ ಈ ವರ್ಷ ಮುಗಿದೇ ಹೋಗಿ ಬಿಡಬಹುದು ಎನ್ನುವ ಭಯ ಇದೆ.

ಆದುದರಿಂದ ಈ ವರ್ಷ ನನ್ನ ಆತ್ಮೀಯರು, ಹಿರಿಯ ಕತೆಗಾರರು ಆಗಿರುವ ಮುಹಮ್ಮದ್ ಕುಳಾಯಿ ಅವರ "ಕಾಡಂಕಲ್ಲ್ ಮನೆ" ಕಾದಂಬರಿಯನ್ನು "ಇರುವೆ ಪ್ರಕಾಶನ''ದಿಂದ ಹೊರ ತರುವ ಆಲೋಚನೆ ಇದೆ. ಎಣಿಸಿದಂತೆ ಆದರೆ ನವೆಂಬರ್ ಹೊತ್ತಿನಲ್ಲಿ ಮುಹಮ್ಮದ್ ಕುಳಾಯಿ ಅವರ "ಕಾಡಂಕಲ್ ಮನೆ''ಯೊಳಗೆ ನೀವಿರುತ್ತೀರಿ. 
***
ಇರುವೆ ಪ್ರಕಾಶನದಿಂದ ಈಗಾಗಲೇ ಹೊರ ಬಂದಿರುವ ಎರಡು ಕೃತಿಗಳು
1. ಅಮ್ಮ ಹಚ್ಚಿದ ಒಲೆ-ಕವನ ಸಂಕಲನ- 100 ರೂ.
2. ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ-ಸೂಫಿಯ ಕಣ್ಣಲ್ಲಿ ಹನಿಗಳು -75 ರೂ.

ಎಂದಿನಂತೆ ನಿಮ್ಮ ಪ್ರೀತಿ, ವಿಶ್ವಾಸವನ್ನು ನಿರೀಕ್ಷಿಸುವೆ.

ಸಹೃದಯರು ಈ ಕೆಳಗಿನ ವಿಳಾಸಕ್ಕೆ ಎಂ ಓ ಮಾಡಿ ಪುಸ್ತಕ ತರಿಸಿ ಕೊಳ್ಳ ಬಹುದು.ತಮ್ಮ ವಿಳಾಸವನ್ನು ಕೆಳಗಿನ ಇಮೇಲ್ iruveprakashana@gmail.com ಅಥವಾ ಮೊಬೈಲ್ ಗೆ ಮೆಸ್ಸೇಜ್ ಮಾಡಬಹುದು.ಕೊರಿಯರ್‌ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.

B.M. BASHEER
MARVEL APARTMENT,
FLAT NO. 301,
1ST CROSS, SHIVA NAGARA,
OPP. SHRINIVAS COLLAGE,
PANDESHWARA,
MANGALORE-575 001
MOBILE- 944 8835 621
*****
ಅಥವಾ ......
B.M. BASHEER
A/C-NO-3 0 9 2 8 2 4 1 6 9 9
STATE BANK OF INDIA
PORT ROAD, MANGALORE BRANCH
IFSC CODE-SBIN 0 0 0 0 8 7 1
MOBILE-944 8835 621
iruveprakashana@gmail.com

ಈ ಅಕೌಂಟಿಗೆ ಪುಸ್ತಕ ಹಣವನ್ನು ಜಮಾಗೊಳಿಸಿ, ತಮ್ಮ ವಿಳಾಸವನ್ನು ಈ ಮೇಲ್ ಮೂಲಕ ಅಥವಾ ಮೊಬೈಲ್ ಮೆಸೇಜ್ ಮೂಲಕ ನೀಡಿದರೆ, ಕೊರಿಯರ್‌ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.

‘ಇರುವೆ ಪ್ರಕಾಶನ’ ನನ್ನ ಹೊಸ ಕನಸು!
ಕವನ ಸಂಕಲನಗಳು ನನ್ನ ವಿಶೇಷ ಮಕ್ಕಳು!!
ಇವೆರಡೂ ನಿಮ್ಮಿಂದ ವಿಶೇಷ ಪ್ರೀತಿಯನ್ನು ಬೇಡುತ್ತಿವೆ.

Wednesday, July 13, 2016

ಝಾಕಿರ್ ನಾಯ್ಕ್ ನಿಷೇಧ ಯಾಕೆ ಬೇಡ?

ಝಾಕಿರ್ ನಾಯ್ಕ್  ಪ್ರಕಾರ ನಾನು ನರಕಕ್ಕೆ ಅರ್ಹ ವ್ಯಕ್ತಿ. ಇರಲಿ. ಝಾಕಿರ್ ನಾಯ್ಕ್ರಂಥವರು ಇರುವ ಸ್ವರ್ಗ ನನಗೆ ಬೇಕಾಗಿಲ್ಲ. ಆದರೂ ನಾನು ಝಾಕಿರ್ ನಾಯ್ಕ್ರನ್ನು ನಿಷೇಧಿಸಬೇಕು ಎಂದು ಒತ್ತಾಯಿಸೋದಿಲ್ಲ. ಯಾಕೆಂದರೆ, ನಾನು ನರಕಕ್ಕೆ ಅರ್ಹ ವ್ಯಕ್ತಿ ಎಂದು ಹೇಳುತ್ತಿರುವವರು ಕೇವಲ ಝಾಕಿರ್ ನಾಯ್ಕ್ ಮಾತ್ರವೇ ಅಲ್ಲ. ಎಲ್ಲ ಧರ್ಮಗಳೂ ಹೇಳುವುದು "ನಾನೇ ನಿಜ. ಉಳಿದವರು ಸುಳ್ಳು. ನಾನೇ ಶ್ರೇಷ್ಟ. ಆದುದರಿಂದ ನಮ್ಮನ್ನು ಸೇರಿಸಿಕೊಳ್ಳಿ" ಎಂದೇ ಆಗಿದೆ. "ಬೌದ್ಧ ಧರ್ಮವೇ ಜನರಿಗೆ ಇರುವ ಪರಿಹಾರ" ಎಂದು ನನ್ನ ಗೆಳೆಯರು ಹೇಳುವಾಗ ನನಗೆ ಅದರಲ್ಲಿರುವ ಧನಾತ್ಮಕ ಅಂಶ ನೆನಪಾಗುತ್ತದೆಯೇ ಹೊರತು, ಶ್ರೀಲಂಕಾ, ರೊಹಿಂಗ್ಯಾದಲ್ಲಿ ಹಿಂಸಾಚಾರ ನಡೆಸುತ್ತಿರುವ ಬೌದ್ಧ ಬಿಕ್ಕುಗಳು ನೆನಪಾಗುವುದಿಲ್ಲ. ಅದೆಷ್ಟೋ ಕ್ರಿಶ್ಚಿಯನ್ ಧಾರ್ಮಿಕ ಚಾನೆಲ್‌ಗಳು ಪ್ರತಿ ದಿನ ತನ್ನ ತನ್ನ ದೇವರ ಶ್ರೇಷ್ಠತೆಗಳನ್ನು, ಪವಾಡಗಳನ್ನು ಘೋಷಿಸುತ್ತಿರುತ್ತವೆ. ಅವೆಲ್ಲ ಪಕ್ಕಕ್ಕಿರಲಿ. ನಾವು ಬಾಲ್ಯದಲ್ಲೇ ಓದಿ ಹಾಡಿದ, ಪುರಂಧರ ದಾಸರೇ ಹೇಳುತ್ತಾರೆ ‘‘ಹರಿಯನ್ನು ಜಪಿಸದೇ ಮೋಕ್ಷ ಇಲ್ಲ’’ ಎಂದು. ಆದರೂ ನಾನು ಪುರಂಧರ ದಾಸರ ಹಾಡುಗಳನ್ನು ಇಷ್ಟ ಪಡುತ್ತೇನೆ. ಮಧ್ವಚಾರ್ಯರಂತೂ ಶೂದ್ರರನ್ನು ‘ನಿತ್ಯ ನಾರಕಿಗಳು’ ಎಂದು ಕರೆಯುತ್ತಾರೆ. ಇದರ ಅರ್ಥ, ಶೂದ್ರರಿಗೆ ಸ್ವರ್ಗಕ್ಕೆ ಹೋಗಲು ಯಾವ ದಾರಿಯೂ ಇಲ್ಲ. ಇನ್ನು ನನ್ನಂತಹ ಮ್ಲೇಚ್ಛನ ಬಗ್ಗೆ ಮಧ್ವರ ಅಭಿಪ್ರಾಯ ಹೇಗಿರಬಹುದು ಎಂದು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಝಾಕಿರ್ ನಾಯ್ಕ್ನ ಪ್ರಕಾರ, ಅವರ ಚಿಂತನೆಗಳನ್ನು ನಾವು ಅಳವಡಿಸಿಕೊಂಡರೆ ನಮಗೆ ಸ್ವರ್ಗ ಸಿಗುತ್ತದೆ. ಮಧ್ವರಲ್ಲಿ ಆ ಅವಕಾಶವೂ ನಮಗಿಲ್ಲ. ಈ ಜಗತ್ತಿನಲ್ಲಿ ಎಲ್ಲ ಧರ್ಮಗಳು ನಮ್ಮದು ಶ್ರೇಷ್ಟ, ನಮ್ಮನ್ನು ಸೇರಿಕೊಳ್ಳಿ ಎಂದರೆ ಬ್ರಾಹ್ಮಣ ಧರ್ಮ ಮಾತ್ರ, ನಾವೇ ಶ್ರೇಷ್ಠ, ನಮ್ಮಿಂದ ದೂರ ಇರಿ ಎಂದು ಹೇಳುತ್ತದೆ. ಇಂತಹ ಬ್ರಾಹ್ಮಣ ಧರ್ಮವನ್ನೇ ನಾವು ಒಪ್ಪಿಕೊಳ್ಳುತ್ತಿರುವಾಗ, ಅದನ್ನು ಪ್ರಸಾರಿಸಲು ನೂರಾರು ಟಿವಿ ಚಾನೆಲ್‌ಗಳು ಇರುವಾಗ, ಝಾಕಿರ್ ನಾಯ್ಕ್ ಅವರನ್ನು, ಅವರ ಚಾನೆಲ್‌ಗಳನ್ನು ನಿಷೇಧಿಸಬೇಕು ಎನ್ನುವುದು ಸಂವಿಧಾನ ವಿರೋಧಿಯಾಗುತ್ತದೆ. ಈ ದೇಶದಲ್ಲಿ ರಾಮ್‌ದೇವ್, ರವಿಶಂಕರ್ ಸಹಿತ ನೂರಾರು ಸತ್ಸಂಗಿಗಳಿಗೆ ತಮ್ಮ ತಮ್ಮ ಟಿವಿ ಚಾನೆಲ್‌ಗಳಲ್ಲಿ ತಮ್ಮ ತಮ್ಮ ಧರ್ಮದ ಶ್ರೇಷ್ಟತೆಯನ್ನು ಬೋಧಿಸುವುದಕ್ಕೆ ಅವಕಾಶವಿದೆ ಎಂದಾದರೆ, ಝಾಕಿರ್ ನಾಯ್ಕ್ಗೂ ಇದೆ. ಝಾಕಿರ್ ನಾಯ್ಕ್ ತನ್ನನ್ನು ದೇವರು ಎಂದು ಘೋಷಿಸಿಲ್ಲ. ಅದೆಷ್ಟೋ ದೇವಮಾನವರು, ಅಂದರೆ ತಮ್ಮನ್ನು ತಾವು ದೇವರ ಅವತಾರ ಎಂದು ಘೋಷಿಸಿಕೊಂಡು ಲೂಟಿ ಮಾಡುವವರಿಗೆ, ಜನರನ್ನು ಮೋಸ ಗೊಳಿಸುವವರಿಗೆ ಇಲ್ಲಿ ಅವಕಾಶವಿದೆ ಎಂದ ಮೇಲೆ ಝಾಕಿರ್ ನಾಯ್ಕ್ಗೂ ಅವಕಾಶ ಇರಬೇಕು ಎಂದು ನಾನು ಹೇಳುತ್ತೇನೆ.

ಎಲ್ಲ ಧಾರ್ಮಿಕ ಚಾನೆಲ್‌ಗಳಂತೆಯೇ ಝಾಕಿರ್ ನಾಯ್ಕ್ ಕೂಡ ತನ್ನದೇ ಆಗಿರುವ ‘ಪೀಸ್ ಟಿವಿ’ಯನ್ನು ಹೊಂದಿದ್ದಾರೆ. ವಿಶೇಷವೆಂದರೆ, ಇವರು ಸೂಟುಬೂಟು ಧರಿಸುತ್ತಾರೆ. ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಭಗವದ್ಗೀತೆಯನ್ನು, ಬೈಬಲ್‌ಗಳನ್ನು ಕಂಠಪಾಠ ಮಾಡಿಕೊಂಡಿರುವ ಇವರು, ತನ್ನ ವಾದಕ್ಕೆ ಪೂರಕವಾಗಿ ಅವುಗಳನ್ನು ನಿರರ್ಗಳವಾಗಿ, ಅಧ್ಯಾಯ, ಅಂಕಿ ಸಂಕಿಗಳ ಜೊತೆಗೆ ಮಂಡಿಸುತ್ತಾರೆ. ಈ ಹಿಂದೆ ರವಿಶಂಕರ್ ಸಹಿತ ಹತ್ತು ಹಲವು ಹಿಂದೂ ಧಾರ್ಮಿಕ ನಾಯಕರ ಜೊತೆಗೆ ವೇದಿಕೆ ಹಂಚಿಕೊಂಡು ಚರ್ಚೆ, ವಿಚಾರವಿನಿಮಯ ಮಾಡಿಕೊಂಡ ಖ್ಯಾತಿಯೂ ಇವರಿಗಿದೆ. ಧಾರ್ಮಿಕ ಚಾನೆಲ್‌ಗಳಿರುವುದೇ ತನ್ನ ಧರ್ಮ ಶ್ರೇಷ್ಟ ಎಂದು ನಂಬಿ,  ಅದರ ಕುರಿತಂತೆ ಪ್ರಚಾರ ಮಾಡುವುದಕ್ಕೆ. ಹೀಗಿರುವಾಗ, ಝಾಕಿರ್ ನಾಯ್ಕ್ ತನ್ನ ಧರ್ಮಕ್ಕೆ ಮೀಸಲಾಗಿರುವ ತನ್ನ ಟಿವಿಯಲ್ಲಿ  ಅದನ್ನೇ ಮಂಡಿಸುತ್ತಾ ಇದ್ದರೆ ಅದನ್ನು ಅತಿರೇಕ ಎಂದು ಹೇಳುವುದು ಹೇಗೆ?

ಹೀಗಿರುವಾಗ ನಮಗೆ ಎರಡು ಮಾರ್ಗಗಳು ಇವೆ. ಒಂದು, ಎಲ್ಲ ಧಾರ್ಮಿಕ ಚಾನೆಲ್‌ಗಳನ್ನು ನಿಷೇಧಿಸಲು ಒತ್ತಾಯಿಸೋದು. ಅಥವಾ ಝಾಕಿರ್ ಮಂಡಿಸುವ ಇಸ್ಲಾಂ ಹೇಗೆ ಸುಳ್ಳು ಎನ್ನುವುದನ್ನು ಸಾಬೀತು ಮಾಡುವುದು. ಅದರ ಬದಲಿಗೆ ನಾವು ಝಾಕಿರ್‌ನನ್ನೇ ನಿಷೇಧಿಸಿದರೆ, ಅದು ನಮ್ಮ ಸೋಲು ಮತ್ತು ಝಾಕಿರ್‌ನ ಗೆಲುವಾಗುತ್ತದೆ. ಝಾಕಿರ್ ನಾಯ್ಕ್ನ ಮಾತುಗಳಿಗೆ ಉತ್ತರಕೊಡಲು ಸಾಧ್ಯವಿಲ್ಲದೆ ಮಾಡಿದ ಹತಾಶೆಯ ಪ್ರಯತ್ನ ಎಂದೂ ಅವರ ಅಭಿಮಾನಿಗಳು ಹೇಳಬಹುದು. ಇದು ಝಾಕಿರ್‌ಗೆ ಇನ್ನಷ್ಟು ಅಭಿಮಾನಗಳನ್ನು ಸೃಷ್ಟಿಸುತ್ತದೆ. ಕಳೆದ ಒಂದು ವಾರಗಳಿಂದ ಝಾಕಿರ್ ಕುರಿತಂತೆ ನಡೆಯುತ್ತಿರುವ ಚರ್ಚೆಯ ಪರಿಣಾಮ ಏನೂ ಎಂದರೆ, ಅವನ ಬಗ್ಗೆ ಗೊತ್ತೇ ಇಲ್ಲದ ಯುವಕರೂ ‘ಪೀಸ್’ ಟಿವಿಯನ್ನು ನೋಡುತ್ತಿದ್ದಾರೆ. ಅಂದರೆ ಪೀಸ್ ಟಿವಿಯ ವೀಕ್ಷಕರು ಅಧಿಕಗೊಂಡಿದ್ದಾರೆ. 

ಝಾಕಿರ್ ನಾಯ್ಕ್ ಮೇಲಿರುವ ಬಹುದೊಡ್ಡ ಆರೋಪ ಅಂದರೆ, ಆತ ಸಾಮೂಹಿಕವಾಗಿ ಮತಾಂತರ ಮಾಡುತ್ತಾನೆ. ಅವರಲ್ಲಿ ಯುವಕರೇ ಅಧಿಕ. ಮತಾಂತರವನ್ನು ಆತ ಕೋವಿ ಹಿಡಿದೋ, ಬಲವಂತವಾಗಿಯೋ ಮಾಡುತ್ತಿಲ್ಲ. ಅಥವಾ ಹಣದ ಆಮಿಷಗಳಿಂದಲೂ ಈತ ಮತಾಂತರ ಮಾಡುತ್ತಿಲ್ಲ. ತನ್ನ ಮಾತುಗಳಿಂದ ಅವರನ್ನು ಒಲಿಸಿ ಅಥವಾ ಮರುಳು ಮಾಡಿಯೇ ಮಾಡುತ್ತಾನೆ. ಮತಾಂತರ ಆಗುತ್ತಿರುವವರೆಲ್ಲ ವಿದ್ಯಾವಂತ ಯುವಕರೇ ಆಗಿದ್ದಾರೆ. ಒಬ್ಬನ ಮಾತು ಸರಿ ಅನ್ನಿಸಿದ ಬಳಿಕವೇ ಇನ್ನೊಬ್ಬ ಮತಾಂತರ ಆಗುತ್ತಾನೆ. ಹೀಗಿರುವಾಗ ಅದನ್ನು ನಾವು ತಪ್ಪು ಎನ್ನುವುದು ಹೇಗೆ? ಕೃಷ್ಣ ಮಠದಲ್ಲಿ ಶೂದ್ರರನ್ನು ತಮ್ಮ ಪಂಕ್ತಿಯಲ್ಲಿ ಸ್ವೀಕರಿಸದೇ ಇರುವುದನ್ನು ವ್ಯವಸ್ಥೆ ಧಾರ್ಮಿಕ ಅಭಿವ್ಯಕ್ತಿಯಾಗಿ ಸ್ವೀಕರಿಸಿಕೊಂಡಿರುವಾಗ, ಝಾಕಿರ್‌ನಾಯ್ಕ್ ತನ್ನ ಧರ್ಮಕ್ಕೆ ಬಂದವರನ್ನು ಸ್ವೀಕರಿಸುತ್ತಾನೆ ಎನ್ನುವುದು ಆಕ್ಷೇಪಾರ್ಹವಾಗುವುದು ಹೇಗೆ? ಝಾಕಿರ್ ನಾಯ್ಕ್ರನ್ನು ತೊಗಾಡಿಯಾ, ಪ್ರಮೋದ್ ಮುತಾಲಿಕ್ ಜೊತೆಗೆ ಸಮೀಕರಿಸುವುದನ್ನು ನಾನು ಒಪ್ಪುವುದಿಲ್ಲ. ಝಾಕಿರ್ ನಾಯ್ಕ್ನನ್ನು ನಾನು ಮಧ್ವ ಸಿದ್ಧಾಂತಗಳಿಗೆ ಮುಡಿಪಾಗಿರುವ ಪೇಜಾವರ ಶ್ರೀ, ಅಥವಾ ಇತರ ನೂರಾರು ಸತ್ಸಂಗಿಗಳ ಜೊತೆಗೆ ಸಮೀಕರಿಸಬಹುದು.

ಝಾಕಿರ್‌ನಾಯ್ಕ್ ಭಯೋತ್ಪಾದನೆಯನ್ನು ಸಮರ್ಥಿಸುತ್ತಾರೆ ಎನ್ನುವುದು ಬರೇ ಮಾಧ್ಯಮಗಳ ಆರೋಪ. ಆ ಕುರಿತಂತೆ ಯಾವುದೇ ದಾಖಲೆಗಳಿದ್ದಿದ್ದರೆ ಇಷ್ಟರಲ್ಲೇ ಅವರ ಮೇಲೆ ಪ್ರಕರಣ ದಾಖಲಾಗುತ್ತಿತ್ತು. ಇಸ್ಲಾಮಿಗೂ ಭಯೋತ್ಪಾದನೆಗೂ ಸಂಬಂಧವಿಲ್ಲ ಎನ್ನುವುದನ್ನು ಆತ ತನ್ನ ಭಾಷಣಗಳಲ್ಲಿ ಪದೇ ಪದೇ ಘೋಷಿಸುತ್ತಿರುತ್ತಾರೆ. ಇನ್ನೊಂದು ಧರ್ಮವನ್ನು ಝಾಕಿರ್ ತಮ್ಮ ಭಾಷಣದಲ್ಲಿ ವಿಮರ್ಶಿಸಿದ್ದನ್ನು, ಟೀಕಿಸಿದ್ದನ್ನು ಹಾಗೂ ಆ ಮೂಲಕ ತನ್ನ ಧರ್ಮವನ್ನು ಸಮರ್ಥಿಸಿಕೊಂಡಿದ್ದನ್ನು ನಾನು ಕೇಳಿದ್ದೇನೆ. ಆದರೆ ಇನ್ನೊಂದು ಧರ್ಮವನ್ನು ಯಾವತ್ತೂ ನಿಂದಿಸಿಲ್ಲ. ಬಹಿರಂಗವಾಗಿ ಇನ್ನೊಂದು ಧರ್ಮದ ಬಗ್ಗೆ ಪ್ರಚೋದನಕಾರಿ ಮಾತನಾಡಿಲ್ಲ. ಆದರೆ ತೊಗಾಡಿಯಾದಿಗಳು ಇದನ್ನು ಮಾಡುತ್ತಿದ್ದಾರಾದರೂ ಈವರೆಗೆ ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ಹೀಗಿರುವಾಗ ಝಾಕಿರ್ ನಾಯ್ಕ್ನ್ನು ನಿಷೇಧಿಸಲು ಹೊರಡುವ ಸರಕಾರದ ಪ್ರಯತ್ನ, ಆತನಿಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಲು ಸಾಧ್ಯವಾಗದ ಕೆಲವು ಧಾರ್ಮಿಕ ಹಿತಾಸಕ್ತಿಗಳ ಹತಾಶೆಯ ಪ್ರಯತ್ನ ಎಂದೇ ನಾನು ಭಾವಿಸುತ್ತೇನೆ. 

ಧಾರ್ಮಿಕ ಚಾನೆಲ್‌ಗಳು ಇರಬಹುದು. ಅಥವಾ ಅದನ್ನು ಸಾಮೂಹಿಕವಾಗಿ ನಿಷೇಧಿಸಬಹುದು. ಧಾರ್ಮಿಕ ಚಾನೆಲ್‌ಗಳು ಪ್ರತ್ಯೇಕವಾಗಿರುವುದರಿಂದ ಅದರಲ್ಲಿ ಆಸಕ್ತಿಯಿದ್ದವರಷ್ಟೇ ಅದನ್ನು ನೋಡುತ್ತಾರೆ. ನಾನಂತೂ ಒಂದೆರಡು ಬಾರಿಯಷ್ಟೇ ಆ ಚಾನೆಲ್‌ನ್ನು ನೋಡಿದ್ದೇನೆ. ದೇವರನ್ನು ತಲುಪುವ ದಾರಿಯನ್ನು ಝಾಕಿರ್ ನಾಯ್ಕ್ ಮೂಲಕ ಕಲಿಯುವ ಅಗತ್ಯವಿಲ್ಲ ಎನ್ನುವುದು ನನಗೆ ಯಾವತ್ತೋ ಮನವರಿಕೆಯಾಗಿದೆ. ಆದರೆ ಇದೀಗ ನಡೆಯುತ್ತಿರುವ ಬೆಳವಣಿಗೆ ಝಾಕಿರ್‌ನಾಯ್ಕ್ಗೆ ಸಿಕ್ಕಿರುವ ಪುಕ್ಕಟೆ ಜಾಹೀರಾತುಗಳೇ ಹೊರತು ಇನ್ನೇನು ಅಲ್ಲ. ನನ್ನ ಸಮಸ್ಯೆ ಇಂತಹ ಧಾರ್ಮಿಕ ಚಾನೆಲ್‌ಗಳಲ್ಲ. ನಾವು ದಿನ ನಿತ್ಯ ನ್ಯೂಸ್ ಚಾನೆಲ್‌ಗಳು ಎಂದು ನಂಬಿಕೊಂಡು ಬಂದಿರುವ ಕನ್ನಡವೂ ಸೇರಿದಂತೆ ದೇಶದ ಚಾನೆಲ್‌ಗಳು ಧಾರ್ಮಿಕ ವಿಷಯಗಳನ್ನು, ಮೌಢ್ಯದ ವಿಷಯಗಳನ್ನು ಹರಡುತ್ತಿರುವುದು. ಎಲ್ಲ ವರ್ಗದ ಜನರೂ ನೋಡುವ ಚಾನೆಲ್‌ಗಳು ಬ್ರಾಹ್ಮಣ್ಯದ ಮೌಢ್ಯಗಳನ್ನು, ವಾಸ್ತುಗಳನ್ನು, ಜ್ಯೋತಿಷ್ಯಗಳನ್ನು ತೋರಿಸಿ ಜನರನ್ನು ಮೋಸ ಗೊಳಿಸುತ್ತಿರುವುದು. ಮೊದಲು ನ್ಯೂಸ್‌ಚಾನೆಲ್‌ಗಳಲ್ಲಿರುವ ಈ ಭಯೋತ್ಪಾದಕರಿಗೆ ತಡೆ ಬೀಳಬೇಕಾಗಿದೆ. ಹಾಗೆಯೇ ಝಾಕಿರ್ ನಾಯ್ಕ್ ತನ್ನ ಬೋಧನೆಯಲ್ಲಿ ಭಯೋತ್ಪಾದನೆಗೆ, ಉಗ್ರಗಾಮಿಗಳಿಗೆ ಬೆಂಬಲ ನೀಡಿದ್ದು ಹೌದು ಎಂದಾದರೆ ಆತನ ಮೇಲೆ ಮೊಕದ್ದಮೆ ಹೂಡಬಹುದು. ಬಂಧಿಸಬಹುದು. ಆದರೆ ಅಂತಹ ಯಾವ ಸಾಕ್ಷಿಯೂ ಇಲ್ಲದೆ, ಬರೇ ಮಾಧ್ಯಮಗಳ ವದಂತಿಗಳನ್ನು ಮುಂದಿಟ್ಟು ಝಾಕಿರ್ ನಾಯ್ಕ್ನ್ನು ನಿಷೇಧಿಸಿದರೆ ಅದರಿಂದ ಇನ್ನಷ್ಟು ಅಪಾಯವಿದೆ. ಝಾಕಿರ್ ತನ್ನ ಅಭಿಮಾನಿಗಳನ್ನು ಆ ಮೂಲಕ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಅದು ನಡೆಯುತ್ತಿದೆ ಕೂಡ.

Friday, May 27, 2016

ಯು ಟರ್ನ್: ತಿರುಗಿ ಹೊಡೆವ ಕರ್ಮ ಫಲ!

‘ಯೂ ಟರ್ನ್’ ಚಿತ್ರ ನೋಡಿದೆ.
ಇದರ ಕುರಿತಂತೆ ಕೆಲವು ಮಾತುಗಳನ್ನು ಹಂಚಿಕೊಳ್ಳಲೇಬೇಕಾಗಿದೆ.
ಮೂರು ನಿಮಿಷದ ಒಂದು ಕಿರು ಚಿತ್ರವಾಗಬಹುದಾದ ವಸ್ತುವನ್ನು ಎರಡೂವರೆ ಗಂಟೆಯ ಥ್ರಿಲ್ಲರ್ ಚಿತ್ರವನ್ನಾಗಿಸಿದ ನಿರ್ದೇಶಕರ ಸಾಹಸಕ್ಕೆ ಭಲೇ ಎನ್ನಲೇ ಬೇಕು. ಹೌದು, ಚಿತ್ರದ ಉದ್ದೇಶವನ್ನು ಹೇಳಲು, ನಿಜವಾದ ಕತೆಯನ್ನು ಹೇಳಲು ಮೂರು ನಿಮಿಷ ಧಾರಾಳ ಸಾಕು. ಮೂರು ಪಾತ್ರಗಳನ್ನಷ್ಟೇ ಇಟ್ಟುಕೊಂಡು ಈ ಕಿರು ಚಿತ್ರವನ್ನು ಮುಗಿಸಿ ಬಿಡಬಹುದು. ಹಾಗೆಂದು ಚಿತ್ರವನ್ನು ನಿರ್ದೇಶಕ ಎಲ್ಲೂ ವಿನಾಕಾರಣ ಎಳೆದಿಲ್ಲ. ಚಿತ್ರದ ನಿರೂಪಣೆಯಲ್ಲಿ ಯಾವುದೂ ಅನಗತ್ಯ ಅನ್ನಿಸುವುದಿಲ್ಲ.
ಚಿತ್ರ ಆರಂಭದಿಂದ ಕೊನೆಯವರೆಗೂ ನಮ್ಮನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ.


ನಾವು ದಿನ ನಿತ್ಯ, ತೀರಾ ಸಣ್ಣ ತಪ್ಪು ಎಂದು ಭಾವಿಸಿ ಮಾಡುವ ಕೃತ್ಯವನ್ನು ಇಟ್ಟುಕೊಂಡು ನಿರ್ದೇಶಕ ಸಿನಿಮಾ ಮಾಡಿದ್ದು ಅಭಿನಂದನೀಯ. ಒಂದು ಥ್ರಿಲ್ಲರ್ ಚಿತ್ರದ ಮೂಲಕವೂ ಅದ್ಭುತವಾದ ಮಾನವೀಯ ಸಂದೇಶವನ್ನು ನೀಡಬಹುದು ಎಂದು ಯೋಚಿಸಿದ ಪವನ್ ಕುಮಾರ್ ಅವರಿಗೆ ಅಭಿನಂದನೆಗಳು. ಚಿತ್ರ ಆಮಿರ್ ಖಾನ್‌ನ ‘ತಲಾಶ್’ನ್ನು ಎಲ್ಲೋ ಹೋಲುತ್ತದೆ. ಆದರೆ ತಲಾಶ್ ಚಿತ್ರ ಥ್ರಿಲ್ಲರ್ ಚಿತ್ರದ ಬಿಗಿಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿತ್ತು. ‘ಯೂ ಟರ್ನ್’ ಚಿತ್ರ ಆಮಿರ್ ಖಾನ್‌ನ ತಲಾಶ್‌ಗಿಂತ ಹಲವು ಪಟ್ಟು ಚೆನ್ನಾಗಿದೆ. ಕ್ಲೆೃಮಾಕ್ಸ್‌ನ ರಹಸ್ಯವನ್ನು ಉಳಿಸಿಕೊಳ್ಳುವಲ್ಲಿಯೂ ನಿರ್ದೇಶಕ ಯಶಸ್ವಿಯಾಗಿದ್ದಾರೆ. ಕ್ಲೆೃಮಾಕ್ಸ್ ಬಹಿರಂಗವಾಗುವಾಗ ಅದು ಇನ್ನಷ್ಟು ತೀವ್ರವಾಗಿರಬೇಕಾಗಿತ್ತು. ಇಡೀ ಚಿತ್ರದಲ್ಲಿ ಗಮನಾರ್ಹವಾದುದು, ಸಬ್‌ಇನ್ಸ್‌ಪೆಕ್ಟರ್ ನಾಯಕ್ ಪಾತ್ರದಲ್ಲಿ ರೋಜರ್ ನಾರಾಯಣ್ ಅಭಿನಯ. ಒಬ್ಬ ಸಹೃದಯಿ ಯುವ ಪೊಲೀಸ್ ವ್ಯಕ್ತಿತ್ವವನ್ನು ಅವರು ಪರಿಣಾಮಕಾರಿಯಾಗಿ ತಮ್ಮ ನಟನೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪತ್ರಕರ್ತೆ ರಚನಾ ಪಾತ್ರದಲ್ಲಿ ಶೃದ್ಧಾ ಶ್ರೀನಾಥ್ ಅಭಿನಯವೂ ಪರವಾಗಿಲ್ಲ. ರಾಧಿಕಾ ಚೇತನ್ ಅವರ ಮಾಯಾ ಪಾತ್ರ ಅಷ್ಟೇನೂ ತೀವ್ರವಾಗಿ ತಟ್ಟುವುದಿಲ್ಲ.


 ಪವನ್ ಕುಮಾರ್ ಅವರದು ಇದು ಮೂರನೇ ಚಿತ್ರ. ಲೈಫ್ ಇಷ್ಟೇನೆ...ಒಬ್ಬ ಯುವಕನ ಒಳಗಿನ ಪ್ರಾಯದ ತಳಮಳನ್ನು ವಿಭಿನ್ನವಾಗಿ ನಿರೂಪಿಸಿದ ಚಿತ್ರ. ಲೂಸಿಯಾ ಕುರಿತಂತೆ ಹೇಳಲೇ ಬೇಕಾಗಿಲ್ಲ. ರಾಜ್ಯದಾಚೆಗೂ ಚರ್ಚೆಗೊಳಗಾದ ಚಿತ್ರ. ಇದೀಗ ‘ಯೂ ಟರ್ನ್’ನಲ್ಲೂ ಅವರು ಯಶಸ್ವಿಯಾಗಿದ್ದಾರೆ. ಒಂದು ಚಿತ್ರದ ಗೆಲುವಿನ ಹ್ಯಾಂಗೋವರ್‌ನಲ್ಲಿ ಸಿಲುಕಿಕೊಳ್ಳದೇ ವಿಭಿನ್ನವಾಗಿ ಚಿತ್ರ ಮಾಡುತ್ತಾ ಹೋಗುವುದು ನಿರ್ದೇಶಕನ ಪಾಲಿಗೆ ಒಂದು ಸವಾಲೇ ಸರಿ. ಈ ಸವಾಲನ್ನು ಪವನ್ ಕುಮಾರ್ ಗೆದ್ದಿರುವುದು ನೆಮ್ಮದಿಯ ವಿಷಯ. ಇವರಿಂದ ಕನ್ನಡ ಚಿತ್ರರಂಗ ಇನ್ನಷ್ಟು ನಿರೀಕ್ಷಿಸುತ್ತಿದೆ.

Thursday, April 28, 2016

ಆದರ್ಶ ಮತ್ತು ಇತರ ಕತೆಗಳು

ಯಾವಾಗ?
ಇಬ್ಬರು ನಟ ನಟಿಯರು ಮದುವೆಯಾದರು.
ಮಾಧ್ಯಮದವರು ಪ್ರಶ್ನಿಸಿದರು.
‘‘ಶುಭಾಶಯಗಳು ಸಾರ್...ಡೈವರ್ಸ್ ಯಾವಾಗ ಇಟ್ಕೊಂಡಿದ್ದೀರಾ?

ಗಾಬರಿ
‘‘ಯಾರೇ ಅದು ನಿನ್ನೊಟ್ಟಿಗೊಬ್ಬ ಹುಡುಗ’’
ಅಜ್ಜಿ ಗಾಬರಿಯಿಂದ ಕೇಳಿದಳು.
‘‘ಗಾಬರಿ ಪಡಬೇಡ...ನನ್ನ ಕ್ಲಾಸ್‌ಮೇಟ್...’’
‘‘ಗಾಬರಿ ನಿನ್ನ ಬಗ್ಗೆ ಅಲ್ಲ, ಪಾಪ ಆ ಮುಗ್ಧ ಹುಡುಗನ ಬಗ್ಗೆ...’’ ಅಜ್ಜಿ ಗೊಣಗುತ್ತಾ ಒಳ ಹೋದಳು. 

ರಕ್ತ
ನಿನ್ನೆ ಸಂಜೆ ಆ ಬೀದಿಯಲ್ಲಿ ಗಲಭೆ ನಡೆದಿತ್ತು.
ಬೆಳ್ಳಂಬೆಳಗ್ಗೆ ಎಂದಿನಂತೆ ಕಸ ಗುಡಿಸುವ ಹೆಂಗಸು ರಸ್ತೆ ಗುಡಿಸ ತೊಡಗಿದಳು.
ಗುಡಿಸುತ್ತಾ ಹೋದಂತೆ ರಸ್ತೆಯ ಅಲ್ಲಲ್ಲಿ ರಕ್ತ ಚೆಲ್ಲಿತ್ತು.
ಅದ ನೋಡಿ ಅವಳ ಕಸಬರಿಕೆ ಸ್ತಬ್ಧವಾಯಿತು.
ನಿನ್ನೆ ರಾತ್ರಿಯಿಂದ ಅವಳ ಮಗ ಮನೆಗೆ ಬಂದಿರಲಿಲ್ಲ.

ಹಕ್ಕು
‘‘ಅಷ್ಟು ಜೋರಾಗಿ ನಗಬೇಡವೆ?
‘‘ಯಾಕಮ್ಮ...’’
‘‘ಜೋರಾಗಿ ನಗುವುದು ಹುಡುಗರ ಹಕ್ಕು. ಬೇಕಾದರೆ ಜೋರಾಗಿ ಅಳು. ಅದು ನಿನ್ನ ಹಕ್ಕು’’

ದನ
ಬಡ ಮಗು ತಾಯಿಯಲ್ಲಿ ಅಚ್ಚರಿಯಿಂದ ಕೇಳಿತು ‘‘ದನ ಹಾಲು ಕೊಡತ್ತಂತೆ ಹೌದೇನಮ್ಮ?’’
ತಾಯಿ ಒಲೆ ಊದುತ್ತಾ ಹೇಳಿದಳು ‘‘ಶ್ರೀಮಂತರಿಗೆ ದನ ಹಾಲು ಕೊಡತ್ತೆ. ಬಡವರಿಗೆ ಮಾಂಸ ಕೊಡತ್ತೆ...ರಾಜಕಾರಣಿಗಳಿಗೆ ಓಟು ಕೊಡತ್ತೆ ಕಂದಾ...’’

ಆದರ್ಶ
‘‘ಅವರದು ಅಂತರ್ಜಾತಿ ವಿವಾಹವಂತೆ...’’ ಅವನು ಹೇಳಿದ.
‘‘ಛೆ...ಲವ್ ಜಿಹಾದ್...’’ ಅವನು ಆಕ್ರೋಶಗೊಂಡ.
‘‘ಹುಡುಗಿ ಆ ಧರ್ಮದವಳಂತೆ...ಹುಡುಗ ನಮ್ಮವನಂತೆ...’’
‘‘ಓಹ್ ಆದರ್ಶ ವಿವಾಹ...’’ ಅವನು ಸಂಭ್ರಮ ಪಟ್ಟ.

Saturday, April 2, 2016

ಘೋಷಣೆ...!

‘‘ನಿನ್ನ ಹೆಸರೇನು?’’
ಹುಡುಗ ಮೌನವಾಗಿದ್ದ.
‘‘ತಲೆಯ ಟೋಪಿ ನೋಡಿದಾಗಲೇ ನಮಗೆ ನಿನ್ನ ಹೆಸರು ಗೊತ್ತಾಯಿತು...ಹೇಳು ಭಾರತ ಮಾತಾಕಿ ಜೈ....’’
ಹುಡುಗ ಅವರನ್ನೇ ನೋಡಿದ.
‘‘ಹೇಳು ‘ಭಾರತ ಮಾತಾಕಿ ಜೈ...ವಂದೇ ಮಾತರಂ...’’
ಹುಡುಗ ಏನನ್ನೋ ಹೇಳಲು ಬಾಯಿ ತೆರೆದ.
ಕೇಸರಿ ನಾಮಧಾರಿಯೊಬ್ಬ ಛಟೀರನೇ ಅವನ ಕೆನ್ನೆಗೆ ಬಾರಿಸಿದ ‘‘ಭಾರತ ಮಾತಾಕೀ ಜೈ ಎನ್ನಲು ನಿನಗೆ ಕಷ್ಟವಾಗುವುದಿದ್ದರೆ ಪಾಕಿಸ್ತಾನಕ್ಕೆ ಹೋಗಬೇಕಾಗಿತ್ತು...ಇಲ್ಲಿ ಯಾಕೆ ಬಾಕಿಯಾಗಿದ್ದೀಯ...ಅಲ್ಲಿ ನಿನಗೆ ಬೇಕಾದ ಘೋಷಣೆ ಕೂಗಬಹುದು...ಹೇಳು ‘ಭಾರತ್ ಮಾತಾಕಿ ಜೈ...’’
ಹುಡುಗ ಏನೋ ಹೇಳಲು ಕೈ ಮುಂದೆ ಮಾಡಿದ.
‘‘ನೋಡೋ...ಕೈ ಮೇಲೆ ಮಾಡುತ್ತಾನೆ...’’ ಇನ್ನೊಬ್ಬ ಇನ್ನೊಂದು ಕೆನ್ನೆಗೆ ಛಟೀರನೇ ಬಾರಿಸಿದ.
 ಅಷ್ಟರಲ್ಲಿ ಜನ ಸೇರಿದರು. ಒಬ್ಬರು ಸದ್ಗೃಹಸ್ಥರು ಮಧ್ಯ ಪ್ರವೇಶಿಸಿದರು.
 ‘‘ನೋಡಿ...ನೀವು ಹೀಗೆ ವ್ಯವಹರಿಸಿದರೆ ಹೇಗೆ? ಅವರ ಮನವೊಲಿಸುವುದು ಮುಖ್ಯ. ಮಾತಿಗೆ ಮುಂಚೆ ತೋಳ್ಬಲ ಪ್ರದರ್ಶಿಸುವುದು ಭಾರತೀಯ ಸಂಸ್ಕೃತಿಯಲ್ಲ. ಮಹಾತ್ಮಗಾಂಧೀಜಿಯ ನೆಲ. ನೀವು ಪಕ್ಕಕ್ಕೆ ಸರಿಯಿರಿ. ನಾನು ಅವನಿಗೆ ವಿವರಿಸುತ್ತೇನೆ...ನೋಡಪ್ಪ ಭಾರತ ಮಾತೆ ನಮ್ಮೆಲ್ಲರ ತಾಯಿ. ನಮಗೆ ಅನ್ನಕೊಡುವ ತಾಯಿ ನೆಲ ಇದು. ಇದಕ್ಕೆ ಜೈ ಎನ್ನುವುದು ನಮ್ಮ ಕರ್ತವ್ಯ. ನಮ್ಮ ತಾಯಿಗೆ ನಾವು ನಮಿಸದೆ ಇನ್ಯಾರಿಗೆ ನಮಿಸಬೇಕು...? ಹೇಳು ...ಭಾರತ್ ಮಾತಾಕಿ ಜೈ ಎಂದು ಜೋರಾಗಿ ಕೂಗಿ ನಿನ್ನ ದೇಶಪ್ರೇಮವನ್ನು ಇಲ್ಲಿರುವ ಎಲ್ಲರಿಗೂ ಸಾಬೀತು ಪಡಿಸು...ನಾವು ಕೂಡ ನಿನ್ನ ಜೊತೆಗೆ ಜೋರಾಗಿ ಜೈ ಎಂದು ಕೂಗುತ್ತೇವೆ....’’
ಹುಡುಗ ಆ ಗೃಹಸ್ಥರನ್ನೇ ದಿಟ್ಟಿಸಿ ನೋಡಿದ. ಅವನ ಕಣ್ಣಂಚಲ್ಲಿ ಹನಿ ತುಳುಕಿತು. ಅವನು ಏನೋ ಹೇಳಲು ಪ್ರಯತ್ನಿಸಿದ. ಕೇಸರಿ ಶಾಲು ಹೊದ್ದವನೊಬ್ಬ ಗೃಹಸ್ಥರನ್ನು ಅಣಕಿಸಿದ ‘‘ನೋಡಿ...ನಿಮ್ಮನ್ನು ಅವನು ಹೇಗೆ ಕೆಕ್ಕರಿಸಿ ನೋಡುತ್ತಿದ್ದಾನೆ...ನಿಮಗೆ ಹಾಗೆ ಆಗಬೇಕು. ನಿಮ್ಮಿಂದಲೇ ಅವರು ಕೊಬ್ಬಿರುವುದು. ನಾನು ಇನ್ನೊಂದು ಏಟು ಬಿಟ್ಟಿದ್ದರೆ ಅವನು ಈಗಾಗಲೇ ‘ಭಾರತ್ ಮಾತಾಕಿ ಜೈ’ ಎಂದು ಘೋಷಿಸಿಯೂ ಆಗುತ್ತಿತ್ತು...’’
ಅಷ್ಟರಲ್ಲಿ ಹಣೆಯಲ್ಲಿ ಅಷ್ಟು ದೊಡ್ಡ ಕುಂಕುಮವನ್ನೂ, ಕುತ್ತಿಗೆಯಲ್ಲಿ ಇಷ್ಟು ಭಾರದ ತಾಳಿಯನ್ನು ಧರಿಸಿದ ಸದ್ಗೃಹಿಣಿಯೊಬ್ಬರು ಆತಂಕದಿಂದ ಕೇಳಿದರು ‘‘ಅದೇನು ಅವನ ಕೈಯಲ್ಲಿ...ಚೀಲ ನೋಡಿ...ಸ್ವಲ್ಪ ತನಿಖೆ ಮಾಡಿ...ಮಕ್ಕಳ ಕಿವಿಗೆ ಜಿಹಾದ್ ತುಂಬಿಸುತ್ತಾರಂತೆ...ಈಗ ಯಾರನ್ನೂ ನಂಬಲು ಬರುವುದಿಲ್ಲವಲ್ಲ...’’
‘‘ಹೌದು... ಹೌದು...’’
ಯಾರೋ ಅವನ ಚೀಲ ಎಳೆದುಕೊಂಡರು. ಚೀಲದಲ್ಲಿ ಪುಸ್ತಕ. ಪುಸ್ತಕದಲ್ಲಿ ಅರಬೀ ಅಕ್ಷರಗಳು...‘‘ಇದೇನು ಪುಸ್ತಕ..ಅರ್ಥವಾಗದ ಭಾಷೆಯಲ್ಲಿ ಬರೆದಿದೆ...’’ ಒಬ್ಬ ಕೇಳಿದ.
‘‘ಅರ್ಥವಾಗದ ಭಾಷೆಯಲ್ಲಿ ಮತ್ತೇನಿರುತ್ತದೆ? ಜಿಹಾದ್...ದೇಶದ್ರೋಹ...’’
ಯಾರೋ ಹುಡುಗನ ಹೊಟ್ಟೆಗೆ ತುಳಿದರು. ಹುಡುಗ ಚಿಟಾರನೇ ಚೀರುತ್ತಾ ಅಷ್ಟು ದೂರ ಬಿದ್ದ.
ಸದ್ಗೃಹಸ್ಥ ಹೇಳಿದ ‘‘ಶಾಂತಿ...ಶಾಂತಿ...ನೀವು ಅವಸರ ಮಾಡಬೇಡಿ...ಅವನು ನನ್ನ ಮಾತನ್ನು ಆಲಿಸುತ್ತಿದ್ದ. ಇನ್ನೇನು ಘೋಷಣೆ ಕೂಗುವುದರಲ್ಲಿದ್ದ. ಅವರೂ ಕೂಡ ನಮ್ಮಂತೆಯೇ ಮನುಷ್ಯರು ತಾನೆ....ಏನೋ ಕೆಲವರು ಸಂಸ್ಕಾರದ ಕಾರಣದಿಂದ ದಾರಿ ತಪ್ಪಿರುತ್ತಾರೆ...ನಾವು ಸರಿ ಪಡಿಸಬೇಕು....ಹೇಳಪ್ಪ...ಘೋಷಣೆ ಕೂಗಿ ಒಮ್ಮೆ ನಿನ್ನ ದೇಶಪ್ರೇಮವನ್ನು ನಮಗೆಲ್ಲ ಸಾಬೀತು ಮಾಡಿ ಬಿಡು...’’
ಹುಡುಗ ತಡವರಿಸುತ್ತಾ ಎದ್ದವನು ಚದುರಿ ಬಿದ್ದ ಪುಸ್ತಕವನ್ನು ಎತ್ತಿಕೊಂಡು ಕಣ್ಣಿಗೊತ್ತಿದ.
‘‘ನೋಡಿ...ನೋಡಿ ಅವನನ್ನು...ಭಾರತ್ ಮಾತಾಕಿ ಜೈ ಹೇಳು ಎಂದರೆ ಅವನ ಉದ್ಧಟತನ ನೋಡಿ...ನಮ್ಮನ್ನು ಅಣಕಿಸಲೆಂದೇ .ಆ ಪುಸ್ತಕವನ್ನು ಕಣ್ಣಿಗೊತ್ತುತ್ತಿದ್ದಾನೆ...’’ ಯಾರೋ ತೋರಿಸಿದರು.
ಒಬ್ಬ ಅವನನ್ನು ಎತ್ತಿ ಕುಕ್ಕಿದ. ಇನ್ನೊಬ್ಬ ಅವನ ಬಟ್ಟೆಯನ್ನು ಹರಿದ. ಎಲ್ಲೆಲ್ಲಿಂದಲೂ ತಟಪಟನೆ ಏಟುಗಳ ಮಳೆ. ಅವನ ಹಣೆಯಲ್ಲಿ ರಕ್ತ ಒಸರಿತು.
ಒಟ್ಟಿನಲ್ಲಿ ಒಂದು ದೇಶಪ್ರೇಮದ ಘೋಷಣೆಯನ್ನು ಅವನಿಂದ ಹೊರಡಿಸಲು ಅವರೆಲ್ಲ ಹರ ಸಾಹಸ ಪಡುತ್ತಿದ್ದರು. ಒಂದು ರೀತಿ ನೋಡಿದರೆ ಅವರೆಲ್ಲ ಸುಸ್ತಾಗಿದ್ದರು. ಆ ಹುಡುಗನ ಮುಂದೆ ಅಸಹಾಯಕರಾಗಿದ್ದರು. ಆ ಅಸಹಾಯಕತೆ, ಹತಾಶೆ ಅವರನ್ನು ಇನ್ನಷ್ಟು ಕ್ರೂರಿಗಳನ್ನಾಗಿಸುತ್ತಿತ್ತು.
‘‘ಹೇಳುತ್ತೀಯ ಇಲ್ಲವಾ?’’ ನಾಮಧಾರಿ ಕೊನೆಯ ಅವಕಾಶ ಎಂಬಂತೆ ಅಬ್ಬರಿಸಿದ. ಅದೆಲ್ಲಿತ್ತೋ, ಅವನ ಕೈಯಲ್ಲಿ ಚೂರಿಯೊಂದು ಪಳಪಳನೇ ಹೊಳೆಯುತ್ತಿತ್ತು. ಹುಡುಗ ಮಂಜುಗಣ್ಣಿನಿಂದ ಆ ಚೂರಿಯನ್ನೇ ನೋಡುತ್ತಿದ್ದ. 
ನಾಮಧಾರಿಯ ಕೈಯಲ್ಲಿ ಚೂರಿ ಕಂಡದ್ದೇ, ನೆರೆದ ಸದ್ ಗೃಹಸ್ಥರು, ಸುಸಂಸ್ಕೃತ ಗೃಹಿಣಿಯರೆಲ್ಲ ಅಲ್ಲಿಂದ ಜಾಗ ಖಾಲಿ ಮಾಡತೊಡಗಿದರು. ಜನರೆಲ್ಲ ಚದುರಿ ಹೋಗುತ್ತಿರುವುದು ನಾಮಧಾರಿಯನ್ನು ಕೆರಳಿಸಿತ್ತು. ಅವನು ಚೂರಿಯನ್ನು ಹುಡುಗನ ಹೊಟ್ಟೆಗೆ ಇಳಿಸಿಯೇ ಬಿಟ್ಟ. ಹುಡುಗ ವಿಲ ವಿಲ ಒದ್ದಾಡುತ್ತಿದ್ದಂತೆಯೇ ನಾಮಧಾರಿ ಸಹಿತ ಎಲ್ಲರೂ ಅಲ್ಲಿಂದ ಕರಗಿದರು. ಅಷ್ಟರಲ್ಲಿ ಪೊಲೀಸ್ ಜೀಪೊಂದು ಬಂತು. ಅಂಬ್ಯುಲೆನ್ಸ್ ಸದ್ದು ಮಾಡತೊಡಗಿತು.
***
ಮಹಿಳೆಯೊಬ್ಬಳು ಚೀರುತ್ತಲೇ ಸರಕಾರಿ ಅಸ್ಪತ್ರೆಯ ಹೊರಗೆ, ಒಳಗೆ ಓಡಾಡುತ್ತಿದ್ದಳು.
ಪೊಲೀಸರು ಕೇಳಿದರು ‘‘ಆ ಹುಡುಗನಿಗೆ ನೀನೇನಾಗಬೇಕಮ್ಮ...?’’
‘‘ನನ್ನ ಮಗ ಕಣಪ್ಪ....ಮದ್ರಸಕ್ಕೆಂದು ಹೋಗಿದ್ದ ಕಣಪ್ಪ...ಅಯ್ಯೋ ಅವನಿಗೆ ಚೂರಿಯಿಂದ ಇರಿದು ಬಿಟ್ಟಿದ್ದಾರಪ್ಪ....’’
‘‘ನೋಡಮ್ಮ ನಿಮ್ಮ ಮಗನ ಮೇಲೆ ಕೇಸು ದಾಖಲಾಗಿದೆ...’’ ಪೊಲೀಸರು ಹೇಳಿದರು.
ಮಹಿಳೆ ಸ್ತಬ್ಧಳಾಗಿ ಪೊಲೀಸರನ್ನೇ ನೋಡತೊಡಗಿದಳು.
‘‘ದೂರಿನ ಪ್ರಕಾರ ನಿನ್ನ ಮಗ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಲು ನಿರಾಕರಿಸಿದ್ದನಂತೆ....ನಿನ್ನ ಮಗನ ಮೇಲೆ ದೇಶದ್ರೋಹದ ಕೇಸು ದಾಖಲಾಗಿದೆ...’’ ಪೊಲೀಸ್ ಸಿಬ್ಬಂದಿ ಹೇಳಿದ.
ಮಹಿಳೆ ಮತ್ತೆ ತಲೆ ಚಚ್ಚಿ ರೋದಿಸತೊಡಗಿದಳು
 ‘‘ನನ್ನ ಮಗ ಹುಟ್ಟು ಮೂಗ ಕಣಪ್ಪ...ಹುಟ್ಟಿದಂದಿನಿಂದ ಈವರೆಗೆ ಒಂದು ಮಾತೂ ಆಡಿದವನಲ್ಲ ಕಣಪ್ಪ...ಬಾಯಿ ಬಾರದ ನನ್ನ ಮಗನಿಗೇ ಚೂರಿಯಿಂದ ಇರಿದರು ಕಣಪ್ಪ.....’’
ಪೊಲೀಸರು ಅರೆಕ್ಷಣ ಮೌನವಾದರು. ಬಳಿಕ ‘‘ನೋಡೋಣ...ಅದು ನಿಜ ಅಂತ ಸಾಬೀತಾದರೆ ನಿನ್ನ ಮಗನನ್ನು ಬಿಟ್ಟು ಬಿಡುತ್ತೇವೆ...ನ್ಯಾಯ ದೇವತೆ ಕೈ ಬಿಡುವುದಿಲ್ಲ. ಚಿಂತೆ ಮಾಡಬೇಡ...ಬಾಯಿ ಬಾರದವರು ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗುವ ಅಗತ್ಯವಿಲ್ಲ...ನಿನ್ನ ಮಗನ ಮೇಲಿನ ಕೇಸು ಒಂದೆರಡು ತಿಂಗಳಲ್ಲೇ ಬಿದ್ದು ಹೋಗುತ್ತದೆ...ಹೆದರಬೇಡ’’ ಎಂದು ಮಹಿಳೆಯನ್ನು ಸಮಾಧಾನಿಸತೊಡಗಿದರು.
ಅಷ್ಟರಲ್ಲಿ ಅಲ್ಲಿಗೆ ಪ್ರವೇಶಿಸಿದ ವೈದ್ಯರು ಮಹಿಳೆಯ ಮುಂದೆ ಘೋಷಿಸಿದರು ‘‘ನಿನ್ನ ಮಗನನ್ನು ಬದುಕಿಸಲಾಗಲಿಲ್ಲ. ರಕ್ತ ತುಂಬಾ ಹೋಗಿತ್ತು. ಆತ ಸತ್ತಿದ್ದಾನೆ. ಹೆಣ ಸಾಗಿಸುವ ವ್ಯವಸ್ಥೆಯನ್ನು ಆದಷ್ಟು ಬೇಗ ಮಾಡು’’