Thursday, November 8, 2012

ಬಿಲ್ಲವರ ತಲೆಯ ಮೇಲೆ ಉಳ್ಳವರ ಪಾದ!

ಜನಾರ್ದನ ಪೂಜಾರಿ
(ಕಳೆದ ವಾರದ ‘ಮುಂಬಯಿ ಕನ್ನಡಿಗರು, ಕುದ್ರೋಳಿ ದೇವಸ್ಥಾನ ಮತ್ತು ವೈದಿಕ ಹುನ್ನಾರಗಳು’ ಬರಹದ ಮುಂದುವರಿದ ಭಾಗ)

ಪುರಾಣದ ಬಲಿಚಕ್ರವರ್ತಿಯ ದುರಂತ ಕತೆ ನಿಮಗೆ ಗೊತ್ತಿರಬಹುದು. ವಾಮನನೆಂಬ ಪುಟ್ಟ ವೈದಿಕನಿಗೆ ಮೂರು ಹೆಜ್ಜೆಗಳನ್ನು ಇಡಲು ಅವಕಾಶ ನೀಡಿದ್ದಕ್ಕಾಗಿ ಬಲಿಚಕ್ರವರ್ತಿ ತನ್ನ ರಾಜ್ಯ, ಸಂಪತ್ತು, ನೆಲೆ ಎಲ್ಲವನ್ನೂ ಕಳೆದುಕೊಂಡು ಬೀದಿ ಪಾಲಾಗ ಬೇಕಾಯಿತು. ವೈದಿಕರಿಗೆ ಒಂದು ಹೆಜ್ಜೆಯನ್ನು ತಲೆಯ ಮೇಲೆ ಇಡಲು ಅವಕಾಶ ನೀಡಿದ ತಪ್ಪಿಗೆ ಇಂದಿಗೂ ಅಧಿಕಾರ, ನೆಲೆ, ವರ್ಚಸ್ಸು ಎಲ್ಲವನ್ನು ಕಳೆದುಕೊಂಡು ಬೀದಿಪಾಲಾಗಿರುವ ಕರಾವಳಿಯ ಬಲಿಚಕ್ರವರ್ತಿ ಜನಾರ್ದನ ಪೂಜಾರಿ. ಇಂದಿರಾ ಗಾಂಧಿಯ ಕಾಲದಲ್ಲಿ ಜನಾರ್ದನ ಪೂಜಾರಿಯವರು, ಹಣಕಾಸು ಸಚಿವರಾಗಿ ಮಾಡಿದ ಕ್ರಾಂತಿ ಇಂದಿಗೂ ನಾವು ನೆನಪು ಮಾಡಿಕೊಳ್ಳುವಂತಹದ್ದು. ಬಡವರು, ದೀನ ದಲಿತರಿಗೆ ಬ್ಯಾಂಕ್‌ನ ಬಾಗಿಲು ತೆರೆದುದು ಇದೇ ಜನಾರ್ದನ ಪೂಜಾರಿಯವರ ದೆಸೆಯಿಂದ. ಒಂದಿಷ್ಟು ದುರಹಂಕಾರಿ, ತುಸು ನಾಟಕೀಯ ವ್ಯಕ್ತಿ ಎಂದು ಬಿಂಬಿತಗೊಂಡಿದ್ದರೂ ಜನಾರ್ದನ ಪೂಜಾರಿ ಎಂದೂ ಭ್ರಷ್ಟರಾಗಿರಲಿಲ್ಲ. ಅವರ ಪ್ರಾಮಾಣಿ ಕತೆಯ ಕುರಿತಂತೆ ಅನುಮಾನ ಪಡಲು ಯಾವ ಕಾರಣಗಳೂ ಇಲ್ಲ. ‘ಸಾಲ ಮೇಳ’ ಮಾಡುವ ಮೂಲಕ ಬ್ಯಾಂಕ್‌ನ್ನು ಬಡವರಿಗೇನೋ ಅವರು ತೆರೆದುಕೊಟ್ಟರು. ಆದರೆ ಅದರಿಂದಾಗಿ ವ್ಯಾಪಕವಾಗಿ ಮೇಲ್ವರ್ಣೀಯ ಜನರ ವಿರೋಧವನ್ನು ಕಟ್ಟಿಕೊಂಡರು. ಯಾಕೆಂದರೆ ದೇಶದ ಬ್ಯಾಂಕ್ ತಿಜೋರಿಗಳ ಬೀಗದ ಕೈಗಳಿರುವುದು ಮೇಲ್ವರ್ಣೀಯರ ಬಳಿ. ಇತ್ತ ಸಾಲ ಪಡೆದು ಕೊಂಡವರೂ ಬರಕತ್ತಾಗಲಿಲ್ಲ. ದನ, ಎಮ್ಮೆಯನ್ನು ಕೊಂಡು ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವಲ್ಲಿ ವಿಫಲ ರಾದರು.ಜನರು ಇದರಿಂದ ಬ್ಯಾಂಕ್‌ನ ಸಾಲಗಾರರಾಗಬೇಕಾಯಿತು. ‘ಜನಾರ್ದನ ಪೂಜಾರಿ ಬಡವರನ್ನು ಸಾಲಗಾರರನ್ನಾಗಿ ಮಾಡಿದರು’ ಎಂದು ಬ್ಯಾಂಕಿನ ಮೆನೇಜರ್‌ಗಳಿಂದ ಹಿಡಿದು ಗುಮಾಸ್ತರವರೆಗೆ ಅಪಪ್ರಚಾರ ಮಾಡಿಕೊಂಡು ಓಡಾಡ ತೊಡಗಿದರು.ತನ್ನ ಸಮಾಜಕ್ಕೆ ಒಳಿತು ಮಾಡುವ ಅವರ ಆತುರದ ನಿರ್ಣಯಗಳೆಲ್ಲ ಅವರಿಗೇ ಕೊನೆಯಲ್ಲಿ ಮುಳುವಾಯಿತು. ಇಂತಹದೊಂದು ಆತುರದ ನಿರ್ಣಯವನ್ನು ಅವರು ಕುದ್ರೋಳಿ ದೇವಸ್ಥಾನಕ್ಕೆ ಸಂಬಂಧಪಟ್ಟಂತೆಯೂ ತೆಗೆದು ಕೊಂಡರು.

ಕುದ್ರೋಳಿ ದೇವಸ್ಥಾನದ ಮರು ನವೀಕರಣ ಕಾಮಗಾರಿ ಕೆಲಸ ನಡೆದುದು ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ. ಅದನ್ನು ಕೇವಲ ಬಿಲ್ಲವರ, ಶೂದ್ರರ ದೇವಸ್ಥಾನ ಮಾತ್ರವಲ್ಲ ಎಲ್ಲರ ದೇವಸ್ಥಾನವಾಗಿ ಪರಿವರ್ತಿಸುತ್ತೇನೆ ಎಂದು ಅವರು ಹೊರಟರು. ಅದರ ಹಿಂದೆ ಅವರ ರಾಜಕೀಯ ದುರುದ್ದೇಶವೂ ಇತ್ತು. ‘ಎಲ್ಲರ ದೇವಸ್ಥಾನ’ ಎಂದರೆ, ಅದರ ಕೀಲಿಕೈಯನ್ನು ವೈದಿಕರ ಕೈಗೆ ಕೊಡುವುದು. ಹಾಗೆಂದು, ದೇವಸ್ಥಾನದ ಪುನರ್ನವೀಕರಣ ಕಾರ್ಯಕ್ರಮವನ್ನು ಶೃಂಗೇರಿ ಸ್ವಾಮೀಜಿಯ ಕೈಯಲ್ಲಿ ನೆರವೇರಿಸಲು ಅವರು ಮುಂದಾದರು. ಇದು ನಡೆದುದು ಸುಮಾರು 1989ರಲ್ಲಿ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮುಖ್ಯ ಅತಿಥಿ. ಶೃಂಗೇರಿ ಸ್ವಾಮೀಜಿಯನ್ನು ಕರೆಸುವ ಜನಾರ್ದನ ಪೂಜಾರಿಯ ನಿರ್ಧಾರಕ್ಕೆ ಬಿಲ್ಲವರೊಳಗೇ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಮೇಲುಕೀಳುಗಳೆಂಬ ಭೇದವನ್ನು ಅಳಿಸುವುದಕ್ಕಾಗಿ ನಾರಾಯಣ ಗುರುಗಳು ಕುದ್ರೋಳಿ ದೇವಸ್ಥಾನದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು. ಇದೀಗ ಮತ್ತೆ ಅದನ್ನು ವೈದಿಕ ಸ್ವಾಮೀಜಿಗಳ ಕೈಗೆ ಕುದ್ರೋಳಿ ದೇವಸ್ಥಾನವನ್ನು ಒಪ್ಪಿಸುವುದು ಎಷ್ಟು ಸರಿ? ಎಂಬ ಪ್ರಶ್ನೆಯನ್ನು ಹಲವರು ಎತ್ತಿದರು. ಮುಂಬಯಿಯ ಚಿಂತಕ ರವಿ. ರಾ. ಅಂಚನ್ ಪತ್ರಿಕೆಯಲ್ಲಿ ಬಹಿರಂಗ ಪತ್ರದ ಮೂಲಕ ಅದನ್ನು ಪ್ರಶ್ನಿಸಿದರೆ, ಮುಂಗಾರಿನಲ್ಲಿ ಹಿರಿಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ದಿನೇಶ್ ಅಮೀನ್ ಮಟ್ಟು ಮೊದಲಾದವರು ಬಹಿರಂಗವಾಗಿ ಉಪವಾಸ ಕೂರುವ ಬೆದರಿಕೆ ಹಾಕಿದರು.ಆದರೆ ಈ ಆಕ್ರೋಶವನ್ನು ಕಾಲಲ್ಲಿ ತುಳಿದು, ಜನಾರ್ದನ ಪೂಜಾರಿ ಶೃಂಗೇರಿ ಸ್ವಾಮೀಜಿಯ ಪಾದಕ್ಕೆ ತನ್ನ ತಲೆಯನ್ನು ಒಪ್ಪಿಸಿದರು. ಕುದ್ರೋಳಿ ದೇವಸ್ಥಾನದ ಈ ನಿರ್ಣಯದಿಂದ ಅಸಮಾಧಾನಗೊಂಡು ನಾರಾಯಣ ಗುರುಗಳು ಸ್ಥಾಪಿಸಿದ ಶಿವಗಿರಿ ಪೀಠಸ್ಥ ಸ್ವಾಮೀಜಿಗಳು ಅಂದಿನ ಕಾರ್ಯಕ್ರಮ ವನ್ನು ಬಹಿಷ್ಕರಿಸಿದರು. ಮಾಜಿ ಹಿರಿಯ ಸ್ವಾಮೀಜಿಗಳು ಆ ಕಾರ್ಯಕ್ರಮಕ್ಕೆ ಆಗಮಿಸ ಬೇಕಾಯಿತು.ನಡೆದದ್ದು ಇಷ್ಟೇ ಅಲ್ಲ.ಮೊದಲ ಬಾರಿ ಕುದ್ರೋಳಿ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಅಷ್ಟಮಂಗಲ ಪ್ರಶ್ನೆಯನ್ನು ಇಡಲಾಯಿತು. ಮತ್ತು ದೇವಸ್ಥಾನದ ಮುಂಭಾಗದಲ್ಲಿ ವಿಷ್ಣು ದೇವರನ್ನು ಪ್ರತಿಷ್ಠಾಪಿಸಬೇಕು ಎಂದು ವೈದಿಕ ಮುಖಂಡರು ತಿಳಿಸಿದರು. ಅಂತೆಯೇ ಕುದ್ರೋಳಿ ದೇವಸ್ಥಾನದಲ್ಲಿ ನಾರಾಯಣ ಗುರುಗಳ ಆಶಯದ ವಿರುದ್ಧ ಶ್ರೀಕೃಷ್ಣ ದೇವರನ್ನು ಬಾಗಿಲ ಬಳಿ ಪ್ರತಿಷ್ಠಾಪಿಸ ಲಾಯಿತು. ಇದೀಗ ಕೃಷ್ಣನಿಗೆ ಕೈ ಮುಗಿದೇ ನಾರಾಯಣ ಗುರುಗಳು ಪ್ರತಿಷ್ಠಾಪಿಸಿದ ಶಿವಲಿಂಗದತ್ತ ಭಕ್ತರು ಮುಂದುವರಿಯಬೇಕು. ಇಂತಹದೊಂದು ಸ್ಥಿತಿಯನ್ನು ಬಿಲ್ಲವ ಶೂದ್ರರಿಗೆ ನಿರ್ಮಾಣ ಮಾಡಿಕೊಟ್ಟವರು ಜನಾರ್ದನ ಪೂಜಾರಿ.

ಇತ್ತ ಕುದ್ರೋಳಿ ದೇವಸ್ಥಾನ ಪುನರ್‌ನವೀಕರಣಕ್ಕೆ ಶೃಂಗೇರಿ ಸ್ವಾಮೀಜಿಯೇನೋ ಒಪ್ಪಿದ್ದರು. ಆದರೆ, ಅವರು ಹಲವು ನಿಂಬಂಧನೆಗಳನ್ನು ಹಾಕಿದ್ದರು. ಅದರಲ್ಲಿ ಮುಖ್ಯ ವಾದುದು, ತಾನು ಮತ್ತು ತನ್ನ ಶಿಷ್ಯರು ಅಭಿಷೇಕ ಮಾಡಿದ ಬಳಿಕವಷ್ಟೇ ಉಳಿದವರು ಪ್ರವೇಶಿಸ ಬಹುದು. ಆದನ್ನು ಯಥಾವತ್ ಪಾಲಿಸಲಾಯಿತು.ಸ್ವಾಮೀಜಿಗಳು ಮತ್ತು ಶಿಷ್ಯರಿರುವ ಕಟ್ಟಡಕ್ಕೆ ಯಾವ ಬಿಲ್ಲವರಿಗೂ ಪ್ರವೇಶವಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ನಾರಾಯಣ ಗುರುಗಳ ಭಾವಚಿತ್ರಕ್ಕೆ ಶೃಂಗೇರಿ ಸ್ವಾಮೀಜಿಗಳು ಹಾರಾರ್ಪಣೆ ಮಾಡಲಿಲ್ಲ. ಖುದ್ದು ರಾಜೀವ್ ಗಾಂಧಿ ಆಹ್ವಾನಿಸಿದಾಗಲೂ, ಔಪಚಾರಿಕವಾಗಿ ನಾರಾಯಣ ಗುರುಗಳನ್ನು ಗೌರವಿಸಲೂ ಶೃಂಗೇರಿ ಸ್ವಾಮೀಜಿಗಳು ಸಿದ್ಧರಿರಲಿಲ್ಲ.ಮೇಲು ಕೀಳುಗಳೆಂಬ ಭೇದವನ್ನು ಅಳಿಸಿ, ಎಲ್ಲ ಭಕ್ತರು ದೇವರಿಗೆ ಒಂದೇ ಎಂಬ ಆಶಯದಿಂದ ನಾರಾಯಣ ಗುರುಗಳು ದೇವಸ್ಥಾನವನ್ನು ಕಟ್ಟಿದರೆ, 1989ರಲ್ಲಿ ಅದರೊಳಗೆ ವೈದಿಕರು ಪ್ರವೇಶಿಸುವುದಕ್ಕೆ ಸ್ವತಃ ಜನಾರ್ದನ ಪೂಜಾರಿಯೇ ಕಾರಣರಾದರು. ನಿಧಾನಕ್ಕೆ ಕುದ್ರೋಳಿಯ ಹಿಡಿತ ಬಿಲ್ಲವರ ಕೈ ತಪ್ಪಿತು. ಹೆಸರಿಗಷ್ಟೇ ಜನಾರ್ದನ ಪೂಜಾರಿ ಅದರ ನೇತೃತ್ವವನ್ನು ವಹಿಸಿಕೊಂಡಿದ್ದರೂ, ಒಳಗಿಂದ ಸಂಘಪರಿವಾರ ಅದರ ಲಾಭಗಳನ್ನು ತನ್ನದಾಗಿಸಿಕೊಳ್ಳತೊಡಗಿತು. ಕುದ್ರೋಳಿ ದಸರಾ ಪ್ರತಿ ವರ್ಷ ನಡೆಯುತ್ತಿತ್ತಾದರೂ ಇಡೀ ಮಂಗಳೂರು ಕೇಸರಿ ಬಾವುಟಗಳ ಆವಾಸಸ್ಥಾನ ವಾಗುತ್ತಿತ್ತು.

ಕುದ್ರೋಳಿ ದೇವಸ್ಥಾನವನ್ನು ಹೊರಗಿನಿಂದ ವೈದಿಕರು, ಸಂಘ ಪರಿವಾರ ನಿಯಂತ್ರಿಸತೊಡಗಿದಂತೆ, ಬಿಲ್ಲವ ಹುಡುಗರು ನಿಧಾನಕ್ಕೆ ಸಂಘ ಪರಿವಾರದ ಪಾಲಾಗತೊಡಗಿದರು. ಪ್ರತಿ ಚುನಾವಣೆಯಲ್ಲೂ ಜನಾರ್ದನ ಪೂಜಾರಿಗೆ ಸೋಲೇ ಗತಿಯಾಯಿತು. ಬಹುಸಂಖ್ಯಾತ ಬಿಲ್ಲವರಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಳೆದಬಾರಿ ಸುಮಾರು 40 ಸಾವಿರಕ್ಕೂ ಅಧಿಕ ಮತಗಳಿಂದ ಜನಾರ್ದನ ಪೂಜಾರಿ ಸೋತರು. ಇಂದು ಸಂಘಪರಿವಾರ ಬಿಲ್ಲವ ತರುಣರನ್ನು ಕರಾವಳಿಯಲ್ಲಿ ತನ್ನ ಕಾಲಾಳುಗಳಾಗಿ ಬಳಸುತ್ತಿದೆ. ಇಷ್ಟು ಪ್ರಬಲವಾದ ಸಮುದಾಯ, ರಾಜಕೀಯವಾಗಿ ಸಂಪೂರ್ಣವಾಗಿ ಸೋತು ನೆಲಕಚ್ಚಿದೆ. ಒಂದು ಕಾಲದಲ್ಲಿ ಇಬ್ಬರು ಲೋಕಸಭಾ ಸದಸ್ಯರು ಸೇರಿದಂತೆ ಏಳು ಮಂದಿ ಬಿಲ್ಲವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದರು. ಈಗ ನೋಡಿದರೆ  ಈ ಸಮುದಾಯವನ್ನು ಪ್ರತಿನಿಧಿಸುವ ಒಬ್ಬನೇ ಒಬ್ಬ ಸಚಿವ ದ.ಕ.ಜಿಲ್ಲೆಯಲ್ಲಿಲ್ಲ. ಬಿಲ್ಲವ ಮುಖಂಡರು ತಲೆಯೆತ್ತುತ್ತಾರೆಂದಾಕ್ಷಣ ಅವರನ್ನು ಬಿಲ್ಲವರ ಕೈಯಿಂದಲೇ ಸಂಘ ಪರಿವಾರ ಬಗ್ಗುಬಡಿಯುತ್ತಿದೆ. ಸುನೀಲ್ ಕುಮಾರ್, ರುಕ್ಮಯ ಪೂಜಾರಿ ಸೇರಿದಂತೆ ಹಲವು ನಾಯಕರನ್ನು ಬಿಜೆಪಿ ಬಳಸಿ ಎಸೆಯುತ್ತಿದೆ. ಇತ್ತೀಚೆಗೆ ಅನಿವಾರ್ಯ ಎನ್ನುವ ಹೊತ್ತಿನಲ್ಲಿ ಉಡುಪಿಯ ಕೋಟಾ ಶ್ರೀನಿವಾಸ ಪೂಜಾರಿಗೆ ಒಂದು ಸಚಿವ ಸ್ಥಾನ ಸಿಕ್ಕಿತು. ಅದೂ ಮುಜರಾಯಿ ಇಲಾಖೆ.ಆ ಇಲಾಖೆಯ ಮೂಲಕ ಶ್ರೀನಿವಾಸ ಪೂಜಾರಿಯವರು ವೈದಿಕರ ಚಾಕರಿಯನ್ನೇ ಮಾಡುತ್ತಿದ್ದಾರೆ. ಬಿಲ್ಲವ ಸಮುದಾಯಕ್ಕೆ ಅದರಿಂದ ಯಾವ ಪ್ರಯೋಜನವೂ ಆಗಿಲ್ಲ. ಇತ್ತ ಬಹುಸಂಖ್ಯೆಯ ಬಿಲ್ಲವ ಯುವಕರು ಕೋಮುಗಲಭೆಗಳಲ್ಲಿ ಭಾಗವಹಿಸಿ ಆರೋಪಿಗಳಾಗಿ ಜೈಲು, ಕೋರ್ಟು ಎಂದು ಅಲೆಯುತ್ತಿದ್ದಾರೆ.

ಇದೆಲ್ಲದಕ್ಕೂ ಪರೋಕ್ಷವಾಗಿ ಜನಾರ್ದನ ಪೂಜಾರಿಯವರೇ ಕಾರಣರಾಗಿದ್ದಾರೆ. ಈ ಸತ್ಯವನ್ನು ಅವರು ನಿಧಾನಕ್ಕಾದರೂ ಅರ್ಥ ಮಾಡಿಕೊಂಡಂತಿದೆ. ಇದರ ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದ ಕುದ್ರೋಳಿ ದಸರಾ ಸಂದರ್ಭದಲ್ಲಿ ಕೇಸರಿ ಬಾವುಟವನ್ನು ಹಾರಿಸುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ನಾರಾಯಣಗುರುಗಳನ್ನು ಮುಂದಿಟ್ಟುಕೊಂಡು, ಹಳದಿ ಬಾವುಟ ನಿಧಾನಕ್ಕೆ ರಾರಾಜಿಸ ತೊಡಗಿದೆ. ಆದರೆ ಅದರಿಂದಷ್ಟೇ ಜನಾರ್ದನ ಪೂಜಾರಿಯವರ ಅಥವಾ ಬಿಲ್ಲವ ಮುಖಂಡರ ಕರ್ತವ್ಯ ಮುಗಿಯುವುದಿಲ್ಲ. ರಾಜಕೀಯವಾಗಿ ಸಂಪೂರ್ಣ ಹತಾಶ ಸ್ಥಿತಿಯಲ್ಲಿರುವ ಬಿಲ್ಲವರನ್ನು ಮತ್ತೆ ತಲೆಯೆತ್ತಿ ನಿಲ್ಲಿಸುವ ಕೆಲಸ ಜನಾರ್ದನ ಪೂಜಾರಿಯವರ ಹೊಣೆಯಾಗಿದೆ. ಈ ಕಾರಣಕ್ಕಾಗಿ ಜನಾರ್ದನ ಪೂಜಾರಿಯವರು ಮಾಡಬೇಕಾದ ಮೊದಲ ಕೆಲಸ, ರಾಜಕೀಯದಿಂದ ದೂರ ಸರಿಯುವುದು. ಮುಖ್ಯವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದು. ಕಾಂಗ್ರೆಸ್ ವರಿಷ್ಠರು ಜನಾರ್ದನ ಪೂಜಾರಿಗೆ ಮಾಡಬೇಕಾದ ಅತಿ ದೊಡ್ಡ ಉಪಕಾರವೆಂದರೆ ಅವರಿಗೆ ಟಿಕೆಟ್ ಕೊಡದೇ ಇರುವುದು. ಹಾಗೆಯೇ ಒಂದಾನೊಂದು ಕಾಲದಲ್ಲಿ ಪೂಜಾರಿ ಕರಾವಳಿಯಲ್ಲಿ ಕಾಂಗ್ರೆಸ್‌ನ್ನು ಕಟ್ಟಿ ಬೆಳೆಸಿದವರು. ಸಾಧ್ಯವಾದರೆ ಅವರಿಗೆ ಯಾವುದಾದರೂ ಉನ್ನತ ಹುದ್ದೆಯನ್ನು ನೀಡಬೇಕಾಗಿದೆ. ಕನಿಷ್ಠ ಯಾವುದಾದರೂ ರಾಜ್ಯದ ರಾಜ್ಯಪಾಲರಾಗಿ ಮಾಡಿದರೂ ಸರಿಯೇ. ಆಸ್ಕರ್‌ರಂತಹ ನಾಯಕರು ದಿಲ್ಲಿಯಲ್ಲಿ ನಿರಾಯಾಸವಾಗಿ ಅಧಿಕಾರ ಅನುಭವಿಸುತ್ತಿರುವಾಗ, ಇಂದಿರಾಗಾಂಧಿಯ ಕಾಲದಿಂದಲೇ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿ ಗುರುತಿಸಿಕೊಂಡ ಜನಾರ್ದನ ಪೂಜಾರಿಯನ್ನು ವರಿಷ್ಠರು ಕೈ ಬಿಡಬಾರದು. ಯಾವುದೂ ಸಾಧ್ಯವಿಲ್ಲವೆಂದಾದರೆ ಹಿಂದಿನಂತೆ, ರಾಜ್ಯಸಭಾ ಸದಸ್ಯರನ್ನಾಗಿಯಾದರೂ ಮಾಡಬೇಕು.

ಇದೇ ಸಂದರ್ಭದಲ್ಲಿ, ಮುಖ್ಯವಾಹಿನಿಯಿಂದ ದೂರ ಸರಿದು, ಕಲ್ಲಡ್ಕ ಪ್ರಭಾಕರ ಭಟ್ಟರ ಚಾಕರಿ ಮಾಡುತ್ತಾ, ಕ್ರಿಮಿನಲ್ ಹಣೆಪಟ್ಟಿ ಹೊತ್ತುಕೊಂಡು ತಿರುಗಾಡುತ್ತಿರುವ ಬಿಲ್ಲವ ತರುಣರನ್ನು ಮತ್ತೆ ಮುಖ್ಯವಾಹಿನಿಗೆ ತರುವುದು, ಅವರನ್ನು ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಅಭಿವೃದ್ಧಿಯತ್ತ ಮುನ್ನಡೆಸುವುದು ಪೂಜಾರಿಯ ಕರ್ತವ್ಯವಾಗಿದೆ. ಇತ್ತೀಚೆಗೆ ಪೂಜಾರಿಯವರು ವಿಧವೆ ಮಹಿಳೆಯರ ಕೈಯಲ್ಲಿ ರಥವನ್ನು ಎಳೆಸಿ, ಪೂಜೆಯನ್ನು ಮಾಡಿಸಿ ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದರು. ಇದು ನಿಜಕ್ಕೂ ನಾರಾಯಣಗುರುಗಳು ಮೆಚ್ಚುವ ಕೆಲಸ. ಇದನ್ನು ರಾಜಕೀಯ ಕಾರಣಕ್ಕಾಗಿ ಮಾಡದೆ, ಕನಿಷ್ಠ ತನ್ನ ಸಮುದಾಯದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಾಮಾಣಿಕವಾಗಿ ಜನಾರ್ದನ ಪೂಜಾರಿಯವರು ಮಾಡಬೇಕಾಗಿದೆ.ಬಿಲ್ಲವ ತರುಣರಿಗೆ, ವಿದ್ಯಾರ್ಥಿಗಳಿಗೆ ನಾರಾಯಣ ಗುರುಗಳ ಪರಿಚಯವನ್ನು ಮಾಡಿಸುವ ಕೆಲಸವೂ ಅವರಿಂದಲೇ ಆಗಬೇಕಾಗಿದೆ. ಅವರ ಕ್ರಾಂತಿ ಸಂದೇಶವನ್ನು ಕೇವಲ ಬಿಲ್ಲವರಲ್ಲಿ ಮಾತ್ರವಲ್ಲ, ಕರಾವಳಿಯ ಎಲ್ಲ ತರುಣರ ಎದೆಯಲ್ಲಿ ಬಿತ್ತುವ ಕೆಲಸ ನಡೆಯಬೇಕಾಗಿದೆ. ಕುದ್ರೋಳಿ ದೇವಸ್ಥಾನದ ವತಿಯಿಂದಲೇ ನಾರಾಯಣ ಗುರುಗಳ ಬದುಕು, ಆಶಯಗಳನ್ನು ತಿಳಿಸಿಕೊಡುವ ಸಣ್ಣಪುಟ್ಟ ಕೃತಿಗಳನ್ನು ಹೊರತರಬೇಕು. ಅಥವಾ ಇದಕ್ಕಾಗಿ ಪ್ರತ್ಯೇಕವಾದ ಒಂದು ಪ್ರತಿಷ್ಠಾನವನ್ನು ಮಾಡಿದರೂ ಆದೀತು.

ಮುಂಬಯಿಯಂತಹ ಶಹರದಲ್ಲಿ ಬಿಲ್ಲವರು ಸಂಘಟಿತರಾಗಿ ಶಾಲೆಗಳನ್ನು ಬ್ಯಾಂಕುಗಳನ್ನು, ಸಂಘಗಳನ್ನು ಕಟ್ಟಿಕೊಂಡಿದ್ದಾರೆ. ಅದು ಮಂಗಳೂರಿನ, ಉಡುಪಿಯ ಬಿಲ್ಲವರಿಗೂ ಸಾಧ್ಯವಾಗಬೇಕು. ಮುಂಬಯಿ ಬಿಲ್ಲವರ ಸಾಧನೆ ಯಾರ ಭಿಕ್ಷೆಯೂ ಅಲ್ಲ. ನಾರಾಯಣ ಗುರುಗಳ ಮಾಗದರ್ಶನದಲ್ಲಿ ಸಂಘಟಿತರಾದುದರಿಂದ ಈ ಅಭಿವೃದ್ಧಿ ಸಾಧಿಸುವುದಕ್ಕೆ ಬಿಲ್ಲವರಿಗೆ ಸಾಧ್ಯವಾಯಿತು.  ಇದೀಗ ಪ್ರಭಾಕರ ಭಟ್ಟರ ದಂಡು ಮುಂಬಯಿಗೆ ತೆರಳಿ, ಅಲ್ಲಿನ ಬಿಲ್ಲವರು, ಬಂಟರಿಂದ ‘ಭಾರತ ಭಾರತಿ’ ಸಮ್ಮೇಳನದ ಹೆಸರಿನಲ್ಲಿ ಅನಧಿಕೃತವಾಗಿ ಸುಮಾರು ಎರಡು ಕೋಟಿ ರೂಪಾಯಿಯಷ್ಟು ಕಪ್ಪ ವಸೂಲು ಮಾಡಿಕೊಂಡು ಬಂದಿದೆ. ಪ್ರಭಾಕರ ಭಟ್ಟರ ಬಳಗ ಮುಂಬಯಿ ಕನ್ನಡಿಗರಿಂದ ಹಫ್ತಾ ವಸೂಲು ಮಾಡಿಕೊಂಡು ಬಂದಿರುವ ಸಂಗತಿ, ಇದೀಗ ಎಲ್ಲರ ಬಾಯಲ್ಲೂ ಹರಿದಾಡುತ್ತಿದೆ. ಇಲ್ಲಿ ಗುಟ್ಟೆಂಬುದು ಉಳಿದೇ ಇಲ್ಲ.ಮುಂಬಯಿ ಕನ್ನಡಿಗರು ತಾವು ಕಟ್ಟಿ ಬೆಳೆಸಿದ ಭವ್ಯ ನಿರ್ಮಾಣಕ್ಕೆ, ಹೊರಗಿನ ಹಾವುಗಳನ್ನು ಯಾವ ಕಾರಣಕ್ಕೂ ನುಸುಳಲು ಬಿಡಬಾರದು. ಒಮ್ಮೆ ನುಸುಳಲು ಬಿಟ್ಟರೆ, ಅದರೊಳಗಿರುವ ನಿಜವಾದ ಕನ್ನಡಿಗರೆಲ್ಲ ಹೊರಬರುವಂತಹ ಸನ್ನಿವೇಶ ನಿರ್ಮಾಣವಾಗುತ್ತದೆ. ಆದುದರಿಂದ, ಇಂತಹ ಕ್ಷುದ್ರ ರಾಜಕೀಯ ಕೀಟಗಳಿಂದ ಮುಂಬಯಿ ಕನ್ನಡ ಸಂಸ್ಕೃತಿಯನ್ನು ರಕ್ಷಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ.

ಅಭಿವೃದ್ಧಿ ಮತ್ತು ಸೌಹಾರ್ದ ಒಂದೇ ನಾಣ್ಯದ ಎರಡು ಮುಖಗಳು. ಬಿಲ್ಲವರು, ಬಂಟರು, ಮೊಗವೀರರು  ಮತ್ತು ಬ್ಯಾರಿಗಳು ಜೊತೆಗೂಡದೆ ತುಳುನಾಡಿನ ಅಭಿವೃದ್ಧಿ ಸಾಧ್ಯವಿಲ್ಲ. ತುಳುನಾಡಿಗೆ ವೈದಿಕರು ಕಾಲಿಡುವ ವೊದಲಿನ ಉಚ್ಛ್ರಾಯ ದಿನಗಳನ್ನು ಇವರೆಲ್ಲ ನೆನೆದುಕೊಳ್ಳಬೇಕಾಗಿದೆ.ಅಬ್ಬಕ್ಕರಾಣಿಯ ಸೇನಾಪಡೆಯಲ್ಲಿ ಒಂದಾಗಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದ ದಿನಗಳನ್ನು ಸ್ಮರಿಸಬೇಕಾಗಿದೆ. ಬಪ್ಪಬ್ಯಾರಿಯ ಸೌಹಾರ್ದ ಕನಸುಗಳಿಗೆ ನೀರೆರೆಯಬೇಕಾಗಿದೆ.ಎಣ್ಮೂರು, ಪಂಜ, ಉಳ್ಳಾಲ ಹೀಗೆ ಎಲ್ಲಿ ನೋಡಿದರಲ್ಲಿ ಈ ಎಲ್ಲ ಸಮುದಾಯಗಳ ಕೊಡುಕೊಳ್ಳುವಿಕೆಯೇ ಕಾಣ ಸಿಗುತ್ತದೆ. ಇವರೆಲ್ಲ ಒಂದಾಗಿಲ್ಲದ ತುಳುನಾಡನ್ನು ಕಲ್ಪಿಸಲೂ ಸಾಧ್ಯವಿಲ್ಲ. ಅದನ್ನು ಒಂದಾಗಿಸುವ ಭಾಗವಾಗಿ, ಕಳಚಿಕೊಂಡ ಬಹುಮುಖ್ಯ ಕೊಂಡಿ, ಬಿಲ್ಲವರನ್ನು ಮತ್ತೆ ಜೋಡಿಸುವ ಕೆಲಸ ಕುದ್ರೋಳಿ ದೇವಸ್ಥಾನದಿಂದಲೇ ಆರಂಭವಾಗಬೇಕಾಗಿದೆ. ಈ ಮೂಲಕ ಕರಾವಳಿಯಾದ್ಯಂತ ನಾರಾಯಣ ಗುರುಗಳ ಹಳದಿ ಧ್ವಜ ಹಾರಾಡಬೇಕಾಗಿದೆ.

Thursday, November 1, 2012

ಮುಂಬೈ ಕನ್ನಡಿಗರು, ಕುದ್ರೋಳಿ ದೇವಸ್ಥಾನ ಮತ್ತು ವೈದಿಕ ಶಕ್ತಿಗಳ ಹುನ್ನಾರ!

ಶ್ರೀ ನಾರಾಯಣ ಗುರು
ಮುಂಬೈ ಕನ್ನಡ ಮತ್ತು ಅಲ್ಲಿನ ಗೆಳೆಯರು ನನ್ನ ಪಾಲಿಗೆ ಜೀವ ದ್ರವ್ಯವಿದ್ದಂತೆ. ವಾರಕ್ಕೊಮ್ಮೆ ಮುಂಬೈಯ ಯಾರಾದರೊಬ್ಬ ಗೆಳೆಯರು ಫೋನ್ ಕರೆ ಮಾಡಿದರೆ, ಮಂಗಳೂರಿನ ಬಿಸಿಲಿಗೆ ಒಣಗಿದ ನನ್ನ ಬರಡು ಬದುಕಲ್ಲಿ ಜೀವ ಚಿಮ್ಮಿ ಬಿಡುತ್ತದೆ. ಸಾಧಾರಣವಾಗಿ ವಾರಕ್ಕೊಮ್ಮೆ ಅಣ್ಣನಂತಹ ಗೆಳೆಯ ಸಾ.ದಯಾ(ದಯಾನಂದ ಸಾಲ್ಯಾನ್) ‘ಹೇಗಿದ್ದೀರಿ, ಏನು ಬರೆದಿದ್ದೀರಿ?’’ ಎಂಬ ಎರಡು ಶಬ್ದಗಳನ್ನು ಕೇಳದೇ ಇದ್ದಲ್ಲಿ ಏನೋ ಕಳೆದುಕೊಂಡ ಭಾವನೆ. ದಯಾ, ಗೋಪಾಲ್, ರವಿ ರ.ಅಂಚನ್, ಅರುಷಾ, ಕುಸುಮಾ ಹೀಗೆ ನನ್ನ ಹತ್ತು ಹಲವು ಗೆಳೆಯರು ನನ್ನನ್ನು ಮುಂಬೈ ಕನ್ನಡದ ಗಲ್ಲಿಗಳಲ್ಲಿ ಕೈ ಹಿಡಿದು ನಡೆಸಿದ್ದಾರೆ. ಒಂದು ರೀತಿಯಲ್ಲಿ ಮುಂಬೈಯ ಈ ಕನ್ನಡ ಜಗತ್ತು ನನ್ನ ಏಕಾಂತದ ಕನಸು. ಈ ಕನಸನ್ನು ಭಗ್ನಗೊಳಿಸುವ ರೀತಿಯಲ್ಲಿ ಎರಡು ದಿನಗಳ ಹಿಂದೆ ಮುಂಬೈಯಿಂದ ಫೋನ್ ಕರೆಯೊಂದು ಬಂದಿತ್ತು. ಮುಂಬೈಯಲ್ಲಿ ನಡೆದ ಒಂದು ಸಮಾವೇಶದ ಕುರಿತಂತೆ ಆತ್ಮೀಯರೊಬ್ಬರು ನನ್ನೊಂದಿಗೆ ಕೆಲವು ಮಾತುಗಳನ್ನು, ವಿಚಾರಗಳನ್ನು ಹಂಚಿಕೊಂಡರು. ನನ್ನ ಮುಂಗನ್ನಡದ ಮಾನಸ ಸರೋವರವನ್ನು ಅಪರಿಚಿತರಾರೋ ಕಲ್ಲು ಚೂರುಗಳನ್ನೆಸೆದು ಕಲಕಿದಂತೆ ಆ ಮಾತುಗಳಿಂದ ದುಗುಡಗೊಂಡೆ.

ಕರಾವಳಿಯ ತುಳುವರಿಗೆ ಮುಂಬಯಿ ಕಾಯಕದ ನಗರ. ತಾಯ್ನೆಲದ ಸಾಮಾಜಿಕ ಸಂಘರ್ಷಗಳು ಹೊಸ ಬಿಕ್ಕಟ್ಟನ್ನು ಸೃಷ್ಟಿಸಿದಾಗ, ಇಲ್ಲಿನ ಮೊಗವೀರರು, ಬಂಟರು, ಬಿಲ್ಲವ ತರುಣರು ಮುಂಬೈಯನ್ನು ಸೇರಿ, ಅಲ್ಲಿ ನೆಲೆಕಂಡು, ಬೇರು ಬಿಟ್ಟು, ಮುಂಗನ್ನಡವೆಂಬ ವಿಶಿಷ್ಟ ಸಂಸ್ಕೃತಿ ಕಟ್ಟಿ ಬೆಳೆಸಿದರು. ನಗರ ಶೈಲಿಯ ಹಿಂದಿ ಮಿಶ್ರಿತ ತುಳುಭಾಷೆಯೊಂದನ್ನು ರೂಢಿಸಿಕೊಂಡರು. ಜಾತಿಯ ನೆಲೆಯಲ್ಲೇ ಸಂಘಟಿತರಾಗಿ, ಆ ಮೂಲಕವೇ ತಮ್ಮ ಅಸ್ತಿತ್ವವನ್ನು ಮರಳಿ ಗಳಿಸಿಕೊಂಡರು. ಊರವರಿಂದ ಸೈ ಅನ್ನಿಸಿ ಕೊಂಡರು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರಾಗಿ, ಬಳಿಕ ಕನ್ನಡದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡರು.ಮುಂಬೈಯ ಜಾತಿ ಸಂಘಟನೆಗಳು ಇಲ್ಲಿನ ಕನ್ನಡತನಕ್ಕೆ ಎಲ್ಲೂ ಧಕ್ಕೆ ತರಲಿಲ್ಲ. ಬದಲಿಗೆ ಪೂರಕವಾಯಿತು. ಬಿಲ್ಲವರು, ಬಂಟರು, ಮೊಗವೀರರು ಕರ್ನಾಟಕ ಸಂಘದಲ್ಲಿ ಕನ್ನಡದ ಛತ್ರಿಯ ನೆರಳೊಳಗೆ ಸೇರಿಕೊಳ್ಳುವವರು. ಬದುಕಿನ ಅಳಿವು ಉಳಿವಿನ ಸಂದರ್ಭದಲ್ಲಿ ಮುಂಬೈಯನ್ನು ಆರಿಸಿಕೊಂಡಿದ್ದರೇ ಹೊರತು, ಹಣದ ದಾಹಕ್ಕಾಗಿ ಅವರು ಮುಂಬೈಗೆ ತೆರಳಿದವರಲ್ಲ. ತೆರಳಿದ ಬಳಿಕವೂ ತನ್ನ ತಾಯ್ನೆಲದ ಜೀವಜಲ ವನ್ನು ಉಳಿಸಿಕೊಂಡವರು.

ಆದರೆ ಒಂದು ವಾರದ ಹಿಂದೆ ಇಲ್ಲಿ ಒಂದು ಸಮಾವೇಶ ನಡೆಯಿತು. ಯಾವುದೇ ಅಧಿಕೃತ ಹೆಸರಿನಲ್ಲಿ ಗುರುತಿಸಿಕೊಳ್ಳದ ಕೆಲವರು ಒಟ್ಟು ಸೇರಿ ಮುಂಬೈಯಲ್ಲಿ ಭಾರತ ಭಾರತಿ ಎನ್ನುವ ಸಮಾವೇಷವನ್ನು ಕಳೆದವಾರ ಹಮ್ಮಿಕೊಂಡರು. ಅದಕ್ಕೆ ‘ಹಿಂದೂ ಕೌಟುಂಬಿಕ ಸಮ್ಮಿಲನ’ ಎಂಬ ಇನ್ನೊಂದು ಹೊರ ಮುಖವಾಡವನ್ನೂ ಹಾಕಲಾಯಿತು.ಇದೊಂದು ಸಾಂಸ್ಕೃತಿಕ ಸಮಾವೇಷವೆಂದು ಅಲ್ಲಿನ ವಿವಿಧ ಜಾತಿ ಸಂಘಟನೆಗಳನ್ನು, ಕನ್ನಡ ಸಂಘಟನೆಗಳನ್ನು ವಂಚಿಸಿ ಅವರನ್ನೆಲ್ಲ ಒಂದೆಡೆ ಸೇರಿಸಿ ಅವರಿಗೆ ಕೋಮು ವಿಷವನ್ನು ಉಣಿಸುವ ಪ್ರಯತ್ನವೊಂದು ಅಲ್ಲಿ ನಡೆಯಿತು. ಈ ಭಾರತ ಭಾರತಿ ಸಮಾವೇಶದಲ್ಲಿ ಮುಂಬೈಯ ಹಿರಿಯ ಕನ್ನಡಿಗರಿಗೆ ಹಿಂದುತ್ವದ ಉಪದೇಶ ನೀಡಲು ನಾಡಿನಿಂದ ತೆರಳಿದವರು ಇನ್ನಾರೂ ಅಲ್ಲ. ಉಪ್ಪಿನಂಗಡಿಯ ಸೌಹಾರ್ದವನ್ನು ಕೆಡಿಸಿ, ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿರುವ ಪ್ರಭಾಕರ ಭಟ್, ಕೋಮು ರಾಜಕೀಯ ಮಾಡುವುದಕ್ಕಾಗಿಯೇ ಸೃಷ್ಟಿಯಾದ ಕರಾವಳಿಯ ಸುಬ್ರಹ್ಮಣ್ಯ ಭಟ್, ಆರೆಸ್ಸೆಸ್ ಮುಖಂಡ ಮೈ.ಚ.ಜಯದೇವ ಮೊದಲಾದವರು ಮುಂಬೈಯ ಕನ್ನಡಿಗರಿಗೆ ಹಿಂದುತ್ವದ ಬಾಲ ಬೋಧೆಗಳನ್ನು ಮಾಡಿದರು. ಯಾವುದೇ ಅಧಿಕೃತ ವಾರಸುದಾರರಿಲ್ಲದ ಈ ಭಾರತ ಭಾರತಿ ಸಮಾವೇಶದ ಉದ್ದೇಶವೇ ಮುಂಬೈ ಕನ್ನಡದ ಸೌಹಾರ್ದಮಯ ಬದುಕಿಗೆ ರಾಜಕೀಯ, ಕೋಮು ಮತ್ತು ಜಾತೀಯತೆಯ ವಿಷವನ್ನು ಬೆರೆಸುವುದು. ಇದನ್ನು ಎಷ್ಟು ಜಾಣತನದಿಂದ ಹಮ್ಮಿಕೊಳ್ಳಲಾಯಿತು ಎಂದರೆ ಕೆಲವರಿಗೆ ಪ್ರಭಾಕರ ಭಟ್ಟರು ಮತ್ತು ಅವರ ರಾಜಕೀಯ ಸಂಗಡಿಗರು ಇದರಲ್ಲಿ ಪಾಲುಗೊಳ್ಳುವ ವಿಷಯವನ್ನೇ ಮುಚ್ಚಿಡಲಾಗಿತ್ತು. ಕೊನೆಯ ಗಳಿಗೆಯಲ್ಲಿ ಇದನ್ನು ಪ್ರಕಟಪಡಿಸಲಾಯಿತು. ಈ ಕೋಮು ರಾಜಕೀಯ ಸಮಾವೇಶಕ್ಕೆ ಮುಂಬೈಯ ಎಲ್ಲ ಕನ್ನಡ ಸಂಘಗಳನ್ನು ಜಾಣತನದಿಂದ ಸದಸ್ಯರನ್ನಾಗಿ ಮಾಡಿಕೊಳ್ಳಲಾಯಿತು.ಮನುವಾದ ಮತ್ತು ವೈದಿಕಶಾಹಿಯ ನೇರ ಬಲಿಪಶುಗಳಾಗಿರುವ ಬಿಲ್ಲವರು, ಮೊಗವೀರರು ಮತ್ತು ಬಂಟ ಸಮುದಾಯಗಳ ಮೇಲಿನ ಹಿಡಿತವನ್ನು ಮತ್ತೆ ಗಟ್ಟಿ ಮಾಡಿಕೊಳ್ಳುವುದು, ಈ ಸಮುದಾಯದ ಜುಟ್ಟನ್ನು ಮತ್ತೆ ತಮ್ಮ ಕೈ ವಶ ಮಾಡಿಕೊಳ್ಳುವ ಏಕಮೇವ ಉದ್ದೇಶದಿಂದ ಮುಂಬೈಯಲ್ಲಿ ಇಂತಹದೊಂದು ಸಮಾವೇಶವನ್ನು ಮಾಡಲಾಗಿತ್ತು.

ಅತ್ಯಂತ ವಿಷಾದನೀಯ ಸಂಗತಿಯೆಂದರೆ, ಈ ಸಮವೇಶದಲ್ಲಿ ಮುಂಬೈ ಕನ್ನಡಿಗರ ತಾಯಿಯಂತಹ ಸುನೀತಾ ಶೆಟ್ಟಿ ಅಥವಾ ಎಲ್ಲರ ಮೆಚ್ಚಿನ ಸುನೀತಕ್ಕ(ನನ್ನ ಕವನ ಸಂಕಲವೊಂದನ್ನು ಇವರೇ ಬಿಡುಗಡೆ ಮಾಡಿದ್ದರು), ಅತ್ಯಂತ ನಿಷ್ಠುರ ವ್ಯಕ್ತಿತ್ವವೆಂದು ಗುರುತಿಸಲ್ಪಟ್ಟ ಡಾ.ಸಂಜೀವ ಶೆಟ್ಟಿ(ಮುಂಬೈಯಲ್ಲಿ ಎಂ.ಎ. ಕಲಿಯುತ್ತಿರುವ ಹೊತ್ತಿನಲ್ಲಿ ಇವರು ನನಗೆ ಗುರುಗಳು) ಈ ಸಮಾವೇಶದಲ್ಲಿ ಬಲಿಪಶುಗಳಾದುದು.ಹಿಂದುತ್ವದ ಕುರಿತಂತೆ ಪ್ರಭಾಕರ ಭಟ್ಟರು ಮತ್ತು ಅವರ ಶಿಷ್ಯರಿಗೆ 48ಗಂಟೆ ನಿರಂತರ ಪಾಠ ಹೇಳುವ ಸಾಮರ್ಥ್ಯವಿರುವವರು ಇವರು. ಈ ದೇಶದ ಸೌಹಾರ್ದ, ಸಂಸ್ಕೃತಿ, ಪರಂಪರೆ ಮೊದಲಾದವುಗಳ ಕುರಿತಂತೆ ಸುನೀತಕ್ಕ, ಸಂಜೀವ ಶೆಟ್ಟಿಯಂಥವರೇ ಪ್ರಭಾಕರ ಭಟ್, ಜಯದೇವ, ಸುಬ್ರಹ್ಮಣ್ಯ ಭಟ್‌ನಂತವರಿಗೆ ಸಮಾವೇಶದಲ್ಲಿ ಪಾಠ ತೆಗೆದುಕೊಂಡಿದ್ದಿದ್ದರೆ ಸಮಾವೇಶದ ಉದ್ದೇಶ ಸಾರ್ಥಕವಾಗುತ್ತಿತ್ತು. ನಿಜವಾದ ಹಿಂದುತ್ವವೆಂದರೆ ಏನು ಎನ್ನುವುದನ್ನು ಮುಂಬೈ ಕನ್ನಡಿಗರೇ ಈ ಪ್ರಭಾಕರ ಭಟ್ಟರಿಗೆ ಚೆನ್ನಾಗಿ ಕಲಿಸಿಕೊಡುತ್ತಿದ್ದರು. ಆದರೆ ದುರದೃಷ್ಟವಶಾತ್, ಹಿಂದುತ್ವದ ಬಗ್ಗೆ ಭಟ್ಟರು ಮುಂಬೈ ಕನ್ನಡಿಗರಿಗೆ ವಿವರಿಸಿಕೊಟ್ಟರು.

ಈ ವೇದಿಕೆಯಲ್ಲಿ ಇನ್ನೊಂದು ಅವಮಾನಕಾರಿ ವಿಷಯ ನಡೆಯಿತು. ಊರಿನಿಂದ ಸಾಮಾಜಿಕವಾಗಿ, ಧಾರ್ಮಿಕವಾಗಿ ತಿರಸ್ಕೃತರಾಗಿ, ಮುಂಬೈಯಲ್ಲಿ ನೆಲೆಕಂಡು, ಅಲ್ಲಿ ಮತ್ತೆ ತಮ್ಮ ಸ್ವಾಭಿಮಾನಿ ಬದುಕನ್ನು ಕಟ್ಟಿಕೊಂಡ ಬಿಲ್ಲವರಿಗೆ ಪ್ರಭಾಕರ ಭಟ್ಟರು ಛೀಮಾರಿ ಹಾಕಿದರಂತೆ. ಯಾಕೆಂದು ಕೇಳುತ್ತೀರಾ? ಕುದ್ರೋಳಿ ದೇವಸ್ಥಾನಕ್ಕೆ ಸೋನಿಯಾ ಗಾಂಧಿಯನ್ನು ಕರೆಸಿ ರುವುದಕ್ಕೆ? ಆ ಛೀಮಾರಿಯನ್ನು ಹಿರಿಯ ಬಿಲ್ಲವ ನಾಯಕರು ತಲೆತಗ್ಗಿಸಿ ಸ್ವೀಕರಿಸಿದರಂತೆ. ನಾರಾಯಣ ಗುರುವಿನ ಬದುಕು, ತತ್ವ, ಸಿದ್ಧಾಂತವನ್ನು ಒಂದಿಷ್ಟು ತಿಳಿದುಕೊಂಡಿದ್ದಿದ್ದರೆ ಆ ಬಿಲ್ಲವ ಮುಖಂಡರು ತಲೆತಗ್ಗಿಸುವ ಪ್ರಶ್ನೆ ಬರುತ್ತಿರಲಿಲ್ಲವೇನೋ? ಭಟ್ಟರಿಗೆ ಬಿಲ್ಲವರನ್ನು ಛೀಮಾರಿ ಮಾಡುವ ಧೈರ್ಯವೂ ಬರುತ್ತಿರಲಿಲ್ಲ ವೇನೋ?ಜಾತಿ, ಧರ್ಮ, ಮೇಲು, ಕೀಳು ಇತ್ಯಾದಿಗಳನ್ನೆಲ್ಲ ಮೀರಿ ಮಾನವೀಯ ತಳಹದಿಯಲ್ಲಿ ನಾರಾಯಣ ಗುರು ಸ್ಥಾಪಿಸಿದ ಕುದ್ರೋಳಿ ದೇವಸ್ಥಾನದ ಮೆಟ್ಟಿಲ ಮೇಲೆ ಕಾಲಿಡಲೂ ಯೋಗ್ಯತೆಯಿಲ್ಲದ ಪ್ರಭಾಕರ ಭಟ್ಟರಿಗೆ, ಪ್ರತಿಯಾಗಿ ಛೀಮಾರಿ ಹಾಕದೆ ಅವರನ್ನು ಹಾಗೆಯೇ ಮರಳಿ ಊರಿಗೆ ತಲುಪಿಸಿರುವುದು ಮುಂಬೈಯ ಬಿಲ್ಲವರ ಸಜ್ಜನಿಕೆಯನ್ನು, ಹಿರಿಮೆಯನ್ನು ಹೇಳುತ್ತದೆ. ಆದರೆ ಇಡೀ ಘಟನೆ ಕರಾವಳಿಯ ಬಹುಸಂಖ್ಯಾತರಾದ ಬಿಲ್ಲವರ ರಾಜಕೀಯ ದುರಂತವನ್ನು ಮಾತ್ರ ಹೊರಗೆಡಹಿತು. ಕರಾವಳಿಯ ಬಿಲ್ಲವರ ರಾಜಕೀಯ ಏಳು-ಬೀಳುಗಳ ಹಿಂದಿರುವ ಕುದ್ರೋಳಿ ದೇವಸ್ಥಾನ, ನಾರಾಯಣ ಗುರುಗಳ ಮಂಗಳೂರು ಭೇಟಿ, ಈ ದೇವಸ್ಥಾನವನ್ನು ಮುಂದಿಟ್ಟು ವೈದಿಕ ಶಕ್ತಿಗಳು ಹೂಡಿದ ಸಂಚು ಇವೆಲ್ಲವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದು ನನ್ನ ಈ ಬರಹದ ಉದ್ದೇಶ.

***
ನಾರಾಯಣ ಗುರುಗಳು ಮಂಗಳೂರಿಗೆ ಮೊತ್ತ ಮೊದಲು ಪಾದವೂರಿದ್ದು ಸುಮಾರು 1908ರಲ್ಲಿ. ಅವರು ಮಂಗಳೂರಿಗೆ ಆಗಮಿಸುವುದಕ್ಕೆ ಕಾರಣಕರ್ತರಾದ ಹಲವು ಬಿಲ್ಲವ ನಾಯಕರಿದ್ದರೂ, ಅದರಲ್ಲಿ ಮುಖ್ಯ ಹೆಸರು ಸಾಹುಕಾರ್ ಕೊರಗಪ್ಪ ಪೂಜಾರಿಯವರದು. ನಾರಾಯಣ ಗುರುಗಳು ಮತ್ತು ಕೊರಗಪ್ಪ ಪೂಜಾರಿಯವರ ಭೇಟಿ ಒಂದು ಯೋಗಾಯೋಗ ಎನ್ನಬೇಕು. ಕರಾವಳಿಯ ಬಿಲ್ಲವರು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ತಲೆಯೆತ್ತಿ ನಿಲ್ಲುವುದಕ್ಕೆ ಈ ಭೇಟಿ ಒಂದು ಪೀಠಿಕೆಯಾಯಿತು.

 ಅಬ್ದುಂಞಿ ರಝಾಕಾರ್ ಎಂಬ ಹಿರಿಯ ಮುಸ್ಲಿಂ ಉದ್ಯಮಿ ಅಂದು ಮಂಗಳೂರಿನ ಹಿರಿಯ ವ್ಯಾಪಾರಿಗಳೆಂದು ಗುರುತಿಸಲ್ಪಟ್ಟವರು. ಒಣ ಮೀನು, ಸಾಂಬಾರ ಪದಾರ್ಥ ಇತ್ಯಾದಿಗಳನ್ನು ಅವರು ಶ್ರೀಲಂಕಾ, ಸೌದಿ ಅರೇಬಿಯಾ ಮೊದಲಾದೆಡೆಗೆ ಹಡಗಿನ ಮೂಲಕ ಸಾಗಿಸುತ್ತಿದ್ದರು. ರಝಾಕಾರ್‌ರ ಜೊತೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದವರು ಕೊರಗಪ್ಪ ಪೂಜಾರಿ.ಕುದ್ರೋಳಿ ದೇವಸ್ಥಾನದ ಉಗಮದ ಹಿಂದೆ ಬಿಲ್ಲವ-ಮುಸ್ಲಿಮರ ನಡುವಿನ ಒಂದು ಸೌಹಾರ್ದ ಬಂಧವೂ ಕೆಲಸ ಮಾಡಿದೆ. ರಝಾಕಾರ್ ಮತ್ತು ಕೊರಗಪ್ಪ ಅವರ ನಡುವಿನ ಸಂಬಂಧ ಎಷ್ಟು ಹತ್ತಿರವಿತ್ತು ಎಂದರೆ ಅದು ರಝಾಕಾರ್ ಅವರ ಮಕ್ಕಳ ಕಾಲದಲ್ಲೂ ಮುಂದುವರಿಯಿತು. ರಝಾಕಾರ್ ಅವರ ಪುತ್ರ ರಹಿಮಾನ್ ಅವರು ಕೊರಗಪ್ಪ ಪೂಜಾರಿಯವರನ್ನು ತಮ್ಮ ವ್ಯಾಪಾರದ ಪಾಲುದಾರರಾಗಿ ಮಾಡಿಕೊಂಡರು. ಹೀಗೆ ಕೆಲಸದವರಾಗಿ ಸೇರಿದ್ದ ಕೊರಗಪ್ಪ ಪೂಜಾರಿಗಳು ಮುಂದೆ ಸಾಹುಕಾರ್ ಕೊರಗಪ್ಪರಾಗಿ ಬದಲಾದರು. ಸಿ.ಅಬ್ದುಲ್ ರಹಿಮಾನ್ ಎಂಡ್ ಕೊರಗಪ್ಪ ಕಂಪೆನಿ ಎಂಬ ಪಾಲುದಾರಿಕೆಯ ಸಂಸ್ಥೆಯೊಂದನ್ನು ಮಾಡಿಕೊಂಡು ತಮ್ಮ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸಿದರು. ಶ್ರೀಲಂಕಾ, ಅರೇಬಿಯಾದಲ್ಲಿ ವ್ಯಾಪಾರ ಇನ್ನಷ್ಟು ಕುದುರಿತು.


ಕೊರಗಪ್ಪ ಪೂಜಾರಿಯವರು ಕುದ್ರೋಳಿಯಲ್ಲಿ ಗೋಕರ್ಣ ದೇವಸ್ಥಾನ ನಿರ್ಮಾಣ ಮಾಡಿದುದರ  ಹಿಂದೆ ಒಂದು ವಿಷಾದನೀಯ ಘಟನೆ ಇದೆ. ಕೊರಗಪ್ಪ ಅವರು ಸಾಹುಕಾರರಾದ ಮೇಲೆ ಗೋಕರ್ಣಕ್ಕೆ ಹೋದಾಗ ಅಲ್ಲಿಯ ದೇವಸ್ಥಾನಕ್ಕೂ ಭೇಟಿ ನೀಡಿದರು. ಇವರ ವ್ಯಕ್ತಿತ್ವ, ಅಂತಸ್ತು ಕಂಡು ದೇವಸ್ಥಾನದ ಅರ್ಚಕರು ಸ್ವಾಗತಿಸಿ, ಊಟ, ಪ್ರಸಾದ ನೀಡಿದರು. ಹೊರಡುವ ಹೊತ್ತಲ್ಲಿ, ಕೊರಗಪ್ಪ ಪೂಜಾರಿಯವರು ಬಿಲ್ಲವ ಜಾತಿಗೆ ಸೇರಿದವರು ಎನ್ನೋದು ಗೊತ್ತಾಗಿ, ಅವರನ್ನು ತಡೆದು ದಂಡ ಕಾಣಿಕೆಯನ್ನು ಪಡೆದರು. ಇದರಿಂದ ಕೊರಗಪ್ಪ ಪೂಜಾರಿಯವರಿಗೆ ತೀವ್ರ ಅವಮಾನವಾಯಿತು. ಆರ್ಥಿಕವಾಗಿ ಉನ್ನತ ಸ್ಥಾನದಲ್ಲಿದ್ದರೂ ಅವರಿಗೆ ಅಲ್ಲಿ ಜಾತಿ ಕಾರಣಕ್ಕಾಗಿ ಅವಮಾನವಾಯಿತು.

ಇದೇ ಸಂದರ್ಭದಲ್ಲಿ ಸಾಹುಕಾರ್ ಕೊರಗಪ್ಪ ಪೂಜಾರಿಯವರ ಸೋದರನಿಗೆ ಮಾರಕ ಕಾಯಿಲೆಯೊಂದು ಎರಗಿತು. ಯಾವ ಔಷಧಿಯಿಂದಲೂ ಅವರ ಕಾಯಿಲೆ ಗುಣವಾಗಲಿಲ್ಲ. ಆಗ ಯಾರೋ ಅವರಿಗೆ ‘ಕೇರಳದಲ್ಲಿ ಒಬ್ಬ ಭಟ್ರು ಇದ್ದಾರೆ. ಅವರು ಬಲ್ಮೆ ಹೇಳಿ ಗುಣಪಡಿಸುತ್ತಾರೆ’ ಎಂದು ಹೇಳಿದರಂತೆ. ಹಾಗೆ ತಮ್ಮ ಸೋದರನನ್ನು ಅವರು ಕೇರಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ನೋಡಿದರೆ ಯಾವುದೇ ಭಟ್ರು, ಜೋಯಿಸರು ಇರಲಿಲ್ಲ. ಬದಲಿಗೆ, ಇವರನ್ನು ತಮ್ಮಂತೆಯೇ ಸ್ವೀಕರಿಸುವ ನಾರಾಯಣ ಗುರುಗಳಿದ್ದರು. ಆಯುರ್ವೇದದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದ ನಾರಾಯಣ ಗುರುಗಳು ಇವರನ್ನು ತಮ್ಮ ಬಾಹುಗಳಲ್ಲಿ ತೆಗೆದುಕೊಂಡದ್ದು ಅಚ್ಚರಿಯನ್ನುಂಟು ಮಾಡಿತು. ಸಾಹುಕಾರ ಕೊರಗಪ್ಪನವರು ಅದೆಷ್ಟೇ ಶ್ರೀಮಂತರಾಗಿದ್ದರೂ ವೈದಿಕರಿಗೆ ಅಸ್ಪೃಶ್ಯರಾಗಿದ್ದರು. ಸಾಮಾಜಿಕವಾಗಿ ವೈದಿಕರ ಮುಂದೆ ತಲೆಯೆತ್ತಿ ನಿಲ್ಲುವುದು ಅಸಾಧ್ಯವಾಗಿತ್ತು. ಅದರಲ್ಲೂ ಕೊರಗಪ್ಪರಿಗೆ ಮಂಗಳೂರಿನ ಮುಸ್ಲಿಮರ ಜೊತೆಗೆ ವ್ಯಾಪಾರ ಸಂಬಂಧ, ಒಡನಾಟ, ಸ್ನೇಹ ಇತ್ಯಾದಿಗಳಿವೆ. ಆದುದರಿಂದ ಮೇಲ್ವರ್ಗಕ್ಕೆ ಕೊರಗಪ್ಪನವರು ಸದಾ ಅಸಹನೆಯ ವಿಷಯವೇ ಆಗಿದ್ದರು. ಈವರೆಗೆ, ಸ್ವಾಮೀಜಿಗಳೆಂದರೆ ಮೇಲ್ಜಾತಿಯವರು ಎಂದು ತಿಳಿದವರಿಗೆ ಮೊದಲ ಬಾರಿಗೆ ಜಾತಿರಹಿತ ಸ್ವಾಮೀಜಿಯೊಬ್ಬರು ಮುಖಾಮುಖಿಯಾಗಿದ್ದರು. ಕೆಲವೇ ದಿನಗಳಲ್ಲಿ ಕೊರಗಪ್ಪ ಪೂಜಾರಿಯ ಸೋದರ ಗುಣಮುಖರಾದರು.

ಈ ಅವಧಿಯಲ್ಲಿ ನಾರಾಯಣಗುರುಗಳು ಎಲ್ಲ ಜಾತಿಯನ್ನು ಒಂದೇ ಎಂದು ಬಗೆಯುವ, ಮೇಲು-ಕೀಳೆನ್ನುವುದನ್ನು ಯೋಚಿಸದ, ನಮ್ಮದೇ ಬಿಲ್ಲವ ಸಮುದಾಯಕ್ಕೆ ಸೇರಿದ ಸ್ವಾಮಿ ಎನ್ನುವುದನ್ನು ಅರಿತಾಗ ಅವರು ರೋಮಾಂಚಿತರಾದರು. ಗುರುಗಳನ್ನು ಮಂಗಳೂರಿಗೆ ಬರಬೇಕು ಎಂದು ಆಹ್ವಾನಿಸಿದರು. ಆಗ ಗುರುಗಳು ತನ್ನದೇ ಆದ ಅಪೇಕ್ಷೆಯನ್ನು ಮುಂದಿಟ್ಟರು. ಅದರಲ್ಲಿ ಮುಖ್ಯವಾದುದು ಮೂರು. 1. ಬಿಲ್ಲವರು ಮೂರ್ತೆಧಾರಿಕೆಯನ್ನು ಬಿಡಬೇಕು. ಅಂದರೆ ಶೇಂದಿ ಮಾರುವುದನ್ನು ನಿಲ್ಲಿಸಬೇಕು. ಕೈಮಗ್ಗ, ಕೃಷಿ, ವ್ಯಾಪಾರ ಮೊದಲಾದ ಮುಖ್ಯವಾಹಿನಿಯ ಕಸುಬುಗಳನ್ನು ಮಾಡುತ್ತಾ ಸಾಮಾಜಿಕವಾಗಿ ಎತ್ತರದ ಸ್ಥಾನಕ್ಕೆ ಏರಬೇಕು.
2. ಮಂಗಳೂರಿನಲ್ಲಿ ಎಲ್ಲ ಜಾತಿ, ಧರ್ಮದ ವಿದ್ಯಾರ್ಥಿಗಳು ಕಲಿಯಲು ಅನುಕೂಲವಾಗುವಂತೆ ಒಂದು ಶಾಲೆಯನ್ನು ತೆರೆಯಬೇಕು.
3. ಕೀಳು-ಮೇಲುಗಳಿಲ್ಲದ, ಎಲ್ಲ ಜಾತಿಗಳನ್ನು ಒಂದೇ ಎಂದು ಬಗೆಯುವುದಕ್ಕಾಗಿ ಒಂದು ದೇವಸ್ಥಾನವನ್ನು ನಿರ್ಮಾಣ ಮಾಡಬೇಕು.

ಕೊರಗಪ್ಪ ಪೂಜಾರಿಯವರು ಅದಕ್ಕೆ ಒಪ್ಪಿ ಮಂಗಳೂರಿಗೆ ಮರಳಿದರು. ಬಂದವರೇ ಬಿಲ್ಲವ ಹಿರಿಯರನ್ನು ಒಟ್ಟು ಸೇರಿಸುವ ಕೆಲಸದಲ್ಲಿ ತೊಡಗಿದರು. ಜಾತೀಯತೆಯ ಕುರಿತ ಜಾಗೃತಿಯನ್ನು ಹಂಚುತ್ತಾ, ನಾರಾಯಣ ಗುರುಗಳನ್ನು ಕರೆಸುವ ಕುರಿತು ನೀಲನಕ್ಷೆಯನ್ನು ಹಾಕಿದರು. ಅಂತೆಯೇ 1908ರಲ್ಲಿ ನಾರಾಯಣಗುರುಗಳ ಸಮ್ಮುಖದಲ್ಲಿ ಬಿಲ್ಲವ ಹಿರಿಯರ ಸಭೆಯೊಂದು ನಡೆಯಿತು. ಶೆಡ್ಡೆ ಸೋಮಯ್ಯ ಮೇಸ್ತ್ರಿ, ಐತಪ್ಪ ಪೂಜಾರಿ, ಅಮ್ಮಣ್ಣ ಮೇಸ್ತ್ರಿ, ಕಾಂಟ್ರಾಕ್ಟರ್ ಧೂಮಪ್ಪ ಪೂಜಾರಿ ಹೀಗೆ ಎಲ್ಲ ಗಣ್ಯರು ಆ ಸಭೆಯಲ್ಲಿ ಭಾಗವಹಿಸಿದ್ದರು.ಆ ಸಂದರ್ಭದಲ್ಲಿ ಮಂಗಳೂರಿನ ನೆಹರೂ ಮೈದಾನದ ಸ್ಥಳ ಬಿಲ್ಲವರ ಕೈಯಲ್ಲಿತ್ತು. ದೇವಸ್ಥಾನ ಎಲ್ಲಿ ನಿರ್ಮಿಸಬಹುದು ಎನ್ನುವಾಗ ಹಲವರಲ್ಲಿ ಈ ಸ್ಥಳದ ಕುರಿತಂತೆ ಸಮ್ಮತಿಯ ಅಭಿಪ್ರಾಯವಿತ್ತು. ಆದರೆ ನಾರಾಯಣ ಗುರುಗಳು ಕುದ್ರೋಳಿಯನ್ನು ಆರಿಸಿದರು. ವಿಶೇಷವೆಂದರೆ, ಕುದ್ರೋಳಿ ಮುಸ್ಲಿಂ ಬಾಹುಳ್ಯದ ಸ್ಥಳ. ಅದರಲ್ಲೂ ಕಸಾಯಿಖಾನೆಯಿರುವ ಸ್ಥಳ. ಕುದುರೆಗಳನ್ನು ಕಟ್ಟುತ್ತಿದ್ದ ಸ್ಥಳ. ಆದರೆ ಇಂತಹ ಸ್ಥಳವನ್ನೇ ನಾರಾಯಣ ಗುರುಗಳು ಆರಿಸುವಾಗ ಅವರಲ್ಲಿ ದೂರದೃಷ್ಟಿಯೊಂದು ಕೆಲಸ ಮಾಡಿತ್ತು. ಇತರ ಸಮುದಾಯಗಳೊಂದಿಗೆ ಬೆರೆಯುವ ಆಶಯ ಅದರಲ್ಲಿತ್ತು. ಕುದ್ರೋಳಿ ಮುಸ್ಲಿಮರ ಜೊತೆಗೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ ಕೊರಗಪ್ಪ ಪೂಜಾರಿಯವರಿಗೆ ಅಲ್ಲಿ ದೇವಸ್ಥಾನ ನಿರ್ಮಿಸುವುದು ಕಷ್ಟವಾಗಿರಲಿಲ್ಲ.ಕುದ್ರೋಳಿಯ ಮುಸ್ಲಿಮರು ಕೊರಗಪ್ಪ ಪೂಜಾರಿಯವರಿಗೆ ಸಂಪೂರ್ಣ ಸಹಕಾರ ನೀಡಿದರು. ಅಂದೇ ನಾರಾಯಣ ಗುರುಗಳು ದೇವಸ್ಥಾನಕ್ಕೆ ಚೌಕಟ್ಟು ಹಾಕಿದರು. 1912ರಲ್ಲಿ ಕರಾವಳಿಯ ಬಿಲ್ಲವರ ಪಾಲಿಗೆ ಮಾತ್ರವಲ್ಲ, ದೇವಸ್ಥಾನ ಪ್ರವೇಶಿಸಲು ಅವಕಾಶವಿಲ್ಲದ ಎಲ್ಲ ಶೂದ್ರರ ಪಾಲಿಗೆ ಸಾಮಾಜಿಕವಾಗಿ ಬಿಡುಗಡೆಯ ಸಂಕೇತವೊಂದನ್ನು ತೋರಿಸಿಕೊಟ್ಟರು. ಅಂದು ಫೆಬ್ರವರಿ ತಿಂಗಳಲ್ಲಿ ನಾರಾಯಣ ಗುರುಗಳು ಮಂಗಳೂರಿನ ಕುದ್ರೋಳಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠೆ ಮಾಡಿದರು. ಸ್ವಾತಂತ್ರ ಹೋರಾಟದ ಕಾವು ಮಂಗಳೂರಿನಲ್ಲಿ ಜಾಗೃತವಾಗಿದ್ದಾಗಲೇ ಈ ಪ್ರಕ್ರಿಯೆಯೂ ನಡೆದಿರುವುದು ಮುಂದಿನ ಬೆಳವಣಿಗೆಗಳಿಗೆ ಅನುಕೂಲವಾಯಿತು.

ದೇವಸ್ಥಾನ ಮೊತ್ತಮೊದಲು ಎದುರಿಸಿದ್ದು ಅರ್ಚಕರ ಸಮಸ್ಯೆಯನ್ನು. ಕೇರಳದಲ್ಲಿ ನಂಬೂದ್ರಿಗಳು, ಹೊರಗಿನಿಂದ ಬಂದ ಬ್ರಾಹ್ಮಣರಿಗೆ ಪೋತಿ ಎಂದು ಕರೆಯುತ್ತಿದ್ದರು. ಅದಕ್ಕೆ ಪರ್ಯಾಯವಾಗಿ ನಾರಾಯಣ ಗುರುಗಳು ಶಾಂತಿ ಎಂಬ ಪದವನ್ನು ಬಳಸಿದರು. ನಂಬೂದರಿಗಳ ಪೋತಿ ಜನಿವಾರ ಹಾಕುತ್ತಿದ್ದರೆ, ನಾರಾಯಣ ಗುರುಗಳ ಶಾಂತಿ ಜನಿವಾರ ರಹಿತನಾಗಿದ್ದ. ಆರಂಭದಲ್ಲಿ ಪುತ್ಥಳಿ ಬಾಳಪ್ಪ ಅರ್ಚಕರಾದರು. ಮುಂದೆ ಕೃಷ್ಣ ಶಾಂತಿ ಅರ್ಚಕರಾಗಿ ಮುಂದುವರಿದರು. ಕೃಷ್ಣ ಶಾಂತಿಗೆ ನಾರಾಯಣಗುರುಗಳೇ ತರಬೇತಿಯನ್ನೂ ನೀಡಿದ್ದರು. ಹೀಗೆ ಮಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ಬಿಲ್ಲವರಿಂದ ವೈದಿಕರ ವಿರುದ್ಧ ಒಂದು ಬಂಡಾಯ ಆರಂಭವಾಯಿತು. ಜನಿವಾರವಿಲ್ಲದ ಶಾಂತಿ ಅವರ ಪೂಜೆ ಪುರಸ್ಕಾರಗಳನ್ನು ನಿರ್ವಹಿಸುವಂತಾದರು. ಆದರೆ ಕುದ್ರೋಳಿ ದೇವಸ್ಥಾನದ ವಿರುದ್ಧ ವೈದಿಕರಿಂದ ಒಳಸಂಚುಗಳು ನಡೆಯುತ್ತಲೇ ಇದ್ದವು. ಬಿಲ್ಲವ ಮುಖಂಡರನ್ನೇ ಬಳಸಿಕೊಂಡು ಅವರು ಅದನ್ನು ತಮ್ಮ ಕೈಗೆ ತೆಗೆದುಕೊಳ್ಳುವ ವಿಫಲ ಪ್ರಯತ್ನ ಮಾಡಿದರು. ಆದರೆ ದುರದೃಷ್ಟವಶಾತ್ ಕೆಲವು ವಿಷಯಗಳಲ್ಲಿ ಅವರು ಯಶಸ್ವಿಯಾದರು. ಮೊತ್ತ ಮೊದಲಾಗಿ, ಅರ್ಚಕರಿಗೆ ಜನಿವಾರ ಹಾಕಿಸುವ ಅವರ ಯತ್ನ ಯಶಸ್ವಿಯಾಯಿತು.

 ಕುದ್ರೋಳಿಯ ದೇವಸ್ಥಾನದ ವಿಷಯದಲ್ಲಿ ಮೊತ್ತ ಮೊದಲು ಬಿಲ್ಲವರೊಳಗೆ ಒಡಕು ಕಾಣಿಸಿಕೊಂಡದ್ದು 1947ರಲ್ಲಿ. ಆಗ ಕರ್ಕೇರ ಎಂಬವರು ದೇವಸ್ಥಾನ ಮಂಡಳಿಯ ಅಧ್ಯಕ್ಷರಾಗಿದ್ದರು. ಮೊದಲ ಬಾರಿಗೆ ದಲಿತರನ್ನು ದೇವಸ್ಥಾನಕ್ಕೆ ಪ್ರವೇಶಿಸುವ ಪ್ರಯತ್ನವೊಂದು ಈ ಸಂದರ್ಭದಲ್ಲಿ ನಡೆಯಿತು. ಆಗ ಇಲ್ಲಿನ ಕೆಲವು ವೈದಿಕ ಶಕ್ತಿಗಳು ಬಿಲ್ಲವರೊಂದಿಗೆ ಸೇರಿಕೊಂಡು ಒಡಕು ಬಿತ್ತುವುದಕ್ಕೆ ಆರಂಭಿಸಿದರು.ಕೆಲವು ಬಿಲ್ಲವ ಹಿರಿಯರು ದಲಿತರು ದೇವಸ್ಥಾನ ಪ್ರವೇಶಿಸುವುದನ್ನು ವಿರೋಧಿಸಿದರು. ಕೊನೆಗೂ ಭಿನ್ನಾಭಿಪ್ರಾಯಗಳ ನಡುವೆಯೇ ದಲಿತರು ದೇವಸ್ಥಾನವನ್ನು ಪ್ರವೇಶಿಸಿದರು. ದಲಿತರು ದೇವಸ್ಥಾನವನ್ನು ಪ್ರವೇಶಿಸುವುದನ್ನು ತಡೆಯುವುದೆಂದರೆ ಸ್ವತಃ ನಾರಾಯಣ ಗುರುಗಳೇ ದೇವಸ್ಥಾನ ಪ್ರವೇಶಿಸುವುದನ್ನು ತಡೆದಂತೆ ಎಂಬ ಸತ್ಯವನ್ನು ಕೆಲ ಬಿಲ್ಲವರು ವೈದಿಕಶಕ್ತಿಗಳ ಮಾತಿಗೆ ಕಿವಿಯಾಗಿ ಮರೆತು ಬಿಟ್ಟರು. ಯಾಕೆಂದರೆ, ನಾರಾಯಣ ಗುರುಗಳಿಗೆ ಅಡುಗೆ ಕೆಲಸವನ್ನು ಮಾಡುತ್ತಿದ್ದವರು ದಲಿತರೇ ಆಗಿದ್ದರು. ಆ ಕಾಲದಲ್ಲಿ ಅಡುಗೆ ಕೆಲಸಕ್ಕೆ ನಾರಾಯಣಗುರುಗಳು ದಲಿತರನ್ನು ನೇಮಕ ಮಾಡಿಕೊಂಡಿದ್ದರು. ಇದಾದ ಬಳಿಕ ವೈದಿಕಶಕ್ತಿ ವಾಮನನಂತೆ ಬಿಲ್ಲವರ ಮೇಲೆ ತನ್ನ ಮೂರನೆ ಪಾದವನ್ನು ಊರಿದ್ದು 1989ರಲ್ಲಿ. ಅದಕ್ಕೆ ನೇರ ಹೊಣೆ ಇಂದಿನ ಮಾಜಿ ಸಚಿವ ಜನಾರ್ದನ ಪೂಜಾರಿ. ಆ ಮೂರನೆ ಪಾದವನ್ನು ತನ್ನ ತಲೆಯ ಮೇಲೆ ಊರಲು ಬಿಟ್ಟ ಕಾರಣವೇ ಇಂದು ಜನಾರ್ದನ ಪೂಜಾರಿ, ರಾಜಕೀಯವಾಗಿ ಸಂಪೂರ್ಣ ಬೀದಿಪಾಲಾಗಿ ಅಂಡಲೆಯುತ್ತಿದ್ದಾರೆ. ತಮ್ಮ ಸ್ವಯಂಕೃತಾಪರಾಧಕ್ಕೆ ಬೆಲೆ ತೆರುತ್ತಿದ್ದಾರೆ. ಇದನ್ನು ನಾನು ಮುಂದಿನ ವಾರ ಬರೆಯುತ್ತೇನೆ.

Tuesday, October 30, 2012

ನೀನೊಬ್ಬನಿದ್ದೀಯೆಂದು...

1
ನನ್ನ  ದೊರೆಯೇ
ಧರ್ಮ ಪಂಡಿತರು
ನಿನ್ನ ಆರಾಧನೆಗೆಂದು
ನಮಾಜಿಗೆ ನಿಂತರು
ಇದೀಗ ನಿನ್ನನ್ನು ಮರೆತು
ನಮಾಜನ್ನೆ ಆರಾಧಿಸ ತೊಡಗಿದ್ದಾರೆ
ಹಣ್ಣು ಕೊಯ್ಯಲೆಂದು
ಮರಕ್ಕೆ ಏಣಿ ಇಟ್ಟವರು
ಹಣ್ಣನ್ನು ಮರೆತು
ಏಣಿಯನ್ನೇ ತಬ್ಬಿಕೊಂಡಿದ್ದಾರೆ...!
2
ಧರ್ಮ  ಪಂಡಿತರು
ನಿನ್ನ ನೆನೆದು
ಭಯ ಪೀಡಿತರಾಗಿದ್ದಾರೆ
ನನ್ನ ದೊರೆಯೇ...
ನಾನೋ ಅಜ್ಞಾನಿ,
ನೀನೋಬ್ಬನಿದ್ದೀಯೆಂದು
ನಿರ್ಭಯನಾಗಿದ್ದೇನೆ...
3
ಸೈತಾನನಿಗೆಂದು ಎಸೆದ ಕಲ್ಲು
ಅವನ ಬೆರಳ ಉಗುರನ್ನೂ ನೋಯಿಸಲಿಲ್ಲ...
ಕಳ್ಳ ನಮ್ಮ ಮನೆಯ
ಅಡುಗೆ ಕೋಣೆಯಲ್ಲಿ
ಬಚ್ಚಿಟ್ಟು ಕೊಂಡಿದ್ದಾನೆ
ನಾವೋ ಮನೆಯಂಗಳದಲ್ಲಿ
ಅವನನ್ನು ಹುಡುಕುತ್ತಿದ್ದೇವೆ...

Monday, October 29, 2012

ನಿನ್ನ ಆರಾದಿಸುವ ದಾರಿ ನನಗೆ ತಿಳಿದಿಲ್ಲ....

1 
ಧರ್ಮ ಪಂಡಿತರು
ಕಟ್ಟಿ ಕೊಟ್ಟ ಬುತ್ತಿಯನ್ನು
ಮಾತನ್ನು ಹೊತ್ತುಕೊಂಡು
ನಿನ್ನೆಡೆಗೆ ಪ್ರಯಾಣ ಹೊರೆಟೆ
ನನ್ನ ದೊರೆಯೇ...
ಇದೀಗ ಕಟ್ಟಿಕೊಟ್ಟ ಬುತ್ತಿ..
ಹೇಳಿಕೊಟ್ಟ ಮಾತು
ಅರ್ಧ ದಾರಿಯಲ್ಲೇ ಮುಗಿದು ಹೋಗಿದೆ...
ನಿನ್ನ ತಲುಪಲು ದಿಕ್ಕು ತಿಳಿಯದೆ
ತೊಳಲಾಡುತ್ತಿದ್ದೇನೆ....
2
ನಿನ್ನ ಆರಾದಿಸಲು ನನಗೆ ತಿಳಿಯದು
ನನ್ನ ದೊರೆಯೇ ...
ನೀನು ಹರಡಿದ ಆಕಾಶವೆಂಬ
ನಿಗೂಢವನ್ನು ವಿಸ್ಮಯದಿಂದ ನೋಡಿದೆ..
ಇರುಳ ತುರುಬನ್ನು ಅಲಂಕರಿಸಿದ
ಅಸಂಖ್ಯ ನಕ್ಷತ್ರಗಳಿಗೆ ಸೋತು ಹೋದೆ..
ಉರಿಯುತ್ತಿರುವ ಬೆಂಕಿ ಗೋಲವನ್ನು
ಕಲ್ಪಿಸಲಾಗದೆ ರೆಪ್ಪೆಗಳ ಮುಚ್ಚಿದೆ
ಬೋರ್ಗರೆವ ಕಡಲ ಅಗಾದಕ್ಕೆ ನನ್ನ ಒಪ್ಪಿಸಿದೆ...
ಚಿಟ್ಟೆಯ ರೆಕ್ಕೆಯಲ್ಲಿ ಬಿಡಿಸಿದ ಚಿತ್ರ ನೋಡಿ
ಪುಳಕಿತನಾದೆ...
ಅಷ್ಟೂ ಬಗೆಯ ಪರಿಮಳಗಳ
ಹೂ-ಹಣ್ಣುಗಳಲ್ಲಿಟ್ಟ ಪರಿಗೆ ಗದ್ಗದನಾದೆ
ದಾಳಿಂಬೆ ಮಣಿಗಳ , ಕಿತ್ತಳೆ, ಹಲಸಿನ ತೊಲೆಗಳ
ಜೋಪಾನ ಜೋಡಿಸಿ, ಅದರ ಸುತ್ತ ಕವಚ ಸುತ್ತಿ
ನನಗೆ ಒಪ್ಪಿಸಿದ ಪರಿಗೆ ಕಣ್ಣೀರಾದೆ...
ಇರುವೆಗೂ ಕಣ್ಣಿದೆಯೇ ಎಂದು ಸೋಜಿಗಗೊಂಡೆ...
ಹರಿಯುತ್ತಿರುವ ಹಾವಿನಲ್ಲು ಸೌಂದರ್ಯ ಕಂಡೆ
ಆಗಷ್ಟೇ ಹುಟ್ಟಿದ ಮಗುವಿನ
ಗುಲಾಬಿ ಪಾದವ ನನ್ನ ಕೆನ್ನೆಗೆ ಒತ್ತಿದೆ...
ಇಲ್ಲ ದೊರೆಯೇ ಇಲ್ಲ
ನಿನ್ನ ಆರಾಧಿಸುವೆನೆಂಬ ಅಹಂಕಾರ ಎನಗಿಲ್ಲ...
ನಿನ್ನ ಆರಾದಿಸುವ ದಾರಿ ನನಗೆ ತಿಳಿದಿಲ್ಲ....

Sunday, October 28, 2012

ನನ್ನ ದೊರೆಯ ನೀನೇನು ಬಲ್ಲೆ?

ಭವ್ಯ ಮಸೀದಿಯ ಹೊಳೆವ
ನೆಲದಲ್ಲಿ ಅವನು ಜಪಮಣಿ
ತಿರುಗಿಸುತ್ತಿದ್ದ...

ಮೀನು ಮಾರುವ ಅಬ್ಬು ಕಾಕ
ನನ್ನ ದೊರೆಯ ಜಪಿಸುತ್ತ
ಹಳೆಯ ಸೈಕಲನ್ನು
ಸುಡು ಬಿಸಿಲಲ್ಲಿ ತಿರುಗಿಸುತ್ತಿದ್ದ

ಅದೋ ನೋಡಿ...
ಮಸೀದಿಯಾ ಹೊಳೆವ ನೆಲದಲ್ಲಿ
ಆತನ ಜಪ ಮಣಿ ಸರ ಹರಿದು
ಚೆಲ್ಲಾಪಿಲ್ಲಿಯಾಗಿವೆ...

ಅಬ್ಬೂ ಕಾಕನ
ಜೊತೆಗೆ ಆತನ ಹಳೆಯ ಸೈಕಲು
ನನ್ನ ದೊರೆಯ ಸ್ವರ್ಗದಲ್ಲಿ
ಅತ್ಯುನ್ನತ ಸ್ಥಾನ ಪಡೆದಿದೆ....

2
ವಿದ್ಯುತ್ ಕೈ ಕೊಟ್ಟಿತ್ತು
ಮುಂಜಾನೆಯ ಅಜಾನ್ ಕರೆ
ಮಸೀದಿಯ ನಾಲ್ಕು ಗೋಡೆಯನ್ನು
ದಾಟಲಿಲ್ಲ....
ಹಕ್ಕಿಗಳ ಚಿಲಿಪಿಲಿ ಕರೆ
ನನ್ನನ್ನು ತಟ್ಟಿ ಎಬ್ಬಿಸಿತು

ಎಂದೂ ಇಲ್ಲದ
ಉತ್ಸಾಹದಿಂದ ಅಂದು
ನನ್ನ ದೊರೆಗೆ ಬಾಗಿದೆ!

3
ನನ್ನ ಮುಂದಿದ್ದ ಕಲ್ಲು ವಿಗ್ರಹಗಳನ್ನು
ಎಂದೋ ಮುರಿದು ಮುಂದೆ ಬಂದಿದ್ದೇನೆ
ಆದರೆ ಇದೀಗ...
ಏಕದೇವನ ಮುಂದೆ
ಪಾಲುದಾರಿಕೆಯನ್ನು ಬೇಡುತ್ತಿರುವ
ಶಬ್ದ, ಅಕ್ಷರಗಳ ವಿಗ್ರಹಗಳನ್ನು
ಮುರಿದು ಮುಂದೆ ಹೋಗಬೇಕಾಗಿದೆ
ಅದು ನನ್ನಿಂದ ಸಾಧ್ಯವಿದೆಯೆ?

4
ನಮಾಜಿಗೆ ಮುನ್ನ ಶುದ್ಧಿಯಾಗಲೆಂದು
ಮಸೀದಿಯ ಕೊಳದೆಡೆಗೆ
ನಡೆದೆ...
ಕೊಳದ ನೀರು ನನ್ನ
ನಮಾಜಿನ ಚಾಪೆಯ
ಕೊಳೆಯನ್ನು ಕಳೆಯಲೂ
ಸಾಕಾಗಲಿಲ್ಲ ದೊರೆಯೇ?

ಇನ್ನು ನನ್ನ ಅಶುದ್ಧಿಯನ್ನು
ಯಾವ ಕೊಳದಲ್ಲಿ ತೊಳೆಯಲಿ?
ನಿನ್ನ ನರಕದ ಬೆಂಕಿ ಮಾತ್ರ
ನನ್ನ ಕೊಳೆಯನ್ನು ಸುಟ್ಟು
ನನ್ನನ್ನು ಶುದ್ಧಿಯಾಗಿಸೀತು....

5
ಪಂಡಿತರು ಹೇಳಿದರು
ನಮಾಜಿಗೆ ನಿಂತ ನಿನ್ನ ಮುಖದ
ದಿಕ್ಕು ಕಾಬದೆಡೆಗಿರಲಿ!
ಪಂಡಿತರಿಗೆ ಗೊತ್ತಿರಲಿಲ್ಲ
ನನ್ನ ದೊರೆಯೇ....
ನಿಜವಾದ ಭಕ್ತನೊಬ್ಬ
ಮುಖ ಮಾಡಿದೆಡೆಗೆ
ಕಾಬಾ ತನ್ನ ದಿಕ್ಕನ್ನು
ಬದಲಿಸೂದು...

6
ನೀನು ನೂರಾರು ಪುಸ್ತಕಗಳನ್ನು
ಓದಿದ, ಕುರಾನ್ ಕಂಠ ಪಾಠ
ಮಾಡಿದ ಮಹಾ ಪಂಡಿತ...
ನಾನು ಬಲ್ಲೆ
ಚರ್ಚೆಯಲ್ಲಿ ಬೇರೆ ಬೇರೆ
ಧರ್ಮಗಳ ನೇತಾರರನ್ನು
ಕ್ಷಣ ಮಾತ್ರದಲ್ಲಿ ಸೋಲಿಸಿದೆನೆನ್ನೂದು
ನಿನ್ನ ಹೆಗ್ಗಳಿಕೆ...

ಆದರೆ ನನ್ನ ದೊರೆಯನ್ನು ನೀನೇನು ಬಲ್ಲೆ?
ಪಂಡಿತರಲ್ಲಿ ಮಹಾ ಪಂಡಿತ ಆತ
ಹೇಳು, ನಿನ್ನ ಪಾಂಡಿತ್ಯದಿಂದ
ಆ ದೊರೆಯ ಸೋಲಿಸುವ ಧೈರ್ಯವಿದೆಯೆ?

ಒಂದಕ್ಷರ ಕಲಿಯದ
ಮಂತ್ರದ ಒಂದು ಸಾಲೂ ತಿಳಿಯದ
ಮೀನು ಮಾರಿ ಹೊಟ್ಟೆ ಹೊರೆವ
ಅಬ್ಬೂ ಕಾಕನ ಭಕ್ತಿಗೆ
ನನ್ನ ದೊರೆ
ಕ್ಷಣ ಮಾತ್ರದಲ್ಲಿ ಸೋತ....!!

Wednesday, October 24, 2012

ಕ್ಷಮಿಸಿ ಬಿಡಿ...ನಿಮ್ಮ ತಟ್ಟೆಯನ್ನು ಎಂಜಲಾಗಿಸಿ ಬಿಟ್ಟೆ

ತೀರಾ ಸಣ್ಣವನಾಗಿದ್ದಾಗಿನ ನೆನಪುಗಳು ಇವು. ಆಗೆಲ್ಲ ಹೆಚ್ಚಿನ ಮದುವೆ ಸಮಾರಂಭಗಳಲ್ಲಿ ಅಥವಾ ಮನೆಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ನಾವು ಉಣ್ಣುತ್ತಿದ್ದ ಕ್ರಮಗಳು ಈಗಲೂ ನನ್ನನ್ನು ತಟ್ಟುತ್ತಿದೆ. ಆಗ ಈಗಿನಂತೆ ಬಾಡಿಗೆ ತಟ್ಟೆಗಳು, ಬಾಡಿಗೆ ಟೇಬಲ್‌ಗಳಿರಲಿಲ್ಲ. ಒಂದು ಮನೆಯಲ್ಲಿ ಸಮಾರಂಭ ನಡೆಯಬೇಕಾದರೆ ಹತ್ತು ಮನೆಯ ತಟ್ಟೆಗಳನ್ನು, ಹತ್ತು ಮನೆಯ ಟೇಬಲ್ ಕುರ್ಚಿಗಳನ್ನು ಸಂಗ್ರಹಿಸಿ ತರಬೇಕಾಗುತ್ತಿತ್ತು. ಅದು ಮದುವೆ ಮನೆಯೇ ಇರಲಿ. ಒಂದು ತಟ್ಟೆಯ ಊಟವನ್ನು ಇಬ್ಬರು ಹಂಚಿಕೊಂಡು ಉಣ್ಣುತ್ತಿ ದ್ದೆವು. ಅಲ್ಲಿ ಎಂಜಲಿನ ಸಮಸ್ಯೆಯೇ ಕಾಡುತ್ತಿರಲಿಲ್ಲ. ಟೇಬಲಿನ ಅಕ್ಕಪಕ್ಕ ಕುರ್ಚಿ ಹಾಕಲಾಗುತ್ತಿತ್ತು. ಯಾರೋ ಪರಿಚಿತ ಅಥವಾ ಅಪರಿಚಿತ. ಸಂಬಂಧಿಕನಾಗಬೇಕಾಗಿಲ್ಲ. ಗುರುತು ಪರಿಚಯವೂ ಇರಬೇಕಾಗಿರಲಿಲ್ಲ. ಇಬ್ಬರಿಗೆ ಒಂದು ತಟ್ಟೆ. ಆ ತಟ್ಟೆಯಲ್ಲಿದ್ದ ಅನ್ನವನ್ನು ಸಾರು ಕಲೆಸಿ ನಾವು ಹಂಚಿ ಉಣ್ಣುತ್ತಿದ್ದೆವು. ಉಣ್ಣುತ್ತಾ ಉಣ್ಣುತ್ತಾ ಪರಸ್ಪರ ಪರಿಚಯ ಮಾಡಿಕೊಳ್ಳುತ್ತಿದ್ದೆವು. ಅನ್ನ ಮುಗಿದಾಗ ನಾವು ಜೊತೆಯಾಗಿಯೇ ಹಾಕಿಸಿ ಕೊಂಡು ಮತ್ತೆ ಅದನ್ನು ಹಂಚಿಕೊಂಡು ತಿಂದು ಏಳುತ್ತಿದ್ದೆವು. ಕೆಲವೊಮ್ಮೆ ನಮ್ಮ ಎದುರಿನ ವ್ಯಕ್ತಿ ಹೊಟ್ಟೆ ಬಾಕನಾಗಿದ್ದರೆ ಹಾಗೂ ನಾವು ಸಂಕೋಚದ ವ್ಯಕ್ತಿಯಾಗಿದ್ದರೆ ಅದು ಇನ್ನಷ್ಟು ತಮಾಷೆಯ ಕತೆಯಾಗುತ್ತಿತ್ತು. ಒಟ್ಟಿನಲ್ಲಿ ಬಾಲ್ಯದ ಎಂಜಲು ಅನ್ನ ನನ್ನನ್ನು ಮನುಷ್ಯನಾಗಿ ಬೆಳೆಯುವಲ್ಲಿ ಒಂದಿಷ್ಟಾದರೂ ತನ್ನ ಕಾಣಿಕೆಯನ್ನು ನೀಡಿದೆ ಎಂದು ಭಾವಿಸಿದ್ದೇನೆ. ನಾನು ಬೆಳೆದಂತೆ ಈ ಕ್ರಮ ಅಳಿದೇ ಹೋಯಿತು. ಈಗೆಲ್ಲ ಬಾಡಿಗೆ ಬಟ್ಟಲು, ಬಫೆ ಪದ್ಧತಿ ಕಡ್ಡಾಯವಾಗಿದೆ. ನನಗೆ ನನ್ನ ಈ ಬಾಲ್ಯದ ಎಂಜಲು ಊಟ ನೆನಪಾಗಿದ್ದು ಇತ್ತೀಚೆಗೆ ಪೇಜಾವರಶ್ರೀಗಳ ಒಂದು ಹೇಳಿಕೆಯಿಂದ. ಅವರು ಮಡೆಸ್ನಾನವನ್ನು ಸಮರ್ಥಿಸುವುದಕ್ಕಾಗಿ ಒಂದೇ ಬಟ್ಟಲಲ್ಲಿ ಉಣ್ಣುವುದನ್ನು ಗುರಾಣಿಯಾಗಿ ಬಳಸಿಕೊಂಡರು. ನನಗೆ ಈ ಹೋಲಿಕೆಯಿಂದ ನೋವಾದರೂ, ಪೇಜಾವರಶ್ರೀಗಳ ಹತಾಶೆಯ ಕುರಿತಂತೆ ಸಣ್ಣದೊಂದು ಅನುಕಂಪ ಹುಟ್ಟಿತು. ಮಡೆಸ್ನಾನ ಮತ್ತು ಈ ಹಂಚಿಕೊಂಡು ಉಣ್ಣುವ ಕ್ರಮದಲ್ಲಿ ಇರುವ ಅಜಗಜಾಂತರವನ್ನು ಅವರು ಅರಿಯಲು ವಿಫಲರಾದರೋ, ಅಥವಾ ಅರಿತೂ ಅಂತಹದೊಂದು ಹೇಳಿಕೊಟ್ಟರೋ ಎಂಬ ಬಗ್ಗೆ ನನಗೆ ಗೊಂದಲವಿದೆ. ಮಡೆಸ್ನಾನ ಪರೋಕ್ಷವಾಗಿ ಒಂದು ಸಮುದಾಯದ ಅಥವಾ ಒಂದು ಜಾತಿಯ ಜನರ ಎಂಜಲನ್ನು ಶ್ರೇಷ್ಠವೆಂದು ಪ್ರತಿಪಾದಿಸುತ್ತದೆ. ಆದರೆ ಒಂದೇ ತಟ್ಟೆಯಲ್ಲಿ ಇಬ್ಬರು ಜೊತೆಯಾಗಿ ಉಣ್ಣುವಾಗ ನಮ್ಮಲ್ಲಿ ಪರಸ್ಪರರ ಎಂಜಲಿನ ಕುರಿತಂತೆ ಮೇಲು-ಕೀಳುಗಳಿರಲಿಲ್ಲ. ಹಸಿವೆ ಅಲ್ಲಿ ಪ್ರಧಾನ ಪಾತ್ರವನ್ನು ವಹಿಸಿತ್ತು. ಹಂಚಿ ಉಣ್ಣು ವುದು ಎರಡನೆಯದು. ಇದನ್ನು ಸಹೋದರತೆ, ಸಮಾನತೆ ಎಂಬಿತ್ಯಾದಿ ಸಾಲುಗಳಿಗೆ ಜೋಡಿಸಲು ಇಷ್ಟಪಡುವುದಿಲ್ಲ. ಈ ಪದಗಳ ಅರಿವೇ ಇಲ್ಲದೆ ನಾವು ಅಂದು ಜೊತೆ ಜೊತೆಯಾಗಿ ಉಣ್ಣುತ್ತಿದ್ದೆವು. ಅದನ್ನು ನೆನೆದಾಗ ಇಂದು ರೋಮಾಂಚನ ವಾಗುತ್ತದೆ. ಕೆಲವೊಮ್ಮೆ ಯಾರೋ ಉಣ್ಣುವಾಗ ಅವರ ತಟ್ಟೆಗೆ ತನ್ನ ಎಂಜಲು ಕೈಯನ್ನು ಹಾಕಿ ಬಿಡಬೇಕು ಎನ್ನುವ ಆಸೆ ಉಕ್ಕಿ ಬರುತ್ತದೆ.

 ತಾಯಿಯ ಎಂಜಲಿನಿಂದಲೇ ಜೀವಪಡೆದ ನಾವೆಲ್ಲ, ಒಂದಲ್ಲ ಒಂದು ರೀತಿಯಲ್ಲಿ ಇನ್ನೊಬ್ಬರ ಎಂಜಲಿನ ಜೊತೆಗೇ ಬದುಕುತ್ತಿರುವವರು. ಅದು ಸಂಗಾತಿಯ ಎಂಜಲಾಗಿರಬಹುದು. ಆಗಷ್ಟೇ ಹುಟ್ಟಿದ ಹಸುಗೂಸಿನ ಜೇನಿನಂತಹ ಎಂಜಲಾ ಗಿರಬಹುದು. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಎಂಜಲಿಗೆ ಅಂಜಿದ ಸಂದರ್ಭದಲ್ಲಿ ಮನುಷ್ಯನ ನಡುವೆ ಕಂದರಗಳು, ಜಾತಿಗಳು, ಧರ್ಮಗಳು ನಿರ್ಮಾಣವಾಗುತ್ತವೆ. ಬಾಲ್ಯದಲ್ಲಿ (ಅಂದು) ಯಾವ ಅಂಜಿಕೆಯೂ ಇಲ್ಲದೆ ಐಸ್‌ಕ್ಯಾಂಡಿಗಳ ಜೊತೆಗೆ, ಬೊಂಬಾಯಿ ಮಿಠಾಯಿಗಳೊಂದಿಗೆ, ಗೋಲಿ ಸೋಡಾಗಳ ಜೊತೆಗೆ ನಾವು ನಮ್ಮ ಗೆಳೆಯ ರೊಂದಿಗೆ ಎಂಜಲುಗಳನ್ನು ಯಾವ ಅಡ್ಡಿ, ಆತಂಕಗಳಿಲ್ಲದೆ ಹಂಚಿಕೊಳ್ಳುತ್ತಿದ್ದೆವು. ಇಂದು ನೀಟಾಗಿ ಯೂನಿಫಾರಂ ಹಾಕಿಕೊಂಡಿರುವ ಮಕ್ಕಳು ಶಾಲೆಯಲ್ಲಿ ಒಂದೇ ಐಸ್‌ಕ್ಯಾಂಡಿಯನ್ನು ಹಂಚಿಕೊಂಡು ತಿನ್ನುತ್ತಾರೆ ಎನ್ನುವ ಭರವಸೆ ನನಗಿಲ್ಲ. ಯಾಕೆಂದರೆ ಅವರ ಬಾಲ್ಯಕ್ಕೆ ಹಿರಿಯರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಿರಿಯರ ಹಸ್ತಕ್ಷೇಪ ವೆಂದರೂ ಒಂದು ರೀತಿಯ ಎಂಜಲೇ ಆಗಿದೆ. ಅವರು ತಮ್ಮ ಬೆನ್ನಲ್ಲಿ ಹೊತ್ತುಕೊಂಡಿರುವ ಜಾತಿ, ಧರ್ಮಗಳನ್ನು ಮಕ್ಕಳ ಮುಗ್ಧ ಬಾಲ್ಯಕ್ಕೆ ಎಂಜಲಾಗಿಸಿದ್ದಾರೆ. ಆದರೂ ಈ ಎಂಜಲು ಎರಡು ಸಂದರ್ಭಗಳಲ್ಲಿ ನನ್ನನ್ನು ಕಾಡಿದ್ದನ್ನು, ನನ್ನಲ್ಲಿ ಪಾಪಪ್ರಜ್ಞೆಯನ್ನು ಬಿತ್ತಿದ್ದನ್ನು, ಇಂದಿಗೂ ತಪ್ಪಿಸ್ಥನಂತೆ ನನ್ನನ್ನು ಕೊರಗುವಂತೆ ಮಾಡಿದ್ದನ್ನು ಇಲ್ಲಿ ಹಂಚಿಕೊಳ್ಳಬೇಕೆನಿಸುತ್ತಿದೆ.

ಮೊದಲನೆಯದು ನಡೆದದ್ದು ಮುಂಬಯಿ ಯಲ್ಲಿ. ನಾನು ಕನ್ನಡ ಎಂ.ಎ. ಕಲಿಯುವುದಕ್ಕಾಗಿ ಮುಂಬೈ ಸೇರಿದ ಸಂದರ್ಭದಲ್ಲಿ ಘಟನೆ ಇದು. ಮುಂಬೈಯಲ್ಲಿ ಒಂದು ಕನ್ನಡ ದೈನಿಕ ನನಗೆ ಆಶ್ರಯ ನೀಡಿತ್ತು. ಬಿಎ ಮುಗಿಸಿದ ನನಗೆ ಕನ್ನಡ ಸಾಹಿತ್ಯದಲ್ಲಿ ಎಂಎ ಮಾಡಬೇಕೆಂಬ ಕನಸನ್ನು ಸಾಧಿಸಲು ಉಳಿದ ಒಂದೇ ದಾರಿಯಾಗಿತ್ತು ಮುಂಬೈ. ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಅಂದಿನ ಮುಖ್ಯಸ್ಥರಾಗಿ ನನ್ನದೇ ಊರಿನ ತಾಳ್ತಜೆ ವಸಂತ ಕುಮಾರ್ ಇದ್ದರು. ನಮ್ಮ ಊರಿನ ಶ್ರೀನಿಧಿ ಯುವಕ ಮಂಡಲದಲ್ಲಿ ಸಕ್ರಿಯರಾಗಿದ್ದ ಚಂದ್ರಶೇಖರ ಪಾಲೆತ್ತಾಡಿ ಯವರು ಮುಂಬೈಯ ಕನ್ನಡ ದೈನಿಕವೊಂದರ ಸಂಪಾದಕರಾಗಿದ್ದರು. ಮುಂಬೈಗೆ ತೆರಳುವಾಗ ನನಗೆ ನೆನಪಾದ ಒಂದೇ ಒಂದು ಹೆಸರು ಪಾಲೆತ್ತಾಡಿಯವರದು. ‘ನಾನು ಬರಲಾ?’ ಎಂದಾಗ ಎರಡು ಮಾತನಾಡದೆ ‘ಬಾ’ ಎಂದರು. ಮುಂದೆ ಆ ಪತ್ರಿಕೆಯಲ್ಲಿ ಆಶ್ರಯ ಪಡೆದು ಸುಮಾರು ಐದು ವರ್ಷ ಬದುಕಿನ ಮಹತ್ವದ ಘಟ್ಟವನ್ನು ಕಳೆದಿದ್ದೇನೆ. ಕಲಿತಿದ್ದೇನೆ. ಎರಡು ವರ್ಷ ಎಂಎ ಮುಗಿದು, ಬಳಿಕ ಸುಮಾರು ಮೂರು ವರ್ಷ ಅದೇ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಕೆಲಸ ನಿರ್ವಹಿಸಿದೆ. ಆ ಸಂದರ್ಭ ದಲ್ಲೇ ನನಗೆ ಟಿಬಿ ಅಟ್ಯಾಕ್ ಆಗಿದ್ದು. ಬಹುಶಃ ಅಂಬಿಗನಿಲ್ಲದ ಒಂದು ಪುಟ್ಟ ದೋಣಿಯೇರಿ, ನನಗೆ ದೋಚಿದ ದಿಕ್ಕಿಗೆ, ನನಗೆ ತೋಚಿದಂತೆ ಉಟ್ಟು ಹಾಕುತ್ತಾ ಮುಂದೆ ಸಾಗುತ್ತಿದ್ದವನ ಮುಂದೆ ಬಿರುಗಾಳಿ ಎರಗಿದಂತಾಗಿತ್ತು. ವಿಚಿತ್ರ ವೆಂದರೆ, ಆ ಟಿಬಿಯನ್ನಿಟ್ಟುಕೊಂಡು ಕವಿತೆಗಳನ್ನು ಬರೆಯುತ್ತಿದ್ದೆ. ಮುಂಬಯಿ ಕರ್ನಾಟಕ ಸಂಘದಲ್ಲಿ ಸಕ್ರಿಯನಾಗಿದ್ದೆ. ನಾಟಕ, ಶಿಬಿರ ಸೇರಿದಂತೆ ಯಾವುದೇ ಕನ್ನಡ ಕಾರ್ಯಕ್ರಮಗಳಿರಲಿ ಸಕ್ರಿಯನಾಗಿ ಓಡಾಡುತ್ತಿದ್ದೆ. ಇದೇ ಸಂದರ್ಭ ದಲ್ಲಿ ನನ್ನ ಮೊತ್ತ ಮೊದಲ ಕವನ ಸಂಕಲನ ‘ಪ್ರವಾದಿಯ ಕನಸು’ನ್ನು ಯಶವಂತ ಚಿತ್ತಾಲರು ಬಿಡುಗಡೆ ಮಾಡಿದರು. ಕನ್ನಡ ಚಟುವಟಿಕೆಗಳ ಜೊತೆಜೊತೆಗೇ ಈ ರೋಗವನ್ನು ಎದುರಿಸುತ್ತಾ ಬಂದೆ. ಸುಮಾರು ಎರಡು ವರ್ಷಗಳ ಹೋರಾಟದಲ್ಲಿ ನಾನು ಗೆದ್ದೆ. ಸಿಡಿಲು ಬಿದ್ದ ಮರದಂತಾಗಿದ್ದ ನಾನು ಮತ್ತೆ ಚಿಗುರಿ ಕೊಳ್ಳತೊಡಗಿದೆ.(ಈಗಂತೂ ದೇಹಗಾತ್ರದಲ್ಲಿ ನಳನಳಿಸುವ ಅಶ್ವತ್ಥ ಮರವನ್ನು ಮೀರಿಸಿದ್ದೇನೆ ಬಿಡಿ). ಇಂತಹ ಸಂದರ್ಭದಲ್ಲೇ ನನ್ನ ಕೈಯಲ್ಲೊಂದು ತಪ್ಪು ನಡೆದು ಹೋಯಿತು.
 
 ನಾವೊಂದಿಷ್ಟು ಜನ ಒಂದೇ ಕೊಠಡಿಯಲ್ಲಿ ಒಟ್ಟಿಗೆ ಊಟವನ್ನು ಮಾಡುತ್ತಿದ್ದೆವು. ಅಡುಗೆ ಯನ್ನು ತಯಾರಿಸುವುದಕ್ಕೂ ಒಬ್ಬರು ಸಿಬ್ಬಂದಿಯಿದ್ದರು. ಒಮ್ಮೆಯೇನಾಯಿತೆಂದರೆ, ನಾವೆಲ್ಲರೂ ಉಣ್ಣುತ್ತಿದ್ದಾಗ ನನ್ನ ಗೆಳೆಯನೊಬ್ಬ ಬಂದ. ಅಲ್ಲಿ ಬೇರೆ ತಟ್ಟೆಯೇ ಇರಲಿಲ್ಲ. ಅಷ್ಟರಲ್ಲಿ ನಾನು ಉಂಡ ನನ್ನ ತಟ್ಟೆಯನ್ನು ತೊಳೆದು ಆತನಿಗೆ ನೀಡಿದೆ. ಆತ ಬೇಡ ಬೇಡ ಎಂದ. ಬಳಿಕ ಇನ್ನೊಬ್ಬನ ತಟ್ಟೆಯನ್ನು ತೊಳೆದು ಅನ್ನ ಹಾಕಿಸಿಕೊಂಡ. ಅದೇನೂ ದೊಡ್ಡ ವಿಷಯ ವಾಗಿರಲಿಲ್ಲ. ಅದೊಂದು ಆಕಸ್ಮಿಕವೂ ಆಗಿರಬಹುದು. ಆದರೆ ಅಂದು ಮಲಗಿದ ಬಳಿಕ ಮಧ್ಯರಾತ್ರಿ ಎಚ್ಚರದಲ್ಲಿ ನನ್ನೊಳಗೆ ಆ ಘಟನೆ ಧಿಗ್ಗನೆ ಮರುಕಳಿಸಿತು. ‘ಆತನೇಕೆ ನನ್ನ ತಟ್ಟೆಯನ್ನು ನಿರಾಕರಿಸಿದ?’ ಎಂಬ ದುಷ್ಟ ತರ್ಕವೊಂದು ನನ್ನಲ್ಲಿ ತಲೆಯೆತ್ತಿತ್ತು. ನನ್ನ ಅನಾರೋಗ್ಯವೇ ತಟ್ಟೆಯನ್ನು ಸ್ವೀಕರಿಸದಂತೆ ಅವನನ್ನು ತಡೆಯಿತು ಎನ್ನುವುದು ನನಗೆ ಆ ಕತ್ತಲಲ್ಲಿ ಹೊಳೆಯಿತು. ಟಿಬಿಯೆನ್ನುವುದು ಸಾಂಕ್ರಾಮಿಕ ರೋಗ. ಅದು ಇನ್ನೊಬ್ಬರಿಗೆ ಹರಡದಂತೆ ಜಾಗರೂಕತೆವಹಿಸುವುದು ಆ ರೋಗ ಬಾಧಿತನ ದೊಡ್ಡ ಕರ್ತವ್ಯ. ಅದನ್ನು ನಾನು ಮರೆತಿದ್ದೆ. ತಟ್ಟೆಯನ್ನು ತೊಳೆದರೂ ಅದು ಸಂಪೂರ್ಣ ಸುರಕ್ಷಿತವೆನ್ನುವಂತಿರಲಿಲ್ಲ. ನಾನು ಭಾರೀ ದೊಡ್ಡ ತಪ್ಪು ಮಾಡಿದ್ದೆ. ಮುಂದೆ ಆ ಕುರಿತಂತೆ ನಾನು ಹೆಚ್ಚು ಜಾಗರೂಕನಾದೆ. ಆದರೂ ಯಾವುದೋ ಮಧ್ಯರಾತ್ರಿಯ ಕನಸಿನಲ್ಲಿ ಆ ತಪ್ಪು ಈಗಲೂ ನನ್ನೊಳಗೆ ಸಣ್ಣಗೆ ಕದಲುತ್ತದೆ. ನೋವು ಕೊಡುತ್ತದೆ. ಇನ್ನೊಂದು ಘಟನೆ ನಾನು ಮುಂಬಯಿ ಯಿಂದ ಆರೋಗ್ಯವಂತನಾಗಿ ಊರಿಗೆ ಮರಳಿ, ಮಂಗಳೂರಿನ ಇನ್ನೊಂದು ರಾಜ್ಯಮಟ್ಟದ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರನಾಗಿ, ಹಿರಿಯ ಉಪಸಂಪಾದಕನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ನಡೆದದ್ದು. ನನ್ನ ಗೆಳೆಯರಲ್ಲಿ, ಆತ್ಮೀಯರಲ್ಲಿ ಹಲವು ಹಿರಿಯರೂ ಇದ್ದಾರೆ. ಅವರಲ್ಲಿ ಒಬ್ಬರು ತುಂಬಾ ಮುಖ್ಯರಾದವರು.. ಅವರು ಅತಿ ಸಾಂಪ್ರದಾಯಿಕ ಕುಟುಂಬವನ್ನು ಹೊಂದಿದವರು ಮತ್ತು ಸಂಪ್ರದಾಯವನ್ನು ಬಲವಾಗಿ ನಂಬಿದವರು ಕೂಡ. ನನ್ನನ್ನು ನಾನು ಮುಸ್ಲಿಂ ಎಂದು ನಂಬಿದ ಹಾಗೆ, ಅವರು ತಮ್ಮ ಜಾತಿಯನ್ನು ‘ಬ್ರಾಹ್ಮಣ’ ಎಂದು ನಂಬಿದವರು. ಆದರೆ ಅವರ ಮನೆಯ ಪ್ರತಿ ದೀಪಾವಳಿ, ಯುಗಾದಿಗಳಿಗೆ ನನಗೆ ಆಹ್ವಾನವಿತ್ತು. ಅವರ ಮನೆಯವರೂ ಸೇರಿದಂತೆ ಎಲ್ಲರೂ ನನ್ನನ್ನು ತುಂಬಾ ಇಷ್ಟಪಡುವರು. ನಾನು ಕೂಡ ಅವರನ್ನು ತುಂಬಾ ಇಷ್ಟ ಪಡುತ್ತಿದ್ದೆ. ಈಗಲೂ ಇಷ್ಟ ಪಡುತ್ತಿದ್ದೇನೆ.

 ಬಹುಶಃ ಅದು ದೀಪಾವಳಿಯ ಹಬ್ಬವಿರ ಬೇಕು. ನನ್ನನ್ನು ಹಾಗೂ ನನ್ನ ಓರ್ವ ವಿಚಾರವಂತ ಹಿರಿಯ ಗೆಳೆಯರನ್ನೂ ಅವರು ರಾತ್ರಿಯ ಊಟಕ್ಕೆ ಕರೆದಿದ್ದರು. ನನ್ನ ವಿಚಾರವಾದಿ ಗೆಳೆಯರು ಹುಟ್ಟಿದ್ದು ಬ್ರಾಹ್ಮಣ ಕುಟುಂಬದಲ್ಲಾದರೂ ಬ್ರಾಹ್ಮಣ್ಯವನ್ನು ಶತಾಯಗತಾಯ ವಿರೋಧಿಸುವವರು. ನಾವು ಜೊತೆಯಾಗಿಯೇ ಆ ಹಿರಿಯರ ಮನೆಗೆ ಊಟಕ್ಕೆ ತೆರಳಿದೆವು. ಎಂದಿನಂತೆ, ಸಾಹಿತ್ಯ, ವರ್ತಮಾನ ಮಾತುಕತೆಗಳೆಲ್ಲ ಮುಗಿಯುವಷ್ಟರಲ್ಲಿ ನನ್ನ ಹಿರಿಯ ಗೆಳೆಯರ ಪತ್ನಿ ಊಟಕ್ಕೆ ಸಿದ್ಧತೆ ನಡೆಸಿದರು. ನಾವೆಲ್ಲ ಕೈ ಕಾಲು ತೊಳೆದು ಡೈನಿಂಗ್ ಟೇಬಲ್‌ನಲ್ಲಿ ಕುಳಿತೆವು. ಹಿರಿಯ ಗೆಳೆಯರು ಅವರ ಪತ್ನಿ, ಮಕ್ಕಳೂ ಪರಿವಾರದ ಸಹಿತ ಕುಳಿತಿದ್ದರು. ನನ್ನ ಪಕ್ಕದಲ್ಲೇ ನನ್ನ ವಿಚಾರವಾದಿ ಗೆಳೆಯರೂ ಆಸೀನರಾಗಿದ್ದರು. ಡೈನಿಂಗ್ ಟೇಬಲಲ್ಲಿ ಅನ್ನ, ಸಾಂಬಾರು, ಹೋಳಿಗೆ ಇತ್ಯಾದಿ ಇತ್ಯಾದಿಗಳಿದ್ದವು. ನಾವೇ ಸೌಟುಗಳಲ್ಲಿ ಬಡಿಸಿ ತಟ್ಟೆಗೆ ಹಾಕಿಕೊಳ್ಳಬೇಕು. ಅನ್ನವನ್ನು ಬೇಗ ಉಂಡು ಮುಗಿಸಿದ ನಾನು, ಏಕಾಏಕಿ ನನ್ನ ಎಂಜಲು ಕೈಯಲ್ಲೇ ಹೋಳಿಗೆಯಿರುವ ತಟ್ಟೆಗೆ ಕೈ ಹಾಕಿ ಒಂದು ಹೋಳಿಗೆಯನ್ನು ನನ್ನ ತಟ್ಟೆಗೆ ಹಾಕಿಕೊಂಡೆ. ತುಂಬಾ ಚೆನ್ನಾದ ಹೋಳಿಗೆ. ‘‘ತುಂಬಾ ಚೆನ್ನಾಗಿದೆ ಸಾರ್, ಹೋಳಿಗೆ ಹಾಕಿಕೊಳ್ಳಿ...’’ ಎಂದು ನಾನೇ ಆ ಹಿರಿಯ ಗೆಳೆಯರಿಗೂ, ಅವರ ಮನೆಯವರಿಗೂ ಒತ್ತಾಯಿಸಿದೆ. ನನ್ನ ವಿಚಾರವಾದಿ ಗೆಳೆಯರು ತಕ್ಷಣ ಎರಡು ಹೋಳಿಗೆ ಹಾಕಿಕೊಂಡು ಪ್ರತಿಕ್ರಿಯಿಸಿದರು. ಇಡೀ ಊಟ ಮುಗಿದರೂ ಮನೆಯವರಾರೂ ತಮ್ಮ ತಟ್ಟೆಗೆ ಹೋಳಿಗೆ ಹಾಕಿಕೊಳ್ಳಲೇ ಇಲ್ಲ. ನನ್ನ ಗಮನಕ್ಕೂ ಅದು ಬಂದಿರಲಿಲ್ಲ. ಗಮನಿಸಬೇಕಾದ ದೊಡ್ಡ ವಿಷಯವೂ ಅದಾಗಿರಲಿಲ್ಲ.

 ಆದರೆ ಅಂದು ಮಧ್ಯರಾತ್ರಿ ಆ ಘಟನೆಯೂ ಧಿಗ್ಗನೆ ನನ್ನ ನಿದ್ದೆಯ ಮೇಲೆ ಎರಗಿ ಬಿಟ್ಟಿತು. ‘ಅಷ್ಟೂ ಹೋಳಿಗೆ ಅಲ್ಲಿದ್ದರೂ ಅವರೇಕೆ ಒಂದನ್ನೂ ತೆಗೆದುಕೊಳ್ಳಲಿಲ್ಲ? ನಾನು ಅಷ್ಟೂ ಒತ್ತಾಯಿಸಿದರೂ ಅವರೇಕೆ ಪ್ರತಿಕ್ರಿಯಿಸಲಿಲ್ಲ?’ ಯೋಚಿಸುತ್ತಾ ಹೋದಂತೆ ನಾನು ಮಾಡಿದ ತಪ್ಪು ನನಗೆ ಹೊಳೆದು ಬಿಟ್ಟಿತು. ಅದು ನಿಜವಾಗಿರಬಹುದು. ಅಥವಾ ನನ್ನ ದುಷ್ಟ ಕಲ್ಪನೆಯೇ ಆಗಿರಬಹುದು. ಆದರೆ ಅಂದು ರಾತ್ರಿ ಅವರು ಆ ಸಿಹಿ ಊಟವನ್ನು ತ್ಯಜಿಸಿದ್ದು ನನ್ನ ತಪ್ಪಿನಿಂದಲೇ ಇರಬಹುದು ಎಂದು ದುಷ್ಟ ಮನಸ್ಸು ಈವರೆಗೂ ನಂಬಿಕೊಂಡೇ ಇದೆ. ಕೆಲವೊಮ್ಮೆ ನಮ್ಮೆಲ್ಲ ಸ್ನೇಹ, ಆತ್ಮೀಯತೆಯ ಬಲವೂ ಈ ಸಂಪ್ರದಾಯ, ನಂಬಿಕೆಗಳನ್ನು ಮುರಿದು ಮುಂದೆ ಹೋಗಲು ಸಾಕಾಗುವುದಿಲ್ಲ. ದೀಪಾವಳಿಯ ದಿನ ಅವರ ಬಾಯಿಯಿಂದ ಹೋಳಿಗೆಯ ಸಿಹಿಯನ್ನು ಕಸಿದುಕೊಂಡ ನನ್ನ ಅಪರಾಧ, ಬೇಜವಾಬ್ದಾರಿ ಈಗಲೂ ನನ್ನನ್ನು ಕಾಡುತ್ತಿದೆ. ಉಳಿದ ಅಷ್ಟೂ ಹೋಳಿಗೆಗಳನ್ನು ಅವರೇನು ಮಾಡಿರಬಹುದು? ಹೊರಗೆ ಎಸೆದಿರಬಹುದೆ? ಅವರ ಮನೆಯ ನಾಯಿಗೆ ಹಾಕಿರಬಹುದೆ? ಕೆಲಸದಾಳಿಗೆ ಕೊಟ್ಟಿರಬಹುದೆ? ಇಂತಹ ಕೆಟ್ಟ ತರ್ಕಗಳ ಮೂಲಕ ‘ಮಾಡಿದ ತಪಿ’್ಪಗಾಗಿ ನನ್ನನ್ನು ನಾನೇ ಹಲವು ಬಾರಿ ನೋಯಿಸಿಕೊಂಡಿದ್ದೇನೆ. ಈಗಲೂ ನನಗೆ ಪ್ರೀತಿ ಪಾತ್ರರೇ ಆಗಿರುವ ಆ ಹಿರಿಯ ಗೆಳೆಯರ ಸಾತ್ವಿಕ ಮುಖವನ್ನು ನೋಡುತ್ತಾ ನಾನು ಒಮ್ಮಾಮ್ಮೆ ತಲೆತಗ್ಗಿಸಿಕೊಳ್ಳುತ್ತೇನೆ. ಈಗಲೂ ಅವರು ಆಗಾಗ ಊಟಕ್ಕೆ ಕರೆಯುತ್ತಾರೆ. ಆದರೆ ಆ ಅಗ್ನಿಪರೀಕ್ಷೆಯನ್ನು ಗೆಲ್ಲುವ ಧೈರ್ಯಸಾಲದೆ ನಾನು ನಯವಾಗಿ ನಿರಾಕರಿಸುತ್ತೇನೆ.

Saturday, October 20, 2012

ಒಂದು ಮಿನಿ ಕಥೆ: ಮದಿರಂಗಿ ಕನಸು!

ತಾಹಿರಾಳಿಗೆ ಬುಧವಾರ ಮದುವೆ. ಸೋಮವಾರ ಆಕೆಯ ಮದಿರಂಗಿ ರಾತ್ರಿ. ಸೋಮವಾರ ಬೆಳಗ್ಗೆ ಒಂದು ಸಮಸ್ಯೆ ಎದುರಾಯಿತು? ಮದಿರಂಗಿ ಹಚ್ಚುವವರಾರು? ತಾಹಿರಾ ಮತ್ತು ಆಕೆಯ ಗೆಳತಿಯರು ಅದಾಗಲೇ ಮದಿರಂಗಿ ಯಾರು ಹಚ್ಚುವುದು ಎನ್ನುವುದನ್ನು ಮೊದಲೇ ನಿರ್ಧರಿಸಿ ಬಿಟ್ಟಿದ್ದರು. ಆಕೆಯ ಕಾಲೇಜು ಸಹಪಾಠಿ ಸೀಮಾ ಮದಿರಂಗಿ ಹಚ್ಚುವುದು ಎಂದು ಎರಡು ವರ್ಷಗಳ ಹಿಂದೆ, ಅಂತಿಮ ಬಿ. ಎ. ಓದುತ್ತಿದ್ದಾಗಲೇ ಅವರೆಲ್ಲಾ ನಿರ್ಧರಿಸಿ ಬಿಟ್ಟಿದ್ದರು. ಸೀಮಾ ಕಾಲೇಜಲ್ಲೆಲ್ಲ ಮದಿರಂಗಿ ಹಚ್ಚುವುದರಲ್ಲಿ ನಿಸ್ಸೀಮಳಾಗಿದ್ದಳು. ಹುಡುಗರೂ ತಮ್ಮ ಅಂಗೈಯನ್ನು ಬಿಡಿಸಿ, ಆಕೆಯ ಮುಂದೆ ಕುಕ್ಕರಗಾಲಲ್ಲಿ ಕೂರುವಷ್ಟು ಚೆನ್ನಾಗಿ ಮದಿರಂಗಿ ಬಳ್ಳಿಗಳನ್ನು ಬಿಡಿಸುವ ಸೀಮಾ, ‘ಲೇ ನಿನ್ನ ಮದುವೆಗೆ ನಾನು ಎಲ್ಲಿದ್ದರೂ ಬಂದು ಮದಿರಂಗಿ ಹಚ್ಚುವೆ. ನಿನಗೆ ಮಾತ್ರವಲ್ಲ, ನಿನ್ನನ್ನು ಕಟ್ಟಿಕೊಳ್ಳುವ ಆ ಅವನಿದ್ದಾನಲ್ಲ...ಅವನ ಕೈಗೂ ಹಚ್ಚುವೆ...ಪ್ರಾಮಿಸ್’’ ಎಂದಿದ್ದಳು ಸೀಮಾ. ಕಾಲೇಜು ಮುಗಿದ ಬಳಿಕ ಆಕೆ ಕುಟುಂಬದೊಂದಿಗೆ ದಿಲ್ಲಿ ಸೇರಿದ್ದಳು. ಇದೀಗ ಇಂದು ಮುಂಜಾನೆ ಅವಳ ಅನಿರೀಕ್ಷಿತ ಫೋನ್ ಅವರ ಕನಸುಗಳ ಮೇಲೆ ಎರಗಿತ್ತು. ಅವಳ ತಂದೆಗೆ ಹೃದಯಾಘಾತವಾಗಿ, ಐಸಿಯು ಸೇರಿದ್ದ ಹಿನ್ನೆಲೆಯಲ್ಲಿ ಬರಲಾಗುವುದಿಲ್ಲ ಎಂದು ಬಿಟ್ಟಿದ್ದಳು. ತಾಹಿರಾ ಮತ್ತು ಆಕೆಯ ಗೆಳತಿಯರಲ್ಲಿ ಇಲ್ಲದ ಆತಂಕ. ಒಂದು ಗೆಳತಿಯ ತಂದೆಗೆ ಹೃದಯಾಘಾತ. ಇನ್ನೊಂದು ತಾಹಿರಾಳಿಗೆ ಮದಿರಂಗಿ ಹಚ್ಚುವವರಾರು?
ಆಗ ಸಲಹೆಯಿತ್ತವಳು ಜಮೀಳಾ. ‘‘ಲೇ...ನೀನು ಒಪ್ಪುವುದಾದರೆ ಒಬ್ಬ ಅದ್ಭುತವಾಗಿ ಮದಿರಂಗಿ ಹಚ್ಚುವವನನ್ನು ನಾನು ನೋಡಿಟ್ಟಿದ್ದೇನೆ....’’
‘‘ಯಾರೆ ಅವನು? ನಿನ್ನ ಮಿಂಡನ?...’’ ಜುಬ್ಬಿ ಅವಳ ಸೊಂಟಕ್ಕೆ ಚಿವುಟಿದಳು.
‘‘ತಾಹಿರನ ತಂದೆ, ತಾಯಿಗೆ ಗೊತ್ತಾಗಬಾರದು...ಗೆಳತಿಯ ಮನೆಗೆ ಹೋಗಿ ಮದಿರಂಗಿ ಇಡುವುದು ಅಂತ ಹೇಳಬೇಕು...ನಿಮಗೆಲ್ಲ ಓಕೆ ಆದ್ರೆ ಸರಿ...’’
 ಎಲ್ಲರೂ ‘ಓಕೆ’ ಅಂದರು. ಇಂತಹ ಸಾಹಸಗಳೆಂದರೆ ತಾಹಿರಾ ಮತ್ತು ಗೆಳತಿಯರಿಗೆ ತುಂಬಾ ಇಷ್ಟ. ಪ್ರತಿ ಶುಕ್ರವಾರ ಮಧ್ಯಾಹ್ನ ಕ್ಲಾಸಿಗೆ ಚಕ್ಕರ್ ಹಾಕಿ ಆಡ್‌ಲ್ಯಾಬ್ಸ್‌ನಲ್ಲಿ ಪಿಕ್ಚರ್ ನೋಡುವವರು. ಶುಕ್ರವಾರ ಅವರು ಬುರ್ಖಾ ಧರಿಸಿ ಬಂದರು ಎಂದರೆ, ಅವರ ಕ್ಲಾಸ್‌ಮೇಟ್‌ಗಳಾದ ಆಸಿಫ್, ಮಹಮ್ಮದ್ ಇವರಿಗೆಲ್ಲ ಕೂಡಲೇ ಅರ್ಥವಾಗಿ ಬಿಡುತ್ತಿತ್ತು. ಇವರದೇನೋ ವಿಶೇಷ ಕಾರ್ಯಕ್ರಮ ಇದೆ ಎಂದು. ಕಾಲೇಜಿನುದ್ದಕ್ಕೂ ಇಂತಹ ಹತ್ತು ಹಲವು ಸಾಹಸಗಳು ಮಾಡಿ ತಂದೆ ತಾಯಿ, ಗೆಳೆಯರಿಂದ ಬೈಗಳು ತಿನ್ನುತ್ತಾ ಬಂದ ಹುಡುಗಿಯರ ಗುಂಪು ಅದು.

ಕೊನೆಗೂ ಮದಿರಂಗಿ ವಿಷಯದಲ್ಲಿ ಎಲ್ಲರೂ ಜಮೀಳಾ ಮಾತಿಗೆ ಒಪ್ಪಿದರು. ತಾಹಿರಾ ತನ್ನ ತಾಯಿಯ ಒಪ್ಪಿಗೆಯನ್ನು ಪಡೆದಳು. ಕಾರು ಚಲಾಯಿಸುವುದು ಜಮೀಳಾ ಎಂದಾಯಿತು. ತಾಹಿರಾ, ಜುಬ್ಬಿ ಹಿಂದಿನ ಸೀಟು ಏರಿದರು. ಕಾರು ನೇರವಾಗಿ, ಸಿಟಿಸೆಂಟರ್ ಮಾಲ್ ಮುಂದೆ ನಿಂತಿತು. ಜಮೀಳಾ, ಜುಬ್ಬಿ, ತಾಹಿರಾ ಮೂವರು ಮಾಲ್‌ನ ಗ್ರೌಂಡ್ ಫ್ಲೋರ್‌ಗೆ ಬಂದರು. ನೋಡಿದರೆ ಅಲ್ಲೇ ಒಂದು ಮೂಲೆಯಲ್ಲಿ ಒಬ್ಬ ತರುಣ ಕೂತಿದ್ದ. ಮೂವರು ಆ ಕಡೆಗೆ ಜರಗಿದರು. ಮೊದಲು ಅವನನ್ನು ನೋಡಿದ್ದು ತಾಹಿರಾ. ಬಲಿಷ್ಠ ಮೈಕಟ್ಟಾದರೂ ಮುಖದಲ್ಲೊಂದು ಮುಗ್ಧ ಕಳೆ. ಚಿಟ್ಟೆಯ ರೆಕ್ಕೆಯಂತೆ ಪಟಪಟಿಸುವ ರೆಪ್ಪೆಗಳ ಮರೆಯಲ್ಲಿರುವ ಅವನ ವಿಶಾಲ ಕಣ್ಣಿನ ಆಳ ಅವಳನ್ನು ಅವಳನ್ನು ಸೆಳೆದಂತಾಯಿತು. ಚಿಗುರು ಮೀಸೆ, ಮತ್ತು ಚಿಗುರು ಗಡ್ಡ! ಅವನು ಪ್ರಶ್ನಾರ್ಥಕವಾಗಿ ಅವರೆಡೆಗೆ ನೋಡಿದ್ದೇ ಜಮೀಳಾ ಅವನೆಡೆಗೆ ಮುಗುಳ್ನಗೆ ಚೆಲ್ಲಿದಳು. ಅವನು ತನ್ನ ಮುಂದೆ ಬಣ್ಣ ಬಣ್ಣದ ಮಂದಿರಂಗಿ ವಿನ್ಯಾಸಗಳನ್ನು ಹರಡಿ ಕುಳಿತಿದ್ದ. ಜಮೀಳಾ ಆ ವಿನ್ಯಾಸದ ಕಡೆಗೆ ಕಣ್ಣಾಯಿಸಿದಳು. ತಾಹಿರಾ ಅವನನ್ನು ಇದೀಗ ಇನ್ನಷ್ಟು ಹತ್ತಿರದಲ್ಲಿ ನೋಡುತ್ತಿದ್ದಳು. ಬಲಿಷ್ಟ ತೋಳುಗಳು. ಅದಕ್ಕೆ ಪೂರಕವಾಗಿ ನೀಲಿ ಜೀನ್ಸ್ ಮತ್ತು ಬೂದು ಟೀಶರ್ಟ್ ಧರಿಸಿದ್ದ. ಅವಳು ಅವನ ಮುಂದಿರುವ ಮಣೆಯಲ್ಲಿ ಕುಳಿತಳು. ಅಕ್ಕಪಕ್ಕ ಜುಬ್ಬಿ, ಜಮೀಳಾ ಕೂತರು. ತಾಹಿರಾ ಕೈ ಚಾಚಿದಳು. ಅವನು ತನ್ನ ವಿಶಾಲ ಕೈಗಳಿಂದ ಅವಳ ಕೈಗಳನ್ನು ತೆಗೆದುಕೊಂಡ. ಅವಳ ಬರಿಗೈಯನ್ನು ಮೆಲ್ಲಗೆ ಸವರಿದ. ಅವಳಿಗೆ ಒಂದು ಸಣ್ಣ ಮುಜುಗರ. ಯಾಕೋ ಕೈಯನ್ನು ಹಿಂದೆಗೆಯಲು ಪ್ರಯತ್ನಿಸಿದಳು. ಆದರೆ ಅವನು ಅದನ್ನು ಬಿಗಿಯಾಗಿ ಹಿಡಿದಿದ್ದ. ನಿಧಾನಕ್ಕೆ ಅವನು ಅವಳ ಕೈಯನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡ. ಅವಳಿಗೆ ಮೈಯೆಲ್ಲ ಸಣ್ಣಗೆ ಕಂಪಿಸಿದ ಅನುಭವ. ಆದರೆ ಅವನು ಇದನ್ನೆಲ್ಲ ಗಮನಿಸಿದಂತಿಲ್ಲ. ಮದಿರಂಗಿಯ ಟ್ಯೂಬನ್ನು ತೆಗೆದುಕೊಂಡ. ನೋಡನೋಡುತ್ತಿದ್ದಂತೆ ಮರಗಿಡ, ಬಳ್ಳಿ, ಹೂವುಗಳು ಅವಳ ಅಂಗೈಯಲ್ಲಿ ಅರಳತೊಡಗಿದವು. ಮೂವರು ಹುಡುಗಿಯರು ಅದನ್ನು ಅಚ್ಚರಿಗಣ್ಣಲ್ಲಿ ನೋಡುತ್ತಿದ್ದರು. ಗದ್ದಲಗಳಿಂದ ತುಂಬಿದ ಆ ಮಾಲ್‌ನಲ್ಲಿ ಆ ಮದಿರಂಗಿ ಹಚ್ಚುವ ಅಷ್ಟೂ ಸಮಯ ಗಾಢವಾದ ವೌನ ಕವಿದು ಬಿಟ್ಟಿತ್ತು. 

ಇದ್ದಕ್ಕಿದ್ದಂತೆಯೇ ಅವನು ‘‘ಸರಿ, ಆಯ್ತು’’ ಎಂದಾಗ ಒಮ್ಮೆಲೆ ಯಾವುದೋ ಲೋಕದಿಂದ ಎಸೆಯಲ್ಪಟ್ಟವರಂತೆ ಆ ಮೂವರು ಹುಡುಗಿಯರು ಬೆಚ್ಚಿದರು. ಆಮೇಲೆ ಯಾರಲ್ಲೂ ಮಾತುಗಳಿಲ್ಲ. ತಾಹಿರಾಳ ಹಣೆ ತುಂಬಾ ಬೆವರು. ಅವನ ತೊಡೆ ಮೇಲಿದ್ದ ಕೈಯನ್ನು ಎತ್ತಲು ಹೋದರೆ ಅದು ಅಲ್ಲಿಗೇ ಅಂಟಿದಂತಿತ್ತು. ಜುಬ್ಬಿ ಮೆಲ್ಲಗೆ ಆ ಕೈಯನ್ನು ಎತ್ತಿ ತನ್ನ ಕೈಗೆ ತೆಗೆದುಕೊಂಡಳು. ಮದಿರಂಗಿಯ ಜೊತೆ ಜೊತೆಗೇ ಅವಳು ಮದುಮಗಳಂತೆ ನಾಚಿಕೊಂಡಳು. ಅವಳ ಮುಖವಿಡೀ ಕೆಂಪಾಗಿತ್ತು. ಜಮೀಳಾ ಕಾರು ಕೀ ಯೊಂದಿಗೆ ಮುಂದೆ ಹೊರಟಳು. ಜುಬ್ಬಿ ಮತ್ತು ತಾಹಿರಾ ನಿಧಾನಕ್ಕೆ ಹೊರಡಲು ಸಿದ್ಧರಾದರು. ಮದಿರಂಗಿ ಹಚ್ಚಿದ ಎರಡೂ ಕೈಗಳನ್ನೂ ತಾಹಿರಾ ಜೋಪಾನ ಮಾಡಿದಳು. ಸುಮಾರು ಅರ್ಧ ಗಂಟೆ ಕೂತಿದ್ದರಿಂದಲೋ ಏನೋ, ತಾಹಿರಾಳ ಕಾಲು ಜುಮುಗುಡುತ್ತಿತ್ತು. ಅವನ ತೊಡೆಯ ಬಿಸಿ ಅಂಗೈಯ ಹಿಂದೆ ಇನ್ನೂ ಉಳಿದು ಬಿಟ್ಟಿದೆ ಅನ್ನಿಸಿತು. ಇನ್ನೇನು ಸಿಟಿಸೆಂಟರ್ ಮಾಲ್‌ನಿಂದ ಹೊರಗೆ ಹೆಜ್ಜೆಯಿಡಬೇಕು ಎನ್ನುವಷ್ಟರಲ್ಲಿ, ತಾಹಿರಾ ಕೇಳಿದಳು ‘‘ಅವನು ನನ್ನೆಡೆಗೆ ನೋಡುತ್ತಿದ್ದಾನೆಯೇ...?’’ ತಪ್ಪಿ ಅವಳ ಬಾಯಿಯಿಂದ ಮಾತು ಉದುರಿ ಬಿಟ್ಟಿತ್ತು.
‘‘ಯಾರೆ?’’ ಜುಬ್ಬಿ ಕೇಳಿದಳು.
ಉತ್ತರಕ್ಕೆ ಕಾಯದೆ ತಾಹಿರಾ ತಿರುಗಿ ನೋಡಿದಳು. ದೂರದಲ್ಲಿ ಅವನು, ಹೌದು ಅದು ಅವನೇ...ಬಾಗಿ, ಅದು ಯಾವುದೋ ಹುಡುಗಿಗೆ ಮದಿರಂಗಿ ಹಚ್ಚುವುದರಲ್ಲಿ ತನ್ಮಯವಾಗಿದ್ದ.
ಒಮ್ಮೆಲೆ ಗೊಂದಲಗೊಂಡ ತಾಹಿರಾ ಜುಬ್ಬಿಯ ಕಡೆಗೆ ನೋಡಿದಳು. ಅವಳ ದೃಷ್ಟಿ ಇನ್ನೆಲ್ಲೋ ಇತ್ತು. ತಾಹಿರಳಿಗೇಕೋ ಅಳು ಉಮ್ಮಳಿಸಿ ಬಂದಂತಾಯಿತು. ಜುಬ್ಬಿಗೆ ಗೊತ್ತಾಗಿ ಬಿಡಬಹುದು ಎಂದು ಅದನ್ನೇ ಅಲ್ಲಿಗೇ ನುಂಗಿಕೊಂಡಳು. ಅಷ್ಟರಲ್ಲಿ ಜಮೀಳಾ ಓಡೋಡಿಕೊಂಡು ಬಂದಳು.
‘‘ಲೇ...ನಿನ್ನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆಯಂತೆ....ನಿನ್ನ ಭಾವಿ ಗಂಡ ಲೈನಲ್ಲಿದ್ದಾನೆ...ತೆಗೆದುಕೊ’’ ಏದುಸಿರು ಬಿಡುತ್ತಾ ನುಡಿದಳು. ಆದರೆ ಮದಿರಂಗಿ ಹಚ್ಚಿದ ಎರಡೂ ಕೈಗಳು ಆ ಮೊಬೈಲ್ ಎತ್ತುವುದಕ್ಕೆ ಅಸೃಶ್ಯವಾಗಿವೆ. ಜುಬ್ಬಿ ಮೊಬೈಲ್‌ನ್ನು ತಾಹಿರಾಳ ಕಿವಿಗಿಟ್ಟಳು.
‘‘ಹಲೋ...ಅಸ್ಸಲಾಂ ಅಲೈಕುಂ...’’ ಎಂದು ಹೇಳುವುದಕ್ಕೆ ಪ್ರಯತ್ನಿಸಿದಳು ತಾಹಿರಾ. ಯಾಕೋ ಧ್ವನಿಯೇ ಹೊರಡುತ್ತಿಲ್ಲ. ‘‘ಯಾಕೆ ಆರೋಗ್ಯ ಸರಿಯಿಲ್ವಾ...’’ ಆ ಕಡೆಯಿಂದ ಭಾವೀ ಪತಿಯ ಮೃದು ಮಾತು ಕೇಳಿದ್ದೇ ತಾಹಿರಾ ಗಳಗಳನೆ ಅಳ ತೊಡಗಿದಳು.