Thursday, October 18, 2012

ಅರ್ಪಿಸುವುದಕ್ಕೆ ಮಡೋನ್ನಾಳ ಬಳಿ ಹಾಡುಗಳಿಲ್ಲ............!



ನಿನ್ನೆ ಕನಸಿನಲ್ಲಿ ಮಿಲಿಟರಿ ಹೆಲಿಕಾಪ್ಟರ್‌ಗಳು ಮತ್ತು ತಾಲಿಬಾನಿಗಳು ಬಂದಿದ್ದರು. ನಮ್ಮ ಸ್ವಾತ್ ಜಿಲ್ಲೆಯಲ್ಲಿ ಸೈನಿಕ ಕಾರ್ಯಾಚರಣೆ ಶುರುವಾದಂದಿನಿಂದ ಈ ರೀತಿಯ ದುಃಸ್ವಪ್ನಗಳು ಮಾಮೂಲಾಗಿವೆ.
-ಮಲಾಲಾ ಯೂಸುಫ್ ಝಾಯಿ ಡೈರಿಯಲ್ಲಿ ಬರೆದ ಸಾಲುಗಳು.
***
‘‘ಈ ಘಟನೆ ನನಗೆ ಅಳು ತರಿಸಿತು’’
-ಪಾಪ್ ತಾರೆ ಮಡೋನ್ನಾ, ಮಲಾಲಾ ಮೇಲೆ ನಡೆದ ಹಲ್ಲೆಗೆ ಪ್ರತಿಕ್ರಿಯಿಸುತ್ತಾ.
***
‘‘ಹೌದು, ಇದನ್ನು ನಾವು ಸಮರ್ಥನೀಯ ಎಂದೇ ಭಾವಿಸಿದ್ದೇವೆ’’
-ಮೆಡಲಿನ್ ಆಲ್‌ಬ್ರೈಟ್, ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ, ವಿಶ್ವ ನ್ಯಾಯ ಯೋಜನೆಯ ಗೌರವಾಧ್ಯಕ್ಷೆ (ಇರಾಕ್‌ನಲ್ಲಿ ದಿಗ್ಬಂಧನದಿಂದಾಗಿ ಲಕ್ಷಾಂತರ ಮಕ್ಕಳು ಸತ್ತಾಗ, ಪ್ರತಿಕ್ರಿಯೆ)
***
14 ವರ್ಷದ ಒಂದು ಹೆಣ್ಣು ಮಗುವಿನ ಮೇಲೆ ಗುಂಡಿನ ದಾಳಿಯನ್ನು ಯಾರೇ ಮಾಡಿರಲಿ, ಯಾವ ಕಾರಣಕ್ಕೇ ಮಾಡಿರಲಿ ಅದು ಬರ್ಬರ, ಅಮಾನವೀಯ. ಅದನ್ನು ಬರ್ಬರ ಎಂದು ಕರೆಯುವುದಕ್ಕೆ ಹಿಂದೆ ಮುಂದೆ ನೋಡುವ ಸಮಾಜವನ್ನು ನಾಗರಿಕ ಸಮಾಜ ಅಥವಾ ಮನುಷ್ಯರಿರುವ ಸಮಾಜ ಎಂದು ಕರೆಯುವುದು ಅಸಾಧ್ಯ. ಪಾಕಿಸ್ತಾನದಲ್ಲಿ ಮಲಾಲಾ ಎಂಬ ಪುಟ್ಟ ಮಗುವಿನ ಮೇಲೆ ದುಷ್ಕರ್ಮಿಗಳು ಗುಂಡೆಸೆದಿದ್ದಾರೆ. ಜಗತ್ತಿನಾದ್ಯಂತ ಸಹಜವಾಗಿಯೇ ಖಂಡನೆ, ಆಕ್ರೋಶಗಳು ವ್ಯಕ್ತವಾಗುತ್ತಿವೆ. ಗುಂಡೆಸೆದವರು ಯಾವ ಕಾರಣಕ್ಕೆ ಗುಂಡೆಸೆದರು, ಅವರು ಯಾವ ಸಂಘಟನೆಯವರು ಇತ್ಯಾದಿಗಳೆಲ್ಲ ಅನಂತರದ ವಿಷಯ. ಮೊತ್ತ ಮೊದಲು ನಾವು ಆ ದಾಳಿಯನ್ನು ಖಂಡಿಸಬೇಕಾಗುತ್ತದೆ. ಯಾಕೆಂದರೆ ನಮ್ಮನ್ನು ನಾವು ಮನುಷ್ಯರು ಎಂದು ಈ ಜಗತ್ತಿನಲ್ಲಿ ಕರೆದುಕೊಳ್ಳುತ್ತಿದ್ದೇವೆ.

ಮಲಾಲಾ ಯೂಸುಫ್ ಝಾಯಿ ಶಾಲೆ ಕಲಿಯುವುದಕ್ಕೆ ಬಯಸಿದ್ದಳು. ಮತ್ತು ಆಕೆ ತನ್ನ ಭಾವನೆಗಳನ್ನು ಡೈರಿಯಲ್ಲಿ ತೆರೆದಿಟ್ಟಳು. ಅದು ಮಾಧ್ಯಮದ ಮೂಲಕ ಕಾವ್ಯನಾಮದಲ್ಲಿ ಪ್ರಕಟವಾಯಿತು. ಬಳಿಕ ಆಕೆ ಪಾಕಿಸ್ತಾನಾದ್ಯಂತ ಸುದ್ದಿಯಾದಳು. ತನಗೆ ಎಂತಹ ಪಾಕಿಸ್ತಾನ ಬೇಕು ಎನ್ನುವುದರ ಕುರಿತಂತೆ ತನ್ನ ಕನಸುಗಳನ್ನು ಆಕೆ ತೆರೆದಿಟ್ಟಳು. ಅಷ್ಟೇ ಅಲ್ಲ, ವಯಸ್ಸಿಗೆ ಮೀರಿದ ಗೌರವವನ್ನು ಮಾಧ್ಯಮಗಳು ಮತ್ತು ಪಾಶ್ಚಿಮಾತ್ಯ ಸಂಘಸಂಸ್ಥೆಗಳು ನೀಡಿದವು. ಹತ್ತು ಹಲವು ಪ್ರಶಸ್ತಿಗಳು ಆಕೆಯನ್ನು ಅರಸಿಬಂದವು.ಇದೀಗ ಏಕಾಏಕಿ ಈಕೆಯ ಮೇಲೆ ಗುಂಡಿನ ದಾಳಿ ನಡೆದಿದ್ದು ಇಡೀ ವಿಶ್ವವೇ ಈ ಹೇಯ ಘಟನೆಗೆ ಮರುಗಿದೆ. ಈ ದಾಳಿಯನ್ನು ತಾಲಿಬಾನಿಗಳು ನಡೆಸಿದರು ಎನ್ನುವುದು ಸದ್ಯಕ್ಕೆ ನಾವು ತಿಳಿದುಕೊಂಡಿರುವ ಮಾಹಿತಿ. ಅದು ನಿಜವಾದರೂ, ಸುಳ್ಳಾದರೂ, ದಾಳಿಯಂತೂ ಬರ್ಬರವೆ. ಪಾಶ್ಚಿಮಾತ್ಯ ದೇಶಗಳೂ ಸೇರಿದಂತೆ ವಿಶ್ವದ ಎಲ್ಲ ಮಾನವ ಹಕ್ಕು ಹೋರಾಟಗಾರರು ಮೊದಲ ಬಾರಿಗೆ ದೊಡ್ಡ ದನಿಯಲ್ಲಿ ಬಾಲಕಿಯೊಬ್ಬಳ ಸಾವಿನ ಕುರಿತಂತೆ ಮರುಕ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ಅಭಿನಂದನೀಯ. ತನ್ನ ಸಂಗೀತ ಜಗತ್ತಿನಲ್ಲಿ ತೇಲಾಡುತ್ತಿರುವ ಮಡೋನ್ನಾ ಮೊದಲ ಬಾರಿಗೆ ಭೂಮಿಗಿಳಿದು ಮಲಾಲಾಳಿಗಾಗಿ ಕಣ್ಣೀರನ್ನು ಹನಿಸಿದ್ದಾರೆ.ಅಷ್ಟೇ ಅಲ್ಲ, ತನ್ನ ಹಾಡೊಂದನ್ನು ಮಲಾಲಾಳಿಗಾಗಿ ಅರ್ಪಿಸಿದ್ದಾರೆ. ‘‘ಈ ಘಟನೆ ನನ್ನಲ್ಲಿ ಅಳು ತರಿಸಿತು. ಶಾಲೆಗೆ ಹೋಗುವ ಕುರಿತಂತೆ 14 ವರ್ಷದ ಶಾಲಾ ಬಾಲಕಿ ಬ್ಲಾಗ್ ಬರೆದಳು. ಬಾಲಕಿಯ ಬಸ್ಸನ್ನು ತಡೆದು ತಾಲಿಬಾನ್ ಆಕೆಗೆ ಗುಂಡು ಹಾರಿಸಿತು. ಇದು ಎಷ್ಟೊಂದು ಹೀನಾಯ ಎಂಬುದು ನಿಮಗೆ ಗೊತ್ತೆ?’’ ಮಡೋನಾ ಹೇಳದಿದ್ದರೂ ಅದು ಹೀನಾಯವೆ.

ಆದರೆ ಮಡೋನ್ನಾಳಂಥವರು ಕಣ್ಣೀರು ಸುರಿಸಬೇಕಾದರೆ, ತಮ್ಮ ಹಾಡುಗಳನ್ನು ಅರ್ಪಿಸಬೇಕಾದರೆ ಮಲಾಲಾಳಂತಹ ಪುಟಾಣಿಗಳು ಕೇವಲ ಗುಂಡಿನ ದಾಳಿಗೀಡಾದರಷ್ಟೇ ಸಾಕಾಗುವುದಿಲ್ಲ. ಆ ದಾಳಿಯನ್ನು ಯಾರು ಎಸಗಿದರು ಎಂಬುದೂ ಮುಖ್ಯವಾಗುತ್ತದೆ. ಯಾರಿಂದ ಆಕೆ ದಾಳಿಗೊಳಗಾದಳು ಎನ್ನುವುದು ಪಾಶ್ಚಿಮಾತ್ಯರ ಕಣ್ಣೀರನ್ನು, ದುಃಖವನ್ನು ಖಂಡನೆಯನ್ನು ನಿರ್ಧರಿಸುತ್ತದೆ.ಯಾಕೆಂದರೆ ಪಾಕಿಸ್ತಾನದಲ್ಲಿ ಮತ್ತು ಅಫ್ಘಾನಿಸ್ತಾನದಲ್ಲಿ ಮಲಾಲಾಳ ಮೇಲೆ ಗುಂಡಿನ ದಾಳಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಅಫ್ಘಾನಿಸ್ತಾನದಲ್ಲಿ ಮತ್ತು ಪಾಕಿಸ್ತಾನದಲ್ಲಿ ಅಮೆರಿಕ ನಡೆಸುತ್ತಿರುವ ಡ್ರೋನ್ ದಾಳಿಯಲ್ಲಿ ನೂರಾರು ನಾಗರಿಕರು ಸಾಯುತ್ತಿದ್ದಾರೆ. ಅವರಲ್ಲಿ ಮಲಾಲಾಳಂತಹ ಶಾಲೆಗೆ ಹೋಗುವ ನೂರಾರು ಮಕ್ಕಳೂ ಸೇರಿದ್ದಾರೆ. ಇದು ಪಾಕಿಸ್ತಾನಕ್ಕೆ ಮಾತ್ರವಲ್ಲ, ಮಲಾಲಾಳಿಗಾಗಿ ಮರುಗಿದ ಯುನಿಸೆಫ್‌ಗೂಗೊತ್ತಿದೆ. ‘‘ಇಂದು ನಮ್ಮ ಯೋಚನೆಗಳು 14 ವರ್ಷದ ಬಾಲಕಿಯರ ಹಕ್ಕುಗಳ ಹೋರಾಟಗಾರ್ತಿಯರ ಜೊತೆಗಿದೆ’’ ಎಂದು ವಿಶ್ವಸಂಸ್ಥೆಯ ಅಂಗವಾದ ಯುನಿಸೆಫ್ ಹೇಳಿದೆ.ಅದು ನಿಜವೇ ಆಗಿದ್ದರೆ, ಪಾಕಿಸ್ತಾನದಲ್ಲಿ ಈವರೆಗೆ ಗುಂಡಿನ ದಾಳಿ ನಡೆದಿರುವುದು ಒಬ್ಬಳೇ ಒಬ್ಬಳು ಮಲಾಲಾಳ ಮೇಲೆಯೆ? ಅಂದರೆ ಈವರೆಗೆ ಪಾಕಿಸ್ತಾನದ, ಅಫ್ಘಾನಿಸ್ತಾನದಲ್ಲಿ ಡ್ರೋನ್ ದಾಳಿಗೆ ಮೃತಪಟ್ಟ ಮಕ್ಕಳ ಬರ್ಬರ ಸಾವನ್ನು ಯುನಿಸೆಫ್ ಸಮರ್ಥನೀಯ ಎಂದು ಹೇಳುತ್ತಿದ್ದೆಯೆ? ಈ ಸಾವಿನ ಕುರಿತಂತೆ ಮೌನ ವಹಿಸಿದ ಯುನಿಸೆಫ್‌ಗೆ ಮಲಾಲಾಳ ಸಾವಿನ ಕುರಿತಂತೆ ಹೇಳಿಕೆ ನೀಡುವ ನೈತಿಕತೆಯಿದೆಯೆ? ಇರಾಕ್‌ನಲ್ಲಿ ಇಂತಹ ಸಾವಿರಾರು ಮಲಾಲಾರು ಬರ್ಬರವಾಗಿ ಹತ್ಯೆಗೀಡಾದರು. ಮಗುವೊಂದು ಶಾಲೆಗೆ ಹೋಗಲು ಸಿದ್ಧವಾಗುತ್ತಿದ್ದ ಹಾಗೆಯೇ ನ್ಯಾಟೋ ಬಾಂಬುಗಳ ಮನೆಯ ಮುಂದೆರಗಿ, ಆ ವಿದ್ಯಾರ್ಥಿಯೂ ಸೇರಿದಂತೆ ಇಡೀ ಕುಟುಂಬ ಸರ್ವನಾಶವಾಯಿತು.

ಇರಾನ್ ಮತ್ತು ಇರಾಕ್‌ನ ಮೇಲಿನ ದಿಗ್ಬಂಧನದಿಂದ ಅತಿ ಹೆಚ್ಚು ಮರಣ ಸಂಭವಿಸಿದ್ದು ಎಳೆ ಮಕ್ಕಳದ್ದು. ಅವರಲ್ಲಿ ಹೆಣ್ಣು ಮಕ್ಕಳೂ ಇದ್ದರು. ಇರಾಕ್ ಯುದ್ಧದಲ್ಲಿ ಅಮೆರಿಕ ದಾಳಿಯಿಂದ ಸತ್ತದ್ದು ಸದ್ದಾಂ ಮತ್ತು ಆತನ ಹಿಂಬಾಲಕರಲ್ಲ. ಸುಮಾರು 2 ಲಕ್ಷಕ್ಕೂ ಅಧಿಕ ನಾಗರಿಕರು. ಸಹಸ್ರಾರು ಮಕ್ಕಳ ಶಾಲೆಯ ಕನಸುಗಳೂ ಆ ದಾಳಿಯಲ್ಲಿ ಸರ್ವನಾಶವಾದವು. ಆ ಅಷ್ಟು ಮಕ್ಕಳಿಗೆ ಅರ್ಪಿಸಲು ಬೇಕಾಗುವಷ್ಟು ಹಾಡುಗಳು ಮಡೋನ್ನಾ ಬಳಿ ಇದೆಯೆ? ಅಫ್ಘಾನಿಸ್ತಾನದ ಕಾಬೂಲಿನಲ್ಲಿ ಅಡುಗೆಗಾಗಿ ಕಟ್ಟಿಗೆಗಳನ್ನು ಸಂಗ್ರಹಿಸುತ್ತಿದ್ದ ಒಂಬತ್ತು ಮಂದಿ ಹುಡುಗರನ್ನು ನ್ಯಾಟೋ ಪಡೆಗಳು ಕ್ಷಿಪಣಿ ದಾಳಿಯ ಮೂಲಕ ಕೊಂದು ಹಾಕಿದವು. ಇದನ್ನು ನ್ಯಾಟೋ ಪಡೆ ಒಪ್ಪಿಕೊಂಡಿತು ಕೂಡ.ಇದಾಗಿ ಒಂದು ವರ್ಷವಾಗಿದೆ. ಈ ಅವಧಿಯಲ್ಲಿ ಡ್ರೋನ್ ದಾಳಿಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಸಾವಿರಾರು ನಾಗರಿಕರು ಮೃತಪಟ್ಟಿದ್ದಾರೆ. ಅವರಲ್ಲಿ ಮಕ್ಕಳೂ ಸೇರಿದ್ದಾರೆ. ಈ ಘಟನೆಯನ್ನು ತಾಲಿಬಾನ್ ಮಾಡಿದ್ದಿದ್ದರೆ ಅದು ಕಣ್ಣೀರಿಡುವ ವಸ್ತುವಾಗುತ್ತಿತ್ತು. ಚರ್ಚೆಗೆ, ಖಂಡನೆಗೆ ಅರ್ಹವಾಗುತ್ತಿತ್ತು. ಆದರೆ ಇದನ್ನು ಮಾಡಿರುವುದು ನಾಗರಿಕನೆಂದು ಕರೆಸಿಕೊಂಡಿ ರುವ ಅಮೆರಿಕ. ಇರಾಕ್‌ನಲ್ಲಿ ಯುದ್ಧದಿಂದ ಲಕ್ಷಾಂತರ ಮಕ್ಕಳು ಮೃತಪಟ್ಟಾಗ ‘‘ಹೌದು, ಇದನ್ನು ನಾವು ಸಮರ್ಥನೀಯ ಎಂದೇ ಭಾವಿಸಿದ್ದೇವೆ’’ ಎಂದು ಅಂದಿನ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೆಡಲಿನ್ ಹೇಳಿಕೆ ನೀಡಿದರು. ಈ ಹೇಳಿಕೆಯನ್ನು ನೀಡುವ ಧೈರ್ಯ ತೋರಿಸಿದ್ದಕ್ಕಾಗಿಯೇ ಆಕೆಯನ್ನು ವಿಶ್ವ ನ್ಯಾಯ ಯೋಜನೆಯ ಗೌರವಾಧ್ಯಕ್ಷೆಯಾಗಿ ಗೌರವಿಸಲಾಯಿತು. ಅಮೆರಿಕ ಮಿತ್ರ ಪಡೆ ಇರಾಕ್‌ನಲ್ಲಿ ನಡೆಸಿದ ಯುದ್ಧಕ್ಕೆ ಬಲಿಯಾದ ಎರಡು ಲಕ್ಷಕ್ಕೂ ಅಧಿಕ ನಾಗರಿಕರಲ್ಲಿ ಶೇ. 46ರಷ್ಟು ಮಹಿಳೆಯರು. ಮತ್ತು ಶೇ. 39ರಷ್ಟು ಮಕ್ಕಳು ಎಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನ ವರದಿ ತಿಳಿಸುತ್ತದೆ. ಇರಾಕ್ ಬಾಡಿ ಕೌಂಟ್‌ನ ಅಧಿಕೃತ ವರದಿಯ ಪ್ರಕಾರ ಮೃತ ನಾಗರಿಕರಲ್ಲಿ, 3,911 ಮಂದಿ 18 ವರ್ಷ ಕ್ಕಿಂತ ಕೆಳಗಿನವರು. ಅಮೆರಿಕ ಹಿತಾಸಕ್ತಿಯನ್ನಷ್ಟೇ ಮುಂದಿಟ್ಟುಕೊಂಡು ಇರಾನ್‌ನ ಮೇಲೆ ವಿಧಿಸಿದ ದಿಗ್ಬಂಧನದ ಮೊದಲ ಬಲಿಪಶುಗಳಾಗುತ್ತಿರುವವರೇ ಮಕ್ಕಳು. ಇವರಲ್ಲಿ ನಮಗೆ ಮಲಾಲಾಗಳನ್ನು ಗುರುತಿಸಲು ಯಾಕೆ ಸಾಧ್ಯವಾಗುತ್ತಿಲ್ಲ?

ಈ ಎಲ್ಲ ಕಾರಣದಿಂದಲೇ ಮಲಾಲಾ ಕುರಿತ ಅಮೆರಿಕ ಸಹಿತ ಪಾಶ್ಚಿಮಾತ್ಯ ದೇಶಗಳ ಕಣ್ಣೀರು ಮೊಸಳೆ ಕಣ್ಣೀರಾಗಿ ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಜೊತೆ ಎಡೆಬಿಡದ ಯುದ್ಧದಿಂದ ಬಳಲಿ ಹೋಗಿರುವ ಅಮೆರಿಕ ಮತ್ತು ಅದರ ಬಳಗ, ಯಾರನ್ನೂ ತನ್ನ ಯುದ್ಧಕ್ಕೆ ಗುರಾಣಿಯಾಗಿ ಬಳಸಲು ಹೇಸುವುದಿಲ್ಲ. ಈ ಕಾರಣದಿಂದ ಮಲಾಲಾಳನ್ನು ಪಾಶ್ಚಿಮಾತ್ಯ ದೇಶಗಳು ರಾಜಕೀಯ ಕಾರಣಗಳಿಗೆ ಬಳಸಲು ಮುಂದಾಯಿತೆ? ಎಂಬ ಪ್ರಶ್ನೆ ಎದ್ದಿದೆ. ಅಮೆರಿಕ ತಾಲಿಬಾನ್ ವಿರುದ್ಧ ಮಲಾಲಾಳನ್ನೂ ಒಂದು ಅಸ್ತ್ರವಾಗಿ ಪ್ರಯೋಗಿಸುತ್ತಿದೆಯೆ? ಆಕೆಯ ಡೈರಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಆ ಮುಗ್ಧ ಬಾಲಕಿಯನ್ನು ಸಾರ್ವಜನಿಕ ವ್ಯಕ್ತಿಯಾಗಿ, ಹೋರಾಟ ಗಾರ್ತಿಯಾಗಿ ಬಿಂಬಿಸಿ, ಅವಳ ಮೇಲಿನ ದಾಳಿಗೆ ಪರೋಕ್ಷವಾಗಿ ಮಾಧ್ಯಮಗಳೂ ಕಾರಣವಾದವೆ? ಏನೂ ಅರಿಯದ ಬಾಲಕಿಯನ್ನು ವಿಶ್ವದ ಕೇಂದ್ರ ಬಿಂದುವಾಗಿ ಮಾರ್ಪಡಿಸಿ, ದುಷ್ಕರ್ಮಿಗಳಿಗೆ ಅಮೆರಿಕವೇ ಬಲಿಕೊಟ್ಟಿತೆ? ಸದ್ಯದ ಅಮೆರಿಕದ ‘ಭಯೋತ್ಪಾದಕರ ವಿರುದ್ಧದ ಹೋರಾಟ’ಕ್ಕೆ ಆಕೆಯೂ ಒಂದು ಸಮಿತ್ತಾದಳೆ? ಯಾವಾಗ ಮಾಧ್ಯಮಗಳು ಆಕೆಯನ್ನು ಸಾರ್ವಜನಿಕವಾಗಿ ತಂದು ನಿಲ್ಲಿಸಿದವೋ ಆಗಲೇ ಆಕೆಗೆ ರಕ್ಷಣೆ ನೀಡಬೇಕಾದುದು ಪಾಕಿಸ್ತಾನ ಸರಕಾರವೂ ಸೇರಿದಂತೆ ಪಾಶ್ಚಿಮಾತ್ಯ ಮಾಧ್ಯಮಗಳ ಕರ್ತವ್ಯವಾಗಿತ್ತು? ಬಹುಶಃ ಅಮೆರಿಕಕ್ಕೆ ತನ್ನ ಹೋರಾಟಕ್ಕಾಗಿ ಒಂದು ಪುಟಾಣಿಯ ಬಲಿ ಬೇಕಾಗಿತ್ತೆ? ಅಥವಾ ತಮ್ಮ ದಾಳಿಯಿಂದಾಗಿ ಬಲಿಯಾಗುತ್ತಿರುವ ನೂರಾರು ಅಮಾಯಕ ಮಕ್ಕಳ ಸಾವುಗಳನ್ನು ಮಲಾಲಾಳಿಗಾಗಿ ಕಣ್ಣೀರು ಸುರಿಸುವ ಮೂಲಕ ಸರಿದೂಗಿಸುತ್ತಿದ್ದಾರೆಯೆ? ನಾವು ತೀರಾ ಭಾವುಕವಾಗಿ ಆಲೋಚಿಸುವ ಮೊದಲು ಈ ಪ್ರಶ್ನೆಗಳಿಗೆಲ್ಲಾ ಉತ್ತರ ಕಂಡುಕೊಳ್ಳಬೇಕಾಗಿದೆ.

 ಮಲಾಲಾ ಪ್ರಕರಣ ಬರೇ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಮಾತ್ರ ನಡೆಯಬೇಕಾಗಿಲ್ಲ. ಅಂತಹದ್ದು ಭಾರತದಲ್ಲೂ, ಕರಾವಳಿಯ ಮಂಗಳೂರಿನಲ್ಲೂ ನಡೆಯಬಹುದು ಎಂದು ನಾನು ಭಾವಿಸಿದ್ದೇನೆ. ಒಂದು ಸಂದರ್ಭದಲ್ಲಿ ಮಂಗಳೂರಿನಂತಹ ಬುದ್ಧಿವಂತರ ಜಿಲ್ಲೆಯಲ್ಲೇ ಮುಸ್ಲಿಮ್ ಹೆಣ್ಣು ಮಕ್ಕಳು ವಿದ್ಯೆ ಕಲಿಯುವುದು ಕಷ್ಟವೆನ್ನುವಂತಹ ವಾತಾವರಣವಿತ್ತು. ಇದೀಗ ಈ ಪ್ರದೇಶದಲ್ಲಿ ಮುಸ್ಲಿಮ್ ಬಾಲಕಿಯರು ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ ಮಾತ್ರವಲ್ಲ, ರ್ಯಾಂಕ್‌ಗಳನ್ನೂ ಗಳಿಸುತ್ತಿದ್ದಾರೆ. ಇದನ್ನೊಂದು ಅಭಿನಂದನೀಯ ಬೆಳವಣಿಗೆ ಎಂದು ಸಮಾಜ ಸ್ವಾಗತಿಸಬೇಕಾಗಿತ್ತು. ಆದರೆ, ಇಂದು ಇದೇ ಬಾಲಕಿಯರನ್ನು ಸ್ಕಾರ್ಫ್‌ನ ಹೆಸರಲ್ಲಿ ಶಾಲೆಯಿಂದ ಹೊರಗೆ ಹಾಕುವಂತಹ ಸನ್ನಿವೇಶ ನಿರ್ಮಾಣವಾಗಿದೆ. ರಾಮಕುಂಜ, ಸುಬ್ರಹ್ಮಣ್ಯ, ಬಂಟ್ವಾಳ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಸ್ಕಾರ್ಫ್ ಧರಿಸಿದ ಹೆಣ್ಣು ಮಕ್ಕಳು ವಿದ್ಯೆ ಕಲಿಯಲು ಅನರ್ಹರು ಎಂದು ತೀರ್ಮಾನಿಸಿರುವುದು ವಿದ್ಯೆ ಕಲಿತ ಶಿಕ್ಷಕರೇ ಆಗಿದ್ದಾರೆ. ಇವರು ಯಾರೂ ತಾಲಿಬಾನ್ ಸಂಘಟನೆಯಿಂದ ಹೊರಬಂದವರಲ್ಲ. ಮನೆಯಲ್ಲಿ ತಂದೆತಾಯಿಗಳನ್ನು ಮನವೊಲಿಸಿ ಶಾಲೆಕಲಿಯಬೇಕು ಎಂಬ ಆಸೆಯಿಂದ ಶಾಲೆಯ ವಠಾರಕ್ಕೆ ಕಾಲಿಟ್ಟರೆ ಅವರನ್ನು ಸ್ಕಾರ್ಫ್ ಹೆಸರಿನಲ್ಲಿ ಶಾಲೆಯಿಂದ ಹೊರಗೆ ಹಾಕುವ ಉಪಾಧ್ಯಾಯರು, ಶಾಲಾ ಸಂಘಟಕರೂ ಉಗ್ರವಾದಿಗಳೇ ಅಲ್ಲವೆ? ಮಲಾಲಾ ಮೇಲೆ ಯಾವ ಕಾರಣಕ್ಕೆ ಹಲ್ಲೆಯಾಯಿತೋ ಅದೇ ಕಾರಣಕ್ಕೆ ಇಲ್ಲೂ ಹಲ್ಲೆಯಾಗುತ್ತಿದೆ.

ನಾವು ಕಣ್ಣೀರಿಡುವುದಕ್ಕೆ, ಹೋರಾಟ ಮಾಡುವುದಕ್ಕೆ ಸಾವಿರಾರು ಮಲಾಲಾಗಳು ನಮ್ಮ ನೆಲದಲ್ಲೇ ಇದ್ದಾರೆ. ತಾಲಿಬಾನ್ ಸಂಘಟನೆಯಿಂದ ದಾಳಿ ನಡೆದರೆ ಮಾತ್ರ ಅವರ ಪರವಾಗಿ ಧ್ವನಿಯೆತ್ತಬೇಕು ಎಂಬ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ಹೊರಬಂದು, ನಮ್ಮ ನಡುವಿರುವ ಮಲಾಲಾರ ಕುರಿತಂತೆಯೂ ಮಾತನಾಡುವ ಆರೋಗ್ಯಕರ ಮನಸ್ಸನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ. ಮಲಾಲಾ ಆದಷ್ಟು ಬೇಗ ಗುಣಮುಖಳಾಗಿ ಮತ್ತೆ ಶಾಲೆಗೆ ಸೇರುವಂತಾಗಲಿ. ಮಲಾಲಾ ಆರೋಗ್ಯ ಒಂದು ರೂಪಕವಾಗಿದೆ. ಅದನ್ನು ರಾಜಕೀಯಗೊಳಿಸದೆ, ಮಾನವೀಯ ದೃಷ್ಟಿಯಿಂದ ನೋಡುತ್ತಾ, ನಮ್ಮ ನಮ್ಮ ಸಮಾಜಕ್ಕೆ ಅನ್ವಯಗೊಳಿಸಬೇಕಾಗಿದೆ.

Tuesday, October 16, 2012

ಬಟ್ಟೆ ಮತ್ತು ಇತರ ಕತೆಗಳು

ಹಸಿವೆ
ಆ ಊರು ಬರಗಾಲದಿಂದ ತತ್ತರಿಸುತ್ತಿತ್ತು.
ಆಹಾರವಿಲ್ಲದೆ ಗತಿಗೆಟ್ಟ ಕುಟುಂಬ ಕಟ್ಟಕಡೆಗೆ ತನ್ನ ಮಗುವನ್ನು ಒಂದು ಕಿಲೋ ಅಕ್ಕಿಗೆ ಮಾರಿ, ಪೊಲೀಸರಿಂದ ಬಂಧನಕ್ಕೊಳಗಾಯಿತು.
ಅಭಿವೃದ್ಧಿ ತುಂಬಿ ತುಳುಕುವ ನಗರ ಅದು.
ಒಬ್ಬ ತಾಯಿ ತನ್ನ ಮಗುವನ್ನು ಮಾರಿ, ಅದಾಗಲೇ ಮಾರುಕಟ್ಟೆಗೆ ಬಂದ ಹೊಸ ಮೊಬೈಲ್ ಕೊಂಡುಕೊಂಡಳು.

ಆದೇಶ
ಸರಕಾರ ಆದೇಶ ನೀಡಿತು ‘‘ಇನ್ನು ಮುಂದೆ ರೈತರು ಗದ್ದೆ ತೋಟಗಳಿಗೆ ನದಿಯ ನೀರನ್ನು ಬಳಸುವಂತಿಲ್ಲ’’
ಹಾಗೆಂದು ಆದೇಶ ನೀಡಿದ ಜಿಲ್ಲಾಧಿಕಾರಿಯ ಮನೆ ಮುಂದಿನ ಉದ್ಯಾನವನಕ್ಕೆ ಒಂದು ದಿನ ನೀರು ಹನಿಸದ ಕಾರಣಕ್ಕೆ ಮಾಲಿ ಕೆಲಸ ಕಳೆದುಕೊಂಡ.

ಮಂಗಳ
‘‘ಅಪ್ಪಾ ಮಂಗಳನಲ್ಲಿ ನೀರಿದೆ ಅಂತಾರೆ. ಒಂದು ವೇಳೆ ಮಂಗಳ ಗ್ರಹದಲ್ಲಿ ನಿಜಕ್ಕೂ ನೀರಿದ್ರೆ ಅದು ಯಾರಿಗೆ ಸೇರತ್ತೆ....ಅಮೆರಿಕಕ್ಕೋ...ನಮ್ಮೆಲ್ಲರಿಗೋ...’’
ಮಗ ಮುಗ್ಧವಾಗಿ ಕೇಳಿದ.
‘‘ಅದನ್ನು ಮತ್ತೊಂದು ಯುದ್ಧ ನಿರ್ಧರಿಸುತ್ತೆ ಮಗ...’’ ಅಪ್ಪ ನಿರ್ಲಿಪ್ತವಾಗಿ ಉತ್ತರಿಸಿದ.
‘‘ಹಾಗಾದರೆ ಅದನ್ನು ನಾವು ಅಮಂಗಳ ಗ್ರಹ ಎಂದೇ ಕರೆಯುವುದು ಒಳ್ಳೆಯದಲ್ವ ಅಪ್ಪಾ...’’ ಮಗ ಆತಂಕದಿಂದ ಕೇಳಿದ.

ದಾರಿ
ಸಂತ ಪ್ರಯಾಣ ಹೋರಟಿದ್ದ.
ಶಿಷ್ಯ ಹೇಳಿದ ‘‘ದಾರಿಯಲ್ಲಿ ಒಂದು ಮರವೂ ಇಲ್ಲ...ಬರೇ ಬಿಸಿಲು...ಪ್ರಯಾಣ ಕ್ಷಷ್ಟ...’’
ಸಂತ ಹೇಳಿದ ‘‘ಸರಿ ಪ್ರಯಾಣದುದ್ದಕ್ಕೂ ನಾವು ದಾರಿಯ ಇಕ್ಕೆಡೆಗಳಲ್ಲಿ ಸಸಿಗಳನ್ನು ನೆಡುತ್ತಾ ಮುಂದೆ ಸಾಗುವ...’’
ಮುಂದೆ ಆ ಗಿಡಗಳೆಲ್ಲ ಬೆಳೆದು ಮರವಾದವು. ನೆರಳಿನ ಕಾರಣಕ್ಕಾಗಿ ಸಂತ ನಡೆದ ದಾರಿಯಲ್ಲಿ ಈಗ ನೂರಾರು ಜನರು ನಡೆಯುತ್ತಿದ್ದಾರೆ.

ನಕ್ಷೆ
ಸಂತ ಪ್ರಯಾಣ ಹೊರಟ.
ಶಿಷ್ಯ ಹೇಳಿದ ‘‘ಗುರುಗಳೇ...ನೀವು ಹೋಗುವ ಊರಿನ ನಕ್ಷೆ ಇಟ್ಕೊಂಡಿದ್ದೀರಾ?’’
ಸಂತ ನಕ್ಕ ‘‘ನಾನು ಪ್ರಯಾಣ ಹೊರಟ ದಾರಿಯೇ ನಕ್ಷೆಯ ರೂಪ ಪಡೆಯತ್ತೆ’’ ಹೊರಗೆ ಹೆಜ್ಜೆಯಿಟ್ಟ.

ಅಪಘಾತ
ಅಪಘಾತವಾಗಿತ್ತು. ಆತ ವಿಲವಿಲನೆ ಒದ್ದಾಡುತ್ತಿದ್ದ.
ಯಾರೋ ಆತನನ್ನು ಆಸ್ಪತ್ರೆಗೆ ಒಯ್ಯಲು ಯತ್ನಿಸುತ್ತಿದ್ದರು.
ಅಷ್ಟರಲ್ಲಿ ಅಲ್ಲಿಗೆ ಬಂದ ಚಾನೆಲ್ ವರದಿಗಾರ ಹೇಳಿದ ‘‘ಸ್ವಲ್ಪ ನಿಲ್ಲಿ. ಇನ್ನೊಂದು ಐದು ನಿಮಿಷದಲ್ಲಿ ನಮ್ಮ ಕ್ಯಾಮರಾಮೆನ್ ಬರ್ತಾನೆ’’

ಕಳ್ಳ
ಒಬ್ಬ ಕಳ್ಳ ಜೈಲಿನಿಂದ ತಪ್ಪಿಸಿಕೊಂಡು ಬಂದು ಸಂತನ ಆಶ್ರಮದಲ್ಲಿ ಅವಿತುಕೊಂಡ.
ಕೆಲ ದಿನ ಅಲ್ಲೇ ಇದ್ದು, ಅಲ್ಲಿನ ವಾತಾವರಣ ಅವನ ಮನಸ್ಸನ್ನು ಬದಲಿಸಿತು. ಕಳ್ಳ ಸಂತನಿಂದ ಶಿಷ್ಯತ್ವ ಸ್ವೀಕರಿಸಿದ.
ಒಂದು ದಿನ ಕಳ್ಳ ಆಶ್ರಮದಲ್ಲಿರುವುದು ಪೊಲೀಸರಿಗೆ ತಿಳಿಯಿತು. ಪೊಲೀಸರು ಆಶ್ರಮಕ್ಕೆ ಬಂದು, ಸಂತನಲ್ಲಿ ಕೇಳಿದರು ‘‘ಇಲ್ಲೊಬ್ಬ ಕಳ್ಳ ಇದ್ದಾನೆಯೆ?’’
‘‘ಹೌದು ಇದ್ದಾನೆ’’ ಸಂತ ಹೇಳಿದ.
‘‘ಎಲ್ಲಿದ್ದಾನೆ?’’ ಪೊಲೀಸರು ಕೇಳಿದರು.
‘‘ನಾನೇ ಕಳ್ಳ. ಒಬ್ಬ ಕಳ್ಳನ ಮನಸ್ಸನ್ನು ಕದ್ದ ದೊಡ್ಡ ಕಳ್ಳ’’ ಸಂತ ಹೇಳಿದ.

ಬಟ್ಟೆ
‘‘ಈ ಹೊಸ ಬಟ್ಟೆಯಲ್ಲಿ ನಾನು ಹೇಗೆ ಕಾಣುತ್ತೇನೆ...’’ ಅವಳು ಕೇಳಿದಳು.
‘‘ನಿನ್ನಿಂದಾಗಿ ಈ ಹೊಸ ಬಟ್ಟೆ ಚೆಂದ ಕಾಣುತ್ತಿದೆ’’ ಜಾಣ ಹುಡುಗ ಉತ್ತರಿಸಿದ.
ಹುಡುಗಿ ಅರಳಿದಳು.

ಕರೆ

ಶಿಷ್ಯ ಸಂತನಲ್ಲಿ ಬಂದು ಕೇಳಿದ ‘‘ಕರೆದಿರಾ?’’
‘‘ಇಲ್ಲವಲ್ಲ’’ ಸಂತ ಹೇಳಿದ.
‘‘ನೀವು ಕರೆದಂತಾಯಿತು...’’ ಶಿಷ್ಯ ಹೇಳಿದ.
‘‘ಹಾಗಾದರೆ ನಾನು ಕರೆದಿರಲೂ ಸಾಕು’’ ಸಂತ ಉತ್ತರಿಸಿದ.

Sunday, October 7, 2012

ಇಂಗ್ಲಿಷ್ ವಿಂಗ್ಲಿಷ್: ಹೃದಯಸ್ಪರ್ಶಿ ಶ್ರೀದೇವಿ ಚಿತ್ರ

ಇಂಗ್ಲಿಷ್ ಇಂದು ಪ್ರತಿ ಮನೆಯನ್ನು ಪ್ರವೇಶಿಸಿದೆ. ತಂದೆ ಮಕ್ಕಳ ನಡುವೆ, ತಾಯಿ ಕುಟುಂಬದ ನಡುವೆ ಅದು ಗೋಡೆಗಳನ್ನು ಕಟ್ಟುತ್ತಿವೆ. ಸಂವಹನನದಲ್ಲೇ ಕೆಲವು ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಈ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತಲೇ, ಒಬ್ಬ ಗೃಹಿಣಿ ಇಂಗ್ಲಿಷ್ ಸವಾಲುಗಳನ್ನು ಎದುರಿಸಿ, ಮನೆಯನ್ನು ಸಮಾಜವನ್ನು ತನ್ನದನ್ನಾಗಿ ಮಾಡಿಕೊಳ್ಳುವ ಕತೆಯೇ ಶ್ರೀದೇವಿ ಕತಾನಾಯಕಿಯಾಗಿ ನಟಿಸಿರುವ ಚಿತ್ರ ‘ಇಂಗ್ಲಿಷ್ ವಿಂಗ್ಲಿಷ್’.

ಶಶಿ ಗೋಡ್‌ಬೋಲೆ ಸಾಮಾನ್ಯ ಮೇಲ್ಮಧ್ಯಮ ವರ್ಗಕ್ಕೆ ಸೇರಿದ ಎರಡು ಮಕ್ಕಳ ತಾಯಿ. ಅವರು ಲಾಡು ಮಾಡುವುದರಲ್ಲಿ ಪರಿಣತರು. ಲಾಡು ತಯಾರಿಕೆಯಲ್ಲಿ ಅವರು ಎಷ್ಟು ಪರಿಣತರೆಂದರೆ ಅದರ ವ್ಯಾಪಾರವನ್ನೂ ಮಾಡುತ್ತಾರೆ.ಆದರೆ ಅವರಲ್ಲಿ ಇಲ್ಲದಿರುವ ಒಂದು ಪರಿಣತಿಯೆಂದರೆ ಇಂಗ್ಲಿಷ್ ಮಾತನಾಡುವುದು. ಇದರಿಂದಾಗಿ ಆಕೆ ಸ್ವತಃ ಗಂಡ, ಮಕ್ಕಳ ಪಾಲಿಗೇ ತಮಾಷೆಯ ವಸ್ತುವಾಗುತ್ತಾಳೆ. ಗಂಡ (ಆದಿಲ್ ಹುಸೇನ್) ಮತ್ತು ಹದಿ ಹರಯದ ಮಗಳ (ನವಿಕಾ ಕೋಟಿಯ) ಜೊತೆಗೆ ಸಂಘರ್ಷಕ್ಕೂ ಕಾರಣವಾಗುತ್ತದೆ. ಇಂಗ್ಲಿಷ್ ಶ್ರೇಷ್ಠತೆಯ ಭ್ರಮೆ ಮತ್ತು ಅದರಲ್ಲಿ ಸಿಕ್ಕಿ ನಲುಗಾಡುವ ಭಾರತೀಯ ಮಹಿಳೆಯ ಹೃದಯ ಹಿಂಡುವ ಕತೆಯನ್ನು ಅತ್ಯಂತ ತಮಾಷೆಯಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಶ್ರೀದೇವಿಗಾಗಿ ಈ ಚಿತ್ರವೋ, ಅಥವಾ ಈ ಚಿತ್ರಕ್ಕಾಗಿ ಶ್ರೀದೇವಿಯೋ ಎಂಬಂತೆ ಅವಿನಾಭಾವವಾಗಿ ಗೃಹಿಣಿ ಪಾತ್ರದಲ್ಲಿ ಕರಗಿ ಹೋಗಿದ್ದಾರೆ ಶ್ರೀದೇವಿ.

ಅನಿರೀಕ್ಷಿತವಾಗಿ ಅಮೆರಿಕಕ್ಕೆ ಹೋಗುವ ಅವಕಾಶವನ್ನು ಪಡೆದ ಶಶಿ ಗೋಡ್‌ಬೋಲೆ, ಅಲ್ಲಿ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್‌ಗೆ ಸೇರುವ ಮೂಲಕ ನಿಜವಾದ ಕತೆ ತೆರೆದುಕೊಳ್ಳುತ್ತದೆ. ಅಲ್ಲಿ ಸ್ಪಾನಿಶ್ ಅಜ್ಜಿ ಇವಾ (ರುತ್ ಅಗ್ವಿಲರ್), ತಮಿಳು ಸಾಫ್ಟ್‌ವೇರ್ ಎಂಜಿನಿಯರ್ ರಾಮ (ರಾಜೀವ್ ರವೀಂದ್ರನಾಥನ್), ಚೀನೀ ಸೌಂದರ್ಯ ತಜ್ಞೆ ಯೂ ಸನ್ (ಮರಿಯಾ ರೊಮಾನೊ), ಫ್ರೆಂಚ್ ಅಡುಗೆಯವ ಲಾರಂಟ್ (ಮೆಹದಿ ನೆಬೂ), ಪಾಕಿಸ್ತಾನಿ ಕ್ಯಾಬ್ ಚಾಲಕ ಸಲ್ಮಾನ್ ಖಾನ್ (ಸುಮೀತ್ ವ್ಯಾಸ್) ಮತ್ತು ಆಫ್ರಿಕನ್ ಡ್ಯಾನ್ಸರ್ ಉಡುಂಬ್ಕೆ ಮುಂತಾದವರು ಶಶಿ ಗೋಡ್‌ಬೋಲೆಯ ಸಂಕಟದಲ್ಲಿ ಜೊತೆಯಾಗುತ್ತಾರೆ. ಇಂಗ್ಲಿಷ್ ಶಿಕ್ಷಕ ಡೇವಿಡ್ (ಕೋರಿ ಹಿಬ್ಸ್) ಮೂಲಕ ತಮ್ಮ ದೌರ್ಬಲ್ಯಗಳನ್ನು ಮೀರಿ ನಿಲ್ಲಲು ಹವಣಿಸುತ್ತಾರೆ. ಒಂದು ರೀತಿಯಲ್ಲಿ ಈ ಪಾತ್ರ, ತನ್ನ ಅಸ್ತಿತ್ವವನ್ನು ಹೊಸದಾಗಿ ಹುಡುಕಿಕೊಳ್ಳುವ ಪ್ರಯತ್ನವೂ ಆಗಿದೆ. ಗೃಹಿಣಿಯಾಗಿ ಸಂತೃಪ್ತಮನೋಭಾವದಲ್ಲಿ ಮುಗಿದು ಹೋಗಿರುವ ಪಾತ್ರ, ಇಂಗ್ಲಿಷ್ ಮೂಲಕ ಮರು ಜೀವ ಪಡೆಯುತ್ತದೆ. ಮಗಳೊಂದಿಗಿನ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸುವುದಕ್ಕೂ ಇದು ಸಹಾಯ ಮಾಡುತ್ತದೆ. ಉಳಿದ ಪಾತ್ರಗಳ ಮೂಲಕ ತನ್ನನ್ನು ತಾನು ಗಟ್ಟಿಗೊಳಿಸುತ್ತಾ ಹೋಗುತ್ತಾಳೆ ಶಶಿ. ಇದೊಂದು ರೀತಿಯಲ್ಲಿ ಎನ್‌ಆರ್‌ಐ ಕನಸುಗಳ ನಡುವೆ ಒದ್ದಾಡುವ ಪ್ರತಿ ಭಾರತೀಯ ಮಹಿಳೆಯ ಕತೆಯೂ ಹೌದು. ಬಹುಶಃ ಇದು ಸ್ತ್ರೀ ಸಂವೇದನೆ, ಮಹಿಳಾ ಸಬಲೀಕರಣದ ಉದ್ದೇಶ ಹೊಂದಿರುವ ಇತ್ತೀಚೆಗೆ ಬಂದ ಅತ್ಯುತ್ತಮ ಚಿತ್ರ ಎನ್ನುವುದರಲ್ಲಿ ಯಾವುದೇ ಅನುಮಾನವಲ್ಲ.

ಇದು ಗೌರಿ ಶಿಂದೆ ನಿರ್ದೇಶನದ ಮೊದಲ ಚಿತ್ರ. ಈವರೆಗೆ ಜಾಹೀರಾತು ಚಿತ್ರಗಳನ್ನು ನಿರ್ಮಿಸುತ್ತಿದ್ದ ಗೌರಿ ಈಗ ಸಿನೇಮಾ ಕತೆಗಾರ್ತಿ ಹಾಗೂ ನಿರ್ದೇಶಕಿಯಾಗಿಯೂ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅದರ ಫಲಿತಾಂಶವೇ ಸುಂದರ, ಸೂಕ್ಷ್ಮ ಮತ್ತು ಅತ್ಯುತ್ತಮ ಈ ಚಿತ್ರ. ಈ ಚಿತ್ರ ನಿಮ್ಮನ್ನು ನಗಿಸುತ್ತದೆ, ಅಳಿಸುತ್ತದೆ ಮತ್ತು ಚಿಂತಿಸುವಂತೆಯೂ ಮಾಡುತ್ತದೆ. ಇಲ್ಲಿನ ಯಾವ ಪಾತ್ರಗಳೂ ಕೃತಕವಾಗಿಲ್ಲ. ತೀರಾ ಸಹಜವಾಗಿ, ಮನಮುಟ್ಟುವಂತಿದೆ.

ಅಮಿತ್ ತ್ರಿವೇದಿಯ ಸಂಗೀತ ಪ್ರೇಕ್ಷಕರನ್ನು ಮತ್ತೆ ಮತ್ತೆ ಗುನುಗುಟ್ಟುವಂತೆ ಮಾಡುತ್ತದೆ. ಸಂಗೀತ ಸಹಜವಾಗಿ ಹರಿಯುತ್ತದೆ.
ಶ್ರೀದೇವಿ ಚಿತ್ರದ ಆಧಾರಸ್ತಂಭ. ಕಾತರತೆ, ಕೋಪ, ಅಹಂಕಾರ, ದುಃಖ, ಆಕರ್ಷಣೆ ಯಾವುದೇ ಇರಲಿ, ನಟಿ ಮಾತುಗಳಿಂದ ಅಥವಾ ಮಾತುಗಳಿಲ್ಲದೆಯೂ ಭಾವನೆಗಳನ್ನು ಲೀಲಾಜಾಲವಾಗಿ ಹರಿಯಬಿಡುತ್ತಾರೆ. 15 ವರ್ಷಗಳ ಬಿಡುವಿನ ಬಳಿಕ ಬೆಳ್ಳಿ ತೆರೆಗೆ ಬಂದಿರುವ ಶ್ರೀದೇವಿಯ ನಟನೆ ಇಲ್ಲಿ ಅದ್ಭುತವಾಗಿದೆ. ಎಷ್ಟೆಂದರೆ ಚಿತ್ರ ಮುಗಿದ ತುಂಬಾ ಹೊತ್ತಿನ ಬಳಿಕವೂ ನೀವು ಅದೇ ಗುಂಗಿನಲ್ಲಿರುತ್ತೀರಿ.

Thursday, October 4, 2012

"ಓ ಮೈ ಗಾಡ್!": ಕಲಕಿದ ಚಿತ್ರ

 
 "ಓ ಮೈ ಗಾಡ್!" ಹಿಂದಿ ಚಿತ್ರ ನೋಡಿದೆ. ಒಂದು ಹಾಸ್ಯ ಚಿತ್ರವೆಂದು ಭಾವಿಸಿ ಒಳ ಹೊಕ್ಕ ನನ್ನ ಮನದ ಆಳವನ್ನು ಹಾಸ್ಯದ ಗರುಡ ಪಾತಾಳ ಹಾಕಿ ಕಲಕಿದ ಚಿತ್ರ ಇದು. ಆಸ್ತಿಕರು, ನಾಸ್ತಿಕರು ಜೊತೆಯಾಗಿ ಕೂತು ನೋಡಬೇಕಾದ ಚಿತ್ರ. ದೇವರ ನಂಬಿಕೆಯನ್ನು ಛಿದ್ರಗೊಳಿಸುತ್ತ ನಿಮ್ಮ ಎದೆಯಲ್ಲಿ ನಿಜವಾದ ದೇವರೊಂದನ್ನು ಈ ಚಿತ್ರ ಪ್ರತಿಷ್ಟ್ಹಾಪಿಸುತ್ತದೆ. ಪರೇಶ್ ರಾವೆಲ್ ನಿಜಕ್ಕೂ ಪರೇಶ್ ರಾವೆಲ್ ಥರವೇ ನಟಿಸಿದ್ದಾರೆ. ಅಕ್ಷಯ್ ಕುಮಾರ್, ದೇವರೇ ಕೃಷ್ಣನ ರೂಪದಲ್ಲಿ ಧರೆಗಿಳಿದು ಬಂದಂತೆ...ಹಿತವಾಗಿ, ಹದವಾಗಿ, ಎಲ್ಲೂ ಪಾತ್ರದ ಗಾಂಭೀರ್ಯ ಕೆಡದಂತೆ ನಟಿಸಿದ್ದಾರೆ. ಹಾಂ...ಹೇಳಲು ಮರೆತೇ....ಇಡೀ ಚಿತ್ರದಲ್ಲಿ ರವಿಶಂಕರ್ ಗುರೂಜಿಯನ್ನು ಹೋಲುವ ಪಾತ್ರದಲ್ಲಿ ನಟಿಸಿದ ಮಿಥುನ್ ಚಕ್ರವರ್ತಿ ಪ್ರೇಕ್ಷಕರಿಗೊಂದು ಬೋನಸ್. ಗುರೂಜಿಯನ್ನು ಪ್ರತಿ ಹೆಜ್ಜೆಯಲ್ಲೂ ಅವರು ಅನುಭವಿಸಿ ನಟಿಸಿದ್ದಾರೆ. ನಗುತ್ತ ನಗುತ್ತ ನಿಮ್ಮ ಕಣ್ಣಿಂದ ಎರಡು ಹನಿ ಕಣ್ಣೀರು ದೇವರ ಹೆಸರಲ್ಲಿ ಉದುರದಿದ್ದರೆ ಮತ್ತೆ ಹೇಳಿ. ಅಂದ ಹಾಗೆ...ಈ ಚಿತ್ರ ಗುಜರಾತಿ ನಾಟಕ "ಕಾಂಜಿ ವರ್ಸಸ್ ಕಾಂಜಿ" ನಾಟಕವನ್ನು ಆಧರಿಸಿದೆ.

Wednesday, October 3, 2012

ಗಾಂಧಿಗೊಂದು ಗುಡಿಯ ಕಟ್ಟಿ...


ಈ ಲೇಖನ ನಾನು ಸೆಪ್ಟಂಬರ್ 12, 2008 ರಲ್ಲಿ ಬರೆದಿರುದು. ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಮತ್ತೆ ಗುಜರಿ ಅಂಗಡಿಗೆ ಹಾಕಿದ್ದೇನೆ.

ಕಳೆದ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ವಿವಿಧ ಮಾಧ್ಯಮಗಳಲ್ಲಿ ವರದಿಯ ರೂಪದಲ್ಲಿ ವಿಚಿತ್ರವೊಂದು ಪ್ರಸಾರಗೊಂಡಿತು. ಅದೇನೆಂದರೆ, ದಾವಣಗೆರೆ, ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಊರುಗಳಲ್ಲಿ ಗಾಂಧೀಜಿಯ ದೇವಸ್ಥಾನಗಳು ತೆರೆದಿರುವುದು. ಈ ದೇವಸ್ಥಾನಗಳಲ್ಲಿ ಗಾಂಧೀಜಿಯನ್ನು ದೇವರಂತೆ ಪ್ರತಿಷ್ಠಾಪಿಸಲಾಗಿದ್ದು, ಪೂಜೆ, ಆರತಿ, ಮಂಗಳಾರತಿ ಇತ್ಯಾದಿ ವೈದಿಕ ಆಚರಣೆಗಳು ಎಲ್ಲ ದೇವಸ್ಥಾನಗಳಲ್ಲಿ ನಡೆಯುವಂತೆ ನಡೆಯುತ್ತಿದ್ದವು. ಮಾಧ್ಯಮಗಳಲ್ಲಿ ಈ ದೇವಸ್ಥಾನಗಳನ್ನು ವೈಭವೀಕರಿಸಲಾಗುತ್ತಿತ್ತು. ಒಂದು ಚಾನೆಲ್‌ನಲ್ಲಂತೂ ರಾಜ್ಯದ ವಿವಿಧೆಡೆಗಳಲ್ಲಿರುವ ಗಾಂಧೀ ದೇವಸ್ಥಾನಗಳು, ಅವುಗಳ ದಿನಚರಿಯ ಕುರಿತು ಸ್ವಾತಂತ್ರೋತ್ಸವದ ವಿಶೇಷ ಎನ್ನುವ ರೀತಿಯಲ್ಲಿ ತೋರಿಸಲಾಗುತ್ತಿತ್ತು. ‘ಹೇಗೆ ಗ್ರಾಮೀಣ ಪ್ರದೇಶದ ಜನರು ಗಾಂಧಿಯಿಂದ ಪ್ರಭಾವಿತರಾಗಿದ್ದಾರೆ?’ ಎನ್ನುವುದನ್ನು ಹೇಳುವ ಪ್ರಯತ್ನವೂ ಇಲ್ಲಿ ನಡೆಯುತ್ತಿತ್ತು. ನಿಜಕ್ಕೂ ಇಲ್ಲಿ ಗಾಂಧಿಯನ್ನು ಗೌರವಿಸಲಾಗುತ್ತಿದೆಯೇ? ಈ ಗಾಂಧಿಗೆ ಗುಡಿಯನ್ನು ಕಟ್ಟಿದವರು ನಿಜಕ್ಕೂ ಗಾಂಧೀಜಿಯ ಹಿಂಬಾಲಕರೇ? ಗಾಂಧಿಗೆ ಮಂಗಳಾರತಿ ಎತ್ತುತ್ತಿರುವ ಪೂಜಾರಿಗೆ ಗಾಂಧೀಜಿಯ ಬಗ್ಗೆ ಏನಾದರೂ ಗೊತ್ತಿದೆಯೇ? ಈ ಗುಡಿಯ ಅಂತಿಮ ಉದ್ದೇಶವಾದರೂ ಏನು? ಸ್ವಾತಂತ್ರದ ದಿನ ನನ್ನ ತಲೆ ಕೊರೆಯತೊಡಗಿತು.

ಗಾಂಧೀಜಿ ಶ್ರೀರಾಮಚಂದ್ರನ ಪರಮ ಭಕ್ತ. ಅವರಿಗೆ ಶ್ರೀರಾಮ ಒಂದು ನೆಪ. ಅದೊಂದು ಸಂಕೇತವೇ ಹೊರತು, ಅವರ ಪಾಲಿಗೆ ಯಾವತ್ತೂ ಸ್ಥಾವರವಾಗಿರಲಿಲ್ಲ. ಆತನ ವೌಲ್ಯ, ಆದರ್ಶಗಳನ್ನು ಗೌರವಿಸುತ್ತಿದ್ದವರು. ಆದರೆ ಯಾವತ್ತೂ ಅವರು ‘ಅಯೋಧ್ಯೆಯಲ್ಲಿ ರಾಮನ ದೇವಸ್ಥಾನವಾಗಬೇಕು’ ಎಂದವರಲ್ಲ. ಅಷ್ಟೇ ಏಕೆ, ಪರಮಶ್ರೇಷ್ಠ ಹಿಂದೂ ಆಗಿರುವ ಮಹಾತ್ಮಾ ಗಾಂಧೀಜಿ ತನ್ನ ಜೀವನಾವಧಿಯಲ್ಲಿ ಒಂದೇ ಒಂದು ಗುಡಿಯನ್ನು ಕಟ್ಟಿದವರೂ ಅಲ್ಲ. ಗಾಂಧೀಜಿಯ ಬದುಕಿನಲ್ಲಿ ಅವರು ಇಂತಹಾ ದೇವಸ್ಥಾನದ ಆರಾಧಕರು ಎಂದೂ ಎಲ್ಲೂ ಉಲ್ಲೇಖವಾಗಿಲ್ಲ. ಆರಾಧನೆಯು ಅವರಿಗೆ ಜನರನ್ನು ಒಂದೆಡೆ ಸೇರಿಸುವ ಒಂದು ದಾರಿಯಾಗಿತ್ತು. ಆದುದರಿಂದಲೇ ಅವರು ‘ಈಶ್ವರ ಅಲ್ಲಾ ತೇರೇ ನಾಮ್’ ಎಂದರು. ಯಾವತ್ತೂ ಅವರು ಪೂಜೆಗಾಗಿ ಗುಡಿಗೆ ತೆರಳಿದವರಲ್ಲ. ತನ್ನ ಆಶ್ರಮದಲ್ಲಿ ರಾಮಭಜನೆಯನ್ನು ಏರ್ಪಡಿಸುತ್ತಿದ್ದರು. ಎಲ್ಲ ಧರ್ಮೀಯರ ಜೊತೆ ಒಂದಾಗಿ ಅದನ್ನು ನೆರವೇರಿಸುತ್ತಿದ್ದರು. ಅವರಿಗೆ ರಾಮ ವಿಗ್ರಹ ಆಗಿರಲಿಲ್ಲ. ಸತ್ಯ, ವಚನ ಪರಿಪಾಲನೆ ಮೊದಲಾದ ಆದರ್ಶಗಳಿಗೆ ಅವರು ರಾಮನ ಹೆಸರನ್ನು ಕೊಟ್ಟಿದ್ದರು. ಅದು ಬರೇ ಹೆಸರು ಅಷ್ಟೇ. ಆ ಹೆಸರನ್ನು ಈಶ್ವರ, ಅಲ್ಲಾ ಎಂದು ವ್ಯತ್ಯಾಸಗೊಳಿಸಿದರೂ ಅವರಿಗೆ ಅದರಲ್ಲೇನೂ ವ್ಯತ್ಯಾಸ ಕಾಣುತ್ತಿರಲಿಲ್ಲ. ಸತ್ಯದಲ್ಲಿ ಅವರು ದೇವರನ್ನು ಕಾಣುವ ಪ್ರಯತ್ನ ಮಾಡುತ್ತಿದ್ದರು. ಯಾವತ್ತೂ ತನ್ನ ಪೂಜೆಗಾಗಿ ಅವರು ವೈದಿಕ ಬ್ರಾಹ್ಮಣರನ್ನು ಆಶ್ರಮದೊಳಗೆ ಬಿಟ್ಟುಕೊಟ್ಟ ಉದಾಹರಣೆಯಿಲ್ಲ. ವೈದಿಕ ಆಚರಣೆಯಲ್ಲಿ ನಂಬಿಕೆ ಇದ್ದವರು ಗಾಂಧೀಜಿಯನ್ನು ಗೌರವಿಸುವ ಉದಾಹರಣೆಯೂ ಇತಿಹಾಸದಲ್ಲಿಲ್ಲ. ಗಾಂಧೀಜಿ ಒಮ್ಮೆ ದೇಶದ ಎಲ್ಲಾ ದೇವಸ್ಥಾನಗಳನ್ನು ಸಂದರ್ಶಿಸಿದ್ದರು. ಆದರೆ ಅಲ್ಲಿರುವ ಜಾತೀಯತೆ ಮತ್ತು ಪರಿಸರ ಮಾಲಿನ್ಯವನ್ನು ಕಂಡ ಗಾಂಧೀಜಿ, ಆ ದೇವಸ್ಥಾನಗಳ ಮೇಲೆ, ಪುಣ್ಯಕ್ಷೇತ್ರಗಳ ಮೇಲೆ ರೋಸಿ ಮಾತನಾಡಿದ್ದರು. ಅದೇ ಕೊನೆ. ಮತ್ತೆಂದಿಗೂ ಅವರು ದೇವಸ್ಥಾನಗಳನ್ನು, ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುವ ಸಾಹಸವನ್ನು ಮಾಡಲಿಲ್ಲ. ಗಾಂಧೀಜಿಯನ್ನು ಕೊಂದವರು ಯಾರು ಎನ್ನುವುದನ್ನು ನಾವು ಒಂದು ಕ್ಷಣ ನೆನೆಯೋಣ. ಇಂದು ರಾಮನಿಗಾಗಿ ಗುಡಿಯನ್ನು ಕಟ್ಟಲು ಹೋರಾಡುತ್ತಿರುವವರೇ ಈ ದೇಶದ ಶ್ರೇಷ್ಠ ರಾಮಭಕ್ತನನ್ನು ಗುಂಡಿಟ್ಟು ಕೊಂದರು. ಗಾಂಧೀಜಿ ರಾಮನ ಕುರಿತಂತೆ ಮಾತನಾಡುತ್ತಿದ್ದರು. ಗಾಂಧಿಯನ್ನು ಕೊಂದವರು ರಾಮನ ಕುರಿತಂತೆಯೇ ಮಾತನಾಡುತ್ತಾರೆ. ಗಾಂಧಿ ಸದಾ ರಾಮನ ಕುರಿತಂತೆ, ಆತನ ವೌಲ್ಯಗಳ ಕುರಿತಂತೆ ಮಾತನಾಡುತ್ತಿದ್ದರು. ಆದರೆ ರಾಮನಿಗೆ ಗುಡಿ ಕಟ್ಟುವ ಕುರಿತಂತೆ ಯಾವತ್ತೂ ಮಾತನಾಡಿರಲಿಲ್ಲ. ರಾಮನ ಕುರಿತಂತೆ ಗಾಂಧಿ ಮಾತನಾಡುತ್ತಿದ್ದಾಗ ಅವರ ಅಕ್ಕಪಕ್ಕದಲ್ಲೇ ಅಬುಲ್ ಕಲಾಂ ಆಝಾದ್, ಖಾನ್ ಅಬ್ದುಲ್ ಗಫಾರ್ ಖಾನ್‌ರಂತಹಾ ಮುಸ್ಲಿಂ ವಿದ್ವಾಂಸರು ತಲೆದೂಗುತ್ತಿದ್ದರು. ಆದರೆ ಸದ್ಯದ ದಿನಗಳಲ್ಲಿ ಕೆಲವರಿಗೆ ರಾಮನ ಬಗ್ಗೆ ಮಾತನಾಡುವುದೆಂದರೆ, ಈ ದೇಶದ ಹಿಂದೂಗಳನ್ನು ಮುಸ್ಲಿಮರ ಮೇಲೆ ಎತ್ತಿ ಕಟ್ಟುವುದು ಎಂದರ್ಥ. ಸಂಘ ಪರಿವಾರ ರಾಮನಿಗೆ ಗುಡಿಯನ್ನು ಕಟ್ಟ ಹೊರಟಿದ್ದರೆ, ಗಾಂಧೀಜಿ ರಾಮನನ್ನು ಗುಡಿಯಿಂದ ಬಿಡುಗಡೆ ಮಾಡಲು ಬಯಸಿದ್ದರು. ಗುಡಿಯ ಹೊರಗಿರುವ ರಾಮ ಬೇರೆ, ಒಳಗಿರುವ ರಾಮ ಬೇರೆ. ಒಳಗಿರುವ ರಾಮನಿಗೆ ವಾರಸುದಾರರಿರುತ್ತಾರೆ. ಆ ಗುಡಿಯ ಒಡೆಯರು, ಆ ಗುಡಿಯ ಪೂಜಾರಿಗಳು, ಆ ಗುಡಿಯನ್ನು ಸುತ್ತುವರಿದಿರುವ ಜಾತಿ, ಧರ್ಮ ಇವೆಲ್ಲವುಗಳಿಂದ ರಾಮ ಬಂಧಿತನಾಗಿರುತ್ತಾನೆ. ಒಂದು ರೀತಿಯಲ್ಲಿ ಅಲ್ಲಿ ರಾಮನಿರುವುದೇ ಇಲ್ಲ. ಬರೇ ರಾಮನ ವಿಗ್ರಹ ಮಾತ್ರವಿರುತ್ತದೆ. ಇದು ರಾಮನ ಕುರಿತಂತೆ ಗಾಂಧಿಯ ತಿಳುವಳಿಕೆಯಾಗಿತ್ತು. ರಾಮ ಹುಟ್ಟಿದುದು ಅಯೋಧ್ಯೆಯಲ್ಲಲ್ಲ, ಗೋಡ್ಸೆಯ ಗುಂಡೇಟಿಗೆ ಉರುಳಿಬಿದ್ದ ಗಾಂಧಿಯ ಉದ್ಗಾರದಲ್ಲಿ ರಾಮ ಹುಟ್ಟಿದ ಎನ್ನುವುದು ಈ ಕಾರಣಕ್ಕೆ.
ಇಂತಹ ಗಾಂಧಿಯನ್ನು ಸಂಪೂರ್ಣ ಇಲ್ಲವಾಗಿಸುವ ಪ್ರಯತ್ನವಾಗಿ, ಗಾಂಧೀಜಿಗಾಗಿಯೇ ಗುಡಿಯನ್ನು ಕಟ್ಟುವ ಪ್ರಯತ್ನ ನಡೆಯುತ್ತಿದೆ. ಗೋಡ್ಸೆಯ ಗುಂಡಿನಿಂದ ಸಾಯದ ಗಾಂಧಿಯನ್ನು ಗುಡಿಯ ಕಲ್ಲುಗಳಿಂದ ಸಮಾಧಿ ಮಾಡುವ ಪ್ರಯತ್ನ ಇದಾಗಿದೆ. ಗಾಂಧೀಜಿಗೆ ದೇವಸ್ಥಾನವನ್ನು ಕಟ್ಟಿ, ಪೂಜೆ ಸಲ್ಲಿಸುವುದನ್ನು ನಾವು ಈ ಕಾರಣಕ್ಕಾಗಿ ಕಟುವಾಗಿ ವಿರೋಧಿಸಬೇಕಾಗಿದೆ. ಟಿವಿ ಚಾನೆಲ್‌ಗಳಲ್ಲಿ ಪೂಜಾರಿಯೊಬ್ಬ ಗಾಂಧೀಜಿಯ ವಿಗ್ರಹ ಮುಂದೆ ಆರತಿ ಎತ್ತಿ, ಗಂಟೆ ಆಡಿಸುತ್ತಿದ್ದ. ಕೆಳಜಾತಿಯವರನ್ನು ಕಂಡರೆ ಮೈಲು ದೂರ ಹಾರುವ ಇವರಿಂದ ಗಾಂಧೀಜಿಯನ್ನು ಆರಾಧಿಸಲು, ಪೂಜಿಸಲು ಸಾಧ್ಯವೇ? ನಾಳೆ ಈ ಗುಡಿ ದೊಡ್ಡ ದೇವಸ್ಥಾನವಾಗಿ ಗಾಂಧೀಜಿಯ ಅಕ್ಕಪಕ್ಕದಲ್ಲಿ ರಾಮ, ಕೃಷ್ಣರು ನೆಲೆಯಾಗಬಹುದು. ಯಾವುದಾದರೂ ಒಂದು ಮಠ ಇದರ ಉಸ್ತುವಾರಿ ನೋಡಿಕೊಳ್ಳಲು ಮುಂದಾಗಬಹುದು. ಬಳಿಕ, ಎಲ್ಲಾ ದೇವಸ್ಥಾನಗಳಿಗೂ ಅಮರಿಕೊಂಡಂತೆ, ಈ ಗಾಂಧಿಯ ದೇವಸ್ಥಾನಕ್ಕೂ ಸಂಘ ಪರಿವಾರ ಅಮರಿಕೊಳ್ಳಬಹುದು. ಈ ದೇವಸ್ಥಾನದ ಆವರಣದಲ್ಲೆ ಗೋಡ್ಸೆಯ ಹಿಂಬಾಲಕರು ತಮ್ಮ ಬೈಠಕ್‌ಗಳನ್ನು ನಡೆಸಬಹುದು. ಗಾಂಧೀಜಿಯನ್ನು ಕೊಲ್ಲುವುದಕ್ಕೆ ಹುಡುಕಿರುವ ಹೊಸ ದಾರಿ ಇದು.

ಈ ದೇಶದಲ್ಲಿ ದೇವರಿಗಳಿಗೇನೂ ಬರವಿಲ್ಲ. ಅವುಗಳ ಸಾಲಿನಲ್ಲಿ ಗಾಂಧೀಜಿ ನಿಲ್ಲುವುದು ಬೇಡ. ಗಾಂಧೀಜಿ ನಮ್ಮ ಮುಂದೆ ಒಬ್ಬ ಸಾಮಾನ್ಯ ಮನುಷ್ಯನಾಗಿ ಶಾಶ್ವತವಾಗಿ ಇರಲಿ. ಒಬ್ಬ ಮನುಷ್ಯನಾಗಿ ಎಷ್ಟು ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಗಾಂಧೀಜಿ ನಮ್ಮ ಮುಂದಿದ್ದಾರೆ, ಸಕಲ ಮನುಷ್ಯರಿಗೂ ಒಂದು ಭರವಸೆಯಾಗಿ. ಆ ಭರವಸೆಯನ್ನು ನಾವು ಇಲ್ಲವಾಗಿಸುವುದು ಬೇಡ. ಗಾಂಧೀಜಿಯ ಹೆಸರಿನಲ್ಲಿ ಕಟ್ಟಿರುವ ಗುಡಿಗಳು ಗಾಂಧೀಜಿಗೆ ಮಾಡಿರುವ ಅವಮಾನ. ಗಾಂಧೀಜಿಯ ಹೆಸರಲ್ಲಿ ಗ್ರಂಥಾಲಯಗಳು, ಶಾಲೆಗಳು ತೆರೆಯಲಿ. ಯಾವ ಕಾರಣಕ್ಕೂ ಗಾಂಧೀಜಿಗೆ ಗುಡಿಯ ಹೆಸರಿನಲ್ಲಿ ಸಮಾಧಿ ಕಟ್ಟುವುದು ಬೇಡ.
ಸೆಪ್ಟಂಬರ್ 12, 2008

Thursday, September 27, 2012

ಮಗುವೊಂದು
ತನ್ನ ಕಂಪಾಸು ಪೆಟ್ಟಿಗೆಯಲ್ಲಿ
ತಿನ್ನದೇ ಬಚ್ಚಿಟ್ಟ
ಪೆಪ್ಪರಮೆಂಟು
ಮರಣ!
ನಾನೊಂದು
ಕಾಗದದ ಹಾಳೆ...
ಕೆಟ್ಟ ಕವಿಯೊಬ್ಬನ
ಕೈಯಲ್ಲಿ
ಕವಿತೆ ಗೀಚೂದಕ್ಕೆ
ಬಳಕೆಯಾಗುವ ಬದಲು
ತುಂಟ ಮಗುವಿನ
ಕೈಯಲ್ಲಿ
ಹರಿದು ಚೂರಾಗಲು
ಇಷ್ಟ ಪಡುವೆ