Sunday, October 7, 2012

ಇಂಗ್ಲಿಷ್ ವಿಂಗ್ಲಿಷ್: ಹೃದಯಸ್ಪರ್ಶಿ ಶ್ರೀದೇವಿ ಚಿತ್ರ

ಇಂಗ್ಲಿಷ್ ಇಂದು ಪ್ರತಿ ಮನೆಯನ್ನು ಪ್ರವೇಶಿಸಿದೆ. ತಂದೆ ಮಕ್ಕಳ ನಡುವೆ, ತಾಯಿ ಕುಟುಂಬದ ನಡುವೆ ಅದು ಗೋಡೆಗಳನ್ನು ಕಟ್ಟುತ್ತಿವೆ. ಸಂವಹನನದಲ್ಲೇ ಕೆಲವು ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಈ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತಲೇ, ಒಬ್ಬ ಗೃಹಿಣಿ ಇಂಗ್ಲಿಷ್ ಸವಾಲುಗಳನ್ನು ಎದುರಿಸಿ, ಮನೆಯನ್ನು ಸಮಾಜವನ್ನು ತನ್ನದನ್ನಾಗಿ ಮಾಡಿಕೊಳ್ಳುವ ಕತೆಯೇ ಶ್ರೀದೇವಿ ಕತಾನಾಯಕಿಯಾಗಿ ನಟಿಸಿರುವ ಚಿತ್ರ ‘ಇಂಗ್ಲಿಷ್ ವಿಂಗ್ಲಿಷ್’.

ಶಶಿ ಗೋಡ್‌ಬೋಲೆ ಸಾಮಾನ್ಯ ಮೇಲ್ಮಧ್ಯಮ ವರ್ಗಕ್ಕೆ ಸೇರಿದ ಎರಡು ಮಕ್ಕಳ ತಾಯಿ. ಅವರು ಲಾಡು ಮಾಡುವುದರಲ್ಲಿ ಪರಿಣತರು. ಲಾಡು ತಯಾರಿಕೆಯಲ್ಲಿ ಅವರು ಎಷ್ಟು ಪರಿಣತರೆಂದರೆ ಅದರ ವ್ಯಾಪಾರವನ್ನೂ ಮಾಡುತ್ತಾರೆ.ಆದರೆ ಅವರಲ್ಲಿ ಇಲ್ಲದಿರುವ ಒಂದು ಪರಿಣತಿಯೆಂದರೆ ಇಂಗ್ಲಿಷ್ ಮಾತನಾಡುವುದು. ಇದರಿಂದಾಗಿ ಆಕೆ ಸ್ವತಃ ಗಂಡ, ಮಕ್ಕಳ ಪಾಲಿಗೇ ತಮಾಷೆಯ ವಸ್ತುವಾಗುತ್ತಾಳೆ. ಗಂಡ (ಆದಿಲ್ ಹುಸೇನ್) ಮತ್ತು ಹದಿ ಹರಯದ ಮಗಳ (ನವಿಕಾ ಕೋಟಿಯ) ಜೊತೆಗೆ ಸಂಘರ್ಷಕ್ಕೂ ಕಾರಣವಾಗುತ್ತದೆ. ಇಂಗ್ಲಿಷ್ ಶ್ರೇಷ್ಠತೆಯ ಭ್ರಮೆ ಮತ್ತು ಅದರಲ್ಲಿ ಸಿಕ್ಕಿ ನಲುಗಾಡುವ ಭಾರತೀಯ ಮಹಿಳೆಯ ಹೃದಯ ಹಿಂಡುವ ಕತೆಯನ್ನು ಅತ್ಯಂತ ತಮಾಷೆಯಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಶ್ರೀದೇವಿಗಾಗಿ ಈ ಚಿತ್ರವೋ, ಅಥವಾ ಈ ಚಿತ್ರಕ್ಕಾಗಿ ಶ್ರೀದೇವಿಯೋ ಎಂಬಂತೆ ಅವಿನಾಭಾವವಾಗಿ ಗೃಹಿಣಿ ಪಾತ್ರದಲ್ಲಿ ಕರಗಿ ಹೋಗಿದ್ದಾರೆ ಶ್ರೀದೇವಿ.

ಅನಿರೀಕ್ಷಿತವಾಗಿ ಅಮೆರಿಕಕ್ಕೆ ಹೋಗುವ ಅವಕಾಶವನ್ನು ಪಡೆದ ಶಶಿ ಗೋಡ್‌ಬೋಲೆ, ಅಲ್ಲಿ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್‌ಗೆ ಸೇರುವ ಮೂಲಕ ನಿಜವಾದ ಕತೆ ತೆರೆದುಕೊಳ್ಳುತ್ತದೆ. ಅಲ್ಲಿ ಸ್ಪಾನಿಶ್ ಅಜ್ಜಿ ಇವಾ (ರುತ್ ಅಗ್ವಿಲರ್), ತಮಿಳು ಸಾಫ್ಟ್‌ವೇರ್ ಎಂಜಿನಿಯರ್ ರಾಮ (ರಾಜೀವ್ ರವೀಂದ್ರನಾಥನ್), ಚೀನೀ ಸೌಂದರ್ಯ ತಜ್ಞೆ ಯೂ ಸನ್ (ಮರಿಯಾ ರೊಮಾನೊ), ಫ್ರೆಂಚ್ ಅಡುಗೆಯವ ಲಾರಂಟ್ (ಮೆಹದಿ ನೆಬೂ), ಪಾಕಿಸ್ತಾನಿ ಕ್ಯಾಬ್ ಚಾಲಕ ಸಲ್ಮಾನ್ ಖಾನ್ (ಸುಮೀತ್ ವ್ಯಾಸ್) ಮತ್ತು ಆಫ್ರಿಕನ್ ಡ್ಯಾನ್ಸರ್ ಉಡುಂಬ್ಕೆ ಮುಂತಾದವರು ಶಶಿ ಗೋಡ್‌ಬೋಲೆಯ ಸಂಕಟದಲ್ಲಿ ಜೊತೆಯಾಗುತ್ತಾರೆ. ಇಂಗ್ಲಿಷ್ ಶಿಕ್ಷಕ ಡೇವಿಡ್ (ಕೋರಿ ಹಿಬ್ಸ್) ಮೂಲಕ ತಮ್ಮ ದೌರ್ಬಲ್ಯಗಳನ್ನು ಮೀರಿ ನಿಲ್ಲಲು ಹವಣಿಸುತ್ತಾರೆ. ಒಂದು ರೀತಿಯಲ್ಲಿ ಈ ಪಾತ್ರ, ತನ್ನ ಅಸ್ತಿತ್ವವನ್ನು ಹೊಸದಾಗಿ ಹುಡುಕಿಕೊಳ್ಳುವ ಪ್ರಯತ್ನವೂ ಆಗಿದೆ. ಗೃಹಿಣಿಯಾಗಿ ಸಂತೃಪ್ತಮನೋಭಾವದಲ್ಲಿ ಮುಗಿದು ಹೋಗಿರುವ ಪಾತ್ರ, ಇಂಗ್ಲಿಷ್ ಮೂಲಕ ಮರು ಜೀವ ಪಡೆಯುತ್ತದೆ. ಮಗಳೊಂದಿಗಿನ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸುವುದಕ್ಕೂ ಇದು ಸಹಾಯ ಮಾಡುತ್ತದೆ. ಉಳಿದ ಪಾತ್ರಗಳ ಮೂಲಕ ತನ್ನನ್ನು ತಾನು ಗಟ್ಟಿಗೊಳಿಸುತ್ತಾ ಹೋಗುತ್ತಾಳೆ ಶಶಿ. ಇದೊಂದು ರೀತಿಯಲ್ಲಿ ಎನ್‌ಆರ್‌ಐ ಕನಸುಗಳ ನಡುವೆ ಒದ್ದಾಡುವ ಪ್ರತಿ ಭಾರತೀಯ ಮಹಿಳೆಯ ಕತೆಯೂ ಹೌದು. ಬಹುಶಃ ಇದು ಸ್ತ್ರೀ ಸಂವೇದನೆ, ಮಹಿಳಾ ಸಬಲೀಕರಣದ ಉದ್ದೇಶ ಹೊಂದಿರುವ ಇತ್ತೀಚೆಗೆ ಬಂದ ಅತ್ಯುತ್ತಮ ಚಿತ್ರ ಎನ್ನುವುದರಲ್ಲಿ ಯಾವುದೇ ಅನುಮಾನವಲ್ಲ.

ಇದು ಗೌರಿ ಶಿಂದೆ ನಿರ್ದೇಶನದ ಮೊದಲ ಚಿತ್ರ. ಈವರೆಗೆ ಜಾಹೀರಾತು ಚಿತ್ರಗಳನ್ನು ನಿರ್ಮಿಸುತ್ತಿದ್ದ ಗೌರಿ ಈಗ ಸಿನೇಮಾ ಕತೆಗಾರ್ತಿ ಹಾಗೂ ನಿರ್ದೇಶಕಿಯಾಗಿಯೂ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅದರ ಫಲಿತಾಂಶವೇ ಸುಂದರ, ಸೂಕ್ಷ್ಮ ಮತ್ತು ಅತ್ಯುತ್ತಮ ಈ ಚಿತ್ರ. ಈ ಚಿತ್ರ ನಿಮ್ಮನ್ನು ನಗಿಸುತ್ತದೆ, ಅಳಿಸುತ್ತದೆ ಮತ್ತು ಚಿಂತಿಸುವಂತೆಯೂ ಮಾಡುತ್ತದೆ. ಇಲ್ಲಿನ ಯಾವ ಪಾತ್ರಗಳೂ ಕೃತಕವಾಗಿಲ್ಲ. ತೀರಾ ಸಹಜವಾಗಿ, ಮನಮುಟ್ಟುವಂತಿದೆ.

ಅಮಿತ್ ತ್ರಿವೇದಿಯ ಸಂಗೀತ ಪ್ರೇಕ್ಷಕರನ್ನು ಮತ್ತೆ ಮತ್ತೆ ಗುನುಗುಟ್ಟುವಂತೆ ಮಾಡುತ್ತದೆ. ಸಂಗೀತ ಸಹಜವಾಗಿ ಹರಿಯುತ್ತದೆ.
ಶ್ರೀದೇವಿ ಚಿತ್ರದ ಆಧಾರಸ್ತಂಭ. ಕಾತರತೆ, ಕೋಪ, ಅಹಂಕಾರ, ದುಃಖ, ಆಕರ್ಷಣೆ ಯಾವುದೇ ಇರಲಿ, ನಟಿ ಮಾತುಗಳಿಂದ ಅಥವಾ ಮಾತುಗಳಿಲ್ಲದೆಯೂ ಭಾವನೆಗಳನ್ನು ಲೀಲಾಜಾಲವಾಗಿ ಹರಿಯಬಿಡುತ್ತಾರೆ. 15 ವರ್ಷಗಳ ಬಿಡುವಿನ ಬಳಿಕ ಬೆಳ್ಳಿ ತೆರೆಗೆ ಬಂದಿರುವ ಶ್ರೀದೇವಿಯ ನಟನೆ ಇಲ್ಲಿ ಅದ್ಭುತವಾಗಿದೆ. ಎಷ್ಟೆಂದರೆ ಚಿತ್ರ ಮುಗಿದ ತುಂಬಾ ಹೊತ್ತಿನ ಬಳಿಕವೂ ನೀವು ಅದೇ ಗುಂಗಿನಲ್ಲಿರುತ್ತೀರಿ.

Thursday, October 4, 2012

"ಓ ಮೈ ಗಾಡ್!": ಕಲಕಿದ ಚಿತ್ರ

 
 "ಓ ಮೈ ಗಾಡ್!" ಹಿಂದಿ ಚಿತ್ರ ನೋಡಿದೆ. ಒಂದು ಹಾಸ್ಯ ಚಿತ್ರವೆಂದು ಭಾವಿಸಿ ಒಳ ಹೊಕ್ಕ ನನ್ನ ಮನದ ಆಳವನ್ನು ಹಾಸ್ಯದ ಗರುಡ ಪಾತಾಳ ಹಾಕಿ ಕಲಕಿದ ಚಿತ್ರ ಇದು. ಆಸ್ತಿಕರು, ನಾಸ್ತಿಕರು ಜೊತೆಯಾಗಿ ಕೂತು ನೋಡಬೇಕಾದ ಚಿತ್ರ. ದೇವರ ನಂಬಿಕೆಯನ್ನು ಛಿದ್ರಗೊಳಿಸುತ್ತ ನಿಮ್ಮ ಎದೆಯಲ್ಲಿ ನಿಜವಾದ ದೇವರೊಂದನ್ನು ಈ ಚಿತ್ರ ಪ್ರತಿಷ್ಟ್ಹಾಪಿಸುತ್ತದೆ. ಪರೇಶ್ ರಾವೆಲ್ ನಿಜಕ್ಕೂ ಪರೇಶ್ ರಾವೆಲ್ ಥರವೇ ನಟಿಸಿದ್ದಾರೆ. ಅಕ್ಷಯ್ ಕುಮಾರ್, ದೇವರೇ ಕೃಷ್ಣನ ರೂಪದಲ್ಲಿ ಧರೆಗಿಳಿದು ಬಂದಂತೆ...ಹಿತವಾಗಿ, ಹದವಾಗಿ, ಎಲ್ಲೂ ಪಾತ್ರದ ಗಾಂಭೀರ್ಯ ಕೆಡದಂತೆ ನಟಿಸಿದ್ದಾರೆ. ಹಾಂ...ಹೇಳಲು ಮರೆತೇ....ಇಡೀ ಚಿತ್ರದಲ್ಲಿ ರವಿಶಂಕರ್ ಗುರೂಜಿಯನ್ನು ಹೋಲುವ ಪಾತ್ರದಲ್ಲಿ ನಟಿಸಿದ ಮಿಥುನ್ ಚಕ್ರವರ್ತಿ ಪ್ರೇಕ್ಷಕರಿಗೊಂದು ಬೋನಸ್. ಗುರೂಜಿಯನ್ನು ಪ್ರತಿ ಹೆಜ್ಜೆಯಲ್ಲೂ ಅವರು ಅನುಭವಿಸಿ ನಟಿಸಿದ್ದಾರೆ. ನಗುತ್ತ ನಗುತ್ತ ನಿಮ್ಮ ಕಣ್ಣಿಂದ ಎರಡು ಹನಿ ಕಣ್ಣೀರು ದೇವರ ಹೆಸರಲ್ಲಿ ಉದುರದಿದ್ದರೆ ಮತ್ತೆ ಹೇಳಿ. ಅಂದ ಹಾಗೆ...ಈ ಚಿತ್ರ ಗುಜರಾತಿ ನಾಟಕ "ಕಾಂಜಿ ವರ್ಸಸ್ ಕಾಂಜಿ" ನಾಟಕವನ್ನು ಆಧರಿಸಿದೆ.

Wednesday, October 3, 2012

ಗಾಂಧಿಗೊಂದು ಗುಡಿಯ ಕಟ್ಟಿ...


ಈ ಲೇಖನ ನಾನು ಸೆಪ್ಟಂಬರ್ 12, 2008 ರಲ್ಲಿ ಬರೆದಿರುದು. ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಮತ್ತೆ ಗುಜರಿ ಅಂಗಡಿಗೆ ಹಾಕಿದ್ದೇನೆ.

ಕಳೆದ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ವಿವಿಧ ಮಾಧ್ಯಮಗಳಲ್ಲಿ ವರದಿಯ ರೂಪದಲ್ಲಿ ವಿಚಿತ್ರವೊಂದು ಪ್ರಸಾರಗೊಂಡಿತು. ಅದೇನೆಂದರೆ, ದಾವಣಗೆರೆ, ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಊರುಗಳಲ್ಲಿ ಗಾಂಧೀಜಿಯ ದೇವಸ್ಥಾನಗಳು ತೆರೆದಿರುವುದು. ಈ ದೇವಸ್ಥಾನಗಳಲ್ಲಿ ಗಾಂಧೀಜಿಯನ್ನು ದೇವರಂತೆ ಪ್ರತಿಷ್ಠಾಪಿಸಲಾಗಿದ್ದು, ಪೂಜೆ, ಆರತಿ, ಮಂಗಳಾರತಿ ಇತ್ಯಾದಿ ವೈದಿಕ ಆಚರಣೆಗಳು ಎಲ್ಲ ದೇವಸ್ಥಾನಗಳಲ್ಲಿ ನಡೆಯುವಂತೆ ನಡೆಯುತ್ತಿದ್ದವು. ಮಾಧ್ಯಮಗಳಲ್ಲಿ ಈ ದೇವಸ್ಥಾನಗಳನ್ನು ವೈಭವೀಕರಿಸಲಾಗುತ್ತಿತ್ತು. ಒಂದು ಚಾನೆಲ್‌ನಲ್ಲಂತೂ ರಾಜ್ಯದ ವಿವಿಧೆಡೆಗಳಲ್ಲಿರುವ ಗಾಂಧೀ ದೇವಸ್ಥಾನಗಳು, ಅವುಗಳ ದಿನಚರಿಯ ಕುರಿತು ಸ್ವಾತಂತ್ರೋತ್ಸವದ ವಿಶೇಷ ಎನ್ನುವ ರೀತಿಯಲ್ಲಿ ತೋರಿಸಲಾಗುತ್ತಿತ್ತು. ‘ಹೇಗೆ ಗ್ರಾಮೀಣ ಪ್ರದೇಶದ ಜನರು ಗಾಂಧಿಯಿಂದ ಪ್ರಭಾವಿತರಾಗಿದ್ದಾರೆ?’ ಎನ್ನುವುದನ್ನು ಹೇಳುವ ಪ್ರಯತ್ನವೂ ಇಲ್ಲಿ ನಡೆಯುತ್ತಿತ್ತು. ನಿಜಕ್ಕೂ ಇಲ್ಲಿ ಗಾಂಧಿಯನ್ನು ಗೌರವಿಸಲಾಗುತ್ತಿದೆಯೇ? ಈ ಗಾಂಧಿಗೆ ಗುಡಿಯನ್ನು ಕಟ್ಟಿದವರು ನಿಜಕ್ಕೂ ಗಾಂಧೀಜಿಯ ಹಿಂಬಾಲಕರೇ? ಗಾಂಧಿಗೆ ಮಂಗಳಾರತಿ ಎತ್ತುತ್ತಿರುವ ಪೂಜಾರಿಗೆ ಗಾಂಧೀಜಿಯ ಬಗ್ಗೆ ಏನಾದರೂ ಗೊತ್ತಿದೆಯೇ? ಈ ಗುಡಿಯ ಅಂತಿಮ ಉದ್ದೇಶವಾದರೂ ಏನು? ಸ್ವಾತಂತ್ರದ ದಿನ ನನ್ನ ತಲೆ ಕೊರೆಯತೊಡಗಿತು.

ಗಾಂಧೀಜಿ ಶ್ರೀರಾಮಚಂದ್ರನ ಪರಮ ಭಕ್ತ. ಅವರಿಗೆ ಶ್ರೀರಾಮ ಒಂದು ನೆಪ. ಅದೊಂದು ಸಂಕೇತವೇ ಹೊರತು, ಅವರ ಪಾಲಿಗೆ ಯಾವತ್ತೂ ಸ್ಥಾವರವಾಗಿರಲಿಲ್ಲ. ಆತನ ವೌಲ್ಯ, ಆದರ್ಶಗಳನ್ನು ಗೌರವಿಸುತ್ತಿದ್ದವರು. ಆದರೆ ಯಾವತ್ತೂ ಅವರು ‘ಅಯೋಧ್ಯೆಯಲ್ಲಿ ರಾಮನ ದೇವಸ್ಥಾನವಾಗಬೇಕು’ ಎಂದವರಲ್ಲ. ಅಷ್ಟೇ ಏಕೆ, ಪರಮಶ್ರೇಷ್ಠ ಹಿಂದೂ ಆಗಿರುವ ಮಹಾತ್ಮಾ ಗಾಂಧೀಜಿ ತನ್ನ ಜೀವನಾವಧಿಯಲ್ಲಿ ಒಂದೇ ಒಂದು ಗುಡಿಯನ್ನು ಕಟ್ಟಿದವರೂ ಅಲ್ಲ. ಗಾಂಧೀಜಿಯ ಬದುಕಿನಲ್ಲಿ ಅವರು ಇಂತಹಾ ದೇವಸ್ಥಾನದ ಆರಾಧಕರು ಎಂದೂ ಎಲ್ಲೂ ಉಲ್ಲೇಖವಾಗಿಲ್ಲ. ಆರಾಧನೆಯು ಅವರಿಗೆ ಜನರನ್ನು ಒಂದೆಡೆ ಸೇರಿಸುವ ಒಂದು ದಾರಿಯಾಗಿತ್ತು. ಆದುದರಿಂದಲೇ ಅವರು ‘ಈಶ್ವರ ಅಲ್ಲಾ ತೇರೇ ನಾಮ್’ ಎಂದರು. ಯಾವತ್ತೂ ಅವರು ಪೂಜೆಗಾಗಿ ಗುಡಿಗೆ ತೆರಳಿದವರಲ್ಲ. ತನ್ನ ಆಶ್ರಮದಲ್ಲಿ ರಾಮಭಜನೆಯನ್ನು ಏರ್ಪಡಿಸುತ್ತಿದ್ದರು. ಎಲ್ಲ ಧರ್ಮೀಯರ ಜೊತೆ ಒಂದಾಗಿ ಅದನ್ನು ನೆರವೇರಿಸುತ್ತಿದ್ದರು. ಅವರಿಗೆ ರಾಮ ವಿಗ್ರಹ ಆಗಿರಲಿಲ್ಲ. ಸತ್ಯ, ವಚನ ಪರಿಪಾಲನೆ ಮೊದಲಾದ ಆದರ್ಶಗಳಿಗೆ ಅವರು ರಾಮನ ಹೆಸರನ್ನು ಕೊಟ್ಟಿದ್ದರು. ಅದು ಬರೇ ಹೆಸರು ಅಷ್ಟೇ. ಆ ಹೆಸರನ್ನು ಈಶ್ವರ, ಅಲ್ಲಾ ಎಂದು ವ್ಯತ್ಯಾಸಗೊಳಿಸಿದರೂ ಅವರಿಗೆ ಅದರಲ್ಲೇನೂ ವ್ಯತ್ಯಾಸ ಕಾಣುತ್ತಿರಲಿಲ್ಲ. ಸತ್ಯದಲ್ಲಿ ಅವರು ದೇವರನ್ನು ಕಾಣುವ ಪ್ರಯತ್ನ ಮಾಡುತ್ತಿದ್ದರು. ಯಾವತ್ತೂ ತನ್ನ ಪೂಜೆಗಾಗಿ ಅವರು ವೈದಿಕ ಬ್ರಾಹ್ಮಣರನ್ನು ಆಶ್ರಮದೊಳಗೆ ಬಿಟ್ಟುಕೊಟ್ಟ ಉದಾಹರಣೆಯಿಲ್ಲ. ವೈದಿಕ ಆಚರಣೆಯಲ್ಲಿ ನಂಬಿಕೆ ಇದ್ದವರು ಗಾಂಧೀಜಿಯನ್ನು ಗೌರವಿಸುವ ಉದಾಹರಣೆಯೂ ಇತಿಹಾಸದಲ್ಲಿಲ್ಲ. ಗಾಂಧೀಜಿ ಒಮ್ಮೆ ದೇಶದ ಎಲ್ಲಾ ದೇವಸ್ಥಾನಗಳನ್ನು ಸಂದರ್ಶಿಸಿದ್ದರು. ಆದರೆ ಅಲ್ಲಿರುವ ಜಾತೀಯತೆ ಮತ್ತು ಪರಿಸರ ಮಾಲಿನ್ಯವನ್ನು ಕಂಡ ಗಾಂಧೀಜಿ, ಆ ದೇವಸ್ಥಾನಗಳ ಮೇಲೆ, ಪುಣ್ಯಕ್ಷೇತ್ರಗಳ ಮೇಲೆ ರೋಸಿ ಮಾತನಾಡಿದ್ದರು. ಅದೇ ಕೊನೆ. ಮತ್ತೆಂದಿಗೂ ಅವರು ದೇವಸ್ಥಾನಗಳನ್ನು, ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುವ ಸಾಹಸವನ್ನು ಮಾಡಲಿಲ್ಲ. ಗಾಂಧೀಜಿಯನ್ನು ಕೊಂದವರು ಯಾರು ಎನ್ನುವುದನ್ನು ನಾವು ಒಂದು ಕ್ಷಣ ನೆನೆಯೋಣ. ಇಂದು ರಾಮನಿಗಾಗಿ ಗುಡಿಯನ್ನು ಕಟ್ಟಲು ಹೋರಾಡುತ್ತಿರುವವರೇ ಈ ದೇಶದ ಶ್ರೇಷ್ಠ ರಾಮಭಕ್ತನನ್ನು ಗುಂಡಿಟ್ಟು ಕೊಂದರು. ಗಾಂಧೀಜಿ ರಾಮನ ಕುರಿತಂತೆ ಮಾತನಾಡುತ್ತಿದ್ದರು. ಗಾಂಧಿಯನ್ನು ಕೊಂದವರು ರಾಮನ ಕುರಿತಂತೆಯೇ ಮಾತನಾಡುತ್ತಾರೆ. ಗಾಂಧಿ ಸದಾ ರಾಮನ ಕುರಿತಂತೆ, ಆತನ ವೌಲ್ಯಗಳ ಕುರಿತಂತೆ ಮಾತನಾಡುತ್ತಿದ್ದರು. ಆದರೆ ರಾಮನಿಗೆ ಗುಡಿ ಕಟ್ಟುವ ಕುರಿತಂತೆ ಯಾವತ್ತೂ ಮಾತನಾಡಿರಲಿಲ್ಲ. ರಾಮನ ಕುರಿತಂತೆ ಗಾಂಧಿ ಮಾತನಾಡುತ್ತಿದ್ದಾಗ ಅವರ ಅಕ್ಕಪಕ್ಕದಲ್ಲೇ ಅಬುಲ್ ಕಲಾಂ ಆಝಾದ್, ಖಾನ್ ಅಬ್ದುಲ್ ಗಫಾರ್ ಖಾನ್‌ರಂತಹಾ ಮುಸ್ಲಿಂ ವಿದ್ವಾಂಸರು ತಲೆದೂಗುತ್ತಿದ್ದರು. ಆದರೆ ಸದ್ಯದ ದಿನಗಳಲ್ಲಿ ಕೆಲವರಿಗೆ ರಾಮನ ಬಗ್ಗೆ ಮಾತನಾಡುವುದೆಂದರೆ, ಈ ದೇಶದ ಹಿಂದೂಗಳನ್ನು ಮುಸ್ಲಿಮರ ಮೇಲೆ ಎತ್ತಿ ಕಟ್ಟುವುದು ಎಂದರ್ಥ. ಸಂಘ ಪರಿವಾರ ರಾಮನಿಗೆ ಗುಡಿಯನ್ನು ಕಟ್ಟ ಹೊರಟಿದ್ದರೆ, ಗಾಂಧೀಜಿ ರಾಮನನ್ನು ಗುಡಿಯಿಂದ ಬಿಡುಗಡೆ ಮಾಡಲು ಬಯಸಿದ್ದರು. ಗುಡಿಯ ಹೊರಗಿರುವ ರಾಮ ಬೇರೆ, ಒಳಗಿರುವ ರಾಮ ಬೇರೆ. ಒಳಗಿರುವ ರಾಮನಿಗೆ ವಾರಸುದಾರರಿರುತ್ತಾರೆ. ಆ ಗುಡಿಯ ಒಡೆಯರು, ಆ ಗುಡಿಯ ಪೂಜಾರಿಗಳು, ಆ ಗುಡಿಯನ್ನು ಸುತ್ತುವರಿದಿರುವ ಜಾತಿ, ಧರ್ಮ ಇವೆಲ್ಲವುಗಳಿಂದ ರಾಮ ಬಂಧಿತನಾಗಿರುತ್ತಾನೆ. ಒಂದು ರೀತಿಯಲ್ಲಿ ಅಲ್ಲಿ ರಾಮನಿರುವುದೇ ಇಲ್ಲ. ಬರೇ ರಾಮನ ವಿಗ್ರಹ ಮಾತ್ರವಿರುತ್ತದೆ. ಇದು ರಾಮನ ಕುರಿತಂತೆ ಗಾಂಧಿಯ ತಿಳುವಳಿಕೆಯಾಗಿತ್ತು. ರಾಮ ಹುಟ್ಟಿದುದು ಅಯೋಧ್ಯೆಯಲ್ಲಲ್ಲ, ಗೋಡ್ಸೆಯ ಗುಂಡೇಟಿಗೆ ಉರುಳಿಬಿದ್ದ ಗಾಂಧಿಯ ಉದ್ಗಾರದಲ್ಲಿ ರಾಮ ಹುಟ್ಟಿದ ಎನ್ನುವುದು ಈ ಕಾರಣಕ್ಕೆ.
ಇಂತಹ ಗಾಂಧಿಯನ್ನು ಸಂಪೂರ್ಣ ಇಲ್ಲವಾಗಿಸುವ ಪ್ರಯತ್ನವಾಗಿ, ಗಾಂಧೀಜಿಗಾಗಿಯೇ ಗುಡಿಯನ್ನು ಕಟ್ಟುವ ಪ್ರಯತ್ನ ನಡೆಯುತ್ತಿದೆ. ಗೋಡ್ಸೆಯ ಗುಂಡಿನಿಂದ ಸಾಯದ ಗಾಂಧಿಯನ್ನು ಗುಡಿಯ ಕಲ್ಲುಗಳಿಂದ ಸಮಾಧಿ ಮಾಡುವ ಪ್ರಯತ್ನ ಇದಾಗಿದೆ. ಗಾಂಧೀಜಿಗೆ ದೇವಸ್ಥಾನವನ್ನು ಕಟ್ಟಿ, ಪೂಜೆ ಸಲ್ಲಿಸುವುದನ್ನು ನಾವು ಈ ಕಾರಣಕ್ಕಾಗಿ ಕಟುವಾಗಿ ವಿರೋಧಿಸಬೇಕಾಗಿದೆ. ಟಿವಿ ಚಾನೆಲ್‌ಗಳಲ್ಲಿ ಪೂಜಾರಿಯೊಬ್ಬ ಗಾಂಧೀಜಿಯ ವಿಗ್ರಹ ಮುಂದೆ ಆರತಿ ಎತ್ತಿ, ಗಂಟೆ ಆಡಿಸುತ್ತಿದ್ದ. ಕೆಳಜಾತಿಯವರನ್ನು ಕಂಡರೆ ಮೈಲು ದೂರ ಹಾರುವ ಇವರಿಂದ ಗಾಂಧೀಜಿಯನ್ನು ಆರಾಧಿಸಲು, ಪೂಜಿಸಲು ಸಾಧ್ಯವೇ? ನಾಳೆ ಈ ಗುಡಿ ದೊಡ್ಡ ದೇವಸ್ಥಾನವಾಗಿ ಗಾಂಧೀಜಿಯ ಅಕ್ಕಪಕ್ಕದಲ್ಲಿ ರಾಮ, ಕೃಷ್ಣರು ನೆಲೆಯಾಗಬಹುದು. ಯಾವುದಾದರೂ ಒಂದು ಮಠ ಇದರ ಉಸ್ತುವಾರಿ ನೋಡಿಕೊಳ್ಳಲು ಮುಂದಾಗಬಹುದು. ಬಳಿಕ, ಎಲ್ಲಾ ದೇವಸ್ಥಾನಗಳಿಗೂ ಅಮರಿಕೊಂಡಂತೆ, ಈ ಗಾಂಧಿಯ ದೇವಸ್ಥಾನಕ್ಕೂ ಸಂಘ ಪರಿವಾರ ಅಮರಿಕೊಳ್ಳಬಹುದು. ಈ ದೇವಸ್ಥಾನದ ಆವರಣದಲ್ಲೆ ಗೋಡ್ಸೆಯ ಹಿಂಬಾಲಕರು ತಮ್ಮ ಬೈಠಕ್‌ಗಳನ್ನು ನಡೆಸಬಹುದು. ಗಾಂಧೀಜಿಯನ್ನು ಕೊಲ್ಲುವುದಕ್ಕೆ ಹುಡುಕಿರುವ ಹೊಸ ದಾರಿ ಇದು.

ಈ ದೇಶದಲ್ಲಿ ದೇವರಿಗಳಿಗೇನೂ ಬರವಿಲ್ಲ. ಅವುಗಳ ಸಾಲಿನಲ್ಲಿ ಗಾಂಧೀಜಿ ನಿಲ್ಲುವುದು ಬೇಡ. ಗಾಂಧೀಜಿ ನಮ್ಮ ಮುಂದೆ ಒಬ್ಬ ಸಾಮಾನ್ಯ ಮನುಷ್ಯನಾಗಿ ಶಾಶ್ವತವಾಗಿ ಇರಲಿ. ಒಬ್ಬ ಮನುಷ್ಯನಾಗಿ ಎಷ್ಟು ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಗಾಂಧೀಜಿ ನಮ್ಮ ಮುಂದಿದ್ದಾರೆ, ಸಕಲ ಮನುಷ್ಯರಿಗೂ ಒಂದು ಭರವಸೆಯಾಗಿ. ಆ ಭರವಸೆಯನ್ನು ನಾವು ಇಲ್ಲವಾಗಿಸುವುದು ಬೇಡ. ಗಾಂಧೀಜಿಯ ಹೆಸರಿನಲ್ಲಿ ಕಟ್ಟಿರುವ ಗುಡಿಗಳು ಗಾಂಧೀಜಿಗೆ ಮಾಡಿರುವ ಅವಮಾನ. ಗಾಂಧೀಜಿಯ ಹೆಸರಲ್ಲಿ ಗ್ರಂಥಾಲಯಗಳು, ಶಾಲೆಗಳು ತೆರೆಯಲಿ. ಯಾವ ಕಾರಣಕ್ಕೂ ಗಾಂಧೀಜಿಗೆ ಗುಡಿಯ ಹೆಸರಿನಲ್ಲಿ ಸಮಾಧಿ ಕಟ್ಟುವುದು ಬೇಡ.
ಸೆಪ್ಟಂಬರ್ 12, 2008

Thursday, September 27, 2012

ಮಗುವೊಂದು
ತನ್ನ ಕಂಪಾಸು ಪೆಟ್ಟಿಗೆಯಲ್ಲಿ
ತಿನ್ನದೇ ಬಚ್ಚಿಟ್ಟ
ಪೆಪ್ಪರಮೆಂಟು
ಮರಣ!
ನಾನೊಂದು
ಕಾಗದದ ಹಾಳೆ...
ಕೆಟ್ಟ ಕವಿಯೊಬ್ಬನ
ಕೈಯಲ್ಲಿ
ಕವಿತೆ ಗೀಚೂದಕ್ಕೆ
ಬಳಕೆಯಾಗುವ ಬದಲು
ತುಂಟ ಮಗುವಿನ
ಕೈಯಲ್ಲಿ
ಹರಿದು ಚೂರಾಗಲು
ಇಷ್ಟ ಪಡುವೆ
 
 
 

ಕೆಲವು ಹನಿಗಳು....

1
ಸೃಷ್ಟಿಸಿದ ದೊರೆ
ಮನುಷ್ಯನಿಗೆ
ಕೊಟ್ಟ ಉಡುಗೊರೆ
ಮರಣ!
2
ಭೂಮಿಯೊಳಗೆ
ಮನುಜ
ಬೋನಿಗೆ ಸಿಲುಕಿದ
ಇಲಿಯಂತೆ ಒದ್ದಾಡುವಾಗ
ಒಂದು ಸಣ್ಣ
ಬೆಳಕಿನ ಕಿರಣ
ಮರಣ!
ಇಲ್ಲಿಂದ ಪಾರಾಗುವ
ಒಂದೇ ಒಂದು
ಒಳ ದಾರಿ..
3
ಮರಣದ
ನಿಗೂಢವನ್ನು
ಒಮ್ಮೊಮ್ಮೆ
ಬಿಚ್ಚಿ ನೋಡುವ ಆಸೆ...
4
ಎಲ್ಲರನ್ನೂ
ಕಾಡುವ
ಮರಣದ ಭಯ
ನನ್ನನೇಕೆ
ಕಾಡುತ್ತಿಲ್ಲ
ಎಂದು ಭಯ!
5
ಪ್ರಾಣಿಗೂ
ಮನುಷ್ಯನಿಗೂ
ದೊಡ್ಡ ವ್ಯತ್ಯಾಸ...
ಮನುಷ್ಯ ಮರಣಕ್ಕೆ ಹೆದರಿ
ಆತ್ಮಹತ್ಯೆ
ಮಾಡಿಕೊಳ್ಳಬಲ್ಲ..
ಪ್ರಾಣಿಗೆ
ಮರಣದ ಭಯವಿಲ್ಲ...

Wednesday, September 26, 2012

ಹುಲ್ಲುಗರಿ ಮತ್ತು ಇತರ ಕತೆಗಳು

ಶಪಥ
‘‘ಇವತ್ತಿನಿಂದ ನಾನು ಕುಡಿಯುವುದಿಲ್ಲ’’
ಕುಡುಕ ಶಪಥ ಮಾಡಿದ.
ಮರುದಿನ ಎಂದಿನಂತೆ ಕುಡಿಯತೊಡಗಿದ.
ಯಾರೋ ಕೇಳಿದರು ‘‘ಏನಾಯಿತು ನಿನ್ನ ಶಪಥ’’
‘‘ಅದು ನಾನು ಕುಡಿದ ಮತ್ತಿನಲ್ಲಿ ಮಾಡಿದ ಶಪಥ’’ ಕುಡುಕ ಹೇಳಿದ.

ಕಾಗೆ
ಅವನು ಬೀದಿ ಬದಿಯಲ್ಲಿ ಐದು ರೂಪಾಯಿಗೆ ಫುಲ್ ಬಿರಿಯಾನಿ ಕೊಡುತ್ತಿದ್ದ.
ಬೀದಿಯಲ್ಲಿ ಬದುಕುವ ಬಡವರೆಲ್ಲ ಅವನ ಗಿರಾಕಿಗಳು.
ಒಂದು ದಿನ ಪೊಲೀಸರು ಅಲ್ಲಿಗೆ ದಾಳಿ ನಡೆಸಿದರು. ಅವನು ಕಾಗೆಯ ಬಿರಿಯಾನಿಯನ್ನು ಚಿಕನ್ ಬಿರಿಯಾನಿಯೆಂದು ಮಾರುತ್ತಿರುವುದು ಬಯಲಾಯಿತು. ಪೊಲೀಸರು ಅವನನ್ನು ಜೈಲಿಗೆ ತಳ್ಳಿದರು.
 ಬೀದಿ ಬದಿಯ ಮುದುಕನೊಬ್ಬ ಆ ರಾತ್ರಿ ಹಸಿದುಕೊಂಡೇ ಮಲಗಿದ. ನಿದ್ದೆ ಬರದೇ ಗೊಣಗಿದ ‘‘ಕೋಳಿಯೋ, ಕಾಗೆಯೋ...ಹೊಟ್ಟೆ ತುಂಬಾ ಅನ್ನ ಹಾಕುತ್ತಿದ್ದ ಪುಣ್ಯಾತ್ಮನನ್ನು ಜೈಲಿಗೆ ತಳ್ಳಿದರಲ್ಲ....ಕಟುಕರು!’’
ಮೂರು ದಿನ ಕಳೆದರೆ ಅಲ್ಲಿ ಮೂವರು ಮುದುಕರು ಹೆಣವಾಗಿದ್ದರು.
ಪತ್ರಿಕೆಯೊಂದು ಪ್ರಕಟಿಸಿತು ‘‘ಬೆಂಗಳೂರಿನ ಚಳಿಗೆ ಮೂರು ಬಲಿ’’

ವಿಶೇಷ ಪುಟ
‘‘ಆ ಪಕ್ಷದ ಹಿರಿಯ ನಾಯಕರು ಐಸಿಯು ಸೇರಿದ್ದಾರಂತೆ. ಬದುಕೋ ಚಾನ್ಸ್ ಕಮ್ಮಿಯಂತೆ. ಅವರ ಕುರಿತ ವಿಶೇಷ ಪೇಜ್‌ನ್ನು ಈಗಲೇ ರೆಡಿ ಮಾಡಿ ಇಡಿ...’’
ಹೀಗೆಂದು ಸಂಪಾದಕ ಕಿರಿಯರಿಗೆ ನಿರ್ದೇಶನ ನೀಡಿ ಮನೆಗೆ ಹೊರಟ.
ಹಾಗೆ ಹೊರಟ ಸಂಪಾದಕನಿಗೆ ರಾತ್ರಿ ನಿದ್ದೆಯಲ್ಲೇ ಹೃದಯಾಘಾತವಂತೆ.
ಮರುದಿನ ಆ ಸಂಪಾದಕನ ಕುರಿತಂತೆಯೇ ಕಿರಿಯರು ವಿಶೇಷ ಪುಟವನ್ನು ಮಾಡಿದರು.
ಐಸಿಯು ಸೇರಿದ್ದ ನಾಯಕ, ಹೊರ ಬಂದು, ಸಂಪಾದಕನಿಗೆ ತನ್ನ ಶ್ರದ್ಧಾಂಜಲಿಯನ್ನು ತಿಳಿಸಿದ.

ಕುಡುಕ
ಕುಡುಕನೊಬ್ಬ ದಾರಿ ತಪ್ಪಿ ದೇವಾಲಯವನ್ನು ಪ್ರವೇಶಿಸಿದ.
‘‘ಕುಡುಕರಿಗೆ ಇಲ್ಲಿ ಪ್ರವೇಶವಿಲ್ಲ’’ ಪೂಜಾರಿ ಚೀರಿದ.
ಕುಡುಕ ನಕ್ಕು ಹೇಳಿದ ‘‘ಹೌದೆ? ನಾನು ಹೆಂಡವನ್ನು ಕುಡಿದಿದ್ದೇನೆ. ನೀವೋ ಧರ್ಮವನ್ನೇ ಕುಡಿದಿದ್ದೀರಿ. ಇಬ್ಬರೂ ಕುಡುಕರೇ. ನೆನಪಿಟ್ಟುಕೋ...’’ ಎನ್ನುತ್ತಾ ಅವನು ಅಲ್ಲಿಂದ ನಡೆದ.

ಮಗು

ಶಾಲೆ ಬಿಟ್ಟು ಬಂದ ಮಗು, ನೇರವಾಗಿ ತಾಯಿಯಲ್ಲಿ ಕೇಳಿತು ‘‘ಅಪ್ಪಾ ಅಂದರೆ ಏನಮ್ಮ....’’

ಬಣ್ಣ
ಅಂದು ಭೂಕಂಪ ಸಂಭವಿಸಿತ್ತು. ಸಾವಿರಾರು ಜನರು ಸತ್ತಿದ್ದರು.
ಅವಳಿಗೆ ‘ಬ್ರೇಕಿಂಗ್ ಸುದ್ದಿ’ ಓದುವುದಿತ್ತು.
ಸುದ್ದಿ ಓದಿ ಮುಗಿದಾಗ ಸಂಪಾದಕರು ಕೇಳಿದರು ‘‘ಅಂತಹ ಮುಖ್ಯ ಸುದ್ದಿ ಓದುವಾಗ ಒಂದಿಷ್ಟು ಮೇಕಪ್ ಸರಿಯಾಗಿ ಮಾಡ್ಕೋಬಾರ್ದೆ...’’

ಹುಲ್ಲುಗರಿ
ದೊಡ್ಡ ಜಮೀನ್ದಾರ ಆತ. ಆದರೆ ಜಿಪುಣ.
ಅವನಿಗೆ ಅಪರೂಪಕ್ಕೊಮ್ಮೆ ದಾನ ಮಾಡಬೇಕು ಅನ್ನಿಸಿತು.
ಸರಿ...ಹತ್ತು ಪೈಸೆಯ ನಾಣ್ಯವನ್ನು ರಾಶಿ ಹಾಕಿ...ಒಬ್ಬೊಬ್ಬರಿಗೆ ಒಂದೊಂದು ನಾಣ್ಯ ಹಂಚುವುದೆಂದು ನಿರ್ಧರಿಸಿದ.
ಅದನ್ನು ಬೇಡುವುದಕ್ಕೆ ಭಿಕ್ಷುಕನೂ ಹೋಗಲಿಲ್ಲ.
ಆದರೆ ಸಂತ ಮಾತ್ರ ಸಂಭ್ರಮದಿಂದ ಅತ್ತ ಧಾವಿಸಿದ.
ಹತ್ತು ಪೈಸೆಯನ್ನು ಇಸಿದುಕೊಂಡು ಅವನನ್ನು ಕೊಂಡಾಡಿ ಮರಳಿದ.
ಶಿಷ್ಯರು ಕೇಳಿದರು ‘‘ಎಂತೆಂತಹ ದಾನಿಗಳೆಲ್ಲ...ನಿಮಗೆ ಏನೇನೋ ದಾನ ಮಾಡಿದ್ದಾರೆ. ಇಷ್ಟು ಕೊಂಡಾಡಿಲ್ಲ...ಈ ಹತ್ತು ಪೈಸೆಯ ದಾನಕ್ಕೆ ಯಾಕೆ ಕೈಯೊಡ್ಡಿದಿರಿ’’
ಸಂತನ ಹತ್ತು ಪೈಸೆಯನ್ನೇ ನೋಡುತ್ತಾ ಹೇಳಿದ ‘‘ಬರಡು ಭೂಮಿಯನ್ನು ಸೀಳಿ ಒಂದೇ ಒಂದು ಹುಲ್ಲು ಗರಿ ಕುಡಿಯೊಡೆದಿದೆ. ದಟ್ಟ ಕಾಡಿನಲ್ಲಿ ಅಷ್ಟಗಲ ಹರಡಿ ನೆರಳು ಸೂಸುವ ಮರಕ್ಕಿಂತಲೂ ದೊಡ್ಡ ವಿಷಯ ಇದು...’’

ಕಾಲ
‘‘ನಮ್ಮ ಕಾಲದಲ್ಲಿ ಎಲ್ಲವೂ ಚೆನ್ನಾಗಿತ್ತು’’ ಅವನು ವಿವರಿಸುತ್ತಿದ್ದ.
 ‘‘ನಮ್ಮ ಕಾಲದಲ್ಲಿ ತೋಟಕ್ಕೆ ಕೆಲಸಕ್ಕೆ ಕರೆದರೆ ಜನ ಸಿಗುತ್ತಿತ್ತು. ಕೂಲಿಕಾರ್ಮಿಕರು ಇಷ್ಟು ಕೊಬ್ಬಿರಲಿಲ್ಲ. ಕೊಟ್ಟ ಸಂಬಳ ತೆಗೆದುಕೊಂಡು ಹೋಗುತ್ತಿದ್ದರು. ಸಮಾಜದ ಕಟ್ಟುಕಟ್ಟಲೆಗೆ ಬೆಲೆಯಿತ್ತು. ಯಾರ್ಯಾರು ಎಲ್ಲಿರಬೇಕಿತ್ತೋ ಅಲ್ಲಿಯೇ ಇರುತ್ತಿದ್ದರು...ನಮ್ಮ ಕಾಲದಲ್ಲಿ ಎಲ್ಲವೂ ಚೆನ್ನಾಗಿತ್ತು. ಈಗ ಕಾಲ ಕೆಟ್ಟು ಹೋಗಿದೆ...’’