Saturday, December 20, 2014

ಪೀಕೆ: ಲವಲವಿಕೆಯ ನಿರೂಪಣೆ, ದಟ್ಟ ಅನುಭವ

 ಮುನ್ನಾ ಭಾಯಿ ಎಂಬಿಬಿಎಸ್, ಲಗೇರಹೋ ಮುನ್ನಾ ಭಾಯಿ, ತ್ರೀ ಈಡಿಯಟ್ಸ್ ಬಾಲಿವುಡ್‌ನಲ್ಲಿ ವಿಭಿನ್ನವಾದ ಸಂದೇಶ ಮತ್ತು ಸಂತೋಷವನ್ನು ಹರಡಿದ ಮೂರು ಚಿತ್ರಗಳು. ಈ ಮೂರೂ ಚಿತ್ರಗಳ ನಿರ್ದೇಶಕರು ರಾಜ್‌ಕುಮಾರ್ ಹಿರಾನಿ. ಮುನ್ನಾಭಾಯಿ ಎಂಬಿಬಿಎಸ್ ವೈದ್ಯಕೀಯ ಶಿಕ್ಷಣದ ವಿಪರ್ಯಾಸಗಳನ್ನು ತೆರೆದಿಟ್ಟರೆ, ಲಗೇರಹೋ ಮುನ್ನಾಭಾಯಿ ಗಾಂಧಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹೊಸತೊಂದು ಪರಿಭಾಷೆಯನ್ನು ಬಳಸಿಕೊಂಡ ಚಿತ್ರ. ತ್ರೀ ಇಡಿಯಟ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಕಟಗಳನ್ನು ತಮಾಷೆಯಾಗಿ ನಿರೂಪಿಸುತ್ತಲೇ, ಶಿಕ್ಷಣಕ್ಕೆ ಹೊಸತೊಂದು ವ್ಯಾಖ್ಯಾನಕೊಟ್ಟ ಚಿತ್ರ. ಅತ್ಯಂತ ಗಂಭೀರ ವಿಷಯಗಳನ್ನು ಹಾಸ್ಯ ನಿರೂಪಣೆಯ ಮೂಲಕ ಕಟ್ಟಿಕೊಟ್ಟ ಚಾಣಾಕ್ಷ ನಿರ್ದೇಶಕ ರಾಜ್‌ಕುಮಾರ್ ಹಿರಾನಿ. ಈ ಕಾರಣದಿಂದಲೇ ಅವರ ಪೀಕೆ ಚಿತ್ರದ ಕುರಿತಂತೆ ಪ್ರೇಕ್ಷಕರು ಭಾರೀ ನಿರೀಕ್ಷೆಗಳು ಇಟ್ಟು ಕಾಯುತ್ತಿದ್ದರು. ಮತ್ತು ಆ ನಿರೀಕ್ಷೆಗಳು ಹಿರಾನಿ ಹುಸಿ ಮಾಡಿಲ್ಲ. ‘ಪೀಕೆ’ ಅವರು ನಿರ್ದೇಶಿಸಿದ ಇತರ ಚಿತ್ರಗಳ ಸಾಲಿನಲ್ಲಿ ಯಾವ ಕೀಳರಿಮೆಯೂ ಇಲ್ಲದೆ ನಿಲ್ಲಬಲ್ಲ ಇನ್ನೊಂದು ಅಪರೂಪದ ಚಿತ್ರ.

ಪೀಕೆ ಚಿತ್ರದ ಕತೆ ಒಂದು ಸಾಲಿನಲ್ಲಿ ಹೇಳಿ ಮುಗಿಸಬಹುದಾದಷ್ಟು ತೆಳುವಾದದ್ದು. ಆದರೆ ಅದು ಹೊರಡಿಸುವ ಧ್ವನಿ ಮಾತ್ರ ನಮ್ಮಳಗೆ ಶಾಶ್ವತ ಅನುರಣಿಸುತ್ತಲೇ ಇರುವಂತಹದ್ದು. ತಮ್ಮ ಎಂದಿನ ಹಾಸ್ಯ ಮತ್ತು ನವಿರು ನಿರೂಪಣೆಯ ಮೂಲಕ ದೇವರು, ಧರ್ಮಗಳಂತಹ ಸೂಕ್ಷ್ಮ, ಗಂಭೀರ ವಿಷಯಗಳ ಬಗ್ಗೆ ಮಾತನಾಡಿದ್ದಾರೆ ಹಿರಾನಿ. ಈ ಜಗತ್ತಿನ ಧರ್ಮ ಪುರೋಹಿತರು, ಬಾಬಾಗಳು ದೇವರ ಜೊತೆ ಮಾತನಾಡುತ್ತಿದ್ದೇವೆ ಎಂದು ಭ್ರಮಿಸುತ್ತಾ ‘ರಾಂಗ್‌ನಂಬರ್’ ಜೊತೆಗೆ ಮಾತನಾಡುತ್ತಿದ್ದಾರೆ. ಆದುದರಿಂದಲೇ ಅದರ ಕೆಟ್ಟ ಫಲಿತಾಂಶವನ್ನು ಜನರು ಅನುಭವಿಸುತ್ತಿದ್ದಾರೆ ಎನ್ನುವುದನ್ನು ಒಬ್ಬ ಮಗುಮನಸ್ಸಿನ ಮುಗ್ಧ ಕಥಾನಾಯಕನ ಮೂಲಕ ನಿರೂಪಿಸುತ್ತಾರೆ ನಿರ್ದೇಶಕರು.

 ಈ ಭೂಮಿಗೆ ಅನ್ಯಗ್ರಹದ ಜೀವಿಯೊಂದು ಕಾಲಿಡುತ್ತದೆ. ಒಂದು ಪುಟ್ಟ ಮಗು ಈಗಷ್ಟೇ ತಾಯ ಗರ್ಭದಿಂದ ಹೊರಬಂದು ಈ ಭೂಮಿಯನ್ನು ಅಚ್ಚರಿ, ಚೋದ್ಯದ ಕಣ್ಣುಗಳಿಂದ ನೋಡುವಂತೆ ಆ ಜೀವಿ ಈ ಭೂಮಿಯ ಜನಜೀವನವನ್ನು ನೋಡುತ್ತದೆ. ಮತ್ತು ಅವುಗಳನ್ನು ಅಷ್ಟೇ ಮುಗ್ಧವಾಗಿ ಪ್ರಶ್ನಿಸ ತೊಡಗುತ್ತದೆ. ಇಲ್ಲಿರುವ ವಿಪರ್ಯಾಸಗಳು, ವಿರೋಧಾಭಾಸಗಳು ಅದಕ್ಕೆ ತೀರಾ ತೀರಾ ಗೊಂದಲವನ್ನುಂಟು ಮಾಡುತ್ತದೆ. ಬೆತ್ತಲೆಯಾಗಿ ಕಾಲಿಟ್ಟ ಆ ಜೀವಿ ನಿಧಾನಕ್ಕೆ ಭೂಮಿಯೊಳಗಿರುವ ಮನುಷ್ಯನನ್ನು, ಮುಖ್ಯವಾಗಿ ಅವನು ನಂಬುವ ದೇವರು ಮತ್ತು ಧರ್ಮಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದೇ ಚಿತ್ರದ ಮುಖ್ಯ ಕತೆ. ಅನ್ಯಗ್ರಹದ ಆ ಜೀವಿಯಾಗಿ ಆಮೀರ್ ಖಾನ್ ಅವರ ನಟನೆ  ನಮ್ಮನ್ನು ಆವರಿಸಿಕೊಳ್ಳುತ್ತದೆ.
  
  ಅನ್ಯಗ್ರಹದ ಜೀವಿ ಭೂಮಿಗೆ ಕಾಲಿಟ್ಟಾಕ್ಷಣ ಅವನಿಗೆ ಎದುರಾಗುವ ಮೊತ್ತ ಮೊದಲ ಮನುಷ್ಯ, ಆ ಬೆತ್ತಲೆ ಜೀವಿಯ ಕುತ್ತಿಗೆಯಲ್ಲಿದ್ದ ಏಕೈಕ ಹೊಳೆಯುವ ರಿಮೋಟ್ ಕಂಟ್ರೋಲನ್ನು ಕದ್ದು ಓಡುತ್ತಾನೆ. ಅಲ್ಲಿಂದ ಅನ್ಯ ಜೀವಿಯ ತಾಪತ್ರಯಗಳು ಆರಂಭವಾಗುತ್ತವೆ. ಆತನಿಗೆ ಮರಳಿ ತನ್ನ ಮನೆಗೆ ಹೋಗಬೇಕು. ಹೋಗಬೇಕಾದರೆ ತನ್ನ ಕುತ್ತಿಗೆಯಲ್ಲಿದ್ದ ರಿಮೋಟ್ ಕಂಟ್ರೋಲ್ ಯಂತ್ರ ಸಿಗಬೇಕು. ಅದರ ಹುಡುಕಾಟ ನಿಧಾನಕ್ಕೆ ದೇವರ ಹುಡುಕಾಟವಾಗಿ ಪರಿವರ್ತನೆಯಾಗುವದೇ ಚಿತ್ರಕತೆಯ ಹೆಗ್ಗಳಿಕೆ. ರಿಮೋಟ್ ಕಂಟ್ರೋಲ್ ಹುಡುಕಿ, ಮರಳಿ ತನ್ನೂರಿಗೆ ಹೋಗುವ ಅವನ ಅನ್ವೇಷಣೆ ಕಟ್ಟ ಕಡೆಗೆ, ಕಪಟ ಬಾಬಾನ ಬಳಿಗೆ ಅವನನ್ನು ತಲುಪಿಸುತ್ತದೆ. ದೇವರು ಧರ್ಮದ, ನೈಜ ಮುಖಾಮುಖಿಗೆ ಇದು ಕಾರಣವಾಗುತ್ತದೆ. ಅಷ್ಟೇ ಅಲ್ಲ, ಮನುಷ್ಯ ಮನುಷ್ಯನ ನಡುವಿನ ಸಂಬಂಧ, ಪಾಕಿಸ್ತಾನ-ಭಾರತದ ನಡುವಿನ ತಿಕ್ಕಾಟ ಇವೆಲ್ಲವೂ ಅತ್ಯಂತ ಸಹಜವಾಗಿ ಆತನ ಹುಡುಕಾಟದ ಭಾಗವಾಗಿ ಸೇರಿಕೊಳ್ಳುತ್ತದೆ.


ಈ ಅನ್ಯ ಜೀವಿಯನ್ನು ಗುರುತಿಸಿ ಅವನ ಹುಡುಕಾಟಕ್ಕೆ ಜೊತೆ ನೀಡುವ ಪಾತ್ರದಲ್ಲಿ ಜಗಜ್ಜನನಿ ಯಾನೆ ಜಗ್ಗು (ಅನುಷ್ಕಾ ಶರ್ಮಾ) ಅವರು ತುಂಬಾ ಲವಲವಿಕೆಯಿಂದ ನಟಿಸಿದ್ದಾರೆ.  ಆಕೆಯ ಪಾಕಿಸ್ತಾನಿ ಪ್ರಿಯಕರನಾಗಿ ಸರ್ಫುರಾಜ್ ಪಾತ್ರದಲ್ಲಿ ಸುಶಾಂತ್ ರಾಜಪೂತ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಣ್ಣ ಪಾತ್ರವಾದರೂ, ಚಿತ್ರಕ್ಕೆ ಮುಖ್ಯ ತಿರುವು ಕೊಡುವ ಪಾತ್ರವೂ ಇದಾಗಿರುವುದರಿಂದ ನಮ್ಮನ್ನು ತಟ್ಟುತ್ತದೆ. ಸಂಜಯ್ ದತ್, ಬೊಮನ್ ಇರಾನಿ ಇವರದು ಪೋಷಕ ಪಾತ್ರಗಳು. ಆಯಾ ಸನ್ನಿವೇಶಕ್ಕೆ ನ್ಯಾಯಕೊಡುವ ಪಾತ್ರಗಳು. ತಪಸ್ವಿ ಮಹಾರಾಜ್ ಪಾತ್ರದಲ್ಲಿ ಸೌರಭ್ ಶುಕ್ಲಾ ಅಭಿನಯ ಯಾವ ನಕಲಿ ಬಾಬಾಗಳ ನಟನೆಗಳಿಗಿಂತ ಕಮ್ಮಿಯಿಲ್ಲ. ಎಳೆದುಕಟ್ಟಿದ ವೀಣೆಯ ತಂತಿಯಂತೆ ಒಂದೇ ಸಾಲಿನ ಚಿತ್ರಕತೆ ಇದಾಗಿರುವುದರಿಂದ, ಆರಂಭದಿಂದ ಕೊನೆಯವರೆಗೆ ನಿಮ್ಮನ್ನು ಅಲುಗಾಡದಂತೆ ಹಿಡಿದು ನಿಲ್ಲಿಸುತ್ತದೆ. ಚಿತ್ರ ಮುಂದುವರಿದಂತೆಯೇ ಕೊಡುವ ದರ್ಶನದ ವ್ಯಾಪ್ತಿ ಹಿಗ್ಗುತ್ತಾ ಹೋಗುತ್ತದೆ. ಜೊತೆಗೆ ನಿಮ್ಮ ಸಂತೋಷವೂ ಕೂಡ. ಅಜಯ್ ಅತುಲ್, ಶಂತನು ಮೊಯಿತ್ರ, ಅಂಕಿತ್ ತಿವಾರಿ ಸಂಗೀತ ಚಿತ್ರದ ಲವಲವಿಕೆಗೆ ಇನ್ನಷ್ಟು ಜೀವತುಂಬುತ್ತದೆ. ಚಿತ್ರದ ಧ್ವನಿಯನ್ನು, ಆರ್ದ್ರತೆಯನ್ನು ಸಂಗೀತ ನಮಗೆ ಮೊಗೆದುಕೊಡುತ್ತದೆ. ಸಿ. ಕೆ. ಮುರಳೀಧರನ್ ಅವರ ಛಾಯಾಗ್ರಹಣ ನಿಮ್ಮ ಕಣ್ಣುಗಳನ್ನು ತಂಪಾಗಿಸುತ್ತದೆ.


ಚಿತ್ರ ಮುಗಿದಾಗ ನಿಮಗೆ ‘ಓ ಮೈ ಗಾಡ್’ ಸಿನಿಮಾ ನೆನಪಾಗಿದ್ದರೆ ಅದು ಆಕಸ್ಮಿಕ ಅಲ್ಲ. ಆದರೆ ‘ಓ ಮೈ ಗಾಡ್’ ಚಿತ್ರದಷ್ಟು ಆಳವಾಗಿ ಧರ್ಮ, ದೇವರುಗಳನ್ನು ‘ಪೀಕೆ’ ಚರ್ಚಿಸುವುದಿಲ್ಲ. ಇಲ್ಲಿ ದೇವರ ಕುರಿತಂತೆ ವೈಚಾರಿಕ ಪ್ರಶ್ನೆಗಳಿಲ್ಲ. ಬದಲಿಗೆ ಒಂದು ಮಗು ಕೇಳುವ ಮುಗ್ಧ ಮತ್ತು ಸತ್ಯಕ್ಕೆ ಹೆಚ್ಚು ಹತ್ತಿರವಾದ ಪ್ರಶ್ನೆಗಳಿವೆ. ತೀರಾ ಸರಳವಾದ, ಲವಲವಿಕೆಯ ನಿರೂಪಣೆಯ ಮೂಲಕ ದೇವರನ್ನು ಒಂದು ಅನುಭವವಾಗಿ ಪೀಕೆ ನಿಮ್ಮೊಳಗೆ ತಲುಪಿಸುತ್ತಾನೆ. ಚಿತ್ರಮಂದಿರದಿಂದ ಹೊರಬಂದಾಗ ಕತೆ ನಿಮ್ಮೊಳಗೆ ಉಳಿಯದೇ ಇರಬಹುದು. ಆದರೆ ಆ ಚಿತ್ರ ನಿಮಗೆ ನೀಡುವ ದರ್ಶನ ನಿಮ್ಮನ್ನು ನಿಮ್ಮ ಮನೆಯ ತನಕ ತಲುಪಿಸುವುದು ಖಂಡಿತ.

2 comments:

  1. ಪಿ.ಕೆ. ಬಗ್ಗೆ ಸುದೀರ್ಘವಾಗಿ, ಸು೦ದರವಾಗಿ ನೋಡಲು ಪ್ರೇರೇಪಿಸುವ೦ತೆ ಬರೆದಿದ್ದೀರಿ!
    ಈ ದಿನ ಪಿ.ಕೆ. ನೋಡಲು ಹೊರಟಿದ್ದೇವೆ.

    ReplyDelete
  2. ಈ ಸಿನಿಮಾವು ದರ್ಮ ದೇವರುಗಳ ಬಗ್ಗೆ ನಮ್ಮನ್ನು ಚರ್ಚಿಸುವಂತೆ ಮಾಡಿದೆ

    ReplyDelete