Sunday, September 14, 2014

ಮಂಗಳೂರು ವಿಮಾನ ನಿಲ್ದಾಣದಲ್ಲಿ ಉಗ್ರರು!

ಶನಿವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಸರಗೋಡು ಜಿಲ್ಲೆಯ ಉಪ್ಪಳದ ಒಬ್ಬ ತರುಣನನ್ನು (ಹೆಸರು ಅಬ್ದುಲ್ ಖಾದರ್)ವಿಚಾರಣೆಗಾಗಿ ಅಲ್ಲಿನ ಸಿಬ್ಬಂದಿಗಳು ವಶಕ್ಕೆ ತೆಗೆದುಕೊಂಡರು. ಅದರ ಕುರಿತಂತೆ ಬೇರೆ ಬೇರೆ ಪತ್ರಿಕೆಗಳು, ವೆಬ್‌ಸೈಟ್‌ಗಳು ಕೆಳಗಿನಂತೆ ವರದಿ ಮಾಡಿದವು.

ಸಿರಿಯಾ ಉಗ್ರ!: ದಾಯ್ಜಿ ವೆಬ್‌ಸೈಟ್
ಬಂಧಿನತನಿಗೆ ಸಿರಿಯಾ ಉಗ್ರನೊಂದಿಗೆ ಸಂಬಂಧವಿದೆ ಎಂದು ದಾಯ್ಜಿ ವಲ್ಡ್ ಎಂಬ ವೆಬ್‌ಸೈಟ್ ಘೋಷಿಸಿತು. ಸಿರಿಯಾ ಉಗ್ರರೊಂದಿಗೆ ಸಂಬಂಧ ಇದೆ ಎಂದು ಮೂಲಗಳು ತಿಳಿಸಿವೆ ಎಂದಿರುವ ಈ ವೆಬ್‌ಸೈಟ್ ಯಾವ ಮೂಲಗಳು ತಿಳಿಸಿವೆ ಎಂದು ಮಾತ್ರ ಹೇಳಲಿಲ್ಲ. ಜೊತೆಗೆ ಇನ್ನಷ್ಟು ಕಪೋಲಕಲ್ಪಿತ ಕತೆಗಳೊಂದಿಗೆ, ಬೆಚ್ಚಿ ಬೀಳಿಸುವ ಫೋಟೋಗಳು, ಇಸ್ಲಾಮ್ ಧರ್ಮಕ್ಕೆ ಸಂಬಂಧ ಪಟ್ಟ ಸಂಕೇತವನ್ನೂ ಫೋಟೋ ಹೆಸರಿನಲ್ಲಿ ಛಾಪಿಸಿತ್ತು.

ವಿಮಾನ ಸ್ಫೋಟಕ್ಕೆ ಸಂಚು ರೂಪಿಸಿರಬಹುದೇ ಎಂಬ ಶಂಕೆ: ಉದಯವಾಣಿ
‘‘ದುಬೈಗೆ ತೆರಳಲಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬನ ಬಳಿ ಸ್ಫೋಟಕಗಳನ್ನು ತಯಾರಿಸುವ ಸಾಮಗ್ರಿ ಪತ್ತೆಯಾಗಿದ್ದು ವಿಮಾನ ಸ್ಫೋಟಕ್ಕೆ ಸಂಚು ರೂಪಿಸಿರಬಹುದೇ ಎಂಬ ಸಂಶಯ ಮೂಡಿದೆ’’ ಇದು ಉದಯವಾಣಿಯ ವರದಿಯ ಮೊದಲ ಪ್ಯಾರ. ಸಿರಿಯಾ ಮೂಲದ ಭಯೋತ್ಪಾದಕರ ಜೊತೆ ಈತನಿಗೆ ಸಂಬಂಧ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದೂ ಉದಯವಾಣಿ ಹೇಳಿತು.

‘ವಿಜಯಕರ್ನಾಟಕ’ದಿಂದ ಸಹನೆಯ ವರದಿ
ವಿಜಯ ಕರ್ನಾಟಕ ಮಾತ್ರ ‘ಶಂಕಿತ ಸ್ಫೋಟಕ ವಸ್ತು ಪತ್ತೆ’ ಎಂದು ಸಹನೆಯಿಂದ ವರದಿ ಮಾಡಿತ್ತು. ತನ್ನ ವರದಿಯೊಳಗೆ ‘ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಸ್ಫೋಟಕ ಅಂಶ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅದನ್ನು ವಶಕ್ಕೆ ಪಡೆದು ತಪಾಸಣೆಗೆ ಒಳಪಡಿಸಲಾಗುತ್ತಿದೆ’ ಎಂದು ವಿಜಯಕರ್ನಾಟಕ ಹೇಳಿದೆ.

ಸಿರಿಯಾ ಉಗ್ರರಿಂದ ಸ್ಪೋಟಕ ಸರಬರಾಜು: ವಿಜಯವಾಣಿ
ವಿಜಯವಾಣಿ ಪತ್ರಿಕೆಯಂತೂ ಅತ್ಯದ್ಭುತವಾದ ವರದಿಯನ್ನು ಶೋಧಿಸಿ ತೆಗೆದಿತ್ತು ‘‘ಈತನಿಗೆ ಸಿರಿಯಾ ಮೂಲದ ವ್ಯಕ್ತಿ ಸ್ಫೋಟಕ ಒದಗಿಸುತ್ತಿದ್ದ ಎಂದು ವಿಚಾರಣೆ ವೇಳೆ ಅಧಿಕಾರಿಗಳಿಗೆ ತಿಳಿಸಿದ್ದಾನೆ’’ ಎಂದು ವಿಜಯವಾಣಿಯಲ್ಲಿ ವರದಿಯಾಗಿದೆ.



 ಅಂದ ಹಾಗೆ ತರುಣನಲ್ಲಿ ಇದ್ದದ್ದೇನು?
ಇದೀಗ ಪೊಲೀಸರು ತರುಣನಲ್ಲಿ ಇದ್ದದ್ದೇನು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಆತನಲ್ಲಿ ಒಂದು ಕೆಟ್ಟು ಹೋದ ಟ್ಯಾಬ್ ಮತ್ತು ಅದರ ಕಳಚಿದ ಬ್ಯಾಟರಿ ಇತ್ತು. ಮತ್ತೊಂದು ಚಾರ್ಜರ್, ಜೊತೆಗೆ ಇಲೆಕ್ಟ್ರಾನಿಕ್ ವಸ್ತುಗಳನ್ನು ಶುಚಿಗೊಳಿಸುವ ರಾಸಾಯನಿಕ ಇತ್ತು. ಆದರೆ ಎಲ್ಲಕ್ಕಿಂತ ಅಪಾಯಕಾರಿಯಾದುದು ಒಂದಿತ್ತು. ಅದೆಂದರೆ ಆತನ ಹೆಸರು. ಆತನ ಹೆಸರು ಅಬ್ದುಲ್ ಖಾದರ್. ಆದುದರಿಂದ ಸಿಬ್ಬಂದಿಗಳು ಅನುಮಾನ ಪಟ್ಟು ಆತನ ತಪಾಸಣೆಗೈದರು. ಬಳಿಕ ಅದು ಕೇವಲ ಎಲೆಕ್ಟ್ರಾನಿಕ್ ವಸ್ತುಗಳು ಎನ್ನುವುದು ಸಾಬೀತಾಯಿತು.

ತನಿಖೆಯ ಪ್ರಶ್ನೆಯೇ ಇಲ್ಲ: ಕಮಿಶನರ್
  ಅಬ್ದುಲ್ ಖಾದರ್ ಬಳಿ ಸಿಕ್ಕಿರುವುದು ಎಲೆಕ್ಟ್ರಾನಿಕ್ ವಸ್ತುಗಳು ಎಂಬುದು ಸ್ಪಷ್ಟವಾಗಿದೆ. ಆತನಲ್ಲಿ ಯಾವುದೇ ಸ್ಫೋಟಕವಾಗಲಿ, ಅದಕ್ಕೆ ಸಂಬಂಧಪಟ್ಟ ವಸ್ತುವಾಗಲಿ ಪತ್ತೆಯಾಗಿಲ್ಲ. ಆದರ ಬಳಿಕ ಆವರ ವಿರುದ್ಧ ತನಿಖೆ ನಡೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆತನ ಪ್ರಯಾಣ ತಡೆದುದಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳೇ ಜವಾಬ್ದಾರರು. ಅವರ ಯಾನ ತಡೆದುದಕ್ಕೆ ಏನು ಮಾಡುತ್ತಾರೆ ಎಂಬುದು ವಿಮಾನ ನಿಲ್ಧಾಣದ ಪ್ರಾಧಿಕಾರ ಮತ್ತು ಅವರು ಪ್ರಯಾಣಿಸಲಿದ್ದ ವಿಮಾನ ಯಾನ ಸಂಸ್ಥೆಗೆ ಸಂಬಂಧಿಸಿದ ವಿಷಯ ಎಂದು ಮಂಗಳೂರು ಪೊಲೀಸ್ ಕಮೀಷನರ್ ಸ್ಪಷ್ಟಪಡಿಸಿದ್ದಾರೆ.

ಹಾಗಾದರೆ ನಿಜವಾದ ಉಗ್ರರು ಯಾರು?
ಬಂಧಿಸಲ್ಪಟ್ಟ ಯುವ ಉಗ್ರನೂ ಅಲ್ಲ. ಆತನಲ್ಲಿ ಸ್ಫೋಟಕಕ್ಕೆ ಸಂಬಂಧಪಟ್ಟ ಯಾವ ವಸ್ತುವೂ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ ಮತ್ತು ಆತನನ್ನು ಬಿಡುಗಡೆಗೊಳಿಸಿದ್ದಾರೆ ಎಂದ ಮೇಲೆ, ಈ ಗ ಉಳಿಯುವ ಪ್ರಶ್ನೆ ನಿಜವಾದ ಉಗ್ರರು ಯಾರು? ಮದುವೆಯಾಗುವುದಕ್ಕೆಂದೇ ದುಬೈಯಿಂದ ಕಳೆದ ತಿಂಗಳು ಊರಿಗೆ ಮರಳಿದ್ದ ಈ ಉಪ್ಪಳದ ತರುಣ ಮದುವೆ ಮುಗಿಸಿ, ಹೊಸ ಬದುಕು ಅರಸಿ ಮತ್ತೆ ದುಬೈಗೆ ತೆರಳಿದ್ದ. ಆದರೆ ಈ ಎಲ್ಲ ಆದರೆ ಮಾಧ್ಯಮಗಳ ಅವಾಂತರದಿಂದ ಆತ ದುಬೈಗೆ ಕ್ಲಪ್ತ ಸಮಯಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಆದುದರಿಂದ ಉದ್ಯೋಗ ಕಳೆದುಕೊಂಡಿದ್ದಾನೆ. ಆತನ ಮೇಲೆ ಶಂಕಿತ ಉಗ್ರ ಎಂಬ ಮೊಹರನ್ನು ಮಾಧ್ಯಮಗಳು ಒತ್ತಿವೆ. ಆತನ ವ್ಯಕ್ತಿತ್ವ, ಚಾರಿತ್ರದ ಮೇಲೆ ದಾಳಿ ಮಾಡಿವೆ. ಈ ಆಘಾತದಿಂದ ಆತನ ತಂದೆ ಆಸ್ಪತ್ರೆ ಸೇರಿದ್ದಾರೆ. ಈ ಮಾಧ್ಯಮ ಉಗ್ರರಿಂದಾದ ಹಾನಿಗೆ ಆತನಿಗೆ ಪರಿಹಾರ ನೀಡಬೇಕಾದವರು ಯಾರು?

4 comments:

  1. ಬಷೀರ್ ಅವರಿಗೆ-- ನಿಮ್ಮ ಈ ಲೇಖನಕ್ಕೆ ಸಂಬಂಧಿಸಿದಂತೆ ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆಯಾದ 'ಪ್ರಜಾವಾಣಿ'ಯ ೧೫-೯-೧೪ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಸುದ್ದಿಯ ಮುಖ್ಯಾಂಶಗಳು -----
    ೧.ಆತ ದುಬೈನ ಕ್ಯಾಲಿಬರ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಐದು ವರ್ಷಗಳಿಂದ ಉದ್ಯೋಗದಲ್ಲಿದ್ದಾರೆ.
    ೨. ವಿಮಾನ ನಿಲ್ದಾಣದಲ್ಲಿನ ಭದ್ರತಾ ಸಿಬ್ಬಂದಿ ಅವರನ್ನು ತಪಾಸಣೆ ನಡೆಸುವಾಗ ಅವರಲ್ಲಿದ್ದ ಬ್ಯಾಗ್ ನಲ್ಲಿ ಕೆಲವು ಸಂಶಯಾಸ್ಪದ ವಸ್ತು ಪತ್ತೆಯಾಗಿದ್ದವು. ಅವುಗಳ ಬಗ್ಗೆ ಕೇಳಿದಾಗ ಆತ ಸರಿಯಾದ ಮಾಹಿತಿ ನೀಡಿರಲಿಲ್ಲ. ಅದು ಮಹಿಳೆಯೊಬ್ಬರು ನೀಡಿದ ವಸ್ತು ಎಂದು ತಿಳಿಸಿದಾಗ ವಿಮಾನ ನಿಲ್ದಾಣಕ್ಕೆ ಆ ಮಹಿಳೆಯನ್ನು ಕರೆಸಿ ಇಬ್ಬರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
    ೩. ಆ ಮಹಿಳೆ ದುಬೈನಲ್ಲಿರುವ ತನ್ನ ಅಣ್ಣನಿಗೆ ನೀಡಿ ಎಂದು ಕೊಟ್ಟಿದ್ದ ಪುಸ್ತಕದೊಂದಿಗೆ ಟ್ಯಾಬ್ ಮತ್ತು ಬ್ಯಾಟರಿಯನ್ನು ಪ್ಯಾಕ್ ಮಾಡಲಾಗಿತ್ತು ಎಂದು ಕೆಲವು ಮೂಲಗಳು ತಿಳಿಸಿವೆ.
    ೪.ಬ್ಯಾಗ್ ನಲ್ಲಿ ಹಾಳಾಗಿ ಉಬ್ಬಿಕೊಂಡಿದ್ದ ಬ್ಯಾಟರಿ ಇದ್ದುದರಿಂದ ಸ್ಕ್ಯಾನರ್ ಎಚ್ಚರಿಕೆ ನೀಡಿತ್ತು.
    ೫. ಯಾರನ್ನೂ ಬಂಧಿಸಿಲ್ಲ ಎಂದು ಮಂಗಳೂರು ನಗರ ಡಿಸಿಪಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
    ವಿಮಾನ ನಿಲ್ದಾಣದಲ್ಲಿ ಯಾವುದೇ ವ್ಯಕ್ತಿಯ ಪಾಸ್ಪೋರ್ಟ್ ಮತ್ತು ವಿಸಾದಲ್ಲಿ ನಮೂದಾಗಿರುವ ಹೆಸರು, ಧರ್ಮ ನೋಡಿ ಭದ್ರತೆಯ ಸಿಬ್ಬಂದಿ ತಾರತಮ್ಯಮಾಡುವುದಿಲ್ಲ ಎಂಬುದು ತಮಗೆ ತಿಳಿದಿದೆ. ಪತ್ರಿಕೆಗಳ ವರದಿಗಾರರಿಗೆ ಅವರವರ ಚಾಕಚಕ್ಯತೆ ಮೇರೆಗೆ ಪೋಲಿಸ್ ಇಲಾಖೆಯೂ ಸೇರಿದಂತೆ ಸರಿ ಸುಮಾರು ಎಲ್ಲಾ ಇಲಾಖೆಗಳ ಸಿಬ್ಬಂದಿ ಮತ್ತು ಅಧಿಕಾರಿಗಳೊಡನೆ ಸ್ನೇಹ-ಸಂಪರ್ಕಗಳಿರುತ್ತವೆ. ಅಂತಹವರು ನೀಡಿದ ಸುದ್ದಿಯಲ್ಲಿ ಅವರ ಹೆಸರನ್ನು ಹೇಳಲಾಗುವುದಿಲ್ಲ. 'ಬಲ್ಲ ಮೂಲಗಳು', 'ವಿಶ್ವಾಸನೀಯ ಮೂಲಗಳು' ಎಂದೇ ಪತ್ರಿಕೆಗಳಲ್ಲಿ ಬರೆಯಬೇಕಾಗುತ್ತದೆ. ಇದು ಸ್ವತಃ ಪತ್ರಕರ್ತರಾದ ತಮಗೆ ತಿಳಿದಿದೆ. ಈ ಎಲ್ಲಾ ತನಿಖೆಯಿಂದ ದುಬೈಗೆ ಹೊರಟಿದ್ದ ಆ ವ್ಯಕ್ತಿ ಸರಿಯಾದ ಸಮಯಕ್ಕೆ ಅಲ್ಲಿಗೆ ಹೋಗಲಾರದೆ ಕೆಲಸ ಕಳೆದುಕೊಳ್ಳಬೇಕಾಯ್ತು ಎಂಬ ಅರ್ಥ ಬರುವ ರೀತಿಯಲ್ಲಿ ಬರೆದಿದ್ದೀರಿ. ಒಂದು ಕಂಪನಿಯಲ್ಲಿ ಐದು ವರ್ಷಗಳಿಂದ ಮ್ಯಾನೇಜರ್ ಆಗಿರುವ ಒಬ್ಬ ವ್ಯಕ್ತಿಗೆ ನಿರ್ದಿಷ್ಟ ಸಮಯಕ್ಕೆ ಕೆಲಸದ ಜಾಗಕ್ಕೆ ತಲುಪಲಾಗದಿದ್ದರೆ, ಒಂದೆರೆಡು ದಿನ ರಜೆ ಸಿಗಲಾರದೆ? ಕೊನೆಯದಾಗಿ ಪತ್ರಿಕೆಗಳಲ್ಲಿಯೂ ಸಹ ಇಂದು ಅವುಗಳ ಸಂಪಾದಕರು ಮತ್ತು ಯಜಮಾನರ ಧ್ಯೇಯ,ಧೋರಣೆ ಮತ್ತು ಮುಖ್ಯವಾಗಿ 'ಹಿಡನ್ ಅಜೆಂಡಾ'ಗಳು ಕಾರಣವಾಗಿ ಸುದ್ದಿಗಳ presentationನಲ್ಲಿ ವ್ಯತ್ಯಯಗಳಾಗುತ್ತವೆ. ಹಾಗೆಂದು ಪತ್ರಿಕೆಗಳಿಗೆ 'ನೀತಿ ಸಂಹಿತೆ' ರೂಪಿಸಲು ಹೊರಟರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಬ್ಬಾಳಿಕೆ ಎನಿಸಿಕೊಳ್ಳುತ್ತದೆ. ಹೀಗಾಗಿ ಇದನ್ನು ಅನಿವಾರ್ಯವಾಗಿ ಸಹಿಸಿಕೊಳ್ಳಲೇ ಬೇಕಾಗಿದೆ. ತೀರಾ ಖಾಸಗಿ ವಿಚಾರವಾದರೆ ಮಾನನಷ್ಟ ಮೊಕದ್ದಮೆ ಹಾಕಬಹುದಷ್ಟೇ.
    -ಎಂ ಎ ಶ್ರೀರಂಗ ಬೆಂಗಳೂರು.
    .

    ReplyDelete
    Replies
    1. ವಿಮಾನ ಪ್ರಯಾಣಿಕರು, ಅವರು ಮುಸ್ಲಿಮರೇ ಆಗಲಿ ಅಥವಾ ಮುಸ್ಲಿಮೇತರರೇ ಆಗಲೇ, ತಮ್ಮ ಜವಾಬ್ದಾರಿಗಳನ್ನು ಮರೆತು ನಿಷೇಧಿತ ವಸ್ತುಗಳನ್ನು ತಮ್ಮ ಜೊತೆ ತೆಗೆದುಕೊಂಡು ಹೋಗಕೂಡದು. ಬಷೀರ್ ಅವರು ತಮ್ಮ ಪತ್ರಿಕೆಯ ಓದುಗರಿಗೆ ಬುದ್ಧಿ ಮಾತು ಹೇಳುವುದರ ಬದಲು ಪ್ರಕರಣಕ್ಕೆ ಮತೀಯತೆಯ ಸ್ವರೂಪ ಕೊಟ್ಟದ್ದು ಖೇದನೀಯ.

      Delete
  2. ಮುಸಲ್ಮಾನರು, ಎಚ್ಚೆತ್ತುಕೊಳ್ಳಬೇಕಾದ ಕಾಲ ಬಂದಿದೆ. ಸಾಮಾನ್ಯ ಮುಗ್ದ ಮುಸಲ್ಮಾನರು ಭಯೋತ್ಪಾದಕರನ್ನ ಬಹಿರಂಗವಾಗಿ ಬಹಿಶ್ಕರಿಸದೇ ಬಾಯಿಮುಚ್ಚಿ ಕುಳಿತರೆ,ಅನ್ಯಾಯವಾಗಿ ಮುಸಲ್ಮಾನರನ್ನೆಲ್ಲಾ ಈ ಜಗತ್ತು ಭಯೋತ್ಪಾದಕರಂತೆ ( ಭಯದಿಂದ) ನೋಡುವ ದಿನ ದೂರವಿಲ್ಲ!

    ReplyDelete
  3. ಮುಸಲ್ಮಾನರು, ಎಚ್ಚೆತ್ತುಕೊಳ್ಳಬೇಕಾದ ಕಾಲ ಬಂದಿದೆ. ಸಾಮಾನ್ಯ ಮುಗ್ದ ಮುಸಲ್ಮಾನರು ಭಯೋತ್ಪಾದಕರನ್ನ ಬಹಿರಂಗವಾಗಿ ಬಹಿಶ್ಕರಿಸದೇ ಬಾಯಿಮುಚ್ಚಿ ಕುಳಿತರೆ,ಅನ್ಯಾಯವಾಗಿ ಮುಸಲ್ಮಾನರನ್ನೆಲ್ಲಾ ಈ ಜಗತ್ತು ಭಯೋತ್ಪಾದಕರಂತೆ ( ಭಯದಿಂದ) ನೋಡುವ ದಿನ ದೂರವಿಲ್ಲ!

    ReplyDelete