Saturday, September 20, 2014

ವೆಜಿಟೇರಿಯನ್ ರಕ್ತ ಮತ್ತು ಇತರ ಕತೆಗಳು

 ಕೊಲೆ
ಕವಿಯನ್ನು ಬಂಧಿಸಲಾಯಿತು.
ಜೈಲಿನಲ್ಲಿ ಆತನಿಗೆ ಓದಲು, ಬರೆಯಲು ಪುಸ್ತಕ,ಕಾಗದಗಳನ್ನು ನೀಡದೆ  ಕೊಂದು ಹಾಕಲಾಯಿತು


ಲೈಕು
ಅವನು ಸತ್ತ ಸುದ್ದಿಗೆ
ಫೇಸ್ ಬುಕ್ ತುಂಬಾ
ಲೈಕುಗಳು !

ಆಸೆ
ಬಾಲ್ಯದಲ್ಲಿ ಅವನಿಗೆ ವೈದ್ಯ ಆಗುವ ಆಸೆ
ಬೆಳೆದಂತೆ ಪೋಲಿಸ್ ಆದರೆ ಒಳ್ಳೆಯದು ಅನ್ನಿಸಿತು
ಹರೆಯದಲ್ಲಿ ಪೈಲಟ್ ಆಗಲು ಬಯಸಿದ
ಕೊನೆಗೆ ಆತ ಕಲಾವಿದನಾದ
ಆಗ ಬೇಕಾದುದನೆಲ್ಲ ಅಭಿನಯಿಸಿ
ಒಂದೇ ಬದುಕಲ್ಲಿ ಆಸೆ ತೀರಿಸಿಕೊಂಡ

ವೆಜಿಟೇರಿಯನ್ ರಕ್ತ
ಗೆಳೆಯನೊಬ್ಬನಿಂದ  ದೂರವಾಣಿ ಕರೆ "ತುರ್ತಾಗಿ ಬಿ ನೆಗೆಟಿವ್ ರಕ್ತ ಬೇಕಾಗಿದೆ. ವೆಜಿಟೇರಿಯನ್ ರಕ್ತ ಆಗಿದ್ದರೆ ತುಂಬಾ ಉಪಕಾರ. ದಯವಿಟ್ಟು ಪ್ರಯತ್ನಿಸಿ. ನನ್ನ ತಂದೆಯ ಜೀವ ಅಪಾಯದಲ್ಲಿದೆ"

ಬಂಗಾರ
"ಒಂದು ಕಾಲದಲ್ಲಿ ಆಟೋ ರಿಕ್ಷಾ ಓಡಿಸುತ್ತಿದ್ದ ನೀವು ಇಂದು ಈ ಮಟ್ಟಿಗೆ ಮೇಲೆ ಬಂದುದು ಹೇಗೆ?"
"ಅದರ ಹಿಂದೆ ಒಂದು ಕತೆ ಇದೆ. ಒಂದು ದಿನ ನನ್ನ ಆಟೋದಲ್ಲಿ ಪ್ರಯಾಣಿಕನೊಬ್ಬ ಒಂದು ಕಟ್ಟು ಬಿಟ್ಟು ಹೋದ. ತೆರೆದು ನೋಡಿದರೆ ಒಳಗೆ ಪುಟ್ಟ ಬ್ಯಾಗ್. ಅದರ ತುಂಬಾ ಬಂಗಾರ. ಜೊತೆಗೆ ಆದಾಗಲೇ ಪ್ರಿಂಟ್ ಮಾಡಿಸಿದ ಮಗಳ ಮದುವೆ ಆಮಂತ್ರಣ ಪತ್ರ "
"ಅಂದ್ರೆ ... "
"ನಾನು ಆ ಬಂಗಾರವನ್ನು ಆ ಕುಟುಂಬದ ವಿಳಾಸ ಹುಡುಕಿ ಅವರಿಗೆ ತಲುಪಿಸಿದೆ. ಅಂದಿನಿಂದ ನಾನು ಮುಟ್ಟಿದ್ದೆಲ್ಲ ಬಂಗಾರವಾಗ ತೊಡಗಿತು"

ಅವಲಕ್ಕಿ
ಒಂದು ಮುಷ್ಟಿ ಅವಲಕ್ಕಿ ನೀಡಿದ್ದಕ್ಕೆ ಕೃಷ್ಣ ಕುಚೇಲನಿಗೆ ಶ್ರೀಮಂತಿಕೆಯ ಭಂಡಾರವನ್ನೇ ಕೊಟ್ಟದ್ದು ಊರಿಡೀ ಸುದ್ದಿಯಾಯಿತು.
ಎಲ್ಲರೂ ಅವಲಕ್ಕಿ ಮೂಟೆಗಳೊಂದಿಗೆ ಕೃಷ್ಣನ ಅರಮನೆಯ ಮುಂದೆ ನೆರೆದರು.
ಕೃಷ್ಣ ನಕ್ಕ. "ನಿಮ್ಮ ಅವಲಕ್ಕಿಗೂ ಕುಚೇಲನ ಅವಲಕ್ಕಿಗೂ ವ್ಯತ್ಯಾಸ ಇದೆ'' ಎಂದ.
"ಏನದು'' ಎಲ್ಲರು ನಿರಾಸೆಯ ದ್ವನಿಯಿಂದ ಕೇಳಿದರು.
"ಒಂದು ಮುಷ್ಠಿ ಅವಲಕ್ಕಿ ಕುಚೇಲನ ಮನೆಯೊಳಗಿದ್ದ ಸರ್ವಸ್ವ ಸಂಪತ್ತಾಗಿತ್ತು. ನೀವು ನನ್ನ ಸ್ನೇಹಕ್ಕಾಗಿ ನಿಮ್ಮ ಸರ್ವಸ್ವ ಸಂಪತ್ತನ್ನು ಒಂದು ಮುಷ್ಟಿಯೊಳಗೆ ತುಂಬಿಸಿ ತಂದರೆ ನನ್ನ ಸ್ನೇಹವನ್ನು ಗಳಿಸಬಹುದು''

3 comments:

  1. Sir, I loved the last one, AVALAKKI!

    ReplyDelete
  2. ಅರ್ಥಗರ್ಭಿತ ನ್ಯಾನೋ ಕಥೆಗಳು ...

    ReplyDelete
  3. ತುಂಬಾ ಚೆನ್ನಾಗಿವೆ ಬಷೀರ್...

    ReplyDelete