Tuesday, July 8, 2014

ಹನಿಗಳಲ್ಲಿ ಇರುವೆಗಳು



1
ಗುಬ್ಬಿಯ
ತಲೆ ಮೇಲಿನ ನೆರಳಿಗೆ
ಒಂದು ಪುಟ್ಟ ಎಲೆ ಸಾಕು
ಮನುಷ್ಯನಿಗೋ
ಎಲ್ಲೆ ಇಲ್ಲ
ಆಕಾಶವೂ ಸಾಲೋದಿಲ್ಲ
2
ಹರಿದು ಬಿದ್ದ
ಕರಿಮಣಿ ಸರದಂತೆ
ಚೆಲ್ಲಾಪಿಲ್ಲಿಯಾಗಿರುವ
ಇರುವೆಗಳು
3
ಈ ಭೂಮಿ
ಯಾವ ಭಗದಿಂದ
ಉದುರಿ ಬಿದ್ದ
ಬೀಜ!?
4
ದೇವರೇ
ನನ್ನ ಉಪವಾಸ
ಬಡವರ ಹಸಿವಿನ
ಅಣಕವಾಗದಿರಲಿ!
5
ದೇವರೇ,
ಪುಟ್ಟ ಇರುವೆಗೆ
ದೊಡ್ಡ ದುಃಖ ಕೊಡಬೇಡ
ಅದರ ಕಣ್ಣೀರಲ್ಲೇ ಅದು
ಮುಳುಗಿ ಸತ್ತೀತು ಪಾಪ!
6
ಅವಳು ಅತ್ತ
ಇವನು ಅತ್ತ !!
7
ನಿನ್ನೆ ಸಂಜೆ
ಮನಸು ಚದುರಿದ ರಂಗೋಲಿ
ಚೆಲ್ಲಾಪಿಲ್ಲಿಯಾದ ಬಣ್ಣ
ಇಂದು ಮುಂಜಾನೆ
ಕಣ್ಣು ತೆರೆದರೆ ಮನಸು
ಸಾರಿಸಿಟ್ಟ ಅಂಗಳ !
8
ಸಕ್ಕರೆ ಕಾಯಿಲೆ
ಎಂದು ವೈದ್ಯರ ಮನೆಯ
ಬಾಗಿಲು ತಟ್ಟಿದರೆ
ಅಲ್ಲಿ ಇರುವೆಗಳು
ಸಾಲು ಗಟ್ಟಿ ನಿಂತಿವೆ !
9
ಅನಂತದಲ್ಲಿ ನೀನು
ತೇಲಿ ಬಿಟ್ಟ ಹಡಗು
ಈ ಭೂಮಿ
ಕಣದಲ್ಲಿ ಕಣವಾಗಿದ್ದ
ನನ್ನನ್ನು ಗುರುತಿಸಿ
ಹತ್ತಿಸಿಕೊಂಡೆಯಲ್ಲ
ಶರಣು ನನ್ನ ದೊರೆಯೇ
10
ಮದ್ಯದಂಗಡಿಯಲ್ಲಿ ಲೆಕ್ಕ ಬರೆದು
ಆತ ಪ್ರತಿ ದಿನ
ಮಗುವಿಗೆ ಹಾಲು
ಕೊಂಡೊಯ್ಯುತ್ತಾನೆ
12

ಇಷ್ಟಗಲ ಚಾಚಿರುವ
ಈ ಆಕಾಶ
ಯಾವ ಮರದ ಎಲೆ?

13
ಕವಿತೆಗಳು
ಸಿಹಿಯಾಗಿದ್ದರೆ
ಅಕ್ಷರಗಳು
ಇರುವೆಗಳಂತೆ
ಬಂದು ಮುತ್ತಿ ಕೊಳ್ಳುತ್ತವೆ

1 comment:

  1. ತುಂಬಾ ಚೆನ್ನಾಗಿವೆ ಬಷೀರ್...

    ReplyDelete