Saturday, July 5, 2014

ಮಗು!

 ಹಣೆಗೆ ಅಂಟಿದ್ದ ಬೆವರನ್ನು ಒರೆಸುತ್ತಾ ಅವನು ಆಸ್ಪತ್ರೆಯಿಂದ ಹೊರ ಬರುತ್ತಿದ್ದಾನೆ. ಫೇಲಾದ ಮಗು ನಡುಗುವ ಕೈಯಲ್ಲಿ ಅಂಕಪಟ್ಟಿ ಹಿಡಿದುಕೊಂಡಂತೆ, ಅವನ ಕೈಯಲ್ಲಿ ಆ ರಿಪೋರ್ಟ್ ಕಂಪಿಸುತ್ತಿತ್ತು. ಕಾದ ಸರಳಿನಿಂದ ಬರೆ ಎಳೆಯುವಂತೆ ವೈದ್ಯರು ಹೇಳಿದ್ದರು ‘‘ಬೇಸರಿಸಬೇಡಿ. ನಿಮಗೆ ಮಗು ಆಗುವ ಸಾಧ್ಯತೆ ಇಲ್ಲ. ನಿಮ್ಮ ಪತ್ನಿಗೆ ಸಮಸ್ಯೆಯನ್ನು ವಿವರಿಸಿ ಒಂದು ಮಗುವನ್ನು ದತ್ತು ತೆಗೆದುಕೊಳ್ಳಿ...’’
ಆಸ್ಪತ್ರೆಯಿಂದ ನೇರವಾಗಿ ಅವನು ಗೊಂಬೆಯ ಅಂಗಡಿಗೆ ಹೋದ. ಅಲ್ಲಿ ಸಣ್ಣದು, ದೊಡ್ಡದು ಎಂದು ವಿಧ ವಿಧದ ಗೊಂಬೆಗಳು ತೂಗುತ್ತಿದ್ದವು. ಎರಡು ಗೊಂಬೆಗಳನ್ನು ಆರಿಸಿ ಕೊಂಡ. ಒಂದು ಹೆಣ್ಣು. ಇನ್ನೊಂದು ಗಂಡು. ಹಾಗೆಯೇ ಜೊತೆಗೇ ಒಂದು ಗಿಲಗಿಲಕಿಯನ್ನು ಕೊಂಡು ಆಡಿಸಿದ. ಗಿಲಿಗಿಲಿ ಎಂದು ಸದ್ದು ಮಾಡತೊಡಗಿತು. ಆ ಸದ್ದಿಗೆ ಜೊತೆಗಿರುವ ಗೊಂಬೆಗಳು ನಕ್ಕಂತೆ ಭಾಸವಾಯಿತು.
ಪ್ರಥಮ ರಾತ್ರಿ ಆಕೆಯ ಮುಗ್ಧ ಮುಖವನ್ನು ಬೊಗಸೆಯಲ್ಲಿಟ್ಟು ಹೇಳಿದ್ದ ‘‘ನನಗೆ ಹತ್ತು ಮಕ್ಕಳು ಬೇಕು’’
ಅವಳೋ ಕಣ್ಣ ರೆಪ್ಪೆಯನ್ನು ತೆರೆಯದೆಯೇ ಗಂಭೀರವಾಗಿ ಉತ್ತರಿಸಿದ್ದಳು ‘‘ಸರಿ’’
ಅವನೋ ಹೆದರಿ ಬಿಟ್ಟಿದ್ದ ‘‘ನಾನು ಸುಮ್ಮಗೇ ಹೇಳಿದೆ. ನಮಗೆ ಎರಡು ಮಕ್ಕಳು ಸಾಕು...’’
ಅವಳಾಗ ರೆಪ್ಪೆ ತೆರೆದಳು ‘‘ನನಗೆ ಮಕ್ಕಳೆಂದರೆ ಇಷ್ಟ. ಹತ್ತಾದರೆ ಹತ್ತು...ಹೆತ್ತು ಕೊಡುವೆ...’’
  ಮದುವೆಯಾಗಿ ನಾಲ್ಕು ವರ್ಷ ಕಳೆಯಿತು. ನಿರೀಕ್ಷೆಗಳು ಬತ್ತಿ ಹೋಗ ತೊಡಗಿದವು. ಇನ್ನು ಮಕ್ಕಳೇ ಆಗುವುದಿಲ್ಲವೇನೋ ಎಂಬ ಭಯ ಕಾಡಿದಾಗ ಪತ್ನಿಯ ಜೊತೆಗೆ ಗೆಳೆಯನ ಆಸ್ಪತ್ರೆಗೆ ತೆರಳಿದ. ಮೊದಲು ಪತ್ನಿಯ ಪರೀಕ್ಷೆಯಾಯಿತು. ಬಳಿಕ ಅವನದು. ಫಲಿತಾಂಶಕ್ಕೆ ಅವನು ಬೆಚ್ಚಿ ಬಿದ್ದಿದ್ದ ‘‘ನಿನ್ನಲ್ಲಿ ಸ್ವಲ್ಪ ಸಮಸ್ಯೆ ಇದೆ’’ ಗೆಳೆಯ ಹೇಳಿದ್ದ.
ಇವನೋ ಪತ್ನಿಗೆ ಎಲ್ಲವನ್ನೂ ಮುಚ್ಚಿಟ್ಟ ‘‘ನಿಧಾನಕ್ಕೆ ಮಕ್ಕಳಾದೀತು ಎಂದಿದ್ದಾರೆ ವೈದ್ಯರು’’
ಅವಳೂ ಒಪ್ಪಿದ್ದಳು ‘‘ಆದೀತು...’’
ಇದಾದ ಮೇಲೆ ಎರಡು ಬಾರಿ ಅವನು ಬೇರೆ ಬೇರೆ ವೈದ್ಯರನ್ನು ಸಂಪರ್ಕಿಸಿದ್ದ. ಎಲ್ಲ ಕಡೆಯೂ ಒಂದೇ ಫಲಿತಾಂಶ. ಇದೀಗ ಮತ್ತೆ ಎರಡು ವರ್ಷ ಕಳೆದ ಬಳಿಕ ನಡುಗುತ್ತಾ ಮರು ಪರೀಕ್ಷೆ ಬರೆಯುವ ವಿದ್ಯಾರ್ಥಿಯಂತೆ ಆಸ್ಪತ್ರೆಯ ಬಾಗಿಲು ತಟ್ಟಿದ್ದ. ವೈದ್ಯರು ಅಂಕ ಹಾಕಿ ಕೊಟ್ಟ ಫಲಿತಾಂಶ ಕೈಯ ಹಿಡಿತಕ್ಕೆ ಮುದುಡಿ ಹೋಗಿತ್ತು.
ಕೊಂಡುಕೊಂಡ ಎರಡು ಗೊಂಬೆಗಳನ್ನು, ಗಿಲಕಿಗಳನ್ನು ಪ್ಯಾಕ್ ಮಾಡಿಸಿದ. ಅಲ್ಲಿಂದ ಆತ ಸಿಹಿ ಅಂಗಡಿಗೆ ತೆರಳಿದ. ಒಂದಿಷ್ಟು ಸಿಹಿತಿನಸುಗಳನ್ನು ಕೊಂಡುಕೊಂಡ. ಅಲ್ಲಿಂದ ನೇರ ಮಕ್ಕಳ ಬಟ್ಟೆಯಂಗಡಿಗೆ ತೆರಳಿದ. ಈಗಷ್ಟೇ ಹುಟ್ಟಿದ ಮಗುವಿಗೆ ಬೇಕಾಗುವ ಎಲ್ಲ ವಸ್ತುಗಳೂ ಅಲ್ಲಿದ್ದವು. ಅಂಗೈಯಗಲದ ಫ್ರಾಕು. ಅದಕ್ಕೆ ಹೊಂದಿಕೆಯಾಗುವ ಬಟ್ಟೆಯ ಶೂ. ಕರಿಮಣಿಯ ಬಳೆ. ಎಲ್ಲವನ್ನು ಜೋಡಿಸಿ ಪ್ಯಾಕ್ ಮಾಡಿಸಿ ಮನೆಯ ಕಡೆಗೆ ಹೊರಟ.
ಮನೆಯ ಅಂಗಳಕ್ಕೆ ಕಾಲಿಟ್ಟರೆ ನೆಂಟರಿಷ್ಟರು, ನೆರೆಹೊರೆಯ ಜನರು ಒಬ್ಬೊಬ್ಬರಾಗಿ ಬರುತ್ತಿದ್ದಾರೆ.
ಅವಳು ಸಡಗರದಿಂದ ಬಾಗಿಲ ಬಳಿಗೆ ಬಂದಳು ‘‘ರೀ...ಎಷ್ಟು ಹೊತ್ತು. ಎಲ್ಲರೂ ಬರುತ್ತಿದ್ದಾರೆ...ಮಗುವನ್ನು ತೊಟ್ಟಿಲಿಗೆ ಹಾಕುವ ಹೊತ್ತಾಯಿತು...ಬನ್ನಿ...’’
ತಿಂಡಿ, ಬಟ್ಟೆ, ಗೊಂಬೆಗಳನ್ನೆಲ್ಲ ಅವಳ ಕೈಗೆ ಕೊಟ್ಟ. ಕೈಯಲ್ಲಿದ್ದ ರಿಪೋರ್ಟ್‌ನ್ನು ಮಾತ್ರ ಹಾಗೆಯೇ ತನ್ನ ಕಿಸೆಗೆ ತುರುಕಿಕೊಂಡ.
ಜೀವನದಲ್ಲಿ ಮೊದಲ ಬಾರಿ ಅವಳ ಮುಖದಲ್ಲಿ ಸಡಗರವನ್ನು ನೋಡುತ್ತಿದ್ದಾನೆ. ಬಸುರಾದ ಸಂಭ್ರಮ. ಹೆತ್ತ ಸಂಭ್ರಮ. ಇದೀಗ ಮಗುವನ್ನು ತೊಟ್ಟಿಲಿಗೆ ಹಾಕಿ ಜೀಕುವ ಸಂಭ್ರಮ. ಮನೆಗೆ ಒಬ್ಬೊಬ್ಬರಾಗಿ ಬರುತ್ತಿರುವ ನೆರೆಹೊರೆಯ ಗಂಡಸರ
ನ್ನು  ಅವನು ಇದೇ ಮೊದಲ ಬಾರಿ ನೋಡುವವನಂತೆ ಕಣ್ಣಿಟ್ಟು ನೋಡತೊಡಗಿದ.
‘‘ನನ್ನ ಮಗು ಯಾರಂತೆ?’’ ತನಗೆ ತಾನೆ ಕೇಳಿಕೊಂಡ.
ಅಷ್ಟರಲ್ಲಿ ಅವನ ತಾಯಿ ಒಳಗಿನಿಂದ ಮಾತನಾಡುವುದು ಕೇಳಿಸಿತು ‘‘ಥೇಟ್ ಅಪ್ಪನಂತೆಯೇ ಇದ್ದಾನೆ...ಅದೇ ಹಣೆ, ಅದೇ ಕಣ್ಣು, ಅದೇ ಗಾಂಭೀರ್ಯ...ಇಷ್ಟು ವರ್ಷದ ಬಳಿಕ ಹುಟ್ಟಿದ ಮಗು, ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾನೆ...’’
ಅಷ್ಟರಲ್ಲಿ ಅವಳು ಅವನನ್ನ ಕೈ ಹಿಡಿದು ಅಲುಗಾಡಿಸಿದಳು ‘‘ಯಾಕ್ರೀ...ಹೀಗೆ ಹೊರಗೆ ಕಲ್ಲಿನಂತೆ ನಿಂತಿದ್ದೀರಿ...ಬನ್ನಿ ಒಳಗೆ...’’
ಹೆಂಡತಿಯನ್ನೇ ಕಣ್ಣಿಟ್ಟು ನೋಡಿದ. ಅವಳ ಕಣ್ಣ ಕೊಳದಲ್ಲಿ ಒಂದಿಷ್ಟು ಕಲ್ಮಶವಿಲ್ಲ. ಅಲ್ಲಿ ತನ್ನದೇ ಪ್ರತಿಬಿಂಬ.
‘‘ಥ್ಯಾಂಕ್ಸ್ ಕಣೇ...ನನ್ನಷ್ಟೇ ಮುದ್ದಾದ ಮಗುವೊಂದನ್ನು ಹೆತ್ತುಕೊಟ್ಟದ್ದಕ್ಕೆ. ಇಂಥಹ ಹತ್ತು ಮಗು ಬೇಕು ನನಗೆ’’ ಅವಳ ಮೊಗವನ್ನು ಬೊಗಸೆಯಲ್ಲಿ ತೆಗೆದುಕೊಂಡು ಹೇಳಿದ.
ಅವಳ ಕಣ್ಣು ಅದೇಕೋ ತುಳುಕಿತು. ‘‘ಬೇಡ. ಇದೊಂದೆ ಸಾಕು. ಈ ಜನ್ಮಕ್ಕೂ, ಮುಂದಿನ ನೂರು ಜನ್ಮಕ್ಕೂ ನಮಗಿಬ್ಬರಿಗೆ ಈ ಒಂದು ಮಗುವೇ ಸಾಕು...’’ ಎನ್ನುತ್ತಾ ಅವನ ಎದೆಗೆ ಒರಗಿ ಬಿಕ್ಕತೊಡಗಿದಳು.

No comments:

Post a Comment