Saturday, November 9, 2013

ಮಕ್ಕಳಿಗಾಗಿ ಬೇಕು ಮಕ್ಕಳ ಚಿತ್ರ

ಕನ್ನಡ ಚಲನ ಚಿತ್ರೋದ್ಯಮ ಹಲವು ಮೈಲುಗಲ್ಲುಗಳನ್ನು ದಾಟಿ ಬಂದಿದೆ. ಹೊಸ ಅಲೆಯ ಚಿತ್ರಗಳಿಂದ ಹಿಡಿದು, ಜನಪ್ರಿಯ ಚಿತ್ರಗಳವರೆಗೆ ಇದು ಹೊಸ ಹೊಸ ಪ್ರಯೋಗಗಳ ಮೂಲಕ ಬೆಳೆದಿದೆ. ಕಲಾತ್ಮಕ ಮತ್ತು ಜನಪ್ರಿಯ ಚಿತ್ರಗಳು ಎರಡು ರೇಖೆಗಳಾಗಿ ಈ ಚಿತ್ರೋದ್ಯಮವನ್ನು ಒಡೆದಿದ್ದರೂ, ಹಲವಡೆ ಈ ರೇಖೆಗಳನ್ನು ಜೊತೆಯಾಗಿಸುವ ಪ್ರಯತ್ನವೂ ನಡೆದಿದೆ. ಆದರೆ ಇದೇ ಸಂದರ್ಭದಲ್ಲಿ ಮಕ್ಕಳ ಚಿತ್ರಗಳಿಗಾಗಿಯೂ ಗಾಂಧಿನಗರ ಗುರುತಿಸಲ್ಪಟ್ಟಿದೆ. ರಾಷ್ಟ್ರ ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಆದರೆ ಮಕ್ಕಳ ಚಿತ್ರಗಳನ್ನು ನಿರ್ಮಾಪಕರಾಗಲಿ, ಪ್ರೇಕ್ಷಕರಾಗಲಿ ಗಂಭೀರವಾಗಿ ಸ್ವೀಕರಿಸಿದ್ದು ಕಡಿಮೆ. ಹೆಚ್ಚೆಂದರೆ ಪ್ರಶಸ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಲ್ಲಿ ಮಕ್ಕಳ ಚಿತ್ರ ನಿರ್ಮಾಣಗೊಂಡಿವೆ. ಆದರೆ ಮಕ್ಕಳನ್ನೇ ಪ್ರೇಕ್ಷಕರೆಂದು ಭಾವಿಸಿ ಅವರನ್ನು ಸೆಳೆಯಲು ಸೃಷ್ಟಿಯಾದ ಸಿನೆಮಾಗಳು ತೀರಾ ಕಡಿಮೆ.

ಮನರಂಜನಾ ಕ್ಷೇತ್ರದಲ್ಲಿ ಮಕ್ಕಳ ಭಾಗವಹಿಸುವಿಕೆ ಅತಿ ದೊಡ್ಡದು. ಮನರಂಜನೆಯೆನ್ನುವುದೇ ಮಕ್ಕಳಿಗಾಗಿ ಸೃಷ್ಟಿಯಾದ ಪದ. ನಾಟಕಗಳಲ್ಲಿ ಮಕ್ಕಳಿಗಾಗಿ ಬಹಳಷ್ಟು ಪ್ರಯೋಗಗಳು ನಡೆದಿವೆ. ಆದರೆ ಸಿನೆಮಾ ಕ್ಷೇತ್ರದಲ್ಲಿ ಮಕ್ಕಳನ್ನು ಸಂಪೂರ್ಣ ಉಪೇಕ್ಷಿಸಿರುವುದು ಎದ್ದು ಕಾಣುತ್ತದೆ. ಮಕ್ಕಳಿಗಾಗಿ, ಮಕ್ಕಳನ್ನು ರಂಜಿಸುವುದಕ್ಕಾಗಿ ಸೃಷ್ಟಿಯಾದ ಚಿತ್ರಗಳು ಯಶಸ್ವಿ ಪಡೆದಿರುವುದಕ್ಕೂ ಉದಾಹರಣೆಗಳಿವೆ. ಆದರೂ ಮಕ್ಕಳನ್ನು ಲಾಭದಾಯಕ ಪ್ರೇಕ್ಷಕರು, ಗ್ರಾಹಕರು ಎಂದು ಸ್ವೀಕರಿಸಲು ಈ ಮಾಧ್ಯಮ ಇನ್ನೂ ಹೆದರುತ್ತಿರುವುದು ಬಹಳ ವಿಚಿತ್ರವೆನಿಸುತ್ತದೆ. ಮಕ್ಕಳನ್ನು ಪ್ರೇಕ್ಷಕರ ವರ್ಗದಲ್ಲಿ ಸ್ವೀಕರಿಸದ ಪರಿಣಾಮವಾಗಿಯೇ, ಇಂದು ಇಲ್ಲಿ ಬರುವ ಒಂದೆರಡು ಮಕ್ಕಳ ಚಿತ್ರಗಳೂ ದೊಡ್ಡವರಿಗಾಗಿಯೇ ತೆಗೆದಿರುವಂತೆ ಭಾಸವಾಗುತ್ತದೆ. ಅತ್ತ ಮಕ್ಕಳನ್ನೂ ರಂಜಿಸದೆ, ಇತ್ತ ದೊಡ್ಡವರಿಗೂ ಯೋಗ್ಯವಾಗದೆೆ, ವಿಕಲ್ಪ ಮಗುವೊಂದರ ಭಾವವನ್ನು ಈ ಚಿತ್ರಗಳು ಉಂಟು ಮಾಡುತ್ತವೆ. ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಮಕ್ಕಳ ಚಿತ್ರವೆಂದು ಗುರುತಿಸಲ್ಪಟ್ಟ ‘ಗುಬ್ಬಚ್ಚಿಗಳು’ ಸಿನೆಮಾವನ್ನು ತೆಗೆದುಕೊಳ್ಳಬಹುದು.


ಇದರ ಕತಾವಸ್ತುವೇನೋ ಚೆನ್ನಾಗಿಯೇ ಇದೆ. ಮಕ್ಕಳ ಮೂಲಕ ಕಾಣೆಯಾದ ಗುಬ್ಬಚ್ಚಿಗಳ ಬಗ್ಗೆ ಜಾಗೃತಿ ಮೂಡಿಸುವ ಚಿತ್ರ ಇದು. ಆದರೆ ಈ ಚಿತ್ರ ಮಕ್ಕಳನ್ನು ಎಷ್ಟರ ಮಟ್ಟಿಗೆ ರಂಜಿಸಬಲ್ಲುದು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ದೊಡ್ಡವರಿಗೂ ಅರ್ಥವಾಗದ ಈ ಚಿತ್ರ ಯಾರನ್ನು ಉದ್ದೇಶದಲ್ಲಿಟ್ಟು ಮಾಡಲಾಗಿದೆ? ಎನ್ನುವುದೂ ಅರ್ಥವಾಗುವುದಿಲ್ಲ. ಸಂಕೀರ್ಣವಾದ ಕಥಾ ಹೆಣಿಗೆ ಇದಕ್ಕೆ ಮುಖ್ಯ ಕಾರಣವಾಗಿರಬಹುದು. ಮಕ್ಕಳ ಚಿತ್ರವೆಂದಾಗ ಹಾಡು, ನೃತ್ಯ, ಖುಷಿ, ಸಂತೋಷ ಇತ್ಯಾದಿ ಇತ್ಯಾದಿಗಳೆಲ್ಲದರ ನಿರೀಕ್ಷೆಗಳಿರುತ್ತವೆ. ಆದರೆ ಗುಬ್ಬಚ್ಚಿಗಳು ಆತ್ಮವಿಲ್ಲ, ರೆಕ್ಕೆ ಪುಕ್ಕವಿಲ್ಲದ ಹಕ್ಕಿಯ ಅಸ್ಥಿಪಂಜರವಾಗಿತ್ತು. ಬಹುತೇಕ ಮಕ್ಕಳ ಚಿತ್ರಗಳ ಕತೆಯೂ ಹೀಗೆ. ಇದು ಯಾಕೆ? ಬಹುಶಃ ಮಕ್ಕಳ ಚಿತ್ರ ಎನ್ನುವುದರ ಸರಿಯಾದ ವ್ಯಾಖ್ಯಾನ ಏನು ಎನ್ನುವುದು ನಿರ್ದೇಶಕರು ಅರ್ಥ ಮಾಡಿಕೊಳ್ಳದೆ ಇರುವುದೇ ಇದಕ್ಕೆ ಕಾರಣವಾಗಿರಬಹುದೆ? ಮಕ್ಕಳ ಚಿತ್ರವೆಂದರೆ ಏನು? ಮಕ್ಕಳ ಕುರಿತ ವಸ್ತುವಿನ ಬಗ್ಗೆ ಮಾಡುವ ಚಿತ್ರವೆ? ಮಕ್ಕಳ ಕುರಿತಂತೆ ಪಾಲಕರಿಗೆ, ಸಮಾಜಕ್ಕೆ ನೀಡುವ ಜಾಗೃತಿಯೆ? ಅಥವಾ ಮಕ್ಕಳ ಬದುಕನ್ನು ಎತ್ತಿ ತೋರಿಸುವ ಚಿತ್ರವೆ? ನನ್ನ ಮಟ್ಟಿಗೆ ಇದಾವುದೂ ಅಲ್ಲ. ಯಾವ ಚಿತ್ರ ಮಕ್ಕಳನ್ನು ಎರಡು ಗಂಟೆ ಪೂರ್ತಿ ರಂಜಿಸಬಲ್ಲುದೋ, ಅವರನ್ನು ಕುರ್ಚಿಯಲ್ಲಿ ಕೂತು ನೋಡುವಂತೆ ಮಾಡಬಲ್ಲುದೋ ಅದುವೇ ಮಕ್ಕಳ ಚಿತ್ರ. ಮಕ್ಕಳ ಹೆಸರಿನಲ್ಲಿ ಚಿತ್ರಗಳನ್ನು ಮಾಡಿ, ಅದನ್ನು ದೊಡ್ಡವರೇ ನೋಡಿದರೆ ಮಕ್ಕಳಿಗೇನು ಪ್ರಯೋಜನ? ಮಕ್ಕಳ ಚಿತ್ರಗಳ ಕುರಿತಂತೆ ನಿರ್ದೇಶಕರು ತಮ್ಮ ನಿಲುವುಗಳನ್ನು ಬದಲಿಸಿಕೊಳ್ಳಬೇಕು. ಮುಖ್ಯವಾಗಿ ಮಕ್ಕಳೆಂಬ ಪ್ರೇಕ್ಷಕರನ್ನು, ಗ್ರಾಹಕರನ್ನು ಗುರುತಿಸಿ ಅವರಿಗಾಗಿ ಚಿತ್ರಗಳನ್ನು ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಮಕ್ಕಳ ಚಿತ್ರಗಳು ಸಾಲುಸಾಲಾಗಿ ಬರುವುದಕ್ಕೆ ಕಾರಣವಾಗಬಹುದು.

 ಹಾಗೆ ನೋಡಿದರೆ ಯಾವುದೇ ಘೋಷಣೆಗಳಿಲ್ಲದೆ ಅದೆಷ್ಟೋ ಚಿತ್ರಗಳು ಮಕ್ಕಳನ್ನು ರಂಜಿಸಿವೆ. ಮಕ್ಕಳನ್ನು ಥಿಯೇಟರ್‌ನೆಡೆಗೆ ಸೆಳೆದಿದೆ. ಈ ನಿಟ್ಟಿನಲ್ಲಿ ಮಕ್ಕಳ ಚಿತ್ರವೆಂದು ಘೋಷಣೆ ಮಾಡುವ ಮೊದಲೇ ಮಕ್ಕಳ ಚಿತ್ರಗಳು ಕನ್ನಡದಲ್ಲಿ ಬಂದು ಹೋಗಿವೆ. ಬಹುಶಃ ಕನ್ನಡದ ಮೊಟ್ಟ ಮೊದಲ ಕನ್ನಡ ಚಿತ್ರ ನನ್ನ ಅಭಿಪ್ರಾಯದಂತೆ 1934ರಲ್ಲಿ ಬಂದ ಭಕ್ತ ದ್ರುವ. ಒಬ್ಬ ಬಾಲಕ ಸಾಧಿಸಿದರೆ ಎಷ್ಟು ಎತ್ತರಕ್ಕೆ ಏರಬಹುದು ಎನ್ನುವ ಸಂದೇಶವನ್ನೊಳಗೊಂಡ, ಒಬ್ಬ ಪುರಾಣ ಬಾಲಕ ಕತೆಯನ್ನು ಇದು ಹೊಂದಿದೆ. ಮಗುವೇ ಇದರಲ್ಲಿ ನಾಯಕ ಪಾತ್ರವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಇದನ್ನು ಮಕ್ಕಳ ಚಿತ್ರ ಎನ್ನುವುದಕ್ಕೆ ಅಡ್ಡಿಯಿಲ್ಲ. ಸದಭಿರುಚಿಯಿಂದ ಕೂಡಿದ, ಮಕ್ಕಳಿಗೆ ಇಷ್ಟವಾಗುವ ಪುರಾಣ ಕತೆಯನ್ನು ಆಧರಿಸಿದ ಈ ಚಿತ್ರ ಒಂದು ರೀತಿಯಲ್ಲಿ ಮಕ್ಕಳ ಚಿತ್ರವೇ ಹೌದು. ಪಾರ್ಶ್ವನಾಥ್ ಆಳ್ತೇಕರ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಧ್ರುವನ ಪಾತ್ರ ವಹಿಸಿದಾತ ಮಾಸ್ಟರ್ ಮುತ್ತು.
 
ಇದಾದನಂತರ ಮಕ್ಕಳೇ ಕತಾ ನಾಯಕರಾದ ಹಲವು ಪುರಾಣ ಕತೆಗಳು ಚಿತ್ರಗಳಾಗಿ ಮೂಡಿ ಬಂದವು. ದೊಡ್ಡವರನ್ನು, ಮಕ್ಕಳನ್ನು ಏಕಕಾಲದಲ್ಲಿ ರಂಜಿಸಿದವು. ಅವುಗಳಲ್ಲಿ ಮುಖ್ಯವಾದುದು ಭಕ್ತ ಪ್ರಹ್ಲಾದ, ಚಂದ್ರಹಾಸನಂತಹ ಪಾತ್ರಗಳು. ಬಹುಶಃ ಅಧಿಕೃತವಾಗಿ ಮಕ್ಕಳಿಗಾಗಿಯೇ ಮಾಡಿದ ಮೊತ್ತ ಮೊದಲ ಮಕ್ಕಳ ಚಿತ್ರ 1960ರಲ್ಲಿ ಬಂದಿರಬೇಕು. ಅದು ಬಿ. ಆರ್. ಪಂತುಲು ಅವರ ‘ಮಕ್ಕಳ ರಾಜ್ಯ’. ಮಕ್ಕಳೇ ಪ್ರಧಾನ ಪಾತ್ರವಾಗಿರುವ, ಮಕ್ಕಳಿಗಾಗಿ, ಮಕ್ಕಳು ನಟಿಸಿದ ಚಿತ್ರ ಇದು. ಚಿತ್ರದ ಹೆಸರು ಕೂಡ ಮಕ್ಕಳಿಗೇ ಕೇಂದ್ರೀಕೃತವಾಗಿದೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಮಾಸ್ಟರ್ ಉಮೇಶ್ ನಟಿಸಿದ್ದರು. ಅವರೀಗ ಕನ್ನಡ ಚಿತ್ರೋದ್ಯಮದ ಖ್ಯಾತ ಹಾಸ್ಯ ಕಲಾವಿದರಾಗಿ ಗುರುತಿಸಲ್ಪಡುತ್ತಿದ್ದಾರೆ.

1977ರಲ್ಲಿ ಬಂದ ನಾಗರ ಹೊಳೆ ಇನ್ನೊಂದು ಮುಖ್ಯ ಮಕ್ಕಳ ಚಿತ್ರ. ನಾಲ್ವರು ಮಕ್ಕಳು ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿದ್ದಾರೆ. ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರ ಈ ಚಿತ್ರ ಅವರಿಗೆ ಅಪಾರ ಮನ್ನಣೆಯನ್ನು ತಂದುಕೊಟ್ಟಿರುವುದು. ಇದರಲ್ಲಿ ಮುಖ್ಯವಾಗಿ ಕಾಡು, ಪ್ರಕೃತಿ, ಪ್ರಾಣಿ ಹಾಗೂ ಮಕ್ಕಳ ಸಾಹಸಗಳು ಎಲ್ಲರನ್ನೂ ಸೆಳೆದಿದ್ದವು. ಹಿಂದಿನ ಹಾಗೂ ಇಂದಿನ ಮಕ್ಕಳಿಗೂ ಇಷ್ಟವಾಗುವ ಕತೆ ಇದರದು. ಆದರೆ ಇದನ್ನು ಸಂಪೂರ್ಣ ಮಕ್ಕಳ ಚಿತ್ರ ಎನ್ನುವಂತಿಲ್ಲ. ದೊಡ್ಡವರೂ ಇದರಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ಅಂದರೆ ಕೇಂದ್ರ ಪಾತ್ರದಲ್ಲಿದ್ದಾರೆ. 1977ರಲ್ಲಿ ಬಂದ ಪುಟಾಣಿ ಏಜೆಂಟ್ಸ್ 1, 2, 3 ಎಲ್ಲರ ಬಾಯಲ್ಲಿ ಹಾಡಾಗಿ ನಲಿದಾಡಿದ ಚಿತ್ರ. ಇದೊಂದು ಅಪ್ಪಟ ಕಮರ್ಶಿಯಲ್ ಚಿತ್ರ. ಆದರೆ ಇದರಲ್ಲಿ ಕೇಂದ್ರ ಪಾತ್ರದಲ್ಲಿರುವ ಪತ್ತೇದಾರರು ಮೂವರು ಮಕ್ಕಳು .ಗೀತಪ್ರಿಯ ನಿರ್ದೇಶನದ ಈ ಚಿತ್ರದಲ್ಲಿ ಅಂದಿನ ಕರಾಟೆ ಪಟು ರಾಮಕೃಷ್ಣ ಹೆಗಡೆ ಬಾಲನಟನಾಗಿ ನಟಿಸಿದ ಚಿತ್ರ. ಕನ್ನಡದ ಪ್ರಸಿದ್ಧ ಬಾಲನಟಿ ಬೇಬಿ ಇಂದಿರಾ ಕೂಡ ಇದರಲ್ಲಿ ನಟಿಸಿದ್ದಾರೆ. 1980ರಲ್ಲಿ ಬಂದ ಮಕ್ಕಳ ಸೈನ್ಯ ಚಿತ್ರ ಕೂಡ ಮಕ್ಕಳನ್ನು ಚೆನ್ನಾಗಿಯೇ ಬಳಸಿಕೊಂಡಿತ್ತು. ಇದರಲ್ಲೂ ಬೇಬಿ ಇಂದಿರಾ ಪ್ರಧಾನ ಪಾತ್ರವನ್ನು ವಹಿಸಿದ್ದರು. 70ರ ದಶಕದ ಚಿತ್ರಗಳಲ್ಲಿ ಬೇಬಿ ಇಂದಿರಾ ಬಾಲ ನಟಿಯಾಗಿ ನಟಿಸದ ಚಿತ್ರವೇ ತೀರಾ ಕಡಿಮೆ. ಎಲ್ಲರ ಮನೆಯ ಪುಟ್ಟ ಮಗುವಾಗಿ ಬೇಬಿ ಇಂದಿರಾ ಗುರುತಿಸಿಕೊಂಡಿದ್ದರು. ಮಕ್ಕಳ ಸೈನ್ಯವೂ ಪೂರ್ತಿಯಾಗಿ ಮಕ್ಕಳ ಚಿತ್ರವೆನ್ನುವಂತಿಲ್ಲ. ಇದರಲ್ಲಿ ಪ್ರಧಾನ ಪಾತ್ರದಲ್ಲಿ ವಿಷ್ಣುವರ್ಧನ್, ಆರತಿ ಮೊದಲಾದವರು ನಟಿಸಿದ್ದರು. ಹಾಗೆ ನೋಡಿದರೆ 1981ರಲ್ಲಿ ಬಂದ ‘ಗುರು ಶಿಷ್ಯರು’ ಚಿತ್ರದ ದಡ್ಡ ಶಿಷ್ಯರು ಮಕ್ಕಳನ್ನು ಸಖತ್ತಾಗಿ ನಗಿಸಿದ್ದಾರೆ. ಮಕ್ಕಳಿಗೂ ಇಷ್ಟವಾದ ಚಿತ್ರ ಇದು. ಇದರಲ್ಲಿ ಮಕ್ಕಳಿಲ್ಲಲ್ಲದೇ ಇದ್ದರೂ, ಪೆದ್ದರಾಗಿ ನಟಿಸಿದ ಐವರು ಹಾಸ್ಯನಟರು ಯಾವುದೇ ಮಕ್ಕಳಿಗೆ ಕಮ್ಮಿ ಇಲ್ಲದಂತೆ ನಟಿಸಿದ್ದರು. ಒಂದು ರೀತಿಯಲ್ಲಿ, ಕಳಪೆ ಚಿತ್ರಗಳಿಗಿಂತ, ಇಂತಹ ಸದಭಿರುಚಿಯ ಹಾಸ್ಯ ಚಿತ್ರಗಳು ಮಕ್ಕಳಿಗೆ ಹೆಚ್ಚು ಹತ್ತಿರವಾಗಿವೆ. 1981ರಲ್ಲಿ ಬಂದ ಪ್ರಚಂಡ ಪುಟಾಣಿಗಳು ಮತ್ತೊಂದು ಮಕ್ಕಳ ಸಾಹಸದ ಕತೆಯಿರುವ ಚಿತ್ರ. ಗೀತಪ್ರಿಯ ನಿರ್ದೇಶನದ ಈ ಚಿತ್ರವೂ ಮಕ್ಕಳಲ್ಲಿ ಸಾಹಸವನ್ನು ಉದ್ದೀಪಿಸುವ, ಕತೆಯನ್ನು ಹೊಂದಿದ ಚಿತ್ರ. ಮಾಸ್ಟರ್ ರಾಮಕೃಷ್ಣ ಹೆಗಡೆ, ಬೇಬಿ ಇಂದಿರಾ ಮೊದಲಾದವರು ಈ ಚಿತ್ರದಲ್ಲಿ ಸೈ ಎನ್ನಿಸಿಕೊಂಡಿದ್ದರು. ದೊಡ್ಡವರು ಮಕ್ಕಳ ಜೊತೆಗೆ ಕೂತು ಥಿಯೇಟರ್‌ನಲ್ಲಿ ಈ ಚಿತ್ರವನ್ನು ನೋಡಿದ್ದರು. ಹಾಗೆಯೇ ಇದೇ ಕಾಲಘಟ್ಟದಲ್ಲಿ ಬಂದ ಹಾಸ್ಯರತ್ನ ರಾಮಕೃಷ್ಣ, ಕವಿರತ್ನ ಕಾಳಿದಾಸ ಮಕ್ಕಳನ್ನೂ ರಂಜಿಸಿವೆ ಎನ್ನುವುದಕ್ಕೆ ಯಾವ ಅಭ್ಯಂತರವೂ ಇಲ್ಲ. ಮಕ್ಕಳನ್ನು ರಂಜಿಸಲು ಮಕ್ಕಳ ಚಿತ್ರವೇ ಆಗಬೇಕಾಗಿಲ್ಲ ಎನ್ನುವುದಕ್ಕೆ ಇದೂ ಒಂದು ಉದಾಹರಣೆ. ತಾವು ಕತೆ ಪುಸ್ತಕಗಳಲ್ಲಿ ಓದಿ ನಕ್ಕ ತೆನಾಲಿ ರಾಮಕೃಷ್ಣನನ್ನು ತೆರೆಯಲ್ಲಿ ನೋಡಿ ಮಕ್ಕಳು ನಕ್ಕು ನಲಿದಿದ್ದರು. ಬಿ. ಎಸ್. ರಂಗಾ ಅವರ ನಿರ್ದೇಶನ ತೆನಾಲಿ ರಾಮಕೃಷ್ಣ ಚಿತ್ರದ ನಾಯಕನಾಗಿ ಅನಂತನಾಗ್ ನಟಿಸಿದ್ದರು.

1983ರಲ್ಲಿ ಬಂದ ಎರಡು ನಕ್ಷತ್ರಗಳು ನೀವೂ ನೋಡಿರಬಹುದು. ಬಾಲ ನಟ ಪುನೀತ್ ರಾಜ್‌ಕುಮಾರ್ ದ್ವಿಪಾತ್ರದಲ್ಲಿ ನಟಿಸಿದ ಚಿತ್ರ ಇದು. ರಾಜ್‌ಕುಮಾರ್ ಕೂಡ ಇದರಲ್ಲಿ ನಟಿಸಿದ್ದಾರೆ. ಆದರೆ ರಾಜ್‌ಕುಮಾರ್‌ಗಿಂತಲೂ ಇಷ್ಟವಾಗಿರುವುದು ಈ ಚಿತ್ರದಲ್ಲಿ ಪುನೀತ್ ಅಭಿನಯ. ಇವರ ಹಾಡು, ನೃತ್ಯ ನೋಡಿ ಮಕ್ಕಳೂ, ದೊಡ್ಡವರೂ ಕಣ್ತುಂಬಿಕೊಂಡಿದ್ದಾರೆ. ಬಹುಶಃ 1985ರಲ್ಲಿ ಬಂದ ‘ಬೆಟ್ಟದ ಹೂವು’ ನಿಜವಾದ ಅರ್ಥದಲ್ಲಿ ಮಕ್ಕಳ ಚಿತ್ರ. ದೊಡ್ಡವರ ಹೃದಯವನ್ನೂ ಹೃದ್ಯವಾಗಿಸುವ ಚಿತ್ರ ಇದು. ಪುನೀತ್ ರಾಜ್‌ಕುಮಾರ್ ಇದರಲ್ಲಿ ಮುಖ್ಯಪಾತ್ರಧಾರಿ. ಅತ್ಯುತ್ತಮ ಪ್ರಾದೇಶಿಕ ಚಿತ್ರವಾಗಿಯೂ ಇದು ಗುರುತಿಸಲ್ಪಟ್ಟಿತು. ನಿರ್ದೇಶಕರಾಗಿ ಎನ್. ಲಕ್ಷ್ಮಿನಾರಾಯಣ್ ಅವರಿಗೆ ಅಪಾರ ಹೆಸರು ತಂದುಕೊಟ್ಟ ಚಿತ್ರ. ಅತ್ಯುತ್ತಮ ಬಾಲನಟನಾಗಿ ರಾಷ್ಟ್ರಪ್ರಶಸ್ತಿಯನ್ನು ಪುನೀತ್ ಅವರು ಪಡೆದುಕೊಂಡರು. ಬೆಟ್ಟದ ಹೂವು ಒಂದು ಸರಳ ಕತೆಯನ್ನು ಹೊಂದಿದೆ. ರಾಮಾಯಣ ಕತೆ ಪುಸ್ತಕಕ್ಕೆ ಹುಡುಗನೊಬ್ಬ ಹಣ ಹೊಂದಿಸುತ್ತಾನೆ. ವಿದೇಶಿ ಮಹಿಳೆಯೊಬ್ಬಳಿಗೆ ಬೆಟ್ಟದ ಹೂವು ತಂದು ಕೊಡುವ ಮೂಲಕ ಅವಳು ಕೊಟ್ಟ ಹಣ ಸಂಗ್ರಹಿಸಿ ಇನ್ನೇನು ಹಣ ಒಟ್ಟಾಗಬೇಕು, ಆಗ ತನ್ನ ಅಜ್ಜಿ ಕಂಬಳಿಯಿಲ್ಲದೆ ಚಳಿಯಿಂದ ತತ್ತರಿಸುವುದು ಅವನಿಗೆ ಗೊತ್ತಾಗಿ, ಕತೆ ಪುಸ್ತಕದ ಬದಲಿಗೆ ಕಂಬಳಿ ತರುತ್ತಾನೆ. ಎಲ್ಲರೂ ಇಷ್ಟ ಪಡಲೇ ಬೇಕಾದ ಸರಳ ಕತೆ, ಹೃದಯಸ್ಪರ್ಶಿ ಕತೆ. ಪುನೀತ್‌ನ ಮುಗ್ಧತೆಗೆ ಸಾಟಿಯೇ ಇಲ್ಲ.

ಮೊತ್ತ ಮೊದಲ ಮಕ್ಕಳ ಪ್ರಶಸ್ತಿ:
 ಇಂದಿಗೂ ನಾವು ಬೆಟ್ಟದ ಹೂವನ್ನು ಸ್ಮರಿಸುತ್ತೇವೆ ನಿಜ. ಆದರೆ ಕನ್ನಡಕ್ಕೆ ಮೊಟ್ಟ ಮೊದಲ ಪ್ರಶಸ್ತಿ ತಂದುಕೊಟ್ಟ ಮಕ್ಕಳ ಚಿತ್ರ ಮಾತ್ರ ಬೆಟ್ಟದ ಹೂವು ಅಲ್ಲ ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದು ರೀತಿಯಲ್ಲಿ ಅಧಿಕೃತವಾಗಿ ಮಕ್ಕಳ ಚಿತ್ರವೆಂದು ಗುರುತಿಸಿಕೊಂಡು ರಾಷ್ಟ್ರಪ್ರಶಸ್ತಿ ಪಡೆದ ಚಿತ್ರ 1979ರಲ್ಲಿ ಬಂದ ‘ದಂಗೆಯೆದ್ದ ಮಕ್ಕಳು’. ವಾದಿರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಶ್ರೀಕಾಂತ್, ಶಶಿಕುಮಾರ್, ಬೇಬಿ ಅನುರಾಧ ಮೊದಲಾದವರು ನಟಿಸಿದ್ದರು. ದೊಡ್ಡವರ ವಿರುದ್ಧ ಮಕ್ಕಳು ದಂಗೆಯೆದ್ದು ತಮ್ಮ ಇಚ್ಛೆಯನ್ನು ಸಾಧಿಸಿಕೊಳ್ಳುವ ಈ ದಂಗೆಯೆದ್ದ ಮಕ್ಕಳು ಕನ್ನಡಕ್ಕೆ ಮೊತ್ತ ಮೊದಲು ಪ್ರಶಸ್ತಿ ತಂದುಕೊಟ್ಟ ಮಕ್ಕಳ ಚಿತ್ರ.
ಹಾಗೆ ನೋಡಿದರೆ ರವಿಚಂದ್ರನ್ ತಮ್ಮ ‘ಕಿಂದರಿ ಜೋಗಿ’ ಚಿತ್ರವನ್ನು ‘ಮಕ್ಕಳಿಗಾಗಿ’ಯೇ ಮಾಡಿದ್ದರು. ಮಕ್ಕಳನ್ನೇ ವಸ್ತುವಾಗಿಟ್ಟುಕೊಂಡು ಕಿಂದರಿ ಜೋಗಿಯನ್ನು ರವಿಚಂದ್ರನ್ ಧರೆಗಿಳಿಸಿದರಾದರೂ, ಅವರು ನೆನೆದಂತೆ ಚಿತ್ರ ಮೂಡಿ ಬರಲಿಲ್ಲ. ಅತ್ತ ಮಕ್ಕಳ ಚಿತ್ರವೂ ಆಗದೆ, ಇತ್ತ ದೊಡ್ಡವರ ಚಿತ್ರವೂ ಆಗದೆ ಕಿಂದರಿ ಜೋಗಿ ನೆಗೆದು ಬಿತ್ತು. ಸುಮಾರು 1986ರಲ್ಲಿ ಬಂದ ಪ್ರಥಮ ಉಷಾಕಿರಣ ಒಂದು ರೀತಿಯಲ್ಲಿ ಮಕ್ಕಳ ಮನಸ್ಸನ್ನು ಕತೆಯಾಗಿಟ್ಟುಕೊಂಡ ಚಿತ್ರ. ಆದರೆ ಇದನ್ನು ಮಕ್ಕಳ ಚಿತ್ರವೆಂದು ಕರೆಯುವಂತಿಲ್ಲ. ಸುರೇಶ್ ಹೆಬ್ಳೀಕರ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ, ಹೀಗೆ ತಂದೆತಾಯಿಗಳ ಒತ್ತಡದಿಂದ ಮಕ್ಕಳು ಜರ್ಝರಿತರಾಗುತ್ತಾರೆ ಎನ್ನುವುದನ್ನು ಹೇಳಲಾಗಿತ್ತು. ವಸ್ತು ನಿಜಕ್ಕೂ ಗಂಭೀರವಾದುದು. ಮಕ್ಕಳನ್ನು ಹೇಗೆ ಪಾಲಿಸಬೇಕು ಎನ್ನುವುದನ್ನು ದೊಡ್ಡವರಿಗೆ ತಿಳಿಸಿಕೊಡುವಂತಹದು. ಇಂಗ್ಲಿಷ್-ಕನ್ನಡದ ಮಧ್ಯೆ ಸಿಲುಕಿಕೊಂಡ ಮಕ್ಕಳು ಹೇಗೆ ಸೋತು ಹೋಗುತ್ತಾರೆ ಎಂದು ತಿಳಿಸುವ ಸದಭಿರುಚಿಯ ಚಿತ್ರ. ಆದರೆ ಇದು ಮಕ್ಕಳ ಚಿತ್ರವಲ್ಲ.
ಹಿಂದಿಯಲ್ಲಿ, ಆಮೀರ್‌ಖಾನ್‌ರ ‘ತಾರೆ ಝಮೀನ್ ಪರ್’ ನ್ನು ಹೇಗೆ ಮಕ್ಕಳ ಚಿತ್ರವೆಂದು ಕರೆಯಲಾಗುವುದಿಲ್ಲವೋ ಹಾಗೆಯೇ ಪ್ರಥಮ ಉಷಾ ಕಿರಣ ಎಲ್ಲರ ಚಿತ್ರ. ಮಕ್ಕಳಿಗಿಂತಲೂ ತಂದೆತಾಯಿಗಳು ನೋಡಬೇಕಾದ ಚಿತ್ರ ತಾರೆ ಝಮೀನ್ ಪರ್. ಮಗುವನ್ನು ಮುಖ್ಯವಸ್ತುವಾಗಿಟ್ಟುಕೊಂಡು ಲವಲವಿಕೆಯಿಂದ ತೆಗೆದ ಚಿತ್ರವಾದರೂ, ಮಕ್ಕಳಿಗಿಂತ ತಂದೆತಾಯಿಗಳಿಗೇ ಅದರಲ್ಲಿ ತುಂಬಾ ಸಂದೇಶಗಳಿವೆ. ಇತ್ತೀಚೆಗೆ ಹಿಂದಿಯಲ್ಲಿ ಬಂದಿರುವ ಅಮೊಲ್ ಗುಪ್ಟೆ ಅವರ ‘ಸ್ಟಾನ್ಲಿ ಕ ಡಬ್ಬಾ’ ಮತ್ತು ಸಲ್ಮಾನ್ ಖಾನ್ ನಿರ್ಮಿಸಿರುವ ‘ಚಿಲ್ಲರ್ ಪಾರ್ಟಿ’ ಮಕ್ಕಳನ್ನು ರಂಜಿಸಿದ, ಉತ್ತಮ ಚಿತ್ರಗಳು ಎನ್ನುವುದರಲ್ಲಿ ಅಡ್ಡಿಯಿಲ್ಲ.

ಇದೇ ಸಂದರ್ಭದಲ್ಲಿ ಕನ್ನಡದಲ್ಲಿ ಬಂದ ಅತ್ಯುತ್ತಮ ಮಕ್ಕಳ ಚಿತ್ರವೆಂದು ಅಜರಾಮರವಾಗಿರುವುದು ‘ಚಿನ್ನಾರಿ ಮುತ್ತ’. ಈಗಿನ ಸ್ಟಾರ್ ವಿಜಯ ರಾಘವೇಂದ್ರ ಇನ್ನೂ ಬಾಲಕನಾಗಿದ್ದಾಗ ನಟಿಸಿದ ಅತ್ಯುತ್ತಮ ಮಕ್ಕಳ ಚಿತ್ರವಿದು. ತುಂಟತನಕ್ಕೆ ಹೆಸರಾದ ಚಿನ್ನಾರಿ ಮುತ್ತ ಹಳ್ಳಿಯಿಂದ ಓಡಿ ಪಟ್ಟಣ ಸೇರೋದು. ಅಲ್ಲಿ ಕಳ್ಳರ ಕೈಗೆ ಸಿಗೋದು. ಬಳಿಕ ಬದುಕಲ್ಲಿ ತಿರುವು ಸಿಕ್ಕಿ, ಅತ್ಯುತ್ತಮ ಓಟಗಾರನಾಗಿ ಗುರುತಿಸಿಕೊಳ್ಳೋದು ಕತೆ. ಮಕ್ಕಳಿಗೆ ಬೇಕಾಗ ಸುಂದರ ಹಾಡುಗಳು, ನೃತ್ಯಗಳು ಎಲ್ಲವೂ ಇದೆ. ಮಕ್ಕಳ ದೃಷ್ಟಿಯಿಂದಲೇ ನಿರ್ದೇಶಕರು ಕತೆ ಹೇಳಿದ್ದಾರೆ. ಟಿ. ಎಸ್. ನಾಗಾಭರಣ ಅವರ ನಿರ್ದೇಶನ ಅತ್ಯುದ್ಭುತ. ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂದು ಇದು ರಾಷ್ಟ್ರಮಟ್ಟದಲ್ಲಿ ಗುರುತಿಸಿದ್ದು ವಿಶೇಷ. ಹಾಗೆಯೇ 1994ರಲ್ಲಿ ಬಂದ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಕೊಟ್ರೇಶಿ ಕನಸು’ ಕೂಡ ಒಳ್ಳೆಯ ಚಿತ್ರವೇ ಹೌದು. ಆದರೆ ಇದರ ಜಗತ್ತು ಕೇವಲ ಮಕ್ಕಳಿಗಷ್ಟೇ ಸೀಮಿತವಾದುದಲ್ಲ. ಇದರ ಬಾಲನಟನಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ದೊರಕಿರುವುದು ಗಮನಾರ್ಹ. ಕು. ವೀರಭದ್ರಪ್ಪ ಅವರ ಕತೆ. ಸಮಾಜವನ್ನು ಮಗುವಿನ ಕಣ್ಣಲ್ಲಿ ನೋಡಿ, ಕಟ್ಟಿಕೊಟ್ಟಿರುವುದು ಚಿತ್ರದ ಹೆಗ್ಗಳಿಕೆ.

ಕನ್ನಡದಲ್ಲಿ ಹಲವು ದಾಖಲೆಗಳನ್ನು ಬರೆದ ಚಿತ್ರ ಮಾಸ್ಟರ್ ಕಿಶನ್ ನಿರ್ದೇಶನದ ‘ಕೇರ್ ಆಫ್ ಫೂಟ್‌ಪಾತ್’. ಒಬ್ಬ ಹುಡುಗ ನಿರ್ದೇಶಿಸಿದ ಚಿತ್ರ ಎಂದು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ಚಿತ್ರ. ಕಿಶನ್ ಅವರೇ ಇದರಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಸ್ವಲ್ಪ ಓವರ್ ಆ್ಯಕ್ಟ್ ಮಾಡಿರುವುದು ಬಿಟ್ಟರೆ, ಒಟ್ಟು ಚಿತ್ರ ಹೃದಯಸ್ಪರ್ಶಿಯಾಗಿದೆ. ಹೆಸರೇ ಇಲ್ಲದ ಸ್ಲಂ ಹುಡುಗನೊಬ್ಬ ಶಾಲೆಗೆ ಸೇರಲು ನಡೆಸುವ ಹೋರಾಟದ ಕತೆ ಇದು. ನಿಜಕ್ಕೂ ಎಲ್ಲರಿಗೂ ಇಷ್ಟವಾಗುವ ಕತೆಯನ್ನು ಹೊಂದಿದೆ. ಈ ಎಲ್ಲ ಚಿತ್ರಗಳ ಜೊತೆಗೆ ಇನ್ನಷ್ಟು ಮತ್ತಷ್ಟು ಚಿತ್ರಗಳು ಬಂದಿವೆ. ಹೇಳ ಹೆಸರಿಲ್ಲದೆ ಕಾಣೆಯಾಗಿವೆ. ಮಕ್ಕಳಿಗಾಗಿ ಮಾಡಿದ ಚಿತ್ರಗಳನ್ನು ಮಕ್ಕಳು ನೋಡುವುದಕ್ಕೆ ಅವಕಾಶವೇ ಸಿಕ್ಕಿಲ್ಲ. ಇದು ನಿಜಕ್ಕೂ ವಿಷಾದನೀಯ.

ಕನ್ನಡದ ಬಾಲ ನಟರು:
ಮಕ್ಕಳ ಚಿತ್ರಗಳ ಕುರಿತಂತೆ ಮಾತನಾಡುವಾಗ, ಕನ್ನಡ ಚಿತ್ರೋದ್ಯಮವನ್ನು ಆಳಿದ ಕೆಲವು ಸ್ಟಾರ್ ಮಾಸ್ಟರ್‌ಗಳನ್ನು ನೆನಪಿಸಿಕೊಳ್ಳದೇ ಇದ್ದರೆ ಅದು ಅಪೂರ್ಣ. ಇಂದಿನ ಪುನೀತ್ ಒಂದಾನೊಂದು ಕಾಲದಲ್ಲಿ ಬಾಲನಟನಾಗಿ ಮಕ್ಕಳನ್ನು, ಹಿರಿಯರನ್ನು ಜೊತೆಯಾಗಿ ರಂಜಿಸಿದವರು. ಇಂದಿನ ಸೂಪರ್ ಸ್ಟಾರ್‌ಪುನೀತ್‌ಗಿಂತ ಬೆಟ್ಟದ ಹೂವು ಚಿತ್ರದ ಮುಗ್ಧ ಪುನೀತ್ ಸದಾ ಎದೆಯೊಳಗೆ ಕಾಡುತ್ತಾನೆ.
ಅಂದ ಹಾಗೆ ಕನ್ನಡ ಚಿತ್ರರಂಗ ಮರೆಯಲೇ ಆಗದಂತಹ ಸ್ಟಾರ್ ಬಾಲ ನಟ ಮಾಸ್ಟರ್ ಮಂಜುನಾಥ್. ಈತನಿಲ್ಲದ ಕನ್ನಡ ಚಿತ್ರವೇ ಇಲ್ಲ ಎನ್ನುವಂತೆ ನಟಿಸಿದಾತ. ದೊಡ್ಡವರ ಚಿತ್ರದಲ್ಲೂ ಮಾಸ್ಟರ್ ಮಂಜುನಾಥ್‌ಗೆ ಒಂದು ಪಾತ್ರ ಇರಲೇಬೇಕು. ಈ ಹುಡುಗನ ಪ್ರತಿಭೆಯನ್ನು ಬಸಿದು ತೆಗೆದವರು ಶಂಕರ್‌ನಾಗ್. ಕನ್ನಡ ಚಿತ್ರಗಳಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ಸ್ವಾಮಿ ಚಿತ್ರದಲ್ಲೂ ಮಂಜುನಾಥ್ ಮಿಂಚಿದರು. ಸ್ವಾಮಿ ಚಿತ್ರಕ್ಕಾಗಿ ಈ ಹುಡುಗ ರಾಷ್ಟ್ರ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡ. ಇಂತಹ ಹುಡುಗನನ್ನು ಕಮರ್ಶಿಯಲ್ ಚಿತ್ರಗಳು ಬೇಕಾಬಿಟ್ಟಿಯಾಗಿ ಬಳಸಿಕೊಂಡಿತು ಎನ್ನುವುದು ವಿಷಾದನೀಯ. ಡಬಲ್ ಮೀನಿಂಗ್ ಸಂಭಾಷಣೆಗಳನ್ನೂ ಈ ಹುಡುಗನ ಬಾಯಲ್ಲಿ ಹೇಳಿಸಿ ಬಿಟ್ಟಿತು. ರವಿಚಂದ್ರನ್ ಚಿತ್ರದಲ್ಲಿ ‘ಏನ್ ಹುಡ್ಗೀರೋ...ಯಾಕಿಂಗ್ ಆಡ್ತಾರೋ...’ ಹಾಡು ನಿಮಗೆ ನೆನಪಿರಬಹುದು. ಬಾಲಕಲಾವಿದರನ್ನು ಗಾಂಧಿನಗರ ಕೆಟ್ಟದಾಗಿ ದುಡಿಸಿಕೊಂಡಿರುವುದು ಸುಳ್ಳಲ್ಲ.

 ಈ ಮಾಸ್ಟರ್‌ಗಿಂತಲೂ ಮೊದಲು ಖ್ಯಾತಿಯನ್ನು ಪಡೆದ ಎಳೆ ಬಾಲೆ ಬೇಬಿ ಇಂದಿರಾ. ಈಕೆ ನಟಿಯಾಗಿ ನಟಿಸಿರುವುದಕ್ಕಿಂತಲೂ ಬಾಲನಟಿಯಾಗಿ ನಟಿಸಿರುವ ಚಿತ್ರಗಳೇ ಹೆಚ್ಚು. ಒಂದಾನೊಂದು ಕಾಲದಲ್ಲಿ ಈಕೆಗಾಗಿಯೇ ಒಂದು ಪುಟ್ಟ ಪಾತ್ರವನ್ನು ನಿರ್ದೇಶಕರನ್ನು ಸೃಷ್ಟಿಸುತ್ತಿದ್ದರಂತೆ. ಯಾಕೆಂದರೆ ಬೇಬಿ ಇಂದಿರಾಳನ್ನು ನೋಡುವುದಕ್ಕಾಗಿಯೇ ಕೆಲವರು ಚಿತ್ರಮಂದಿರಕ್ಕೆ ಧಾವಿಸುತ್ತಿದ್ದರು. ಬಾಲನಟನಾಗಿ ಮಿಂಚಿದ ಇನ್ನೋರ್ವ ಮಾಸ್ಟರ್, ವಿಜಯ್ ರಾಘವೇಂದ್ರ. ಚಿನ್ನಾರಿ ಮುತ್ತ ಚಿತ್ರದ ಈತನ ಮುಗ್ಧ ಮುಖ ಈಗಲೂ ಕಣ್ಮುಂದೆ ಸುಳಿಯುತ್ತದೆ. ಚಿಗರೆಯಂತೆ ಓಡುವ ಮುತ್ತ ಎಲ್ಲರ ಮೆಚ್ಚುಗೆ ಗಳಿಸಿದ್ದ. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ದೊರಕಿತ್ತು. ಇದಾದನಂತರ ವಿಜಯ್ ರಾಘವೇಂದ್ರ ಅವರು ಗುರುತಿಸಿದ್ದು ಕೊಟ್ರೇಶಿ ಕನಸು ಮೂಲಕ. ಈ ಚಿತ್ರಕ್ಕೂ ರಾಷ್ಟ್ರಪ್ರಶಸ್ತಿ ದೊರಕಿತು. ಇದೇ ಸಂದರ್ಭದಲ್ಲಿ 1973ರಲ್ಲಿ ಕಾಡು ಚಿತ್ರದಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿ ಪಡೆದ ಜಿ. ಎಸ್. ನಟರಾಜ್, ಘಟಶ್ರಾದ್ಧಕ್ಕಾಗಿ ಪ್ರಶಸ್ತಿ ಪಡೆದ ಅಜಿತ್, ಕ್ರೌರ್ಯ ಚಿತ್ರಕ್ಕೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ವಿಶ್ವಾಸ್ ಮೊದಲಾದವರನ್ನೂ ನೆನೆಯಬಹುದು.

ಕನ್ನಡಕ್ಕೆ ಬಂದ ಶಾಮಿಲಿ:
ಕನ್ನಡದಲ್ಲಿ ಬಾಲ ನಟಿಯಾಗಿ ಗುರುತಿಸಿಕೊಂಡ ಬೇಬಿ ಶಾಲಿನಿ ನಿಮಗೆ ನೆನಪಿರಬಹುದು. ಇದೀಗ ಈಕೆ ತಮಿಳಿನ ಖ್ಯಾತ ನಟಿ. ನಟ ಅಜಿತ್‌ನ ಪತ್ನಿ. ವಿಷ್ಣುವರ್ಧನ್ ಅವರ ಈ ಜೀವ ನಿನಗಾಗಿ ಸೇರಿದಂತೆ ಹಲವು ಚಿತ್ರಗಳಲ್ಲಿ ಗುರುತಿಸಿಕೊಂಡವಳು ಶಾಲಿನಿ. ಆದರೆ ಯಾವಾಗ ಈಕೆಯ ಪುಟ್ಟ ತಂಗಿ ಬೇಬಿ ಶಾಲಿನಿ ಕನ್ನಡಕ್ಕೆ ಕಾಲಿಟ್ಟಳೋ ಒಂದು ದೊಡ್ಡ ಬದಲಾವಣೆಯೇ ಆಗಿ ಬಿಟ್ಟಿತು. ಅಂಜಲಿ ಚಿತ್ರದ ಮೂಲಕ ಖ್ಯಾತಳಾದ ಪುಟಾಣಿ ಬೇಬಿ ಶಾಮಿಲಿ ಕನ್ನಡದಲ್ಲಿ ಗುರುತಿಸಿಕೊಂಡದ್ದು ‘ಭೈರವಿ’ ಚಿತ್ರದ ಮೂಲಕ. ಈ ಚಿತ್ರ ಯಶಸ್ವಿಯಾದುದೇ ತಡ. ಅಂದಹದೇ ಹಲವು ಚಿತ್ರಗಳು ಪುಂಖಾನುಪುಂಖವಾಗಿ ಕಾಲಿಟ್ಟಿತು. ಭೂತ, ಪ್ರೇತ, ಹಾವು, ಕೋತಿಗಳೆಲ್ಲ ಶಾಮಿಲಿಯ ಜೊತೆಗೆ ಸಹಕಲಾವಿದರಾಗಿ ನಟಿಸಿದರು. ಬಹುಶಃ ಬಾಲನಟಿಯನ್ನೇ ಕೇಂದ್ರಪಾತ್ರವಾಗಿರಿಸಿ ಸಿನಿಮಾ ಆರಂಭವಾದುದು ಶಾಮಿಲಿಯ ಮೂಲಕ. ಯಾವುದೇ ನಟರಿಗಿಂತ ಕಡಿಮೆಯಿಲ್ಲದೆ, ದೊಡ್ಡ ಸ್ಟಾರ್ ಆಗಿ ಶಾಮಿಲಿ ಬೆಳೆದು ಬಿಟ್ಟಳು. ಬೇಬಿ ಶಾಮಿಲಿ ಇದ್ದಾಳೆಂದರೆ ಆ ಚಿತ್ರ ಯಶಸ್ವಿ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಅಪ್ಪಟ್ಟ ಪ್ರತಿಭಾವಂತ ಈ ಪುಟಾಣಿಯನ್ನೂ ಚಿತ್ರೋದ್ಯಮ ಬೇಕಾಬಿಟ್ಟಿಯಾಗಿ ಬಳಸಿಕೊಂಡಿತು ಎನ್ನುವುದು ವಿಷಾದನೀಯ ಸಂಗತಿ. ‘ಮಕ್ಕಳ ಸಾಕ್ಷಿ’ ಎನ್ನುವ ಚಿತ್ರದಲ್ಲಿ ಈಕೆಗೆ ತುಂಡುಡುಗೆ ತೊಡಿಸಿ ಕ್ಯಾಬರೆ ಆಡಿಸಿತು ಚಿತ್ರೋದ್ಯಮ. ಇದು ತೀವ್ರ ಚರ್ಚೆಗೂ ಕಾರಣವಾಯಿತು. ಸಂವೇದನೆಗಳೇ ಇಲ್ಲದ, ಹಣ ಮಾಡುವುದೊಂದೇ ಚಿತ್ರದ ಗುರಿ ಎಂದು ತಿಳಿದುಕೊಂಡ, ಅದಕ್ಕಾಗಿ ಯಾವ ದಾರಿಯನ್ನೂ ಹಿಡಿಯಬಲ್ಲ ಚಿತ್ರ ನಿರ್ಮಾಪಕರು, ನಿರ್ದೇಶಕರ ಕೈಯಲ್ಲಿ ಶಾಮಿಲಿ ಎಂಬ ಮಗು ಅತ್ಯಂತ ಕೆಟ್ಟದಾಗಿ ಬಳಸಲ್ಪಟ್ಟಿತು. ಮಕ್ಕಳ ಮುಗ್ಧತೆಯನ್ನು ನಾಶ ಮಾಡಿ, ಅವರ ಬಾಯಲ್ಲಿ ಸಿನಿಮೀಯ ಡೈಲಾಗ್‌ಗಳನ್ನು ಹೇಳಿಸುತ್ತಾ, ಚೋಲಿ ಕೇ ಪೀಚೆ ಕ್ಯಾ ಹೇ ಎಂಬಂತಹ ಹಾಡುಗಳನ್ನು ಹಾಡಿಸುತ್ತಾ ಸಿನಿಮಾ ಎಂಬ ಕಲಾ ಮಾಧ್ಯಮಕ್ಕೆ ಕೆಲವರು ದ್ರೋಹಗೈದರು.

ಒಟ್ಟಿನಲ್ಲಿ ಅಂದೂ, ಇಂದೂ ಮಕ್ಕಳಿಗಾಗಿ ಮಕ್ಕಳ ಚಿತ್ರವನ್ನು ಮಾಡುವಲ್ಲಿ ಎಲ್ಲರೂ ಬಹುತೇಕ ವಿಫಲರಾಗಿದ್ದಾರೆ. ಮಕ್ಕಳ ಚಿತ್ರದ ಹಣೆಪಟ್ಟಿ ಕಟ್ಟಿಕೊಂಡು ಬಂದ ನೂರಾರು ಚಿತ್ರಗಳು ಡಬ್ಬಾದಲ್ಲಿ ಧೂಳು ತಿನ್ನುತ್ತಿವೆ. ಅವುಗಳನ್ನು ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆಗಳಿಗೆ ಕಳುಹಿಸಿ, ಅಲ್ಲಿಯ ಮಕ್ಕಳಿಗೆ ತೋರಿಸಿದ್ದರೂ ಆ ಚಿತ್ರದ ಪ್ರಯತ್ನ ಸಾರ್ಥಕವಾಗಿ ಬಿಡುತ್ತಿತ್ತು. ಆದರೆ ಅಂತಹ ಯಾವ ಪ್ರಯತ್ನವೂ ನಡೆಯಲಿಲ್ಲ. ಸ್ವತಃ ಆ ಚಿತ್ರದ ನಿರ್ಮಾಪಕ, ನಿರ್ದೇಶಕರೇ ಆ ಕುರಿತಂತೆ ಆಸಕ್ತಿ ತೋರಿಸಲಿಲ್ಲ.
 ***
ಇಂದಿನ ತಲೆಮಾರಿನ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಅವರ ಜಗತ್ತನ್ನು ಅರಿತುಕೊಂಡು ಅದನ್ನು ಸಿನೆಮಾವಾಗಿಸುವ ನಿರ್ದೇಶಕರು ಕನ್ನಡದಲ್ಲಿ ಬರಬೇಕಾಗಿದೆ. ಮಕ್ಕಳನ್ನು ಅರಿತುಕೊಂಡ ನಿರ್ದೇಶಕ ಎಲ್ಲರನ್ನೂ ಅರಿತುಕೊಂಡಂತೆ. ಮಕ್ಕಳ ಚಿತ್ರದಲ್ಲಿ ಯಶಸ್ವಿಯಾದ ನಿರ್ದೇಶಕ ದೊಡ್ಡವರ ಚಿತ್ರಗಳನ್ನು ಸಾಲೀಸಾಗಿ ನಿರ್ದೇಶಿಸಬಲ್ಲ. ಮಕ್ಕಳ ಚಿತ್ರ ಎನ್ನುವ ಉಪೇಕ್ಷೆ ಬಿಟ್ಟು ಅದಕ್ಕಾಗಿ ಗಂಭೀರವಾಗಿ ತೊಡಗಿಸಿಕೊಳ್ಳುವ ನಿರ್ದೇಶಕರು ಬರಬೇಕಾಗಿದೆ. ಮಕ್ಕಳಲ್ಲಿ ಸದಭಿರುಚಿಯನ್ನು, ಆಸಕ್ತಿಯನ್ನು, ಸ್ಫೂರ್ತಿಯನ್ನು ತುಂಬಲು ಸಿನೆಮಾಕ್ಕಿಂತ ಒಳ್ಳೆಯ ಕ್ಷೇತ್ರ ಇನ್ನಿಲ್ಲ. ಪ್ರೇಕ್ಷಕರಾಗಿ ಮಕ್ಕಳನ್ನು ಸೆಳೆಯಲು ನಮ್ಮ ಥಿಯೇಟರ್ ಯಶಸ್ವಿಯಾದರೆ, ಕನ್ನಡ ಚಿತ್ರೋದ್ಯಮ ದೊಡ್ಡವರ ಕಾಲಕ್ಕೂ ಉಳಿಯುತ್ತದೆ.


1 comment: