Wednesday, November 28, 2012

ನಮ್ಮ ನೆಲದ ಶಿವಾಜಿ....

ಒಂದು ಐತಿಹಾಸಿಕ ಉದ್ಯಾನವನವನ್ನು ಶ್ಮಶಾನ ಮಾಡಿದ ಹೆಗ್ಗಳಿಕೆ ನಿಜಕ್ಕೂ ಮಹಾರಾಷ್ಟ್ರ ಸರಕಾರದ್ದು. 1925ರಲ್ಲಿ ಬ್ರಿಟಿಷರ ಕಾಲದಲ್ಲಿ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ನಿರ್ಮಿಸಿದ ಈ ಶಿವಾಜಿ ಪಾರ್ಕ್‌ನಲ್ಲಿ ಬಾಳಾ ಠಾಕ್ರೆಯ ಅಂತ್ಯಕ್ರಿಯೆ ನಡೆಸಲು ಅನುಮತಿಯನ್ನು ನೀಡುವ ಮೂಲಕ, ತಾನೆಂತಹ ತಪ್ಪು ಮಾಡಿದ್ದೇನೆ ಎನ್ನುವುದು ಸರಕಾರಕ್ಕೆ ಈಗಲಾದರೂ ಮನವರಿಕೆಯಾಗಿರಬಹುದು. ಠಾಕ್ರೆ ಅಂತ್ಯಕ್ರಿಯೆ ನಡೆದ ಕೆಲವೇ ದಿನಗಳಲ್ಲಿ, ‘ಅಂತ್ಯಕ್ರಿಯೆ’ ನಡೆದ ಸ್ಥಳದ ಮೇಲೆ ಮಹಾರಾಷ್ಟ್ರದ ಶಿವಸೇನೆ ಪುಂಡರು ಹಕ್ಕು ಸ್ಥಾಪಿಸಲು ಹೊರಟಿದ್ದಾರೆ. ಅಷ್ಟೇ ಅಲ್ಲ, ಆ ಸ್ಥಳ ನಮಗೆ ‘ಅಯೋಧ್ಯೆ’ಯಷ್ಟೇ ಪವಿತ್ರ. ಅಂತ್ಯಕ್ರಿಯೆ ಸ್ಥಳದಲ್ಲಿ ನಿರ್ಮಿಸಿರುವ ರಚನೆಯನ್ನು ಶಿವಸೇನೆ ತೆರವುಗೊಳಿಸುವುದಿಲ್ಲ ಎಂದು ಸಂಜಯ್ ರಾವತ್ ಗುಡುಗಿದ್ದಾರೆ. ಈ ಮೂಲಕ, ಭವಿಷ್ಯದಲ್ಲಿ ಮುಂಬೈಯೊಳಗೆ ವಿವಾದಿತ ಅಯೋಧ್ಯೆಯೊಂದನ್ನು ಸೃಷ್ಟಿಸುವ ಸಂದೇಶವನ್ನೂ ನೀಡಿದ್ದಾರೆ. ಅತ್ಯಂತ ವಿಷಾದನೀಯ ಸಂಗತಿಯೊಂದನ್ನು ಈ ಸಂದರ್ಭದಲ್ಲಿ ನಾವು ನೆನಪು ಮಾಡಿಕೊಳ್ಳಬೇಕಾಗಿದೆ. ಈ ಹಿಂದೆ ಡಾ. ಬಿ. ಆರ್. ಅಂಬೇಡ್ಕರ್ ಅವರು ನಿಧನರಾದಾಗ ಇದೇ ಶಿವಾಜಿ ಪಾರ್ಕ್‌ನಲ್ಲಿ ಅವರ ಅಂತ್ಯ ಕ್ರಿಯೆ ನಡೆಸಲು ಅನುಮತಿ ಬೇಡಲಾಗಿತ್ತು. ಆದರೆ ಅಂದಿನ ಸರಕಾರ ಅದಕ್ಕೆ ಅನುಮತಿ ನೀಡಲಿಲ್ಲ. ಈ ದೇಶದ ತುಳಿಯಲ್ಪಟ್ಟ ಒಂದು ದೊಡ್ಡ ಸಮುದಾಯದ ಆತ್ಮಾಭಿಮಾನವನ್ನು ಎಚ್ಚರಿಸಿದ, ಅವರನ್ನು ತುಳಿದ ಮಂದಿಯಲ್ಲಿ ಪಾಪಪ್ರಜ್ಞೆಯನ್ನು ಬಿತ್ತಿ, ಅವರನ್ನೂ ಉನ್ನತಿಗೇರಿಸಿದ ಅಂಬೇಡ್ಕರ್‌ಗೆ ಸಿಗದ ಅವಕಾಶ, ಹಿಂಸೆಯ ತಳಹದಿಯಲ್ಲಿ ರಾಜಕೀಯ ನಡೆಸುತ್ತಾ, ಭಾಷೆ, ಧರ್ಮದ ಹೆಸರಲ್ಲಿ ದ್ವೇಷವನ್ನು ಬಿತ್ತಿ ರಾಜಕೀಯ ಪಕ್ಷವನ್ನು ಕಟ್ಟಿದ ನಾಯಕನಿಗೆ ಸಿಕ್ಕಿತು. ಇದೀಗ ಶಿವಾಜಿ ಪಾರ್ಕ್‌ನಲ್ಲಿ ಬಾಳಾಠಾಕ್ರೆಯ ಸ್ಮಾರಕವನ್ನು ನಿರ್ಮಿಸಲು ಪ್ರಯತ್ನ ನಡೆಯುತ್ತಿದೆ. ಈ ಶಿವಾಜಿ ಪಾರ್ಕ್‌ನಲ್ಲಿ ಈ ನೆಲದ ನಿಜವಾದ ಹೋರಾಟಗಾರ, ಬಂಡಾಯಗಾರ ಶಿವಾಜಿಯ ಪ್ರತಿಮೆಯಿದೆ. ಒಂದು ವೇಳೆ, ಠಾಕ್ರೆಯ ಪ್ರತಿಮೆ ಇದಕ್ಕೆ ಸ್ಪರ್ಧೆ ನೀಡಿದರೆ, ಶಿವಾಜಿಗೆ ಮಾಡುವ ಅತಿ ದೊಡ್ಡ ಅವಮಾನ.

ಶಿವಾಜಿಯ ವ್ಯಕ್ತಿತ್ವವನ್ನು ವಿರೂಪಗೊಳಿಸಿ, ಆತನನ್ನು ತನ್ನ ರಾಜಕೀಯ ಅಜೆಂಡಾಗಳಿಗೆ ಬಳಿಸಿದ ಹೆಗ್ಗಳಿಕೆ ಬಾಳಾಠಾಕ್ರೆಯದು. ಶಿವಾಜಿ ಪಾರ್ಕ್‌ನಲ್ಲಿ ಯಾಕೆ ಬಾಳಾಠಾಕ್ರೆಗೆ ಅವಕಾಶ ನೀಡಬಾರದು ಎನ್ನುವುದಕ್ಕೆ ನಾವೊಮ್ಮೆ ಶಿವಾಜಿಯ ಬದುಕಿನ ಪುಟಗಳನ್ನು ಹಿಂದಕ್ಕೆ ಬಿಡಿಸಿದರೆ ಸಾಕು, ತಿಳಿದು ಬಿಡುತ್ತದೆ. ಬಾಳಾಠಾಕ್ರೆ ಮಾತ್ರವಲ್ಲ, ಇಡೀ ಸಂಘಪರಿವಾರ ಶಿವಾಜಿಯ ವ್ಯಕ್ತಿತ್ವಕ್ಕೆ ಮಾಡಿದ ಅನ್ಯಾಯ ಬಯಲಾಗಿ ಬಿಡುತ್ತದೆ. ಇಂದು ಈ ದೇಶದ ಹೊಸತಲೆಮಾರಿಗೆ ಶಿವಾಜಿಯೆಂದರೆ, ಮೊಗಲರ ವಿರುದ್ಧ, ಮುಸ್ಲಿಮರ ವಿರುದ್ಧ ಹೋರಾಡಿದ ಒಬ್ಬ ಹಿಂದೂ ಸಾಮ್ರಾಟ ಮಾತ್ರ. ಇದು ಸಂಘಪರಿವಾರ ಮತ್ತು ಠಾಕ್ರೆ ಬಳಗ ಶಿವಾಜಿಯನ್ನು ವಿರೂಪಗೊಳಿಸಿದ ಪರಿ. ಮಳೆ ಬಿದ್ದ ನೆಲದಲ್ಲಿ ಬೀಜ ಸಹಜವಾಗಿ ಪುಟಿಯೊಡೆಯು ವಂತೆ ಶಿವಾಜಿ ಈ ನೆಲದಿಂದ ಎದ್ದು ಬಂದ. ಅವನನ್ನು ತಿಳಿಯದೇ ಇರುವ ಮಕ್ಕಳು, ಈ ನೆಲದ ಸ್ಪರ್ಶವನ್ನು ತನ್ನದಾಗಿಸಿಕೊಳ್ಳಲಾರರು. ಠಾಕ್ರೆ ಮತ್ತು ಸಂಘಪರಿವಾರದ ಹೀನ ರಾಜಕೀಯವನ್ನು ಅರ್ಥ ಮಾಡಿಕೊಳ್ಳುವ ಒಂದೇ ಒಂದು ಸುಲಭ ವಿಧಾನವೆಂದರೆ, ಶಿವಾಜಿಯ ಬದುಕಿನ ಪುಟಗಳನ್ನು ಬಿಡಿಸುವುದು. ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದು.
***
ಕರ್ನಾಟಕದ ಪಾಲಿಗೆ ಟಿಪ್ಪು ಸುಲ್ತಾನ್ ಹೇಗೆಯೋ ಹಾಗೆಯೇ ಮಹಾರಾಷ್ಟ್ರಕ್ಕೆ ಶಿವಾಜಿ. ಇವರ ನೋವು, ದುಮ್ಮಾನ, ಹೋರಾಟ, ಸಂಘರ್ಷ, ಇವರಿಗಾದ ವಂಚನೆ ಮತ್ತು ಇವರ ಅಂತ್ಯಗಳಲ್ಲಿ ಹಲವು ಸಾಮ್ಯತೆಗಳಿವೆ. ಶಿವಾಜಿಗೂ ಟಿಪ್ಪುವಿಗೂ ಇರುವ ಎರಡು ಮುಖ್ಯ ವ್ಯತ್ಯಾಸಗಳೆಂದರೆ, ಟಿಪ್ಪುವಿಗೆ ಹೈದರಾಲಿಯ ಮೂಲಕ ರಾಜ್ಯ ಸಿಕ್ಕಿತು. ಆದರೆ ಶಿವಾಜಿ ಆದಿವಾಸಿಗಳು, ದಲಿತರು, ಬುಡಕಟ್ಟು ಜನರು ಮತ್ತು ಮುಸ್ಲಿಮರನ್ನು ಕಟ್ಟಿಕೊಂಡು ಒಂದು ಹೊಸ ಸಾಮ್ರಾಜ್ಯವನ್ನು ಕಟ್ಟಿದ. ಟಿಪ್ಪು ವಿದ್ಯಾವಂತನಾಗಿದ್ದ. ಅವನಲ್ಲಿ ವೈಜ್ಞಾನಿಕ ದೂರದೃಷ್ಟಿಯಿತ್ತು. ಶಿವಾಜಿ ನೆಲದಿಂದ ಸಿಡಿದು ಬಂದ ಸಹಜ ಮರ. ಶೌರ್ಯ, ಎದೆಗಾರಿಕೆಯೇ ಅವನ ಪಾಲಿನ ವರ. ಇಬ್ಬರಲ್ಲೂ ಇನ್ನೊಂದು ಮುಖ್ಯ ಸಾಮ್ಯತೆಯಿತ್ತು. ಈ ನೆಲದ ಮೇಲ್ವರ್ಣೀಯರ ಪಾಲಿಗೆ ಟಿಪ್ಪು ಮ್ಲೇಚ್ಛನಾಗಿ ದ್ದರೆ, ಶಿವಾಜಿ ಮೇಲ್ಜಾತಿಯವರ ಕಣ್ಣಲ್ಲಿ ಶೂದ್ರ ಅದರಲ್ಲೂ ಹೀನ ಜಾತಿಯವನಾಗಿದ್ದ. ಹಲವರ ಕಣ್ಣಲ್ಲಿ ಹಲವು ರೂಪಗಳನ್ನು ಶಿವಾಜಿ ಪಡೆದಿದ್ದ. ಸಂಘಪರಿವಾರದ ಕಣ್ಣಲ್ಲಿ ಶಿವಾಜಿ ಹಿಂದೂ ಸಾಮ್ರಾಟ. ದಲಿತರ ಕಣ್ಣಲ್ಲಿ ಶಿವಾಜಿ ಅಪ್ಪಟ ಬ್ರಾಹ್ಮಣ ವಿರೋಧಿ. ಬ್ರಾಹ್ಮಣರು ಶಿವಾಜಿಗೆ ಮಾಡಿದ ವಂಚನೆ, ಮತ್ತು ಶಿವಾಜಿಯಿಂದ ನಡೆದ ಹಲವು ಬ್ರಾಹ್ಮಣರ ಹತ್ಯೆಯನ್ನು ಇಟ್ಟುಕೊಂಡು ತಮ್ಮ ವಾದವನ್ನು ಮಂಡಿಸುತ್ತಾರೆ. ಮುಸ್ಲಿಮರು ಶಿವಾಜಿಯ ಕುರಿತಂತೆ ವೌನವನ್ನು ತಳೆದಿದ್ದಾರೆ. ಬಹುಶಃ ಸಂಘಪರಿವಾರ ಶಿವಾಜಿಯನ್ನು ವಿರೂಪಗೊಳಿಸಿದ ಕಾರಣ ವಿರಬಹುದು. ಶಿವಾಜಿ ನಡೆಸಿದ ಗೆರಿಲ್ಲಾ ಯುದ್ಧದ ಕಾರಣಕ್ಕಾಗಿ ಅವನನ್ನು ಡಕಾಯಿತ ಗುಂಪಿನ ನಾಯಕ ಎಂದು ವಾದ ಮಂಡಿಸುವವರೂ ಇದ್ದಾರೆ. ಒಂದಂತೂ ಸತ್ಯ. ಶಿವಾಜಿ ಯಾವುದೇ ನಿರ್ದಿಷ್ಟವಾದ ಸಿದ್ಧಾಂತ, ಅಜೆಂಡಾಗಳನ್ನು ಇಟ್ಟುಕೊಂಡು ಹೊರಟವನಲ್ಲ. ಬಂಡಾಯ ಶಿವಾಜಿಯ ಮೂಲಗುಣ. ಅವನ ದಾರಿಯಲ್ಲಿ ಎದುರಾದ ಎಲ್ಲರ ವಿರುದ್ಧವೂ ಹೋರಾಡಿದ. ಮರಾಠರು, ಮೊಗಲರು, ಬ್ರಾಹ್ಮಣರು ಎಲ್ಲರೂ ಅವನ ದಾರಿಯಲ್ಲಿ ಎದುರಾದರು. ಇದೇ ಸಂದರ್ಭದಲ್ಲಿ ಅವನ ಬೆಂಬಲವಾಗಿ ಮುಸ್ಲಿಮರು, ಬ್ರಾಹ್ಮಣರು, ಮರಾಠರೂ ಇದ್ದರು.

ಶಿವಾಜಿಯ ಬದುಕು ಹೋರಾಟದಲ್ಲೇ ಮುಗಿಯಿತು. ಅವನು ರಾಜ್ಯಾಭಿಷೇಕವಾದ ಬಳಿಕ ಬದುಕಿದ್ದು ಬರೇ ಆರು ವರ್ಷ. ರಾಜ್ಯ ಪದವಿಯನ್ನು ಅನುಭವಿಸುವುದಕ್ಕೆ ಅವನಿಂದಾಗ ಲಿಲ್ಲ. ಅಕಾಲ ಮರಣಕ್ಕೆ ಶಿವಾಜಿ ತುತ್ತಾದ. ಸತ್ತು ಒಂದು ವಾರದ ಬಳಿಕವಷ್ಟೇ ಜನರಿಗೆ ಗೊತ್ತಾಯಿತು ಶಿವಾಜಿ ಸತ್ತ ವಿಷಯ. ಆತನಿಗೆ ವಿಷ ಉಣಿಸಿ ಕೊಲ್ಲಲಾಯಿತು ಎನ್ನುತ್ತಾರೆ. ಟಿಪ್ಪುವಿನ ಮರಣವೂ ನಡೆದಿರುವುದು ವಂಚನೆ ಯಿಂದಲೇ ತಾನೆ. ನಿಜಾಮರು, ಮರಾಠರು, ಮೀರ್‌ಸಾದಿಕ್, ಪೂರ್ಣಯ್ಯ ಎಲ್ಲರೂ ಸೇರಿ ಮಾಡಿದ ವಿಷಪ್ರಾಷಣದ ಫಲ, ಟಿಪ್ಪುವಿನ ಭೀಕರ ಸೋಲು ಮತ್ತು ಮರಣ.

 ಶಿವಾಜಿಯ ಪಟ್ಟಾಭಿಷೇಕವೇ ಒಂದು ದುರಂತವಾಗಿ ಹೋಯಿತು. ಅವನ ಪಟ್ಟಾಭಿಷೇಕ ನಡೆಸಲು ಅಂದಿನ ಬ್ರಾಹ್ಮಣರು ಒಪ್ಪಲಿಲ್ಲ. ಯಾಕೆಂದರೆ ಶಿವಾಜಿ ಭೋಸಲೆ ಕೀಳು ಜಾತಿಗೆ ಸೇರಿದಾತ. ರಾಜ್ಯದ ಚಕ್ರವರ್ತಿಯಾಗಬೇಕಾದರೆ ಆತ ಕ್ಷತ್ರಿಯನಾಗಿರಬೇಕು. ಅಂತಿಮವಾಗಿ ಕಾಶಿಯ ಗಾಗಾಭಟ್ಟನನ್ನು ಅತಿ ಹಣದ ಆಮಿಶವೊಡ್ಡಿ ಕರೆತರಲಾಯಿತು. ಅವನಿಗೂ ಅವನ ಶಿಷ್ಯರಿಗೂ ಶಿವಾಜಿ ನೀಡಿದ ದಕ್ಷಿಣೆಯನ್ನು ಕೋಟೆಯಿಂದ ಒಯ್ಯುವುದಕ್ಕೇ ಶ್ರಮ ಪಡಲಾಯಿತು ಎಂಬ ಮಾತಿದೆ. ಗಾಗಾ ಭಟ್ಟ ಶಿವಾಜಿಯನ್ನು ಶುದ್ಧೀಕರಿಸಿದ ಮಾತ್ರವಲ್ಲ, ಆತನಿಗೆ ನಲವತ್ತರ ವಯಸ್ಸಿನಲ್ಲಿ ಹೊಸದಾಗಿ ಉಪನಯನ ಮಾಡಿದ. ಅಷ್ಟೇ ಅಲ್ಲ, ಹೊಸದಾಗಿ ವೈದಿಕ ಪದ್ಧತಿಯ ಪ್ರಕಾರ ಮದುವೆ ಮಾಡಿಸಿದ. ಇದಾದ ಬಳಿಕವಷ್ಟೇ ಶಿವಾಜಿಗೆ ಪಟ್ಟಾಭಿಷೇಕ ಮಾಡಲಾಯಿತು.

  ಸರಿ. ಹೀಗಾದರೂ ಈ ಪಟ್ಟಾಭಿಷೇಕ ಯಶಸ್ವಿಯಾಯಿತೇ? ಎಂದರೆ ಅದೂ ಇಲ್ಲ. ಶಿವಾಜಿಯ ಮೊದಲ ರಾಜ್ಯಾಭಿಷೇಕ ನಡೆದದ್ದು ರಾಯಗಡದಲ್ಲಿ. ಜೂನ್ 6, 1674ರಲ್ಲಿ. ಇದಾದ ಬಳಿಕ ಮತ್ತೆ ಶೈವರು ತಗಾದೆ ತೆಗೆದರು. ಶಿವಾಜಿಯ ಪಟ್ಟಾಭಿಷೇಕ ಸರಿಯಾಗಿ ನಡೆದಿಲ್ಲ ಎಂದು ಟೀಕಿಸತೊಡಗಿ ದರು. ಇದೇ ಸಂದರ್ಭದಲ್ಲಿ ಶಿವಾಜಿಯ ತಾಯಿ ಜೀಜಾಬಾಯಿ ತೀರಿಕೊಂಡರು. ಇನ್ನೋರ್ವ ಸೇನಾಪತಿ ಅಸುನೀಗಿದ್ದ. ಪತ್ನಿ ಕಾಶಿಬಾಯಿ ಮೃತ್ಯುವಶರಾದರು. ಇದೆಲ್ಲಕ್ಕೂ ಕಾರಣ ಗಾಗಾ ಭಟ್ಟ ಮಾಡಿದ ರಾಜ್ಯಾಭಿಷೇಕ ಎಂದು ಪುಕಾರು ಹಬ್ಬಿಸಲಾಯಿತು. ಜನರನ್ನು ಸಂತುಷ್ಟಿಗೊಳಿಸುವುದಕ್ಕಾಗಿಯೇ ಮೂರೇ ತಿಂಗಳಲ್ಲಿ ಮತ್ತೊಮ್ಮೆ ರಾಜ್ಯಾಭಿಷೇಕವನ್ನು ಮಾಡಿಸಿಕೊಳ್ಳಬೇಕಾಯಿತು. ಯಜುರ್ವೇದಿ ತಾಂತ್ರಿಕ ಗೋಸ್ವಾಮಿಯೊಬ್ಬನ ನೇತೃತದಲ್ಲಿ ಈ ರಾಜ್ಯಾಭಿಷೇಕ ನಡೆಯಿತು. ಇದು ಶಿವಾಜಿ ಆಡಳಿತದಲ್ಲಿ ಶೈವರು ಮತ್ತು ವೈದಿಕ ಬ್ರಾಹ್ಮಣರ ನಡುವಿನ ತಿಕ್ಕಾಟಕ್ಕೆ ಕಾರಣವಾಯಿತು. ಆಳದಲ್ಲಿ ಬ್ರಾಹ್ಮಣರು ಶಿವಾಜಿ ಯನ್ನು ಒಪ್ಪಿಕೊಂಡಿರಲೇ ಇಲ್ಲ. ಈ ಎಲ್ಲ ಸಂಘರ್ಷದ ನಡುವೆ ಆರು ವರ್ಷ ಆಡಳಿತ ನಡೆಸಿದ ಶಿವಾಜಿ ಅಕಾಲಿಕವಾಗಿ ಮರಣವಪ್ಪಿದ.

ಶಿವಾಜಿಯನ್ನು ಜಾತಿಯ ಕಾರಣಕ್ಕಾಗಿ ಕೆಲವು ಮೇಲ್ವರ್ಣೀ ಯರು ರಾಜನೆಂದು ಒಪ್ಪಿಕೊಂಡಿರಲೇ ಇಲ್ಲ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ.ರಾಂಝ್ಯದ ಪಾಟೀಲನೊಬ್ಬ ರೈತನ ಮಗಳನ್ನು ಬಲಾತ್ಕಾರ ಮಾಡಿದನೆಂಬ ಕಾರಣಕ್ಕೆ ಅವನನ್ನು ಹೆಡೆಮುರಿ ಕಟ್ಟಿ ಪುಣೆಯಲ್ಲಿ ಶಿವಾಜಿಯ ಎದುರಿಗೆ ತರಲಾಯಿತು. ಶಿವಾಜಿ ಪಾಟೀಲನಿಗೆ ಶಿಕ್ಷೆಯನ್ನು ಆದೇಶಿದ. ಆಗ ಪಾಟೀಲ, ಸಭೆಯಲ್ಲಿ ಹಾಜರಾಗಿದ್ದ ದಾದೋಜಿ ಕೊಂಡದೇವನಿಗೆ ಹೇಳಿದ ‘‘ಪಂತ ಕುಲೀನ ಮನೆತನದವರು ನ್ಯಾಯ ನೀಡಲಿ’’
 ನೇರವಾಗಿ ಶಿವಾಜಿಯನ್ನು ಪಾಟೀಲ ನಿಂದಿಸಿದ್ದ. ‘‘ಶಿವಾಜಿ ಕೆಳಜಾತಿಯವನಾಗಿ ರುವುದರಿಂದ ನನ್ನ ವಿರುದ್ಧ ನ್ಯಾಯ ನೀಡಲು ಅವನಿಗೆ ಅರ್ಹತೆಯಿಲ್ಲ’’ ಎಂದು ಹೇಳಿದ್ದ. ಮರಾಠ ಸರದಾರರಲ್ಲೂ ಹಲವರಿಗೆ ಶಿವಾಜಿಯನ್ನು ರಾಜನೆಂದು ಒಪ್ಪಿಕೊಳ್ಳಲು ಮುಜುಗರವಿತ್ತು. ಮರಾಠ ಕ್ಷತ್ರಿಯ ಕುಲವೆಂದು 96 ವಿಭಾಗಗಳನ್ನು ಉಲ್ಲೇಖಿಸುತ್ತದೆ. ಅದರಲ್ಲಿ ಭೋಸಲೆ ಎಂಬ ಹೆಸರಿಲ್ಲ. ಶಿವಾಜಿಯು ಭೋಸಲೆ ಅಡ್ಡ ಹೆಸರನ್ನು ಹೊಂದಿದ್ದ. ಮಹಾತ್ಮ ಜೋತಿಭಾ ಫುಲೆಯವರು ತಮ್ಮ ಪೋವಾಡೆ ಯಲ್ಲಿ ಶಿವಾಜಿಯನ್ನು ‘‘ಕೃಷಿಕ ಭೂಷಣ’’ ಎಂದು ಕರೆದಿರುವುದು ಇದೇ ಕಾರಣಕ್ಕೆ. ಶಿವಾಜಿ ರೈತ ಅಥವಾ ಕೃಷಿಕ ಸಮುದಾಯದಲ್ಲಿ ಬೆಳೆದು ಬಂದವನಾಗಿದ್ದ.

ಶಿವಾಜಿ ಸಾಮ್ರಾಜ್ಯ ಕಟ್ಟುವ ಸಂದರ್ಭದಲ್ಲಿ ಅವನ ಜೊತೆ ಜೊತೆಗೆ ಹೆಜ್ಜೆಯಿಟ್ಟವರಾರು. ಪ್ರಾಣಕ್ಕೆ ಪ್ರಾಣ ಕೊಟ್ಟು ಅವನನ್ನು ಕಾಪಾಡಿದವರಾರು? ಅವನಿಗೆ ದ್ರೋಹ ಬಗೆದವರಾರು? ಎಂಬಿತ್ಯಾದಿ ಪುಟಗಳನ್ನು ಬಿಡಿಸುತ್ತಾ ಹೋದರೆ ನಮ್ಮ ಎದೆ ಧಸ್ಸೆನ್ನುತ್ತದೆ. ಅದನ್ನು ಮುಂದಿನ ವಾರ ಹಂಚಿಕೊಳ್ಳುವೆ.

1 comment:

  1. ಶಿವಕುಮಾರNovember 29, 2012 at 12:34 AM

    "ಕರ್ನಾಟಕದ ಪಾಲಿಗೆ ಟಿಪ್ಪು ಸುಲ್ತಾನ್ ಹೇಗೆಯೋ ಹಾಗೆಯೇ ಮಹಾರಾಷ್ಟ್ರಕ್ಕೆ ಶಿವಾಜಿ. "

    ಹ್ಹ ಹ್ಹ ಹ್ಹ.. ಎಂತಾ ತಮಾಷೆ! ನೀವು ಈ ರೀತಿ ಸ್ವಮತಮೋಹಿಗಳು ಅಂತ ಗೊತ್ತಿರಲಿಲ್ಲ . ಯಾರಿಗೂ ಗೊತ್ತಿಲ್ಲದ ಈ ಜಾತಿ ಧರ್ಮ ವಿಚಾರಗಳನ್ನೆಲ್ಲಾ ಪ್ರತಿ ವಿಷಯದಲ್ಲೂ ಅದೆಲ್ಲಿಂದ ಸೃಷ್ಟಿಸುತ್ತೀರೋ ಗೊತ್ತಿಲ್ಲ. ಹೀಗೆ ಜಾತಿ ಧರ್ಮ ದ್ವೇಷ ಹಬ್ಬಿಸುವ ಪ್ರಯತ್ನ ಬಿಡಿ. ನಿಮ್ಮ ಮನಸ್ಸು ತಿಳಿಯಾಗಲಿ. ಅಲ್ಲಿಯವರೆಗೆ ಖುದಾ ಹಾಫೀಸ್. :)

    ReplyDelete