Monday, July 2, 2012

ಮಳೆ ಮತ್ತು ಇತರ ಕತೆಗಳು


ಮಳೆ
ಮೋಡ ಬಿತ್ತನೆ ಮಾಡುತ್ತೇವೆ ಮುಖ್ಯಮಂತ್ರಿ ಘೋಷಿಸಿದರು.
ಮೋಡ ಬಿತ್ತನೆಯಾಯಿತು.
ಅಂದು ಮುಂಜಾನೆ ಎದ್ದು ನೋಡಿದರೆ ಮಳೆ ನೀರು ಕೆಂಪಾಗಿ ಸುರಿಯುತ್ತಿತ್ತು.
ರೈತನೊಬ್ಬ ನಿಟ್ಟುಸಿರಿಟ್ಟು ಹೇಳಿದ ‘‘ಸಹಜವಾಗಿ ಆಗಬೇಕಾದ ಹೆರಿಗೆಯನ್ನು ಅವಸರದಿಂದ ಇಳಿಸಿದರೆ ಇನ್ನೇನಾಗುತ್ತೆ...’’
 
ಆಕಾಶ
ಭೂಮಿ ಆಕಾಶವನ್ನು ನೋಡಿ ನಕ್ಕು ಹೇಳಿತು ‘‘ನನ್ನಲ್ಲಿ ಸಕಲ ಜೀವ ವೈವಿಧ್ಯವಿದೆ. ನಿನ್ನಲ್ಲಿ ಏನಿದೆ? ನೀನು ಬಟಾ ಬಯಲು....’’
‘‘ನಿನ್ನಂತಹ ಕೋಟ್ಯಂತರ ಗ್ರಹಗಳನ್ನು ತುಂಬಿಕೊಂಡಿದ್ದೂ ಬಟಾಬಯಲಾಗಿರುವುದು ನನ್ನ ಹೆಗ್ಗಳಿಕೆ...’’

ತಲೆ
ರೈತರು ಯಾವತ್ತೂ ತಲೆಯೆತ್ತಿಯೇ ಓಡಾಡುತ್ತಾರೆ.
ಯಾಕೆಂದರೆ
ತೆಂಗಿನ ಮರದ ಫಸಲನ್ನು ನೋಡಬೇಕಾದರೆ ತಲೆಯೆತ್ತಲೇ ಬೇಕು.
ಗೊಬ್ಬರ ಹಾಕುವುದಕ್ಕಾಗಿ ಬಾಗುವ ರೈತ, ಫಸಲು ನೋಡುವ ನೆಪದಲ್ಲಿ ತಲೆಯೆತ್ತಿ ಬದುಕುತ್ತಾನೆ.

ಜಗತ್ತು
ಖ್ಯಾತ ಓಟಗಾರನೊಬ್ಬನ ಕಾಲು ಶಾಶ್ವತವಾಗಿ ಮುರಿದು ಹೋಯಿತು.
ಆವರೆಗೆ ಒಮ್ಮೆಯೂ ಹಿಂದೆ ತಿರುಗಿ ನೋಡದೆ ಓಡುತ್ತಿದ್ದವನು ತಟ್ಟನೆ ನಿಂತು ಬಿಟ್ಟ.
ತನ್ನ ಜೊತೆಗೆ ಜಗತ್ತು ಓಡುತ್ತಿದೆ ಎಂದು ಭಾವಿಸುತ್ತಿದ್ದವನು
ಮೊದಲ ಬಾರಿಗೆ ಜಗತ್ತು ಕುಂಟುತ್ತಿರುವುದನ್ನು ಕಂಡ.

ನೆರಳು
‘‘ನಮ್ಮ ನೆರಳು ನಮ್ಮನ್ನೇಕೆ ಹಿಂಬಾಲಿಸುತ್ತದೆ’’ ಶಿಷ್ಯ ಕೇಳಿದ.
‘‘ಹಾಗೇನಿಲ್ಲ. ನಿನ್ನಂಥಹ ಕೆಲವರು ತಮ್ಮ ನೆರಳನ್ನೇ ಹಿಂಬಾಲಿಸುತ್ತಿರುತ್ತಾರೆ..’’ ಸಂತ ಹೇಳಿದ.

ರಕ್ತ
‘‘ಸಾರ್...ನನ್ನ ತಾಯಿಗೆ ಅರ್ಜೆಂಟಾಗಿ ರಕ್ತ ಬೇಕಾಗಿದೆ ಕೊಡುತ್ತೀರಾ...’’
‘‘ನೀನೇ ಕೊಡಬಹುದಲ್ಲ ರಕ್ತವನ್ನು...ಇಷ್ಟು ಧಡೂತಿ ಶರೀರ ಹೊಂದಿದ್ದೀಯ?’’
‘‘ಇಲ್ಲ ಸಾರ್...ನಾನು ರಕ್ತ ಕೊಟ್ಟರೆ ತಾಯಿ ಬೈಯ್ತಳೆ...’’ ಮುದ್ದಿನ ಮಗ ಹೇಳಿದ.

ಸೂರು
ಒಂದು ಊರು.
ಅಲ್ಲಿಗೆ ಸರಕಾರ ಒಂದು ಆಧುನಿಕ ಶೌಚಾಲಯವನ್ನು ಕೊಟ್ಟಿತು.
ಊರಿನ ಸೂರಿಲ್ಲದ ಜನ ಅದರಲ್ಲಿ ಒಲೆ ಹೂಡಿ ಬದುಕತೊಡಗಿದರು.
ಶೌಚಕ್ಕೆ ಎಂದಿನಂತೆ ಪಕ್ಕದ ಬಯಲನ್ನೇ ಬಳಸತೊಡಗಿದರು.

ಭಿಕ್ಷುಕ
ಒಬ್ಬ ಭಿಕ್ಷುಕನನ್ನು ನೋಡಿದ ರಾಜ ಅನುಕಂಪದಿಂದ ಆತನಿಗೆ ಚಿನ್ನದ ತಟ್ಟೆಯೊಂದನ್ನು ಕೊಟ್ಟು ಹೇಳಿದ ‘‘ಇದು ಸಹಸ್ರಾರು ರೂಪಾಯಿ ಬೆಲೆಬಾಳುವ ತಟ್ಟೆ. ಇಂದಿನಿಂದ ನೀನು ನಿನ್ನ ಜೀವನವನ್ನು ಬದಲಿಸು’’
ಅಂದಿನಿಂದ ಭಿಕ್ಷುಕ ಚಿನ್ನದ ತಟ್ಟೆಯನ್ನು ಹಿಡಿದು ಭಿಕ್ಷೆ ಬೇಡ ತೊಡಗಿದ.

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

2 comments:

  1. :-) naavu kaTTisikoTTa ondu shouchalayadalli obba computer room maaDkondiddaane, innobbaru kaTTige pErisittiddaare..cant blame them though!
    liked 'jagattu' of all the stories
    malathi S

    ReplyDelete