
೧
ದಾರಿ ತಪ್ಪಿದ ಅನಾಥ ಮಕ್ಕಳಂತೆ
ತಿಳಿದೋ ತಿಳಿಯದೆಯೋ ಮಾಡಿದ ಸಾವಿರ ತಪ್ಪುಗಳು!
ಕ್ಷಮೆಯೋ...
ಎದೆಯೊಳಗೆ ಕುದಿ ಕುದಿವ ಹಾಲಿಟ್ಟು
ಕಳೆದುಹೋದ ಮಕ್ಕಳಿಗೆ ತುಡಿವ
ತಾಯಿಯಂತೆ!
೨
ರಕ್ತದ ಕಲೆಗಳ ಕುರುಹುಗಳೇ ಇಲ್ಲ
ಆದರೂ ಗಾಯಗೊಂಡು ಬಿದ್ದಿದ್ದಾರೆ ಇವರೆಲ್ಲ
ದಯೆಯ ಒರೆಯೊಳಗೆ
ಹೊಂಚಿ ಕೂತ ಕ್ಷಮೆಯೆಂಬ ನಿರ್ದಯಿ ಖಡ್ಗವೇ
ನಿನಗೆ ಸಾಟಿಯಿಲ್ಲ....
ಗಾಂಧಿ...ಜೀಸಸ್...ಬುದ್ಧ...
ನಿಮ್ಮ ತುಟಿಯಂಚಿನ ನಗುವಿನಲ್ಲಿ
ಹೊಳೆಯುತ್ತಿರುವ ಖಡ್ಗದ ಅಲಗು
ನಿಷ್ಪಾಪಿ ಪಾಪಿಗಳ ಹೃದಯವನ್ನೇ ಇರಿದಿದೆ
ನಿಮ್ಮ ಕ್ಷಮೆಗೆ ಕ್ಷಮೆಯಿಲ್ಲ!
೩
ಅವನು ಮಾಡಿದ
ಸಾವಿರ ತಪ್ಪುಗಳ
ಒಂದು ಕ್ಷಮೆಯಿಂದ
ನಾನು ಸರಿ
ದೂಗಿಸಿಕೊಂಡೆ
೪
ನಾನು
ಅವನ ದ್ವೇಷಿಸಿದೆ
ಅವನೋ ನನ್ನನ್ನು ಕ್ಷಮಿಸಿದ!
ಹೇಳು ದೇವರೆ...
ಯಾರು ಹೆಚ್ಚು ನೊಂದವರು?
ನಾನೋ...ಅವನೋ...?
೫
ನನ್ನದೋ ತಿಳಿಯದೇ ಮಾಡಿದ ತಪ್ಪುಗಳು
ನೀನೋ ತಿಳಿದು
ತಿಳಿದೂ ನನ್ನನ್ನು ಕ್ಷಮಿಸಿದೆ
ಹೇಳು...
ಯಾರು ಯಾರಿಗಿಂತ ಹೆಚ್ಚು ದುಷ್ಟರು?
೬
ಕ್ಷಮೆಯ ಹಂಗಿನ ಅರಮನೆಗಿಂತ
ನನ್ನ ದ್ವೇಷದ ಅರಗಿನ ಮನೆಯೇ
ಲೇಸು ಎಂದು
ನೆಮ್ಮದಿಯಿಂದ ಸುಟ್ಟು ಹೋದೆ!
ಸುಂದರವಾದ ಕವಿತೆ ಬಷೀರ್.ನಿಮ್ಮ ಭಾವ ಜಗತ್ತಿಗೆ ಬರಲು ಸ್ವಲ್ಪ ಕಾಲಗಳೇ ಬೇಕು. ಪಕ್ಕನೇ ವಾಸ್ತವದ ಪಕ್ಕೆಲುಬುಗಳನ್ನು ಕಿತ್ತಂತ್ತಿರುತ್ತದೆ ಪದಗಳಲ್ಲಿ ಹಾಲಿನಂತೆ ಕೆನೆ ಕಟ್ಟಿದ ಭಾವಗಳು. ಆಸ್ವಾಧಿಸಿ ಖುಷಿ ಪಟ್ಟೆ.ಕವಿತೆ ಬರೆಯುವವರು ಇಂತಹ ಕವಿತೆಗಳನ್ನು ಅವಶ್ಯವಾಗಿ ಓದಿ.ಭಾವ ಪ್ರತೀ ಸಾಲಿನಲ್ಲಿ ಚೆನ್ನಾಗಿ ಸ್ಫುರಿಸುತ್ತದೆ.
ReplyDelete