ನಾಲ್ಕು ದಿನಗಳ ಹಿಂದೆ ಇದ್ದಕ್ಕಿದ್ದಂತೆಯೇ ನನ್ನ ಮೆಚ್ಚಿನ ಕತೆಗಾರ ಬೊಳುವಾರು ಮೊಹಮ್ಮದ್ ಕುಂಞಯವರು ಮೊಬೈಲ್ ಕರೆ ಮಾಡಿದ್ದರು. ‘ನಿಮಗೆ ಥ್ಯಾಂಕ್ಸ್ ಹೇಳಲು ಫೋನ್ ಮಾಡುತ್ತಿದ್ದೇನೆ’ ಎಂದು ಬಿಟ್ಟರು. ‘ಯಾಕೆ’ ಎನ್ನುವುದು ಅರ್ಥವಾಗಲಿಲ್ಲ. ಅವರೇ ಮುಂದುವರಿಸಿದರು ‘‘ನಾನು ಬರೆಯುತ್ತಿರುವ ಕಾದಂಬರಿ 500 ಪುಟದಲ್ಲೇ ನಿಂತಿತ್ತು. ನೀವು ನನ್ನ ಬಗ್ಗೆ ಪತ್ರಿಕೆಯಲ್ಲಿ ಬರೆದಿದ್ದ ಲೇಖನವನ್ನು ಮೊನ್ನೆ ಓದಿದ ಬಳಿಕ ಮತ್ತೆ ಬರೆಯುವುದಕ್ಕೆ ಸ್ಫೂರ್ತಿ ಬಂತು. ಈಗ ಮತ್ತೆ ಬರಹ ಮುಂದುವರಿಸುತ್ತಿದ್ದೇನೆ. ಅದಕ್ಕಾಗಿ ನಿಮಗೆ ಥ್ಯಾಂಕ್ಸ್ ಹೇಳುತ್ತಿದ್ದೇನೆ’’ ಎಂದು ಬಿಟ್ಟರು. ಯಾವ ಲೇಖಕ ನಮ್ಮ ಬಾಲ್ಯವನ್ನು ತನ್ನ ಕತೆ,ಕಾದಂಬರಿಗಳ ಮೂಲಕ ಶ್ರೀಮಂತಗೊಳಿಸಿದ್ದನೋ, ಯಾವ ಲೇಖಕ ನಮ್ಮ ಚಿಂತನೆಗಳನ್ನು, ವಿಚಾರಗಳನ್ನು ತಿದ್ದಿ ತೀಡಿದ್ದನೋ, ಯಾವ ಲೇಖಕ ಅಕ್ಷರಗಳನ್ನು ಉಣಿಸಿ ನಮ್ಮನ್ನು ಬೆಳೆಸಿದ್ದನೋ ಆ ಲೇಖಕ ಏಕಾಏಕಿ ಹೀಗಂದು ಬಿಟ್ಚರೆ, ನಮ್ಮಂತಹ ತರುಣರ ಸ್ಥಿತಿಯೇನಾಗಬೇಕು? ಅಲ್ಲವೆ!? ‘‘ನಿಮ್ಮದು ದೊಡ್ಡ ಮಾತು...ಸಾರ್...’’ ಎಂದು ಬಿಟ್ಟೆ. ಆದರೆ ಅವರು ತುಸು ಭಾವುಕರಾಗಿದ್ದರು ಎಂದು ಕಾಣುತ್ತದೆ ‘‘ಇಲ್ಲ ಬಶೀರ್...ಇದು ನನ್ನ ಹೃದಯದಿಂದ ಬಂದ ಮಾತು...’’ ಎಂದರು.‘‘ಬರೆಯುವುದು ನಿಂತಾಗೆಲ್ಲ ನೀವು ನನ್ನ ಬಗ್ಗೆ ಬರೆದ ಲೇಖನವನ್ನು ಓದುತ್ತಾ...ಮತ್ತೆ ಬರೆಯಲು ಸ್ಫೂರ್ತಿ ಪಡೆಯುತ್ತೇನೆ’’ ಎಂದರು. ಈಗ ಭಾವುಕನಾಗುವ ಕ್ಷಣ ನನ್ನದು. ಬೊಳುವಾರರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಆ ಲೇಖನವನ್ನು ಬರೆದಿದ್ದೆ. ತುಸು ಅವಸರದಿಂದಲೇ ಗೀಚಿದ್ದೆ. ಅವರ ಬರಹಕ್ಕೆ ಸ್ಫೂರ್ತಿ ಕೊಡುವಷ್ಟು ಸುಂದರವಾಗಿದೆಯೇ ಅದು? ಅಥವಾ ತಮ್ಮ ಮಾತುಗಳ ಮೂಲಕ ನನಗೇ ಬರೆಯುವುದಕ್ಕೆ ಸ್ಫೂರ್ತಿ ಕೊಡುತ್ತಿದ್ದಾರೆಯೆ? ಆ ಕ್ಷಣಕ್ಕೆ ನನಗೆ ಅರ್ಥವಾಗಲಿಲ್ಲ. ಆದರೆ, ಅವರ ಮಾತುಗಳ ‘ಹ್ಯಾಂಗೋವರ್’ನಿಂದ ಇನ್ನೂ ನಾನು ಹೊರ ಬಂದಿಲ್ಲ. ಬೊಳುವಾರರ ಕುರಿತಂತೆ ನಾನು ಪತ್ರಿಕೆಯಲ್ಲಿ ಬರೆದ ಆ ಲೇಖನವನ್ನು ಇಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ.
ಬೊಳುವಾರು!
ಅದು ಎಂಬತ್ತರ ದಶಕದ ದಿನಗಳು.
ಪುತ್ತೂರು, ಉಪ್ಪಿನಂಗಡಿ ಆಸುಪಾಸಿನಲ್ಲಿ ಮಾತ್ರವಲ್ಲ, ದಕ್ಷಿಣ ಕನ್ನಡಾದ್ಯಂತ ಬೊಳುವಾರು ಎನ್ನುವ ಪುಟ್ಟ ಊರಿನ ಕುಖ್ಯಾತಿ ಹರಡಿತ್ತು. ದಕ್ಷಿಣಕನ್ನಡದ ಸಂಘಪರಿವಾರದ ಬೀಜ ಮೊಳಕೆ ಯೊಡೆದು ಹಬ್ಬಿದ್ದು ಇದೇ ಬೊಳುವಾರಿನಲ್ಲಿ. ಪುತ್ತೂರು ಆಗ ಸಂಪೂರ್ಣ ಬಿಜೆಪಿ ಮತ್ತು ಆರೆಸ್ಸೆಸ್ ಕೈ ವಶವಾಗಿತ್ತು. ಉರಿಮಜಲು ರಾಮಭಟ್ಟರು ಪುತ್ತೂರಿನ ಶಾಸಕರಾಗಿದ್ದ ಕಾಲ ಅದು. ಬೊಳುವಾರಿನ ಸಂಘಪರಿವಾರದ ಹುಡುಗರ ‘ಗ್ಯಾಂಗ್ವಾರ್’ಗಳು ಸುತ್ತಲಿನ ಪರಿಸರದಲ್ಲಿ ಕುಖ್ಯಾತಿಯನ್ನು ಪಡೆದಿದ್ದವು. ಉಪ್ಪಿನಂಗಡಿ ಆಸುಪಾಸಿನ ಮುಸ್ಲಿಮರು ಪುತ್ತೂರಿಗೆ ಕಾಲಿಡಲು ಅಂಜುತ್ತಿದ ದಿನಗಳದು. ಇಂತಹ ಸಂದರ್ಭದಲ್ಲೇ ಮುತ್ತಪ್ಪ ರೈ ಮತ್ತು ಆತನ ಹುಡುಗರ ಪ್ರವೇಶ ವಾಯಿತು. ವಿನಯಕುಮಾರ್ ಸೊರಕೆ ಎಂಬ ಯುವ ತರುಣ ರಾಜಕೀಯಕ್ಕೆ ಕಾಲಿಟ್ಟರು. ಉರಿಮಜಲು ರಾಮಭಟ್ಟರಿಂದ ಪುತ್ತೂರು ತಾಲೂಕಿನ ಜನ ಅದೆಷ್ಟು ಬೇಸತ್ತು ಹೋಗಿದ್ದ ರೆಂದರೆ, ಸೊರಕೆ ಹೆಸರು ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಮಿಂಚಿನ ಸಂಚಾರವನ್ನೇ ಮಾಡಿತು. ಆ ಚುನಾವಣೆಯಲ್ಲಿ ಭಾರೀ ಬಹು ಮತದಿಂದ ವಿನಯಕುಮಾರ್ ಎನ್ನುವ ಅಮುಲ್ ಬೇಬಿ ಆಯ್ಕೆಯಾದರು. ಈ ಗೆಲುವು ಪುತ್ತೂರಿನ ಮೇಲೆ ಅದೆಷ್ಟು ಪರಿಣಾಮ ಬೀರಿ ತೆಂದರೆ, ನಿಧಾನಕ್ಕೆ ಕೋಮುಗಲಭೆ, ಗ್ಯಾಂಗ್ ವಾರ್ಗಳ ಸದ್ದಡಗಿತು. ಆರೆಸ್ಸೆಸ್ನ ಅಧಿನಾಯಕ ಕಲ್ಲಡ್ಕ ಪ್ರಭಾಕರ ಭಟ್ಟರ ಬಾವ ಉರಿಮಜಲು ರಾಮಭಟ್ಟರು ಶಾಶ್ವತ ಮೂಲೆ ಸೇರಿದರು. ನಿಧಾನಕ್ಕೆ ‘ಬೊಳವಾರ’ನ್ನು ಜನ ಮರೆಯತೊಡಗಿ ದರು.
ಇದೇ ಹೊತ್ತಲ್ಲಿ, ಇನ್ನೊಂದು ಭಿನ್ನ ಕಾರಣಕ್ಕಾಗಿ ಬೊಳುವಾರು ನನ್ನಲ್ಲಿ ಕುತೂಹಲವನ್ನು ಹುಟ್ಟಿಸಿತ್ತು. ಅಪರೂಪಕ್ಕೆಂದು ಪುತ್ತೂರು ಬಸ್ಸು ಹತ್ತಿದರೆ, ಇನ್ನೇನು ಪುತ್ತೂರು ತಲುಪಬೇಕು ಎನ್ನುವಷ್ಟರಲ್ಲಿ ಕಂಡಕ್ಟರ್ ‘‘ಯಾರ್ರೀ... ಬೊಳುವಾರು...ಇಳೀರಿ...’’ ಎನ್ನುತ್ತಿದ್ದ. ನಾನು ತಡೆಯ ಲಾರದ ಕುತೂಹಲ ದಿಂದ, ಕಿಟಕಿಯ ಮೂಲಕ ಬೊಳುವಾರನ್ನು ನೋಡಲೆಂದು ಇಣುಕು ತ್ತಿದ್ದೆ. ಯಾರೋ ನನ್ನ ಪರಿಚಿತರನ್ನು ಹುಡುಕು ವವನಂತೆ ಕಣ್ಣಾಡಿಸು ತ್ತಿದ್ದೆ. ಅಲ್ಲೇ ಎಲ್ಲೋ ಮುತ್ತುಪ್ಪಾಡಿ ಎನ್ನುವ ಹಳ್ಳಿ ಇರಬೇಕೆಂದು...ಜನ್ನತ್ ಕತೆಯಲ್ಲಿ ಬರುವ ಮೂಸಾ ಮುಸ್ಲಿಯಾರರು ಅಲ್ಲೇ ಎಲ್ಲೋ ಬಸ್ಗಾಗಿ ಕಾಯುತ್ತಿರಬಹುದೆಂದು...ಅಥವಾ ಆ ರಿಕ್ಷಾ ಸ್ಟಾಂಡ್ನಲ್ಲಿ ಕಾಯುತ್ತಿರುವ ಹಲವು ಗಡ್ಡಧಾರಿಗಳಲ್ಲಿ ಒಬ್ಬರು ಬೊಳುವಾರು ಮುಹಮ್ಮದ್ ಕುಂಞಿ ಎನ್ನುವ ನನ್ನ ಮೆಚ್ಚಿನ ಕತೆಗಾರರಾಗಿರಬಹುದೆಂದು ನನಗೆ ನಾನೇ ಕಲ್ಪಿಸಿಕೊಳ್ಳುತ್ತಿದ್ದೆ. ಕಂಡಕ್ಟರ್ ‘ರೈಟ್’ ಎಂದು ಹೇಳುವವರೆಗೂ ಆ ಬೊಳುವಾರನ್ನು ಅದೇನೋ ಅದ್ಭುತವನ್ನು ನೋಡುವಂತೆ ನೋಡುತ್ತಿದ್ದೆ. ಯಾರೋ ಕೆತ್ತಿಟ್ಟ ಚಿತ್ರದಂತೆ ಒಂದು ಕಾಲ್ಪನಿಕ ಬೊಳುವಾರು ನನ್ನಲ್ಲಿ ಗಟ್ಟಿಯಾಗಿ ನಿಂತಿತ್ತು.
ಬೊಳುವಾರಿನ ಹುಡುಗರ ‘ಗ್ಯಾಂಗ್ವಾರ್’ನ ಕಾಲದಲ್ಲೇ ಬೊಳುವಾರು ಮುಹಮ್ಮದ್ ಕುಂಞಿ ಯವರ ಕತೆಗಳು ತರಂಗ, ಉದಯವಾಣಿ ಯಲ್ಲಿ ಪ್ರಕಟವಾಗಲಾ ರಂಭಿಸಿದವು. ಆಗ ನಾನು ಬಹುಶಃ ಎಂಟನೆ ತರಗತಿಯಲ್ಲಿದ್ದಿರಬೇಕು. ಮನೆಗೆ ಅಣ್ಣ ತರಂಗ ತರುತ್ತಿದ್ದ. ಬಳಿಕ ಗೊತ್ತಾಯಿತು. ಅವನು ತರಂಗ ತರುತ್ತಿದ್ದದ್ದೇ ಅದರಲ್ಲಿರುವ ‘ಜಿಹಾದ್’ ಧಾರಾವಾಹಿಯನ್ನು ಓದುವುದಕ್ಕಾಗಿ. ಬೊಳುವಾರರ ಕತೆಗಳನ್ನು, ಕಾದಂಬರಿ ಯನ್ನು ಓದುತ್ತಿದ್ದ ಹಾಗೆ ನನಗೊಂದು ಅಚ್ಚರಿ. ಅರೆ...ಇಲ್ಲಿರುವ ಹೆಸರುಗಳೆಲ್ಲ ನಮ್ಮದೇ. ಮೂಸಾ ಮುಸ್ಲಿಯಾರ್, ಖೈಜಮ್ಮ, ಸುಲೇಮಾನ್ ಹಾಜಿ, ಮುತ್ತುಪ್ಪಾಡಿ...ಇವನ್ನೆಲ್ಲ ಕತೆ ಮಾಡ್ಲಿಕ್ಕೆ ಆಗ್ತದಾ...! ಎಲ್ಲಕ್ಕಿಂತ ಅವರು ಬಳಸುವ ಕನ್ನಡ ಭಾಷೆ. ನಾವು ಬ್ಯಾರಿ ಭಾಷೆ ಮಾತನಾಡಿದಂತೆಯೇ ಕೇಳುತ್ತದೆ. ನನ್ನ ಸುತ್ತಮುತ್ತ ನಾನು ಕಾಣುತ್ತಿರುವ, ಹೆಚ್ಚೇಕೆ ನನ್ನ ಮನೆಯೊಳಗಿನ ಮಾತುಕತೆಗಳೆಲ್ಲ ಅವರ ಕತೆಯೊಳಗೆ ಸೇರಿತ್ತು. ಅಣ್ಣನಂತೂ ಬೊಳುವಾರಿನ ಕತೆಗಳ ಮೋಡಿಗೆ ಸಿಲುಕಿ ಸಂಪೂರ್ಣ ಕಳೆದು ಹೋದದ್ದನ್ನು, ನಾನೂ ಬಾಲ್ಯದಲ್ಲಿ ತಂದೆ ತಾಯಿಗಳ ಪಾಲಿಗೆ ‘ದಾರಿತಪ್ಪಿ’ದ್ದನ್ನು ಈಗ ನೆನೆದರೆ ನಗು, ನಿಟ್ಟುಸಿರು!
ಜಿಹಾದ್ ಕಾದಂಬರಿ ಪುಸ್ತಕವಾಗಿ ಬಂದಾಗ ಅಣ್ಣ ಅದರ ಪ್ರತಿಯನ್ನು ತಂದಿದ್ದ. ಬಹುಶಃ ಆ ಕಾದಂಬರಿಯನ್ನು ಅವನು ತನಗೆ ತಾನೇ ಆವಾ ಹಿಸಿಕೊಂಡಿದ್ದನೇನೋ ಅನ್ನಿಸು ತ್ತದೆ. ಅದಕ್ಕೊಂದು ಕಾರಣ ವಿತ್ತು. ಅದರಲ್ಲಿ ಬರುವ ಕತಾ ನಾಯಕನ ಪಾತ್ರದ ಹೆಸರೂ, ಇವನ ಹೆಸರೂ ಒಂದೇ ಆಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಆ ಕಾದಂಬರಿಯಲ್ಲಿ ಬರುವ ಕ್ರಿಶ್ಚಿಯನ್ ಹೆಣ್ಣು ಪಾತ್ರಗಳಾದ ಸಲೀನಾ, ರೋಸಿಯಂತಹ ಒಳ್ಳೆಯ ಕ್ರಿಶ್ಚಿಯನ್ ಸ್ನೇಹಿತೆಯರು ಅವನಿಗೂ ಸ್ಕೂಲಲ್ಲಿದ್ದರು. ಅವನಾಗ ಪಿಯುಸಿ ಕಲಿಯುತ್ತಿದ್ದ. ಕಾಲೇಜಲ್ಲಿ ಅವನೊಂದು ಕೈಬರಹ ಪತ್ರಿಕೆಯನ್ನು ಸಂಪಾದಿಸುತ್ತಿದ್ದ (ಅವನೇ ಅದರ ಕಲಾವಿದನೂ ಆಗಿದ್ದ). ‘ಸ್ಪಂದನ’ ಅದರ ಹೆಸರು. ಅದರಲ್ಲಿ ಏನೇನೋ ಬರೆದು ಯಾರ್ಯಾರದೋ ನಿಷ್ಠುರ ಕಟ್ಟಿಕೊಂಡು, ಮೇಷ್ಟ್ರ ಕೈಯಲ್ಲಿ ಬೆನ್ನು ತಟ್ಟಿಸಿಕೊಂಡು ತನ್ನದೇ ಒಂದು ಬಳಗದ ಜೊತೆಗೆ ಓಡಾಡುತ್ತಿದ್ದ. ಅಲ್ಲೆಲ್ಲಾ ನಾನು ಬೊಳುವಾರು ಮುಹಮ್ಮದ್ ಕುಂಞಿ ‘ಫಿತ್ನ’ಗಳನ್ನು ಕಾಣು ತ್ತಿದ್ದೆ. ತನ್ನ ಪಿಯುಸಿ ಕಾಲದಲ್ಲಿ ಬೊಳುವಾರರ ತರಹ ಕತೆ ಗಳನ್ನು ಬರೆಯಲು ಪ್ರಯತ್ನಿಸು ತ್ತಿದ್ದ. ಆದರೆ ಬಳಿಕ, ಬೊಳು ವಾರು, ಫಕೀರರ ಪ್ರಭಾವ ದಿಂದ ಸಂಪೂರ್ಣ ಹೊರ ಬಂದು ಅವನದೇ ಭಾಷೆ, ಶೈಲಿ, ಸ್ವಂತಿಕೆಯುಳ್ಳ ಕೆಲವೇ ಕೆಲವು ಕತೆಗಳನ್ನು ಬರೆದು ಹೊರಟು ಹೋದ ಎನ್ನುವುದು ಬೇರೆ ವಿಷಯ. ಆದರೆ ನಾನು ಬೊಳು ವಾರರ ಕತೆಗಳಿಗೆ ಹತ್ತಿರವಾಗು ವುದಕ್ಕೆ ಅಣ್ಣನೇ ಕಾರಣ. ಅವನ ಪುಸ್ತಕಗಳ ಕಾಪಾಟು ನನ್ನ ಪಾಲಿಗೆ ಆಗ ಚಂದಮಾಮ ಕತೆಗಳಲ್ಲಿ ಬರುವ ಅಮೂಲ್ಯ ವಜ್ರ ವೈಢೂರ್ಯಗಳಿರುವ ತಿಜೋರಿ ಯಾಗಿತ್ತು. ಅದನ್ನು ಯಾವಾಗಲೂ ಅಣ್ಣ ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದ.
ಒಂದು ರೀತಿಯಲ್ಲಿ ಬೊಳುವಾರು ನನ್ನಲ್ಲಿ ಮಾತ್ರವಲ್ಲ, ನನ್ನ ಮನೆಯೊಳಗೇ ಒಂದು ಅರಾಜಕತೆಯನ್ನು ಸೃಷ್ಟಿ ಮಾಡಿ ಹಾಕಿದರೋ ಅನ್ನಿಸುತ್ತದೆ. ಅಣ್ಣನಲ್ಲಾದ ಬದಲಾವಣೆ ಮನೆ ಯೊಳಗೆ ಸಣ್ಣ ಪುಟ್ಟ ಗದ್ದಲಗಳನ್ನು ಸೃಷ್ಟಿಸತೊಡ ಗಿತು. ‘‘ಅಷ್ಟು ಚೆನ್ನಾಗಿ ನಮಾಜು ಮಾಡುತ್ತಿದ್ದ ಹುಡುಗನಿಗೆ ಇದೇನಾಯಿತು...?’’ ಎಂಬ ಅಣ್ಣನ ಮೇಲಿನ ಸಿಟ್ಟನ್ನು ತಾಯಿ ನನ್ನ ಮೇಲೆ ತೀರಿಸುತ್ತಿದ್ದರು. ಸೊಗಸಾಗಿ ಕಿರಾಅತ್ಗಳನ್ನು ಓದುತ್ತಾ, ಮೀಲಾದುನ್ನೆಬಿಯ ಸಮಯದಲ್ಲಿ ಹತ್ತು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುತ್ತಾ ಇದ್ದ ನಾನು ಕೆಲವೊಮ್ಮೆ ‘ಅಧಿಕ ಪ್ರಸಂಗ’ ಮಾತನಾಡುವುದು ತಾಯಿಗೆ ಸಿಟ್ಟು ತರಿಸುತ್ತಿತ್ತು. ಬೊಳುವಾರು ತಮ್ಮ ಕತೆಗಳಲ್ಲಿ ಎತ್ತಿದ ಪ್ರಶ್ನೆಗಳನ್ನು ನಾನು ಸಮಾಜದೊಳಗೆ ಎತ್ತಬೇಕು ಎನ್ನುವ ತುಡಿತ. ಒಂದು ರೀತಿ ಹುಚ್ಚು ಅನುಕರಣೆ. ಆ ಕಾಲ, ವಯಸ್ಸು ಅದಕ್ಕೆ ಕಾರಣ ಇರಬಹುದು. ಆದರೆ ನಿಧಾನಕ್ಕೆ ಬೊಳುವಾರು ತಮ್ಮ ಕತೆಗಳಲ್ಲಿ ಇನ್ನಷ್ಟು ಬೆಳೆಯುತ್ತಾ ಹೋದರು. ನಾವೂ ಬೆಳೆಯುತ್ತಾ ಹೋದೆವು.
ಆರಂಭದ ಬೊಳುವಾರರ ಕತೆಗಳಲ್ಲಿ ಅಸಾಧಾ ರಣ ಸಿಟ್ಟಿತ್ತು. ಬೆಂಕಿಯಿತ್ತು. ಆಗಷ್ಟೇ ಬೆಂಕಿಯ ಕುಲುಮೆಯಿಂದ ಹೊರ ತೆಗೆದ ಸಲಾಖೆಯಂತೆ ಧಗ ಧಗ ಹೊಳೆಯುತ್ತಿತ್ತು. ಬಹುಶಃ ನಮ್ಮ ಹದಿ ಹರೆಯಕ್ಕೆ ಆ ಕಾರಣದಿಂದಲೇ ಅದು ತುಂಬಾ ಇಷ್ಟವಾಗಿರಬೇಕು. ‘ದೇವರುಗಳ ರಾಜ್ಯದಲ್ಲಿ’ ಕಥಾಸಂಕಲನದಲ್ಲಿ ಇಂತಹ ಕತೆಗಳನ್ನು ಗುರುತಿಸಬಹುದು. ವ್ಯವಸ್ಥೆಯ ವಿರುದ್ಧ ಕಥಾನಾಯಕನ ಹಸಿ ಹಸಿ ಬಂಡಾಯ. ಬೊಳುವಾರರ ಆರಂಭದ ಎಲ್ಲ ಕತೆಗಳಲ್ಲೂ ಇದನ್ನು ಕಾಣಬಹುದು. ಆದರೆ, ‘ಆಕಾಶಕ್ಕೆ ನೀಲಿ ಪರದೆ’ಯ ಕತೆಗಳು ಅವರ ಕತಾ ಬದುಕಿನ ಎರಡನೆ ಹಂತ. ಇಲ್ಲಿ ಬೊಳುವಾರು ಮಹಮ್ಮದ್ ಕುಂಞಿವರ ಅದ್ಭುತ ಕಲೆಗಾರಿಕೆಯನ್ನು ಗುರುತಿಸಬಹುದು. ಬೊಳುವಾರರನ್ನು ಆರಂಭದಿಂದಲೇ ಓದಿಕೊಂಡು ಬಂದವರಿಗೆ ಈ ಬದಲಾವಣೆಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ತನ್ನ ಕತೆಯನ್ನು ಹೇಳಲು ಅದ್ಭುತವಾದ ರೂಪಕಗಳನ್ನು ಬಳಸುತ್ತಾರೆ. ವ್ಯಂಗ್ಯ, ತಮಾಷೆಗಳ ಕುಸುರಿಗಾರಿಕೆಯಿಂದ ಕತೆಯನ್ನು ಇನ್ನಷ್ಟು ಚಂದ ಕಾಣಿಸುತ್ತಾರೆ. ಅಂತಹದೊಂದು ಅದ್ಭುತ ಕತೆಗಳಲ್ಲಿ ‘ಇಬಾದತ್’ ಕೂಡ ಒಂದು. ‘ಪವಾಡ ಪುರುಷ’ರೆಂಬ ಜನರ ಮುಗ್ಧ ನಂಬಿಕೆಯ ನಡುವೆಯೇ ಮಿಠಾಯಿ ಅವುಲಿಯಾ ಆ ಊರಿನಲ್ಲಿ ಮಾಡುವ ಸಾಮಾಜಿಕ ಕ್ರಾಂತಿ, ದೇವರನ್ನು ತಲುಪುವ ಮನುಷ್ಯನ ಪ್ರಯತ್ನಕ್ಕೆ ಅವರು ತೋರಿಸುವ ಹೊಸ ದಾರಿ, ಜವುಳಿ ಹಾಜಿಯವರನ್ನು ‘ಯಾ ಸಿದ್ದೀಕ್’ ಎಂದು ಹಾಜಿಯವರೊಳಗಿನ ಭಕ್ತನನ್ನು ಕಂಡು ಮೂಕ ವಿಸ್ಮಿತ ರಾಗುವ ರೀತಿ ಎಲ್ಲವೂ ಕನ್ನಡಕ್ಕೆ ಹೊಸತು. ‘ಆಕಾಶಕ್ಕೆ ನೀಲಿ ಪರದೆ’ಯಲ್ಲಿ ಕತೆಗಾರನ ಸಿಟ್ಟು ತಣ್ಣಗಾಗಿದೆ. ವಿವೇಕ ಜಾಗೃತವಾಗಿದೆ. ಕುಲುಮೆಯಿಂದ ಹೊರ ತೆಗೆದ ಸಲಾಖೆಯನ್ನು ಬಡಿದು, ತಣ್ಣಗೆ ನೀರಿಗಿಳಿಸಲಾಗಿದೆ.
90ರ ದಶಕದ ನಂತರ ಬೊಳುವಾರರದು ಇನ್ನೊಂದು ಹಂತ. ಬಾಬರಿ ಮಸೀದಿ ವಿವಾದ ತುತ್ತ ತುದಿಗೇರಿದ ಸಂದರ್ಭದಲ್ಲಿ ಅವರ ಕತೆಗಳು ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುವುದನ್ನು ನಾವು ಕಾಣಬಹುದು. ಈ ಸಂದರ್ಭದಲ್ಲೇ ಅವರು ಬರೆದ ಸ್ವಾತಂತ್ರದ ಓಟ, ಒಂದು ತುಂಡು ಗೋಡೆ ಕತೆಗಳು ಕನ್ನಡ ಸಾಹಿತ್ಯದಲ್ಲಿ ಅಜರಾಮರವಾಗುಳಿವ ಕತೆಗಳು. ದೇಶದಲ್ಲಿ ಹೆಡೆಯೆತ್ತಿರುವ ಕೋಮುವಾದ, ಇಂತಹ ಸಂದರ್ಭದಲ್ಲಿ ಮುಸ್ಲಿಮನೊಬ್ಬ ಎದುರಿಸಬೇಕಾದ ದೇಶಪ್ರೇಮದ ಸವಾಲುಗಳನ್ನು ತಮ್ಮ ಕತೆಗಳಲ್ಲಿ ಅದ್ಭುತವಾಗಿ ಕಟ್ಟತೊಡಗಿದರು. ಬಾಬರಿ ಮಸೀದಿ ಧ್ವಂಸಗೊಂಡ ಸಂದರ್ಭದಲ್ಲಿ ಬರೆದ ಒಂದು ತುಂಡು ಗೋಡೆ, ಕೋಮುವಾದ ಹೇಗೆ ಹಳ್ಳಿ ಹಳ್ಳಿಗೂ ಕಾಲಿಟ್ಟು ಅಲ್ಲಿನ ಮುಗ್ಧ ಬದುಕಿಗೆ ಸವಾಲನ್ನು ಒಡ್ಡ ತೊಡಗಿವೆ ಎನ್ನುವುದನ್ನು ಹೇಳುತ್ತದೆ.
ಬೊಳುವಾರರು ಬರೆದ ‘ಸ್ವಾತಂತ್ರದ ಓಟ’ ನೀಳ್ಗತೆಯ ಓಟ ಇನ್ನೂ ನಿಂತಿಲ್ಲ. ಅದೀಗ ತನ್ನ ಓಟವನ್ನು ಮುಂದುವರಿಸಿದೆ. ನೀಳ್ಗತೆ ಸಾವಿರಾರು ಪುಟಗಳ ಕಾದಂಬರಿಯಾಗುತ್ತಿದೆ ಎನ್ನುವ ‘ಗುಟ್ಟ’ನ್ನು ಬೊಳುವಾರರು ಬಹಿರಂಗಪಡಿಸಿದ್ದಾರೆ. ಬೊಳುವಾರರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಿಕ್ಕಿದ್ದಕ್ಕಿಂತಲೂ ದೊಡ್ಡ ಸಿಹಿ ಸುದ್ದಿ ಕನ್ನಡಿಗರಿಗೆ ಸಿಕ್ಕಿದೆ. ಬೊಳುವಾರರು ಏನು ಬರೆದರೂ ಅದು ಹೃದಯ ತಟ್ಟುವಂತೆಯೇ ಇರುತ್ತದೆ ಎನ್ನುವುದು ಕನ್ನಡಿಗರಿಗೆ ಗೊತ್ತಿದ್ದದ್ದ್ದೇ. ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಎನ್ನುವ ಮಕ್ಕಳ ಪದ್ಯಗಳ ಸಂಪಾದನೆಯನ್ನು ಹೊರತಂದರು. ಮಕ್ಕಳ ಪಾಲಿಗೆ ಅದೊಂದು ನಿಧಿಯೇ ಆಯಿತು. ಮಕ್ಕಳು ಮಾತ್ರವಲ್ಲ, ಹಿರಿಯರೂ ಅದನ್ನು ಚಪ್ಪಾಳೆ ತಟ್ಟುತ್ತಾ ಸ್ವಾಗತಿಸಿದರು. ಗಾಂಧೀಜಿಯನ್ನು ಮತ್ತೆ ಹೊಸದಾಗಿ, ಮುಗ್ಧವಾಗಿ ಕಟ್ಟಿಕೊಟ್ಟರು. ‘ಈ ಪಾಪು ಯಾರು?’ ಎಂದು ನಾವು ಕೆನ್ನೆ ಹಿಂಡಿ ನೋಡಿದರೆ, ಇದು ನಮ್ಮ ನಿಮ್ಮ ಬಾಪು!
ಇತ್ತೀಚೆಗೆ ಬೊಳುವಾರರು ಕತೆ ಬರೆಯುವುದನ್ನು ನಿಲ್ಲಿಸಿಯೇ ಬಿಟ್ಟರಲ್ಲ ಎಂಬ ಕೊರಗು ಕಾಡುತ್ತಿತ್ತು. ನಾನಂತೂ ಪ್ರತಿ ದೀಪಾವಳಿಯನ್ನು ಕಣ್ಣಲ್ಲಿ ಹಣತೆ ಹಚ್ಚಿ ಕಾಯುತ್ತಿದ್ದೆ. ಯಾಕೆಂದರೆ ಬೊಳುವಾರು ದೀಪಾವಳಿ ವಿಶೇಷಾಂಕಕ್ಕೆ ಮಾತ್ರ ಬರೆಯುತ್ತಿದ್ದರು. ಆದರೆ ಕೆಲವರ್ಷಗಳಿಂದ ಅದೂ ಇಲ್ಲ. ಇಂತಹ ಸಂದರ್ಭದಲ್ಲಿ, ತಾನು ಈವರೆಗೆ ಬರೆಯದೇ ಇದ್ದುದಕ್ಕೆ ಪಶ್ಚಾತ್ತಾಪವೋ ಎಂಬಂತೆ, ನಮ್ಮೆಲ್ಲರ ಆಸೆಯನ್ನು ಈಡೇರಿಸುವುದಕ್ಕೆ ‘ಬೃಹತ್ ಕಾದಂಬರಿ’ಯನ್ನು ನೀಡುವುದಾಗಿ ಹೇಳಿದ್ದಾರೆ. ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡುವುದಾಗಿಯೂ ಘೋಷಿಸಿದ್ದಾರೆ. ಕಾದಂಬರಿ ಈಗಾಗಲೇ 500 ಪುಟಗಳನ್ನು ದಾಟಿದೆ. 60ರ ದಶಕದವರೆಗಿನ ಕತೆಯಷ್ಟೇ ಪೂರ್ತಿಯಾಗಿದೆ. ಗುರಿ ತಲುಪುವುದಕ್ಕೆ ಇನ್ನೂ ಸಾಕಷ್ಟು ದೂರವಿದೆ.ಅಂದರೆ ಕನ್ನಡದ ಪಾಲಿಗೆ ಇದು ಬೃಹತ್ ಕಾದಂಬರಿಯೇ ಸರಿ. ಈ ದೇಶದ ಸ್ವಾತಂತ್ರೋತ್ತರ ಇತಿಹಾಸವನ್ನು ಈ ಮಹಾ ಕಾದಂಬರಿಯ ಮೂಲಕ ಮರು ಓದುವ ಅವಕಾಶ ನಮಗೆಲ್ಲ. ಬೊಳುವಾರರ ಈವರೆಗಿನ ಕತೆಗಳ ಪಾತ್ರಗಳೆಲ್ಲ ಮತ್ತೆ ಈ ಕಾದಂಬರಿಯಲ್ಲಿ ಮರುಜೀವ ಪಡೆಯಲಿದೆ. ಅವರ ವೃತ್ತಿ ಬದುಕಿನ ನಿವೃತ್ಥಿಗೆ ಇನ್ನು ಒಂದು ವರ್ಷ. ನಿವೃತ್ತಿಯ ದಿನವೇ ಅವರ ಕಾದಂಬರಿ ಬಿಡುಗಡೆಯಾಗಲಿದೆಯಂತೆ. ಬೊಳುವಾರು ವೃತ್ತಿಯಿಂದ ನಿವೃತ್ತರಾಗಲಿ. ಆದರೆ ಪ್ರವೃತ್ತಿಯಿಂದ ದೂರ ಸರಿಯದಿರಲಿ. ಬದಲಿಗೆ ಇನ್ನಷ್ಟು ಹತ್ತಿರವಾಗಲಿ. ಅವರಿಂದ ಇನ್ನೂ ಕತೆ, ಕಾದಂಬರಿಗಳು ಹುಟ್ಟಿ ಬರಲಿ. ಆ ಕತೆ, ಕಾದಂಬರಿಯ ಮೂಲಕ, ಇನ್ನಷ್ಟು ಸೃಜನಶೀಲ, ಸಂವೇದನಾ ಶೀಲ ಬರಹಗಾರರು ಹುಟ್ಟಲಿ. ನನ್ನ ಮೆಚ್ಚಿನ ಕತೆಗಾರ ಬೊಳುವಾರರಿಗೆ ಅಭಿನಂದನೆಗಳು.







