ಆ ದಿನ ಇನ್ನೂ ನೆನಪಿದೆ ಅಂದು ರಮಝಾನ್ ಉಪವಾಸ ಮಧ್ಯಾಹ್ನ ಕರುಳು ಸುಡುವ ಹಸಿವು ಇನ್ನು ತಡೆಯಲಾರೆ ಎಂದು ಅಕ್ಕ ಪಕ್ಕ ಇಣುಕಿ ಪರಿಚಿತರಾರು ಇಲ್ಲ ಎನ್ನೋದು ಸ್ಪಷ್ಟವಾದದ್ದೇ ಅನ್ನದ ತಟ್ಟೆ ಕೈಗೆತ್ತಿಕೊಂಡೆ ಗಬ ಗಬ ಉಣ್ಣುತ್ತಿರುವಾಗ ಅನ್ನ ನೆತ್ತಿಗೇರಿ ಕೆಮ್ಮು ಉಕ್ಕಿ ಬಂತು ಯಾರೋ ಪಕ್ಕದಲ್ಲಿ ಪಿಸುಗುಟ್ಟಿದರು "ನೀರು ಕುಡಿ, ನೀರು ಕುಡಿ" ತಲೆ ಎತ್ತಿ ನೋಡಿದರೆ ನನ್ನ ದೊರೆ ನೀರಿನ ಲೋಟ ಹಿಡಿದು ನಿಂತಿದ್ದ!!
೧ ಅವಳು ಕಣ್ಣು ಹೊಡೆದಳು ಇವನೊಳಗೆ ಇನ್ನೇನೋ ಒಡೆದ ಸದ್ದು ೨ ಹೆಣ್ಣು ನವಿಲಿಗೆ ಎರಡೇ ಕಣ್ಣು ಕುಣಿವ ಗಂಡಿಗೋ ಮೈಯೆಲ್ಲಾ ಕಣ್ಣು ! ೩ ಇನ್ನೊಬ್ಬರ ಕಣ್ಣೊಳಗೆ ತನ್ನ ಕಾಣಲು ಕಣ್ಣಷ್ಟೇ ಸಾಕಾಗದು ! ೪ ತನ್ನ ಕಾಯುವ ರೆಪ್ಪೆಯನ್ನು ಕಾಣಲು ಕಣ್ಣು ಅಸಹಾಯಕ ! ೫ ನೋಡೂದಕ್ಕಷ್ಟೇ ಅಲ್ಲ ನೋಡದಿರೂದಕ್ಕೂ ಕಣ್ಣು ಬೇಕು ! ೬ ಹುಟ್ಟು ಕುರುಡನೂ ತನ್ನೊಳಗೊಂದು ಕನ್ನಡಿ ಬಚ್ಚಿಟ್ಟು ಕೊಂಡಿರುವನು !! ೭ ಕಣ್ಣಿಲ್ಲದವನಿಗೆ ಕತ್ತಲೂ ಇಲ್ಲ ! ೮ ಸೂರ್ಯನ ಕಣ್ಣು ಕೊಟ್ಟು ನೋಡಬಲ್ಲವನು ಕುರುಡ ! ೯ ಬೆಳಕಿದ್ದಷ್ಟೇ ಕಣ್ಣು ಅಥವಾ ... ಕಣ್ಣಿದ್ದಷ್ಟೇ ಬೆಳಕು !? ೧೦ ಬೀಜ ಕಣ್ಣು ತೆರೆಯಲು ಮಣ್ಣ ಆಳಕ್ಕೆ ಇಳಿಯಬೇಕು ! ೧೧ ಹೊರಗಣ್ಣು ಮುಚ್ಚಿದ ದಿನ ಒಳಗಣ್ಣು ತೆರೆಯಿತು !
ನಿಮ್ಮನ್ನು ಎದುರುಗೊಳ್ಳುವ ಅನಿರೀಕ್ಷಿತಗಳೇ ‘ರಂಗಿತರಂಗ’ದ ಹೆಗ್ಗಳಿಕೆ. ‘ರಂಗಿತರಂಗ’ ಎಂಬ ಹೆಸರು ಕಮರ್ಶಿಯಲ್ ಚಿತ್ರ ಲೋಕಕ್ಕೆ ಒಂದಿಷ್ಟು ನೀರಸ ಅನ್ನಿಸುವಂತಿದೆ. ಮತ್ತು ಒಂದಿಷ್ಟು ಅಸಹಜವಾದ ಹೆಸರೂ ಹೌದು. ಆದರೆ ಚಿತ್ರದೊಳಗಿನ ಮನುಷ್ಯ ಭಾವನೆಗಳ ಹೊಯ್ದಾಟಗಳನ್ನು ಬಣ್ಣದ ವೇಷಗಳ ಮೂಲಕ ತೆರೆದಿಡುವ ಪ್ರಯತ್ನಕ್ಕೆ ಈ ಹೆಸರೂ ಪೂರಕವಾಗಿದೆ. ಪ್ರಕೃತಿ-ಬಣ್ಣಗಳ ನಡುವೆ ಮುಚ್ಚಿ ಹೋಗಿರುವ ನಿಗೂಢಗಳ ಆಳಕ್ಕೆ ನಿಮ್ಮನ್ನು ಒಯ್ಯುವ ಒಂದು ಥ್ರಿಲ್ಲರ್ ಸಸ್ಪೆನ್ಸ್ ಚಿತ್ರ ರಂಗಿತರಂಗ. ಯಾವನೋ ಹೊಸ, ಅನನುಭವಿ ನಿರ್ದೇಶಕ ಮಾಡಿದ ಚಿತ್ರ ಇದಿರಬಹುದು ಪೂರ್ವಾಗ್ರಹ ಹೊತ್ತು ನೀವು ಚಿತ್ರ ಮಂದಿರ ಪ್ರವೇಶಿಸುತ್ತೀರಿ. ಆದರೆ ನಿಮ್ಮೊಳಗಿರುವ ಎಲ್ಲ ಅನುಮಾನಗಳೂ ಚಿತ್ರ ಆರಂಭವಾದ ಕೆಲವೇ ನಿಮಿಷಗಳಲ್ಲಿ ಕೊಚ್ಚಿ ಹೋಗುತ್ತವೆ. ಒಬ್ಬ ಪಳಗಿದ ನಿರ್ದೇಶಕನ ಕೈ ಸ್ಪರ್ಶವನ್ನು ಚಿತ್ರದ ಪ್ರತಿ ಫ್ರೇಮ್ನಲ್ಲೂ ನೀವು ಗುರುತಿಸತೊಡಗುತ್ತೀರಿ. ಚಿತ್ರದ ಇನ್ನೊಂದು ಪ್ರತ್ಯೇಕತೆ ಎಂದರೆ ಸಿನಿಮಾದ ಕೇಂದ್ರ ಬಿಂದು ದಕ್ಷಿಣ ಕನ್ನಡ ಜಿಲ್ಲೆ. ಅದರಲ್ಲೂ ಅಲ್ಲಿನ ಒಂದು ಕುಗ್ರಾಮ ಕಮರೊಟ್ಟು. ಅದರ ಜೊತೆ ಜೊತೆಗೇ ಈ ಚಿತ್ರದಲ್ಲಿ ದುಡಿದಿರುವ ಬಹುತೇಕ ಕಲಾವಿದರೂ ದಕ್ಷಿಣ ಕನ್ನಡದವರು. ಒಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಕ್ಕೆ ಬೇಕಾಗಿರುವ ಪರಿಕರಗಳೂ ಕರಾವಳಿಗೆ ಸಂಬಂಧಿಸಿದ್ದೇ ಆಗಿದೆ. ಆದರೆ ಅದು ಚಿತ್ರದ ಮಿತಿಯಾಗುವ ಬದಲು ಹೆಗ್ಗಳಿಕೆಯೇ ಆಗಿದೆ. ಸಸ್ಪೆನ್ಸ್ ಚಿತ್ರಗಳಿಗೆ ಹೇಗೆ ಕರಾವಳಿ, ಬಣ್ಣ, ವೇಷ, ಸಂಗೀತಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎನ್ನುವುದನ್ನು ನಿರ್ದೇಶಕರು ಯಶಸ್ವಿಯಾಗಿ ತೋರಿಸಿಕೊಟ್ಟಿದ್ದಾರೆ. ಈ ಪ್ರಾದೇಶಿಕ ಭಿನ್ನತೆಗಳನ್ನು ಗಾಂಧೀನಗರ ಹೇಗೆ ತನ್ನದಾಗಿಸಿಕೊಳ್ಳುತ್ತದೆ ಎನ್ನುವುದನ್ನೂ ಕಾದು ನೋಡಬೇಕು. ಚಿತ್ರದ ಕತೆ ತುಂಬಾ ಸಂಕೀರ್ಣವಾದುದು. ಮನಸ್ಸು ಇಲ್ಲಿ ಕೇಂದ್ರ ಬಿಂದು. ನಾಯಕನೇ ಹೇಳುವಂತೆ ಯಾವುದು ನಿಜ-ಯಾವುದು ಸುಳ್ಳು ಎನ್ನುವ ತಾಕಲಾಟಗಳ ನಡುವೆ ಚಿತ್ರ ಹೊಯ್ದಾಡುತ್ತದೆ. ಮನದ ಭಾವನೆಗಳ ಏರುಪೇರುಗಳನ್ನು ಪರಿಣಾಮಕಾರಿಯಾಗಿ ಹೊರಗೆಡಹುವ ಬಣ್ಣಕ್ಕೂ ಇಲ್ಲಿ ಸಾಕಷ್ಟು ಕೆಲಸಗಳಿವೆ. ಕರಾವಳಿಯ ಪರಿಸರ, ಮಳೆ, ಯಕ್ಷಗಾನ, ಭೂತ ವೇಷ, ಗಗ್ಗರ ಸದ್ದು ಇವುಗಳನ್ನು ಅತ್ಯದ್ಭುತವಾಗಿ ಈ ಚಿತ್ರದಲ್ಲಿ ದುಡಿಸಿಕೊಳ್ಳಲಾಗಿದೆ. ಕಮರೊಟ್ಟು ಎನ್ನುವ ಗ್ರಾಮದ ನಿಗೂಢತೆಯನ್ನು ಕಟ್ಟಿಕೊಡುವ ಛಾಯಾಗ್ರಹಣ ಚಿತ್ರದ ನಿಜವಾದ ಹೀರೋ. ಊರು ತೆರೆದುಕೊಳ್ಳುತ್ತಾ ಹೋದಂತೆ ನೀವೂ ನಿಗೂಢತೆಯ ಆಳಕ್ಕೆ ಇಳಿಯುತ್ತಾ ಹೋಗುತ್ತೀರಿ. ದಕ್ಷಿಣ ಕನ್ನಡದ ಹೊಸ ತಲೆಮಾರಿಗೆ ಅಪರಿಚಿತವಾದ ಒಂದು ಲೋಕ ಇಲ್ಲಿ ತೆರೆದುಕೊಳ್ಳುತ್ತದೆ. ನಿರ್ದೇಶಕ ಬಳಸಿಕೊಳ್ಳುವ ಪಾಡ್ದನ, ದುಡಿ, ಗಗ್ಗರದ ದನಿ ಇವೆಲ್ಲವೂ ಕನ್ನಡ ಚಿತ್ರಲೋಕಕ್ಕೆ ಹೊಸ ಅನುಭವ. ಚಿತ್ರದ ನಿರೂಪಣೆಯೂ ಮೊದಲರ್ಧ ಬಿಗಿಯಾಗಿದೆ. ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ. ಉತ್ತರಾರ್ಧದ ಕೊನೆಯಲ್ಲಿ ಸಸ್ಪೆನ್ಸ್ನ ಹಿನ್ನೆಲೆಗಳು ತೆರೆದುಕೊಳ್ಳುತ್ತಾ ಹೋದ ಹಾಗೆ ಚಿತ್ರ ತುಸು ಸಡಿಲವಾಗುತ್ತಾ ಹೋಗುತ್ತದೆ. ಪ್ರೇಕ್ಷಕ ಒಂದಿಷ್ಟು ಅನುಮಾನ, ಗೊಂದಲಗಳ ಜೊತೆಗೆ ತಡಕಾಡುತ್ತಾನೆ. ಕ್ಲೆೃಮಾಕ್ಸ್ನಲ್ಲಿ ಹೊರಬೀಳುವ ಫ್ಲಾಶ್ಬ್ಯಾಕ್ಗಳನ್ನು ಒಟ್ಟಾಗಿ ಜೋಡಿಸಿ, ಚಿತ್ರದ ಕತೆಯನ್ನು ಅರ್ಥಮಾಡಿಕೊಳ್ಳಬೇಕಾದ ಕಷ್ಟವನ್ನು ಸಾಮಾನ್ಯ ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎನ್ನುವ ಪ್ರಶ್ನೆಯೂ ಒಂದೆಡೆ ಉಳಿದು ಬಿಡುತ್ತದೆ. ಒಂದು ಸಂಕೀರ್ಣವಾದ ಕತೆಯನ್ನು ತೆರೆಯ ಮೇಲೆ ಭಿನ್ನವಾಗಿ ತೋರಿಸಲು ಹೋರಟ ‘ರಂಗಿತರಂಗ’ ತಂಡದ ಪ್ರಯತ್ನ ಅಭಿನಂದನಾರ್ಹ. ಅದರಲ್ಲಿ ಅವರು ಬಹುತೇಕ ಗೆದ್ದಿದ್ದಾರೆ. ಈ ತಂಡದಿಂದ ಇನ್ನಷ್ಟು ಒಳ್ಳೆಯ ಪ್ರಯತ್ನವನ್ನು ಖಂಡಿತವಾಗಿಯೂ ನಿರೀಕ್ಷಿಸಬಹುದು. ನಿರ್ದೇಶಕ ಅನುಪ್ ಭಂಡಾರಿ, ನಟ ಪ್ರಕಾಶ್ ಭಂಡಾರಿ ಸರ್ವ ರೀತಿಯಲ್ಲಿ ಅಭಿನಂದನಾರ್ಹರು. ಕನ್ನಡಿಗರೆಲ್ಲರೂ ಈ ವಿಭಿನ್ನ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕಾಗಿದೆ. ಈ ಚಿತ್ರದ ಯಶಸ್ಸು ಭವಿಷ್ಯದಲ್ಲಿ ಹೊಸತನದ ಚಿತ್ರಗಳು ಬರಲು ಸಹಾಯಕವಾಗಲಿದೆ.
ಬೆಕ್ಕು ಕಣ್ಣನ್ನು ಮುಚ್ಚಿದೆ ! ತಾನೇ ಸೃಷ್ಟಿಸಿಕೊಂಡ ಕತ್ತಲಲ್ಲಿ ಸ್ವತಂತ್ರವಾಗುವ ತವಕದಲ್ಲಿದೆ ! ಬೆಕ್ಕನ್ನು ಸುತ್ತುವರಿದ ಬೆಳಕು ಅದು ಚಪ್ಪರಿಸುತ್ತಿರುವ ಹಾಲನ್ನು ವಿಷಾದದಿಂದ ನೋಡುತ್ತಿದೆ !