Saturday, January 24, 2015

ಹಡಗು ಮತ್ತು ಇತರ ಕತೆಗಳು

ಹೆಚ್ಚಳ
ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳ ಎಂಬ ವರದಿ ಬಂತು.
ದೇಶ ಸಂಭ್ರಮಿಸಿತು.
ಮನುಷ್ಯರ ಸಂಖ್ಯೆಯಲ್ಲಿ ಹೆಚ್ಚಳ ಎಂಬ ವರದಿ ಹೊರ ಬಿತ್ತು.
ದೇಶ ಆತಂಕಕ್ಕೊಳಗಾಯಿತು.

ಧರ್ಮ
ಕೋಮುಗಲಭೆಯಿಂದ ಹೊತ್ತು ಉರಿಯುತ್ತಿತ್ತು ಆ ಊರು.
ಸಂತ ಆ ದಾರಿಯಲ್ಲಿ ಒಬ್ಬನೇ ನಡೆಯುತ್ತಿದ್ದ. ಹಿಂದೂಗಳು ತಡೆದರು ‘‘ನಿನ್ನದು ಯಾವ ಧರ್ಮ?’’
‘‘ನಾನೊಬ್ಬ ಮುಸಲ್ಮಾನ’’ ಎಂದ ಸಂತ.
ಎಲ್ಲರೂ ಸೇರಿ ಥಳಿಸಿದರು. ಅಲ್ಲಿಂದ ಸಂತ ಮುಂದುವರಿದ.
ದಾರಿಯ ಮಧ್ಯೆ ಮುಸ್ಲಿಮರ ತಂಡ ತಡೆಯಿತು ‘‘ನಿನ್ನದು ಯಾವ ಧಮ?’’
ಸಂತ ಉತ್ತರಿಸಿದ ‘‘ನಾನೊಬ್ಬ ಹಿಂದೂ’’
ಮುಸ್ಲಿಮರೆಲ್ಲ ಸೇರಿ ಅವನನ್ನು ಥಳಿಸಿದರು.
ಬಳಿಕ ಶಿಷ್ಯರು ಕೇಳಿದರು ‘‘ನಿಜಕ್ಕೂ ನೀವು ಯಾವ ಧರ್ಮ?’’
ಸಂತ ಗಾಯಗಳಿಗೆ ಔಷಧಿ ಹಚ್ಚುತ್ತಾ ಹೇಳಿದ ‘‘ಮುಸಲ್ಮಾನರಿಗೆ ನಾನೊಬ್ಬ ಹಿಂದು. ಹಿಂದೂಗಳಿಗೆ ನಾನೊಬ್ಬ ಮುಸಲ್ಮಾನ’’

ವ್ಯತ್ಯಾಸ
‘ದೇವರಿಗೂ ಮನುಷ್ಯನಿಗೂ ವ್ಯತ್ಯಾಸವೇನು?’
ಯಾರೋ ಸಂತನಲ್ಲಿ ಕೇಳಿದರು.
‘ದೇವರು ಸಷ್ಟಿಸುತ್ತಾನೆ. ಮನುಷ್ಯ ನಾಶ ಮಾಡುತ್ತಾನೆ’’ ಸಂತ ತಣ್ಣಗೆ ಉತ್ತರಿಸಿದ

ಮೇಕ್ ಇನ್ ಇಂಡಿಯಾ
‘‘ಮೇಕ್ ಇನ್ ಇಂಡಿಯಾ ಎಂದರೆ ಏನಜ್ಜ?’’ ಮೊಮ್ಮಗ ತನ್ನ ತಾತನಲ್ಲಿ ಕೇಳಿದ.
‘‘ನಿನ್ನ ಅಪ್ಪನ ಭತ್ತದ ಗದ್ದೆಯಲ್ಲಿ ಬೇರೆ ಊರಿನ ಜನರು ಬಂದು ಶುಂಠಿ ಬೆಳೆದು ಕೊಯ್ದುಕೊಂಡು ಹೋಗುತ್ತಿದ್ದಾರಲ್ಲ. ಅದೇ ಮೇಕ್ ಇನ್ ಇಂಡಿಯಾ ಮರೀ...’’ ತಾತ ವಿವರಿಸಿದ.

ಅಕ್ಷರ
ಯುದ್ಧಪೀಡಿದ ದೇಶಕ್ಕೆ ಅಧ್ಯಾಪಕನೊಬ್ಬ ವರ್ಗಾವಣೆಯಾದ.
ಮಕ್ಕಳಿಗೆ ಅ ಆ ಕಲಿಸಬೇಕು.
‘‘ಅ ಅಂದರೆ ಅರಸ’’ ಎಂದು ಕಲಿಸತೊಡಗಿದ.
ಮಕ್ಕಳು ‘‘ಆ ಎಂದರೆ ಆಯುಧ’’ ಎಂದು ಚೀರಿದವು.

ಕೊಲೆ
‘‘ಇಲ್ಲೇ ಎಲ್ಲೋ ಒಂದು ಕೊಲೆ ನಡೆದಿದೆ ಎಂದಿರಲ್ಲ, ನಿಜವೇ...’’
‘‘ಹೌದು...’’
‘‘ಈ ಚರಂಡಿಯಲ್ಲೇ...’’
‘‘ಮೊದಲಿಗಿದು ಚರಂಡಿಯಾಗಿರಲಿಲ್ಲ. ಒಂದು ನದಿಯಾಗಿತ್ತು. ಈಗದು ಹೆಣವಾಗಿ ಕೊಳೆಯುತ್ತಿದೆ’’

ಗಾಂಧಿ
ಬಿಯರ್ ಬಾಟಲ್‌ನ ಮೇಲೆ ಗಾಂಧಿ ಚಿತ್ರವನ್ನು ಅಂಟಿಸಲಾಗಿತ್ತು.
ಕುಡುಕನೊಬ್ಬ ಆ ಬಾಟಲ್‌ನ್ನು ಕೈಗೆತ್ತಿಕೊಂಡ.
ಗಾಂಧಿಯನ್ನು ನೋಡಿ ಕೈ ನಡುಗಿ, ಬಾಟಲು ಬಿದ್ದು ಒಡೆದು ಹೋಯಿತು.

ಹಡಗು
ಸಂತ ಮತ್ತು ಶಿಷ್ಯರು ಹಡಗು ನೋಡಲು ಹೋದರು.
ಕಾರ್ಮಿಕರು ಹಡಗಿಗೆ ಸರಕುಗಳನ್ನು ಏರಿಸುತ್ತಿದ್ದರು.
‘‘ಶಿಷ್ಯರು ಈ ಹಡಗನ್ನು ತುಂಬಿಸುವುದಕ್ಕೆ ಇನ್ನೂ ನಾಲ್ಕು ದಿನ ಬೇಕು...’’ ಶಿಷ್ಯರು ನಿಟ್ಟುಸಿರಿಟ್ಟರು.
ಸಂತ ನಕ್ಕು ಹೇಳಿದ ‘‘ಪ್ರತಿ ಮನುಷ್ಯ ಒಂದು ಖಾಲಿ ಹಡಗನ್ನು ಹೊತ್ತುಕೊಂಡು ನಡೆಯುತ್ತಿದ್ದಾನೆ. ಅದನ್ನು ತುಂಬಿಸುವುದೇ ಅವನ ದಿನ ನಿತ್ಯದ ಕೆಲಸವಾಗಿದೆ. ಆದರೂ ಆ ಹಡಗು ಈವರೆಗೆ ತುಂಬಿಲ್ಲ’’
ಶಿಷ್ಯರು ವೌನವಾದರು. ಸಂತ ಮುಂದುವರಿಸಿದ ‘‘ಹೊಟ್ಟೆ...ಹಡಗನ್ನು ತುಂಬಿಸಬಹುದು. ಆದರೆ ಹೊಟ್ಟೆಯನ್ನು ತುಂಬಿಸುವುದು ಕಷ್ಟ’’

ಮಡಕೆ
ಕುಂಬಾರನ ಮಡಿಕೆಯ ಚಿತ್ರವನ್ನು ತೆಗೆದ ಛಾಯಾಗ್ರಾಹಕ ವಿಶ್ವಖ್ಯಾತಿ ಗಳಿಸಿ, ಆ ಚಿತ್ರವನ್ನು ಒಂದು ಲಕ್ಷ ರೂಪಾಯಿಗೆ ಮಾರಿದ.
ಕುಂಬಾರ ಮಾತ್ರ ಆ ಮಡಕೆಯನ್ನು ಸಂತೆಯಲ್ಲಿಟ್ಟು ಇನ್ನೂ ಗ್ರಾಹಕರಿಗಾಗಿ ಕಾಯುತ್ತಿದ್ದಾನೆ.

ಬಲೂನು
ಆ ಮನೆಯ ಕೋಣೆಯಲ್ಲಿ ಒಂದು ಬಲೂನನ್ನು ನೇತಾಡಿಸಲಾಗಿತ್ತು.
‘‘ಈ ಮನೆಯಲ್ಲಿ ಮಕ್ಕಳೇ ಇಲ್ಲ. ಮತ್ತೇಕೆ ಈ ಬಲೂನು?’’ ಯಾರೋ ಕೇಳಿದರು.
ಅವನು ಉತ್ತರಿಸಿದ ‘‘ನಾನು ತೀರಾ ಸಣ್ಣವನಾಗಿದ್ದಾಗ ಅಮ್ಮನಲ್ಲಿ ಬಲೂನು ಕೇಳಿದೆ. ಅಮ್ಮ ಬಲೂನು ಕೊಂಡು ಅದನ್ನು ಊದ ತೊಡಗಿದಳು. ನಾನು ಇನ್ನೂ ದೊಡ್ಡದಾಗಿಸು ಎಂದೆ. ಅಮ್ಮ ಇನ್ನೂ ಊದಿದಳು. ಊದಿ ಊದಿ ತನ್ನೊಳಗಿನ ಉಸಿರನ್ನ್ಲೆಲ್ಲ ಬಲೂನಿನೊಳಗೆ ತುಂಬಿಸಿ, ದಾರದಿಂದ ಬಿಗಿಯಾಗಿ ಕಟ್ಟಿ ನನ್ನ ಕೈಗಿತ್ತಳು. ಹಾಗೆ ಕೈಗಿತ್ತ ಕೆಲವೇ ಸೆಕೆಂಡುಗಳಲ್ಲಿ ಕುಸಿದು ಬಿದ್ದಳು’’
‘‘ಅಮ್ಮನ ಉಸಿರು ಈ ಬಲೂನಿನಲ್ಲಿದೆ. ಆದುದರಿಂದಲೇ ಇದನ್ನು ಇನ್ನೂ ಜೋಪಾನವಾಗಿ ನನ್ನ ಕೊಣೆಯಲ್ಲಿಟ್ಟುಕೊಂಡಿದ್ದೇನೆ...’’

2 comments:

  1. ಹೆಚ್ಚಳ
    ...ಅದರಲ್ಲೂ ಮುಸ್ಲಿಮರೆಂಬ ಮನುಷ್ಯರ ಸಂಖ್ಯೆಯ ಹೆಚ್ಚಳ ಮತ್ತಷ್ಟು ಆತಂಕಕಾರಿ. ..!?!

    ReplyDelete