Wednesday, August 13, 2014

ಫೇಸ್‌ಬುಕ್ ಮೂಲಕ ಕವಿಗೆ ಸಿಕ್ಕಿದ ಸ್ವಾತಂತ್ರ್ಯ

 ಇದು ತುಂಬಾ ವರ್ಷಗಳ ಹಿಂದಿನ ಮಾತು. ನನ್ನ ವಿದ್ಯಾರ್ಥಿ ದೆಸೆಯ ಕಾಲ. ನಾವು ಬರೆದ ಕವಿತೆ ನಿಜಕ್ಕೂ ಕವಿತೆ ಆಗಿದೆಯೋ ಇಲ್ಲವೋ ಎನ್ನುವುದು ಗೊತ್ತಾಗಬೇಕಾದರೆ ಪತ್ರಿಕೆಗಳಲ್ಲಿ ಪ್ರಕಟವಾಗಬೇಕು ಎಂದು ನಂಬಿಕೊಂಡಿದ್ದ ಕಾಲ. ನನ್ನ ಮೊತ್ತ ಮೊದಲ ಕತೆ ‘ರಣರಂಗದಲ್ಲಿ ಮುಸ್ಸಂಜೆ’ ತುಷಾರದಲ್ಲಿ ಪ್ರಕಟವಾಗಿ, ಅದರ ಸಂಪಾದಕರು ನನಗೆ ವೈಯಕ್ತಿಕವಾಗಿ ಪತ್ರ ಬರೆದಾಗ ಭೂಮಿ ಬಿಟ್ಟು ಆಕಾಶದಲ್ಲಿ ತೇಲಾಡಿದ ಕಾಲ.. ಒಂದು ಕತೆಯನ್ನು ಕಳುಹಿಸಿ ಅದು ಪ್ರಕಟವಾಗುವವರೆಗೆ ಅಂದರೆ ಎರಡು ತಿಂಗಳೋ, ಮೂರು ತಿಂಗಳೋ ಕೆಲವೊಮ್ಮೆ ಒಂದು ವರ್ಷವೋ ಕಾಯುವ ಕೆಲಸ ನನ್ನದು. ಕೆಲವೊಮ್ಮೆ ಅದು ಕಸದ ಬುಟ್ಟಿ ಸೇರಿರುತ್ತದೆ. ಆದರೆ ನಾನು ಮಾತ್ರ ಪ್ರತಿ ಸಂಚಿಕೆಯನ್ನು ಬಿಡಿಸುತ್ತಾ ವರ್ಷಗಟ್ಟಳೆ ನಿರೀಕ್ಷೆಯಲ್ಲೇ ಉಳಿದದ್ದಿದೆ. ಪ್ರಕಟವಾದ ದಿನವಂತೂ ಆ ಪತ್ರಿಕೆಯನ್ನು ಹಿಡಿದುಕೊಂಡು ನನ್ನೂರಿನ ಬೀದಿಯಲ್ಲಿ ಎದೆಯುಬ್ಬಿಸಿ ತಿರುಗಾಡಿದ ಕಾಲ ಅದು. ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ....ಇಡೀ ರಾಜ್ಯ ಇಂದು ನನ್ನ ಕುರಿತಂತೆಯೇ ಮಾತನಾಡುತ್ತಿದೆ ಎಂದು ನನಗೆ ನಾನೇ ಭ್ರಮೆಗಳನ್ನು ಕಟ್ಟಿಕೊಂಡು ಓಡಾಡುತ್ತಿದ್ದ ದಿನಗಳು ಅವು. "ಕವಿ ಮತ್ತು ಓದುಗನ ಮಧ್ಯೆ ಏಕೈಕ ಸೇತುವೆ ನಾನು'' ಎಂದು ಕವಿಗಳಿಂದ ಈ ಪತ್ರಿಕೆಗಳು ವಸೂಲಿ ಮಾಡುತ್ತಿದ್ದ ಟೋಲ್‌ಗೇಟ್ ಫೀಗಳಿಗೆ ಲೆಕ್ಕವಿಲ್ಲ. ಕೆಲವೊಮ್ಮೆ ತಪ್ಪು ಮುದ್ರಣಗಳು. ಕೆಲವೊಮ್ಮೆ ಒಳ್ಳೆಯ ಕವಿತೆ ಎಂದು ಭಾವಿಸಿರುವುದು ವಾಪಾಸಾಗಿ ಬಿಡುತ್ತಿತ್ತು. ಯಾಕೆಂದರೆ ಯಾವುದು ಕವಿತೆ, ಯಾವುದು ಕವಿತೆ ಅಲ್ಲ ಎನ್ನೋದನ್ನು  ತೀರ್ಮಾನಿಸುವ ವ್ಯಕ್ತಿಗೆ ಕವಿತೆಯ ಧ್ವನಿಯೇ ಅರ್ಥವಾಗುತ್ತಿರಲಿಲ್ಲ. ಒಟ್ಟಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುವುದು ಎನ್ನುವುದು ಕವಿಯ ಬದುಕಿನ ಅದ್ಭುತ ಕ್ಷಣಗಳು. ಅದೃಷ್ಟದ ಕ್ಷಣಗಳು. ಪ್ರಕಟವಾದರೆ ಕವಿಯ ನಿರೀಕ್ಷೆ ಮುಗಿಯುವುದಿಲ್ಲ. ಮುಂದಿನ ವಾರ ತನ್ನ ಕವಿತೆಯ ಬಗ್ಗೆ ಯಾರಾದರೂ ಓದುಗರು ಅಭಿಪ್ರಾಯ ಬರೆದಿದ್ದಾರೆಯೋ ಎಂದು ಭೂತಗನ್ನಡಿ ಹಿಡಿದು ನೋಡುವ ಕೆಲಸ. ಯಾರಾದರೂ ಓದುಗರು ಕೃಪೆ ತೋರಿ ಏನಾದರೂ ಬರೆದಿದ್ದರೆ, ಅದು ಹಲವು ಸೆನ್ಸಾರ್‌ಗಳನ್ನು ಅನುಭವಿಸಿ ಅದರ ಸಣ್ಣ ಚೂರೊಂದು ಅಭಿಪ್ರಾಯ ರೂಪದಲ್ಲಿ ಪ್ರಕಟವಾಗುತ್ತಿತ್ತು. ಅದು ಕವಿಯ ಕುರಿತಂತೆ ಉಪಸಂಪಾದಕ ತೋರಿಸಿದ ದೊಡ್ಡ ಕೃಪೆ. ಆ ಓದುಗನ ಒಂದು ಸಾಲಿನ ಅಭಿಪ್ರಾಯವನ್ನು ಪತ್ರಿಕೆಯ ಪುಟದಿಂದ ಕತ್ತರಿಸಿ ತೆಗೆದು, ಧನ್ಯೋಸ್ಮಿ ಎಂದು ಡೈರಿಯ ಪುಟಗಳಲ್ಲಿ ಇಡುತ್ತಿದ್ದ ಆ ಕಾಲ. ಕವಿ ತನ್ನ ಓದುಗನನ್ನು ತಲುಪಬೇಕಾದರೆ ಸಂಪಾದಕ ಅಥವಾ ಉಪಸಂಪಾದಕನೆನ್ನುವ ಗೇಟುಪಾಲಕನ ಕೃಪೆಯನ್ನು ಕಾಯುತ್ತಿರಬೇಕಾಗುತ್ತಿತ್ತು. ಆ ಗೇಟುಪಾಲಕ ಒಳ್ಳೆಯ ಕವಿತೆಗಳನ್ನು ಗುರುತಿಸುವಲ್ಲಿ ವಿಫಲನಾಗಿದ್ದರೆ ಕವಿಯೂ ನಿರಾಶನಾಗಬೇಕಾಗುತ್ತಿತ್ತು. ಪತ್ರಿಕೆಗಳ ಕೃಪೆಯಿಂದಲೇ ಹಲವರು ಕವಿಗಳಾಗಿ ಗುರುತಿಸಲ್ಪಟ್ಟಿದ್ದರು. ಪತ್ರಿಕೆಗಳ ಅವಕಪೆಯಿಂದಲೇ ಹಲವಾರು ಕವಿಗಳು ಮೂಲೆ ಸೇರಿದ್ದೂ ಇದೆ. 
ನಾನೇ ಒಬ್ಬ ಪತ್ರಕರ್ತನಾದ ಬಳಿಕ, ಒಮ್ಮಿಂದೊಮ್ಮೆಗೆ ಈ ಎಲ್ಲ ಭ್ರಮೆಗಳಿಂದ ಕೆಳಗಿಳಿದು ಬಿಟ್ಟೆ. ಪತ್ರಿಕೆಯೊಳಗೆ ನಮ್ಮ ಕವಿತೆಗಳನ್ನು ಗುರುತಿಸುವವರು, ನಿರ್ಧರಿಸುವವರು ತೀರಾ ತೀರಾ ಸಾಮಾನ್ಯರು. ಅವರೂ ನಮ್ಮಂತೆಯೇ ಮನುಷ್ಯರು ಎನ್ನುವುದನ್ನು ನಾನು ಅರಿತುಕೊಂಡೆ. ಕೆಲವರು ಕವಿತೆಗಳನ್ನು ಪುಟ ತುಂಬಿಸುವುದಕ್ಕಷ್ಟೇ ಬಳಸುತ್ತಾರೆ ಎನ್ನುವುದೂ ಗೊತ್ತಾಯಿತು. ಅದರ ಒಳಗಿರುವ ಎಲ್ಲ ರಾಜಕೀಯಗಳು ಗೊತ್ತಾಗುತ್ತಾ ಹೋದಂತೆ, ಪತ್ರಿಕೆಗಳಲ್ಲಿ ನನ್ನ ಕವಿತೆಗಳು ಪ್ರಕಟವಾಗಬೇಕು ಎನ್ನುವ ಹಂಬಲ, ಆಸಕ್ತಿ ಕಡಿಮೆಯಾಗುತ್ತಾ ಹೋಯಿತು. ತೀರಾ ಬರೆಯುವ ಒತ್ತಡ ಇದ್ದಾಗ ಬರೆಯುತ್ತಿದ್ದೆ. ಬರೆಯುವ ಖುಷಿ ಖಾಸಗಿಯಾದದ್ದೇ ಆದರೂ, ಆ ಖುಷಿ ಓದುಗರಿಗೆ ತಲುಪಬೇಕು ಎನ್ನುವ ಹಂಬಲಿಕೆ ಇಲ್ಲದೆ ಬರೆಯುವುದು ತುಂಬಾ ಕಷ್ಟ. ಬರೆಯುವ ಕುರಿತಂತೆಯೇ ನಿಧಾನಕ್ಕೆ ಆಸಕ್ತಿ ಕಡಿಮೆಯಾಯಿತು. ಪತ್ರಿಕಾ ಬರಹಗಳ ಕಡೆಗೆ ಆಸಕ್ತಿ ಹೆಚ್ಚುತ್ತಾ ಹೋಯಿತು. ನನ್ನ ಮುಗ್ಧ ಕಾಲದಲ್ಲಿ ಪತ್ರಿಕೆಗೆ ಕವಿತೆಗಳನ್ನು ಕಳುಹಿಸಿ ಅದು ಪ್ರಕಟವಾಗುವ ದಿನಗಳಿಗಾಗಿ ಕಾಯುವ ಆ ನಿರೀಕ್ಷೆಯ ರೋಮಾಂಚನವನ್ನು ಕಳೆದುಕೊಳ್ಳುವುದರೊಂದಿಗೆ ಬರೆಯುವ ಸ್ಫೂರ್ತಿ ಭಾಗಶಃ ಇಲ್ಲವಾಯಿತೇನೋ. ಒಂದೆಡೆ ಪತ್ರಿಕೆಯಲ್ಲಿ ಕೆಲಸ ಮಾಡುವ ಒತ್ತಡ. ಪತ್ರಿಕೆಯಲ್ಲಿ ಕೆಲಸ ಮಾಡುವವನಿಗೆ ಹಲವು ಸ್ವಾತಂತ್ರಗಳು ಕಡಿತಗೊಳ್ಳುತ್ತವೆ. ನಾವು ನಮಗೇ ಕೆಲವು ನೈತಿಕ ಗಡಿಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ನಮ್ಮದೇ ಪತ್ರಿಕೆಗಳಲ್ಲಿ ನಮ್ಮ ಹೆಸರು, ಫೋಟೋಗಳು ಬರದಂತೆ ಸಾಧ್ಯವಾದಷ್ಟು ಜಾಗರೂಕತೆ ವಹಿಸಬೇಕಾಗುತ್ತದೆ. ನಮ್ಮ ವೈಯಕ್ತಿಕ ತೆವಲುಗಳಿಗೆ ನಾವು ಕೆಲಸ ಮಾಡುವ ಪತ್ರಿಕೆಗಳು ಬಲಿಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತ ಮತ್ತು ಕವಿ ಜೊತೆ ಜೊತೆಯಾಗಿ ಬಾಳುವಂತಿಲ್ಲ. ಒಬ್ಬನೊಳಗೆ ಪತ್ರಕರ್ತ ಮತ್ತು ಕವಿ ಇಬ್ಬರು ಬದುಕಿದ್ದಾರೆಂದರೆ ಅವರಿಬ್ಬರು ಶತ್ರುಗಳಂತೆ ಬದುಕುತ್ತಿರುತ್ತಾರೆ. ಅವರಿಬ್ಬರ ನಡುವೆ ಸದಾ ತಿಕ್ಕಾಟ ನಡೆಯುತ್ತದೆ. ನನ್ನ ಗೆರೆಯೊಳಗೆ ನೀನು ಬರಬೇಡ ಎಂದು ಪತ್ರಕರ್ತ ಸದಾ ಕವಿಗೆ ಎಚ್ಚರಿಕೆ ಕೊಡುತ್ತಾ ಇರುತ್ತಾನೆ. ನನ್ನ ಶಬ್ದಗಳ ಸೂಕ್ಷ್ಮತೆಯನ್ನು ಕೆಡಿಸಬೇಡ ಎಂದು ಕವಿ ಸದಾ ಪತ್ರಕರ್ತನಲ್ಲಿ ಗೋಗರೆಯುತ್ತಾ ಇರುತ್ತಾನೆ. ಕವಿ ತನ್ನ ಕಾವ್ಯವನ್ನು ಹಿಡಿದುಕೊಂಡು ಬಂದರೆ ಪತ್ರಕರ್ತ ನಡಿಯಾಚೆ ಎನ್ನುತ್ತಾನೆ. ಒಂದೆ ಎದೆಯೊಳಗೆ ಇಬ್ಬರೂ ಎಣ್ಣೆ-ಸೀಗೆಯ ಹಾಗೆ ಬದುಕಬೇಕು. ಬರೆದ ವರದಿ ಕವಿತೆ, ಕತೆಯಾಗಬಾರದು. ಹಾಗೆಯೇ ಬರೆದ ಕತೆ, ಕವಿತೆ ವರದಿಯೂ ಆಗಬಾರದು. ಈ ಎಚ್ಚರಿಕೆಯ ನಡುವೆ ವ್ಯಕ್ತಿತ್ವ ಒಡೆದು ಹೋಗುತ್ತದೆ. ಒಬ್ಬನೇ ಎರಡಾಗಿ ಒಡೆದು ಕೊಂಡು ಬದುಕಬೇಕಾಗುತ್ತದೆ. ಪತ್ರಕರ್ತನಿಗೋ ಪತ್ರಿಕೆಯಿದೆ. ಕವಿ ಮಾತ್ರ ಆಸರೆಯಿಲ್ಲದೆ ಅನಾಥನಾಗುತ್ತಾನೆ. ಇಂತಹ ಸಂದರ್ಭದಲ್ಲೇ ಕವಿಗೆ ತೆರೆದುಕೊಂಡ ಅತಿ ದೊಡ್ಡ ಅವಕಾಶ ಫೇಸ್‌ಬುಕ್. ಓದುಗ ಮತ್ತು ಕವಿಯ ನಡುವಿದ್ದ ದೊಡ್ಡದೊಂಡು ಬರ್ಲಿನ್ ಗೋಡೆ ಫೇಸ್‌ಬುಕ್ ಮೂಲಕ ಕುಸಿದು ಬಿತ್ತು. ಇಲ್ಲಿ ಕವಿ ನೇರವಾಗಿ ಓದುಗನನ್ನು ಮುಖಾಮುಖಿಯಾಗುತ್ತಾನೆ. ಹಾಗೆಯೇ ಓದುಗನಿಗೂ ನೇರವಾಗಿ ಕವಿಯನ್ನು ಮುಖಾಮುಖಿಯಾಗುವ ಅವಕಾಶ. ನಡುವೆ ಯಾವ ದೊಣ್ಣೆ ನಾಯಕನ ಅನುಮತಿಯೂ ಬೇಡ. ಒಳ್ಳೆಯ ಕವಿತೆಯನ್ನು ನೇರವಾಗಿ ಓದುಗನೇ ಗುರುತಿಸುತ್ತಾನೆ. ವಿಶೇಷವೆಂದರೆ, ಇಲ್ಲಿ ಒಂದು ಕವಿತೆಯನ್ನು ಬರೆದು ಅದನ್ನು ಓದುಗನಿಗೆ ತಲುಪಿಸಲು ವರ್ಷಗಟ್ಟಲೆ ಕಾಯಬೇಕಾಗಿಲ್ಲ. ಅವನ ಪ್ರತಿಕ್ರಿಯೆಗೂ ಯಾರ ಸೆನ್ಸಾರ್ ಇರುವುದಿಲ್ಲ. ಒಂದು ಕವಿತೆಯನ್ನು ಫೇಸ್‌ಬುಕ್‌ನಲ್ಲಿ ಹಾಕಿದ ಕೆಲವೇ ನಿಮಿಷಗಳಲ್ಲಿ ಅದು ಓದುಗನನ್ನು ತಲುಪಿಯಾಗಿರುತ್ತದೆ. ಅಷ್ಟೇ ಅಲ್ಲ, ಅಭಿಪ್ರಾಯಗಳೂ ಕವಿಯನ್ನು ತಲುಪಿರುತ್ತದೆ. ಇಷ್ಟವಾಯಿತೋ, ಇಲ್ಲವೋ, ಯಾಕೆ ಇಷ್ಟವಾಯಿತು ಎನ್ನುವುದರ ಚರ್ಚೆಯೇ ಆರಂಭವಾಗಿ ಬಿಡುತ್ತದೆ. ಓದುಗನ ಮೂಲಕ ಕವಿಯೂ, ಕವಿಯ ಮೂಲಕ ಓದುಗನೂ ಪರಸ್ಪರ ಸ್ಫೂರ್ತಿ ಪಡೆಯುತ್ತಾ ಹೋಗುತ್ತಾರೆ. ಕವಿ ತನ್ನ ಹಂಗಿಲ್ಲದೆ ಓದುಗನನ್ನು ಮುಕ್ತವಾಗಿ ತಲುಪುತ್ತಿರುವುದು, ಓದುಗನು ತನ್ನ ಸಹಾಯವಿಲ್ಲದೆ ಕವಿಯನ್ನು ತಲುಪುತ್ತಿರುವುದು ಪತ್ರಿಕೆಗಳಿಗೆ ಒಳಗಿಂದ ಒಳಗೆ ಅಸಹನೆಯನ್ನು ತಂದಿಟ್ಟಿದೆ. ಹರಿಯುವ ನದಿಗೆ ದೊಣ್ಣೆನಾಯಕನ ಹಂಗೇಕೆ? ಎನ್ನುವ ಪ್ರಶ್ನೆಯನ್ನು ಕವಿ ಮತ್ತು ಓದುಗ ಜೊತೆಗೂಡಿ ಪತ್ರಿಕೆಗಳಿಗೆ ಕೇಳುತ್ತಿದ್ದಾನೆ. ಪತ್ರಿಕೆಗಳ ಈಗೋಗಳಿಗೆ ಭಾರೀ ಆಘಾತವಾಗಿದೆ ಎನ್ನುವುದಂತೂ ಸತ್ಯ. ಎಲ್ಲಕ್ಕಿಂತ ವಿಶೇಷವೆಂದರೆ, ಪತ್ರಿಕೆಗಳೇ ಇಂದು ಫೇಸ್‌ಬುಕ್, ಬ್ಲಾಗ್‌ಗಳನ್ನು ಮೊರೆ ಹೋಗಿ ಅಲ್ಲಿಂದ ಬರಹಗಳನ್ನು ಎತ್ತುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಎಲ್ಲ ಬರಹಗಾರರೂ ತಮ್ಮ ತಮ್ಮ ಬ್ಲಾಗ್‌ಗಳನ್ನು ರಚಿಸಿಕೊಂಡಿದ್ದಾರೆ. ಫೇಸ್‌ಬುಕ್‌ಗಳಲ್ಲಿ ಬರೆಯುತ್ತಿದ್ದಾರೆ. ಯಾವುದೋ ಪತ್ರಿಕೆಗಳು ತಮ್ಮ ಬರಹಗಳನ್ನು ಸೆನ್ಸಾರ್ ಮಾಡಿದೆ ಎಂದು ಮುಖಮುಚ್ಚಿ ಖಿನ್ನರಾಗಬೇಕಾದದ್ದಿಲ್ಲ. ನನ್ನ ಬರಹ ಚೆನ್ನಾಗಿದ್ದರೆ ನನಗೆ ಓದುಗರು ಇದ್ದೇ ಇದ್ದಾರೆ ಎನ್ನುವ ಆತ್ಮವಿಶ್ವಾಸವನ್ನು ಕವಿಗಳು, ಕತೆಗಾರರು ತಮ್ಮದಾಗಿಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ‘ಎಲ್ಲ ಓದುಗರೂ ಈ ದಿನಗಳಲ್ಲಿ ಒಂದೊಂದು ಪತ್ರಿಕೆ’ಗಳಾಗಿದ್ದಾರೆ. ಈ ಹಿಂದಿನಂತೆ ಸುಳ್ಳುಗಳನ್ನು ಮೂರು ಬಾರಿ ಬರೆದು ಸತ್ಯ ಮಾಡುವ ಸ್ವಾತಂತ್ರವನ್ನು ಪತ್ರಿಕೆಗಳು ಕಳೆದುಕೊಂಡಿವೆ. ಫೇಸ್‌ಬುಗ್, ಬ್ಲಾಗ್ ಮತ್ತು ವೆಬ್‌ಸೈಟ್‌ಗಳು ಪರ್ಯಾಯ ಮಾಧ್ಯಮವಾಗಿ ಕೆಲಸ ಮಾಡುತ್ತಿವೆ.
ಫೇಸ್‌ಬುಕ್‌ನಲ್ಲಿ ಬರೆಯುತ್ತಿರುವವರನ್ನು ಕೆಲವರು ‘ಫೇಸ್‌ಬುಕ್’ ಕವಿಗಳು ಎಂದು ವ್ಯಂಗ್ಯವಾಡುವುದಿದೆ. ಹಿಂದೆ ಪತ್ರಿಕೆಗಳ ಮ್ಯಾಗಜಿನ್‌ಗಳಲ್ಲಿ ಕವಿತೆಗಳನ್ನು ಬರೆಯುತ್ತಿರುವವರು ‘ಮ್ಯಾಗಜಿನ್’ ಕವಿಗಳು ಎಂದೂ ಗಂಭೀರ ಸಾಹಿತಿಗಳಿಂದ ವ್ಯಂಗ್ಯಕ್ಕೀಡಾಗಿದ್ದರು. ವರ್ಷಕ್ಕೊಂದೋ, ಎರಡು ವರ್ಷಕ್ಕೊಂದೋ ಪುಸ್ತಕಗಳನ್ನು ಗಂಭೀರವಾಗಿ ಬಿಡುಗಡೆ ಮಾಡಿ, ಅದಕ್ಕೆ ಬಗ್ಗೆ ಇನ್ನೊಬ್ಬ ಗಂಭೀರ ವಿಮರ್ಶಕ ಪೌರೋಹಿತ್ಯ ವಹಿಸುವುದೇ ಸಾಹಿತ್ಯ ಎಂದು ಈ ಕಾಲದಲ್ಲೂ ಗಂಭೀರವಾಗಿ ನಂಬಿದವರಿದ್ದಾರೆ. ಇದೊಂದು ರೀತಿಯಲ್ಲಿ ಶ್ರೇಷ್ಠತೆಯ ವ್ಯಸನ. ಫೇಸ್‌ಬುಕ್, ಪತ್ರಿಕೆಗಳು ಇದ್ದಂತೆಯೇ ಪುಸ್ತಕಗಳು ಕೂಡ ಒಂದು ಮಾಧ್ಯಮ. ಓದುಗರನ್ನು ತಲುಪುವ ವಿವಿಧ ಮಾಧ್ಯಮಗಳನ್ನು ಗರಿಷ್ಠವಾಗಿ ಬಳಸಿಕೊಂಡಂತೆ ಸಾಹಿತ್ಯದಲ್ಲಿ ಹೆಚ್ಚು ಹೆಚ್ಚು ಕ್ರಿಯಾಶೀಲತೆ ಸಾಧ್ಯ. ಫೇಸ್‌ಬುಕ್ ಎನ್ನುವುದು ಒಂದು ಪ್ರಕಾರವಲ್ಲ. ಆಧುನಿಕ ಕಾಲದಲ್ಲಿ ಅದೊಂದು ಶಕ್ತಿಶಾಲಿ ಮಾಧ್ಯಮ. ಕವಿಗಳು ಮಾತ್ರವಲ್ಲ, ಬೇರೆ ಬೇರೆ ರಾಜಕೀಯ ಶಕ್ತಿಗಳೂ ಕೂಡ ಅದನ್ನು ನಿಧಾನಕ್ಕೆ ಆಶ್ರಯಿಸಿಕೊಳ್ಳುತ್ತಿವೆ. ಹೀಗಿರುವಾಗ ಕವಿಗಳಿಗೆ ಅದು ಅಸ್ಪೃಶ್ಯವಾಗಬಾರದು.
ಫೇಸ್‌ಬುಕ್‌ನಲ್ಲಿ ಎಲ್ಲರೂ ಬರೆಯುತ್ತಾರೆ ಎನ್ನುವುದೇ ಗಂಭೀರ ಕವಿಗಳ ಚಿಂತೆ. ಕವಿತೆಯೆನ್ನುವುದು ಇಂಥವರೇ ಬರೆಯಬೇಕು ಎನ್ನುವುದಕ್ಕೆ ಅದೇನೂ ಧಾರ್ಮಿಕ ಶಾಸ್ತ್ರವಲ್ಲ. ಫೇಸ್‌ಬುಕ್‌ನಲ್ಲಿ ಬರೆಯುತ್ತಿರುವ ಹುಡುಗರು ಈ ಹಿಂದೆಯೂ ಬರೆಯುತ್ತಿದ್ದರು. ಆದರೆ ಅದನ್ನು ಓದುಗರ ಮುಂದಿಡಲು ಅವರಿಗೆ ಮಾಧ್ಯಮಗಳು ದಕ್ಕುತ್ತಿರಲಿಲ್ಲ. ಇಂದು ಅವರಿಗೆ ಫೇಸ್‌ಬುಕ್ ಸಾಮಾಜಿಕ ತಾಣ ಸಿಕ್ಕಿದೆ. ಬ್ಲಾಗ್‌ಗಳನ್ನು ಮಾಡಿಕೊಂಡು ತಮ್ಮ ಬರಹಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಯಾರು ಚೆನ್ನಾಗಿ ಬರೆಯುತ್ತಾರೆಯೋ ಅವರೆಲ್ಲ ಫೇಸ್‌ಬುಕ್‌ನಲ್ಲಿ ಮಾತ್ರವಲ್ಲ, ಅದರಾಚೆಗೂ ಉಳಿದು ಬೆಳೆಯುತ್ತಾರೆ. ಫೇಸ್‌ಬುಕ್‌ಗಳು ಸಾಹಿತ್ಯ ಚಟುವಟಿಕೆಗಳಿಗೆ ಇನ್ನಷ್ಟು ಜಾಗವನ್ನು ಮಾಡಿಕೊಟ್ಟಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಸಾಹಿತ್ಯಾಸಕ್ತರ, ಭಾಷಾಸಕ್ತರ ಕರ್ತವ್ಯವಾಗಿದೆ. ಜವಾಬ್ದಾರಿಯಾಗಿದೆ.
 ಕುಣಿಯಲಾರದವಳು ನೆಲ ಡೊಂಕು ಎಂದಳಂತೆ. ಫೇಸ್‌ಬುಕ್‌ನ್ನು ಬಳಸಲಾಗದ ಕೆಲವು ಹಿರಿಯರು ಇದೀಗ ಕೈ ಕೈ ಹಿಸುಕಿಕೊಂಡು ‘ಅದರಲ್ಲಿ ರಕ್ತ ಇಲ್ಲ. ಮಾಂಸವಿಲ್ಲ...’ ಎಂದೆಲ್ಲ ಹೇಳಿ ಸಣ್ಣವರಾಗುತ್ತಿದ್ದಾರೆ. ಇದರ ಬದಲಿಗೆ ಕಿರಿಯರ ಸ್ನೇಹ ಮಾಡಿ, ಅವರಿಂದ ಫೇಸ್‌ಬುಕ್‌ನ್ನು, ಬ್ಲಾಗನ್ನು ಪರಿಣಾಮಕಾರಿಯಾಗಿ ಹೇಗೆ ಬಳಸುವುದು ಎನ್ನುವುದನ್ನು ತಿಳಿದುಕೊಂಡು ಅದಕ್ಕೆ ರಕ್ತ ಮಾಂಸವನ್ನು ನೀಡುವ ಪ್ರಯತ್ನ ಮಾಡಬೇಕು. ಈ ಪರ್ಯಾಯ ಮಾಧ್ಯಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಇನ್ನಷ್ಟು ವಿವೇಕಿಗಳಾಗಿ ಹೇಗೆ ಬಳಸಬಹುದು ಎನ್ನುವುದರ ಕಡೆಗೆ ಚಿಂತಕರು ಗಮನಕೊಡಬೇಕು. ಸಾಹಿತ್ಯಕ ಜಗತ್ತು ರಕ್ತ, ಮಾಂಸ ಕಳೆದುಕೊಂಡು ಅಪೌಷ್ಟಿಕ ಕೂಸಿನಂತಾಗಿರುವ ಈ ದಿನಗಳಲ್ಲಿ ಫೇಸ್‌ಬುಕ್‌ಗಳ ಮೂಲಕ ಯುವ ತರುಣ ಹೊಸ ಓದುಗ ಲೋಕವೊಂದನ್ನು ನಿರ್ಮಾಣ ಮಾಡುತ್ತಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ. ಇದನ್ನು ಇನಷ್ಟು ರಚನಾತ್ಮಕವಾಗಿ ಹೇಗೆ ಸಾಹಿತ್ಯಲೋಕಕ್ಕೆ ಪೂರಕವಾಗಿಸಬಹುದು ಎನ್ನುವುದರ ಕುರಿತು ಲೇಖಕರು ಮಖ್ಯವಾಗಿ ಹಿರಿಯ ಲೇಖಕರು ತಮ್ಮ ಮಡಿ ಮೈಲಿಗೆಗಳಿಂದ ಹೊರಬಂದು ಯೋಚಿಸಬೇಕಾಗಿದೆ.

5 comments:

  1. In another five years, printed books will have the Same fate as chemical photography . Most books will be in digital form and self publishing will replace publishing business. Today writer gets 8-12% of the MRP of the book or even lesser. Unsold books, cost of logistics , dealer, distributor, publisher margin eat away the rest. All that will change with self publishing. Even as of now number of digital books sold is higher than the printed books on amazon

    ReplyDelete
  2. Good Article. Wish you always wrote like this....

    ReplyDelete
  3. Gööd öne....onıy u can write in such a convincing way

    ReplyDelete
  4. Gööd öne....onıy u can write in such a convincing way

    ReplyDelete
  5. Gööd öne....onıy u can write in such a convincing way

    ReplyDelete