Saturday, April 5, 2014

ಕ್ಷಮಿಸಿ, ಬಯಕೆಗಳೆ ಇನ್ನೆಂದಾದರೊಮ್ಮೆ ಬರುವೆ..!


ಮನುಷ್ಯನ ನಿರೀಕ್ಷೆ ಮತ್ತು ನಿರಾಸೆ ಇವುಗಳನ್ನು ಕಟ್ಟಿಕೊಡುವ ಒಂದು ಅಪರೂಪದ ಕತೆ "ಕ್ಷಮಿಸಿ ಬಯಕೆಗಳೇ ಇನ್ನೆಂದಾದರೊಮ್ಮೆ ಬರುವೆ". ಪತ್ರಕರ್ತ, ಕತೆಗಾರ ದಿ. ಬಿ.ಎಂ. ರಶೀದ್ ಬರೆದ ಕತೆ ಇದು. ಪರುಷ ಮಣಿ ಸಂಗ್ರಹದಿಂದ ಆರಿಸಲಾಗಿದೆ. ತನಗೆ ಬಿದ್ದ ಕನಸಲ್ಲಿ ಸಿಕ್ಕಿದ ವಿಳಾಸವೊಂದರ ಹುಡುಗಿಯನ್ನು ಭೇಟಿಯಾಗಲು ಹೊರಟ ಕತಾ ನಾಯಕ ಪಾಪಣ್ಣನ ತುಮುಲಗಳನ್ನು ಈ ಕತೆ ಕಟ್ಟಿಕೊಡತ್ತೆ.
They never dream
that it fades from kiss to kiss.
                  w.b.Yeats

 ಇದೀಗ ಹತ್ತು ನಿಮಿಷಗಳ ಹಿಂದೆ ತೊಡಗಿದ್ದೆಂದು ನಂಬುವುದಕ್ಕೆ ಕಷ್ಟವಾದ ಈ ಕಾಯುವಿಕೆಗೆ ತಾನಿಲ್ಲಿ ನಿಂತು ಶತಮಾನಗಳೇ ಉರುಳಿದುವೋ ಎಂಬಂತಹ ಭಾಸಗಳಿಗೆ ತುತ್ತಾದ ಸುರೇಂದ್ರ ಯಾನೆ ಪಾಪಣ್ಣನ ನಿಲುವಿನುದ್ದಕ್ಕೂ ಅಕಾರಣವಾದ ಭಯ, ಕಾತರ, ತಲ್ಲಣಗಳು ನಿಮಿರಿ ನಿಂತಿದ್ದವು.‘‘ಈ ಕಾಯುವುದು ಎಷ್ಟು ಖುಷಿಯದ್ದೋ ಅಷ್ಟೇ ದರಿದ್ರದ್ದೂ ಕೂಡ’’ ಎಂದು ಮುಖ ಕಿವುಚಿಕೊಂಡ ಪಾಪಣ್ಣನಿಗೆ ಈ ಹತ್ತು ನಿಮಿಷದ ಅಂತರದಲ್ಲಿ ಹೀಗೆ ಅಂದುಕೊಳ್ಳುತ್ತಿರುವುದಾದರೂ ಎಷ್ಟನೇ ಸಲ? ಎಂದೆನಿಸಿ ಸುಮ್ಮನೇ ನಕ್ಕ. ಬೆನ್ನಿಗೇ ತನ್ನನ್ನು ಉಲ್ಲಾಸಗೊಳಿಸುವ ಯಾವ ಚೈತನ್ಯವೂ ಇಲ್ಲದ ಈ ನಗು ತಾನೇನೂ ಧತಿಗೆಟ್ಟಿಲ್ಲ ಎಂಬುವುದನ್ನು ತನಗೇ ನಂಬಿಸಿಕೊಳ್ಳುವ ಹತಾಶ ಯತ್ನವಲ್ಲವೇ? ಎಂಬ ಅನುಮಾನಕ್ಕೆ ತೊಡಗಿ ತನ್ನ ಮೇಲೆಯೇ ಅನುಕಂಪ ಹುಟ್ಟಿತು. ಮನಸ್ಸಿನ ಉದ್ವೇಗವೆಲ್ಲಾ ಅವನ ತರತರಹದ ವರ್ತನೆಗಳಲ್ಲಿ ವ್ಯಕ್ತಗೊಳ್ಳುತ್ತಾ, ಅದನ್ನು ಹತ್ತಿಕ್ಕಬೇಕೆನ್ನುವ ಒತ್ತಾಯಗಳೆಲ್ಲಾ ಮಣ್ಣುಪಾಲಾಗುತ್ತಿರುವುದಕ್ಕೆ ತೀವ್ರ ವಿಷಾದಗೊಂಡ ಪಾಪಣ್ಣನಿಗೆ ಒಂದು ಬಗೆಯ ಹೇಸಿಗೆಯೂ ಹುಟ್ಟಿ, ‘ಥೂ ದರಿದ್ರವನೇ, ಒಂಚೂರು ನೆಟ್ಟಗೆ ನಿಂತುಕೊಳ್ಳುವ ಕೆಪಾಸಿಟಿನೂ ಇಲ್ಲವೇನಯ್ಯ ನಿಂಗೆ’ ಎಂದು ತನ್ನನ್ನೇ ಬಯ್ದುಕೊಂಡನು. ಇದ್ದಕ್ಕಿದ್ದಂತೆ ಉದ್ಭವಿಸಿದ ‘ಇಲ್ಲಿಂದ ಓಡಿದರೆ ಹೇಗೆ?’ಎಂಬ ಆಲೋಚನೆ ಅವನನ್ನು ಉಲ್ಲಾಸಗೊಳಿಸಿ, ಸುಖಕರವಾಗಿ ತೋರುತ್ತಿರುವ ಆ ಯೋಚನೆಯನ್ನು ಕೂಡಲೇ ಜಾರಿಗೊಳಿಸುವಂತೆ ಮನಸ್ಸು ಒತ್ತಾಯಿಸತೊಡಗಿತು. ಕೊಂಚ ಕೊಂಚವಾಗಿ ಸಡಿಲಗೊಂಡ ಪಾಪಣ್ಣ ಕೊನೆಗೊಮ್ಮೆ ನಿರಳ ನಿಟ್ಟುಸಿರೊಂದನ್ನು ಬಿಟ್ಟು ಜೇಬಿನಲ್ಲಿದ್ದ ಸಿಗರೇಟನ್ನು ತುಟಿಗಿಟ್ಟು ಬೆಂಕಿ ಸೋಕಿಸಿ, ಹೊಗೆ ಸವಿಯುತ್ತಾ ತನ್ನ ಸುತ್ತಮುತ್ತವನ್ನು ನಿರುಕಿಸತೊಡಗಿದನು.
ತಾನು ಕೂತಿದ್ದ ಪರಿಸರವನ್ನು ಹೊಸದಾಗಿ ನೋಡುತ್ತಿರುವಂತೆ ನೋಡಿದವನಿಗೆ, ಸ್ವಲ್ಪ ಹೊತ್ತಿನ ಮೊದಲು ಅಲ್ಲಿತ್ತೆಂದು ನಂಬಲೇ ಅಸಾಧ್ಯವಾಗುವಂತಹ ದಶ್ಯಗಳು ಕಣ್ಣಿಗೆ ಗೋಚರಿಸತೊಡಗಿ ‘‘ಅರೆ, ಆ ಮುದುಕ, ಆ ಮೇ ಫ್ಲವರ್ ಗಿಡ ಅಲ್ಲಿರಲಿಲ್ಲವಲ್ಲ..’’ಎಂಬ ಉದ್ಗಾರ ಹೊರಟಿತು.ತನಗಾದ ಗೊಂದಲಕ್ಕೆ ಉತ್ತರ ಪಡೆಯುವವನಂತೆ ನೇರವಾಗಿ ಪತ್ರಿಕೆ ಓದುತ್ತಿದ್ದ ಮುದುಕನ ಬಳಿ ನಡೆದು ‘‘ಕ್ಷಮಿಸಿ, ತಾವಿಲ್ಲಿಗೆ ಬಂದು ಎಷ್ಟು ಹೊತ್ತಾಯ್ತು?’’ಎಂದು ಪ್ರಶ್ನಿಸಿದ, ‘ಪ್ರಶ್ನೆಗಳು ಈ ತರಹದಲ್ಲೂ ಇರುತ್ತವೆಯೇ’ ಎಂಬ ಮುಖಭಾವದಿಂದ ನೋಡಿದ ಮುದುಕ.

‘‘ಸುಮಾರು ಇಪ್ಪತ್ತು ನಿಮಿಷ ಕಳೆದಿರಬಹುದು. ನೀವಿಲ್ಲಿಗೆ ಬರುವ ಮುನ್ನವೇ ಇದ್ದೆನಲ್ಲ. ತಾವು ಯಾರಿಗೋ ಕಾಯುವಂತಿದೆ..?’’ತನ್ನತ್ತಲೇ ತಿರುಗಿದ ಪ್ರಶ್ನೆಗೆ ಪಾಪಣ್ಣ ಹೌದೆಂದ. ‘‘ತುಂಬಾ ಟೆನ್ಶನ್‌ನಲ್ಲಿದ್ದೀರಿ. ಯಾರೆಂದು ಕೇಳಬಹುದೇ?...’’

ತಾನೇ ಪ್ರಶ್ನಿಸಿಕೊಳ್ಳಬಯಸದ ಮುದುಕನ ಪ್ರಶ್ನೆಗಳು ಘೋರ ಅಧಿಕಪ್ರಸಂಗತನವಾಗಿ ಕಂಡು ಬಂದು ಪಾಪಣ್ಣ ಒಳಗೊಳಗೇ ರೇಗಿದರೂ, ಮುದುಕನ ಪ್ರಶ್ನೆ ತಾನೇ ಪ್ರಶ್ನಿಸಿಕೊಳ್ಳಬೇಕಾದುದನ್ನು ತನ್ನೊಳಗೆ ಮುಚ್ಚು ಮರೆಯಲ್ಲಿಡಲು ಮಾಡಿದ ಹಿಕಮತ್ತುಗಳನ್ನು ಪ್ರಶ್ನಿಸುತ್ತಿರುವಂತಿದೆಯಲ್ಲ ಎಂದು ಕಂಗಾಲಾದ. ತನಗೆ ಗೊತ್ತೇ ಇಲ್ಲದ ಉತ್ತರವನ್ನು ಹೇಳುವುದಾದರೂ-ಏನೆಂದು, ಹೇಳುವುದಿದ್ದರೂ ಈ ದರಿದ್ರ ಮುದುಕನಿಗೇಕೆ ಹೇಳಬೇಕೆಂದು ಮನಸ್ಸು ಹಗೆ ಕಾರಲು ಹವಣಿಸಿದರೂ, ‘ತಾನು ಹೇಳುವಂತಹದೇನಿದ್ದರೂ ಸತ್ಯವಲ್ಲವೇ’ ಎಂಬ ಸಮಾಧಾನದಿಂದ ‘‘ಗೊತ್ತಿಲ್ಲ’’ಅಂದ.
‘‘ಗೊತ್ತಿಲ್ಲ...?’’ ಹುಡುಗನೋ, ಹುಡುಗಿಯೋ ಎಂಬುದಾದರೂ ಗೊತ್ತಿದೆಯೇ...?’’
‘‘ಇಲ್ಲ... ಇಲ್ಲ.. ಬಹುಶಃ ಅದೂ ಗೊತ್ತಿಲ್ಲ’’
ಹುಚ್ಚನನ್ನು ನೋಡುವಂತಹ ಮುದುಕನ ಇರಿಯುವ ಹಗುರ ನೋಟಕ್ಕೆ ತತ್ತರಿಸಿದ ಪಾಪಣ್ಣ ‘ಥತ್, ತಲೆಹರಟೆ ಮುದುಕ’ ಎಂದು ಗೊಣಗುತ್ತಾ ತನ್ನ ಸ್ವಸ್ಥಾನ ಸೇರಿದ. ಕೊನೆಯ ‘ದಂ’ಎಳೆದು ಸಿಗರೇಟು ತುಂಡು ಬಿಸುಟಾಗ ಸಿಗರೇಟು ಮುಗಿದಿರುವುದು ಗಮನಕ್ಕೆ ಬಂದು ದಿಗಿಲಾದರೂ ದೂರದಲ್ಲಿ ಪೆಟ್ಟಿಗೆ ಅಂಗಡಿಯೊಂದು ಕಂಡು ಬಂದು ಸಮಾಧಾನವಾಯಿತು.
 ತಾನಿಲ್ಲಿ ಭೇಟಿ ಮಾಡಬೇಕಾದ ವ್ಯಕ್ತಿ ಯಾರು, ಅದು ಹೇಗಿದೆ ಮತ್ತು ಭೇಟಿಯಾಗಬೇಕಾದ ಜರೂರೇನು ಎಂಬಿತ್ಯಾದಿ ವಿವರಗಳೆಲ್ಲದರ ಕುರಿತು ಪೂರ್ಣ ಅಜ್ಞಾನಿಯಾಗಿರುವ ಪಾಪಣ್ಣನಿಗೆ, ತನ್ನ ಈ ಕಾಯುವಿಕೆಗೆ ಅರ್ಥಗಳೇ ಇಲ್ಲದೆ ತನಗೆ ಮತ್ತು ಭೇಟಿಯಾಗಬೇಕಾದ ಜರೂರೇನು ಎಂಬಿತ್ಯಾದಿ ವಿವರಗಳೆಲ್ಲದರ ಕುರಿತು ಪೂರ್ಣ ಅಜ್ಞಾನಿಯಾಗಿರುವ ಪಾಪಣ್ಣನಿಗೆ, ತನ್ನ ಈ ಕಾಯುವಿಕೆಗೆ ಅರ್ಥಗಳೇ ಇಲ್ಲದೆ ತನಗೆ ತಾನೇ ಹಾಸ್ಯಾಸ್ಪದನಾಗುತ್ತಿರುವೆನೇ ಎಂಬ ಯೋಚನೆ ತುಸು ಕಿರಿಕಿರಿಗೊಳಿಸಿತು. ಆದರೂ ಈ ಕಾಯುವಿಕೆಯ ದೆಸೆಯಿಂದ ಪಡುತ್ತಿರುವ ತಲ್ಲಣಗಳು ಕೊಡುತ್ತಿರುವ ಥ್ರಿಲಿಂಗ್ ತಾನು ಬಯಸಿದ್ದೇ ಅಲ್ಲವೇ ಎಂದೆನಿಸಿ ತುಸು ಹೊತ್ತಿನ ಮುಂಚೆ ಅವನನ್ನು ಉಲ್ಲಾಸಗೊಳಿಸಿದ ಪಲಾಯನದ ಪ್ರಸ್ತಾಪ ತಳ್ಳಿಹಾಕಲ್ಪಟ್ಟಿತು.
 ಮಹತ್ವದಲ್ಲ ಎನ್ನುವ ಮಾತಿನಿಂದ ಕೂಡ ಪರೋಕ್ಷವಾಗಿ ಮಹತ್ವದೆನಿಸಿಕೊಳ್ಳಬಹುದಾದ ಒಂದು ಯಕಶ್ಚಿತ್ ಕನಸು ತನ್ನ ಈ ಎಲ್ಲಾ ‘ತೊಂದರೆ’ಗಳಿಗೆ ಬೀಜವಾದ ಒಂದು ಸಂಭವವನ್ನು ನೆನೆಯುತ್ತಾ ಚಕಿತಗೊಳ್ಳತೊಡಗಿದ.
ಇದೆಲ್ಲಾ ಶುರುವಾದದ್ದು ಹೀಗೆ, ಸರಿ ಸುಮಾರು ನಾಲ್ಕು ತಿಂಗಳ ಹಿಂದೆ.
ಒಂದು ಬೆಳಗಿನ ಜಾವ ಪಾಪಣ್ಣನಿಗೆ ಎಚ್ಚರವಾದಾಗ ನೆನಪಿನಲ್ಲುಳಿದದ್ದಿಷ್ಟೇ. ಪೂರ್ಣ ವಿಳಾಸವಿರುವ ಒಂದು ಹೆಸರು! ಮತ್ತೆ ನಿದ್ದೆ ಹತ್ತಲಾರದು ಎನ್ನುವುದು ಖಾತ್ರಿಯಾಗುವಷ್ಟು ಚಡಪಡಿಕೆ ಹತ್ತಿದ್ದರಿಂದ ಮೆಲ್ಲನೆ ಎದ್ದು ಕಿಟಕಿಗೆ ಮುಖ ಹಚ್ಚಿ ಹೊರಗೆ ಕತ್ತಲ ಗರ್ಭದಲ್ಲಿ ಚಿಗುರೊಡೆಯುತ್ತಿದ್ದ ಬೆಳಕನ್ನು ಗಮನಿಸುತ್ತಾ ಕೂತ. ಈ ದಿನದ ಬೆಳಗು ತನಗೆ ಎಂದಿನ ಬೆಳಗಿನಂತಿಲ್ಲ ಎಂಬ ಭಾವ ಉಲ್ಲಾಸ ಕೊಡತೊಡಗಿದ್ದೇ, ಪಾಪಣ್ಣನಿಗೆ ಇದು ಈಗ ತುಸು ಹೊತ್ತಿಗೆ ಮುಂಚೆ ಬಿದ್ದ ಕನಸಿನ ದೆಸೆಯಿಂದ ಇರಬಹುದೇ ಎಂಬ ಯೋಚನೆ ಶುರುವಾಗಿ ಕೊಡವಿಕೊಳ್ಳಬೇಕೆಂದು ಹೊರಟ ಚಡಪಡಿಕೆ ಅವನನ್ನಿಡೀ ಮತ್ತೆ ಆವರಿಸಿತು. ಬಿದ್ದದ್ದೇ ಖಾತ್ರಿಯಿಲ್ಲದ ಕನಸನ್ನು ಇನ್ಯಾವ ಇಲ್ಲದ ಅರ್ಥಕ್ಕೆ ಹಚ್ಚಿ ನೋಡಲಿ ಎನ್ನುವುದು ಅವನ ಚಡಪಡಿಕೆಯ ಮೂಲವಾಗಿತ್ತಾದರೂ ಅದು ಬಲವಾಗಿ ಚಾಚಿಕೊಂಡದ್ದು ತನ್ನೊಳಗೆ ಸುಂದರವಾದದ್ದೇನೋ ನಡೆದಿದೆ, ಆದರೆ ಅದೇನೆಂದು ನಿರ್ಧರಿಸಲಾಗದ ಅಸಹಾಯಕತೆಗೆ. ಅವನು ಹಿಡಿಯಲು ಹೋದಂತೆ ಜಾರಿಕೊಂಡಂತೆನಿಸಿ, ಅಂಗಾತ ಬಿದ್ದ ಜಿರಳೆ ಬೋರಲಾಗಲು ನಡೆಸುವ ಪ್ರಯತ್ನದ ಶೈಲಿಯಲ್ಲಿ ನೆನಪಿಗೆ ದಕ್ಕಿದ ಬಣ್ಣದ ತುಣುಕುಗಳನ್ನು ನವ್ಯ ಕಲಾವಿದನ ಕೊಲಾಜ್ ಕತಿಯ ವರ್ಣ ಸಂಯೋಜನೆಯಂತೆ ಕಣ್ಣ ಮುಂದೆ ಒಟ್ಟಾರೆಯಾಗಿ ಪೋಣಿಸುತ್ತಾ ನಡೆದಾಗ ಕೊನೆಗೂ ದಕ್ಕಿದ್ದು ಅವನು ನಡೆಸಿದ್ದೆಲ್ಲದಕ್ಕೂ ಸ್ಪಷ್ಟ ನಿಶಾನೆಯಾಗಿ ನಿಂತ ಒಂದು ವಿಳಾಸ ಚೀಟಿ! ಅದು ಅವನ ನೆನಪಿಗೆ ದಕ್ಕಿದ್ದೇ ಉಳಿದದ್ದೆಲ್ಲಾ ಹಿಂದಾಯಿತು. ಭಿತ್ತಿಯ ಮೇಲೆ ಅದೇಯಾಗಿ ನಿಂತಿದ್ದನ್ನು ಪಾಪಣ್ಣ ಓದಿಕೊಂಡ. ಡೈರಿಯಲ್ಲಿ ಬರೆದುಕೊಂಡ. ‘ಸ್ಫೂರ್ತಿ ವುಮೆನ್ಸ್ ಹಾಸ್ಟೆಲ್, ಮಂಗಳೂರು’
 ವಿನಾಕಾರಣ ಕನಸಿನಲ್ಲಿ ಕಾಣಿಸಿಕೊಂಡ ಒಂದು ವಿಳಾಸ ಚೀಟಿ ನೆನಪಾದುದಕ್ಕಿಂತಲೂ ವೇಗವಾಗಿ ಮರೆತು ಹೋದುದರಿಂದ ಆ ನಂತರದಿಂದ, ಈವರೆಗಿನದಕ್ಕೆಲ್ಲದಕ್ಕೂ ಅದೊಂದೇ ಕಾರಣವಾಯಿತೆಂದು ಹೇಳುವುದು ಅಷ್ಟು ಸಾಧ್ಯವಾದುದಲ್ಲ. ಒಂದು ಯಕಶ್ಚಿತ್ ಕನಸಿನ ಕುರಿತು ಜಿಜ್ಞಾಸೆ ಮಾಡುತ್ತಾ ಕೂರುವುದರಿಂದ ತಾನೆಲ್ಲಿ ಹಾಸ್ಯಾಸ್ಪದನಾಗಿ ಬಿಡುವನೇನೋ ಎಂಬ ಶಂಕೆಯ ಬಲವಂತದಿಂದ ಮರೆತುಬಿಟ್ಟನೋ ಅಥವಾ ಅದನ್ನು ನೆನೆಸಿಕೊಳ್ಳುವುದಕ್ಕೆ ಕಾರಣಗಳಿಲ್ಲದೇ ಇದ್ದುದು, ಅದು ಮತ್ತೆ ನೆನಪಾಗದಿದ್ದುದರ ಕಾರಣವಾಗಿತ್ತೋ ಒಟ್ಟಿನಲ್ಲಿ ಪಾಪಣ್ಣನ ಕನಸಿನಲ್ಲಿ ಕಂಡ ‘ಸ್ಫೂರ್ತಿ’ ಎಂಬ ಪರಿಮಳಭರಿತ ಹೆಸರು ಅವನ ಡೈರಿಯ ಪುಟಗಳಲ್ಲಿ ಹೂತು ಹೋದದ್ದು ಮತ್ತೆ ಮಹತ್ವವನ್ನು ಪಡೆದದ್ದು ಒಂದು ಸಂಜೆ ಆತ ಜರೂರಿನಿಂದ ಬಂದು ಡೈರಿ ಬಿಚ್ಚಿ ‘ಹೊಸ ವರ್ಷದ ಶುಭಾಶಯ’ಗಳನ್ನು ಕಳಿಸಬೇಕಾದವರ ಪಟ್ಟಿ ತಯಾರಿಸಲು ಕೂತಾಗ. ಆ ಹೆಸರನ್ನೇ ಸುಮಾರು ಹೊತ್ತು ನೋಡುತ್ತಾ ಕೂತವನಿಗೆ ಏನನ್ನಿಸಿತೋ ಕೊನೆಗೆ ‘ತಾನೊಂದು ಶುಭಾಶಯ ಪತ್ರವನ್ನು ಮಾತ್ರ ಕಳೆದುಕೊಳ್ಳಬಹುದಲ್ಲದೇ ನಷ್ಟ ಪಡಲು ಮತ್ತೇನೂ ಇಲ್ಲ’ ಎಂದು ನೆಪಮಾತ್ರಕ್ಕೆ ಸುಳಿದು ಬಂದ ಯೋಚನೆಯ ದೆಸೆಯಿಂದ ಇದ್ದುದರಲ್ಲೇ ಚಂದದ ಕಾರ್ಡೊಂದನ್ನು ಕನಸಿನಲ್ಲಿ ಸಿಕ್ಕಿದ ವಿಳಾಸಕ್ಕೆ ಕಳಿಸಿ, ಹೇಗೆ ತನಗೆ ಕನಸಿನಲ್ಲಿ ಕಂಡ ವಿಳಾಸಕ್ಕೆ ಅರ್ಥಗಳಿಲ್ಲವೋ ಹಾಗೆಯೇ ತನ್ನ ಈ ಕ್ರಿಯೆಗೂ ಅರ್ಥಗಳಿಲ್ಲ ಎಂದು ತೀರ್ಮಾನಿಸಿಕೊಂಡು ಸ್ವಸ್ಥನಾಗಿದ್ದನು. ಆದರೆ ಆ ನೆಮ್ಮದಿಯನ್ನು ಛಿದ್ರಗೊಳಿಸುವಂತಹ ಅಚ್ಚರಿಯೊಂದು ಹತ್ತು ದಿವಸಗಳ ತರುವಾಯದ ಒಂದು ಬೆಳಗ್ಗೆ ಆಫೀಸು ಹೊಕ್ಕ ಅವನನ್ನು ಕಾಯುತ್ತಿತ್ತು. ಮೇಜಿನ ಮೇಲೆ ಬಿದ್ದಿದ್ದ ಅಂಚೆಯಲ್ಲಿ ಅವನ ಹೆಸರಿಗೆ ಬಂದಿದ್ದ ಶುಭಾಶಯ ಪತ್ರವೊಂದರ ಬೆನ್ನಿಗೆ ಕಣ್ಣೋಡಿಸಿದರೆ ಅಲ್ಲಿ ಚಂದದ ಅಕ್ಷರಗಳಲ್ಲಿ ಬರೆದಿತ್ತು ‘ಸ್ಫೂರ್ತಿಯಿಂದ’.
 ಪಾಪಣ್ಣನಿಗೆ ಒಂದು ಕ್ಷುಲ್ಲಕ ಕನಸು ಕೂಡ ತನ್ನ ಬದುಕಿನಲ್ಲಿ ವಿಲಕ್ಷಣ ಆಯಾಮಗಳನ್ನು ಪಡೆಯುತ್ತಾ, ವಿಶೇಷ ಅರ್ಥಗಳನ್ನು ಸಾಕ್ಷಾತ್ಕಾರಗೊಳಿಸಬಹುದಾದ ಸಾಧ್ಯತೆಯ ಅರಿವಾಗತೊಡಗಿದ್ದು ಇಲ್ಲಿಂದಲೇ.
***
ಸುರೇಂದ್ರ ಯಾನೆ ಪಾಪಣ್ಣ ತುಂಬಾ ಚಂದದ ತರುಣ. ಎಲ್ಲರಿಗೂ ಮುದ್ದಿನ ಪಾಪಣ್ಣ. ಭುಜ ವಾಲಿಸಿಕೊಂಡು ಬೀದಿಯಲ್ಲಿ ನಡೆಯತೊಡಗಿದನೆಂದರೆ ಗಂಡು ಹುಡುಗರೇ ತಿರುಗಿ ತಿರುಗಿ ನೋಡಬೇಕು! ಇದು ಹೀಗಿರುವಾಗ ಬಡಪಾಯಿ ಹುಡುಗಿಯರ ಪಾಡಿನ್ನೇನು..? ಚಂದದ ಹುಡುಗಿಯರನ್ನು ಸೆಳೆಯಲು ಬೇಕಾದ ಎಲ್ಲಾ ಬಗೆಯ ಬಂಡವಾಳಗಳು ತನ್ನಲ್ಲಿವೆ ಎಂಬ ವಿಶ್ವಾಸದಿಂದ ಪಾಪಣ್ಣ ಹೆಮ್ಮೆ ಪಡುವುದಿತ್ತು.ಈ ಹೆಮ್ಮೆ ಅವನಿಗರಿವಿಲ್ಲದೆ ಅಹಂಕಾರಗಳನ್ನು ಬೆಳೆಸಿವೆ. ಅಷ್ಟೇನೂ ಅಪಾಯಕಾರಿಯಲ್ಲದ ಅಹಂಕಾರವನ್ನು ಅವನಿಗೆ ಮುಗಿಬಿದ್ದು ಶರಣಾಗುವ ಹುಡುಗಿಯರೂ ಪೋಷಿಸುತ್ತಾ ಬಂದಿರುವುದರಿಂದ ಈ ಅಹಂಕಾರ ಅಂತಹ ಅಸಹಜವಾದದ್ದೇನೂ ಅಲ್ಲ ಎಂಬ ವಿಮರ್ಶೆಯನ್ನು ಖುದ್ದು ಪಾಪಣ್ಣನೇ ಮಾಡಿಕೊಂಡಿದ್ದಾನೆ. ಇಂತಹದೇ ಮೂಡಿನಲ್ಲಿ ತನ್ನ ‘ಪಡ್ಡೆ’ಗೆಳೆಯರೊಡನೆ ಕೊಚ್ಚಿಕೊಂಡದ್ದೂ ಇದೆ. ‘‘ನಾನೆಲ್ಲಿಯಾದ್ರೂ ಹುಡುಗಿಯಾಗಿ ಹುಟ್ಟಿದ್ದಿದ್ದರೆ ಇಡೀ ಜಗತ್ತಿನಲ್ಲಿ ಒಬ್ಬನೇ ಹುಡುಗನನ್ನು ಪ್ರೀತಿಸುತ್ತಿದ್ದೆ- ಅದು ಪಾಪಣ್ಣ.’’
ಇಂತಹ ಪಾಪಣ್ಣ ಈಗ ಕಷ್ಟದಲ್ಲಿ ಬಿದ್ದಿದ್ದಾನೆ!
 ಅವನ ಕನಸಿನಲ್ಲಿ ಅಕಸ್ಮಾತ್ ಕಾಣಸಿಕ್ಕ ಹುಡುಗಿ ‘‘ನಾನೇ ಕಣೋ, ನಿನ್ನ ಕನಸಿನಲ್ಲಿ ಬಂದ ಹುಡುಗಿ’’ ಎಂದು ಧುತ್ತನೇ ತನ್ನ ಅಸ್ತಿತ್ವವನ್ನು ಸಾರಿದಂದಿನಿಂದ ಪಾಪಣ್ಣನ ಬಳಿ ನಿದ್ದೆ ಸುಳಿಯಲು ಬಹಳ ಚೌಕಾಶಿ ಮಾಡಿತು. ಅರ್ಥವೇ ಇಲ್ಲದ ಒಂದು ಕನಸು ಹೀಗೆ ಜೀವ ಪಡೆಯುತ್ತಿರುವ ಕ್ರಿಯೆ ಅವನನ್ನು ಚಕಿತಗೊಳಿಸಿ, ಕನಸಿನಲ್ಲಿ ಬಂದವಳು ನಿಜಕ್ಕೂ ತನ್ನ ಶುಭಾಶಯ ಪತ್ರಕ್ಕೆ ಉತ್ತರಿಸಿದ ಹುಡುಗಿಯೇ ಅಥವಾ ತನಗೆ ಬಿದ್ದ ಕನಸು ಬರೇ ನಿಮಿತ್ತ ಮಾತ್ರದ್ದೋ ಎಂಬಂತಹ ಜಿಜ್ಞಾಸೆಗೆ ಶುರು ಹಚ್ಚಿತ್ತು. ಇತ್ತೀಚಿನ ದಿನಗಳ ನೀರಸ ಬದುಕಿನಲ್ಲಿ ಏನಾದರೂ ಹೊಸ ಸಪ್ರೈಸ್‌ಗಳು ಒದಗಿ ಬರಬಾರದೇ ಎಂಬ ತನ್ನ ಸುಪ್ತ ಹಾರೈಕೆಗೇ ಆ ಕನಸೊಂದು ನಿಶಾನೆಯಂತೆ ಮೂಡಿ ಬಂದಿರಬಾರದೇಕೆ ಎಂಬ ಪರಿಹಾರವೂ ಹೊಳೆದಿತ್ತು. ಆದರೂ ಆ ಕನಸು ಕೊಡುತ್ತಿರುವಂತಹ ಥ್ರಿಲ್‌ಗಳಿಗಿಂತ ಅದರ ಅರ್ಥ ಅಷ್ಟೊಂದು ಮಹತ್ವದ್ದಾಗಿಯೇನೂ ಕಂಡಿರಲಿಲ್ಲ. ಹೀಗೆ ಪಾಪಣ್ಣನ ಬದುಕಿನ ಕೆಲವು ರಾತ್ರಿಗಳು ಸುದೀರ್ಘವಾಗಿ ನಿಟ್ಟುಸಿರತೊಡಗಿ, ಅವನನ್ನು ರೋಮಾಂಚನಗೊಳಿಸುತ್ತಿರುವ ಈ ಸಂಭವನೀಯತೆಗಳನ್ನೆಲ್ಲಾ ಯಾರೊಡನೆಯಾದರೂ ಹಂಚಿಕೊಳ್ಳಬೇಕೆಂಬ ತಹತಹಿಕೆ ಶುರುವಾಗಿ, ಇದನ್ನೆಲ್ಲಾ ಹೇಳಿಕೊಳ್ಳಲು ಕನಸಿನಲ್ಲಿ ಬಂದ ಹುಡುಗಿಗಿಂತ ಒಳ್ಳೆಯ ವ್ಯಕ್ತಿ ಇನ್ನಾರು ಎಂಬ ಐಡಿಯಾವು ಬಂದು ಅದನ್ನು ಕೂಡಲೇ ಕಾರ್ಯಕ್ಕಿಳಿಸಿದ್ದ.
 ‘ಬದುಕುವುದರಲ್ಲೂ ಇಷ್ಟೊಂದು ಥ್ರಿಲ್ ಇದೆಯೆಂದು ಮನವರಿಕೆ ಮಾಡಿಸಿದ ಈ ಕಾಯುವಿಕೆಯ ನಿಜವಾದ ಆರಂಭ ಅಲ್ಲಿಂದಲೇ ಅಲ್ಲವೇ?’ ಎಂದು ಪಾಪಣ್ಣ ನೆನೆಸಿಕೊಂಡ. ಸಿಗರೇಟು ಸೇದಬೇಕೆನಿಸಿ, ಎದ್ದು ಪೆಟ್ಟಿಗೆಯಂಗಡಿ ಬಳಿಗೆ ನಡೆಯತೊಡಗಿದ. ಸಿಗರೇಟಿಲ್ಲದೆ ಬದುಕಲು ಸಾಧ್ಯವೇ ಇಲ್ಲವೆಂಬ ಸ್ಥಿತಿ, ನೆಪ ಮಾತ್ರಕ್ಕೆ ತೊಡಗಿದ ಪತ್ರಗಳಿಗೂ ಅನ್ವಯಿಸಿದ್ದು ನೆನೆದು ವಿಸ್ಮಯಗೊಂಡ. ತಾನು ನಂಬಲೇ ಅನುಮಾನಪಡುತ್ತಿದ್ದ ಸಂಭವವನ್ನು ಅದಕ್ಕೆ ಬೀಜವಾದ ವ್ಯಕ್ತಿಗೇ ನಂಬಿಸಲು ಮಾಡುವ ಪ್ರಯತ್ನದಂತಿದ್ದ ಪತ್ರಕ್ಕೆ ಅವಳಿಂದ ಬರಬಹುದಾಗಿದ್ದ ಉತ್ತರಕ್ಕೆ ಕಾಯುವ ಅವಧಿಯಲ್ಲಿ ಅನುಭವಿಸಿದ ತಲ್ಲಣ ಕಾತರಗಳೆಲ್ಲವೂ ಬದುಕಿನಲ್ಲಿಯೇ ಅಪರೂಪದ ಅನುಭವಗಳಂತ್ತಿತ್ತೆಂದು ಪಾಪಣ್ಣನ ಸ್ಮರಣೆಗೆ ಬರುತ್ತಿದೆ. ಇಲ್ಲಿ ಈ ಪಾರ್ಕ್‌ನಲ್ಲಿ ಅವಳಿಗಾಗಿ ಕಾಯುತ್ತಿರುವಾಗ ಆಗುತ್ತಿರುವಂತಹದೇ ಕಾತರಗಳು.. ‘ಲೇಟ್ ಪಾಪಣ್ಣ’ ಎಂದು ಕರೆಸಿಕೊಳ್ಳುತ್ತಿದ್ದವನು ಬೀಗ ಬಿಚ್ಚುವ ಮುನ್ನವೇ ಆಫೀಸಿನ ಬಾಗಿಲಲ್ಲಿ ಹಾಜರ್..ಒಳಗೇ ನುಗ್ಗಿದ್ದೇ ಪೋಸ್ಟ್ ನೋಡುವ ತವಕ.. ಇಲ್ಲವೆಂದಾಗ ಆವರಿಸುತ್ತಿದ್ದ ನಿರಾಶೆಯನ್ನು ಮೆಟ್ಟಿ ನಿಲ್ಲುತ್ತಿದ್ದ ನಾಳೆ ಬರಬಹುದೆಂಬ ನಿರೀಕ್ಷೆ... ‘ನಾಳೆ’ಯ ನಿರೀಕ್ಷೆಯಲ್ಲಿ ಸಲೀಸಾಗಿ ಜಾರುತ್ತಿದ್ದ ‘ಇಂದು’ಗಳು..ಪಾಪಣ್ಣ ಅಂಗಡಿಗೂಡಿನೊಳಗಿನ ಕತ್ತಲಲ್ಲಿ ಕೂತು ಪಿಳಿಪಿಳಿ ಕಣ್ಣು ಬಿಡುತ್ತಿದ್ದ ಅಂಗಡಿಯಾತನಲ್ಲಿ‘‘ಐಟಿಸಿ ಕಿಂಗ್ ಕೊಡ್ರಿ ನಾಲ್ಕು’’ ಅಂದ.
‘‘ಕಿಂಗ್ ಇಲ್ಲ ಸಾರ್, ಬ್ರಸ್ಟಲ್ ಮಾತ್ರ ಇದೆ...’’
ಪಾಪಣ್ಣನ ತುಟಿಯಿಂದ ಹೊರಬಿದ್ದ ‘ಪ್ಚ್’ ಎಂಬ ಸದ್ದು ಅವನಿಗಾದ ಅಸಹನೆಯನ್ನು ವ್ಯಕ್ತಪಡಿಸಿತು.
  ‘‘ಸರಿ ಕೊಡಯ್ಯ ಒಂದು. ಇನ್ನೇನ್ಮಾಡೋದು...’’ಅಂದ ಬೇಸರದಿಂದ. ಅವನಿಗೇನನ್ನಾದರೂ ಸೇದಬೇಕಾಗಿತ್ತು. ಸಿಗರೇಟು ಕೊಂಡು ಎರಡು ದಮ್ಮು ಎಳೆದವನೇ ‘‘ಥತ್, ಈ ದರಿದ್ರ ಸಿಗರೇಟಿಗಿಂತ ಬೀಡಿನಾದ್ರೂ ಸೇದಬಹುದಿತ್ತು...’’ ಜಿಗುಪ್ಸೆಯಿಂದ ಗೊಣಗುತ್ತಾ ಸಿಗರೇಟನ್ನು ನೆಲಕ್ಕಪ್ಪಳಿಸಿದ. ಅಲ್ಲಿ ನಿಂತು ಮಾಡುವುದಕ್ಕೇನೂ ತೋಚದೇ ಅತ್ತ ಇತ್ತ ನೋಡಿದ ಪಾಪಣ್ಣ ಎದುರಿನ ಅಂಗಡಿಯೊಂದಕ್ಕೆ ತಗುಲಿದ್ದ ಬೋರ್ಡನ್ನು ಓದುವ ಪ್ರಯತ್ನ ಮಾಡಿದ. ‘ಸ್ಪೇರ್ ಪಾರ್ಟ್ಸ್’ ಎಂದು ಬರೆದಿರುವುದು ‘‘ಸ್ಪೇರ್ ಹಾರ್ಟ್ಸ್’’ ಎಂದು ಬದಲಾಯಿಸಿದರೆ ಹೇಗೆ? ಇತ್ಯಾದಿಯಾಗಿ ಯೋಚಿಸಿದ. ಇವು ಯಾವುವೂ ಅವನ ಮನಸ್ಸಿಗೆ ಕವಿದ ಮಂಕುತನವನ್ನು ಓಡಿಸುವಷ್ಟು ಶಕ್ತವಾಗಿರಲಿಲ್ಲ. ತನಗೆ ಇದ್ದಕ್ಕಿದ್ದ ಹಾಗೆ ಬಡಿದ ಈ ಮಂಕುತನಕ್ಕೆ ಕಾರಣಗಳನ್ನು ಹುಡುಕತೊಡಗಿದ. ‘ಪಾರ್ಕಿನಲ್ಲಿದ್ದ ಮುದುಕ ತನ್ನನ್ನು ಹುಚ್ಚನೆಂದು ತಿಳಿದನೆಂದೆ!’
ಯಾಕೋ ಒಪ್ಪುವುದಕ್ಕೆ ಮನಸ್ಸಾಗದೇ ‘ಸಿಗರೇಟಿಲ್ಲದ್ದಕ್ಕೆ ಇರಬಹುದು’ ಎಂದು ಸಮಾಧಾನಿಸಿಕೊಂಡ. ಇವೆಲ್ಲಾ ಸಾಯಲಿ ಅಂದುಕೊಂಡು ‘ಸ್ಫೂರ್ತಿ’ ಎಂಬ ಕನಸಿನ ಕನ್ಯೆಯ ಉಲ್ಲಾಸಭರಿತ ಕಲ್ಪನೆಗಳಲ್ಲಿ ತನ್ನ ಬದುಕಿನ ಇತ್ತೀಚಿನ ದಿನಗಳು ಹೊಚ್ಚ ಹೊಸದಾಗಿ ನವೀಕತಗೊಳ್ಳತೊಡಗಿದ ಪವಾಡವನ್ನು ನೆನೆದು ಪುಳಕಗೊಳ್ಳತೊಡಗಿದ.
 ಒಂದರಿಂದ ಇನ್ನೊಂದಕ್ಕೆ ವ್ಯತ್ಯಾಸಗಳೇ ಇಲ್ಲದ ಎಂದಿನದೇ ನೋಟ, ಊಟ, ಹಗಲು, ರಾತ್ರಿಗಳು, ಈ ಜೀವನಕ್ಕೂ ಮರಣಕ್ಕೂ ಏನಂತಹ ಮಹಾ ವ್ಯತ್ಯಾಸವಿದೆ?’ ಪ್ರಶ್ನಿಸುವಂತೆ ಮಾಡಿದ ಪಾಪಣ್ಣನ ನಿರ್ಜೀವ ಬದುಕಿನಲ್ಲಿ ಹಗಲುಗಳು ಹೊಸದಾಗಿ ಹುಟ್ಟತೊಡಗಿದವು. ಕೊನೆಗೂ ಒಂದು ದಿನ ಅವನು ಕಾಯುತ್ತಿದ್ದ ಪತ್ರ ಅವನ ಕೈ ಸೇರಿತ್ತು ಒಡೆದು ಓದುವ ಧೈರ್ಯವಾಗದೆ ತುಂಬಾ ಹೊತ್ತು ಕಂಪಿಸುವ ಕೈಗಳಿಂದ ಅದನ್ನು ಹಿಡಿದು ದಿಟ್ಟಿಸಿದ್ದ. ಆದರೆ ಒಡೆದು ಓದಿದ್ದೇ ಉತ್ಸಾಹ ಜರ್ರನೇ ಇಳಿದು ಹೋಗಿತ್ತು.
ಬರೆದಿದ್ದಳವಳು: ‘‘ಸುಳ್ಳು ಅನ್ನೋದು ಕೂಡ ಇಷ್ಟು ಚಂದವಾಗಿರುತ್ತಾ ಎಂದು ಆಶ್ಚರ್ಯವಾಗಿರುತ್ತದೆ ಹುಡುಗಾ. ಯಾವ ಸಿನಿಮಾದಿಂದ ಕಲಿತೆಯೋ? ಅಲ್ಲ ಕಣೋ, ಅವೆಲ್ಲದರ ಬದಲು ‘ಹುಡುಗಿ, ನೀನು ನನ್ನ ಗೆಳತಿಯಾಗುವಿಯಾ?’’ಎಂದು ನೇರವಾಗಿ ಕೇಳಿದ್ದರೆ ಕೆಲಸಗಳೆಲ್ಲಾ ಎಷ್ಟು ಸುಲಭವಾಗಿರುತ್ತಿತ್ತು! ನೀನು ಹಾಗೆಲ್ಲ ‘ಕಲರ್‌ಫುಲ್’ ಆಗಿ ಬರೆದ ತಕ್ಷಣ ಹುಡುಗಿ ‘ಔಟ್’ ಅಂದುಕೊಂಡೆಯಾ...? ನೀವು ಗಂಡಸರು ಇಂತಹದನ್ನೇ ಅಸ್ತ್ರವಾಗಿಟ್ಟುಕೊಂಡು ನಮ್ಮ ಶೋಷಣೆ ಮಾಡುತ್ತಾ ಬಂದಿದ್ದೀರಲ್ಲ? ನಿನ್ನ ‘ಕನಸಿನಾಟ’ಎಲ್ಲಾ ನನ್ನಲ್ಲಿ ನಡೆಯುವುದಿಲ್ಲ ಜೋಕೆ!’’
 ಪಾಪಣ್ಣ ಆ ದಿನ ಇಡೀ ಚೈತನ್ಯವೇ ಬತ್ತಿ ಹೋದವನಂತಿದ್ದ. ಈ ಪವಾಡದಂತಹ ಸತ್ಯವನ್ನು ಅವಳು ನಂಬಲಿಲ್ಲ ಎನ್ನುವುದಕ್ಕಿಂತಲೂ, ತಾನು ಕೀಳುಮಟ್ಟದ ಕ್ರಿಯೆಗಳಿಗೆ ಇಳಿಯುವಂಥವನು ಎಂದು ತೀರ್ಮಾನಿಸಿದಳಲ್ಲ ಎಂಬುದು ಅವನ ಸಂಕಟವನ್ನು ಹೆಚ್ಚಿಸಿತು. ತಾನು ಅಷ್ಟೊಂದು ಕಾತರದಿಂದ ಕಾದ ಪತ್ರ ನೀಡಿದ ಬೇಜಾರನ್ನು ತಾಳಿಕೊಳ್ಳಲಾಗದೇ ಪಾಪಣ್ಣ ನೆಮ್ಮದಿಗೆಟ್ಟು ನರಳಿದ್ದ. ಅವಳಿಗೆ ಸತ್ಯವನ್ನು ಇದ್ದಂತೆಯೇ ಮನವರಿಕೆ ಮಾಡುವ ದಾರಿಗಳು ತೋಚದೇ ಹಾಳೆ, ಪೆನ್ನು, ತೆಗೆದು ತನ್ನ ಅಶಾಂತ ಮನಸ್ಸಿನ ಬೇಗುದಿಯನ್ನೆಲ್ಲಾ ಲಗಾಮಿಲ್ಲದೇ ಹರಿಯಬಿಟ್ಟ. ಡೈರಿಯ ಪುಟ ತಿರುವಿ ಆ ವಿಲಕ್ಷಣ ಕನಸಿನ ಕುರಿತು ಬರೆದಿದ್ದ ಪುಟವನ್ನು ಹರಿದು ಜೊತೆಗಿಟ್ಟು ಅವಳಿಗೆ ಕಳಿಸಿದ್ದ.
ಬಯಕೆ ಮತ್ತೆ ಚಿಗುರಿತ್ತು. ಬೆಳಗ್ಗೆ ಆಫೀಸು ಮುಟ್ಟುವ ಹೊತ್ತಿಗೆ ಮತ್ತೆ ಅವನ ಮನಸ್ಸಿನ ರಾಗಗಳಿಗೆ ತಕ್ಕಂತೆ ಹದಯ ತಾಳ ಬಡಿಯತೊಡಗಿದವು. ಕಾಯುವುದು ಮತ್ತೆ ತೊಡಗಿತ್ತು. ಜೊತೆಗೆ ಆಶೆ-ನಿರಾಶೆ, ಕಾತರ-ದುಗುಡ ಇತ್ಯಾದಿ ಇತ್ಯಾದಿಗಳು...
   ಪಾಪಣ್ಣನ ವಿವರಣೆಗಳನ್ನು ಅವಳು ನಂಬಿದಳೋ, ಬಿಟ್ಟಳೋ ಅಲ್ಲಿಂದ ಅವನ ಮತ್ತು ಅವಳ ನಡುವೆ ಓಡಾಡತೊಡಗಿದ ಪತ್ರಗಳು ನಿಮಿತ್ತವನ್ನೇ ಮರೆತು ತಮಗೆ ಅರಿವೇ ಇಲ್ಲದಂತಹ ನಿಶ್ಚಿತ ಒಪ್ಪಂದವನ್ನೂ, ಕರಾರುಗಳನ್ನೂ ಹಾಕಿಕೊಂಡವು. ಆ ನಿಯಮಿತವಾದ ಪತ್ರಗಳಿಲ್ಲದಿದ್ದರೆ ತಾನು ಬದುಕಿನ ಕೊಂಡಿಯಿಂದಲೇ ಕಳಚಿಕೊಳ್ಳುತ್ತಿರುವೆನೇನೋ ಎಂಬಂತಹ ಗಾಬರಿಗಳು ಅವನಲ್ಲಿ ಹುಟ್ಟುತ್ತಿದ್ದವು. ಬದುಕಿನ ಶೂನ್ಯತೆಯನ್ನೆಲ್ಲಾ ಆ ಪತ್ರಗಳು ತುಂಬ ತೊಡಗಿದಾಗ, ಅವುಗಳಿಗಾಗಿ ಕಾಯುತ್ತಾ ಕೂಡುವುದು ಪರಮ ಸುಖದ ಕೆಲಸವೆನಿಸಿ ಕೊನೆಗೆ ಆ ಪತ್ರಗಳಿಲ್ಲದೇ ತಾನು ಬದುಕಲಾರೆನೆಂಬುದನ್ನೂ ಕೂಡ ಆತ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಇಷ್ಟಾದರೂ ಅವನಿಗಿನ್ನೂ ಬಗೆಹರಿದಿರದ ಪ್ರಶ್ನೆಯೊಂದಿದೆ: ತನ್ನ ಜೀವನದುದ್ದಕ್ಕೂ ಪ್ರೀತಿಸಿದ ಹುಡುಗಿಯರೆಲ್ಲರಲ್ಲೂ ನಾಲ್ಕೇ ದಿನಕ್ಕೆ ನಿರಾಸಕ್ತನಾಗುತ್ತಿದ್ದ ತನ್ನನ್ನು ‘ಸ್ಫೂರ್ತಿ’ ಎಂಬ ಕಂಡು ಕೇಳರಿಯದ ಹುಡುಗಿ ಜೀವದುದ್ದಕ್ಕೂ ಕಲಕುತ್ತಿರುವ ಬಗೆ ಹೇಗೆ...?
ಪಾಪಣ್ಣನ ಯೋಚನೆಗಳೆಲ್ಲಾ ಹೀಗೆ ಸಾಗಿ ತುಂಬಾ ಹೊತ್ತು ಜಾರಿರುವುದು ಅವನ ಗಮನಕ್ಕೆ ಬಂದು ತಾನಿಲ್ಲಿಂದ ಇನ್ನೂ ಕದಲದಿರುವ ಬಗ್ಗೆ ಅನುಮಾನ ಮೂಡಿತು. ‘ಭಯಪೀಡಿತ ಮನಸ್ಸು ತಾನಿಲ್ಲಿಂದ ಕದಲದಂತೆ ಪಿತೂರಿ ಹೂಡಿದೆ’ ಎಂದು ಹೊಳೆದ ಬೆನ್ನಿಗೇ ಇದು ದೊಡ್ಡ ಅವಮಾನದಂತೆ ಕಂಡು ಎದ್ದು ಹೊರಟದ್ದಕ್ಕೂ, ಅವನನ್ನೇ ಆಸೆಗಣ್ಣಾಗಿ ನೋಡುತ್ತಿದ್ದ ಲಾಟರಿ ಹುಡುಗನೊಬ್ಬ ಲಾಟರಿ ಕೊಳ್ಳುವಂತೆ ಪೀಡಿಸುವುದಕ್ಕೂ ಸರಿಯಾಯಿತು.
‘‘ಸರಿ, ಐವತ್ತು ಪೈಸೆ ಮಿನಿ ಕೊಡಯ್ಯ’’ಅವನಿಂದ ತಪ್ಪಿಸಿಕೊಳ್ಳುವ ಕಡೆಯ ಮಾರ್ಗವೆಂಬಂತೆ ಅಂದ.
‘‘ಮಿನಿ ಯಾಕೆ ಸಾರ್? ಲಕ್ಷದ್ದು ತಗೊಳ್ಳಿ. ಬರೇ ಎರಡು ರೂಪಾಯಿಗೆ ಒಂದು ಲಕ್ಷ.’’

‘‘ನಿನ್ನ ಲಕ್ಷ ತಗೊಂಡು ಹೋಗಿ ಬಾವಿಗಾಕಯ್ಯ’’ಎಂದು ರೇಗಿದ ಪಾಪಣ್ಣ ಒಂದು ಮಿನಿ ಕೊಂಡು ಜೇಬಿಗಿಳಿಸಿದ. ಸುಮ್ಮನೇ ಫಲಿತಾಂಶಕ್ಕೆ ಕಾಯುವ ‘ಥ್ರಿಲ್’ಗಾಗಿಯಾದರೂ ಇರಲಿಯೆಂದು. ಬಹುಶಃ ಕಾಯುವ ‘ಥ್ರಿಲ್’ಬಂಪರ್ ಪ್ರೈಸ್ ಬಂದಾಗಲೂ ಸಿಗಲಾರದಲ್ಲವೇ ಅಂದುಕೊಂಡ. ಸ್ಫೂರ್ತಿ ಎಂಬ ಕನಸಿನ ಹುಡುಗಿಯ ಪತ್ರಗಳಿಗೆ ಕಾದ, ಹಾಗೆ ಪತ್ರಕ್ಕೆ ಕಾಯುವ ಸುಖ, ಬಿಚ್ಚಿ ಓದು ಓದುತ್ತಾ ಹೋದಂತೇ ತಣ್ಣಗಾಗಿಬಿಡುತ್ತದೆ. ಹಾತೊರೆದು ಕಾದದ್ದನ್ನು ಪಡೆದಾಗ ‘ಇಷ್ಟೆನಾ’ಎಂದೆನಿಸಿ ಬಿಡುತ್ತದೆ. ‘ಮುಂದಕ್ಕೇನು’ ಎಂಬ ಶೂನ್ಯವೇ ಬಾಯಿ ತೆರೆದು ನುಂಗಲು ಬರುತ್ತದೆ. ನಿಧಾನಕ್ಕೆ ಪಾರ್ಕ್ ಕಡೆ ಹೆಜ್ಜೆ ಹಾಕತೊಡಗಿದ ಪಾಪಣ್ಣನಿಗೆ ಹತ್ತಿರ ಬಂದು ನೋಡುತ್ತಿದ್ದಂತೆಯೇ ಏಕಾಏಕೀ ಎದೆ ‘ಧಡ್’ ಎಂದಿತು. ಪೇಪರು ಓದುತ್ತಾ ಕೂತಿದ್ದ ಮುದುಕ ಅಲ್ಲಿರಲಿಲ್ಲ! ಯಾರೋ ಒಬ್ಬಳು ತರುಣಿ ಯಾರಿಗೋ ಕಾಯುತ್ತಿರುವಂತೆ ಕುಳಿತಿದ್ದಾಳೆ!! ಪಾಪಣ್ಣ ತಟ್ಟನೆ ನಾಲ್ಕು ಹೆಜ್ಜೆ ಹಿಂದೆ ಸರಿದು ಮರವೊಂದರ ಮರೆಗೆ ನಿಂತು ಹುಡುಗಿಯನ್ನು ಗಮನಿಸತೊಡಗಿದ. ಅವನಿಗೆ ಅನುಮಾನ ಪಡುವುದಕ್ಕೇನೂ ಉಳಿಯಲಿಲ್ಲ. ಅವನಿಗಾದ ಉದ್ರೇಕದಲ್ಲಿ ಅನಿಯಂತ್ರಿತ ಎದೆ ‘ಡಬ್...ಡಬ್..’ಎಂದು ಒಂದೇ ಸಮನೆ ಹೊಡೆಯ ತೊಡಗಿದ್ದೂ ಅರಿವಿಗೆ ಬರಲಿಲ್ಲ. ಪಾಪಣ್ಣ ತೆಳುವಾಗಿ ಬೆವರತೊಡಗಿದ. ತಾನೀಗ ಅವಳೊಡನೆ ಮಾತಾಡಬೇಕಾದ ಮೊತ್ತ ಮೊದಲ ಮಾತೇನು ಎಂಬುದು ಸದ್ಯದ ಗಂಭೀರ ಸಮಸ್ಯೆಯಾಗಿ ಕಂಡು ಬಂದು, ಇಷ್ಟು ಹೊತ್ತು ತಾನಿಲ್ಲಿ ಕೂತು ಅದನ್ನು ಯೋಚನೆಯೇ ಮಾಡದೇ ಇದ್ದುದಕ್ಕೆ ತನ್ನನ್ನೇ ಹಳಿದುಕೊಂಡ. ಕರವಸ್ತ್ರ ತೆಗೆದು ಬೆವರನ್ನು ಒರೆಸಿಕೊಳ್ಳುತ್ತಾ ಸುಧಾರಿಸಿಕೊಂಡ ಪಾಪಣ್ಣ.
ಮೆಲ್ಲನೇ ಮರೆಯಿಂದ ಹೊರಬಿದ್ದು, ಮುಖದಲ್ಲಿ ಪ್ರಸನ್ನತೆಯನ್ನು ತರುವ ಪ್ರಯತ್ನ ಮಾಡುತ್ತಾ, ಸಿಮೆಂಟು ಬೆಂಚಲ್ಲಿ ಕುಳಿತ ಹುಡುಗಿಯ ಬಳಿ ಬಂದ ಪಾಪಣ್ಣ ಬಾಗಿ ‘‘ಹಲೋ.ನೀವು... ನೀವು.. ಸ್ಫೂರ್ತಿ ಅಲ್ಲವೇ..?’’ಎಂದು ಪ್ರಶ್ನಿಸಿದ.
ಹುಡುಗಿ ಧಡಕ್ಕನೆ ಎದ್ದು ನಿಂತಳು. ಅವಳ ಕಣ್ಣುಗಳಲ್ಲಿ ವಿಸ್ಮಯ ಚಿಮ್ಮಿತ್ತು. ‘ಸ್ಫೂರ್ತಿ..?’ ಯಾವ ಸ್ಫೂರ್ತಿ..’’
 ಕಪಾಳಕ್ಕೆ ಏಟು ಬಿದ್ದವನಂತೆ ಪಾಪಣ್ಣ ಒದ್ದಾಡಿದ. ತನಗೂ ಕೇಳಿಸದಂತೆ ಗೊಣಗತೊಡಗಿದ: ‘‘ಸ್ಫೂರ್ತಿ..ಸ್ಫೂರ್ತಿ..’’
ಪಾಪಣ್ಣನನ್ನು ವಿಚಿತ್ರವಾಗಿ ದಿಟ್ಟಿಸುತ್ತಾ ಹುಡುಗಿ ಅಲ್ಲಿಂದೆದ್ದು ನಡೆದಳು. ತನಗಾದ ಶಾಕ್‌ನಿಂದ ನಿಧಾನಕ್ಕೆ ಚೇತರಿಸಿಕೊಂಡ ಪಾಪಣ್ಣ ‘‘ಛೇ! ತನ್ನಂತೆ ಯಾರಿಗೋ ಕಾಯುತ್ತಿದ್ದವಳೋ ಏನೋ? ಕರೆದು ನಿಜ ವಿಷಯ ಹೇಳಲೇ’’ ಅಂದುಕೊಂಡ. ಆದರೆ ಪಾಪಣ್ಣನನ್ನು ಒಂದು ವಿಧದ ಸುಸ್ತು ಆವರಿಸಿತು. ಕಣ್ಣು ಕತ್ತಲು ಬಂದವನಂತೆ ಬೆಂಚಿನ ಮೇಲೆ ಕುಸಿದ.
 ಯಾಕೋ ನಾಲ್ಕೆೃದು ವರ್ಷಗಳ ಹಿಂದಿನ ‘ಪಡ್ಡೆ’ದಿನಗಳ ನೆನಪುಗಳು ತೇಲಿ ತೇಲಿ ಬಂದವು. ದಿನಕ್ಕೊಂದು ಹುಡುಗಿಯ ಬೆನ್ನು ಹತ್ತಿ ನಾಲ್ಕೆ ದಿನಕ್ಕೆ ಹೋದಷ್ಟೇ ವೇಗದಲ್ಲಿ ತಿರುಗಿ ಬಂದು ಮೂಲೆ ಹಿಡಿದು ಕೂರುತ್ತಿದ್ದ ದಿನಗಳು! ಪಾಪಣ್ಣನ ಸಮಸ್ಯೆಯ ಅರಿವಿದ್ದ ಗೆಳೆಯರೆಲ್ಲಾ ಸೇರಿ ಸಮಾಧಾನಿಸುತ್ತಿದ್ದರು.
‘‘ಪ್ರೆಸಿಲ್ಲಾ ಇವತ್ತು ಏನಂದಳೋ ಪಾಪಣ್ಣ..’’
‘‘ಯಾವ ಪ್ರೆಸಿಲ್ಲಾ..?’’
‘‘ಅದೇ ನಿನ್ನ ಹೊಸ ಪಾರ್ಟ್‌ನರ್’’
‘‘ಏ, ಅವಳನ್ನು ನಾ ಒಲ್ಲೆ ಕಣ್ರೋ..?’’
‘‘ಯಾಕೋ ಪಾಪಣ್ಣ, ಅಷ್ಟು ಚಂದವಿದ್ದಾಳೆ..’’
‘‘ಅವಳಿಗೆ ಮುಖದಲ್ಲಿ ಮೀಸೆ ಮೊಳಿತಿದೆ. ನಾನವಳನ್ನೊಲ್ಲೆ’’
‘‘ಸರಿ ಬಿಡು, ಆ ರಾಗಿಣಿ ಸಂಗತಿ ಏನಾಯ್ತು..?’’
‘‘ಓ ಅದಾ? ದೂರದ ಬೆಟ್ಟ ನುಣ್ಣಗೆ. ಮುಖ ತುಂಬಾ ಮೊಡವೆ ಕಲೆ...’’ಈ ತರಹವಾಗಿಯೆಲ್ಲಾ ಚಂಡಿ ಹಿಡಿಯುತ್ತಿದ್ದ ಪಾಪಣ್ಣ ಮಂಡಿಯೂರಿ ಬೊಗಸೆಯೊಡ್ಡಿದ್ದು ವೀಣಾ ಎಂಬ ಹುಡುಗಿಯೊಬ್ಬಳಿಗೇ. ‘ತನ್ನ ಪ್ರೇಮವೇನಿದ್ದರೂ ನಾಲ್ಕು ಸಲ ನೋಡಿ, ನಕ್ಕು, ಮಾತಾಡಿ,ಮುಟ್ಟಿ-ತಟ್ಟುವುದರೊಳಗೇ ಮುಗಿದು ಹೋಗುತ್ತದೆ. ಕೊರಗಿ ಕರಗಿ ಗಳಿಸಿಕೊಂಡ ವೀಣಾ ಎಂಬ ಹುಡುಗಿಯನ್ನೂ ಉಳಿಸಿಕೊಳ್ಳುವುದು ತನ್ನಿಂದಾಗಲಿಲ್ಲ’ ಎಂದು ಪಾಪಣ್ಣ ವಿಷಾದಭರಿತನಾಗಿ ಯೋಚಿಸಿದ.
ಇದ್ದಕ್ಕಿದ್ದಂತೇ ಅವನಲ್ಲಿ ಉದ್ಭವಿಸಿದ ಮೈ ನಡುಗಿಸುವಂತಹ, ಭಯಾನಕ ಆಲೋಚನೆಯೊಂದು ಅವನಿಗರಿವೇ ಇಲ್ಲದ ಸಂಗತಿಯನ್ನು ನಿಚ್ಚಳಗೊಳಿಸುತ್ತಾ ಹೊಸ ಅರ್ಥಗಳನ್ನು ಹೊಳೆಯಿಸತೊಡಗಿತು.
‘‘ಈ ಕಾಯುವಿಕೆಯ ಹಿಂದೆ ಇರುವುದೆಲ್ಲಾ ಯಃಕಶ್ಚಿತ್ ಕುತೂಹಲ ಬಿಟ್ಟು ಬೇರೇನೂ ಆಗಿರದಿದ್ದರೆ...?’’ ಈ ಯೋಚನೆ ಮೂಡಿದ್ದೇ ಪಾಪಣ್ಣ ಧಿಗ್ಗನೆದ್ದು ನಿಂತ. ಕಣ್ಣಿನೆದುರು ವೀಣಾ, ಪ್ರೆಸಿಲ್ಲಾ, ರಾಗಿಣಿಯರ ಚಿತ್ರಗಳು ಮೂಡಿ ನಿಂತವು.
ಅವನ ಮನಸ್ಸು ಒಂದೇ ಸಮನೆ ಮೊರೆಯಿಡತೊಡಗಿತು. ‘‘ಅವಳು ಬಾರದಿರಲಿ..ಅವಳು ಬಾರದಿರಲಿ..’’ಅಷ್ಟರಲ್ಲಿ ಪಾರ್ಕಿನ ಗೇಟ್ ಬಳಿ ಆಟೋ ರಿಕ್ಷಾವೊಂದರಿಂದ ತರುಣಿಯೋರ್ವಳು ಇಳಿಯುತ್ತಿರುವ ಕುರುಹುಗಳನ್ನು ಕಂಡ ಸುರೇಂದ್ರ ಯಾನೇ ಪಾಪಣ್ಣ ತಿರುಗಿ ನೋಡದೆ ಓಡತೊಡಗಿದ.

No comments:

Post a Comment