Sunday, October 28, 2012

ನನ್ನ ದೊರೆಯ ನೀನೇನು ಬಲ್ಲೆ?

ಭವ್ಯ ಮಸೀದಿಯ ಹೊಳೆವ
ನೆಲದಲ್ಲಿ ಅವನು ಜಪಮಣಿ
ತಿರುಗಿಸುತ್ತಿದ್ದ...

ಮೀನು ಮಾರುವ ಅಬ್ಬು ಕಾಕ
ನನ್ನ ದೊರೆಯ ಜಪಿಸುತ್ತ
ಹಳೆಯ ಸೈಕಲನ್ನು
ಸುಡು ಬಿಸಿಲಲ್ಲಿ ತಿರುಗಿಸುತ್ತಿದ್ದ

ಅದೋ ನೋಡಿ...
ಮಸೀದಿಯಾ ಹೊಳೆವ ನೆಲದಲ್ಲಿ
ಆತನ ಜಪ ಮಣಿ ಸರ ಹರಿದು
ಚೆಲ್ಲಾಪಿಲ್ಲಿಯಾಗಿವೆ...

ಅಬ್ಬೂ ಕಾಕನ
ಜೊತೆಗೆ ಆತನ ಹಳೆಯ ಸೈಕಲು
ನನ್ನ ದೊರೆಯ ಸ್ವರ್ಗದಲ್ಲಿ
ಅತ್ಯುನ್ನತ ಸ್ಥಾನ ಪಡೆದಿದೆ....

2
ವಿದ್ಯುತ್ ಕೈ ಕೊಟ್ಟಿತ್ತು
ಮುಂಜಾನೆಯ ಅಜಾನ್ ಕರೆ
ಮಸೀದಿಯ ನಾಲ್ಕು ಗೋಡೆಯನ್ನು
ದಾಟಲಿಲ್ಲ....
ಹಕ್ಕಿಗಳ ಚಿಲಿಪಿಲಿ ಕರೆ
ನನ್ನನ್ನು ತಟ್ಟಿ ಎಬ್ಬಿಸಿತು

ಎಂದೂ ಇಲ್ಲದ
ಉತ್ಸಾಹದಿಂದ ಅಂದು
ನನ್ನ ದೊರೆಗೆ ಬಾಗಿದೆ!

3
ನನ್ನ ಮುಂದಿದ್ದ ಕಲ್ಲು ವಿಗ್ರಹಗಳನ್ನು
ಎಂದೋ ಮುರಿದು ಮುಂದೆ ಬಂದಿದ್ದೇನೆ
ಆದರೆ ಇದೀಗ...
ಏಕದೇವನ ಮುಂದೆ
ಪಾಲುದಾರಿಕೆಯನ್ನು ಬೇಡುತ್ತಿರುವ
ಶಬ್ದ, ಅಕ್ಷರಗಳ ವಿಗ್ರಹಗಳನ್ನು
ಮುರಿದು ಮುಂದೆ ಹೋಗಬೇಕಾಗಿದೆ
ಅದು ನನ್ನಿಂದ ಸಾಧ್ಯವಿದೆಯೆ?

4
ನಮಾಜಿಗೆ ಮುನ್ನ ಶುದ್ಧಿಯಾಗಲೆಂದು
ಮಸೀದಿಯ ಕೊಳದೆಡೆಗೆ
ನಡೆದೆ...
ಕೊಳದ ನೀರು ನನ್ನ
ನಮಾಜಿನ ಚಾಪೆಯ
ಕೊಳೆಯನ್ನು ಕಳೆಯಲೂ
ಸಾಕಾಗಲಿಲ್ಲ ದೊರೆಯೇ?

ಇನ್ನು ನನ್ನ ಅಶುದ್ಧಿಯನ್ನು
ಯಾವ ಕೊಳದಲ್ಲಿ ತೊಳೆಯಲಿ?
ನಿನ್ನ ನರಕದ ಬೆಂಕಿ ಮಾತ್ರ
ನನ್ನ ಕೊಳೆಯನ್ನು ಸುಟ್ಟು
ನನ್ನನ್ನು ಶುದ್ಧಿಯಾಗಿಸೀತು....

5
ಪಂಡಿತರು ಹೇಳಿದರು
ನಮಾಜಿಗೆ ನಿಂತ ನಿನ್ನ ಮುಖದ
ದಿಕ್ಕು ಕಾಬದೆಡೆಗಿರಲಿ!
ಪಂಡಿತರಿಗೆ ಗೊತ್ತಿರಲಿಲ್ಲ
ನನ್ನ ದೊರೆಯೇ....
ನಿಜವಾದ ಭಕ್ತನೊಬ್ಬ
ಮುಖ ಮಾಡಿದೆಡೆಗೆ
ಕಾಬಾ ತನ್ನ ದಿಕ್ಕನ್ನು
ಬದಲಿಸೂದು...

6
ನೀನು ನೂರಾರು ಪುಸ್ತಕಗಳನ್ನು
ಓದಿದ, ಕುರಾನ್ ಕಂಠ ಪಾಠ
ಮಾಡಿದ ಮಹಾ ಪಂಡಿತ...
ನಾನು ಬಲ್ಲೆ
ಚರ್ಚೆಯಲ್ಲಿ ಬೇರೆ ಬೇರೆ
ಧರ್ಮಗಳ ನೇತಾರರನ್ನು
ಕ್ಷಣ ಮಾತ್ರದಲ್ಲಿ ಸೋಲಿಸಿದೆನೆನ್ನೂದು
ನಿನ್ನ ಹೆಗ್ಗಳಿಕೆ...

ಆದರೆ ನನ್ನ ದೊರೆಯನ್ನು ನೀನೇನು ಬಲ್ಲೆ?
ಪಂಡಿತರಲ್ಲಿ ಮಹಾ ಪಂಡಿತ ಆತ
ಹೇಳು, ನಿನ್ನ ಪಾಂಡಿತ್ಯದಿಂದ
ಆ ದೊರೆಯ ಸೋಲಿಸುವ ಧೈರ್ಯವಿದೆಯೆ?

ಒಂದಕ್ಷರ ಕಲಿಯದ
ಮಂತ್ರದ ಒಂದು ಸಾಲೂ ತಿಳಿಯದ
ಮೀನು ಮಾರಿ ಹೊಟ್ಟೆ ಹೊರೆವ
ಅಬ್ಬೂ ಕಾಕನ ಭಕ್ತಿಗೆ
ನನ್ನ ದೊರೆ
ಕ್ಷಣ ಮಾತ್ರದಲ್ಲಿ ಸೋತ....!!

5 comments:

  1. Basheer Bm Bm ಬರೆಯುವುದು ಇಸ್ಲಾಂ ಅಲ್ಲ ಗೆಳೆಯರೆ, ಇದು ತಮ್ಮ ಗಮನದಿರಲಿ...ಇಸ್ಲಾಂ ಏನೆಂಬ ಕುತೂಹಲವಿದ್ದಲ್ಲಿ ಸೃಷ್ಟಿಕರ್ತ ಮನುಷ್ಯನೆಂಬ ತನ್ನ ಅತ್ಯಂತ ಸಂಕೀರ್ಣ ಸೃಷ್ಟಿಯ ಸದ್ಗತಿಗಾಗಿಯೇ ಅಂತಿಮ ಪ್ರವಾದಿ ಮುಹಮ್ಮದರಿಗೆ ಜಿಬ್ರೀಲ್ (ಗೇಬ್ರಿಯೆಲ್) ಎಂಬ ದೇವಚರನ ಮುಖೇನ ಕರುಣಿಸಿದ ಕುರ್ ಆನ್ ಹಾಗೂ ಅಲ್ಲಾಹನ ಸೂಚನೆಯಂತೆ ಕಾಯಾ-ವಾಚಾ-ಮನಸಾ ಬದುಕಿದ, ಭೋಧಿಸಿದ, ಆಳಿದ, ನ್ಯಾಯದಾನಿಸಿದ, ವ್ಯವಹರಿಸದ ಅಂತಿಮ ಪ್ರವಾದಿಯವರ ಚರ್ಯೆಗಳ ಆಗರ ಹದೀಸುಗಳನ್ನು ಅಧ್ಯಯನ ಮಾಡಿ. ನಂತರ ಚರ್ಚೆಗಿಳಿಯುವುದು ಬುದ್ಧಿವಂತರ ಲಕ್ಷಣ, ಹಾಗಿಲ್ಲದಿದ್ದರೆ ಬಷೀರರ ಅಜ್ನ್ಗಾನದ ಗುಡ್ಡಕ್ಕೆ ನೀವುಗಳೂ ಸೇರಿ ಮಣ್ಣು ಹೊತ್ತಂತೆ ಮಾತ್ರ.

    ReplyDelete
  2. ಈ ಕವನದಲ್ಲಿ ಬಳಸಿರುವ ಭವ್ಯ ಮಸೀದಿ ಮತ್ತದರ ಹೊಳೆವ ನೆಲ, ಹಳೆಯ ಸೈಕಲ್,ಜಪಮಣಿ ಸರ, ವಿದ್ಯುತ್, ನಾಲ್ಕು ಗೋಡೆ, ಮಸೀದಿಯ ಕೊಳ ಮತ್ತದರ ನೀರು, ನಮಾಜಿನ ಚಾಪೆ ಮತ್ತದರ ಕೊಳೆ, ಪಂಡಿತ, ಪುಸ್ತಕಗಳು...ಇವೆಲ್ಲಾ ಪ್ರತಿಮೆಗಳನ್ನು ಮೀರಿದವನು ಅಲ್ಲಾಹ್, ಈ ಎಲ್ಲಾ ಪ್ರತಿಮೆಗಳನ್ನು ಕಾಲಕಾಲಕ್ಕೆ ಒಡೆಯುತ್ತಾ ಬಂದ ಅಲ್ಲಾಹ್ ಅಜಮಾಸು 1400 ವರ್ಷಗಳ ಹಿಂದೆ ಅಂತಿಮ ಪ್ರವಾದಿಗಳ ಮೂಲಕ ಸಂಪೂರ್ಣವಾಗಿ ಪುಡಿಯಾಗಿಸಿದ್ದಾನೆ..ಅಬೂ ಕಾಕಾನ ಭಕುತಿ ಅಬೂ ಕಾಕಾನಿಗೆ, ಪಂಡಿತನ ಭಕುತಿ ಪಂಡಿತನಿಗೆ, ಬಷೀರರ ಭಕುತಿ ಬಷೀರರಿಗೆ, ಆದರೆ ನಿರ್ಣಾಯಕವ್ಯಾವುದೆಂದರೆ ಇವರೆಲ್ಲರ ಪರಸ್ಪರ ಹೊಂದಾಣಿಕೆ, ಸಹ-ಜೀವನ, ತಾಳ್ಮೆ, ಮಿತಿಗಳು...ಅದೂ ಅಲ್ಲಾಹನ ನಿಯಮಗಳಿಗೊಳಪಟ್ಟು, ಅಲ್ಲಾಹನ ನೇರ ಪ್ರಶ್ನೆ
    ಆಯಾ ವ್ಯಕ್ತಿಯ ಜವಾಬುದಾರಿ...ಹಾಗೆಯೇ ಬಷೀರರ ಮೌಢ್ಯತೆ...

    ReplyDelete
  3. ಬಶೀರ್ ತಕ್ಕಮಟ್ಟಿಗೆ ಸ್ಥಾಪಿಥ ಧರ್ಮವೊಂದರಲ್ಲಿ ಇರುವ aberrationasಗಳು ಹಾಗೆಯೇ ಧರ್ಮವನ್ನು ಗುರಾಣಿಯಾಗಿಟ್ಟುಕೊಂಡಿರುವವರ ಲೋಕದೃಷ್ಟಿಯನ್ನು ಪ್ರಶ್ನಿಸುತ್ತಿದ್ದಾರೆ. ಅದಕ್ಕೆ puritan ಹಿತಾಸಕ್ತಿಗಳ ವಿರೋಧ ಬರುವುದು ಸಹಜ. ನನ್ನ ಪ್ರಕಾರ ರಸೂಲರು ಇಂತಿಷ್ಟೇ ತತ್ವಗಳ ಮುಖಾಂತರ ಧರ್ಮವೊಂದನ್ನು ಸ್ಥಾಪಿಸಿದಾಗ ಅಂದಿನ ಅರಬ್ ಸಾಮಜಿಕ ರಚನೆಯ ಸ್ಥಿತಿಗೆ ಅದು reflexive and rational ಪ್ರತಿಕ್ರಿಯೆಯಾಗಿತ್ತು. ಆದರೆ ಬದಲಾದ ಇಂದಿನ ದೇಶ ಕಾಲಕ್ಕೆ ಅವರು ಪ್ರತಿಪಾದಿಸಿದ ತತ್ವಗಳಲ್ಲಿ ಇರುವ ಪ್ರಗತಿಪರ ಅಂಶಗಳನ್ನು ಮತ್ತಷ್ಟು ವಿಶಾಲವಾಗಿ ರೂಪಿಸಬೇಕಾಗಿದೆ. ಇಸ್ಲಾಂನಲ್ಲಿ ಇಂದು ಮುಖ್ಯವಾಗಿ ಬದಲಾದ ಸಮಾಜಕ್ಕನುಗುಣವಾಗಿ ಮುಕ್ತತೆಯನ್ನು ತರಬೇಕಾಗಿದೆ. ಲಿಂಗ ಮತ್ತು ಇತರೆ ವಿಚಾರಗಳಿಗೆ ಸಂಬಂಧಿಸಿದಂತೆ ಕಾಠಿಣ್ಯತೆ ಇರುವ ನಿಯಮಗಳಿಗೆ ಆಧುನಿಕತೆ ಮತ್ತು ಮುಕ್ತತೆಯನ್ನು ತರಬೇಕಾಗಿದೆ. ನನಗೆ ಗೊತ್ತಿರುವ ಅಲ್ಪ ಜ್ನಾನದ ಪ್ರಕಾರ ಕುರಾನ ಹದೀಸ್ ಗಳಿಗಿಂತ ಪಾರಮ್ಯ ಮತ್ತು reliabla ಎಂದು ತಿಳಿದಿದ್ದೇನೆ...

    ReplyDelete
  4. "ಈ ಕವನದಲ್ಲಿ ಬಳಸಿರುವ ಭವ್ಯ ಮಸೀದಿ ಮತ್ತದರ ಹೊಳೆವ ನೆಲ, ಹಳೆಯ ಸೈಕಲ್,ಜಪಮಣಿ ಸರ, ವಿದ್ಯುತ್, ನಾಲ್ಕು ಗೋಡೆ, ಮಸೀದಿಯ ಕೊಳ ಮತ್ತದರ ನೀರು, ನಮಾಜಿನ ಚಾಪೆ ಮತ್ತದರ ಕೊಳೆ, ಪಂಡಿತ, ಪುಸ್ತಕಗಳು...ಇವೆಲ್ಲಾ ಪ್ರತಿಮೆಗಳನ್ನು ಮೀರಿದವನು ಅಲ್ಲಾಹ್,"
    Dada ಅವರೇ, ಇದನ್ನೇ, ನಿಮ್ಮ ಈ ಮಾತುಗಳನ್ನೇ ಬಷೀರ್ ಸಹ ತಮ್ಮ ಈ ಎಲ್ಲಾ ಕವನಗಳಲ್ಲಿ ಹೇಳಿದ್ದು. :)

    ReplyDelete
  5. ಪ್ರಿಯ ಬಶೀರ್,
    ಗುಜಿರಿ ಎನ್ನುವುದು ಭೂತಕಾಲದ್ದು. ಗುಜರ್ ಗಯಾ.
    ಆದನ್ನು ಬೀಳ್ಕೊಂಡು ವರ್ತಮಾನದಲ್ಲಿ ಬದುಕೋಣ.
    ಭವಿಷ್ಯ ನಮ್ಮದು.

    ReplyDelete