ನಿನ್ನೆ
 ಕನಸಿನಲ್ಲಿ ಮಿಲಿಟರಿ ಹೆಲಿಕಾಪ್ಟರ್‌ಗಳು ಮತ್ತು ತಾಲಿಬಾನಿಗಳು ಬಂದಿದ್ದರು. ನಮ್ಮ 
ಸ್ವಾತ್ ಜಿಲ್ಲೆಯಲ್ಲಿ ಸೈನಿಕ ಕಾರ್ಯಾಚರಣೆ ಶುರುವಾದಂದಿನಿಂದ ಈ ರೀತಿಯ ದುಃಸ್ವಪ್ನಗಳು 
ಮಾಮೂಲಾಗಿವೆ.
-ಮಲಾಲಾ ಯೂಸುಫ್ ಝಾಯಿ ಡೈರಿಯಲ್ಲಿ ಬರೆದ ಸಾಲುಗಳು. 
***
‘‘ಈ ಘಟನೆ ನನಗೆ ಅಳು ತರಿಸಿತು’’
-ಪಾಪ್ ತಾರೆ ಮಡೋನ್ನಾ, ಮಲಾಲಾ ಮೇಲೆ ನಡೆದ ಹಲ್ಲೆಗೆ ಪ್ರತಿಕ್ರಿಯಿಸುತ್ತಾ.
***
‘‘ಹೌದು, ಇದನ್ನು ನಾವು ಸಮರ್ಥನೀಯ ಎಂದೇ ಭಾವಿಸಿದ್ದೇವೆ’’
-ಮೆಡಲಿನ್
 ಆಲ್‌ಬ್ರೈಟ್, ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ, ವಿಶ್ವ ನ್ಯಾಯ ಯೋಜನೆಯ 
ಗೌರವಾಧ್ಯಕ್ಷೆ (ಇರಾಕ್‌ನಲ್ಲಿ ದಿಗ್ಬಂಧನದಿಂದಾಗಿ ಲಕ್ಷಾಂತರ ಮಕ್ಕಳು ಸತ್ತಾಗ, 
ಪ್ರತಿಕ್ರಿಯೆ)
***
14 
ವರ್ಷದ ಒಂದು ಹೆಣ್ಣು ಮಗುವಿನ ಮೇಲೆ ಗುಂಡಿನ ದಾಳಿಯನ್ನು ಯಾರೇ ಮಾಡಿರಲಿ, ಯಾವ 
ಕಾರಣಕ್ಕೇ ಮಾಡಿರಲಿ ಅದು ಬರ್ಬರ, ಅಮಾನವೀಯ. ಅದನ್ನು ಬರ್ಬರ ಎಂದು ಕರೆಯುವುದಕ್ಕೆ 
ಹಿಂದೆ ಮುಂದೆ ನೋಡುವ ಸಮಾಜವನ್ನು ನಾಗರಿಕ ಸಮಾಜ ಅಥವಾ ಮನುಷ್ಯರಿರುವ ಸಮಾಜ ಎಂದು 
ಕರೆಯುವುದು ಅಸಾಧ್ಯ. ಪಾಕಿಸ್ತಾನದಲ್ಲಿ ಮಲಾಲಾ ಎಂಬ ಪುಟ್ಟ ಮಗುವಿನ ಮೇಲೆ 
ದುಷ್ಕರ್ಮಿಗಳು ಗುಂಡೆಸೆದಿದ್ದಾರೆ. ಜಗತ್ತಿನಾದ್ಯಂತ ಸಹಜವಾಗಿಯೇ ಖಂಡನೆ, ಆಕ್ರೋಶಗಳು 
ವ್ಯಕ್ತವಾಗುತ್ತಿವೆ. ಗುಂಡೆಸೆದವರು ಯಾವ ಕಾರಣಕ್ಕೆ ಗುಂಡೆಸೆದರು, ಅವರು ಯಾವ 
ಸಂಘಟನೆಯವರು ಇತ್ಯಾದಿಗಳೆಲ್ಲ ಅನಂತರದ ವಿಷಯ. ಮೊತ್ತ ಮೊದಲು ನಾವು ಆ ದಾಳಿಯನ್ನು 
ಖಂಡಿಸಬೇಕಾಗುತ್ತದೆ. ಯಾಕೆಂದರೆ ನಮ್ಮನ್ನು ನಾವು ಮನುಷ್ಯರು ಎಂದು ಈ ಜಗತ್ತಿನಲ್ಲಿ 
ಕರೆದುಕೊಳ್ಳುತ್ತಿದ್ದೇವೆ.
ಮಲಾಲಾ 
ಯೂಸುಫ್ ಝಾಯಿ ಶಾಲೆ ಕಲಿಯುವುದಕ್ಕೆ ಬಯಸಿದ್ದಳು. ಮತ್ತು ಆಕೆ ತನ್ನ ಭಾವನೆಗಳನ್ನು 
ಡೈರಿಯಲ್ಲಿ ತೆರೆದಿಟ್ಟಳು. ಅದು ಮಾಧ್ಯಮದ ಮೂಲಕ ಕಾವ್ಯನಾಮದಲ್ಲಿ ಪ್ರಕಟವಾಯಿತು. ಬಳಿಕ 
ಆಕೆ ಪಾಕಿಸ್ತಾನಾದ್ಯಂತ ಸುದ್ದಿಯಾದಳು. ತನಗೆ ಎಂತಹ ಪಾಕಿಸ್ತಾನ ಬೇಕು ಎನ್ನುವುದರ 
ಕುರಿತಂತೆ ತನ್ನ ಕನಸುಗಳನ್ನು ಆಕೆ ತೆರೆದಿಟ್ಟಳು. ಅಷ್ಟೇ ಅಲ್ಲ, ವಯಸ್ಸಿಗೆ ಮೀರಿದ 
ಗೌರವವನ್ನು ಮಾಧ್ಯಮಗಳು ಮತ್ತು ಪಾಶ್ಚಿಮಾತ್ಯ ಸಂಘಸಂಸ್ಥೆಗಳು ನೀಡಿದವು. ಹತ್ತು ಹಲವು 
ಪ್ರಶಸ್ತಿಗಳು ಆಕೆಯನ್ನು ಅರಸಿಬಂದವು.ಇದೀಗ 
ಏಕಾಏಕಿ ಈಕೆಯ ಮೇಲೆ ಗುಂಡಿನ ದಾಳಿ ನಡೆದಿದ್ದು ಇಡೀ ವಿಶ್ವವೇ ಈ ಹೇಯ ಘಟನೆಗೆ ಮರುಗಿದೆ.
 ಈ ದಾಳಿಯನ್ನು ತಾಲಿಬಾನಿಗಳು ನಡೆಸಿದರು ಎನ್ನುವುದು ಸದ್ಯಕ್ಕೆ ನಾವು ತಿಳಿದುಕೊಂಡಿರುವ
 ಮಾಹಿತಿ. ಅದು ನಿಜವಾದರೂ, ಸುಳ್ಳಾದರೂ, ದಾಳಿಯಂತೂ ಬರ್ಬರವೆ. ಪಾಶ್ಚಿಮಾತ್ಯ ದೇಶಗಳೂ 
ಸೇರಿದಂತೆ ವಿಶ್ವದ ಎಲ್ಲ ಮಾನವ ಹಕ್ಕು ಹೋರಾಟಗಾರರು ಮೊದಲ ಬಾರಿಗೆ ದೊಡ್ಡ ದನಿಯಲ್ಲಿ 
ಬಾಲಕಿಯೊಬ್ಬಳ ಸಾವಿನ ಕುರಿತಂತೆ ಮರುಕ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ 
ಅಭಿನಂದನೀಯ. ತನ್ನ ಸಂಗೀತ ಜಗತ್ತಿನಲ್ಲಿ ತೇಲಾಡುತ್ತಿರುವ ಮಡೋನ್ನಾ ಮೊದಲ ಬಾರಿಗೆ 
ಭೂಮಿಗಿಳಿದು
 ಮಲಾಲಾಳಿಗಾಗಿ ಕಣ್ಣೀರನ್ನು ಹನಿಸಿದ್ದಾರೆ.ಅಷ್ಟೇ ಅಲ್ಲ, ತನ್ನ ಹಾಡೊಂದನ್ನು 
ಮಲಾಲಾಳಿಗಾಗಿ ಅರ್ಪಿಸಿದ್ದಾರೆ. ‘‘ಈ ಘಟನೆ ನನ್ನಲ್ಲಿ ಅಳು ತರಿಸಿತು. ಶಾಲೆಗೆ ಹೋಗುವ 
ಕುರಿತಂತೆ 14 ವರ್ಷದ ಶಾಲಾ ಬಾಲಕಿ ಬ್ಲಾಗ್ ಬರೆದಳು. ಬಾಲಕಿಯ ಬಸ್ಸನ್ನು ತಡೆದು 
ತಾಲಿಬಾನ್ ಆಕೆಗೆ ಗುಂಡು ಹಾರಿಸಿತು. ಇದು ಎಷ್ಟೊಂದು ಹೀನಾಯ ಎಂಬುದು ನಿಮಗೆ ಗೊತ್ತೆ?’’
 ಮಡೋನಾ ಹೇಳದಿದ್ದರೂ ಅದು ಹೀನಾಯವೆ. 
ಆದರೆ 
ಮಡೋನ್ನಾಳಂಥವರು ಕಣ್ಣೀರು ಸುರಿಸಬೇಕಾದರೆ, ತಮ್ಮ ಹಾಡುಗಳನ್ನು ಅರ್ಪಿಸಬೇಕಾದರೆ 
ಮಲಾಲಾಳಂತಹ ಪುಟಾಣಿಗಳು ಕೇವಲ ಗುಂಡಿನ ದಾಳಿಗೀಡಾದರಷ್ಟೇ ಸಾಕಾಗುವುದಿಲ್ಲ. ಆ 
ದಾಳಿಯನ್ನು ಯಾರು ಎಸಗಿದರು ಎಂಬುದೂ ಮುಖ್ಯವಾಗುತ್ತದೆ. ಯಾರಿಂದ ಆಕೆ ದಾಳಿಗೊಳಗಾದಳು 
ಎನ್ನುವುದು ಪಾಶ್ಚಿಮಾತ್ಯರ ಕಣ್ಣೀರನ್ನು, ದುಃಖವನ್ನು ಖಂಡನೆಯನ್ನು ನಿರ್ಧರಿಸುತ್ತದೆ.ಯಾಕೆಂದರೆ
 ಪಾಕಿಸ್ತಾನದಲ್ಲಿ ಮತ್ತು ಅಫ್ಘಾನಿಸ್ತಾನದಲ್ಲಿ ಮಲಾಲಾಳ ಮೇಲೆ ಗುಂಡಿನ ದಾಳಿ 
ನಡೆಯುತ್ತಿರುವುದು ಇದೇ ಮೊದಲೇನಲ್ಲ. ಅಫ್ಘಾನಿಸ್ತಾನದಲ್ಲಿ ಮತ್ತು ಪಾಕಿಸ್ತಾನದಲ್ಲಿ 
ಅಮೆರಿಕ ನಡೆಸುತ್ತಿರುವ ಡ್ರೋನ್ ದಾಳಿಯಲ್ಲಿ ನೂರಾರು ನಾಗರಿಕರು ಸಾಯುತ್ತಿದ್ದಾರೆ. 
ಅವರಲ್ಲಿ ಮಲಾಲಾಳಂತಹ ಶಾಲೆಗೆ ಹೋಗುವ ನೂರಾರು ಮಕ್ಕಳೂ ಸೇರಿದ್ದಾರೆ. ಇದು 
ಪಾಕಿಸ್ತಾನಕ್ಕೆ ಮಾತ್ರವಲ್ಲ, ಮಲಾಲಾಳಿಗಾಗಿ ಮರುಗಿದ ಯುನಿಸೆಫ್‌ಗೂಗೊತ್ತಿದೆ. ‘‘ಇಂದು 
ನಮ್ಮ ಯೋಚನೆಗಳು 14 ವರ್ಷದ ಬಾಲಕಿಯರ ಹಕ್ಕುಗಳ ಹೋರಾಟಗಾರ್ತಿಯರ ಜೊತೆಗಿದೆ’’ ಎಂದು 
ವಿಶ್ವಸಂಸ್ಥೆಯ ಅಂಗವಾದ ಯುನಿಸೆಫ್ ಹೇಳಿದೆ.ಅದು 
ನಿಜವೇ ಆಗಿದ್ದರೆ, ಪಾಕಿಸ್ತಾನದಲ್ಲಿ ಈವರೆಗೆ ಗುಂಡಿನ ದಾಳಿ ನಡೆದಿರುವುದು ಒಬ್ಬಳೇ 
ಒಬ್ಬಳು ಮಲಾಲಾಳ ಮೇಲೆಯೆ? ಅಂದರೆ ಈವರೆಗೆ ಪಾಕಿಸ್ತಾನದ, ಅಫ್ಘಾನಿಸ್ತಾನದಲ್ಲಿ ಡ್ರೋನ್ 
ದಾಳಿಗೆ ಮೃತಪಟ್ಟ ಮಕ್ಕಳ ಬರ್ಬರ ಸಾವನ್ನು ಯುನಿಸೆಫ್ ಸಮರ್ಥನೀಯ ಎಂದು 
ಹೇಳುತ್ತಿದ್ದೆಯೆ? ಈ ಸಾವಿನ ಕುರಿತಂತೆ ಮೌನ ವಹಿಸಿದ ಯುನಿಸೆಫ್‌ಗೆ ಮಲಾಲಾಳ ಸಾವಿನ 
ಕುರಿತಂತೆ ಹೇಳಿಕೆ ನೀಡುವ ನೈತಿಕತೆಯಿದೆಯೆ? ಇರಾಕ್‌ನಲ್ಲಿ ಇಂತಹ ಸಾವಿರಾರು ಮಲಾಲಾರು 
ಬರ್ಬರವಾಗಿ ಹತ್ಯೆಗೀಡಾದರು. ಮಗುವೊಂದು ಶಾಲೆಗೆ ಹೋಗಲು ಸಿದ್ಧವಾಗುತ್ತಿದ್ದ ಹಾಗೆಯೇ 
ನ್ಯಾಟೋ ಬಾಂಬುಗಳ ಮನೆಯ ಮುಂದೆರಗಿ, ಆ ವಿದ್ಯಾರ್ಥಿಯೂ ಸೇರಿದಂತೆ ಇಡೀ ಕುಟುಂಬ 
ಸರ್ವನಾಶವಾಯಿತು. 
ಇರಾನ್ 
ಮತ್ತು ಇರಾಕ್‌ನ ಮೇಲಿನ ದಿಗ್ಬಂಧನದಿಂದ ಅತಿ ಹೆಚ್ಚು ಮರಣ ಸಂಭವಿಸಿದ್ದು ಎಳೆ 
ಮಕ್ಕಳದ್ದು. ಅವರಲ್ಲಿ ಹೆಣ್ಣು ಮಕ್ಕಳೂ ಇದ್ದರು. ಇರಾಕ್ ಯುದ್ಧದಲ್ಲಿ ಅಮೆರಿಕ 
ದಾಳಿಯಿಂದ ಸತ್ತದ್ದು ಸದ್ದಾಂ ಮತ್ತು ಆತನ ಹಿಂಬಾಲಕರಲ್ಲ. ಸುಮಾರು 2 ಲಕ್ಷಕ್ಕೂ ಅಧಿಕ 
ನಾಗರಿಕರು. ಸಹಸ್ರಾರು ಮಕ್ಕಳ ಶಾಲೆಯ ಕನಸುಗಳೂ ಆ ದಾಳಿಯಲ್ಲಿ ಸರ್ವನಾಶವಾದವು. ಆ ಅಷ್ಟು
 ಮಕ್ಕಳಿಗೆ ಅರ್ಪಿಸಲು ಬೇಕಾಗುವಷ್ಟು ಹಾಡುಗಳು ಮಡೋನ್ನಾ ಬಳಿ ಇದೆಯೆ? ಅಫ್ಘಾನಿಸ್ತಾನದ 
ಕಾಬೂಲಿನಲ್ಲಿ ಅಡುಗೆಗಾಗಿ ಕಟ್ಟಿಗೆಗಳನ್ನು ಸಂಗ್ರಹಿಸುತ್ತಿದ್ದ ಒಂಬತ್ತು ಮಂದಿ 
ಹುಡುಗರನ್ನು ನ್ಯಾಟೋ ಪಡೆಗಳು ಕ್ಷಿಪಣಿ ದಾಳಿಯ ಮೂಲಕ ಕೊಂದು ಹಾಕಿದವು. ಇದನ್ನು ನ್ಯಾಟೋ
 ಪಡೆ ಒಪ್ಪಿಕೊಂಡಿತು ಕೂಡ.ಇದಾಗಿ 
ಒಂದು ವರ್ಷವಾಗಿದೆ. ಈ ಅವಧಿಯಲ್ಲಿ ಡ್ರೋನ್ ದಾಳಿಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ
 ಸಾವಿರಾರು ನಾಗರಿಕರು ಮೃತಪಟ್ಟಿದ್ದಾರೆ. ಅವರಲ್ಲಿ ಮಕ್ಕಳೂ ಸೇರಿದ್ದಾರೆ. ಈ 
ಘಟನೆಯನ್ನು ತಾಲಿಬಾನ್ ಮಾಡಿದ್ದಿದ್ದರೆ ಅದು ಕಣ್ಣೀರಿಡುವ ವಸ್ತುವಾಗುತ್ತಿತ್ತು. 
ಚರ್ಚೆಗೆ, ಖಂಡನೆಗೆ ಅರ್ಹವಾಗುತ್ತಿತ್ತು. ಆದರೆ ಇದನ್ನು ಮಾಡಿರುವುದು ನಾಗರಿಕನೆಂದು 
ಕರೆಸಿಕೊಂಡಿ ರುವ ಅಮೆರಿಕ. ಇರಾಕ್‌ನಲ್ಲಿ ಯುದ್ಧದಿಂದ ಲಕ್ಷಾಂತರ ಮಕ್ಕಳು ಮೃತಪಟ್ಟಾಗ 
‘‘ಹೌದು, ಇದನ್ನು ನಾವು ಸಮರ್ಥನೀಯ ಎಂದೇ ಭಾವಿಸಿದ್ದೇವೆ’’ ಎಂದು ಅಂದಿನ ಅಮೆರಿಕದ 
ವಿದೇಶಾಂಗ ಕಾರ್ಯದರ್ಶಿ ಮೆಡಲಿನ್ ಹೇಳಿಕೆ ನೀಡಿದರು. ಈ 
ಹೇಳಿಕೆಯನ್ನು ನೀಡುವ ಧೈರ್ಯ ತೋರಿಸಿದ್ದಕ್ಕಾಗಿಯೇ ಆಕೆಯನ್ನು ವಿಶ್ವ ನ್ಯಾಯ ಯೋಜನೆಯ 
ಗೌರವಾಧ್ಯಕ್ಷೆಯಾಗಿ ಗೌರವಿಸಲಾಯಿತು. ಅಮೆರಿಕ ಮಿತ್ರ ಪಡೆ ಇರಾಕ್‌ನಲ್ಲಿ ನಡೆಸಿದ 
ಯುದ್ಧಕ್ಕೆ ಬಲಿಯಾದ ಎರಡು ಲಕ್ಷಕ್ಕೂ ಅಧಿಕ ನಾಗರಿಕರಲ್ಲಿ ಶೇ. 46ರಷ್ಟು ಮಹಿಳೆಯರು. 
ಮತ್ತು ಶೇ. 39ರಷ್ಟು ಮಕ್ಕಳು ಎಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನ ವರದಿ 
ತಿಳಿಸುತ್ತದೆ. ಇರಾಕ್ ಬಾಡಿ ಕೌಂಟ್‌ನ ಅಧಿಕೃತ ವರದಿಯ ಪ್ರಕಾರ ಮೃತ ನಾಗರಿಕರಲ್ಲಿ, 
3,911 ಮಂದಿ 18 ವರ್ಷ ಕ್ಕಿಂತ ಕೆಳಗಿನವರು. ಅಮೆರಿಕ ಹಿತಾಸಕ್ತಿಯನ್ನಷ್ಟೇ 
ಮುಂದಿಟ್ಟುಕೊಂಡು ಇರಾನ್‌ನ ಮೇಲೆ ವಿಧಿಸಿದ ದಿಗ್ಬಂಧನದ ಮೊದಲ ಬಲಿಪಶುಗಳಾಗುತ್ತಿರುವವರೇ
 ಮಕ್ಕಳು. ಇವರಲ್ಲಿ ನಮಗೆ ಮಲಾಲಾಗಳನ್ನು ಗುರುತಿಸಲು ಯಾಕೆ ಸಾಧ್ಯವಾಗುತ್ತಿಲ್ಲ?
ಈ ಎಲ್ಲ 
ಕಾರಣದಿಂದಲೇ ಮಲಾಲಾ ಕುರಿತ ಅಮೆರಿಕ ಸಹಿತ ಪಾಶ್ಚಿಮಾತ್ಯ ದೇಶಗಳ ಕಣ್ಣೀರು ಮೊಸಳೆ 
ಕಣ್ಣೀರಾಗಿ ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಫ್ಘಾನಿಸ್ತಾನದಲ್ಲಿ 
ತಾಲಿಬಾನಿಗಳ ಜೊತೆ ಎಡೆಬಿಡದ ಯುದ್ಧದಿಂದ ಬಳಲಿ ಹೋಗಿರುವ ಅಮೆರಿಕ ಮತ್ತು ಅದರ ಬಳಗ, 
ಯಾರನ್ನೂ ತನ್ನ ಯುದ್ಧಕ್ಕೆ ಗುರಾಣಿಯಾಗಿ ಬಳಸಲು ಹೇಸುವುದಿಲ್ಲ. ಈ ಕಾರಣದಿಂದ 
ಮಲಾಲಾಳನ್ನು ಪಾಶ್ಚಿಮಾತ್ಯ ದೇಶಗಳು ರಾಜಕೀಯ ಕಾರಣಗಳಿಗೆ ಬಳಸಲು ಮುಂದಾಯಿತೆ? ಎಂಬ 
ಪ್ರಶ್ನೆ ಎದ್ದಿದೆ. ಅಮೆರಿಕ ತಾಲಿಬಾನ್ ವಿರುದ್ಧ ಮಲಾಲಾಳನ್ನೂ ಒಂದು ಅಸ್ತ್ರವಾಗಿ 
ಪ್ರಯೋಗಿಸುತ್ತಿದೆಯೆ? ಆಕೆಯ 
ಡೈರಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಆ ಮುಗ್ಧ ಬಾಲಕಿಯನ್ನು ಸಾರ್ವಜನಿಕ 
ವ್ಯಕ್ತಿಯಾಗಿ, ಹೋರಾಟ ಗಾರ್ತಿಯಾಗಿ ಬಿಂಬಿಸಿ, ಅವಳ ಮೇಲಿನ ದಾಳಿಗೆ ಪರೋಕ್ಷವಾಗಿ 
ಮಾಧ್ಯಮಗಳೂ ಕಾರಣವಾದವೆ? ಏನೂ ಅರಿಯದ ಬಾಲಕಿಯನ್ನು ವಿಶ್ವದ ಕೇಂದ್ರ ಬಿಂದುವಾಗಿ 
ಮಾರ್ಪಡಿಸಿ, ದುಷ್ಕರ್ಮಿಗಳಿಗೆ ಅಮೆರಿಕವೇ ಬಲಿಕೊಟ್ಟಿತೆ? ಸದ್ಯದ ಅಮೆರಿಕದ 
‘ಭಯೋತ್ಪಾದಕರ ವಿರುದ್ಧದ ಹೋರಾಟ’ಕ್ಕೆ ಆಕೆಯೂ ಒಂದು ಸಮಿತ್ತಾದಳೆ? ಯಾವಾಗ ಮಾಧ್ಯಮಗಳು 
ಆಕೆಯನ್ನು ಸಾರ್ವಜನಿಕವಾಗಿ ತಂದು ನಿಲ್ಲಿಸಿದವೋ ಆಗಲೇ ಆಕೆಗೆ ರಕ್ಷಣೆ ನೀಡಬೇಕಾದುದು 
ಪಾಕಿಸ್ತಾನ ಸರಕಾರವೂ ಸೇರಿದಂತೆ ಪಾಶ್ಚಿಮಾತ್ಯ ಮಾಧ್ಯಮಗಳ ಕರ್ತವ್ಯವಾಗಿತ್ತು? ಬಹುಶಃ 
ಅಮೆರಿಕಕ್ಕೆ ತನ್ನ ಹೋರಾಟಕ್ಕಾಗಿ ಒಂದು ಪುಟಾಣಿಯ ಬಲಿ ಬೇಕಾಗಿತ್ತೆ? ಅಥವಾ ತಮ್ಮ 
ದಾಳಿಯಿಂದಾಗಿ ಬಲಿಯಾಗುತ್ತಿರುವ ನೂರಾರು ಅಮಾಯಕ ಮಕ್ಕಳ ಸಾವುಗಳನ್ನು ಮಲಾಲಾಳಿಗಾಗಿ 
ಕಣ್ಣೀರು ಸುರಿಸುವ ಮೂಲಕ ಸರಿದೂಗಿಸುತ್ತಿದ್ದಾರೆಯೆ? ನಾವು ತೀರಾ ಭಾವುಕವಾಗಿ ಆಲೋಚಿಸುವ
 ಮೊದಲು ಈ ಪ್ರಶ್ನೆಗಳಿಗೆಲ್ಲಾ ಉತ್ತರ ಕಂಡುಕೊಳ್ಳಬೇಕಾಗಿದೆ.
 ಮಲಾಲಾ
 ಪ್ರಕರಣ ಬರೇ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಮಾತ್ರ ನಡೆಯಬೇಕಾಗಿಲ್ಲ. ಅಂತಹದ್ದು 
ಭಾರತದಲ್ಲೂ, ಕರಾವಳಿಯ ಮಂಗಳೂರಿನಲ್ಲೂ ನಡೆಯಬಹುದು ಎಂದು ನಾನು ಭಾವಿಸಿದ್ದೇನೆ. ಒಂದು 
ಸಂದರ್ಭದಲ್ಲಿ ಮಂಗಳೂರಿನಂತಹ ಬುದ್ಧಿವಂತರ ಜಿಲ್ಲೆಯಲ್ಲೇ ಮುಸ್ಲಿಮ್ ಹೆಣ್ಣು ಮಕ್ಕಳು 
ವಿದ್ಯೆ ಕಲಿಯುವುದು ಕಷ್ಟವೆನ್ನುವಂತಹ ವಾತಾವರಣವಿತ್ತು. ಇದೀಗ ಈ ಪ್ರದೇಶದಲ್ಲಿ 
ಮುಸ್ಲಿಮ್ ಬಾಲಕಿಯರು ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ ಮಾತ್ರವಲ್ಲ,
 ರ್ಯಾಂಕ್‌ಗಳನ್ನೂ ಗಳಿಸುತ್ತಿದ್ದಾರೆ. ಇದನ್ನೊಂದು
 ಅಭಿನಂದನೀಯ ಬೆಳವಣಿಗೆ ಎಂದು ಸಮಾಜ ಸ್ವಾಗತಿಸಬೇಕಾಗಿತ್ತು. ಆದರೆ, ಇಂದು ಇದೇ 
ಬಾಲಕಿಯರನ್ನು ಸ್ಕಾರ್ಫ್‌ನ ಹೆಸರಲ್ಲಿ ಶಾಲೆಯಿಂದ ಹೊರಗೆ ಹಾಕುವಂತಹ ಸನ್ನಿವೇಶ 
ನಿರ್ಮಾಣವಾಗಿದೆ. ರಾಮಕುಂಜ, ಸುಬ್ರಹ್ಮಣ್ಯ, ಬಂಟ್ವಾಳ ಸೇರಿದಂತೆ ಜಿಲ್ಲೆಯ ವಿವಿಧ 
ಶಾಲೆಗಳಲ್ಲಿ ಸ್ಕಾರ್ಫ್ ಧರಿಸಿದ ಹೆಣ್ಣು ಮಕ್ಕಳು ವಿದ್ಯೆ ಕಲಿಯಲು ಅನರ್ಹರು ಎಂದು 
ತೀರ್ಮಾನಿಸಿರುವುದು ವಿದ್ಯೆ ಕಲಿತ ಶಿಕ್ಷಕರೇ ಆಗಿದ್ದಾರೆ. ಇವರು ಯಾರೂ ತಾಲಿಬಾನ್ 
ಸಂಘಟನೆಯಿಂದ ಹೊರಬಂದವರಲ್ಲ. ಮನೆಯಲ್ಲಿ ತಂದೆತಾಯಿಗಳನ್ನು ಮನವೊಲಿಸಿ ಶಾಲೆಕಲಿಯಬೇಕು 
ಎಂಬ ಆಸೆಯಿಂದ ಶಾಲೆಯ ವಠಾರಕ್ಕೆ ಕಾಲಿಟ್ಟರೆ ಅವರನ್ನು ಸ್ಕಾರ್ಫ್ ಹೆಸರಿನಲ್ಲಿ 
ಶಾಲೆಯಿಂದ ಹೊರಗೆ ಹಾಕುವ ಉಪಾಧ್ಯಾಯರು, ಶಾಲಾ ಸಂಘಟಕರೂ ಉಗ್ರವಾದಿಗಳೇ ಅಲ್ಲವೆ? ಮಲಾಲಾ 
ಮೇಲೆ ಯಾವ ಕಾರಣಕ್ಕೆ ಹಲ್ಲೆಯಾಯಿತೋ ಅದೇ ಕಾರಣಕ್ಕೆ ಇಲ್ಲೂ ಹಲ್ಲೆಯಾಗುತ್ತಿದೆ.
 ನಾವು 
ಕಣ್ಣೀರಿಡುವುದಕ್ಕೆ, ಹೋರಾಟ ಮಾಡುವುದಕ್ಕೆ ಸಾವಿರಾರು ಮಲಾಲಾಗಳು ನಮ್ಮ ನೆಲದಲ್ಲೇ 
ಇದ್ದಾರೆ. ತಾಲಿಬಾನ್ ಸಂಘಟನೆಯಿಂದ ದಾಳಿ ನಡೆದರೆ ಮಾತ್ರ ಅವರ ಪರವಾಗಿ ಧ್ವನಿಯೆತ್ತಬೇಕು
 ಎಂಬ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ಹೊರಬಂದು, ನಮ್ಮ ನಡುವಿರುವ ಮಲಾಲಾರ 
ಕುರಿತಂತೆಯೂ ಮಾತನಾಡುವ ಆರೋಗ್ಯಕರ ಮನಸ್ಸನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ. ಮಲಾಲಾ 
ಆದಷ್ಟು ಬೇಗ ಗುಣಮುಖಳಾಗಿ ಮತ್ತೆ ಶಾಲೆಗೆ ಸೇರುವಂತಾಗಲಿ. ಮಲಾಲಾ ಆರೋಗ್ಯ ಒಂದು 
ರೂಪಕವಾಗಿದೆ. ಅದನ್ನು ರಾಜಕೀಯಗೊಳಿಸದೆ, ಮಾನವೀಯ ದೃಷ್ಟಿಯಿಂದ ನೋಡುತ್ತಾ, ನಮ್ಮ ನಮ್ಮ 
ಸಮಾಜಕ್ಕೆ ಅನ್ವಯಗೊಳಿಸಬೇಕಾಗಿದೆ.